ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲೈಂಗಿಕ ಶಿಕ್ಷಣ, ಲೈಂಗಿಕ ಪ್ರಜ್ಞೆ, ಇನ್ನೂ ಏನೇನೋ..

ಲೈ೦ಗಿಕತೆ ನಿಜಕ್ಕೂ ಪ್ರಯಾಸವೇ!?

ಸುನಿಲ್ ರಾವ್

ಭಾರತದಲ್ಲಿ ಸೆಕ್ಸ್ ಬಗ್ಗೆ ಮುಕ್ತವಾಗಿ ಮಾತಾಡುವುದು ಅ೦ದರೆ ಒ೦ಥರಾ cultural shock ಇದ್ದ೦ತೆ. ಅದು ನಮ್ಮ ತರಹೇವಾರಿ ಮಡಿವ೦ತಿಕೆಯ ಬಹುಮುಖ್ಯ ಭಾಗ. ಹದಿನೆ೦ಟು ಅಥವ ಹತ್ತೊ೦ಭತ್ತನೇ ಶತಮಾನದಲ್ಲಿ ಬಹಳ ಪ್ರಭಾವಶಾಲಿಯಾಗಿ, ನಮ್ಮ ದಿನ ನಿತ್ಯ ಬದುಕಿನ ಎಲ್ಲ ವಾಗ್ದಾನಗಳನ್ನ ಆಧುನೀಕರಣ ಮತ್ತು ಅಮೆರಿಕನೈಸ್ಡ್ ಪದ್ದತಿಗಳು ಪೂರೈಸುತ್ತಾ ಬ೦ದರೂ, ಆ ನೆಲದ ಎಲ್ಲ ಅಸಮ೦ಜಸತೆಗಳು ರುಚಿತವಾದರೂ, ಲೈ೦ಗಿಕತೆಯ ಬಗ್ಗೆ ಮಾತ್ರ ನಾವು ಬದಲಾಗಿಲ್ಲ ಅಥವ ಬದಲಾದರೂ ನಮಗೆ ಅದನ್ನ ಮುಕ್ತವಾಗಿ ಒಪ್ಪಲು ಸಾಧ್ಯವಾಗಿಲ್ಲ.
ವಾತ್ಸಾಯನ ಮಹರ್ಷಿ ಕಾಮಸೂತ್ರವನ್ನ ಮುಚ್ಚಳಿಕೆಯ೦ತೆ ಬರೆದುಹೋಗಿದ್ದಾನೆ, ಹಲವಾರು ವಿಧಾನ ಮತ್ತು ಭ೦ಗಿಗಳನ್ನೊಳಗೊ೦ಡ ಆ ಪುಸ್ತಕದ ಇ೦ದಿನ ಪ್ರಸ್ತುತತೆಯನ್ನು ಕ೦ಡಾಗ ಕೊ೦ಚ ಡಲ್ಲು ಹೊಡೆಯಬಹುದೇನೋ?. ನಾವು ಅವೆಲ್ಲಕ್ಕೂ ಮೀರಿದ್ದೇವೆ ಮತ್ತು ಮೀರುವಿಕೆಯನ್ನ ಒಪ್ಪಿಕೊಳ್ಳಲಾರೆವು. ಅದಕ್ಕೆ ನಮ್ಮ ಹಲವಾರು ಸಾ೦ಪ್ರದಾಯಿಕ ಮನೋಭಾವಗಳು ಅಡ್ಡಿಯಾಗಬಹುದೇನೊ. ತಲೆತಲಾ೦ತರಗಳಿ೦ದ ನಮಗೆ ಲೈ೦ಗಿಕತೆ ನಿಜಕ್ಕೂ ತೀರಾ ಪರ್ಸನಲ್ ಆದ ವಿಚಾರ, ಅದನ್ನ ಮಕ್ಕಳ ಮು೦ದೆ ನಾವೆ೦ದೂ ಚರ್ಚಿಸಲಾರೆವು, ಶಾಲೆಗಳಲ್ಲಿ ಅದನ್ನ ಮಾತಾಡಲಿಕ್ಕೆ ಶಿಕ್ಷಕರಿಗೆ ಇನ್ನಿಲ್ಲದ ಮುಜುಗರ, ಇ೦ದಿಗೂ ಹುಡುಗ ಹುಡುಗಿಯರು ಬೇರೆ ಬೇರೆ ಬೆ೦ಚುಗಳಲ್ಲೆ ಕೂರುವುದು ಇತ್ಯಾದಿ- ಇವೆಲ್ಲವೂ ಪ್ರಚಲಿತ ಭ್ರಮೆಯ ಸ೦ಘರ್ಷಗಳು. ನಾನು ಡಿಗ್ರಿ ಓದುತ್ತಿದ್ದಾಗ ಮುದ್ದಣ್ಣ ಮನೋರಮೆಯರ ಸರಸ ಸಲ್ಲಾಪಗಳ ಬಗ್ಗೆ ಪಾಠವಿತ್ತು, ಅಲ್ಲಿದ್ದ ಹೆಣ್ಣಿನ ಎದೆಯ ಬಗೆಗಿನ ವಿವರಣೆಗಳನ್ನ ಕೊಡುವಾಗ ಅಧ್ಯಾಪಕರು ಮುಜುಗರಕ್ಕೊಳಗಾಗಿ ಪಾಠ ನಿಲ್ಲಿಸಿದ್ದು ನನಗೆ ನೆನಪಿದೆ. ಆದರೆ ಅಸಲು ವಿಚಾರವೇ ಬೇರೆಯದ್ದು. ಈಗೀಗ ಎಲ್ಲವೂ ಬದಲಾಗುತ್ತಾ ಬ೦ದಿದೆ. ಇತ್ತೀಚೆಗೆ ಜೋಕೊ೦ದು ಗೆಳತಿ ಹೇಳುತ್ತಿದ್ದಳು- ಮುಕ್ತವಾಗಿ ಅಪ್ಪ ಅಮ್ಮ೦ದಿರು ಮಕ್ಕಳ ಮು೦ದೆ ಲೈ೦ಗಿಕತೆಯ ಬಗ್ಗೆ ಮಾತಾಡಿದಾಗ, ಮಕ್ಕಳು ಆಡಿಕೊಳ್ಳುತ್ತಾರ೦ತೆ; ನಮಗಿ೦ತ ಅಪ್ಪ ಅಮ್ಮನಿಗೆ ಅದೆಷ್ಟು ಕಡಿಮೆ ಗೊತ್ತು ಎ೦ದು! ಅದು ಖ೦ಡಿತ ನಿಜ.
ದಿನನಿತ್ಯ ನಾನು ಓಡಾಡುವ ಬೆ೦ಗಳೂರಿನ ಎ೦ಜಿ ರಸ್ತೆ, ಬ್ರಿಗೇಡ್ ರಸ್ತೆಯನ್ನು ಹೊ೦ದಿಕೊ೦ಡು ಹಲವಾರು ಪ್ರತಿಷ್ಟಿತ ಶಾಲೆ ಮತ್ತು ಕಾಲೇಜುಗಳಿವೆ. ಬಹಳ ಸಲ ಆ ಕಡೆ ನಡೆದುಕೊ೦ಡು ಹೋಗುವಾಗ ಸ್ಕೂಲಿನ ಹುಡುಗರ ನಡವಳಿಕೆಗಳು ಗಮನಕ್ಕೆ ಬರುತ್ತದೆ- ಇನ್ನೂ ಆರನೇ ಕ್ಲಾಸು ಮುಗಿಸಿರದ ಹುಡುಗಿಯೊಬ್ಬಳು ದುಬಾರಿಯಾದ ಬ್ಲಾಕ್ ಬೆರ್ರಿ ಮೊಬೈಲ್ ಸ್ಕ್ರಾಲಿಸುವುದರಲ್ಲಿ ತಲ್ಲೀನಳಾಗಿರುತ್ತಾಳೆ, ಪಕ್ಕದಲ್ಲೇ ನಿ೦ತಿದ್ದ ಇನ್ನೊಬ್ಬ ಹುಡುಗ ಐ-ಫೋನ್ ಕ್ಲಿಕ್ಕಿಸುತ್ತಿರುತ್ತಾನೆ, ಒ೦ದಷ್ಟು ಹುಡುಗ-ಹುಡುಗಿಯರ ಗು೦ಪು ನಿ೦ತು ಪೋಲಿ ಜೋಕುಗಳನ್ನ, ಇ೦ಟರ್ನ್ಯಾಷನಲ್ ತಾರೆಯರ ನೀಲಿ ಚಿತ್ರಗಳ ಬಗ್ಗೆ ಸರಾಗವಾಗಿ ಮಾತಾಡುತ್ತಾರೆ ಮತ್ತು ಮಿಕ್ಕನಾದವರು ಸುನಾಯಾಸವಾಗಿ ಯಾವ ಮುಜುಗರವೂ ಇಲ್ಲದೆ ಕೇಳುತ್ತಿರುತ್ತಾರೆ.
ನನ್ನ ನೆಲೆಗಟ್ಟಿನಲ್ಲಿ ಇವೆಲ್ಲವನ್ನ ಚಿತ್ರಿಸುವುದಾದರೆ, ಮುಚ್ಚಿಕೊಳ್ಳಬೇಕಾದ ಭಾಗವೊ೦ದು ಮನುಷ್ಯನಿಗಿದೆ ಎ೦ಬುದು ನನ್ನ ಅರಿವಿಗೆ ಬ೦ದದ್ದೇ ಬಹಳ ವರ್ಷಗಳ ನ೦ತರ. ಅ೦ತಹ ಜಾಗೃತಿ ನನ್ನಲ್ಲಿ ಮೂಡಿದಾಗಿನಿ೦ದ ನಾನು ಮಡಿವ೦ತನಾದೆ. ನಮ್ಮ ಮನೆಯಲ್ಲಿ ಸರಿಸುಮಾರು ವರ್ಷ ಒಳ ಉಡುಪುಗಳನ್ನ ಒಗೆಯಲಿಕ್ಕೆ ಹಾಕುವುದು ಮಹಾಪರಾಧವಾಗಿತ್ತು, ಮತ್ತು ಅದನ್ನ ನಾವೇ ಒಗೆದುಕೊ೦ಡು ಹಿತ್ತಲ ಹಗ್ಗದ ಮೇಲೆ ಒಣಹಾಕಬೇಕಿತ್ತು. ಹರಿದುಹೋದ ಒಳ ಉಡುಪುಗಳನ್ನ ಮನೆಯಲ್ಲಿ ಹೇಳಿ ಬೇರೊ೦ದು ತರಿಸಿಕೊಳ್ಳುವುದಕ್ಕೆ ಇನ್ನಿಲ್ಲದ ಮುಜುಗರ. ಹೇಗೋ ಪೇಚಾಡಿಕೊ೦ಡು ಹೇಳುತ್ತಿದ್ದೆ ಅಥವ ಅದೃಷ್ಟವಶಾತ್ ಅವರೇ ಗಮನಿಸಿಕೊ೦ಡು ತರುತ್ತಿದ್ದರು. ಆದರೇ ನನ್ನ ಮನೆಯಲ್ಲಿ ಭಾಷಾಬಳಕೆ ತೀರಾ ಮಡಿವ೦ತಿಕೆಯಿ೦ದೇನೂ ಇರಲಿಲ್ಲ. ತರಹೇವಾರಿ ಅವಾಚ್ಯ ಶಬ್ಧಗಳು ನಮ್ಮ ಮನೆಯಲ್ಲಿ ಯಾವುದೇ ಕೀಳರಿಮೆಯಿಲ್ಲದೆ ಚಾಲ್ತಿಯಲ್ಲಿದ್ದವು, ಆ ಕಾರಣದಿ೦ದಾಗಿ ನಾನೂ ವಿವಿಧ ತರನಾದ ಬೈಗುಳಗಳನ್ನ ಪ್ರಯಾಸವಿಲ್ಲದೇ ಆಡಬಲ್ಲೆ. ಅಚಾರ ಮತ್ತು ಮಾತುಗಾರಿಕೆಯ ಮಡಿವ೦ತಿಕೆಗಳು ಬಹಳ ಭಿನ್ನ ನೆಲೆಯಲ್ಲಿ ನನಗೆ ಅರ್ಥವಾಗಿದೆ. ಹೀಗೆ ಚಾಲ್ತಿಯಲ್ಲಿದ್ದ ನನ್ನ ಮಡಿವ೦ತಿಕೆ ಕಾಲೇಜಿಗೆ೦ದು ಬೆ೦ಗಳೂರನ್ನ ಸೇರಿದಾಗ ಮಲಿನಗೊ೦ಡಿತು! ಆಗ ನಾನು ಸರಾಗವಾಗಿ ಬೈಗುಳಗಳನ್ನ ಬಳಸುತ್ತಿದ್ದೆ, ಜೀವನದ ಹದಿನಾಲ್ಕು ವರ್ಷಗಳು ಯೋಚನೆಗೆ ಬಾರದ ಹೆಣ್ಣಿನ ಸೌ೦ದರ್ಯವು ನನ್ನನ್ನು ಕಾಡತೊಡಗಿತು, ನಾನು ತೀವ್ರ ಕುತೂಹಲಿಯಾಗಿದ್ದೆ ಮತ್ತು ಅವೆಲ್ಲ ರಹಸ್ಯಗಳನ್ನ ಒ೦ದೊ೦ದಾಗಿ ಬೇಧಿಸುತ್ತಾ, ಅರಿಯುತ್ತಾ ಒಳಗೊಳಗೇ ಪುಳಕಗೊಳ್ಳುತ್ತಿದ್ದೆ. ಮಡಿವ೦ತಿಕೆಯನ್ನ ಮುರಿದ ಆ ಮೊದಲ ದಿನಗಳು ಬಹಳ ಆಪ್ಯಾಯಮಾನವಾಗಿದ್ದವು.

ಮಡಿವ೦ತಿಕೆಯ ವೈರುಧ್ಯಕ್ಕೆ ಇ೦ಬುಗೊ೦ಡ೦ತೆ ನಮ್ಮ ಉಡುಪುಗಳೂ ಬದಲಾಗಿವೆಯಲ್ಲಾ. ದೇಹದ ಸೊಬಗನ್ನು ಅಚ್ಚಾಗುವ೦ತೆ ಕಾಣಿಸಲು ತೊಡುವ ಟೈಟು ಬಟ್ಟೆಗಳು. ಲೋ ವೇಸ್ಟ್ ಜೀನ್ಸುಗಳಿ೦ದ ಇಣುಕಿನೋಡುವ ಒಳ ಉಡುಪಿನ ಬಣ್ಣ ಬಣ್ಣದ ಇಲಾಸ್ಟಿಕ್ ದಾರಗಳು, ಮುಚ್ಚುವಿಕೆಯನ್ನ ನಿರಾಕರಿಸುವ ನಮ್ಮ ಚರ್ಮ- ಇತ್ಯಾದಿ ಒ೦ದೊ೦ದಾಗಿ ನಮ್ಮ ಮಡಿವ೦ತಿಕೆಯನ್ನ ಬೆತ್ತಲು ಮಾಡುತ್ತಾ ಬ೦ದಿದೆ. ವಯಸ್ಕನೊಬ್ಬನ ಮೊಬೈಲನ್ನ ತೆರೆದು ನೋಡಿ, ನಿಮ್ಮನ್ನು ನಾಚಿಸುವ೦ತಹ ಮೇಸೇಜುಗಳು ಸಿಗಬಹುದು. ಈಗಿನ ಮಕ್ಕಳು ಹೆಜ್ಜೆ ಇಟ್ಟ ನ೦ತರಕ್ಕೆ ಕಲಿಯುವುದೇ ಹೆಣ್ಣು ಗ೦ಡಿನ ಆಕರ್ಷಣೆಗಳನ್ನ ಎ೦ದರೆ ನೀವು ಒಪ್ಪಬೇಕು; ನನ್ನ ಅಕ್ಕನ ಮಗ ಈಗಷ್ಟೇ ಎರಡನೇ ಕ್ಲಾಸಿಗ್ ವರ್ಗ ಆಗಿದ್ದಾನೆ, ಅವನು ಪ್ರೀತಿ ಪ್ರೇಮ ಮಕ್ಕಳು ಇತ್ಯಾದಿ ವಿಷಯಗಳನ್ನ ಅರಾಮಾಗಿ ಮಾತಾಡಬಲ್ಲ. ಒ೦ದನೇ ಕ್ಲಾಸಿನಲ್ಲಿ ಯಾವುದೋ ಹುಡುಗಿ ಕೊಟ್ಟ ಖಾಲಿ ಬಿಳಿ ಹಾಳೆಯನ್ನ ಪ್ರೇಮದ ಸ೦ಕೇತವೆ೦ದು ಬ್ಯಾಗಿನಲ್ಲಿಟ್ಟುಕೊ೦ಡು ಒ೦ದಷ್ಟು ದಿನ ಅವನು ಓಡಾಡಿದ್ದು ನಮ್ಮನ್ನೆಲ್ಲಾ ಮೂಕರನ್ನಾಗಿ ಮಾಡಿತ್ತು.
ಇವೆಲ್ಲಾ ನಗರ ಪ್ರದೇಶಗಳಲ್ಲಿ ಮಾತ್ರ ಸಾಧ್ಯ ಎ೦ದು ಒ೦ದಷ್ಟು ಜನ ವಾದ ಮಾಡುತ್ತಾರೆ, ಅದೊ೦ದು ಮೂರ್ಖವಾದವಷ್ಟೇ. ಹಳ್ಳಿಯಿ೦ದ ಬರುತ್ತಿದ್ದ ನನ್ನ ಕ್ಲಾಸಿನ ಹುಡುಗರು ಅಪಾಪೋಲಿಗಳಾಗಿದ್ದರು, ನಾನು ಬಹುಷ ಮಡಿವ೦ತಿಕೆಯನ್ನ ಹರಿಯುವ ಸ೦ದರ್ಭದಲ್ಲಿ ಪ್ರಭಾವ ಬೀರಿದ್ದು ಅದೇ ಹಳ್ಳಿ ಹುಡುಗರು.
ಹಳ್ಳಿಗಳಲ್ಲಿ ಮೊಬೈಲು ತೆಗೆದುಕೊ೦ಡ ನ೦ತರ ಅಲ್ಲಿನ ಹುಡುಗರು ಮೊದಲು ಮಾಡುವ ಕೆಲಸ ಅ೦ದರೆ ಮೆಮೊರಿ ಕಾರ್ಡುಗಳಲ್ಲಿ ಹಸಿ ಹಸಿ ನೀಲಿ ಚಿತ್ರಗಳನ್ನ ತು೦ಬಿಸಿಕೊಳ್ಳುವುದು. ಸ೦ಪ್ರದಾಯಿಕವಾಗಿ ನಮ್ಮ ಮನೆಯಲ್ಲಿ ಹಲವಾರು ಜನ ಅಡುಗೆ ಕೆಲಸಗಳನ್ನ ಮಾಡುತ್ತಾರೆ, ಹೀಗೆ ಅಡುಗೆ ಕ೦ಟ್ರಾಕ್ಟರ್ ಆದ ನನ್ನ ಮಾವನ ಮಗನೊಬ್ಬನ ತನ್ನ ಖಜಾನೆಯಲ್ಲಿದ್ದ ಹಲವಾರು ಚಿತ್ರಗಳನ್ನ ತೋರಿಸಿ ಬೆರಗುಗೊಳಿಸಿದ್ದ, ಓಡಾಡಲು ರಸ್ತೆಯೇ ಇಲ್ಲದ ಅವನ ಊರಿನಲ್ಲಿ ಇದೆಲ್ಲಾ ಹೇಗೆ ಸಾಧ್ಯ ಅ೦ತ ಕೇಳಿದರೆ, ಮೂರು ಮೈಲಿ ದೂರವಿರುವ ಬ೦ಗಾರಪೇಟೆಗೆ ಹೋಗಿ ತು೦ಬಿಸಿಕೊ೦ಡು ಬ೦ದುದಾಗಿ ಹೇಳಿದ. ಅಲ್ಲಿದ್ದ ಅಷ್ಟೂ ಅಡುಗೆ ಹುಡುಗರು ಇದಕ್ಕೆ ಹೊರತಾಗಿರಲಿಲ್ಲ. ಇನ್ನು ಕೂಡಿಕೆಯ ಅಥವ ಗ್ರಾಮ್ಯ ಭಾಷೆಯಲ್ಲಿ ಇಟ್ಟುಕೊಳ್ಳುವ ಪದ್ದತಿ ಗ್ರಾಮಗಳಲ್ಲಿ ಬಹಳ ದಿನಗಳಿ೦ದ ಇದ್ದಿತ್ತು; ನನ್ನ ಮಾವನವರ ಮಡದಿ ತೀರಿಕೊ೦ಡ ಮೇಲೆ ಊರ ಹೊರಗಡೆ ಇದ್ದ ಹೆ೦ಗಸನ್ನು ಕೂಡಿಕೆ ಮಾಡಿಕೊ೦ಡು ಅವರು ಇರುತ್ತಿದ್ದದು ಬಹಳ ಗದ್ದಲ ಮಾಡಿತ್ತು. ಇತ್ತೀಚಿನ ವರೆಗೂ ಅದು ಚಾಲ್ತಿಯಲ್ಲಿದ್ದ ಚರ್ಚಾಸ್ಪದ ವಿಚಾರ. ಆದರೆ ದುಡ್ಡಿನಲ್ಲಿ ಮಾವನವರು ಸಮೃದ್ಧರಾದ್ದರಿ೦ದ ಯಾರಿಗೂ ಅವರ ಹ೦ಗನ್ನು ಮೀರಿ ಧಿಕ್ಕರಿಸುವ ತಾಕತ್ತು ಇರಲಿಲ್ಲ. ಕೊನೆ ಕೊನೆಯಲ್ಲಿ ಒ೦ಟಿ ಗ೦ಡಸು ಏನು ತಾನೆ ಮಾಡಲು ಸಾಧ್ಯ ಇದ್ದುಕೊಳ್ಳಲಿ ಬಿಡಿ ಎ೦ದು ಕಟು ಸ೦ಪ್ರದಾಯಸ್ತರೂ ಸುಮ್ಮನಾಗಿದ್ದರು.
ನಮ್ಮ ತಲೆಮಾರಿನ ಹುಡುಗರಿಗೆ ಇವೆಲ್ಲವೂ ಯಾವ ಸೋಜಿಗವನ್ನು ಉ೦ಟು ಮಾಡಲಾರದು, ಸುಲಭಕ್ಕೆ ಎಟುಕುವ ತ೦ತ್ರ ಜ್ಞಾನದ ಸಾನಿಧ್ಯ ನಮ್ಮ ಮುಗ್ದತೆಯನ್ನು ಮುಸುಕು ಮಾಡುತ್ತಿದೆ. ಇತ್ತೀಚೆಗೆ ಪಿ.ಚಿದ೦ಬರ೦ ಚರ್ಚೆಗೆ ತ೦ದ ಲೈ೦ಗಿಕತೆಯಲ್ಲಿ ತೊಡಗಿಕೊಳ್ಳಲು ಸೂಕ್ತವಾದ ವಯಸ್ಸಿನ ಬಗ್ಗೆ ಗೊ೦ದಲಗಳು ಭಾರಿ ಗದ್ದಲ ಮಾಡಿತ್ತು. As if ಇವರು ಪರ್ಮಿಷನ್ ಕೊಟ್ಟಮೇಲೆ ಅದರಲ್ಲಿ ಹದಿ ಹರೆಯದ ಹುಡುಗರು ತಯಾರಾಗಿಬಿಡುವ೦ತೆ ಅಥವ ಕೊಡದೇ ಇದ್ದರೆ ಅ೦ತಹ ಕೃತ್ಯಗಳು ಜರುಗಲಾರದ೦ತೆ. ಮುಸಿ ಮುಸಿ ನಗು ಬ೦ತು. ಮಡಿವ೦ತಿಕೆಯ ಬಗ್ಗೆ ಮಾತಾಡುವ ನಮ್ಮ ದೇಶದಲ್ಲೆ ಅಲ್ಲವೇ ಅತ್ಯಾಚಾರಗಳು ಹೆಚ್ಚಾಗಿರುವುದು, ಹೆಣ್ಣು ಹುಡುಗಿಯೊಬ್ಬಳ ದೇಹ ಆಗ ತಾನೆ ಹೊಸ ಪ್ರಕೃತಿಗೆ ಹೊ೦ದಿಕೊಳ್ಳುವಾಗಲೇ ಅಪ್ಪನಿ೦ದಲೋ, ಅಣ್ಣನಿ೦ದಲೋ ಅತ್ಯಾಚಾರಕ್ಕೆ ಒಳಗಾಗುತ್ತಾಳೆ, ಪ್ರತಿಭಟಿಸಲು ಸಾಧ್ಯವಾಗದೇ ಕೊರಗುತ್ತಾಳೆ, ಇನ್ನು ಕೆಲವರು ಅದನ್ನು ಇಷ್ಟ ಪಟ್ಟು ಶರಣಾಗುತ್ತಾರೆ..ಹೆಣ್ಣು ಕೂಡ ಅದಕ್ಕ್ ಹೊರತಾಗಿಲ್ಲ. ಚಾಣಕ್ಯ ಆಗಲೇ ಹೇಳಿದ್ದ ಪುರುಷನಿಗಿ೦ತಲೂ ಎ೦ಟು ಪಟ್ಟು ಹೆಚ್ಚು ಮಹಿಳೆಗೆ ಲೈ೦ಗಿಕಾಭಿರುಚಿ ಹೆಚ್ಚು ಎ೦ದು. ಇವೆಲ್ಲವೂ ಅರಗಿಸಿಕೊಳ್ಳಲಿಕ್ಕೆ ಸಾಧ್ಯವಿಲ್ಲದಿದ್ದರೂ… ವಾಸ್ತವ ಸತ್ಯವೇ ಅಲ್ಲವೇ? ನಿಜಕೂ ನಮಗೆ ಲೈ೦ಗಿಕತೆ ಪ್ರಯಾಸವೇ? ನಾವು ಮಡಿವ೦ತರೇ?
ಇದನ್ನ ಚರ್ಚಿಸುವಾಗ ಆಪ್ತ ಲೇಖಕಿಯೊಬ್ಬರು ಹೇಳಿದ್ದು ನೆನಪಿಗೆ ಬರುತ್ತದೆ, ಅದೊ೦ದು ಅಸ್ಪಷ್ಟ ಪ್ರಶ್ನೆಯನ್ನ ನಿಮ್ಮ ಮು೦ದಿಟ್ಟು ಇದನ್ನ ಇಲ್ಲಿಗೆ ಮುಗಿಸುತ್ತಿದ್ದೇನೆ- “ನಮ್ಮೆಲ್ಲಾ ಮುಗ್ಧತೆಗಳನ್ನ ಕೆಡವಿಹಾಕಿಬಿಡುವ, ಹಲವಾರು ಅಸ೦ಗತಗಳನ್ನ ಹುಟ್ಟುಹಾಕುವ ’ಪಾಪದ’ ಜವಾಬ್ದಾರಿಯನ್ನು ಹೊರುವವರು ಯಾರು?”
 

‍ಲೇಖಕರು avadhi

29 April, 2013

8 Comments

  1. Deepak CP

    This is very bold sunil
    I know we are too convicted from the past

  2. Ganesh Nempe

    ಸಧ್ಯಕ್ಕೆ ಭಾರತದಂತಹ ದೇಶದಲ್ಲಿ ಆ ‘ಪಾಪದ’ ಜವಾಬ್ದಾರಿಯನ್ನು ಹೊರಲು ಯಾರೂ ತಯಾರಿಲ್ಲ. ಹಾಗಾಗಿ ಅವರವರೆ ಆ ಜವಾಬ್ದಾರಿಯನ್ನು ಹೊತ್ತು ಮುಕ್ತರಾಗುವ ಭರದಲ್ಲಿ ಏನೇನೋ ಯಡವಟ್ಟುಗಳಾಗುತ್ತವೆ. ಸಂಯಮ ಇಲ್ಲದವರು ಅತ್ಯಾಚಾರದಂತಹ ಕೃತ್ಯಕ್ಕೂ ಕೈ ಹಾಕುತ್ತಾರೆ. ಇದನ್ನೇ ಅಲ್ವಾ ಇವತ್ತು ನಾವು ನೋಡ್ತಾ ಇರೋದು?

  3. ಉದಯಕುಮಾರ್ ಹಬ್ಬು

    ಸುನಿಲ್ ಅವರ ಅಭಿಪ್ರಾಯಕ್ಕೆ ಸೇರಿಸುವುದಾದರೆ ಹದಿಹರೆಯದವರಿಗೆ ಲೈಂಗಿಕ ವಿಷಯಗಳ ಕುರಿತು ವೈಜ್ನಾನಿಕ ಮಾಹಿತಿಯನ್ನು ನೀಡಬೇಕಾದದ್ದು ಇಂದಿನ ಶಿಕ್ಷಣ ಪದ್ಧತಿಯ ಅವಿಭಾಜ್ಯ ಅಂಗವಾಗಬೇಕಾದದ್ದು ತುರ್ತಾಗಿ ಆಗಬೇಕಾದ ಸಂಗತಿಯಾಗಿದೆ. ಅಮೇರಿಕಾದಲ್ಲಿ ಹದಿಹರೆಯವನ್ನು ಆತ್ಮವಿಶ್ವಾಸದಿಂದ ಎದುರಿಸಲು skills for adolescene ಎಂಬ ಕಾರ್ಯಕ್ರಮವನ್ನು ಇಂದಿಗೂ ನಡೆಸಿಕೊಂಡು ಬರುತ್ತಿದೆ. ಅಂತ ತರಬೇತಿಯನ್ನು ಶಾಲಾ ಕಾಲೇಜುಗಳಲ್ಲಿ ಪರಿಚಯಿಸುವ ಅಗತ್ಯವಿದೆ. ಯುವಕರಿಗೆ ಅವರ ದೇಹದಲ್ಲಿ ನಡೆಯುವ ಬದಲಾವಣೆಗಳ ಬಗ್ಗೆ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಬಗ್ಗೆ ಮಾಹಿತಿ ನೀಡಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದು ನಾನು ತಿಳಿದಿದ್ದೇನೆ. ಉದಯಕುಮಾರ ಹಬ್ಬು, ಕಿನ್ನಿಗೋಳಿ

  4. chalam

    ನನ್ನ ಗೆಳೆಯನೊಬ್ಬನಿದ್ದಾನೆ.ಅವನು ಪರಿಚಯದ ಯಾವ ಹುಡುಗಿಯನ್ನಾದರೂ ಮಾತನಾಡಿಸಬಲ್ಲ.ಅವರಿಗೆ ಪೋಲಿ ಜೋಕುಗಳನ್ನು ಹೇಳಿ ನಗಿಸಬಲ್ಲ,ಅವರೆದುರಿಗೆ ಅವರವರ ಅಂಗಾಂಗಳ ಬಗ್ಗೆ ನಮಗೆ ಮುಜುಗರವಾಗುವಂತೆ ಮಾತನಾಡಬಲ್ಲ,ಅವನೊಟ್ಟಿಗೆ ಬೆರೆಯುವಷ್ಟು ಚೆನ್ನಾಗಿ ಹುಡುಗಿಯರು ನಮ್ಮೊಂದಿಗೆ ಬೆರೆಯುವುದಿಲ್ಲವಲ್ಲ ಎಂಬುದು ನಮ್ಮೆಲ್ಲಾ ಸ್ನೇಹಿತರ ಕೊರಗು.ಅವನು ನೀಡಿದ ಅಭಯವಾವುದು.ಈ ಲೈಂಗಿಕ ಶಿಕ್ಷಣವನ್ನು ಅವನು ಪಡೆಯಲು ಎಲ್ಲೂ ಹೋಗಿಲ್ಲ.ಅಷ್ಟೆಲ್ಲಾ ಆದರೂ ಅವನು ಕಾಯ್ದುಕೊಳ್ಳುವ ಅಂತರ ಸೋಜಿಗವುಟ್ಟಿಸುತ್ತದೆ.
    ಸೆಕ್ಸಿಗಿರುವ ಅಸಾದಾರಣ ಶಕ್ತಿಯನ್ನು ಅದೆಷ್ಟು ಬಲವಾಗಿ ಅದುಮಿಟ್ಟರೂ ಅದರಿಂದ ಕೆಡುಕು(ಹಳೆಯ ಮಾತಿರಬಹುದು)ತಪ್ಪಿದ್ದಲ್ಲ..ಆದ್ಯಾತ್ಮದಲ್ಲೂ ಅದೇ ಕಾರಣಕ್ಕೆ ಲೈಂಗಿಕತೆಗೆ ವಿಶೇಷ ಸ್ಥಾನವಿದೆ.
    ಅದೇ ಕಾರಣಕ್ಕೆ ಈಗಿನ ಸಮಾಜದಲ್ಲಿ ಮೀರುವ ಪ್ರಕ್ರಿಯೆಗೆ ಹೆಚ್ಚು ಮಹತ್ವವಿದೆ.ಒಳ್ಳೆ ಲೇಖನ ಸುನೀಲ್..ಅಭಿನಂದನೆಗಳು.

  5. Anuradha.B.Rao

    ಲೈ೦ಗಿಕತೆ ನಿಜಕ್ಕೂ ಪ್ರಯಾಸವೇ!? ಉತ್ತರ ಕೊಡುವುದು ಕಷ್ಟ. ನಿನ್ನ ಬರಹದಲ್ಲೇ ಅದಕ್ಕೆ ಉತ್ತರ ಕೊಡುವ ಪ್ರಯಾಸ ಮಾಡಿದ್ದೀಯ. ಅಭಿನಂದಿಸಲೇ ಬೇಕು .

  6. ಸಿ ಪಿ ನಾಗರಾಜ

    ಶ್ರೀ ಸುನಿಲ್ ರಾವ್ ಅವರಿಗೆ –
    ” ಚಾಣಕ್ಯ ಆಗಲೇ ಹೇಳಿದ್ದ ಪುರುಷನಿಗಿ೦ತಲೂ ಎ೦ಟು ಪಟ್ಟು ಹೆಚ್ಚು ಮಹಿಳೆಗೆ ಲೈ೦ಗಿಕಾಭಿರುಚಿ ಹೆಚ್ಚು ಎ೦ದು.”- ಇದು ಚಾಣಕ್ಯನ ಮಾತಲ್ಲ . ಚಾಣಕ್ಯತನದಿಂದ ಗಂಡು ಸಮುದಾಯವು ಹೆಣ್ಣಿನ ಬಗ್ಗೆ ಆಡಿರುವ ಮಾತು . ಕಾಮ / ಕೆಟ್ಟತನ / ಒಳ್ಳೆಯತನ / ಕ್ರೌರ್ಯ / ಕರುಣೆ ಮುಂತಾದ ಗುಣಗಳಾಗಲೀ ಇಲ್ಲವೇ ಇವನ್ನು ಒಳಗೊಂಡ ಸಾಮಾಜಿಕ ವರ್ತನೆಗಳಾಗಲೀ ಹೆಣ್ಣು / ಗಂಡುಗಳಲ್ಲಿ ಬೇರೆ ಬೇರೆ ಪ್ರಮಾಣದಲ್ಲಿ ನೆಲೆಗೊಂಡಿಲ್ಲ . ಸಾಮಾಜಿಕ ಪರಿಸರ ಹಾಗೂ ಸನ್ನಿವೇಶಗಳು ಮಾನವ ಜೀವಿಗಳ ನಡೆನುಡಿಗಳನ್ನು ನಿಯಂತ್ರಿಸುತ್ತವೆ ಮತ್ತು ನಿರ್ದೇಶಿಸುತ್ತವೆ .
    ಸಿ ಪಿ ನಾಗರಾಜ ಬೆಂಗಳೂರು.

  7. Pramod

    ಲೈ೦ಗಿಕ ತಿಳುವಳಿಕೆ ಸದ್ಯದ ಅಗತ್ಯತೆ ಇದೆ. ಅದಕ್ಕಿ೦ತ ಮಿಗಲಾಗಿ ನೀಲಿ ಚಿತ್ರಗಳಿಗೂ ವಾಸ್ತವದ ಲೈ೦ಗಿಕತೆಗೂ ಅಜಗಜಾ೦ತರವಿದೆ ಎ೦ಬ ತುರ್ತು ಸ೦ದೇಶ ಎಲ್ಲರಿಗೂ ಬೇಕಾಗಿದೆ.
    http://www.thehindu.com/news/national/tamil-nadu/internet-porn-wrecking-conjugal-ties/article4620791.ece

  8. Anonymous

    ಲೈಂಗಿಕ ವಿಚಾರವಾಗಿ ನಮ್ಮ ಜನತೆಗೆ ತಿಳುವಳಿಕೆ ಕಡಿಮೆ ಇದೆ ಇದರಿಂದ ವಿಛ್ಛೇದನಗಳು ಹೆಚ್ಚಳವಾಗಿವೆ ಎನ್ನಬಹುದು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading