ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಅನ್ಯ ರಾಜ್ಯಗಳ ನೆಲೆಗಳಲ್ಲಿ ಹಕ್ಕಿಗಳಿಗಾಗಿ…

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.

ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.

ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್‌ ಅಂಡ್‌ ಎರರ್‌ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.

ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.

12

ಸಾತ್ತಾಲಿನ ಸುಳಿಯಲ್ಲಿ : ಭಾಗ-2 ಮೊದಲ ಒಲವು

2017ರಲ್ಲಿ ಸಾತ್ತಾಲಿಗೆ ಹೋಗಿದ್ದ ನಾನು `ಸಿಕ್ಕಿದರ ಹೀಂಗ ಸಿಕ್ಕಬೇಕು ಸುಳಿಯಾಗ, ಸೆಳೆಯೋ ಹಾಂಗ’ ಅನ್ನೋ ಹಾಂಗ ಸಾತ್ತಾಲಿನ ಸುಳಿಯಿಂದ ಬಿಡಿಸಿಕೊಳ್ಳಲು ಆಗಲೇ ಇಲ್ಲ. ಖರೇ ಹೇಳಬೇಕಂದ್ರ ಬಿಡಿಸಿಕೊಳ್ಳುವ ಬಯಕೆಯೂ ಇರಲಿಲ್ಲ. ವರ್ಷ ಕಳೆದ ಮೇಲೆ ಮತ್ತೊಮ್ಮೆ ಸಾತ್ತಾಲಿಗೆ ಕಾಲಿರಿಸಿದ್ದು ಅಕ್ಟೋಬರ್ 2018ರಲ್ಲಿ ವಾರದ ವಾಸ್ತವ್ಯಕ್ಕೆ. ಖುಷ್ಬೂ ರಾಹುಲ್ ಜೊತೆ ರಾಜಾಸ್ಥಾನದ ತಾಲ್‌ಛಾಪರ್ ಪಯಣ ಮುಗಿಸಿ ದೆಹಲಿ ತಲುಪಿದೆ. ನನ್ನ ಜನ್ಮದಿನವಾದ ಅಕ್ಟೋಬರ್ ಮೂರರಂದು ಅವರಿಬ್ಬರೊಡನೆ ಸಾತ್ತಾಲಿನತ್ತ ಸಾಗಿದೆ. ಆ ದಿನ ಬಂದ ಶುಭಹಾರೈಕೆಗಳ ಮಹಾಪೂರಕ್ಕೆ  ಉತ್ತರಿಸುತ್ತಾ ಸಾತ್ತಾಲ್ ತಲುಪಿಕೊಂಡೆ. ಮರುದಿನವೇ ಪ್ರಾರಂಭವಾದ ಹಕ್ಕಿ ಕ್ಲಿಕ್ಕಿನ ಯಾನದಲ್ಲಿ ಹಕ್ಕಿ ಮತ್ತು ನಾನು, ನಾನು ಮತ್ತು ಹಕ್ಕಿ… ಇಷ್ಟೆ ಲೋಕ ಮುಂದಿನ ಏಳು ದಿನ. ಮಧ್ಯೆ ಛಾಫಿಗೊಂದು ಸಣ್ಣ ವಿಸಿಟ್ ಬಿಟ್ಟರೆ ಇದ್ದದ್ದು, ತಿರುತಿರುಗಿ ತಿರುಗಿದ್ದೇ ಸಾತ್ತಾಲಿನ ಹಕ್ಕಿಗಳ ಹಿಂದೆಯೇ. ಊಟ ತಿಂಡಿ ಬೇಡ, ವಿಶ್ರಾಂತಿ ಬೇಡ. ಹಗಲು ಆರರಿಂದ ಸಂಜೆ ಆರರ ತನಕ ನಿರಂತರವಾಗಿ ನಿರಾತಂಕವಾಗಿ ಹಕ್ಕಿ ನಂಟು ಇರುತ್ತಿತ್ತು.

ಬೆಳಿಗ್ಗೆ ಆರೂವರೆಯ ಹೊತ್ತಿಗೆ ನನ್ನ ಸವಾರಿ ಹೊರಡುತ್ತಿತ್ತು. `ಹಕ್ಕಿಗಳು ಅಷ್ಟು ಬೇಗ ಬರಲ್ಲ, ನಿಧಾನವಾಗಿ ಹೋಗಿ ಅಮ್ಮಾ’ ಎಂದರು ಖುಷ್ಬೂ ರಾಹುಲ್. ಹಕ್ಕಿಗಳು ಬರುತ್ತವೋ ಇಲ್ಲವೋ, ನಿಧಾನವಾಗಿ ಬರುತ್ತವೋ ಅದರ ಬಗ್ಗೆ ನನಗೆ ಯೋಚನೆಯಿಲ್ಲ. ಬಂದಾಗ ಬರಲಿ ಹಕ್ಕಿ, ಕಾಯುವೆನು ನಾನು ಹಕ್ಕಿ ಬರುವನ್ನೆಗಂ. ಅವರಿಬ್ಬರಿಗೂ ಆತಂಕ `ತಿಂಡಿ ಏನೋ ತಗೊಂಡು ಹೋಗಿ ಕೊಡ್ತೀವಿ ಊಟಕ್ಕಾದರೂ ಅಮ್ಮಾ ಮನೆಗೆ ಬರೋದು ಬೇಡವೇ’ ಎಂದು. ಹತ್ತಿರದಲ್ಲಿದ್ದ ಕ್ರಿಶ್ಚಿಯನ್ ಆಶ್ರಮದಲ್ಲಿ ರೆಸ್ಟ್ ರೂಂ ಇದ್ದುದರಿಂದ ಮೂಲ ಸಮಸ್ಯೆಯೊಂದು ಬಗೆಹರಿದಿತ್ತು. ಅದು ತೀರಿದರೆ ಬಹುತೇಕ ಮುಗಿದಂತೆ. ನವತಾರೆ ಸಿನಿಮಾದ ನಾಯಕ ದೇಹಭಾದೆ ತೀರಿಸಿ ಅಬ್ಬಾ ಎಂದು ಉಸಿರೆಳೆದಂತೆ ಸಮಾಧಾನ. ತಡೆಯಬಹುದು, ಇಲ್ಲವೆಂದಲ್ಲ. ಸ್ಟುಡಿಯೋಗೆ ಹೋದಾಗ ಅದನ್ನೂ ತಡೆದಿದ್ದಿದೆ, ನೀರೂ ಕುಡಿಯದೆ. ಆದರೆ ಇಲ್ಲಿ ನಾನು ಊಟಕ್ಕೆ ಹೋಗುತ್ತಿರಲಿಲ್ಲ. ಊಟಕ್ಕೆ ಹೋದಾಗ ಹಕ್ಕಿಗಳು ಬಂದುಬಿಟ್ಟರೆ ಎಂಬ ಯೋಚನೆ ನನಗೆ. ಕೊನೆಗೆ ನನ್ನ ಈ ಆಟಗಳನ್ನು ನೋಡಲಾರದ ರಾಹುಲ್ ಅಲ್ಲಿಗೆ ಊಟ ಕಳುಹಿಸಿಕೊಟ್ಟು `ಮಾ, ಊಟ ಇಲ್ಲಿಯೇ ಮಾಡಿ, ನಿಮಗೊಬ್ಬರಿಗೇ ಈ ವಿನಾಯಿತಿ ಇದೆ’ ಎಂದು ರೇಗಿಸಿದ್ದ. ಏಳೂ ದಿನಗಳೂ ಹೀಗೆ ಸಾಗಿತು. ಕೆಲವೊಮ್ಮೆ ಜೊತೆಗೆ ಕೆಲವರು ಇರುತ್ತಿದ್ದರೆ ಬಹುಪಾಲು ಏಕಾಂಗಿಯಾಗಿ ಏಕಾಂತದಲ್ಲಿ ಹಕ್ಕಿ ಹಿಡಿಯುತ್ತಿದ್ದೆ. ಸಂಜೆ ಇಳಿಸಂಜೆಯಾದ ಬಳಿಕ ನೆಲೆಗೆ ಹಿಂದಿರುಗುತ್ತಿದ್ದೆ.

ಅಕ್ಟೋಬರ್ ತಿಂಗಳಿನಲ್ಲಿ ಸ್ಟುಡಿಯೋಗೆ ಅಷ್ಟಾಗಿ ಹಕ್ಕಿಗಳು ಬರುವುದಿಲ್ಲವಾದ್ದರಿಂದ ಸ್ಟುಡಿಯೋದತ್ತ ಕಾಲಿಡಲಿಲ್ಲ. ಹೋಗಿದ್ದಿದ್ದರೆ ನಾಲ್ಕಾರು ಹಕ್ಕಿ ಸಿಗುತ್ತಿದ್ದವೋ ಏನೋ ಎಂಬ ಯೋಚನೆ ಕಾಡಿದ್ದಂತೂ ನಿಜ. ಸಾತ್ತಾಲಿನ ಇನ್ನುಳಿದ ತಾಣಗಳಲ್ಲಿ ಹಾಗೂ ಹೈಡಿನಲ್ಲಿ ಈ ಹಿಂದೆ 100-400ನಲ್ಲಿ ತೆಗೆದಿದ್ದ ಅದದೇ ಹಕ್ಕಿಗಳನ್ನು ಈಗಿನ 600 ಪ್ರೈಮಿನಲ್ಲಿ ಕ್ಲಿಕ್ಕಿಸಿದೆ. ಜೊತೆಗೆ Grey Headed Wood Pecker Male-Female, Blue Throated Barbet, Black Throated Tit, Kalij Phesant Male-Female, Slaty Fork tail, Plumbous Redstart Female ಲೈಫರ್ ಆದವು. ಹಲವು ಕಾರ್ಡುಗಳಲ್ಲಿ ಹಕ್ಕಿ ಚಿತ್ರಗಳನ್ನು, ಚಿತ್ತಾರಗಳನ್ನು ಮನದಲ್ಲಿ ತುಂಬಿಕೊಂಡು ದೆಹಲಿ ತಲುಪಿ ಊರಿಗೆ ಮರಳಿದ್ದೆ.

2018ರ ನವೆಂಬರಿನಲ್ಲಿ ಚೋಪ್ತಾಗೆ ಎರಡನೆಯ ಟೂರ್ ನಿಕ್ಕಿ ಮಾಡಿಕೊಂಡೇ ಅಕ್ಟೋಬರಿನಲ್ಲಿ ಮಂಡ್ಯಕ್ಕೆ ಮರಳಿದ್ದೆ. ಆದ್ದರಿಂದ ಚೋಪ್ತಾಗೆ ಹೊರಡುವ ಮುನ್ನ ಮೂರನೆಯ ಸಲಕ್ಕೆ ಎರಡು ದಿನಗಳ ಸಾತ್ತಾಲಿನ ಮಿನಿಟೂರ್ ಜೊತೆಗೆ ಒದಗಿತು. ಮೊದಲ ಸಲ ಮಗಳೊಡನೆ ಬಂದಿದ್ದರೆ ಎರಡನೆಯ ಸಲ ದೆಹಲಿ ಸೇರಿ ಖುಷ್ಬೂ ರಾಹುಲ್ ಜೊತೆ ಸಾತ್ತಾಲಿಗೆ ಸೇರಿದ್ದೆ. ಆದರೆ ಈ ಮೂರನೆಯ ಪಯಣ ಮೊದಲ ಬೆಂಗಳೂರಿನಿಂದ ಸಾತ್ತಾಲಿನ ತನಕ ಒಂಟಿ ಪಯಣ. ವಾಸ್ತವವಾಗಿ ನಡುರಾತ್ರಿಯಲ್ಲಿ ದೆಹಲಿಗೆ ಬಂದಿಳಿದಾಗ ಕಿರಿಯ ಹಕ್ಕಿಮಿತ್ರ ಅಂಕುರ್ ದೆಹಲಿ ವಿಮಾನ ನಿಲ್ದಾಣದಲ್ಲಿ ಜೊತೆಗೂಡಿ ರೈಲುನಿಲ್ದಾಣಕ್ಕೆ ಒಟ್ಟಿಗೆ ಹೋಗಿ ಅಲ್ಲಿಂದ ಬೆಳಗಿನ ರೈಲಿನಲ್ಲಿ ಕಾತಗೋದಾಂ ಸೇರಬೇಕಾದ ಪ್ಲ್ಯಾನ್ ಇತ್ತು. ದೆಹಲಿಗೆ ಹೋಗೋದು ಸಮಸ್ಯೆಯಲ್ಲ. ಆದರೆ ದೆಹಲಿಯಂತಹ ಮಾಯಾಂಗಿನಿಯ ಮಡಿಲು ಸೇರಿ ನಟ್ಟನಡುರಾತ್ರಿಯಲ್ಲಿ ಒಬ್ಬಳೇ ಮಣಭಾರದ ಕ್ಯಾಮೆರಾ ಬ್ಯಾಗ್, ಲಗ್ಗೇಜ್ ಬ್ಯಾಗ್ ಸಾಗಿಸಿಕೊಂಡು ಏರ್‌ಪೋರ್ಟ್ ದಾಟುವುದು, ಅಲ್ಲಿಂದಾಚೆ ರೈಲುನಿಲ್ದಾಣ ತಲುಪುವುದು ಕಷ್ಟ ಎನಿಸಿತ್ತು. ಆದ್ದರಿಂದಲೇ ಖುಷ್ಬೂಶರ್ಮ ಅಂಕುರನಿಗೆ `ಅಮ್ಮಾ ಬರುತ್ತಾರೆ, ಜೊತೆಗಿದ್ದು ಕರೆತರಬೇಕು’ ಎಂದು ಖಡಕ್ಕಾಗಿ ಸೂಚನೆ ನೀಡಿ ನಿರ್ದೇಶಿಸಿದ್ದರಿಂದಲೇ ಫ್ಲೈಟ್, ಟ್ರೈನ್ ಬುಕ್ ಮಾಡಿ ಹೊರಟಿದ್ದೆ.  

