– ನಾ ದಿವಾಕರ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಆಳ್ವಿಕರ ತಪ್ಪು ಒಪ್ಪುಗಳನ್ನು ಪರಾಮರ್ಶಿಸುವ ಹಕ್ಕು ಇರುವುದು ಸ್ವಾಯತ್ತ ನ್ಯಾಯಾಂಗ ಮತ್ತು ಸಾರ್ವಭೌಮ ಪ್ರಜೆಗಳಿಗೆ ಮಾತ್ರ. ಪ್ರಜೆಗಳ ಈ ಸಾಂವಿಧಾನಿಕ ಹಕ್ಕು ಆಳ್ವಿಕರ ಪ್ರಾಬಲ್ಯ ಮತ್ತು ಅಧಿಪತ್ಯಕ್ಕೊಳಪಟ್ಟು ಮಾರುಕಟ್ಟೆಯ ಸರಕಿನಂತೆ ಬಿಕರಿಯಾಗಬಹುದಾದ ಸಾಧ್ಯತೆಗಳನ್ನು ಭಾರತದ ಪ್ರಜಾತಂತ್ರ ಈಗಾಗಲೇ ನಿರೂಪಿಸಿದೆ.
ಈ ಸನ್ನಿವೇಶದಲ್ಲಿ ನ್ಯಾಯಾನ್ಯಾಯಗಳ ಪರಾಮರ್ಶೆಗೆ ಉಳಿದಿರುವುದು ನ್ಯಾಯಾಂಗದ ಮಾರ್ಗವೊಂದೇ. ಲೋಕಾಯುಕ್ತ ಎಂಬ ಸ್ವತಂತ್ರ-ಸ್ವಾಯತ್ತ ಸಂಸ್ಥೆಯನ್ನು ಈ ದೃಷ್ಟಿಯಿಂದಲೇ ನೋಡಬೇಕಾಗುತ್ತದೆ. ಆದರೆ ಕರ್ನಾಟಕದ ಇತ್ತೀಚಿನ ವಿದ್ಯಮಾನಗಳನ್ನು ನೋಡಿದಾಗ ಲೋಕಾಯುಕ್ತ ಎಂಬ ಸಾಂವಿಧಾನಿಕ ಸಂಸ್ಥೆಯೂ ದೇಶದ ಪ್ರಜೆಗಳಂತೆಯೇ ನಿಸ್ಸಹಾಯಕವಾಗುತ್ತಿದೆಯೇನೋ ಎಂದು ಭಾಸವಾಗುವುದು ಸಹಜ. ಮತ್ತೊಂದೆಡೆ ಯಾವುದೇ ನಾಗರಿಕ ಸಮಾಜದಲ್ಲಿ, ವಿಶೇಷವಾಗಿ ಪ್ರಜಾಪ್ರಭುತ್ವವನ್ನು ಸ್ವೀಕರಿಸಿರುವ ಸಮಾಜದಲ್ಲಿ ರಾಜಕಾರಣವು ಧರ್ಮಾತೀತವಾಗಿ, ಜಾತ್ಯಾತೀತವಾಗಿ ಇರಬೇಕಾದ್ದೂ ಅಗತ್ಯ. ಧರ್ಮ ಮತ್ತು ಧಾರ್ಮಿಕ ವಿದ್ಯಮಾನಗಳನ್ನು ಪರಾಮರ್ಶಿಸುವ ಸ್ವಯಾರ್ಜಿತ ಹಕ್ಕನ್ನು ಅಧಿಕೃತವಾಗಿ ಪಡೆದಿರುವ ಧರ್ಮ ಕೇಂದ್ರಗಳು ದೇಶದ ರಾಜಕೀಯ-ಸಾಮಾಜಿಕ ಸ್ಥಿತ್ಯಂತರಗಳನ್ನು ಕುರಿತು ಚಿಂತಿಸುವ ಅಗತ್ಯತೆ ಇರುವುದಾದರೂ, ಸಮಸ್ತ ಪ್ರಜೆಗಳ ಹಿತಾಸಕ್ತಿಗಳನ್ನು ನಿರ್ಧರಿಸುವ ವಿದ್ಯಮಾನಗಳಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯತೆ ಕಂಡುಬರುವುದಿಲ್ಲ. ಹೀಗಿದ್ದಾಗ ಮಾತ್ರ ಧರ್ಮ ಕೇಂದ್ರಗಳ ಬಗ್ಗೆ ಜನಸಾಮಾನ್ಯರಲ್ಲಿ ವಿಶ್ವಾಸ ದೃಢವಾಗಿರಲು ಸಾಧ್ಯ. ಪಾರಮಾರ್ಥಿಕ ಲೋಕದ ಅಂಕುಡೊಂಕುಗಳನ್ನೇ ಸರಿಪಡಿಸಲಾಗದ ಧರ್ಮಗುರುಗಳು ಲೌಕಿಕ ಪ್ರಪಂಚದಲ್ಲಿ ನಡೆಯುವ ವಿದ್ಯಮಾನಗಳನ್ನು ರಿಪೇರಿ ಮಾಡಲು ಮುಂದಾದಾಗ, ಧರ್ಮ ಕೇಂದ್ರಗಳಿಗೂ ರಾಜಕೀಯ ಗುಂಪುಗಳಿಗೂ ಇರುವ ವ್ಯತ್ಯಾಸವೇ ಇಲ್ಲವಾಗುತ್ತದೆ. ವಿಪರ್ಯಾಸವೆಂದರೆ ಕರ್ನಾಟಕದಲ್ಲಿ ಈ ವಿದ್ಯಮಾನವೇ ಪ್ರಧಾನವಾಗಿ ಕಾಣುತ್ತಿದೆ. ಭೂಹಗರಣಗಳ ವಿವಾದದಲ್ಲಿ ಸಿಲುಕಿ ಪಕ್ಷದ ಹೈಕಮಾಂಡಿನಿಂದ ಕ್ಲೀನ್ ಚಿಟ್ ಪಡೆದ ಯಡಿಯೂರಪ್ಪನವರಿಗೆ ನ್ಯಾಯಾಂಗವೂ ಕ್ಲೀನ್ ಚಿಟ್ ನೀಡಬೇಕಿಲ್ಲ. ಏಕೆಂದರೆ ಭಾಜಪದ ನಾಯಕತ್ವಕ್ಕೆ ಅಧಿಕಾರ, ಬಂಡವಾಳ ಮತ್ತು ಜನ ಪ್ರಾತಿನಿಧ್ಯ ಮುಖ್ಯವಾದರೆ ನ್ಯಾಯಾಂಗಕ್ಕೆ ಸಾಂವಿಧಾನಿಕ ನಿಷ್ಠೆ, ಸಾಮಾಜಿಕ-ರಾಜಕೀಯ ನೈತಿಕತೆ ಮುಖ್ಯವಾಗುತ್ತದೆ. ಭಾಜಪದ ಕೇಂದ್ರ ನಾಯಕತ್ವ ಏನೇ ತನಿಖೆ ನಡೆಸಿದರೂ ಒಂದು ಉದ್ದೇಶಿತ ಗುರಿಯನ್ನು ಬೆನ್ನಟ್ಟಿಯೇ ನಡೆಸುವುದು ಸಹಜ, ಸ್ವಾಭಾವಿಕ ಮತ್ತು ಅನಿವಾರ್ಯವೂ ಹೌದು. ಹಾಗಾಗಿಯೇ ಒಂದು ನಿರ್ದಿಷ್ಟ ಸಿದ್ಧಾಂತವಾಗಲಿ, ಪಕ್ಷ ನಿಷ್ಠೆಯಾಗಲೀ ಇಲ್ಲದ ವ್ಯಕ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತದೆ. ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ! ಯಡಿಯೂರಪ್ಪನವರು ಯಾವುದೇ ಅಪರಾಧ ಎಸಗಿಲ್ಲ ಎಂದು ನಿರೂಪಿಸುವ ಧ್ಯೇಯವೇ ತನಿಖೆಯ ಮೂಲ ಆಶಯವಾದಾಗ ತನಿಖೆ ಎನ್ನುವ ಪದ ತನ್ನ ಅರ್ಥವನ್ನೇ ಕಳೆದುಕೊಳ್ಳುತ್ತದೆ. ಆದರೆ ಭ್ರಷ್ಟಾಚಾರದ ಹಗರಣಗಳನ್ನು ಸಮಸ್ತ ಜನತೆ ಮತ್ತು ಪ್ರಜಾಸತ್ತಾತ್ಮಕ ಸಾಂವಿಧಾನಿಕ ಆಶಯಗಳಿಗನುಗುಣವಾಗಿ ಪರಾಮರ್ಶಿಸುವ ನ್ಯಾಯಾಂಗ ವ್ಯವಸ್ಥೆಗೆ ಯಾವುದೇ ಅನಿವಾರ್ಯತೆಗಳಿರುವುದಿಲ್ಲ. ನ್ಯಾಯಾಂಗದ ದೃಷ್ಟಿಯಲ್ಲಿ ಯಡಿಯೂರಪ್ಪ ಅಥವಾ ಗಣಿ ರೆಡ್ಡಿಗಳು ವ್ಯಕ್ತಿಗಳಾಗಿ ಕಾಣುವುದಿಲ್ಲ. ಕರ್ನಾಟಕದ ಆರು ಕೋಟಿ ಜನತೆಯ ಚುನಾಯಿತ ಪ್ರತಿನಿಧಿಯಾಗಿ ಪರಿಣಮಿಸುತ್ತಾರೆ. ಇದನ್ನೇ ನ್ಯಾಯವ್ಯವಸ್ಥೆಯ ಸ್ವಾಯತ್ತತೆ ಅಥವಾ ಪರಮಾಧಿಕಾರ ಎಂದು ಹೇಳಬಹುದು. ತಾವು ತನಿಖೆ ನಡೆಸುತ್ತಿರುವ ಪ್ರಕರಣಗಳನ್ನು ಪುನಃ ಪ್ರತ್ಯೇಕ ನ್ಯಾಯಾಂಗ ತನಿಖೆಗೆ ಒಪ್ಪಿಸುವ ಮುಖ್ಯಮಂತ್ರಿಗಳ ಕ್ರಮವನ್ನು ಲೋಕಾಯುಕ್ತರು ವಿರೋಧಿಸಿರುವುದುನ್ನು ಈ ಹಿನ್ನೆಲೆಯಲ್ಲೇ ನೋಡಬೇಕಾಗುತ್ತದೆ. ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆಯವರ ಆಕ್ರೋಶ ವ್ಯಕ್ತಿಗತ ಹತಾಶೆಯಿಂದ ಮೂಡಿರುವುದೆಂದು ಭಾವಿಸಬೇಕಿಲ್ಲ. ಪ್ರಸಕ್ತ ಭಾರತದ ರಾಜಕಾರಣದಲ್ಲಿ ಇಡೀ ನ್ಯಾಯಾಂಗವೇ ಅನುಭವಿಸುತ್ತಿರುವ ಹತಾಶೆಯನ್ನು ಮಾನ್ಯ ಹೆಗ್ಡೆಯವರು ಪ್ರತಿನಿಧಿಸುತ್ತಾರೆ. ಹಿಂದೊಮ್ಮೆ ಸರ್ಕಾರದ ಅಸಹಕಾರದಿಂದ ಬೇಸತ್ತು ರಾಜಿನಾಮೆ ನೀಡಿದ್ದ ನ್ಯಾ. ಸಂತೋಷ್ ಹೆಗ್ಡೆ , ಪಿತೃಸಮಾನ(?) ಅದ್ವಾನಿಯವರ ಮಾತಿಗೆ ಕಟ್ಟುಬಿದ್ದು ಹಿಂಪಡೆದಿದ್ದರು. ಈಗ ತಮ್ಮ ನಿರ್ಧಾರಕ್ಕೆ ಪಶ್ಚಾತ್ತಾಪ ಪಡುತ್ತಿದ್ದಾರೆ. ಇದು ಅವರ ವೈಯ್ಯಕ್ತಿಕ ವಿಚಾರ. ಆದರೆ ಕರ್ನಾಟಕದ ಜನತೆಗೆ ಬೇಕಿರುವುದು ಸಂತೋಷ್ ಹೆಗ್ಡೆಯವರ ವ್ಯಕ್ತಿಗತ ನಿಲುವುಗಳಾಗಲೀ, ರಾಜ್ಯ ಸರ್ಕಾರದ ಸ್ವಾರ್ಥಪರ ನಿಲುವುಗಳಾಗಲೀ ಅಲ್ಲ. ಬದಲಾಗಿ ಜನತೆ ನ್ಯಾಯಕ್ಕಾಗಿ ಹಾತೊರೆಯುತ್ತಿದೆ. ತಮ್ಮನ್ನು ಆಳುತ್ತಿರುವ ರಾಜಕೀಯ ಶಕ್ತಿಗಳು ನಿಂತ ನೆಲವನ್ನೇ ನುಂಗಿ ಕಬಳಿಸುವ ಮಟ್ಟಕ್ಕೆ ಭ್ರಷ್ಟರಾಗಿರುವ ಸಂದರ್ಭದಲ್ಲಿ, ನಾಗರಿಕ ಸಮಾಜದ ತಳಪಾಯವೇ ಕುಸಿದು ಹೋಗುತ್ತಿರುವ ಸನ್ನಿವೇಶದಲ್ಲಿ, ನ್ಯಾಯಾನ್ಯಾಯಗಳ ವಿಮರ್ಶೆಯಾಗಬೇಕಿರುವುದು ಸತ್ಯಾಸತ್ಯತೆಗಳ ಪರಿಧಿಯಲ್ಲೇ ಹೊರತು ವ್ಯಕ್ತಿಗತ ನಿಷ್ಠೆಯ ಪರಿಧಿಯಲ್ಲಿ ಅಲ್ಲ. ವಿಪರ್ಯಾಸವೆಂದರೆ ಲೋಕಾಯುಕ್ತ ಸಂಸ್ಥೆಯ ಅಸ್ತಿತ್ವ ಮತ್ತು ಅಸ್ಮಿತೆಗಳನ್ನೇ ಧಿಕ್ಕರಿಸಿ ನಿರಾಕರಿಸುತ್ತಿರುವ ಭ್ರಷ್ಟ ಆಳುವ ವ್ಯವಸ್ಥೆಗೆ, ಸಾಮಾಜಿಕ ನೈತಿಕ ಮೌಲ್ಯಗಳನ್ನು ಪ್ರತಿನಿಧಿಸಬೇಕಾದ ಧರ್ಮಾಯುಕ್ತರು ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ತಮ್ಮನ್ನು ತಾವೇ ಜಗದ್ಗುರುಗಳೆಂದು ಕರೆದುಕೊಳ್ಳುವ ಮಠೋದ್ಯಮಿಗಳು (ಮಠಾಧಿಪತಿಗಳೆನ್ನುವುದಕ್ಕಿಂತಲೂ ಈ ಪದ ಸೂಕ್ತ. ಮಠಗಳು ಧರ್ಮಪ್ರೇರಿತ ಉದ್ಯಮಗಳಾಗಿರುವ ಹಿನ್ನೆಲೆಯಲ್ಲಿ) ತಮ್ಮ ಪಾರಮಾರ್ಥಿಕ ಚಿಂತನೆಗಳನ್ನು ಪರಮ ಆರ್ಥಿಕ ಚಿಂತನೆಗಳೆಡೆಗೆ ತಿರುಗಿಸಿ, ಜಾತಿ ವ್ಯಾಮೋಹದ ಬಲೆಗೆ ಸಿಲುಕಿ, ಬೀದಿಗಿಳಿದು ಪ್ರತಿಭಟನೆ ಮಾಡುವ ಮೂಲಕ ಒಂದು ಭ್ರಷ್ಟ ವ್ಯವಸ್ಥೆಯನ್ನು ಸಮರ್ಥಿಸುತ್ತಿರುವುದು ನಾಗರಿಕತೆಗೆ ಎಸಗಿದ ಅಪಚಾರವಾಗಿದೆ. ವಿಡಂಬನೆ ಎಂದರೆ ತಮ್ಮ ಅಧಿಕಾರ ದಾಹವನ್ನು ನೀಗಿಸಿಕೊಳ್ಳಲು ಸಂವಿಧಾನ ಬದ್ಧ ಲೋಕಾಯುಕ್ತರನ್ನು ಕಡೆಗಣಿಸಿ, ಸ್ವಾರ್ಥಪರ ಧರ್ಮಾಯುಕ್ತರನ್ನು ಪ್ರೋತ್ಸಾಹಿಸುತ್ತಿರುವುದು ಸಂವಿಧಾನಬದ್ಧ ಚುನಾಯಿತ ಸರ್ಕಾರವೇ. ಸರ್ಕಾರದ ವಿರುದ್ಧ ಕಿಡಿ ಕಾರುವ ಲೋಕಾಯುಕ್ತರು, ಲೋಕಾಯುಕ್ತರ ವಿರುದ್ಧ ಧರಣಿ ನಡೆಸುವ ಆಳುವ ಪಕ್ಷದ ಕಾರ್ಯಕರ್ತರು, ತಮಗೆ ಮೆತ್ತಿದ ಕಳಂಕವನ್ನು ತೊಳೆದುಕೊಳ್ಳಲು ನ್ಯಾಯಾಂಗವನ್ನೇ ಬುಡಮೇಲು ಮಾಡುವ ಮುಖ್ಯಮಂತ್ರಿಗಳು ಮತ್ತು ಇಡೀ ಭ್ರಷ್ಟ ವ್ಯವಸ್ಥೆಯನ್ನು ಸಮರ್ಥಿಸುವ ಧರ್ಮ(?)ಗುರುಗಳು- ಈ ನಾಲ್ವರ ನಡುವೆ ನ್ಯಾಯದ ಪರಿಕಲ್ಪನೆಯೇ ಪ್ರಶ್ನಾರ್ಹವಾಗಿದೆ. ನ್ಯಾಯದೇವತೆಯ ಕಣ್ಣಿಗೆ ಪಟ್ಟಿ ಬಿಗಿದಿರುವುದು ಈ ಕಾರಣಕ್ಕಾಗಿಯೇ ಇರಬಹುದೇ ?]]>ಲೋಕಾಯುಕ್ತ VS ಧರ್ಮಾಯುಕ್ತ…
ನಿಮಗೆ ಇವೂ ಇಷ್ಟವಾಗಬಹುದು…





ಜಗದ ಕುರುಗಳ ಬಗ್ಗೆ ಚೆನ್ನಾಗಿ ಹೇಳಿದ್ದೀರಿ.
ಅಶೋಕವರ್ಧನ
ನ್ಯಾಂಯಾಂಗವೋ, ಲೋಕಾಯುಕ್ತವೊ, ಸಿವಿಸಿಯೋ ಅಂತಹ ಇನ್ನಾವುದೊ ‘ದಂಡಾಧಿಕರ’ಕ್ಕೆ ಅಂಜಿ ನಡೆಯುವ ಮೌಲ್ಯ-ಮನೊಭಾವ ಪ್ರಭುಪ್ರಭುತ್ವದ ಪಳೆಯುಳಿಕೆಯೇ ಹೌದು. ಪ್ರಜಾಪ್ರಭುತ್ವದಲ್ಲಾದರೋ ಮತದಾರ ಪ್ರಭುವಿನ ಮನ-ನಿರ್ಧರಗಳೇ ಆಡಳಿತವಾಗಬೇಕು. ಅದು ಚುನಾವಣೆ, ಮತದಾನ, ಸದನ ಸಂಘಟನೆ ಅಲ್ಲಿನ ‘ಬಹುಮತ’, ಅದು ಹುಟ್ಟಿಸುವ ಕಾರ್ಯಾಂಗ ರಚನೆಗಳ ಮೂಲಕ ನಡೆಯುವುದು. ನಮ್ಮಲ್ಲಿನ ಚುನಾವಣಾ ವ್ಯವಸ್ಥೆಯೇ ‘ನಿಜ ಬಹುಮತ ಪ್ರಾತಿನಿಧ್ಯ’ಕ್ಕೆ ಅವಕಾಶ ಕೊಡುವುದಿಲ್ಲ; ಜನಸಂಖ್ಯೆಯ ಶೇ. 20-25ರಷ್ಟು ಕಳ್ಳರು, ಸುಳ್ಳರು, ದಗಾಕೋರರೇ ಮಹಾಜನತೆಯ ಪ್ರತಿನಿಧಿಗಳಾಗಿ ಅಡಲಳಿತದ ಚುಕ್ಕಾಣಿ ಹಿಡಿಯುವ ಅವಕಾಶವಿರುತ್ತದೆ. ಅವರ ದ್ಯೆಯೋದ್ದೇಶದಂತೆಯೇ ಆಡಳಿತ ನಡೆಯುತ್ತದೆ! ಆ ವ್ಯವಸ್ಥೆ ಸುಧಾರಿಸದೆ ಬ್ರಷ್ಟಾಚಾರದ ವಿರುದ್ಧ ಎಷ್ಟೇ ಹಳಹಳಿಸಿದರೂ, ಹಪಹಪಿಸಿದರೂ ಅದು ಬರೀ ಬೂಟಾಟಿಕೆಯಷ್ಟೇ ಆಗುತ್ತದೆ!
ella sullu, mosagaarare tumbiruvaaga nyaaya kelavomme ellide endu hudukabekaaguttade.
Santhosh hegde antavaru kelavomme ashakiran aagi horahommuttaare
olleya lekhana