ಅಭಿನವ ಪ್ರಕಾಶನ ಆ ಕಾಲಕ್ಕೇ ‘ಕೇಳು ಪುಸ್ತಕ’ ತರುವ ಸಾಹಸ ಮಾಡಿತ್ತು .
ಜಿ ಎನ್ ಮೋಹನ್ ಅವರ ‘ಪ್ರಶ್ನೆಗಳಿರುವುದು ಷೇಕ್ಸ್ ಪಿಯರನಿಗೆ’ ಕವಿತಾ ಸಂಕಲನವನ್ನು ಹೊರತರುವಾಗ ಅದರ ಆಡಿಯೋ ರೂಪವನ್ನು ಸಹಾ ಹೊರತಂದಿತ್ತು. ಇದು ಹಾಡಲ್ಲ ಕವಿತೆಯ ವಾಚನದ ಕೇಳು ಪುಸ್ತಕ. ಆ ನಂತರ ಇದು ಎಷ್ಟೋ ‘ಕೇಳು ಪುಸ್ತಕ’ ಸಾಹಸಕ್ಕೆ ಮುನ್ನುಡಿ ಬರೆಯಿತು.
ಸದಾ ಹೊಸ ಪ್ರಯೋಗಕ್ಕೆ ಬೆನ್ನು ತಟ್ಟುತ್ತಲೇ ಇದ್ದ ಯು ಅರ್ ಅನಂತ ಮೂರ್ತಿ ಅವರು ಈ ಕೇಳು ಪುಸ್ತಕಕ್ಕೂ ಜೊತೆಯಾದರು. ಕವಿತೆ ಯಾಕೆ ಕೇಳಬೇಕು? ಕಿವಿಗೂ- ಕವಿತೆಗೂ ಇರುವ ಸಂಬಂಧವೇನು? ಎನ್ನುವುದನ್ನು ಅದ್ಭುತವಾಗಿ ಎಲ್ಲರ ಮುಂದಿಟ್ಟರು. ಅದು ಆ ಕೇಳು ಪುಸ್ತಕದೊಳಗೆ ಇರುವ ವಿಡಿಯೋ ಮುನ್ನುಡಿ.
ಅದನ್ನು ಯು ಆರ್ ಅನಂತಮೂರ್ತಿ ಅವರ ಜನ್ಮ ದಿನದ ನೆನಪಿಗೆ ಪಿ ಚಂದ್ರಿಕಾ ಬರಹ ರೂಪಕ್ಕಿಳಿಸಿದ್ದಾರೆ.
ಕೇಳು ಪುಸ್ತಕದ ಎರಡನೆಯ ಮುದ್ರಣ ಸಜ್ಜಾಗುತ್ತಿದೆ, ಅಭಿನವದಿಂದಲೇ
ಪ್ರತಿಗಳಿಗಾಗಿ – ಅಭಿನವ 094488 04905

ಕಾವ್ಯ ನೋಡಲಿಕ್ಕೆ ಇರುವುದಲ್ಲ; ಆಲಿಸುವುದಕ್ಕೆ ಇರುವಂಥದು, ಓದಲಿಕ್ಕಿರುವಂಥದು. ಅದು ಕಿವಿಯ ಮೂಲಕ ನಮ್ಮನ್ನ ಮುಟ್ಟಬೇಕು. ಕೇವಲ ಮನಸ್ಸಿನ ಮುಖಾಂತರ ಅಲ್ಲ. ಹಾಗೆ ಮನಸ್ಸಿನ ಮೂಲಕ ಮುಟ್ಟಿದರೆ ಅದು ಗದ್ಯದ ಹಾಗಿರುತ್ತದೆ. ದಿನನಿತ್ಯದ ಭಾಷೆಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನಾವು ಕೇಳುತ್ತಿರುತ್ತೇವೆ. ಆದ್ದರಿಂದಲೇ ಕವಿತೆಯ ಲಯದಲ್ಲಿ ಬದಲಾವಣೆಯಾಗುವುದು. ಇದು ಸಂಸ್ಕೃತಿಯ ಒಳಗೇ ಆಗುವ ಬದಲಾವಣೆ. ಗಂಗಾಧರ ಚಿತ್ತಾಲರು ಯಾವುದೋ ಊರಿನಲ್ಲಿದ್ದಾಗ ಅಡಿಗರ ಒಂದು ಹೊಸ ಪದ್ಯ ಓದಿದರಂತೆ.
ಅಡಿಗರ ಆ ಪದ್ಯ ಹೀಗಿದೆ.
(ಅದು ಅಂಥಾ ದೊಡ್ಡ ಸಾಲೇನಲ್ಲ ಆದರೆ ಕಿವಿಗೆ ವಿಶೇಷವಾಗಿ ಕೇಳುತ್ತಿತ್ತು)
.
ಹದಿನಾರು ವರುಷಗಳ ಹಿಂದೆ ಕರೆದಿತ್ತು
ಬಾ, ಬಾ, ಬಾ, ಎಂದು ಕೂಗಿ ಕರೆದಿತ್ತು ಹಸಿರುಕೊಕ್ಕಿನ ಹಕ್ಕಿ ನನ್ನ ಕರುಳನು ಮೂರು ಬಾರಿ ಕುಕ್ಕಿ (ಗೊಂದಲಪುರ)
.
ಗಂಗಾಧರ ಚಿತ್ತಾಲರಿಗೂ ಕಿವಿ ಇತ್ತು; ಅಡಿಗರಿಗೂ ಕಿವಿ ಇತ್ತು. ಭಾಷೆಯಲ್ಲಾಗುತ್ತಿದ್ದ ಬದಲಾವಣೆಗಳು ಕವಿತೆಯಾಗಿ ಯಾವ ರೀತಿಯಾಗಿ ಕಿವಿಗೆ ಬೀಳುತ್ತವೆ ಎನ್ನುವ ಪ್ರಜ್ಞೆ ಕೂಡಾ ಅವರಿಬ್ಬರಿಗೆ ಇತ್ತು. ಹೀಗಾಗಿ ಅವರ ಪದ್ಯಗಳು ಯಾವಾಗಲೂ ನವ್ಯವಾಗಿರುತ್ತವೆ. ಮಾತಿನ ಲಯವನ್ನು ಹಿಡಿದು ಕಥೆಯನ್ನು ಹೇಳುವ ಕವಿತೆ ಗದ್ಯಕ್ಕಿಂತ ಮುಂಚೆ ಬದಲಾವಣೆಗಳನ್ನು ಗುರುತಿಸುತ್ತದೆ. ನನಗೆ ಜಿ ಎನ್ ಮೋಹನ್ ಅವರ ಕವಿತೆಗಳನ್ನು ಓದುವಾಗಲೂ ಹಾಗೇ ಅನ್ನಿಸಿತು. ಈ ಕವಿತೆಗಳಿಗೆ ಮಾತಿನ ಲಯವನ್ನು ಹಿಡಿದು ಹೇಳುವ ಧಾಟಿ ಇದೆ. ಅಜ್ಜಿ ತನ್ನ ಮೊಮ್ಮಗುವಿಗೆ ಕಥೆ ಹೇಳುವ ಸಹಜತೆಯನ್ನು ಈ ಭಾಷೆ ಹಿಡಿದಿಡುತ್ತದೆ.
.
ಟಿ. ಎಸ್. ಎಲಿಯೆಟ್ ‘ಆಡಿಟರಿ ಇಮ್ಯಾಜಿನೇಷನ್’ ಎನ್ನುವ ಒಂದು ಪದವನ್ನು ಬಳಸುತ್ತಾನೆ. ಅಂದರೆ ನಮ್ಮ ಆಳದ ಮನಸ್ಸಿನಲ್ಲಿ ಮುಟ್ಟಿದ ಮಾತುಗಳಿಗೆ ‘ಆಡಿಟರಿ’ ಗುಣವಿರುತ್ತದೆ. ಅಂದರೆ ಕಿವಿಯ ಮೂಲಕ ಕಲ್ಪಿಸಿಕೊಳ್ಳುವ ಗುಣ. ಅದು ಬೇಂದ್ರೆಯವರಿಗೆ ಅದ್ಭುತವಾಗಿತ್ತು. ಅಡಿಗರಿಗೆ ಕೂಡಾ ಈ ಶಕ್ತಿ ಇತ್ತು. ಕುವೆಂಪುರವರ ಕೆಲವು ಪದ್ಯಗಳಲ್ಲಿಯೂ ನಾವು ಕಾಣುತ್ತೇವೆ. ‘ರವಿಗಿಲ್ಲದ ಭಯ, ಶಶಿಗಿಲ್ಲದ ಭಯ..’ ಮುಂತಾದೆಡೆ. ಇದನ್ನು ಇನ್ನೊಂದು ಭಾಷೆಗೆ ಅನುವಾದಿಸಿ ಹೇಳಲು ಬರುವುದಿಲ್ಲ. ಹಾಗೆ ನೋಡಿದರೆ ಇದಕ್ಕೆ ಬಹಳ ದೊಡ್ಡ ಅರ್ಥವಿಲ್ಲದಿರಬಹುದು. ಅರ್ಥೈಸಲೂಬಹುದು. ಆದರೆ ಅದರ ಧ್ವನಿಯನ್ನು ಹಿಡಿದು ವಿವರಿಸಲು, ಅರ್ಥೈಸಲು ಬರುವುದಿಲ್ಲ.
.
ರಾಮಚಂದ್ರ ಶರ್ಮ ಮತ್ತು ಗಂಗಾಧರ ಚಿತ್ತಾಲರ ಜೊತೆ ನನಗೆ ಒಂದು ವಿಷಯದಲ್ಲಿ ಯಾವಾಗಲೂ ಜಗಳ ಇತ್ತು. ಅವರ ಕವಿತೆಗಳು ‘ಓದಿಕೊಳ್ಳುವ’ ಕವಿತೆಗಳೇ ಹೊರತು ‘ಓದುವ’ ಕವಿತೆಗಳಾಗಿರಲಿಲ್ಲ ಎನ್ನುವುದು. ಅಂದರೆ ಕವಿತೆ ಗ್ರಾಂಥಿಕವಾಗಿತ್ತು ಎನ್ನುವುದು. ಶರ್ಮರು ಕೆಲವೊಮ್ಮೆ ಅದನ್ನು ಮೀರುತಿದ್ದರು. ಗ್ರಾಂಥಿಕತೆ ಕಾವ್ಯದಲ್ಲಿ ಕಡಿಮೆಯಾಗಬೇಕು ಆದರೆ ಗ್ರಂಥಸ್ಥವಾಗಿ ಉಳಿಯುವ ಗುಣ, ಶಕ್ತಿ ಇರಬೇಕು. ಅಂದರೆ ಅದು ನಮ್ಮನ್ನು ಸೇರುವಾಗ ಮಾತಿನ ಧಾಟಿಯಲ್ಲಿರಬೇಕು. ಅಡಿಗರ ಒಂದು ಪದ್ಯ:
.
ನೀನೂ ಬಂದೆಯ, ಬಾ ಮಗು ನಂದನ,
‘ನಮೋ ಅರ್ಭಕೇಭ್ಯ’
.
..ಹೀಗೆ ಸಾಗುತ್ತದೆ. ಇಲ್ಲಿ ಒಂದು ಕನ್ನಡ ಸಾಲಿನ ಜೊತೆ ಇನ್ನೊಂದು ಸಂಸ್ಕೃತದ ಸಾಲು ಬರುತ್ತಿದೆ. ಆಶ್ಚರ್ಯವೆಂದರೆ ಮಕ್ಕಳಿಗೆ ನಮಸ್ಕಾರ ಎನ್ನುವುದು. ನಾವು ನಿಜವಾಗಲೂ ನಮಸ್ಕರಿಸಬೇಕಿರುವುದು ನಮ್ಮ ಹಿರಿಯರಿಗೆ ಮತ್ತು ಮಕ್ಕಳಿಗೆ. ಹಿರಿಯರು ನಾವು ಹೀಗಿರುವುದಕ್ಕೆ ಕಾರಣರಾದವರು. ಮಕ್ಕಳು ನಮ್ಮ ಎಲ್ಲಾ ನಿರೀಕ್ಷೆಯನ್ನು ಪಡೆದು ಹುಟ್ಟಿರುವಂಥವರು. ಏನು ಬೇಕಾದರೂ ಆಗಬಹುದಾದಂಥವರು. ಇಲ್ಲಿ ‘ನಂದನ’ ಎಂಬ ಶಬ್ದವನ್ನು ಗಮನಿಸಿ. ನಾವು ಈ ಪದವನ್ನು ಯಾವ ರೀತಿಯಲ್ಲಿ ಬೇಕಾದರೂ ಓದಿಕೊಳ್ಳಬಹುದು. ‘ನೀನು ಬಂದೆಯಾ’ ಎನ್ನುವಾಗ ಅದರಲ್ಲಿ ಏನೂ ಬೇಸರವಿಲ್ಲ ಎನ್ನುವ ಭಾವನೆ ಮೂಡುತ್ತದೆ. ಆದರೆ ಅದನ್ನೇ ‘ನೀನೂ ಬಂದೆಯಾ?’ ಎನ್ನುವಂತೆ ಓದಿದರೆ ನೀನು ಬಂದು ಬಿಟ್ಟೆಯಲ್ಲಾ, ನೀನೂ ಹಾಳಾಗ್ತೀಯಲ್ಲಾ ಎನ್ನುವ ಭಾವ ಮೂಡುತ್ತದೆ. ಇಷ್ಟೆಲ್ಲಾ ಅನ್ನಿಸಿದವನಿಗೆ ತನ್ನ ಧಾಟಿ ಧೋರಣೆಯನ್ನು ಮೀರಿದ ದಾರಿಯಿದೆ. ಅದು ವೇದಕಾಲವನ್ನು ನೆನಪಿಸುತ್ತದೆ. ನಂದನ ಆಗಿನಿಂದಲೂ ಬರ್ತಾನೇ ಇದ್ದಾನೆ ಎನ್ನವ ಭಾವವೂ ಇದೆ.
.
ಮಕ್ಕಳು ಭಾಷೆಯನ್ನು ಕಲಿಯುವುದನ್ನು ನಾವು ಗಮನಿಸಬೇಕು. ನನ್ನ ಮೊಮ್ಮಗ ಕನ್ನಡ ಕಲಿಯುವಾಗ ಕೆಲವು ಈಡಿಯಮ್ಸ್ ಬಳಸುತ್ತಿದ್ದ. ಒಮ್ಮೆ ಅವನ ಅಜ್ಜಿ ಯಾವ ಕಾರಣಕ್ಕೊ ಮರೆತಿದ್ದೇನೆ- ‘ಅವನಿಗೆ ಬೇಡ’ ಎಂದರು. ಆಗ ಅವನು ‘ಇದೊಂದು ಅಜ್ಜಿ’ ಎಂದ. ನನಗೆ ಆಶ್ಚರ್ಯವಾಯ್ತು. ಅವನ ತಿರಸ್ಕಾರ, ಬೇಸರ, ಸಿಟ್ಟು ಎಲ್ಲಾ ಅದರಲ್ಲಿ ಇತ್ತು. ಇದನ್ನ ಯಾರು ಕಲಿಸಿಕೊಟ್ಟರು? ಹೀಗೆ ಅಚ್ಚರಿಯ ಮೂಲಗಳಲ್ಲಿ ಮಗು ಇಂಥವುಗಳನ್ನು ಪಡೆದುಕೊಳ್ಳುತ್ತದೆ. ಇವನ್ನೆಲ್ಲಾ ವೈಚಾರಿಕ ಮಾಡಲಿಕ್ಕೆ ನಾವು ಗ್ರಂಥಸ್ಥ ಮಾಡುತ್ತೇವೆ. ಕಾವ್ಯ ಎಷ್ಟೇ ವೈಚಾರಿಕವಾದರೂ ಅದು ಮೂಲದಲ್ಲೇ ಇರುವ ಕಿವಿಯ ಮೂಲಕ ಸಿಗುವ ಅನುಭವಕ್ಕೆ ತೆರೆದುಕೊಂಡೇ ಇರುತ್ತದೆ. ಆದ್ದರಿಂದ ಕಾವ್ಯ ಅತ್ಯಂತ ಮೂಲವಾದ ನಮ್ಮ ಪೂರ್ವಿಕರ, ಪೂರ್ವಜರ ಬಾಯಿಂದ ಹೊರಬೀಳುತ್ತಿದ್ದ ನಾದವನ್ನೆಲ್ಲ ಒಟ್ಟುಮಾಡುತ್ತಾ ಅತ್ಯಂತ ಆಧುನಿಕವಾದ ವಿಚಾರಗಳನ್ನು ಒಟ್ಟಿಗೆ ಕೊಡುತ್ತದೆ.
.
ಪ್ರತಿಯೊಂದು ಭಾಷೆಗೆ ಅದರದ್ದೇ ಆದ ಗುಣವಿರುತ್ತದೆ. ಯಾವುದೋ ಒಂದು ಭಾಷೆಯಲ್ಲಿ It is a nice Morning ಎನ್ನುವುದು ಅದ್ಭುತ ಸಾಲಿರಬಹುದು. ಅದನ್ನು ಅನುವಾದಿಸಿದಾಗ ‘ಒಳ್ಳೆಯ ಬೆಳಗಾಗಿತ್ತು’ ಎಂದಾದರೆ ಅದು ಅಲ್ಲವೇ ಅಲ್ಲ. ಅದನ್ನೇ ಬೇಂದ್ರೆ ‘ಇದು ಬರಿ ಬೆಳಗಲ್ಲೋ ಅಣ್ಣ’ ಎಂದು ಬರೆಯುವಾಗ ಶಬ್ದಕ್ಕೆ ಅದೆಷ್ಟು ಅರ್ಥ ಸಿಗುತ್ತದೆ! ಆ ಬೆಳಗಿನ ಅದ್ಭುತ ಅನುಭವ ಕಿವಿಯ ಮೂಲಕ ಸಿಗುತ್ತದೆ. ಗ್ರಂಥಸ್ಥ ಕವಿತೆ ಒಂದೇ ಬಗೆಯದು; ಆದರೆ ಓದುವ ಕವಿತೆಯದು ಭಿನ್ನ ಭಿನ್ನ ಅನುಭವ. ಒಂದು ಕವಿತೆಯನ್ನು ನಾನು ಓದಿದರೆ ಒಂದು ಅನುಭವ, ಬೇರೆಯವರು ಓದಿದರೆ ಮತ್ತೊಂದು ಅನುಭವ. ಮತ್ತೊಬ್ಬ ಓದಿದರೆ ಮಗದೊಂದು ಅನುಭವ. ಅದಿರಲಿ ನಾನೇ ಮತ್ತೆ ಮತ್ತೆ ಓದಿದಾಗಲೂ ಅದರ ಅನುಭವ ಬೇರೆ ಬೇರೆಯೇ. ಹಿಗೆ ಬೇರೆ ಬೇರೆ ಓದಿನ ಮೂಲಕ ಅನಂತ ಸಾಧ್ಯತೆಗಳು ನಮ್ಮ ಮುಂದೆ ತೆರೆದುಕೊಳ್ಳುತ್ತಾ ಹೋಗುತ್ತವೆ.
.
ನಾನು ವಿದ್ಯಾರ್ಥಿಯಾಗಿದ್ದಾಗ ಕುವೆಂಪು ಪದ್ಯ ಓದುತ್ತಾರೆಂದರೆ ಆಡಿಟೋರಿಯಂ ತುಂಬಿರುತ್ತಿತ್ತು. ಅಷ್ಟು ಚೆನ್ನಾಗಿ ಕವಿತೆಯನ್ನು ಓದುತ್ತಿದ್ದರು. ಬೇಂದ್ರೆಯವರಂತೂ ಕವಿತೆಯನ್ನು ಮಂತ್ರದ ಹಾಗೆ, ಸಂಗೀತದ ಹಾಗೆ ಓದುತ್ತಿದ್ದರು. ಒಮ್ಮೆ ನಾನು ತೀರ್ಥಹಳ್ಳಿಯಲ್ಲಿದ್ದಾಗ ಬೇಂದ್ರೆ ಬಂದಿದ್ರು. ಅವರ ಬಾಯಿಂದ ಕೇಳಿದ ಪದ್ಯಗಳು ಅವೇ ದಾಟಿಯಲ್ಲೇ ನನಗೆ ಈಗಲೂ ನೆನಪಿನಲ್ಲಿವೆ. ಅದರ ಜೊತೆ ನನ್ನ ಮನಃಪರಿವರ್ತನೆ ಕೂಡ ಆಯಿತು. ನನ್ನ ಜೊತೆಗಾರ ಕೃಷ್ಣಮೂರ್ತಿ ಭಟ್ಟ ಕವಿತೆಗಳನ್ನ ಹಾಡುತ್ತಿದ್ದದ್ದು ಈಗಲೂ ನೆನಪಿನಲ್ಲಿದೆ.
.
ಕವಿತೆಯನ್ನು ಹಾಡುವಾಗ ಅದು ಸಂಗೀತ ಆಗಬಾರದು. ಅದು ಹಾಡಿದಾಗ ಒಂದು ರೀತಿ ಚಾಂಟಿಂಗ್ ನಂತೆ. ಕೇರಳದ ಕವಿಗಳು ಕವಿತೆಗಳನ್ನು ಚಾಂಟ್ ಮಾಡುತ್ತಾರೆ. ಅದು ಒಂದು ಬಗೆಯ ಉತ್ಪ್ರೇಕ್ಷಿತವಾದ ಓದು. ಅದನ್ನು ಹಾಡು ಮಾಡಲು ಹೋಗಬಾರದು. ಕವಿತೆ ಎಂದರೆ ಓದಲಿಕ್ಕೆ ಬರೆದಿದ್ದು. ಪುರಂದರ ದಾಸರ ಪದ್ಯಗಳು ಹಾಡಲಿಕ್ಕೇ ಬರೆದವು; ಅದನ್ನ ಹಾಡುವುದರಲ್ಲಿ ತಪ್ಪಿಲ್ಲ. ಆದರೆ ಉತ್ಪ್ರೇಕ್ಷಿತವಾಗಿ ಹಾಡುವ ಕ್ರಮದಿಂದ ಕೆಟ್ಟ ಪದ್ಯವಾದರೂ ವಾದ್ಯದ ಜೊತೆ ಒಳ್ಳೆಯ ಪದ್ಯ ಎನ್ನುವ ಭ್ರಮೆ ಹುಟ್ಟಿಸುತ್ತದೆ. ಈಗ ಮಾಧ್ಯಮಗಳು ಇಂಥದೇ ಮೂಲಗಳಿಗೆ ಕರೆದೊಯ್ಯುತ್ತಿವೆ. ಹೀಗಾಗಿ ಒಳ್ಳೆಯ ಹಾಡೂ ನಮಗೆ ಸಿಗುತ್ತಿಲ್ಲ. ಹಾಗೇ ಒಳ್ಳೆಯ ಕವಿತೆ ಕೂಡಾ. ಅನೇಕ ಸಾರಿ ವಚನಗಳನ್ನು ಸಹಾ ಹಾಡಬಾರದು ಅನ್ನಿಸುತ್ತೆ. (ಚೆನ್ನಾಗಿ ಹಾಡಿದವರೂ ಇದ್ದಾರೆ)
.
ಇಂಗ್ಲೆಂಡಿನಲ್ಲಿ ನಾನು ಓದುವ ಕಾಲಕ್ಕೆ ಎಲ್ಲಾ ದೊಡ್ಡ ಕವಿಗಳು ಓದಿದ ಕವಿತೆಗಳ ರೆಕಾರ್ಡ್ ಸಿಗುತ್ತಿತ್ತು. ಅದು ಎಲ್ಲಾ ಶಾಲಾ ಕಾಲೇಜುಗಳಲ್ಲೂ ಕೂಡ. ಅವೆಲ್ಲಾ ಕವಿ ಬದುಕಿದ್ದಾಗ ಅವನ್ನೆಲ್ಲಾ ಸಂಗ್ರಹ ಮಾಡಿದಂತವು. ಕನ್ನಡದಲ್ಲಿ ಈ ಬಗೆಯವು ಎಷ್ಟಿವೆ ಗೊತ್ತಿಲ್ಲ. ನನಗೆ ಗೊತ್ತಿರುವಂತೆ ನರಸಿಂಹಸ್ವಾಮಿ, ಶರ್ಮ, ಅಡಿಗರು ಚೆನ್ನಾಗಿ ಪದ್ಯ ಓದುತ್ತಿದ್ದರು. ಒಳ್ಳೆಯ ಕವಿತೆಯನ್ನು ಓದಿದರೆ ಕಿವಿ ಮತ್ತು ಮನಸ್ಸು ಶುದ್ಧವಾಗುತ್ತದೆ. ಯಾವ ಭಾಷೆಯಾದರೂ ನಿಜವಾಗಿ ಉಳಿದಿರುವುದು ನಾಟಕಗಳಲ್ಲಿ. ಪದ್ಯ ಓದುವುದೂ ಕೂಡಾ ನಾಟಕೀಯತೆಯ ಒಂದು ಭಾಗ.
.





ಕನ್ನಡ ಕಾವ್ಯಕ್ಕೆ ಸುಗಮ ಸಂಗೀತದಿಂದ ಬಹಳ ಪ್ರಯೋಜನವಾಗಿದೆ. ಹಾಗೆಯೆ ಬಹಳ ಅನ್ಯಾಯವೂ ಆಗುತ್ತಿದೆ. ಹಾಡಬಹುದಾದ್ದನ್ನು ಮಾತ್ರ ಬಹು ಜನರ ಮನಸ್ಸಿಗೆ ತಲುಪಿಸುತ್ತದೆ. ಹಾಡಲಾಗದ ಉತ್ತಮ ಕಾವ್ಯ ಜನರಿಗೆ ಅಪರಿತವಾಗಿ ಅಂತಹ ಕಾವ್ಯ ಮತ್ತು ಕವಿ ಸಾಮಾನ್ಯ ಜನರಿಗೆ ಅಪರಿಚಿತನಾಗಿ ಉಳಿದುಬಿಡುವ ಅಪಾಯ ಇದೆ. ಕೇಳು ಪುಸ್ತಕಗಳ ಪರಂಪರೆಯೊಂದನ್ನು ಬೆಳೆಸುವುದಲ್ಲದೆ ಸಭೆ , ಸಮಾರಂಭಗಳಲ್ಲಿ ಕೂಡ ಸುಗಮ ಸಂಗೀತದ ಕ್ಯಾಸೆಟ್ ಗಳನ್ನು ಹಾಕುವಂತೆ ಈ ಕ್ಯಾಸೆಟ್ಟುಗಳನ್ನೂ ಹಾಕುವ ಅಭ್ಯಾಸ ಬೆಳೆದು ಬರಬೇಕು.