ಆದರೆ ನಟ್ಟನಡುರಾತ್ರಿಯಲ್ಲಿ ದೆಹಲಿಯಲ್ಲಿ ಇಳಿದು ನಾನು ಫೋನ್ ಮಾಡಿದರೆ ಅಂಕುರ್ `ನಾನಾಗಲೇ ದೆಹಲಿಯ ರೈಲ್ವೆ ಸ್ಟೇಷನ್ನಿನಲ್ಲಿದ್ದೇನೆ, ನೀವು ಬನ್ನಿ’ ಎಂದ. ನಾನೋ ಕನ್ನಡ ಕತ್ತುರಿಯಲ್ತೆ ಎಂದು ಕನ್ನಡವೆ ಸತ್ಯ ಅನ್ಯವೆನಗೆ ಮಿಥ್ಯೆ ಎಂದು ನನ್ನ ಜಗತ್ತನ್ನೇ ಸೀಮಿತ ಮಾಡಿಕೊಂಡಿರುವವಳು. ಇತರ ಭಾಷೆಗಳು ಒಳಗೆ ಬರಲು ತಡಕಾಡಿ ಹೊರಗೆ ನಿಂತವು. ಈ ಹಕ್ಕಿ ಪಯಣಗಳು ಅರೆಬರೆ ಭಾಷೆಯಲ್ಲೇ ಟೂರು ಮಾಡಲು ಧೈರ್ಯ ಕಲಿಸಿವೆ. ಆ ಸಪ್ಪಟ್ಟು ಸರಿರಾತ್ರಿಯಲ್ಲಿ ನನ್ನ ಮಣಭಾರದ ಲಗ್ಗೇಜುಗಳನ್ನು ಟ್ಯಾಕ್ಸಿಗೆ ಹೊತ್ತು ಹಾಕಿ ರೈಲುನಿಲ್ದಾಣ ತಲುಪಿದೆ. ಮತ್ತೆ ಫೋನ್ ಮಾಡಿದೆ. ಅಂಕುರ್ ನಾನು ಮೊದಲ ಫ್ಲ್ಯಾಟ್ಫಾರಮ್ಮಿನ weighting roomನಲ್ಲಿ ಇದ್ದೇನೆ, ಯಾರಾನ್ನಾದರೂ ಕೇಳಿಕೊಂಡು ಬನ್ನಿ ಎಂದು ಅಶರೀರವಾಣಿ ಸೂಚನೆ ನೀಡಿದ. ಮತ್ತೆ ಬ್ಯಾಗ್ ಹೊತ್ತು, ಹೊರೆಸಿಕೊಂಡು ಅಲ್ಲಿಗೆ ತೆರಳಿದೆ. ಕಿಕ್ಕಿರಿದಿದ್ದ ಆ ಕೊಠಡಿಯಲ್ಲಿ ಒಂದೆಡೆ ಲಗೇಜಿರಿಸಿ ಬೆಳಗಿನ ತನಕ ಕೂತಲ್ಲೇ ತೂಕಡಿಸಿದ್ದೆ. ಮರುದಿನ ಬೆಳಿಗ್ಗೆ ಮತ್ತೊಂದು ಫ್ಲ್ಯಾಟ್ಫಾರಂ ತಲುಪಿದ ನನ್ನನ್ನು ಬೋಗಿಯಲ್ಲಿ ಕೂರಿಸಿದ ಅಂಕುರ್ `ನನ್ನ ಸೀಟ್ ನಂಬರ್ ಇನ್ನೊಂದು ಬೋಗಿಯಲ್ಲಿದೆ, ಅಲ್ಲಿಗೆ ಹೋಗುತ್ತೇನೆ’ ಎಂದು ಹೇಳಿ ಬೇರೆ ಬೋಗಿಗೆ ಹೋದ. ಕಾತಗೋದಾಂ ತಲುಪಿ ಕೆಳಗಿಳಿದಾಗ ಅವನನ್ನು ನೋಡಿದೆ. ಮನಸಿನಲ್ಲೆ ಅವನಿಗೆ `Thanks to Ankur’ ಎಂದೆ.

ನನ್ನೊಳಗೆ ಮನೆ ಮಾಡಿದ್ದ ಅಳುಕನ್ನು ಹೊರತಳ್ಳಿ ಅರ್ಧರಾತ್ರಿಯಲ್ಲೂ ದೆಹಲಿಯಲ್ಲಿ ನನ್ನ ಕೆಲಸ ನಾನೇ ಮಾಡಿಕೊಳ್ಳುವದನ್ನು ಕಲಿಯಲು ಸದವಕಾಶ ತ್ತದ್ದಕ್ಕೆ. ಇಷ್ಟು ಮಾತ್ರವಲ್ಲ ಅಂಕುರನಿಗೆ ನಾನು ಸದಾ ಋಣಿ. ಲಡಾಖ್ ಪಯಣದ ಸಹಚಾರಿಯಾಗಿ ನನ್ನ ಕಡು ಕಷ್ಟದಲ್ಲಿ ಹೆಗಲು ಕೊಟ್ಟಿದ್ದಕ್ಕೆ. ಎಂದೂ ಯಾರೂ ಸದಾ ಕಾಲಕ್ಕೂ ಕೆಟ್ಟವರಾಗಿರಲು ಸಾಧ್ಯವೇ ಇಲ್ಲ. ಸಂದರ್ಭಗಳು ಅವರನ್ನು ಭಿನ್ನವಾಗಿ ವರ್ತಿಸಲು ಪ್ರೇರೇಪಣೆ ನೀಡುತ್ತವೆಂದು ನಂಬಿ ನಡೆದಿದ್ದೇನೆ. ಅದಕ್ಕೆ ನನ್ನನ್ನು ತಮ್ಮ ಶತ್ರುವೆಂದೆ ಭಾವಿಸಿ ನಡೆದುಕೊಂಡವರನ್ನೂ ಶತ್ರುವೆಂಬ ಭಾವನೆಯಿಂದ ನೋಡದೆ ನಿರುಮ್ಮಳವಾಗಿ ಇರಲು ಕಲಿತಿದ್ದೇನೆ. ಇದು ಜೀವನದ ದೊಡ್ಡ ಪಾಠವಷ್ಟೆ. ಖುಷ್ಬೂ ಅಂಕುರನಿಗೆ `ಅಮ್ಮಾಗೆ ಹೀಗೆ ಮಾಡಬಾರದಿತ್ತು’ ಎಂದು ಅವಾಜ್ ಹಾಕಿ ಗದರಿಸಲು ಹೋದರೂ `ಬೇಡ ಖುಷ್ಬೂ’ ಎಂದೇ ತಡೆದೆ. `ಜೈನ ಧರ್ಮದ `ಸರ್ವ ಜೀವವೂ ನನ್ನನ್ನು ಕ್ಷಮಿಸಲಿ, ನಾನೂ ಸರ್ವ ಜೀವಗಳನ್ನೂ ಕ್ಷಮಿಸುತ್ತೇನೆ’ ಎಂಬ ನಿಲುವು ಯಾವತ್ತೂ ನನ್ನನ್ನು ಎಚ್ಚರದಲ್ಲಿಡುತ್ತದೆ.

ಅಂದು ಮಧ್ಯಾಹ್ನ ಒಂದೂವರೆಗೆ ಸಾತ್ತಾಲ್ ತಲುಪಿದ ಕೂಡಲೇ ಕ್ರಿಶ್ಚಿಯನ್ ಆಶ್ರಮದ ಹೈಡಿಗೆ ಕಾಲಿಟ್ಟೆ. ಮೂರನೆಯ ಸಲ ಸಾತ್ತಾಲಿನಲ್ಲಿ ಇದ್ದದ್ದು ಒಂದೂವರೆ ದಿನವಾದರೂ Rufous Throated Partridge, Gray Winged Black bird Female, Himalayan Blue tail Male-Female, Slaty backed fly catcher, Rufous georgetted  flycatcher Male ಆರು ಹೊಸ ಹಕ್ಕಿ ಸೆರೆಯಾದವು. ಎರಡನೇ ಸಲದ ಪ್ರವಾಸದಲ್ಲಿ ಏಳು ಹಗಲಿಡೀ ಇದ್ದರೂ ಎಂಟು ಲೈಫರ್ ಸಿಕ್ಕಿದ್ದರೆ ಮೂರನೆಯ ಟೂರಿನಲ್ಲಿ ಒಂದೂವರೆ ದಿನಕ್ಕೆ ಆರು ಲೈಫರ್. ಇಷ್ಟು ಸಾಕಲ್ಲವೆ ಲೀಲಾ ನಿನ್ನ ಜೊತೆಗೆ ಲಕ್ ಇದೆ ಎಂದು ಸಾಕ್ಷೀಕರಿಸಲು.

2019ರ ನವೆಂಬರ್ ಡಿಸೆಂಬರಿನಲ್ಲಿ ನಾಲ್ಕನೆಯ ಸಾತ್ತಾಲ್ ಯಾತ್ರೆ ಮಾಡಿದ್ದೆ ಪ್ರಸ್ತುತಕ್ಕೆ ಕೊನೆಯದ್ದಾಗಿದೆ. ಎಲ್ಲ ಸರಿ ಇದ್ದರೆ ಕೊರೊನಾ ಬಾರದೆ ಇದ್ದರೆ 2020ರ ಮೇನಲ್ಲಿ ಸಾತ್ತಾಲಿನ ಐದನೇ ಪ್ರಯಾಣ ಮಾಡಿರುತ್ತಿದ್ದೆ. ಆಗಿಲ್ಲ, ಆದರೆ ಆಗುವುದಿಲ್ಲ ಎಂದೇನೂ ಇಲ್ಲ. ನಾಲ್ಕನೇ ಪ್ರವಾಸ ಚೋಪ್ತಾ ಮಂಡಲದ ಆಚೀಚೆ ನಾಲ್ಕೈದು ದಿನ ಸಾತ್ತಾಲಿಗೆ ನಿಕ್ಕಿಯಾಗಿತ್ತು. ಈ ಸಲ ಕಳೆದ ಬಾರಿಯ ಅಂಕುರ್ ಕಥೆಯ ವ್ಯಥೆ ಮುಂದುವರಿಕೆ ಆಗಬಾರದೆಂದು ಬೆಂಗಳೂರಿನಿಂದ ದೆಹಲಿ, ದೆಹಲಿಯಿಂದ ಪಂಥನಗರಕ್ಕೆ ಟಿಕೇಟ್ ಬುಕ್ ಮಾಡಿದ್ದೆ. ದೆಹಲಿಯಲ್ಲಿಳಿದು ಪಂಥನಗರದ ವಿಮಾನ ಹಿಡಿಯಲು ಎರಡು ಗಂಟೆ ಸಮಯವಿತ್ತು. ಪುಟ್ಟ Air Alliance ವಿಮಾನವೇರಿ ಪಂಥನಗರದಲ್ಲಿಳಿದು ಕಾರಿನಲ್ಲಿ ಸಾತ್ತಾಲ್ ಸೇರಿದೆ. ಸಾತ್ತಾಲಿನ ಸ್ಟುಡಿಯೋ ಸೇರಿದಂತೆ ಎಲ್ಲ ನೆಲೆಗಳಲ್ಲಿರುವ ಹಕ್ಕಿ ಜಾಗಗಳಿಗೆ ತಪ್ಪದೆ ಭೇಟಿ ಮಾಡಬೇಕೆಂಬ ಉದ್ದೇಶದಿಂದ ಹೊರಟಿದ್ದೆ.

ಈ ಪ್ರವಾಸಕ್ಕೆ ಹೊರಡುವಲ್ಲಿ ಇನ್ನೊಂದು ಘನ ಉದ್ದೇಶವೂ ಇತ್ತು. ಖುಷ್ಬೂ-ರಾಹುಲ್‌ರ ಪುಟ್ಟ ಸಂಸಾರಕ್ಕೆ ಹೊಸ ಅತಿಥಿ ಜೊತೆಗೂಡಿದ್ದ. ಜನವರಿ, ಫೆಬ್ರವರಿ, ಮಾರ್ಚ್ ತನಕ ಮೂರು ತಿಂಗಳು ಅವರೊಡನೆ ಹಕ್ಕಿಗಳಿಗಾಗಿ ಕಾಲ ಕಳೆದಿದ್ದೆ. ಖುಷ್ಬೂ-ರಾಹುಲರ ತಾಯ್ತಂದೆಯರೂ ಆಪ್ತರಾಗಿದ್ದರು. ಮೂರು ತಿಂಗಳ ಕಿರಿಯ ಹಕ್ಕಿಮಿತ್ರ ಅಥರ್ವ ಶರ್ಮನನ್ನು ಕಾಣುವ ಉದ್ದೇಶವನ್ನೂ ಸೇರಿಸಿಕೊಂಡೆ ಪ್ರವಾಸ ಯೋಜಿಸಿದ್ದೆ. ಪರಿಸರ ಮಾಲಿನ್ಯದಿಂದ ಕೂಡಿದ ದೂರದ ದೆಹಲಿಯಲ್ಲಿ ತನ್ನ ಮಗನನ್ನು ಬೆಳೆಸಲು ಇಚ್ಛಿಸದ ಈ ದಂಪತಿಗಳು ಸತ್ತಾಲಿನ ಹಸಿರಿನ ನಡುವೆ, ಹಕ್ಕಿಗಳ ಸಾನ್ನಿಧ್ಯದಲ್ಲಿ, ಅವುಗಳ ಇಂಚರ ಕೇಳುತ್ತಾ ತಮ್ಮ ಮಗ ಬೆಳೆಯಬೇಕೆಂಬ ಹಂಬಲದವರು. ಸಾತ್ತಾಲಿನ ವಾಸದ ನೆಲೆಯಲ್ಲಿ ಬೆಳಗ್ಗಿನಿಂದ ಸಂಜೆಯವರೆಗೂ ಆಡುವ ಮಾತೆಲ್ಲಾ ಹಕ್ಕಿಯದ್ದೇ, ನೋಡುವ ನೋಟವೆಲ್ಲಾ ಹಕ್ಕಿಯದ್ದೆ, ಕೇಳುವ ದನಿಯೆಲ್ಲಾ ಹಕ್ಕಿಯದ್ದೆ. ಏಳು-ಎಂಟು ತಿಂಗಳ ಕೂಸು ಗರ್ಭದಲ್ಲಿದ್ದಾಗಲೂ ಹಕ್ಕಿಗಳಿಗಾಗಿ ಗ್ರೀನ್‌ಲ್ಯಾಂಡ್ ಪ್ರವಾಸ ಮಾಡಿದ್ದ ಹಕ್ಕಿಮೋಹಿ ಖುಷ್ಬೂಶರ್ಮ. ಸಾತ್ತಾಲಿಗೆ ಬಂದಿಳಿದ ಕೂಡಲೇ ಮೊದಲ ನೋಟ ಬೇಟಿ ಪುಟ್ಟ ಕೂಸಿನದ್ದೆ ಆಗಿತ್ತು. ಇವನೆಂತಹ ಹಕ್ಕಿಮೋಹಿ ಆಗಬಹುದೆಂಬ ಕಲ್ಪನೆಯ ಎಳೆಯ ಚಾದರವನ್ನು ಅವನಿಗೆ ಹೊದಿಸಿದೆ.

ಚೋಪ್ತಾಗೆ ಹೊರಡುವ ಮೊದಲು ಮತ್ತು ಬಂದ ನಂತರ ಸಾತ್ತಾಲಿನಲ್ಲಿ ಹಕ್ಕಿ ಅರಸುವ ಕಾಯಕದಲ್ಲಿ ಮುಳುಗಿದೆ. ಆಗಾಗ್ಗೆ ಅಕಾಲಿಕ ಮಳೆಯ ಕಾಟ. `ನಿಲ್ಲೋ ನಿಲ್ಲೋ ಮಳೆರಾಯ ನಾ ಮಂಡ್ಯದಿಂದ ಬಂದಿವ್ನಿ, ಹಕ್ಕಿ ಇಲ್ದೆ ಹೋಗಲ್ಲ’ ಎಂದು ವರುಣದೇವನಿಗೆ ಮೊರೆಯಿಟ್ಟೆ. ಮಳೆ ನಿಂತಾಗ ಸ್ಟುಡಿಯೋದಲ್ಲಿ ಎರಡು ಮೂರು ದಿನ ತಳವೂರಿದೆ. ನನಗ ಸಹಾಯಕನಾಗಿರಲು ಪಂಕಜ್ ಜೊತೆಗೆ ಬಂದ. ಸಾತ್ತಾಲಿನ ಸ್ಟುಡಿಯೋದಲ್ಲಿ ನನ್ನದೇ ಸಾಮ್ರಾಜ್ಯ. ಮಳೆ-ಚಳಿಗಳ ನಡುವೆ ಮೂರು ಕೋಟು ಜರ್ಕಿನ್ ಧರಿಸಿ ಕುಳಿತವಳು ಮೇಲೇಳುತ್ತಿರಲಿಲ್ಲ. ಛಾಯಾಗ್ರಹಣಕ್ಕೆಂದು ಅಲ್ಲಿಗೆ ಬಂದ ಕೆಲವರು ಕೆಲವು ಸಮಯ ಕಾಯುತ್ತಿದ್ದರು. ಹಕ್ಕಿಗಳು ಕಾಣದಿದ್ದರೆ ಛೇ ಹಕ್ಕಿಗಳೆ ಬರುತ್ತಿಲ್ಲವೆಂದು ಗೊಣಗಿ ಜಾಗ ಖಾಲಿ ಮಾಡುತ್ತಿದ್ದರು. ಆದರೆ ನಾನು ಅಲ್ಲೇ ಮೌನವಾಗಿ ಊಟ-ತಿಂಡಿಗೂ ಲೆಕ್ಕಿಸದೆ ಕಾಯುತ್ತಲೇ ಇದ್ದೆ. ತಪಸ್ಸು ಮಾಡಿದರೆ ದೇವತೆಗಳೆ ಒಲಿಯುತ್ತಾರಂತೆ, ಮತ್ತೆ ಹಕ್ಕಿಗಳು! ನನ್ನೀ ತಪಸ್ಸಿನ ಫಲವಾಗಿ ನಾಲ್ಕೈದು ಹೊಸ ಹಕ್ಕಿ ಸಿಕ್ಕಿ ಸಂಭ್ರಮಿಸಿದೆ. ಅದರಲ್ಲೂ Ashy Bulbul, Mountain Bulbulಗಳಿಗಾಗಿ ಬಹಳ ದಿನಗಳಿಂದ ಕಾಯುತ್ತಿದ್ದೆ. ಅವೂ ಲೀಲಾ ನಾವು ಬಂದೆವು ಎನ್ನುತ್ತಾ ಒಳಬಂದವು.

ನನಗೆ ಸಿಕ್ಕ ಸಾಮಾನ್ಯ ಹಕ್ಕಿಯೇ ಇರಬಹುದು. ಕುವೆಂಪು ಮಾತನ್ನು ಆಲಿಸುವ, ಪಾಲಿಸುವ ನನಗೆ ‘ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ ಯಾವುದೂ ಯಃಕಶ್ಚಿತವಲ್ಲ…’ ಈ ಲೋಕದ ಎಲ್ಲವನ್ನೂ ಹೀಗೆ ಪರಿಗಣಿಸುತ್ತಿರುವ ನನಗೆ ಹಕ್ಕಿಲೋಕದ ಯಾವುದೂ ಯಃಕಶ್ಚಿತವಂತೂ ಅಲ್ಲವೇ ಅಲ್ಲ. `…ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ…’ ಎಂಬಂತೆ ನಿಧಾನವೇ ಪ್ರಧಾನವಾಗಿ ಸಾವಧಾನದಿಂದ ತೆಗೆದ ಹಕ್ಕಿಗಳ ಚಿತ್ರಗಳಲ್ಲಿ ಚಿತ್ರ ಅಚ್ಚುಮೆಚ್ಚೊ ಗೊತ್ತಿಲ್ಲ, ಹಕ್ಕಿಗಳಂತೂ ಅಚ್ಚುಮೆಚ್ಚು. ಅದಕ್ಕೆ ಸಲ್ಲುವ ಪ್ರೀತಿ ಸಲ್ಲುತ್ತದೆ. ಮಾಮೂಲಾದ ರೋಜಾಳದ ಹೂವಿನ ಮೇಲೆ ಮುದ್ದಾಗಿ ಕುಳಿತು ನನ್ನ ಚಿತ್ರವನ್ನೂ ತೆಗಿ ತೆಗಿ ಎಂದು ಮುದ್ದುಮಾಡಿ ಕರೆಯುವ ಸಾಮಾನ್ಯ ಕಲ್ಲುಚಟಗ common stonechat ಕೂಡಾ ನನ್ನ ಗಮನ ಸೆಳೆಯುತ್ತದೆ, ನನ್ನನ್ನು ಸೆಳೆದೊಯ್ಯುತ್ತದೆ.

ನನ್ನ ಹಕ್ಕಿ ಗುರು ರಾಹುಲ್ ಶರ್ಮ ‘ತಾಳ್ಮೆಯಿಂದ ಹಕ್ಕಿಗೆ ಎಷ್ಟು ಹೊತ್ತಾದರೂ ಕಾಯಬಲ್ಲವರಲ್ಲಿ ಇತ್ತೀಚಿನ ವರ್ಷಗಳಲ್ಲಿ ನಾನು ನೋಡಿದ ಹಾಗೆ ಲೀಲಾ ಮ್ಯಾಮ್’ ಎಂದು ಹೇಳಿ ನನಗೆ ಕೋಡು ಮೂಡಿಸಿದ್ದಾರೆ. “Denise I am the laziest one too. Always find out ways to get birds quickly and easily. For patience I will rate Leela mam, much more than anyone else I had seen in past many years. She can wait forever…. A role model.” Thanks Rahul Sharma. ಅಂದ ಹಾಗೆ Denise Bergman ಬೆಲ್ಜಿಯಂ ದೇಶದವರು, ರಾಹುಲ್, ಖುಷ್ಬೂ ಜೊತೆ ಈ ದೇಶದ ಹಲವು ಜಾಗಗಳಿಗೆ ಸುತ್ತಿ ನೋಡಿದವರು

ಒಂದು ದಿನ ಸ್ಟುಡಿಯೊದಲ್ಲಿ ಹಕ್ಕಿಗಳಿಗಾಗಿ ಕಾಯುತ್ತಿದ್ದಾಗ ಅತ್ಯಾತುರದಿಂದ ಬಂದ ನನ್ನ ಸಹಾಯಕ `ಮೇಡಂ ಇಲ್ಲಿಂದ ಹೋಗೋಣ’ ಎಂದ. ಅವನ ಕಣ್ಣುಗಳಲ್ಲಿ ಭಯ ತುಂಬಿ ತುಳುಕುತ್ತಿತ್ತು. ಹೋಗೋಣ ಎನ್ನುವುದನ್ನು ಬಿಟ್ಟರೆ ಅವನು ಹೇಳಿದ ಬೇರೇನೂ ಅರ್ಥ ಆಗಲಿಲ್ಲ. ಆದರೆ ಯಾಕೆ ಹೋಗಬೇಕು ಎನ್ನುವ ಪ್ರಶ್ನೆ ಕಾಡುತ್ತಿತ್ತು. ಅವನ ಮಾತು ಕಿವಿಗೆ ಬೀಳದವಳಂತೆ ಹಕ್ಕಿಯೆಡೆಗೆ ಲಕ್ಷ್ಯ ಕೊಟ್ಟರೂ ನೋಡನೋಡುತ್ತಿದ್ದಂತೆ ಹಲವರು ಬಂದರು, ಸುತ್ತಲಿನ ಮರಗಿಡಗಳಿಂದ ಸೌದೆ ಮುರಿದರು. ಇನ್ನೂ ಹಲವರು ಬಂದು ನನ್ನ ಆಚೀಚೆಯೆ ಕೂತಿದ್ದರು. ನಾನು ಹಕ್ಕಿ ಫೋಟೊ ತೆಗೆಯುತ್ತಲೇ ಇದ್ದೆ. ಆದರೆ ಇದ್ದಕ್ಕಿದ್ದ ಹಾಗೇ `ರಾಮನಾಮ್ ಸತ್ಯ ಹೈ’ ಈ ಧ್ವನಿ ಕೇಳಿತು… ಓ ಹಿಂದಿ ಸಿನಿಮಾಗಳಲ್ಲಿ ಸಾವಿನ ಸಂದರ್ಭದಲ್ಲಿ ಹೀಗೆ ಕೇಳಿದ್ದು ನೆನಪಾಯಿತು. ತಿರುಗಿ ನೋಡಿದೆ, ಶವ ಹೊತ್ತು ತಂದರು. ಆಗ ಅರ್ಥ ಆಯಿತು, ಇಲ್ಲಿ ಶವಸಂಸ್ಕಾರ ಮಾಡುತ್ತಾರೆಂದು. ಗಂಧಧೂಪ ಹಾಕಿದ್ದರಿಂದ ಹೊಗೆ ಆವರಿಸುತ್ತಿತ್ತು. ಇಷ್ಟಾದ ಮೇಲೆ ಅಲ್ಲಿಯೇ ಕೂರುವುದರಲ್ಲಿ ಸಾಧುವಲ್ಲವೆಂದು ಅರಿವಾಯಿತು. ಅಷ್ಟರಲ್ಲಿ ನನ್ನ ಸಹಾಯಕ ಪಂಕಜ್ ರಾಜ್ವರ್ ತಾನು ಇಲ್ಲಿಯತನಕ ಶವಸಂಸ್ಕಾರ ನೋಡಿಲ್ಲ ಹೋಗೋಣ ಎಂದು ಮತ್ತೆ ಮತ್ತೆ ಗೋಗರೆದ. ನಾನೋ ಅನೇಕ ಸಾವುಗಳಿಗೆ, ಸಂಸ್ಕಾರಕ್ಕೆ ಸಾಕ್ಷಿಯಾಗಿದ್ದವಳು. ನನ್ನ ಪ್ರೀತಿಯ ಅಜ್ಜ ಯಾನೆ ಮಾವನನ್ನು ಊರಿನಿಂದ ಮಂಡ್ಯಕ್ಕೆ ಕಾರಿನಲ್ಲಿ ಕರೆತರುವಾಗ ನನ್ನ ಹೆಗಲಿನ ಮೇಲೆ ಒರಗಿ ಕೊನೆಯುಸಿರು ಎಳೆದುದನ್ನು ಕಂಡವಳು. ಈಗಲೂ ನನ್ನ ಭುಜವು ನನ್ನ ತಾತನನ್ನು ನೆನಪು ಮಾಡುತ್ತಲೇ ಇರುತ್ತದೆ. ಸಾವು-ಸಂಸ್ಕಾರಗಳು ನನಗೆ ಹೊಸವೂ ಆಗಿರಲಿಲ್ಲ. ಆದರೂ ನಾನೂ ಮನುಷ್ಯಳೆ ತಾನೆ. ಒಂದು ಜೀವದ ಅಂತಿಮಯಾತ್ರೆ ನಡೆಯುವ ಹೊತ್ತಿನಲ್ಲಿ ಭಾವಶೂನ್ಯವಾಗಿ ಎದುರಿಗೆ ಕುಳಿತು ಹಕ್ಕಿ ಫೋಟೋಗ್ರಾಫಿ ಮಾಡುವುದು ಅಮಾನವೀಯ ಸಂಗತಿ ಎಂದು ಅಲ್ಲಿಂದೆದ್ದು ಬಂದೆ.

ಅಂದು ನಾನು ಸ್ಟುಡಿಯೋದಿಂದ ಹೊರಬಂದೆ ನಿಜ, ಆದರೆ ಅಲ್ಲಿಂದ ಸೀದಾ ಆಶ್ರಮದ ಹೈಡಿಗೆ ಹೋದೆ. ಹಕ್ಕಿಯತ್ತ ಗಮನವಿದ್ದರೂ ಮನದಲ್ಲಿ ಮಂಥನ ನಡೆದೇ ಇತ್ತು. ಹಕ್ಕಿಪ್ರಿಯರೆಲ್ಲಾ ಇಷ್ಟು ಪ್ರೀತಿಯಿಂದ ಹಕ್ಕಿಗಾಗಿ ಕಾಯುವ ಜಾಗ ಶ್ಮಶಾನವಾಗಿದೆ ಎನ್ನುವುದೇ ನನಗೆ ಅಲ್ಲಿಯವರೆಗೂ ಗೊತ್ತಿರಲಿಲ್ಲ. ಗೊತ್ತಿಲ್ಲದೇ ಇದ್ದ ಕಾರಣ ಯಾವ ಭಯವೂ ಇರಲಿಲ್ಲ. ವಿಷಯ ಗೊತ್ತಾದ ಮೇಲೆ ನೋಡಿದರೆ ಅಲ್ಲೆಲ್ಲಾ ಅರ್ಧಂಬರ್ಧ ಸುಟ್ಟ ಕಟ್ಟಿಗೆಗಳು ಕಂಡವು, ಬೂದಿ ಕಂಡಿತೆ ವಿನಾ ಭಯವೇನೂ ಹುಟ್ಟಲಿಲ್ಲ. ನನ್ನೊಳಗೆ ಏನಾದರೂ ಭಯ ಇದೆಯೇ ಎನ್ನುವುದರ ಸ್ವಪರೀಕ್ಷೆಗಾಗಿ ಮರುದಿನ ಮತ್ತೆ ಸ್ಟುಡಿಯೋಗೆ ಹೋದೆ. ಇಡೀ ದಿನ ಅಲ್ಲೇ ಕುಳಿತೆ, ಬಂದ ಹಕ್ಕಿಗಳ ಚಿತ್ರ ತೆಗೆದೆ. ಸ್ಮಶಾನ ಸೇರಿಸಿ ಸೆಲ್ಫಿಯನ್ನೂ ಬಿಡದೆ ತೆಗೆದುಕೊಂಡೆ. ಭಲೇ ಲೀಲಾ ಎಂದು ನನಗೆ ನಾನೇ ಬೆನ್ನು ತಟ್ಟಿಕೊಂಡೆ ಕೈಯೆತ್ತದೆ. ಭಯ ದಾಟಬೇಕಾದರೆ ಭಯ ಹುಟ್ಟಿಸುವ ತಾಣದಲ್ಲೇ ನೀಗಿಸಿಕೊಳ್ಳಬೇಕು ತಾನೆ. ಕಾಡು, ಕಡಲು, ಬೆಟ್ಟಗುಡ್ಡಗಳಲ್ಲೆಲ್ಲಾ ಅಲೆಯುವ ನಮಗೆ ಯಾವ ಜಾಗವೂ ದೂರವಲ್ಲ, ದೂರವೂ ಆಗಿರುವುದಿಲ್ಲ. ಹಾಗಿದ್ದ ಮೇಲೆ ಶ್ಮಶಾನ ಹೇಗೆ ದೂರವಿರಲು ಮತ್ತು ಭಯ ಹುಟ್ಟಿಸಲು ಸಾಧ್ಯ.

ಒಮ್ಮೊಮ್ಮೆ ನನ್ನ ಮನೆಯಲ್ಲೇ ಮಲಗಿದ್ದಾಗ ಇರುಳಿನಲ್ಲಿ `ಈ ಮಣ್ಣಿನ ಮೇಲೆ ಕಟ್ಟಿದ ಮನೆಯಲ್ಲಿ ಇಂದು ನಾನಿದ್ದೇನೆ. ಆದರೆ ಈ ಮಣ್ಣಿನ ಕೆಳಗೆ ಎಷ್ಟೊ ಸಹಸ್ರ ವರ್ಷಗಳಿಂದ ಎಷ್ಟು ಜೀವಗಳು ಮಣ್ಣಾಗಿವೆಯೋ’ ಎಂದು ಎಂದುಕೊಂಡಿದ್ದೇನೆ.  ನನ್ನದೇ ಕೊಠಡಿಯ ಸಹವಾಸಿಯಾಗಿದ್ದ ನನ್ನಮ್ಮ ನನ್ನೆದುರೆ ಜೀವ ಕಳೆದುಕೊಂಡಾಗ ನಾನು ಮನಸಿಗನಿಸಿದ್ದು `ಅವರ ಕೊನೆಯ ಉಸಿರು ನನ್ನ ರೂಮಿನಲ್ಲೇ ಆಶೀರ್ವಾದ ರೂಪದಲ್ಲಿ ಅಲೆದಾಡುತ್ತಿದೆ’ ಎಂದು. ಭಯ ಎನ್ನುವ ಮಾನಸಿಕ ಹೊಡೆತದಿಂದ ಪಾರಾಗುವ ದಾರಿಯ ಅರಿವು ಹುಟ್ಟಿದರೆ ಭಯವಿರಲು ಸಾಧ್ಯವೆ? ಹೀಗೆ ಭಯದೂರಳಾದ ನಾನು ಸಾತ್ತಾಲಿನಲ್ಲಿ ಅಲ್ಲೇ ಕುಳಿತು ಚಿತ್ರ ತೆಗೆದೆ, ಇನ್ನೂ ತೆಗೆಯಲು ಕಾಯುತ್ತಿದ್ದೇನೆ.

ಬಹುಶಃ ರಾಜಾಸ್ಥಾನದ Desert national Parkಗೆ ಹೋಗುವ ಪ್ರವಾಸ ಮೊದಲೇ ಗೊತ್ತು ಪಡಿಸಿಕೊಳ್ಳದಿದ್ದರೆ ಇನ್ನೂ ನಾಲ್ಕೈದು ದಿನ ಸಾತ್ತಾಲಿನಲ್ಲೇ ಇದ್ದು ಬಿಡುತ್ತಿದ್ದೆನೇನೋ. ಆದರೆ ಗ್ರೇಟ್ ಇಂಡಿಯನ್ ಬಸ್ಟರ್ಡ್ ಕರೆಯುತ್ತಿತ್ತು, ಸಾತ್ತಾಲ್ ಬಿಡಲೇಬೇಕಿತ್ತು. ಮನೆಗೆ ಮರಳಲೂ ಪಂಥನಗರದಿಂದಲೇ ದೆಹಲಿಗೆ ಫ್ಲೈಟ್ ಬುಕ್ ಮಾಡಿಕೊಂಡಿದ್ದೆ. ಸರಿಯಾದ ಸಮಯಕ್ಕೆ ಸಾತ್ತಾಲಿನಿಂದ ಹೊರಟು ಪಂಥನಗರ ತಲುಪಿಯೂ ತಲುಪಿದೆ. ಆದರೆ ಅಲ್ಲಿಗೆ ದೆಹಲಿಗೆ ಹೋಗುವ ಆ ಪುಟ್ಟ ವಿಮಾನ ಬಂದಿರಲಿಲ್ಲ. ಸಮಯ ದಾಟಿದರೂ ಲೋಹದ ಹಕ್ಕಿಯ ಸುಳಿವಿಲ್ಲ. ನನಗಿದ್ದ ಆತಂಕ ಪಂಥನಗರದ್ದದಲ್ಲ, ದೆಹಲಿಯದ್ದು. 5.45ಕ್ಕೆ ದೆಹಲಿಗೆ ಲಂಡನ್ನಿನಿಂದ ಬಂದು ಬೆಂಗಳೂರಿಗೆ ಹೋಗುವ ವಿಮಾನ ಕೈತಪ್ಪಿದರೆಂದು. ಕೊನೆಗೂ ಡೆಹ್ರಾಡೂನಿನಿಂದ ಅಲೆಯೆನ್ಸ್ ವಿಮಾನ ಪಂಥನಗರಕ್ಕೆ ಬಂದು ಹೊರಡುವಾಗ ನಾಲ್ಕೂವರೆ. ದೆಹಲಿಯಲ್ಲಿ ಇಳಿದು ಮತ್ತೊಮ್ಮೆ ಚೆಕ್‌ ಇನ್ ಆಗಿ ಹೊರಡಲು ಇಪ್ಪತ್ತು ನಿಮಿಷವೂ ಇರಲಿಲ್ಲ. ವಿಮಾನ ಕಂಪನಿಯೆ ತಡ ಮಾಡಿದ್ದರಿಂದ ಅವರ ಕಡೆಯವರೆ ನಡೆಯಲಾರದ ನನ್ನನ್ನು ಬಹುತೇಕ ಓಡಿಸಿಕೊಂಡು ಎಲ್ಲ ಹಂತ ಮುಗಿಸಿ ವಿಮಾನದೊಳಕ್ಕೆ ಕಾಲಿಟ್ಟಾಗ ಆರು ಹತ್ತು. ಒಳಸೇರಿದ ಕೂಡಲೇ ಬಾಗಿಲು ಮುಚ್ಚಿದರು, ವಿಮಾನ ಆಕಾಶಕೇರಿತು. ಐದೂ ಮುಕ್ಕಾಲಿಗೆ ಹೊರಡಬೇಕಾಗಿದ್ದ ವಿಮಾನ ನನಗಾಗಿ ಇಪ್ಪತ್ತೈದು ನಿಮಿಷಗಳ ಕಾಲ ಕಾಯ್ದು ಹೊರಟಿತು. ಆಹಾ! ನಾನೂ ವಿ.ಐ.ಪಿಯಾಗಿಬಿಟ್ಟೆ ಎನಿಸಿತು ಆ ದಿನ. ಒಂದು ಇಂಟರ್ನ್ಯಾಷನಲ್ ಫ್ಲೈಟ್ ನನ್ನಂತಹವಳಾಗಿ ಕಾಯುವುದೆಂದರೆ, ಏನ್ ಕಡಿಮೆನಾ ನಾವು.

ಗೊತ್ತಿಲ್ಲ, ಮುಂದಿನ ಸಾತ್ತಾಲ್ ಯಾತ್ರೆಗೆ ಏನೇನು ಅವಸ್ಥೆಗಳಿರುತ್ತವೋ. ಆದರೂ ಒಮ್ಮೆ ಸಾತ್ತಾಲ್ ಸೇರಿದ ಕೂಡಲೇ ಎಲ್ಲಾ ಮರೆತು ಕ್ಯಾಮೆರಾ ರೆಡಿ ಮಾಡಿಕೊಂಡು ಹಕ್ಕಿ ಹಿಂದೆ ಅಲೆಯುತ್ತೇನೆ, ನಾನೂ ಹಕ್ಕಿಯಾಗಿ. ಬದುಕೆಂದರೆ ಇದೇ ತಾನೆ. ಖುಷಿಯಾಗಿದ್ದರೆ ಕಷ್ಟಗಳೂ ಕಷ್ಟವೆನಿಸುವುದಿಲ್ಲ. ಹಗುರ ಮಾಡಿಕೊಳ್ಳುವ ಬಗೆ ಕಲಿಯದಿದ್ದರೆ ಬದುಕು ಬಲುಭಾರವಾಗಿ ಬದುಕೆ ಬಲಿಯಾಗುತ್ತದೆ ಅಲ್ಲವೆ. `ಈ ತುಂಬಿ ಬಾಳು ತುಂಬಿರುವ ತನಕ ತುಂತುಂಬಿ ಕುಡಿಯಬೇಕು’ ಎಂದು ಬೇಂದ್ರೆ ಹೇಳಿದ್ದನ್ನೆ `ಯಾವಾಗೋ ಹಕ್ಕಿ ಕೂಗಿಹುದು, ಏಳು ತಡವೇಕೆ ಲೀಲಾ ಕೇಳು. ಕಾಲ ಸಾಗುವ ತನಕ ಹಕ್ಕಿ ಹಕ್ಕಿ ಹಿಡಿಯಬೇಕು’ ಎಂದು ಹೇಳಿಕೊಳ್ಳುತ್ತಲೇ ಇರುವೆ.

‍ಲೇಖಕರು avadhi

February 12, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: