ಎನ್ ರವಿಕುಮಾರ್ / ಶಿವಮೊಗ್ಗ
‘ಚರಿತ್ರೆ ಈವರೆಗೆ ನ್ಯಾಯದ ಒಂದೇ ಒರೆಗಲ್ಲನ್ನು ತಿಳಿದಿದೆ. ಒಬ್ಬ ವ್ಯಕ್ತಿ ಅಥವಾ ಒಂದು ಸಮಾಜದ ದಬ್ಬಾಳಿಕೆಯ ಎದುರು ಮಂಡಿಯೂರಿ ಕುಳಿತುಬಿಡಬೇಕೆ? ಅಥವಾ ಅದನ್ನು ಪ್ರತಿಭಟಿಸಬೇಕೇ? ಬಹುಕಾಲದಿಂದ ವಿಶ್ವದ ಸಹಾನುಭೂತಿಯು ನಿಮ್ಮ ಮತ್ತು ನಿಮ್ಮ ಆಡಳಿತದ ವಿರುದ್ದವಾಗಿದೆ. ಹಾಗೂ ಅದು ನಮ್ಮ ಪ್ರಯತ್ನಗಳ ಪರವಾಗಿದೆ.: ನಿಮ್ಮ ವ್ಯವಸ್ಥೆಯನ್ನು ಪ್ರತಿಭಟಿಸುತ್ತಿರುವ ಜನತೆಯ ಪರವಾಗಿದೆ.
ಗಾಂಧೀಜಿಯವರು ಇನ್ನೂ ಒಂದು ಒರೆಗಲ್ಲನ್ನು ರೂಪಿಸಿದ್ದಾರೆ: ಯಾವುದೇ ವ್ಯಕ್ತಿ ಅಥವಾ ಒಂದು ರಾಷ್ಟ್ರ , ಹಿಂಸಾಚಾರವಿಲ್ಲದೆ, ಆಸ್ತಿ-ಪಾಸ್ತಿಗೆ ಹಾನಿ ಉಂಟುಮಾಡದೆ, ದಬ್ಬಾಳಿಕೆಯನ್ನುಕೊನೆಗೊಳಿಸಲು ಸಾಧ್ಯವಿದೆಯೇ? ಈವರೆಗೆ ಸಾರ್ವತ್ರಿಕವಾದ ಒರೆಗಲ್ಲಲ್ಲ. , ಇಡೀ ವಿಶ್ವದಲ್ಲಿ ನಾವು ಭಾರತೀಯರು ಮಾತ್ರ ಈ ಒರೆಗಲ್ಲಿನ ಪ್ರಮಾಣಿಕತೆಯನ್ನು ಸಾಬೀತುಪಡಿಸುವ ಪ್ರಯತ್ನ ಮಾಡಿದ್ದೇವೆ. ಈ ಒರೆಗಲ್ಲನ್ನು ಒಪ್ಪಿಕೊಳ್ಳುವ ದಿಕ್ಕಿನಲ್ಲಿ ನೀವು ನಿಜಕ್ಕೂ ಗಂಭೀರವಾಗಿ ವಿಚಾರ ಮಾಡಿದ್ದೀರಾ? ಯಾಕೆಂದರೆ, ಇದರಲ್ಲಿ ನಿಮ್ಮ ಜವಾಬ್ದಾರಿಯೂ ಆಡಗಿದೆ. ಎಂಬುದನ್ನು ತಿಳಿದುಕೊಳ್ಳಬೇಕು.’
-೧೯೪೨ ರಲ್ಲಿ ಲೋಹಿಯಾ ಅವರು ಭಾರತದ ಅಂದಿನ ವೈಸರಾಯ್ ಗೆ ಬರೆದ ಪತ್ರದ ಆರಂಭಿಕ ಮಾತುಗಳಿವು.
ಭಾರತದ ಇವತ್ತಿನ ರಾಜಕೀಯ ಸನ್ನಿವೇಶಕ್ಕೆ ಈ ಮಾತನ್ನು ಸಮೀಕರಿಸಿಕೊಂಡು ನೋಡುವಂತಾಗಿದೆ. ಕರ್ನಾಟಕದಲ್ಲಿ ೧೦೪ ಸ್ಥಾನಗಳ ದೊಡ್ಡ ಪಕ್ಷವಾಗಿ ಬಿಜೆಪಿ ಅರಳಿದ್ದರೂ ಅದು ಅಧಿಕಾರ ಹಿಡಿಯುವ ಎಲ್ಲಾ ತಂತ್ರ, ಕುತಂತ್ರಗಳಿಂದಲೂ ಅವಕಾಶ ಕೈಗೊಡಲಿಲ್ಲ.
ಬಹುಶಃ ಕಾಂಗ್ರೆಸ್ -ಜೆಡಿಎಸ್ ಸಕಾಲಿಕೆ ಎಚ್ಚರ ವಹಿಸಿದ್ದರಿಂದ ಬಿಜೆಪಿ ಗೋವಾ, ಮೇಘಾಲಯ, ನಾಗಲ್ಯಾಂಡ್ ನಲ್ಲಿ ನಡೆಸಿದ ರಾಜಕೀಯ ಯಶಸ್ವಿ ಷಡ್ಯಂತ್ರಗಳು ಕರ್ನಾಟಕದ ನೆಲದಲ್ಲಿ ನಡೆಯಲಿಲ್ಲ. ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಮೋದಿ, ಷಾ ಜೋಡಿಯ ನಾಗಾಲೋಟಕ್ಕೆ ತಡೆಗೋಡೆಯನ್ನು ಕಟ್ಟಿದ್ದು, ಕೇವಲ ಇದೊಂದು ಎರಡು ಪಕ್ಷಗಳ ರಾಜಕೀಯ ಮೈತ್ರಿಯಷ್ಟೇ ಅಲ್ಲ, ದೇಶದಲ್ಲಿ ಬಿಜೆಪಿಯೇತರ ಶಕ್ತಿಗಳ ರಾಜಕೀಯ ಧೃವೀಕರಣದ ದಾರಿಯೊಂದನ್ನು ಕಾಲವೇ ತೆರೆದಿಟ್ಟಿದೆ.
ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರಂತಹ ಓರ್ವ ಪ್ರಬಲ ಪ್ರಾದೇಶಿಕ ನಾಯಕ ಕೇಂದ್ರದ ಎನ್.ಡಿಎ ಯಿಂದ ಹೊರಬಂದಾಗಲೇ ರಾಜಕೀಯ ಧ್ರುವೀಕರಣದ ಭೂಮಿಕೆ ಗೆ ಅಡಿಗಲ್ಲೊಂದು ಎದ್ದು ನಿಂತದ್ದಾಗಿತ್ತು .
ಪಶ್ಚಿಮಬಂಗಾಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೋದಿ ಮ್ಯಾಜಿಕ್ ಮಮತಬ್ಯಾನರ್ಜಿ ಮುಂದೆ ನಡೆಯಲಿಲ್ಲ. ತನ್ನ ತವರು ರಾಜ್ಯ ಗುಜರಾತ್ ನಲ್ಲಿ ಜಿಗ್ನೇಶ್ ಮೇವಾನಿಯಂತ ನಾಯಕನ್ನು ಸೃಷ್ಟಿಸಿದ ಜನಸಮುದಾಯದ ಆಂತರ್ಯವನ್ನು ಮೋದಿ ಉಡಾಫೆ ಮಾಡಿದರು.
ದೈತ್ಯ ಬಹುಮತದ ಅಮಲು ಅವರನ್ನು ಆವರಿಸಿಕೊಂಡಿರುವಾಗ ಮೋದಿಗೆ ಇವ್ಯಾವೂ ಮಹತ್ವದ್ದು ಎಂದೆನಿಸಲೇ ಇಲ್ಲ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಮತ್ತು ತಮ್ಮ ಚರಿಷ್ಮಾದ ಹವಾ ಇಟ್ಟುಕೊಂಡು ಸಲೀಸಾಗಿ ಗೆದ್ದು ಬಿಡಬಹುದೆಂದು ಕೊಂಡಿದ್ದ ಮೋದಿ ಅವರ ಎದುರಿಗೆ ಅದೇ ಕರ್ನಾಟಕದ ಮತದಾರ ಪ್ರತಿರಾಜಕಾರಣದ ಬಲಾಢ್ಯ ರಾಜಕೀಯ ಶಕ್ತಿಯೊಂದರ ಹುಟ್ಟಿಗೆ ಕಾರಣರಾಗಿ ಸೆಡ್ಡು ಹೊಡೆದಿದ್ದಾರೆ.
ಇದು ಕರ್ನಾಟಕದ ಜನತೆಯ ರಾಜಕೀಯ ಪ್ರಜ್ಞೆಯೊಳಗಡಗಿರುವ ಎಚ್ಚರ ಸ್ಥಿತಿ. ಬಹುಪಕ್ಷಗಳ ಆಧಾರಿತ ಪ್ರಜಾಪ್ರಭುತ್ವವನ್ನು ಕೇವಲ ಏಕಪಕ್ಷ ಆಧಾರಿತ ಸರ್ವಾಧಿಕಾರ ಆಡಳಿತದೆಡೆಗೆ ಕೊಂಡೊಯ್ಯುವ ಮೋದಿ & ಪರಿವಾರದ ಸಂಕಲ್ಪಕ್ಕೆ ತರ್ಪಣ ಬಿಡಲು ಕಲ್ಯಾಣ ಕರ್ನಾಟಕದಲ್ಲಿ ಈಗ ವೇದಿಕೆ ಸಿದ್ದವಾಗಿದೆ.
ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರಿಗೆ ಇದೊಂದು ಕೊನೆಯ ಅವಕಾಶವಾಗಿತ್ತು. ಅದೆಂದರೆ ರಾಜ್ಯದಲ್ಲಿ ರಾಜಕೀಯ ಅಧಿಕಾರ ದಕ್ಕಿಸಿಕೊಳ್ಳುವ, ೨೦೦೬ರಲ್ಲಿ ತಮ್ಮ ಮಗನಿಂದಾದ ಅಪಕೀರ್ತಿ (ಬಿಜೆಪಿ ಜೊತೆ ಮೈತ್ರಿ) ಯಿಂದ ಹೊರಬರುವುದು, ಮತ್ತು ದೇಶದ ತೃತೀಯ ರಾಜಕೀಯ ಶಕ್ತಿಗಳ ಧೃವೀಕರಣದಲ್ಲಿ ನಿರ್ಣಾಯಕ ಪಾತ್ರದಲ್ಲಿ ನಿಲ್ಲುವುದು.
ಈ ಎಲ್ಲವೂ ಅವರು ಅಂದುಕೊಂಡಂತೆ ಆಗಿದೆ. ಮೇ. ೨೩ ರಂದು ವಿಧಾನಸೌಧದ ಮುಂಭಾಗದಲ್ಲಿ ನಡೆಯುತ್ತಿರುವ ತಮ್ಮ ಪುತ್ರ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸುವ ಸಮಾರಂಭ ಕೇವಲ ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ಸರ್ಕಾರ ಆರಂಭದ ಸಮಾರಂಭವಲ್ಲ. ಬದಲಿಗೆ ಮೋದಿ ಪಾರಮ್ಯವನ್ನು ಮೆಟ್ಟಿ ನಿಲ್ಲುವ ಪ್ರತಿಜ್ಞಾ ವಿಧಿ ಕೈಗೊಳ್ಳುವ ಸಮಾರಂಭವೂ ಆಗಿದೆ.
ಕಾಂಗ್ರೆಸ್ ದೊಡ್ಡಣ್ಣನ ಮನೋಸ್ಥಿತಿಯಿಂದ ಬದಲಾಗಿದೆ. ಇದು ರಾಜಕೀಯ ಧೃವೀಕರಣದ ಹಾದಿಯನ್ನು ಸುಗಮಗೊಳಿಸಿದಂತೆಯೇ. ಮೋದಿಗೆ ಸ್ಪಷ್ಟ ಸಂದೇಶವೊಂದು ರವಾನೆಯಾಗಲು ಕ್ಷಣಗಣನೆ ಆರಂಭವಾಗಿದೆ.
ಮೋದಿ ಚರಿತ್ರೆಯ ಒರೆಗಲ್ಲನ್ನು ತಿಳಿದುಕೊಳ್ಳಲೇ ಇಲ್ಲ, ಅದಕ್ಕಾಗಿ ಪ್ರಯತ್ನವನ್ನೂ ಮಾಡಲಿಲ್ಲ. ಬದಲಾಗಿ ಕುರುಡುಗಣ್ಣಿನ ಚರಿತ್ರೆಯನ್ನೆ ಸೃಷ್ಟಿಸಲು ಮುನ್ನುಗ್ಗುತ್ತಿದ್ದಾರೆ. ಅವರದ್ದೇ ಪಕ್ಷದ ಹಿರಿಯ ತಲೆಗಳು ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ತಲೆದೋರಿದೆ ಎನ್ನುವಾಗ ಮೋದಿ ಕಿವಿ, ಕಣ್ಣುಗಳು ಬಹುಪರಾಕಿನ ಗಡಚಿಕ್ಕುವ ಸದ್ದಿನಲ್ಲಿ ಮೀಯುತ್ತಿವೆ. ಕಾಲುಗಳು ಸದಾ ಆಕಾಶದಲ್ಲಿ ತೇಲುತ್ತಿವೆ.
ಯಾರಾದರೂ ಲೋಹಿಯಾ ಅವರ ಪತ್ರವನ್ನು ಮೋದಿ ಅವರಿಗೆ ತಲುಪಿಸಿ!!!






ನೀವು ಏನನ್ನು ಹೇಳಲು ಹೊರಟಿದ್ದೀರ?! ನಾಳೆ ಅಧಿಕಾರ ಗ್ರಹಣಕ್ಕೆ ಬರುವ ಎಲ್ಲ ಪ್ರಾದೇಶಿಕ ಪಕ್ಷಗಳ ನಾಯಕರು ಪ್ರಬಲ ಪ್ರಧಾನಿ ಕುರ್ಚಿ ಆಕಾಂಕ್ಷಿಗಳು, ಹಾಗು ಅತಿ ಬ್ರಷ್ಟ ರಾಜಕಾರಣಿಗಳು….!
ಅರ್ಥಪೂರ್ಣ ವಿಶ್ಲೇಷಣೆ. ಅಂಗೈ ಹುಣ್ಣಿಗೆ ಕನ್ನಡಿ ಹಿಡಿಯಬೇಕಾದ ದುಷ್ಕಾಲವಿದು: George Luckacs had famously said–“To design an ordinary table during our times, requires the genius of a Michael Angelo…” (ಎಚ್ ಪಟ್ಟಾಭಿರಾಮ ಸೋಮಯಾಜಿ)
ಕರ್ನಾಟಕದಲ್ಲಿ ಎರಡು ಪಕ್ಷಗಳ ಸಮ್ಮಿಶ್ರ ಸರ್ಕಾರ ಪ್ರಾರಂಭವಾಗುವುದಕ್ಕೆ ಮುನ್ನವೇ ಕಾಂಗ್ರೆಸ್ ಪಕ್ಷದ ಹಿರಿಯರು ತಮ್ಮ ‘ಹಕ್ಕು’ ಮಂಡನೆ ಮಾಡುತ್ತಿರುವುದನ್ನು ನೋಡುತ್ತಿರುವ ಒಬ್ನ ಜನಸಾಮಾನ್ಯನಿಗೆ ತೃತೀಯರಂಗದ ಕನಸು ಬೀಳಲೂ ಸಾಧ್ಯವಿಲ್ಲ. ಅಂತಹುದರಲ್ಲಿ ಲೇಖಕರು ಕೇಂದ್ರದಲ್ಲಿ ೨೦೧೯ರ ಚುನಾವಣೆಯಲ್ಲಿ ತೃತೀಯರಂಗದ ಭೂಮಿಕೆಗೆ ನಮ್ಮ ರಾಜ್ಯ ಮುನ್ನುಡಿ ಬರೆಯಲಿದೆ ಎಂದು ಆಶಿಸಿದ್ದಾರೆ. ನೋಡೋಣ!!
ಪಶ್ಚಿಮ ಬಂಗಾಳದ ಸ್ಥಳೀಯ ಚುನಾವಣೆಗಳು ಹೇಗೆ ನಡೆದವು ಎಂಬುದು ಇಡೀ ದೇಶಕ್ಕೆ ತಿಳಿದಿದೆ.
ಅದನ್ನು ಕೂಡ ಮೋದಿ ವಿರುದ್ಧದ ಗೆಲುವು ಅಂದುಕೊಳ್ಳುವುದು ಬಹುಷಃ ಪ್ರಜಾಪ್ರಭುತ್ವದ ಕೊನೆಯ ದುರಂತ!!
ಯಾವ ದೃಷ್ಟಿಯಲ್ಲಿ ಮಮತಾ, ಲಾಲು, ಸೋನಿಯಾ, ಚಿದಂಬರಂ, ಮುಲಾಯಂ, ಮಾಯಾವತಿ, ದೇವೇಗೌಡ, KCR, ಸ್ಟಾಲಿನ್, ಶರದ್ ಪವಾರ್ ಮುಂತಾದ ಅತ್ಯಂತ ಭ್ರಷ್ಟ ರಾಜಕಾರಣಿಗಳು ಬಿಜೆಪಿ ರಾಜಕಾರಣಿಗಳಿಗಿಂತ ಉತ್ತಮರೊ ಅರ್ಥವಾಗಲಿಲ್ಲ, ಈ ತೃತೀಯ ರಂಗ ಎನ್ನುವುದೇ ಒಂದು ಜೋಕ್, ನಮ್ಮ ಇತಿಹಾಸದಲ್ಲೇ ಯಾವುದೇ ಒಂದು ನಿರ್ದಿಷ್ಟ ಸಾಮಾನ್ಯ ಗುರಿಯಿಲ್ಲದ ಗುಂಪು ಒಂದು ವರ್ಷಕ್ಕಿಂತ ಒಟ್ಟಿಗೆ ಏಗಿದ್ದಿಲ್ಲ!!
ಅಷ್ಟಕ್ಕೂ ಮೋದಿಯವರ ವಿರುದ್ಧ ಕಟ್ಟಿ ಮಸೆಯುತ್ತಿರುವವರು ಕ್ರಿಶ್ಚಿಯನ್ ಮಿಷನರಿಗಳು ಮತ್ತು ಕೆಲವು ಮುಲ್ಲಾಗಳು ಮತ್ತು ಅದಕ್ಕೆ ಕಾರಣಗಳೂ ಸ್ಪಷ್ಟ, ಅದು ಬಿಟ್ಟರೆ ಬಹುಸಂಖ್ಯಾತ ಮಧ್ಯಮವರ್ಗದ ಜನಕ್ಕೆ ಸದ್ಯಕ್ಕೆ ಬಿಜೆಪಿ ಗಿಂತ ಒಳ್ಳೆ ಆಯ್ಕೆಯಿಲ್ಲ, especially ಕೇಂದ್ರದಲ್ಲಿ…