ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ರಾಜಾಸ್ಥಾನದ ಹಕ್ಕಿಗಳ ಆಸ್ಥಾನದಲ್ಲಿ ಭಾಗ-1…

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.

ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.

ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್‌ ಅಂಡ್‌ ಎರರ್‌ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.

ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.

17.1

ತಾಲ್‌ಛಾಪರ್

ಲಡಾಖ್ ನನಗೆ ಕಲಿಸಿದ ಜೀವನ ಪಾಠಗಳಿಂದ ಮೈಚಳಿ ಬಿಡಲು ಮೂರು ತಿಂಗಳಾದರೂ ಸಮಯ ಬೇಕಾಯಿತು. ದೈಹಿಕವಾಗಿ ಮಾನಸಿಕವಾಗಿ ನನಗೆ ನಾನೇ ಸಮತೋಲನ ಸಾಧಿಸಲು ಇಷ್ಟು ಕಾಲಾವಕಾಶ ಅತ್ಯವಶ್ಯವಿತ್ತು. ಮತ್ತೊಂದು ಅವಘಡಕ್ಕೆ ಎಡೆ ಮಾಡಿಕೊಟ್ಟು ಮತ್ತೊಮ್ಮೆ ಮಗಳನ್ನು ಅವಳ ಹೊಸಗೆಲಸದ ನಡುವೆ ಅಡಚಣೆ ಮಾಡಬಾರದೆನ್ನುವ ಎಚ್ಚರಿಕೆ ವಹಿಸಲೇಬೇಕಿತ್ತು. ಮೂರು ತಿಂಗಳ ಕಾಲ ತುಟಿಪಿಟಕ್ ಎನ್ನದೆ ಮನೆಯಲ್ಲೇ ಕುಳಿತೆ. ಕುಳಿತೆ ಎಂದರೆ ಕುಳಿತೇ ಇದ್ದೆ ಎಂದೇನಲ್ಲ. ಮಂಡ್ಯದ ಸುತ್ತಮುತ್ತ ತಿರುಗಾಡಿ ಹಕ್ಕಿ ಕ್ಲಿಕ್ ಮಾಡಿಕೊಂಡಿದ್ದೆ. ಮೂರು ತಿಂಗಳು ಮುಗಿಯುವ ವೇಳೆಗೆ ಮೈ ಸ್ವಸ್ಥವಾಯಿತು, ಮನ ಹಗುರವಾಯಿತು. ಮೆಲ್ಲಗೆ ದೂರದ ಹಕ್ಕಿಗಳ ಆಸೆಗಳು ಗರಿಗೆದರಿದವು. 

ಖುಷ್ಬೂ ರಾಜಾಸ್ಥಾನದ ತಾಲ್‌ಛಾಪರ್‌ಗೆ ಹೋಗೋಣ ಎಂದು ಆಹ್ವಾನಿಸಿದ ತಕ್ಷಣ ಸೈ ಎಂದು ರೆಡಿಯಾದೆ. ತನ್ನ ಈ ಅಮ್ಮನನ್ನು ಪೂರ್ತಾ ಕಟ್ಟಿಹಾಕಲು ಕಷ್ಟ ಎಂದು ಅರ್ಥಮಾಡಿಕೊಂಡ ಮಗಳು ದೆಹಲಿಗೆ ಹೋಗಿಬರುವ ಟಿಕೇಟ್ ಬುಕ್ ಮಾಡಿಕೊಟ್ಟಳು. ರಾಜಾಸ್ಥಾನಕ್ಕೆ ನನ್ನ ಮೊದಲ ಭೇಟಿ. ದೆಹಲಿಯಿಂದ ಖುಷ್ಬೂ ರಾಹುಲ್ ಜೊತೆ ರೈಲಿನಲ್ಲಿ ತಾಲ್‌ಛಾಪರ್‌ಗೆ ಹೋಗಬೇಕಿತ್ತು. ಒಂದು ದಿನ ತಡವಾಗಿ ಪುಣೆಯ ಕನ್ನಡಿಗ ಶಿವಯೋಗಿ ಕಂಠಿ ನಮ್ಮ ಜೊತೆಗೆ ಸೇರಿಕೊಳ್ಳುವವರಿದ್ದರು. ದೆಹಲಿಗೆ ಬಂದವಳನ್ನು ಖುಷ್ಬೂ ತಮ್ಮ ಮನೆಗೆ ಕರೆದುಕೊಂಡು ಹೋದರು. ಮರುದಿನ ಮುಂಜಾನೆಯೆ ಟ್ರೈನಿನಲ್ಲಿ ತಾಲ್‌ಛಾಪರ್‌  ಕಡೆಗೆ ನಮ್ಮ ಪಯಣ ಪ್ರಾರಂಭವಾಯಿತು. 

ಒಂದು ಕಾಲದಲ್ಲಿ ಬಿಕಾನೇರಿನ ಮಹಾರಾಜರ ಬೇಟೆ ತಾಣವಾಗಿದ್ದ ತಾಲ್‌ಛಾಪರ್‌ ಇಂದು ವನ್ಯಜೀವಿ ಅಭಯಾರಣ್ಯವಾಗಿದೆ. ಅರಣ್ಯ ಎಂದು ಕೂಡಲೇ ನಮ್ಮೂರ ಕಡೆಯ ಅರಣ್ಯಗಳಂತಲ್ಲ, ಶುಷ್ಕ ಹವಾಗುಣದ ಬಹುತೇಕ ಸಮತಟ್ಟಾದ ಈ ಅಭಯಾರಣ್ಯದಲ್ಲಿ ಅಲ್ಲಲ್ಲಿ ಮರಗಳಿದ್ದರೂ ಮುಳ್ಳುಪೊದೆಯೆ ಹೆಚ್ಚು. ಕೃಷ್ಣಮೃಗಗಳ ಸಂರಕ್ಷಿತ ಛಾಪರ್ ಅಭಯಾರಣ್ಯದಲ್ಲಿರುವ ವಿಶೇಷ ರೀತಿಯ ಹುಲ್ಲನ್ನು ಬೀಜದ ಆಕಾರ ಮುತ್ತುಗಳಂತಿದ್ದು ಮೋಥಿಯಾ ಎನ್ನುವರು. ಇದು ಕೃಷ್ಣಮೃಗ, ಪಕ್ಷಿಗಳಿಗೆ ಆಹಾರವಾಗಿದೆ. ಸೆಪ್ಟೆಂಬರ್‌ನಲ್ಲಿ ವಲಸೆ ಹಕ್ಕಿಗಳು ತಾಲ್‌ಛಾಪರ್‌ ಅಭಯಾರಣ್ಯದ ಮೂಲಕ ಸಾಗುವಾಗ ಸಾಕಷ್ಟು ಹಕ್ಕಿಗಳು ಛಾಪರಿನಲ್ಲಿಯೇ ಉಳಿದುಕೊಳ್ಳುತ್ತವೆ. ಇದೇ ಕಾರಣದಿಂದ ಸಾಕಷ್ಟು ಜನ ಪಕ್ಷಿ ವೀಕ್ಷಕರು, ಛಾಯಾಗ್ರಾಹಕರು ಚಳಿಗಾಲದಲ್ಲಿ ತಾಲ್‌ಛಾಪರ್‌ಗೆ ಬರುವರು. 

ಛಾಪರಿನ ಗೋಶಾಲಾದಲ್ಲಿ ಹಾಗೂ ಉಪ್ಪು ತಯಾರಿಕಾ ತಾಣದಲ್ಲಿ ಹಕ್ಕಿಗಳಿರುತ್ತವೆ. ತಾಲ್ ಪ್ರದೇಶದ ನೀರು ತುಂಬಾ ಉಪ್ಪಾಗಿದೆ. ಈ ನೀರನ್ನು ಸಂಗ್ರಹಿಸಿ ಉಪ್ಪಿನ ಪ್ಯಾನ್ಗಳಲ್ಲಿ ಹರಡಿ ಒಣಗಿಸಿ ಉಪ್ಪು ತಯಾರಿಸುವರು. ವರ್ಷಕ್ಕೆ ಕೇವಲ 300 ಮಿಮೀ ಪ್ರಮಾಣದ ಮಳೆ ಬರುವುದರಿಂದ ಕೃಷಿ ಸುಲಭವಲ್ಲದ ಇಲ್ಲಿ ಕನಿಷ್ಠ ಮೇಲ್ವಿಚಾರಣೆಯಲ್ಲಿ ಆಗುವ ಉಪ್ಪು ಉತ್ಪಾದನೆ ಸ್ಥಳೀಯರಿಗೆ ಆದಾಯದ ಮೂಲವಾಗಿದೆ. ಇಲ್ಲಿ ತಯಾರಿಸಿದ ಉಪ್ಪು ಉತ್ತಮ ಗುಣಮಟ್ಟದಲ್ಲಿದೆ ಎನ್ನುವರು. ಉಪ್ಪಿನ ಹೊಲಗಳಲ್ಲಿ ನೀರು ಇರುವುದರಿಂದ ಕೀಟಗಳಿರುತ್ತವೆ. ಇಲ್ಲಿರುವ ಕೀಟ ಮತ್ತು ಹೊಲಗಳ ಸುತ್ತ ಬೆಳೆದ ಕಳೆಗಳನ್ನು ತಿನ್ನಲು ವಲಸೆ ಮತ್ತು ಸ್ಥಳೀಯ ಪಕ್ಷಿಗಳು ಬರುತ್ತವೆ. 

ದೆಹಲಿಯಿಂದ ಸತತ ಆರೇಳು ಗಂಟೆ ಪ್ರಯಾಣಿಸಿ ಸುಜಾನ್ಘರ್ ತಲುಪಿ ಅಲ್ಲಿಂದ ಛಾಪರ್ ಸೇರಿ ಬರ್ಡ್ಸ್ ಗೆಸ್ಟ್ಹೌಸಿನಲ್ಲಿ ಮಧ್ಯಾಹ್ನ ಬೀಡುಬಿಟ್ಟೆವು. ಊಟದ ಬಳಿಕ ಬಿರುಬಿಸಿಲಿದ್ದರೂ ಕ್ಯಾಮೆರಾ ಹಿಡಿದು ಆವರಣಕ್ಕೆ ಇಳಿದು Indian large grey babbler, ಡ್ರೊಂಗೊ, ಸನ್‌ಬರ್ಡ್ ಕಂಡೆ. ಗೆಸ್ಟ್ಹೌಸಿನ ಹಿಂದಿದ್ದ ನೀರಿನ ನೆಲೆಗೆ ಹಕ್ಕಿಗಳು ಬರುವ ನಿರೀಕ್ಷೆಯಿಂದ ಮರುದಿನ ಹಕ್ಕಿವಿಹಾರಕ್ಕೆ ತೆರಳುವ ಮೊದಲು ಭೇಟಿ ಕೊಡಲು ತೀರ್ಮಾನಿಸಿದೆ. 

ಛಾಪರಿಗೆ ಬಂದ ದಿನ ಮಧ್ಯಾಹ್ನದ ಬಿಸಿಲು ಸ್ವಲ್ಪ ಇಳಿದ ಬಳಿಕ ಗೋಶಾಲಾಕ್ಕೆ ಹೊರಟೆವು. ಸುತ್ತಮುತ್ತಣ ಊರಿನ ಗೋವುಗಳ ಮೇವಿಗಾಗಿ ದಾನಿಯೊಬ್ಬರು ಬಿಟ್ಟ ಸ್ಥಳವಾದರೂ ಸತ್ತ ಪ್ರಾಣಿಗಳನ್ನು ತಂದು ಹಾಕುವ ನೆಲೆಯೂ ಆಗಿದೆ. ಆದ್ದರಿಂದ ಮೂಗು ಮುಚ್ಚುವಷ್ಟು ವಾಸನೆಯ ನಡುವೆ ಅಲ್ಲಿಗೆ ಬಂದ ಹದ್ದುಗಳ ಫೋಟೋಗ್ರಫಿ ಮಾಡುವ ಕಾರ್ಯ ಸಾಗಿತು. ಕೊಳದ ಕಟ್ಟೆಯ ಮೇಲೆ ಕುಳಿತ ಟಾನಿ ಈಗಲ್ ಲಿಜಾರ್ಡ್ ಭಕ್ಷಿಸುವಲ್ಲಿ ತನ್ಮಯತೆಯಿಂದ ಮಗ್ನವಾಗಿ ನಮ್ಮ ಛಾಯಾಗ್ರಹಣಕ್ಕೆ ಸಹಕರಿಸಿತು. ಕಿತ್ತು ತಿನ್ನುವ ಆ ನೋಟ ಮನಸ್ಸಿಗೆ ಕಿರಿಕಿರಿ ಎನಿಸಿದರೂ ಅದು ಅದರ ಆಹಾರವಷ್ಟೆ, ಅದಕ್ಯಾಕೆ ಈ ಅವತಾರ ಆಡುತ್ತೀಯೆ ಎಂದು ಮನಕ್ಕೆ ಬೈದು ಸುಮ್ಮನಾಗಿರಿಸಿದೆ. ಗೋಶಾಲಾದ ನಾಮಫಲಕದ ಮೇಲಿದ್ದ ಇನ್ನೊಂದು ಟಾನಿ ಈಗಲ್ ನಾನೂ ಪೋಸ್ ಕೊಡ್ತೀನಿ ಹಿಡಿ ನೋಡೋಣ ಎಂದಿತು. ಆ ದಿನದ ನಮ್ಮ ಮುಖ್ಯ ಗುರಿ Indian spotted creeper. ಮೈಯಿಡೀ ಚುಕ್ಕೆ ತುಂಬಿದ ಅದು ಮರದ ಮೇಲೆ ಪುಟುಪುಟು ಓಡಾಡುತ್ತಿತ್ತು. ಫೋಕಸ್ ಮಾಡುವುದು ಕಷ್ಟವಾದರೂ ಸೆರೆಹಿಡಿಯುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾದೆ. ರಾಹುಲ್ ಕ್ಯಾಮೆರಾ ಹೊತ್ತು ಕಿ.ಮೀಗಟ್ಟಲೆ ನಡೆದು `ಹಾರಿಹೋಯಿತು. ಸರಿಯಾಗಿ ಷಾಟ್ ಆಗಲಿಲ್ಲ’ ಎಂದು ಗೊಣಗುತ್ತಾ ಮರಳಿದ. ಆತನಿಗೆ ಚಿತ್ರ ಅಂದರೆ ಮತ್ಯಾರು ತೆಗೆದಿರಬಾರದು ಆ ಮಟ್ಟದಲ್ಲಿದ್ದರೆ ಮಾತ್ರ ಸರಿಯಾದ ಚಿತ್ರ ಎನ್ನುವ ಮಿ.ಫರ್ಫೆಕ್ಟ್. ಈ ಪರ್ಫೆಕ್ಟ್ ಗಳ ಆಟ ಆವುಟಗಳು ನನಗೂ ಗೊತ್ತಿವೆ. ಮೈಸೂರಿನಲ್ಲಿದ್ದಾಗ ಕುವೆಂಪು, ಗಾಂಧಿ ಚಿತ್ರ ಪ್ರದರ್ಶನಕ್ಕೆ ಸಂಯೋಜನೆ ಮಾಡುವಾಗ ನನ್ನ ಕಾಟವನ್ನು ಬಹಳವೆ ಸಹಿಸಿಕೊಂಡ ಚಿಕ್ಕ ಮಗಳು ಆಗಾಗ ಸಿಡಿಸುತ್ತಿದ್ದ ನುಡಿ “ನಿಮ್ಮ ಫರ್ಫೆಕ್ಟ್ ಆಟ ಬಿಟ್ಟುಬಿಡಿ, ನಮಗೆ ಹಾಗೆಲ್ಲ ಆಗಲ್ಲ. ನಮಗಾದಂತೆ ಜೋಡಿಸಿಕೊಡುತ್ತೇವೆ, ಬೇಕಿದ್ದರೆ ಮಾಡಿಸಿಕೊಳ್ಳೀ’ ಎಂದು. ಈಗಲೂ ಈ ಪ್ರೀತಿಯ ಬೈಗುಳವನ್ನು ಆಗಾಗ ಕೊಡುಗೆ ನೀಡುತ್ತಿರುತ್ತಾಳೆ. ನನ್ನ ಲೆಕ್ಕಾಚಾರ ನಾವು ನೂರು % ಯೋಜನೆ ಮಾಡಿದರೆ ಕೊನೆಯ ಪಕ್ಷ 70-80% ತಲುಪುತ್ತೇವೆ ಎಂದು. 

ಗೋಶಾಲಾದಲ್ಲಿದ್ದ ದನದ ಕಳೇಬರಕ್ಕೆ Egyptian Vulture ಕೊಕ್ಕಿಸುತ್ತಿತ್ತು. long-legged buzzard  ಸ್ಪೈನಿಬಾಲದ ಲಿಜಾರ್ಡ್ ಕಿತ್ತು ತಿನ್ನುತ್ತಿದ್ದ ಹಲವು ಷಾಟ್ ಒದಗಿಸಿತು. ಸ್ಟೆಪ್ಪೆ ಈಗಲ್ ಕೂಡಾ ನಮಗಾಗಿ ಕಾಯುತ್ತಾ ಕುಳಿತಂತಿತ್ತು. ಗೋಶಾಲಾದ ಮೈದಾನದಲ್ಲಿ ಅಸಂಖ್ಯ ಸ್ಪೈನಿಬಾಲದ ಲಿಜಾರ್ಡಿದ್ದವು. ಬಿಲದಿಂದ ಹೊರ ಬರುತ್ತಿದ್ದಷ್ಟೆ ಸ್ಪೀಡಿನಲ್ಲಿ ಮಾಯವಾಗುತ್ತಿದ್ದವು. ಅವಕ್ಕೆ ಹೊಂಚು ಹಾಕಿದವುಗಳಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದ್ದವು. ಲಿಜಾರ್ಡ್ ಕಬಳಿಸಿದ ಸ್ಯಾಂಡ್ ಬೋಯಾ ಬಿಲದಲ್ಲಿ ನುಸುಳುತ್ತಿತ್ತು. ಖುಷ್ಬೂ ತಕ್ಷಣ ಟ್ರೈಪಾಡ್ ಹಾಕಿದ ಮೊಬೈಲಿಟ್ಟು ವಿಡಿಯೋ ಮಾಡಿದರೆ, ನಾನು ಕ್ಯಾಮೆರಾದಲ್ಲಿ ಚಿತ್ರ ತೆಗೆದು, ಸಣ್ಣ ವಿಡಿಯೋ ಮಾಡಿಕೊಂಡೆ. Chestnut bellied Sandgrouse ಪರಿವಾರವೂ ಚಿತ್ರವಾದವು,

ಮರುದಿನ ಬೆಳಗಿನ ಸೆಷನ್ ಬ್ಲ್ಯಾಕ್‌ಬಕ್ ಸ್ಯಾಂಕ್ಚುರಿಗೆಂದು ನಿರ್ಧರಿಸಿದ್ದರೂ ಹತ್ತಿರದಲ್ಲೇ Indian Eagle Owl ಇದೆಯೆಂಬ ಸುದ್ದಿ ಕಿವಿಗೆ ಬಿದ್ದೊಡನೆ ಖುಷ್ಬೂ `ನಡೆನಡೆ ಗೂಬೆ ಕಡೆ’ ಎಂದತ್ತ ಹೊರಡಿಸಿದರು. ಹಳೆಯ ಬಾವಿಕಟ್ಟೆಯ ಮೇಲೆ ಕುಳಿತಿದ್ದ ಗೂಬೆ ನಮ್ಮನ್ನು ಕಂಡು ಹೌಹಾರಿ ಹಾರಿ ಪರಾರಿಯಾಗುವ ಮುನ್ನ ನಾನು 100-400 ಹಾಕಿದ್ದ ಕ್ಯಾಮೆರಾ ಹಿಡಿದಿದ್ದರಿಂದ ನಾಲ್ಕಾರು ಕ್ಲಿಕ್ಕಿಗೆ ಸಿಕ್ಕಿತು. ಗೂಬೆಯ ವರ ಸಿಕ್ಕ ಬಳಿಕ ಸವಾರಿ ಸ್ಯಾಂಕ್ಚುರಿಗೆ ಸಾಗಿತು. ನಂತರದ ಮೂರು ದಿನ ಬೆಳಿಗ್ಗೆ ಅಲ್ಲಿಗೇ ಹೋಗುತ್ತಿದ್ದೆವು. ಒಂದು ದಿನ ಸಂಜೆ ಸೂರ್ಯನ ಬೆಳಕಿನಲ್ಲಿ ಫೋಟೋಗ್ರಫಿ ಮಾಡಲೆಂದು ಸಂಜೆಯೂ ಹೋಗಿದ್ದೆವು. 

ಸ್ಯಾಂಕ್ಚುರಿ ಹಾಗೂ ಗೋಶಾಲಾದಲ್ಲಿ ಜೀಪಿನಲ್ಲೇ ಸವಾರಿ. ಎರಡು ಜೀಪುಗಳಲ್ಲಿ ಸೆಷನ್ ಸಾಗುತ್ತಿತ್ತು. ಬೆಳಿಗ್ಗೆ ಸಂಜೆ ಹೊನ್ನಬೆಳಗಿನಲ್ಲಿ ಮಿರುಗುವ ಹುಲ್ಲಿನ ನಡುವೆ ಚಿಮ್ಮುತ ಓಡುವ ಜಿಂಕೆಗಳನ್ನು ನೋಡುವುದೆ ಕಂಗಳಿಗೊಂದು ಹಬ್ಬ. ಇನ್ನು ಕ್ಯಾಮೆರಾ ಸುಮ್ಮನಿದ್ದೀತೆ!? ಈ ಹುಲ್ಲುಗಾವಲಿನಲ್ಲಿ ದೂರದೂರಕ್ಕೆ ಒಂದೊಂದು ಮರವಿತ್ತು. ಕೆಲವು ಕಡೆ ನೀರಿನ ನೆಲೆಗಳ ವ್ಯವಸ್ಥೆ ಇತ್ತು. ಬಹುತೇಕ ಕೆಳಗೂ ಇಳಿಯದ, ಟ್ರೈಪಾಡ್ ಬಳಸಲು ಸಾಧ್ಯವಾಗದೆ ಕ್ಯಾಮೆರಾ ಬೀನ್ಬ್ಯಾಗ್ ಬಳಸಿ ವಿಂಡೋ ಫೋಟೋಗ್ರಫಿ ಮಾಡುತ್ತಿದ್ದೆವು. ಅಲ್ಲಲ್ಲಿ ಇಳಿದು ಕಾಲ್ನಡಿಗೆಯಲ್ಲಿ ಹೋಗಬಹುದಿತ್ತಾದರೂ ಮರೆಗಳಿಲ್ಲದೆ ಕ್ಯಾಮೆರಾ ಹೊತ್ತುಹೋಗಲಾಗದೆ ಬಹುತೇಕ ವಿಂಡೋಗ್ರಫಿ ಮಾಡಿದ್ದೇ ಹೆಚ್ಚು.

ಈ ಸ್ಯಾಂಕ್ಚುರಿಯಲ್ಲಿದ್ದ ಅಲ್ಲಲ್ಲಿ ಹಾಕಿದ್ದ ಪರ್ಚ್ ಮೇಲೆ ನಾನಾ ಭಂಗಿಗಳಲ್ಲಿ ಕೂರುವ, ಕೂರಲು ಬರುವ, ಕಾಯುವ, ಹಾರುವ ಪಕ್ಷಿಗಳಿದ್ದವು. ಸಫಾರಿ ಗಾಡಿಗಳ ಸವಾರಿ ಸದ್ದಿಗೆ ಹಲವು ಹಾರಿ ಅಂಬರಕ್ಕೇರಿದರೆ, ಹಲವು ಬಂದಾರೆ ಬನ್ನಿ ನನಗೇನು ಎನ್ನಿ ಎನ್ನುವಂತೆ ಮಿಸುಕದೆ ಕುಳಿತಿರುತ್ತಿದ್ದವು. ಪರ್ಚ್ ಎತ್ತರ ಇದ್ದಾಗ ಹಕ್ಕಿಯ ಹಿನ್ನೆಲೆ ಹಸಿರು ಇರುತ್ತಿರಲಿಲ್ಲ. ಹಸಿರು ಹಿನ್ನೆಲೆ ಬೇಕೆಂದು ರಾಹುಲ್, ಶಿವಯೋಗಿ ಒಮ್ಮೆ ಜೀಪಿನ ಟಾಪನ್ನೇರಿಯೂ ಪಟಗ್ರಫಿಸಿದರು. ಜೀಪಿಗೆ ಹತ್ತುವುದೇ ಕಷ್ಟವಾದ ನನಗೆ ಟಾಪೇರಿ ಫೋಟೋಗ್ರಫಿಸಲು ಸಾಧ್ಯವೇ. ಚಿತ್ರ ತೆಗೆಯುವಾಗ ಹಿನ್ನೆಲೆಯೂ ಚೆನ್ನಾಗಿ ಇರಬೇಕಾದದ್ದು ಅತ್ಯಗತ್ಯ. 

ಸ್ಯಾಂಕ್ಚುಯರಿಯಲ್ಲಿ ಎತ್ತ ತಿರುಗಿದರೂ ಕಣ್ಣಿಗೆ ಕ್ಯಾಮೆರಾಕ್ಕೆ ಸಿಕ್ಕುತ್ತಿದ್ದುದು ಬಹು ದೂರದಿಂದ ವಲಸೆ ಬರುವ ಚಂದದ ಯೂರೋಪಿಯನ್ ರೋಲರ್. ನಮ್ಮೂರಿನಲ್ಲಿ ಇಂಡಿಯನ್ ರೋಲರ್ ಯಾನೆ ನಮ್ಮ ರಾಜ್ಯಪಕ್ಷಿ ನೀಲಕಂಠನನ್ನು ನೋಡಿದ್ದ ನನಗೆ ಈ ರೋಲರ್ ಲೈಫರ್ ಆಗಿತ್ತು. ಚಿತ್ರ ತೆಗೆಯಲು ತೀರಾ ಸಮೀಪದಲ್ಲೇ ಸಿಕ್ಕಿದ್ದು ಖುಷಿಯಾಗಿತ್ತು. ಹಕ್ಕಿ ಚಿತ್ರ ತೆಗೆಯುವಾಗ ತಳಮಳಗೊಳ್ಳುವ ಸಂದರ್ಭಗಳೂ ಎದುರಾಗುತ್ತವೆ, ಹಕ್ಕಿಲೋಕದ ವ್ಯಥೆಯ ಕಥೆಗಳೂ ಕಾಣಸಿಗುತ್ತವೆ. ನಾ ಕಂಡ ಒಂದು ಯುರೋಪಿಯನ್ ರೋಲರ್‌ಗೆ ಕೊಕ್ಕಿನ ಮೇಲ್ಭಾಗ ಮುರಿದಿತ್ತು. ಹಕ್ಕಿಗೆ ಕೊಕ್ಕೇ ತುಂಬಾ ಮುಖ್ಯ. ಮುರಿದ ಕೊಕ್ಕಿನಿಂದ ಹೊಟ್ಟೆಪಾಡೇನು. ನೀಲಿಗೆನ್ನೆಯ ಬೀ ಈಟರ್ (Blue cheeked)  ಸಿಕ್ಕಿ ಮತ್ತೊಂದು ಲೈಫರ್ ಆಯಿತು. 

ಸ್ಯಾಂಕ್ಚ್ಯುರಿಯಿಂದ ಮರಳಿ ಬರುವಾಗ ಊರೊಳಗೆ ಹೋಗಿ ಕಚೋರಿ, ಜಿಲೇಬಿ ತಿಂದು ಬರುತ್ತಿದ್ದೆವು. ಹಲವು ಹತ್ತು ಬಗೆಯ ಖಾದ್ಯಗಳಿಗೆ ಹೆಸರುವಾಸಿಯಾದ ರಾಜಾಸ್ಥಾನಕ್ಕೆ ಹೋಗಿ ತಿನ್ನದೆ ಇರುವುದು ಸಾಧ್ಯವೆ. ಲಡಾಖ್ ಘಟನೆಯ ನಂತರ ಎಲ್ಲಿಗೆ ಹೋದರೂ ತಿನ್ನುವ ವಿಷಯದಲ್ಲಿ ಕುಸುಬಿಷ್ಟೆ ಆಡುವುದು ಬಿಡಬೇಕೆಂದಿದ್ದುದನ್ನು ಇಲ್ಲಿಂದ ಜಾರಿಗೆ ತಂದೆ. ಹಾಗಾಗಿ ಅನ್ನವನ್ನೂ ತಿನ್ನುತ್ತಿದ್ದೆ, ಜೊತೆಗೆ ಸ್ವೀಟನ್ನೂ.

ಮಧ್ಯಾಹ್ನದಲ್ಲಿ ಕೆಲವೊಮ್ಮೆ ಉಪ್ಪುತಾಣಕ್ಕೆ ಕೆಲವು ಸಲ ಗೋಶಾಲಾದತ್ತ ಹೋಗುತ್ತಿದ್ದೆವು. ಉಪ್ಪುಗೊಳದ ಬಳಿ ರಾಹುಲ್ ಗ್ರೌಂಡ್ಪಾಡ್ ಹಾಕಿ ಗ್ರೌಂಡ್‌ಶಾಟ್ ತೆಗೆಯಲು ಮಕಾಡೆ ಮಲಗಿ ಮೈಕೈ ಬಟ್ಟೆಬರೆ ಕೆಸರು ಮಾಡಿಕೊಂಡೇ Pied Avocet, Red Necked Phalanropeಗಳಿಗೆ ಅಂಟಿಕೊಂಡಿದ್ದ. Red Necked Phalanrope ಬ್ರೀಡಿಂಗ್ ಪ್ಲುಮೇಜ್ ಇಲ್ಲದ್ದರಿಂದ ಆಕರ್ಷಕವಾಗಿರಲಿಲ್ಲ. ನಾನೂ ಚಿತ್ರ ತೆಗೆಯುತ್ತಿದ್ದೆ, ನಿಜ ಕೆಸರಿನಲ್ಲಿ ಅಡ್ಡಾಗಲಿಲ್ಲ. ಆದರೆ ರಾಹುಲ್ ತೆಗೆಯುತ್ತಿದ್ದ ಭಂಗಿಯ ಪಟ ತೆಗೆದೆ. 

ಬೆಳಿಗ್ಗೆಯ ಸೆಷನ್ನಿಗೆ ಮೊದಲು ಮತ್ತು ಮಧ್ಯಾಹ್ನ ಊಟದ ಬಳಿಕ ಉಳಿದವರು ವಿರಮಿಸುತ್ತಿದ್ದರೆ ನಾನು  ವಸತಿಯ ಹಿಂದಿನ ನೀರ್ನೆಲೆಗೆ ಹೋಗಿ ಡೊಮಿಸಿಲ್ ಕ್ರೇನ್, ನದಿರೀವಗಳನ್ನು ಸೆರೆಹಿಡಿದಿದ್ದೆ. ಡೊಮಿಸಿಲ್ ಕ್ರೇನ್‌ನ ಕೆಲವು ಮೋಹಕ ಷಾಟ್‌ಗಳು ಇಂದಿಗೂ ನಾನು ತೆಗೆದ ಚಂದದ ಷಾಟ್‌ಗಳಲ್ಲಿ ಸೇರಿವೆ. ಅದರಲ್ಲೂ ನನ್ ಫೇಸ್‌ಬುಕ್ ಗೆಳತಿಯೊಬ್ಬರು ನಾನು ತೆಗೆದ ಡೊಮಿಸಿಲ್ ಕ್ರೇನಿನ ವರ್ಣಚಿತ್ರ ಬಿಡಿಸಿರುವುದು ನನಗೆ ಸಂಭ್ರಮದ ವಿಷಯ. ನಾನು ಹೀಗೆ ಅಲ್ಲಿಗೆ ಹೋಗುತ್ತಿರುವುದನ್ನು ಕಂಡು ಕೊನೆಗೆ ರಾಹುಲ್ ಖುಷ್ಬೂ ಅಲ್ಲಿಗೆ ಬಂದರು, ಚಮಚ ಕೊಕ್ಕಿನ ಹಕ್ಕಿಯ ಪಟ ತೆಗೆದರು.

ಒಂದಾನೊಂದು ಕಾಲದಲ್ಲಿ ಮುಖೇಶ್ ಹಾಡುಗಳೆಂದರೆ ನನಗೆ ಹುಚ್ಚು. ಕೇಳಿದ್ದೇ ಕೇಳಿದ್ದು. ಹಿಂದಿ ಸುಮಾರಾಗಿ ಅರ್ಥ ಆಗುತ್ತಿದ್ದರೂ ಮುಖೇಶ್ ಧ್ವನಿಗೆ ಫಿದಾ ಆಗಿದ್ದ ಕಾಲವದು. ಮುಖೇಶ್ರ ಈ  ಹಾಡು ತುಂಬಾ ಇಷ್ಟ. चल अकेला, चल अकेला, चल अकेला तेरा मेला पीछे छूटा, राही चल अकेला. ಇದರಷ್ಟೆ ಇಷ್ಟವಾದದ್ದು ರವೀಂದ್ರನಾಥ ಟ್ಯಾಗೂರ್‌ರ Jodi tor dak shune keu na ashe tobe ekla cholore ಕವಿತೆ. ಕಿಶೋರ್ ಕುಮಾರ್, ಶ್ರೇಯಾ ಘೋಷಾಲ್ ಮೈಥಿಲಿ ಟಾಕೂರ್ ಮುಂತಾದವರೂ ಈ ಹಾಡನ್ನು ಹಾಡಿದ್ದಾರೆ. ಬಂಗಾಳಿ ಅರ್ಥವಾಗದಿದ್ದರೂ ಶ್ರೇಯಾ ಹಾಡಿದ್ದನ್ನು ಕೇಳಿದ್ದೇನೆ, ಕೇಳುತ್ತಲಿದ್ದೇನೆ. ಇದನ್ನು ಟ್ಯಾಗೂರ್ ಇಂಗ್ಲೀಷಿಗೆ ಅನುವಾದಿಸಿದ್ದಾರೆ. ಚಿತ್ರ ತೆಗೆಯಲು ಶುರು ಮಾಡಿದ ಮೇಲೆ ಈ ಹಾಡಿಗೆ ಹೊಂದಿಕೊಳ್ಳುವ ಚಿತ್ರ ತೆಗೆಯುವ ಅವಕಾಶಕ್ಕಾಗಿ ಕಾಯುತ್ತಿದ್ದೆ. ತಾಲ್‌ಛಾಪರ್‌ನಲ್ಲಿ ಹೊಂಬಣ್ಣದ ಹುಲ್ಲಿನ ನಡುವೆಯಿಂದ ಹಾದು ಇದ್ದ ಪಥವನ್ನು ಬಿಟ್ಟು ತನ್ನದೇ ಪಥವಿಡಿದು ಹೊರಟ ಕೃಷ್ಣಮೃಗ ಸೆರೆಸಿಕ್ಕಿತು ಈ ಹಾಡಿನ Sequenceಗಾಗಿ… ಲೀಲಾಅಪ್ಪಾಜಿಗೆ ಇನ್ನೇನು ತಾನೇ ಬೇಕು. ಚಿತ್ರ… ನಾ ಮೆಚ್ಚಿದ ಎರಡು ಹಾಡು… ಅವುಗಳ ಅರ್ಥಸಮೇತ.

ತಾಲ್‌ಛಾಪರ್‌ನ ಖಗಮಿಗ ಕಂಡಾಗ ಅನೇಕ ಚಿತ್ರಕಥೆ ನುಸುಳಿ ಬಂದವು. `ನೀನು ಹೇಗೂ ಹೋಗ್ತಾ ಇದೀಯಾ, ತಾಳು ನಿನ್ನ ಸವಾರಿ ಮಾಡಿಕೊಂಡೆ ನಾನೂ ಬರುವೆ’ ಎನ್ನುವಂತೆ ಜಿಂಕೆಯ ಬೆನ್ನೇರುವ ಸಾಹಸದಲ್ಲಿ ಕಾಜಾಣ ಕೊನೆಗೂ ಯಶಸ್ವಿಯಾಗಿ ಬೆನ್ನೇರಿತು. ತಿರುಗಿ ನೋಡಿದ ಜಿಂಕೆ `ರೆಕ್ಕೆಯಿರುವ ಹಕ್ಕಿ ಹಾರಿಹೋಗುವ ಬದಲು ನನಗೆ ಭಾರವಾಗಿ ಬರಬಹುದೆ, ನಾ ಬಿಡುವೆನೆ’ ಎನ್ನುವಂತೆ ಕಾಜಾಣವನ್ನು ಓಡಿಸಿ ಲುಕ್ ಕೊಟ್ಟಿತು. ಹಾರುತ್ತಿದ್ದ ಕಾಜಾಣದ ನೆರಳು ಜಿಂಕೆಯ ಮೇಲಿದ್ದುದರ ಕಡೆಗೆ ನನ್ನ ಗಮನ ಇತ್ತು. ಛಾಯಾಚಿತ್ರವೆ ಛಾಯೆ, ಅದರಲ್ಲೂ ಈ ಛಾಯೆ. ಪುತಿನ ನೆನಪಾದರು. ಮೇಲೊಂದು ಗರುಡ ಹಾರುತಿಹುದು  ಕೆಳಗದರ ನೆರಳು ಓಡುತಿಹುದು.

ಗೋಶಾಲಾದಲ್ಲಿ ಮಠಪಕ್ಷಿ ಅರ್ಥಾತ್  rufous treepie  Nilgaiಯೊಂದರ ಜೊತೆ ಇದ್ದದ್ದು ಕಥೆಯನ್ನೇ ಹೊಳೆಯಿಸಿತು. `ನಾನು ಬಾಲದ ಸವಾರಿ ಮಾಡುವೆ’ ಎನ್ನುವಂತೆ ಬಾಲವೇರಿದ ಮಠ ಕೊರಳ ತಬ್ಬುವಂತೆ ಮೆಲ್ಲನೆ ಮೇಲೇರಿ ಬಂದು ಕಿವಿಯೊಳಗೆ ಇಣುಕಿ, ಕೇಳಿಸುತ್ತಿದೆಯೇ ಎಂದು ಕೇಳಿ ನಂತರ ಕಣ್ಣಿನೊಳಗೆ ಕಣ್ಣನಿಟ್ಟು ನೋಡುತ್ತಿತ್ತು. ಮತ್ತೊಂದು ಮಠ ನೀಲಗಿಯನ್ನು ನೀ ಕುಳಿತುಕೋ ನಿನ್ನ ಕಣ್ಣಿನ ಪರೀಕ್ಷೆ ಮಾಡುತ್ತೇನೆಂಬಂತೆ ನೋಡುತ್ತಿದ್ದ ದೃಶ್ಯವೂ ನಾನೂ ನನ್ನ ಮೂರನೆ ಕಣ್ಣಿನಲ್ಲಿ ಕಣ್ಣನಿಟ್ಟು ಕ್ಲಿಕ್ಕಿಸಲು ಕೈಬೀಸಿ ಕರೆಯಿತು. ಗೋಶಾಲಾದಲ್ಲಿ ಒಂದು ಸಂಜೆ ನರಿ ಮರಿಗಳೆರಡು ಪರಸ್ಪರ ಮುದ್ದಿಸಿಕೊಳ್ಳುತ್ತಾ ನಿಂತಿದ್ದವು. ಕ್ಯಾಮೆರಾ ಸಿದ್ಧವಾಗುತ್ತಿದ್ದಂತೆ ದೂರಕ್ಕೆ ಹೋದರೂ ನಾವೂ ಮೆಲ್ಲನೆ ಗಾಡಿ ನಡೆಸುತ್ತಾ ಬೆಳಕು ಕಡಿಮೆ ಇದ್ದರೂ ಐ.ಎಸ್.ಓ ಹೆಚ್ಚಿಸಿ ಚಿತ್ರ ತೆಗೆದೆವು. 

ಮೂರು ದಿನ ಬರ್ಡ್ ಗೆಸ್ಟ್ಹೌಸಿನಲ್ಲಿ ಉಳಿದಿದ್ದ ಅನಿವಾರ್ಯವಾಗಿ ಒಂದು ದಿನ ಸ್ಯಾಂಕ್ಚ್ಯುಯರಿ ಆವರಣದಲ್ಲಿದ್ದ ಅರಣ್ಯ ಇಲಾಖೆಯ ಅತಿಥಿಗೃಹದಲ್ಲಿ ಉಳಿದೆವು. ಅಲ್ಲಿ ಅತ್ತಿತ್ತ ಅಲೆಯುತ್ತಿದ್ದ ನವಿಲನ್ನು ಕ್ಯಾಮೆರಾ ಹುಡುಕುತ್ತಿದ್ದಂತೆ, ಆವರಣದ ಬಳಿ ಪುಟ್ಟ ಹಕ್ಕಿಮರಿಗಳು ಕಂಡವು. ನೋಡಿದರೆ ನವಿಲ ಮರಿಗಳು. ನವಿಲು ಎಂದು ಗುರುತಿಸಲು ಸಾಧ್ಯವೇ ಆಗದಿದ್ದರೂ ಅದರ ಪಟಗಳನ್ನೂ ತೆಗೆದೆ. ಫೋಟೋಗ್ರಫಿ ಕೆಲಸ ಮುಗಿದಿದ್ದರಿಂದ ಬೀನ್ ಬ್ಯಾಗಿಗೆ ತುಂಬಿಸಿಕೊಟ್ಟಿದ್ದ ಜೋಳವನ್ನು ಖಾಲಿ ಮಾಡಿ ಜೋಳಿಗೆಗೆ ಬ್ಯಾಗ್ ಹಾಕಿಕೊಂಡೆ. ನಾಲ್ಕು ದಿನಗಳಲ್ಲಿ ೨೫ ಹೊಸ ಹಕ್ಕಿಗಳು ಸಿಕ್ಕು ಕ್ಯಾಮೆರಾದ ಮೆಮೊರಿ ಜೋಳಿಗೆ ಕೂಡಾ ಭರ್ತಿಯಾಗಿ ಕುಣಿಯಿತು. Tawny Eagle, Egyptian Vulture, long-legged buzzard,White-eyed buzzard, Booted Eagle, Montagu’s harrier, Lagger Falcon, Lesser Kestrel, Pied Wheatear, Siberian Bushchat, Isabella Wheatear, Greater Flamingo, Eurasian Sparrow hawk, Southern Shrike, Spotted Redshank, Eurasian Roller, Pied Avocet, Crested Lark, Rufous Tailed Lark, Tawny Pipet, Democille Crane, Red Necked Phalanrope, Indian spotted creeper, Indian large grey babbler, Indian Eagle Owl ಹೀಗೆ ಪ್ರವಾಸ ಭಾರಿ ಫಲಪ್ರದವಾಗಿ ತಾಲ್‌ಛಾಪರ್‌ ಹಕ್ಕಿಗಳ ಆಸ್ಥಾನವೆಂಬ ಸಂಭ್ರಮದಿಂದ  ತಾಲ್ ಛಾಪರಿಗೆ ವಿದಾಯ ಹೇಳಿ ಸಾತ್ತಾಲ್ ಕಡೆಗೆ ತೆರಳಿದೆ.

‍ಲೇಖಕರು avadhi

May 14, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: