
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.
ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.
ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್ ಅಂಡ್ ಎರರ್ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.
ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.
2
ಕ್ಯಾಮೆರಾ ಬಂತು… ಲೆನ್ಸುಗಳೂ ಬಂದವು… ರೆಡಿ ಗೆಟ್‌ಸೆಟ್ 1…2…3… ಆದರೆ ಎಲ್ಲಿಗೆ, ಎಲ್ಲೆಲ್ಲಿಗೆ. ಮಂಡ್ಯದಲ್ಲಿ ಇಂತಹ ಹಕ್ಕಿ ಪ್ರಾಣಿಗಳ ಚಿತ್ರ ತೆಗೆಯುವ ಹುಚ್ಚಿನ ಜನ ಇದ್ದಾರೋ ಏನೋ ಆಗ ನನಗಂತೂ ಗೊತ್ತಿರಲಿಲ್ಲ, ಈಗಲೂ ಗೊತ್ತಿಲ್ಲ. ಇನ್ನು ನನ್ನ ಲಿಂಗಿಯವರು ಯಾರೂ ಇದ್ದಂತಿರಲಿಲ್ಲ. ವೃತ್ತಿ ಸಂಬಂಧಿತ ಜೀವನದಲ್ಲಿ ಪರಿಚಿತಳಾದ ನಂತರದಲ್ಲೂ ಸಂಬಂಧ ಉಳಿದ ಬೆರಳೆಣಿಕೆಯಷ್ಟು ಬಂಧಗಳಲ್ಲಿ ಒಬ್ಬಳಾದ ನನ್ ಫ್ರೆಂಡ್ ಯಾನೆ ಮಗಳಂತಹ ಲತಾಳಿಗೆ ಕೇಳಿದೆ ಎಲ್ಲಾದರೂ ಹೋಗುವಾ ಎಂದು. ಅವಳಿಗೆ wild photography ಟೂರ್ ಮಾಡಿಸುವ ಗುಂಪಿನ ಹುಡುಗ ಕೌಶಿಕ್ ಗೊತ್ತಿದ್ದ. ರೈಟ್. ಎಲ್ಲಿಗೆ ಗೊತ್ತಾ, ಹೊರಟಿದ್ದು ಬಂಡೀಪುರಕ್ಕೆ. ಮೈಸೂರಿಗೆ ಹೋಗಿ ಅವಳೊಡನೆ ಬಂಡೀಪುರಕ್ಕೆ ಒಂದು haltನ ಎರಡು ಸಫಾರಿಯ ಟೂರಿಗೆ ಹೊರಟೆ. ಬಂಡೀಪುರಕ್ಕೆ ಹಿಂದೊಮ್ಮೆ ಹೋಗಿದ್ದೆ. ಹೇಗೆ ಗೊತ್ತಾ? ಮಂಡ್ಯದ ಕಾಲೇಜಿನ ಹುಡುಗಿಯರು ಹಾಕಿದ್ದ ಊಟಿ ಟೂರಿಗೆ ಕರೆದುಕೊಂಡು ಹೋಗಿದ್ದಾಗ ದಾರಿಯಲ್ಲಿ ಬಂಡೀಪುರದಲ್ಲಿ ಇಳಿದು ತಿಂಡಿ ತಿಂದದ್ದು ಬಿಟ್ಟರೆ ಏನೂ ನೋಡಿರಲೇ ಇಲ್ಲ. ಅಷ್ಟು ಮಾತ್ರದ ಬಂಡೀಪುರ ಯಾತ್ರೆ ಅದು. ಅದಕ್ಕೂ ಹಿಂದೆ ನನ್ನ ಕುಟುಂಬದವರೊಡನೆ ಊಟಿಗೆ ಹೋಗುವಾಗ ಒಂದು ರಾತ್ರಿಯ ಹಾಲ್ಟ್ ಪ್ರೋಗ್ರಾಂ.
ಆದರೆ ಈಗ ಹೊರಟಿದ್ದು ಮೈಯೆಲ್ಲಾ ಕಣ್ಣಾಗಿ ಹುಡುಕಾಟದ ತವಕದಲ್ಲಿ. ಬಂಡೀಪುರ ತಲುಪುವ ಮುನ್ನ ಸ್ವಲ್ಪ ಹೊತ್ತು ಹಿಮವದ್‌ಗೋಪಾಲನಿಗೂ ಭೇಟಿ ಕೊಟ್ಟು ಹಲೋ ಹೇಳೋಣ ಎಂದು ಹಂಗಳದ ದಾರಿ ಹಿಡಿದ ಮೇಲೆ ಗೊತ್ತಾಯ್ತು, ಖಾಸಗಿ ವಾಹನಗಳಿಗೆ ಬೆಟ್ಟದ ಮೇಲೆ ಪ್ರವೇಶವಿಲ್ಲ ಎಂದು. ನಮ್ಮ ಗಾಡಿ ನಿಲ್ಲಿಸಿ ಸರ್ಕಾರಿ ವಾಹನ ಹತ್ತಿ ಹೋಗಿಬರುವಷ್ಟು ಸಮಯ ಇರಲಿಲ್ಲ. ಆದ್ದರಿಂದ ಹಂಗಳದ ಕೆರೆಯ ಬಳಿ ಸ್ವಲ್ಪ ತಳುವೋಣ ಎಂದು ಉಪಾಯ ಮಾಡಿದರೆ ಅರಣ್ಯರಕ್ಷಕ ಮುಲಾಜಿಲ್ಲದೆ ಇಲ್ಲೆಲ್ಲಾ ಕಾಡು ಪ್ರಾಣಿಗಳು ಬರುತ್ತವೆ, ನೀವು ಹೊರಗೆ ಹೋಗಿ ಎಂದು ನಮ್ಮನ್ನು ಅಕ್ಷರಶಃ ಓಡಿಸಿಬಿಟ್ಟ. ಓಡಿಸುವ ಮುನ್ನ ಆಚೀಚೆ ಅಡ್ಡಾಡುತ್ತಿದ್ದಾಗ ಮೊದಲ ಬಾರಿಗೆ ನೆಲಕುಟುಕ ಯಾನೆ ಚಂದ್ರಮುಕುಟವನ್ನು ನೋಡಿದೆ. ಅದರ ಬಣ್ಣದ ಸೊಗಸು, ತಲೆಯ ಕಿರೀಟ, ನೀಳ ಕೊಕ್ಕು… ಆಕರ್ಷಕ. ಇವತ್ತಿನವರೆಗೂ ಹತ್ತಾರು ಸಲ ತೆಗೆದಿದ್ದರೂ ಮತ್ತೆ ಮತ್ತೆ ತೆಗೆಯುವಂತೆ ಚೋದಿಸುತ್ತಲೇ ಇದೆ. ಇನ್ನುಳಿದಂತೆ ನಾಲ್ಕಾರು ಹಕ್ಕಿಗಳನ್ನು ನೋಡಿ ಅಲ್ಲಿಂದ ಹೊರಟೆವು. ಸಮಯಕ್ಕೆ ಸರಿಯಾಗಿ ಬಂಡೀಪುರಕ್ಕೆ ತಲುಪಿಕೊಂಡೆವು ಬಹಳ ಸಂಭ್ರಮದಿಂದ. ಪ್ಯಾಕೇಜಿನ ಭಾಗವಾಗಿ ಊಟ ಕೊಡಿಸಿದರು, ಮಾಡಿದೆವು. ಬಳಿಕ ನಾನೊಂದು ಕ್ಯಾಮೆರಾ ಹಿಡಿದು ಲತಾಳಿಗೂ ಒಂದು ಕ್ಯಾಮೆರಾ ಕೊಟ್ಟೆ, ಕಂಡದ್ದನ್ನು ನೀನೂ ತೆಗೆಯೋ ಎಂದು. ಮೊದಲ ಬಾರಿಗೆ ದೊಡ್ಡ ಕ್ಯಾಮೆರಾ ಹಿಡಿದ ಅವಳಿಗೆ ಕ್ಯಾಮೆರಾದಿಂದ ಫೋಟೋ ತೆಗೆಯುವ ಬದಲು ದೊಡ್ಡ ಕ್ಯಾಮೆರಾ ಜೊತೆ ತನ್ನ ಫೋಟೋ ತೆಗೆಸಿಕೊಳ್ಳುವುದರ ಕಡೆಗೆ ಗಮನ ಹೆಚ್ಚಿತ್ತು. ಮೊದಲಾಗಿದ್ದರೆ ನಾನು ಅದೇ ಮಾಡುತ್ತಿದ್ದೆನೇನೊ.

ಸಫಾರಿಗೆ ಸ್ವಲ್ಪ ಸಮಯವಿತ್ತು. ಮಳೆ ಬಿಡದೆ ಹನಿಯುತ್ತಿದ್ದ ಕಾರಣ ಅಲ್ಲೇ ಕುಳಿತು ಅಡ್ಡಾಡುತ್ತಿದ್ದ ಜಿಂಕೆಗಳಿಗೆ ಗುರಿಯಿಟ್ಟೆ. ಮಳೆ, ಮಬ್ಬು ಕವಿದ ವಾತಾವರಣ ಇದ್ದರೂ ಕೆಲವು ಜಿಂಕೆಗಳು ಕ್ಯಾಮೆರಾದೊಳಗೆ ಕುಣಿದಿಳಿದವು. ಅದರಲ್ಲೂ ಮಳೆಯಲ್ಲಿ ಮರದ ಕೊಂಬೆ ಎಳೆದೆಳೆದು ಎಲೆ ಕೀಳುವಾಗ ಜಿಂಕೆ ಎರಡು ಕಾಲೆತ್ತಿ ನಿಂತಿದ್ದ ಭಂಗಿ, ಎಲೆಗಳಿಂದ ಉದುರುತ್ತಿದ್ದ ಮಳೆಹನಿಗಳು ಜಯಂತ ಕಾಯ್ಕಿಣಿ ರಚಿಸಿದ ಸಿನಿಮಾ ಹಾಡೊಂದನ್ನು ನೆನಪಿಸುತ್ತಿತ್ತು. `ಮಳೆ ನಿಂತುಹೋದ ಮೇಲೆ ಹನಿಯೊಂದು ಮೂಡಿದೆ, ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ. ಹೇಳುವುದು ಏನೋ ಉಳಿದು ಹೋಗಿದೆ. ಹೇಳಲಿ ಹೇಗೆ ತಿಳಿಯದಾಗಿದೆ.’ ನಾನೂ ಹೇಳುವುದು ಏನೂ ಇರಲಿಲ್ಲ. ಗುನುಗಿಕೊಳ್ಳುತ್ತಾ ಚಿತ್ತಕ್ಕೆ, ಬಿಂಬಗ್ರಾಹಕಕ್ಕೆ ಚಿತ್ರಕ್ಕೆ ಬರಿಸಿಕೊಂಡೆ ಅಷ್ಟೆ.
ಬಂಡೀಪುರದ ಮಂಗಗಳಂತೂ ಮನುಷ್ಯರ ಬಗ್ಗೆ ತೃಣವಿರಲಿ ಅಣುಮಾತ್ರವೂ ಭಯಭಕ್ತಿ ಇಲ್ಲದೆ ಸನಿಹದಲ್ಲಿ ಸುಳಿದು ಮಂಗನಾಟದಲ್ಲಿ ಮುಳಗಿದ್ದವು. ನಿಲ್ಲಿಸಿದ್ದ ಗಾಡಿಗಳ ಮೇಲೆ ಸವಾರಿ ಮಾಡಿ ಅದರ ಬ್ಯಾಗಿನೊಳಕ್ಕೆ ತಲೆ ಹಾಕಿ ತಡಕಾಡುತ್ತಿದ್ದವು. ಬೇರೆ ಪ್ರಾಣಿ ಪಕ್ಷಿಗಳು ಕಾಣದಿದ್ದಾಗ ಕಣ್ಣಿಗೆ ಬಿದ್ದ ಮಂಗಗಳೆ ಕ್ಯಾಮೆರಾದೊಳಗೆ ಬಂದು ಸೇರಿಕೊಂಡವು. ಎಲ್ಲಿಗೆ ಹೋದರೂ ಚೋಪ್ತಾ, ಸತ್ತಾಲ್, ಅಂಡಮಾನ್ ಹೀಗೆ ಎಲ್ಲಿಗೆ ಹೋದರೂ ಮಂಗಗಳನ್ನು ಕಂಡಕೂಡಲೇ ಕ್ಯಾಮೆರಾ ಪಟಾಪಟ್ ಎಂದು ಸಿದ್ಧವಾಗುತ್ತದೆ ಸೆರೆ ಹಿಡಿಯಲು. ಎಷ್ಟಾದರೂ ಪೂರ್ವಜರಿಗೆ ತೋರಿಸುವ ಗೌರವವೂ ಕಾರಣವಿರಬೇಕು. ಮರದ ಮೇಲೆ, ಮಣ್ಣಿನ ಮೇಲೆ ನನಗೆ lifer ಆದ Brahminy stralingಗಳು ಕಾಣಸಿಕ್ಕವು. ಆಗಿನ್ನೂ ಧರಾಶಾಯಿಯಾಗಿ ಫೋಟೊ ತೆಗೆಯುವ ಕಲೆ ಪರಿಚಿತವಿರದ ಕಾರಣ ನಿಂತೆ ಕ್ಲಿಕ್ಕಿಸಿದೆ ಪೆಕರ ಬಕರಾ ತರಕ್ಕೆ. ಅವು ಒಂದು ತರಹಕ್ಕೆ ಫೋಟೊ ಅನ್ನಿಸಿಕೊಂಡವು ತೆಗೆದ ಕಾರಣಕ್ಕೆ, ಹಕ್ಕಿ ಚಂದಕ್ಕೆ ಬಾರದೇ ಇದ್ದರೂ.
ನಮ್ಮ ಪ್ರವಾಸದ ಆಯೋಜಕರು ಟಿಕೆಟ್ ಕೊಂಡುತಂದು ನಮ್ಮನ್ನೆಲ್ಲಾ ಸಫಾರಿಯ ವ್ಯಾನಿಗೇರಿಸಿದರು. ಗಾಡಿ ನೋಡಿಯೇ ತಥ್ ಪ್ರಥಮ ಚುಂಬನಂ ದಂತಭಗ್ನಂ. ಕಿಟಕಿಯ ಗಾಜನ್ನೇ ಪೂರ್ತಾ ತೆಗೆಯಲಾಗದ ಗಾಡಿಯಿಂದ ಯಾವ ಹಕ್ಕಿ ನೋಡೀರಿ, ಚಿತ್ರ ತೆಗೆದೀರಿ. ಅಂತೂ ಇಂತೂ ಕಿಟಕಿಯಲ್ಲಿ ಕ್ಯಾಮೆರಾ ಇಟ್ಟು ಕುಳಿತೆ ನಾನು. ಇಡೀ ಒಂದೂವರೆ ಗಂಟೆಯ ಸಫಾರಿಯಲ್ಲಿ ಎಲ್ಲರ ಗುರಿ ಹುಲಿಯ ಮೇಲೆ. ದಾರಿಯಲ್ಲಿ ಜಿಂಕೆ, ನವಿಲು ಸಿಕ್ಕಿದರೆ ಫೆ ಫೆ ಎನ್ನುವ ತೀವ್ರ ತಾತ್ಸಾರದ ನೋಟ. ಹೋಗಲಿ ಗಾಡಿಯನ್ನಾದರೂ ನಿಲ್ಲಿಸುತ್ತಾನೆಯೇ, ನಿಧಾನಿಸುತ್ತಾನೆಯೇ ಎಂದರೆ ಅದೂ ಇಲ್ಲವೇ ಇಲ್ಲ. ʼನವಿಲಿದೆ ನಿಲ್ಲಿಸಿʼ ಎಂದರೆ ಇದ್ಯಾವ ಸೀಮೆಯದ್ದಿದು ಎನ್ನುವಂತಹ ಜುಗುಪ್ಸೆಯ ನೋಟ ನನ್ನತ್ತ ಬೀರೋದೆ… ಮಾತೆತ್ತಿದರೆ ಪ್ರಿನ್ಸ್… ಪ್ರಿನ್ಸ್… ಪ್ರಿನ್ಸ್ ನನ್ ಮಗನದ್ದೇ ಗುಣಗಾನ… ಸ್ತೋತ್ರ ಪಠಣ. ಹುಲಿಯನ್ನು ನೋಡಲೆಂದೆ ಹುಟ್ಟಿದವರು ತಾವನ್ನೋ ಹಾಗೆಯೇ ಆಡುತ್ತಿದ್ದರು ಗಾಡಿ ಒಳಗಿದ್ದ ಸಕಲ ಸರ್ವರೂ… ಇಂತಹವರ ಸಾವಾಸದಲ್ಲಿ ಹಕ್ಕಿ ಎಲ್ಲಿ, ಚಿತ್ರವೆಲ್ಲಿ. ಬಂಡೀಪುರದ ಕಾಡಿನಲ್ಲಿ ಹಕ್ಕಿ ಚಿತ್ರ ತೆಗೆಯುತ್ತೇನೆಂಬ ಭ್ರಮೆ ಇದ್ದರೆ ಅದಕ್ಕೆ ಮೊದಲ ಕೊಡಲಿಪೆಟ್ಟು ಹೀಗೆ ಬಿದ್ದಿತು.

ಸಫಾರಿ ಹೋಗುತ್ತಿದ್ದಾಗ ಉಳಿದ ಡ್ರೈವರುಗಳು ಫೋನಿನಲ್ಲಿ ಮಾತಾಡಿಕೊಂಡರು, ಹುಲಿ ಕಾಣಿಸಬಹುದೆಂಬ ಸುದ್ದಿ ಕಿವಿಗೆ ಬಿದ್ದು ಒಂದು ಕಡೆ ಗಾಡಿ ನಿಲ್ಲಿಸಿಕೊಂಡರು. ಎಲ್ಲರ ಕಣ್ಣು ಹುಲಿಯ ನಿರೀಕ್ಷೆಯಲ್ಲಿದ್ದರೆ, ನನ್ನ ಕಣ್ಣು ಬೇರೆಡೆ ಕೀಲಿಸಿತು. ಸ್ವಲ್ಪ ದೂರದ ಮರದ ಕೊಂಬೆಯಲ್ಲಿ, ಕಟ್ಟಿದ ಚಂದದ ಪುಟ್ಟ ಬಟ್ಟಲಾಕಾರದ ಗೂಡಿನಲ್ಲಿ ನನ್ನ ಪ್ರೀತಿಯ Asian Paradise flycatcher ಕಾವು ಕೊಡುತ್ತಾ ಕುಳಿತದ್ದು ಕಾಣುತ್ತಿತ್ತು. ಕಣ್ಣಿನೊಡನೆ ಮನಸ್ಸು ಅಲ್ಲಿಯೇ ನಾಟಿಹೋಗಿತ್ತು. ಗಾಡಿಯಲ್ಲಿದ್ದ ಸಹಸಫಾರಿಗರು ಅದು ಸಾಮಾನ್ಯದಲ್ಲಿ ಸಾಮಾನ್ಯ ಎನ್ನುವಂತೆ ನಿರ್ಲಕ್ಷಿಸಿದ್ದು ಕಂಡು ಅವರೆಲ್ಲರ ಬಗ್ಗೆ ಅಸಮಾಧಾನ ಹುಟ್ಟಿಬಿಟ್ಟಿತು. ಸುಮಾರು ಸಮಯ ಹುಲಿಗಾಗಿ ನಿಂತಿದ್ದ ಗಾಡಿ ನಿಧಾನವಾಗಿ ಚಲಿಸಿತೇ ವಿನಾ ಹಕ್ಕಿ ಇದ್ದಲ್ಲಿ ಕ್ಷಣಕ್ಕೂ ನಿಲ್ಲಿಸುವ ಸೂಚನೆ ಕಾಣದೆ ಕೊನೆಗೆ ಗೋಗರೆದ ಬಳಿಕ ಗಾಡಿ ನಿಂತಿತು. ದೂರದಿಂದ ಸ್ವಲ್ಪವಾದರೂ ಕಾಣುತ್ತಿದ್ದ ಗೂಡು ಹತ್ತಿರಕ್ಕೆ ಬಂದಾಗ ಕಿಟಕಿಯ ಗಾಜೇ ಗೂಡು ಕಾಣಲು ಅಡ್ಡಿಯಾಯಿತು. ಅದೇ ಕೊನೆ, ಅದೇ ಮೊದಲು ನನಗೆ ಈ ರಾಜದಂಡೆಯ ಗೂಡು ಕಂಡದ್ದು. ಹೋದಲ್ಲೆಲ್ಲಾ ಆ ಪುಟ್ಟಬಟ್ಟಲು ಹುಡುಕುತ್ತಿದ್ದೇನೆ. ಗೂಡು-ಮರಿಗಳನ್ನು ನಾನು ಪೋಸ್ಟಿಸುವುದು ಕಡಿಮೆ. ಅದರ ಹಕ್ಕಿಗಳು ತಮ್ಮ ಮರಿಗಳನ್ನು ಅಕ್ಕರೆಯಿಂದ ಪೊರೆಯುವ ನೋಟಕ್ಕಾದರೂ ಗೂಡುಗಳನ್ನು ನೋಡುತ್ತೇನೆ.
ವರ್ಷರಾಯನ ಕಾಟದ ನಡುವೆ ಮೊದಲ ಸಫಾರಿ ಮುಕ್ತಾಯ ಕಂಡಿತು. ಕ್ಯಾಮೆರಾದೊಳಕ್ಕೆ ಬಂದ ಚಿತ್ರಕ್ಕಿಂತ ಆಚೆ ಉಳಿದವೇ ಹೆಚ್ಚು. ಕೆಲವು ಕಾಡೆಮ್ಮೆಗಳು ಕಾಣಿಸಿದವು. ಆನೆಯೊಂದು ಕಾಣಿಸಿತು. ಕ್ಯಾಮೆರಾ ಸ್ಟೆಡಿ ರೆಡಿ ಎನ್ನುವಷ್ಟರಲ್ಲಿ ಗಣಗಣ ಘಂಟೆ ಬಾರಿಸಿತು. ಆಗ ಅರ್ಥವಾಯಿತು ಅದು ಪಳಗಿಸಿದ ಆನೆ ಎಂದು. ಆದರೂ ಎರಡು ಫೋಟೋ ಹಿಡಿದೆ, ಎಷ್ಟಾದರೂ ಆನೆ ಅಲ್ಲವೆ. ನವಿಲು ಎದುರು ಬಂದರೂ ಸರಿಯಾಗಿ ನಿಲ್ಲಿಸದ ಕಾರಣ ಸುಮಾರಾಗಿ ಬಂತು ಎನ್ನುವುದಕ್ಕಿಂತ ಮಳೆಯಲ್ಲಿ ತೊಯ್ದು ತೊಪ್ಪಡಿಯಾಗಿದ್ದ ಗರಿ ಕಿರೀಟಗಳ ಕಿರೀಟಿಯನ್ನು ತೆಗೆದೆ. ಅವತ್ತು ನೋಡಿ, ನವಿಲಿನ ಬಗ್ಗೆ ಹುಟ್ಟಿದ ವ್ಯಾಮೋಹ ನಂತರ ನವಿಲ ಸಾವಿರಾರು ಚಿತ್ರಗಳನ್ನು ತೆಗೆಯೋ ಮೂಲಕ ತಣಿಯಲಾರಂಭಿಸಿತು. ನವಿಲ ಮೇಲಿನ ಮೋಹವೋ.. ಗರಿಯ ಮೇಲಿನ ಮೋಹವೋ… ಗರಿಧಾರಿಯಾದ ಗಿರಿಧಾರಿಯ ಮೋಹವೋ ಇನ್ನೂ ತಣಿದಿಲ್ಲ. ಕೆಲವರು ಲೀಲಾ ನವಿಲು, ನವಿಲಿನ ಲೀಲಾ ಎಂದು ಕೆಣಕಿದರೂ ಆ ಮಾತನ್ನು ನನ್ನ ಪಾಲಿನ ದೊಡ್ಡ ಕಿರೀಟ ಎಂದೇ ಮುಡಿಗೆ ಏರಿಸಿಕೊಂಡಿರುವೆ. ಅಂತೂ ಇಂತೂ ಬಂಡೀಪುರದಲ್ಲಿ ಒಂದು ದಿನ ಮುಗಿದೇ ಹೋಯ್ತು.
ಮರುದಿನ ಮತ್ತೆ ಬೆಳಗಿನ ಸಫಾರಿ, ಇದ್ದವರಿಗೆಲ್ಲ ಮತ್ತೆ ಹುಲಿಯದ್ದೇ ಹುಡುಕಾಟ. ನನಗೋ ಸರಿಯಾಗಿ ಹಕ್ಕಿಗಳೂ ಸಿಗಲಿಲ್ಲ ಎಂಬ ತಹತಹಿಕೆ. ಕಾಡಿನ ಜಾಡಿನಲ್ಲಿ ಸುತ್ತಿದ ವ್ಯಾನು ಸ್ವಸ್ಥಾನಕ್ಕೆ ಬಂದಿತು. ಕೆಳಗಿಳಿದೆ, ಬಂಡೀಪುರದ ಮೋಹವೂ ಅರ್ಧದಷ್ಟು ಕೆಳಗಿಳಿಯಿತು, ಬಂಡೀಪುರದ ಬಂಡಿಯ ಕೀಲು ನನ್ನ ಬಗಲಿನಿಂದ ಸರಿದು ಒಂದು ಚಕ್ರ ಕಳಚಿತು, ಯುಗಗಳ ಅಂತ್ಯದಲ್ಲಿ ಧರ್ಮದ ಚಕ್ರ ಒಂದೊಂದೇ ನೆಲಬಿಟ್ಟು ಮೇಲೆದ್ದಂತೆ. ಆ ಮಧ್ಯಾಹ್ನ ಬಂಡೀಪುರ ಅಭಯಾರಣ್ಯ ದಾಟಿ ಮೂವತ್ತು ಕಿ.ಮೀ ಮುಂದೆ ಹೋದೆವು, ನನ್ನ ಕಣ್ಣೆಲ್ಲಾ ಹಕ್ಕಿ ಕಂಡೀತೆ, ನಿಲ್ಲಿಸಬಹುದೇ ಎಂದು. ಆದರೆ ಹೋದದ್ದು ಹಕ್ಕಿಗಾಗಿಯಲ್ಲ, ಅಲ್ಲೊಂದೆಡೆ ಊಟ ಮಾಡಲು ಅಷ್ಟೆ. ನೋಟಕ್ಕೆ ಹಕ್ಕಿಯೂ ಸಿಗಲಿಲ್ಲ, ಉದರದ ಉರಿ ತಣಿಸುವ ಊಟವೂ ಸಿಗಲಿಲ್ಲ. ಹುಡುಕಿದ್ದರೆ ಹಕ್ಕಿ ಸಿಗುತ್ತಿತ್ತೇನೋ, ಆದರೆ ಜೊತೆಯಲ್ಲಿದ್ದವರು ಹುಡುಕುವ ಗರ್ಜಿನಲ್ಲಿರಲಿಲ್ಲ. ಮರಳಿದೆ ಮಂಡ್ಯಕ್ಕೆ ಹಕ್ಕಿ ಚಿತ್ರವಾಗದ ನೋವು ನಿರಾಶೆಗಳಲ್ಲಿ.

ಆದರೂ ಮೋಹ ಬಿಡುವುದು ಸುಲಭವೆ? ಮನದ ಮುಂದಣ ಆಸೆಯೇ ಮಾಯೆ ಅಲ್ಲವೆ. ಈ ಮಾಯಾಪಾಶ ಬಿಡಿಸಿಕೊಳ್ಳಲಾರದೆ ಮತ್ತೆ ಬಂಡೀಪುರಕ್ಕೆ ಹೋದೆ, ಅದೇ ಗುಂಪಿನ ಜೊತೆ. ಎರಡನೆಯ ಸಲ ಹೋದಾಗ ಕಾಡಿನಂಚಿನಲ್ಲಿದ್ದ ಟ್ರೈಬಲ್‌ನವರ ಹಬ್ಬ. ಅವರನ್ನೆಲ್ಲ ಅರಣ್ಯ ಇಲಾಖೆಯ ವಾಹನದಲ್ಲಿ ಕಾಡಿನೊಳಗಿದ್ದ ಅವರ ಗುಡಿಗೆ ಒಯ್ದು ಕರೆತರುತ್ತಿದ್ದರು. ಆದ್ದರಿಂದ ಅಂದು ಹೊರಗಿನ ಯಾರಿಗೂ ಸಫಾರಿ ಸವಾರಿ ಇಲ್ಲವೆಂದರು ಇಲಾಖೆಯವರು. ಈ ಸುಖಕ್ಯಾಕೆ ಪ್ರವಾಸ ಏರ್ಪಾಡು ಮಾಡಿದರೆಂದು ಗೊಣಗೊಣಿಸುತ್ತಿದ್ದವರಿಗೆ ಪಕ್ಕದ ಮಧುಮಲೆಯಲ್ಲಿ ಸಫಾರಿಗೆ ಹೋಗೋಣ ಎಂದು ಆಸೆ ತೋರಿಸಿ ಕರೆದುಕೊಂಡು ಹೋದರು. ಎರಡು ಕಡೆ ಸಫಾರಿ ಮಾಡಬೇಕಿದ್ದವರು ಒಂದೇ ಕಡೆಗೆ ಸೇರಿದರೆ ಹೇಗೆ? ಆಸಕ್ತ ಜನರು ಜಾಸ್ತಿ, ಕಾಡೊಳಗೆ ಸುತ್ತಾಡುವ ಅವಧಿ ಕಡಿಮೆ ಮಾಡಿ ಕಾಯ್ದು ಬಸವಳಿದು ಗಾಡಿಯೇರಿ ಸುತ್ತಾಟ ಮುಗಿಸುವ ಹೊತ್ತಿಗೆ ಮುಸ್ಸಂಜೆಯ ಮಬ್ಬು ಕವಿದಿತ್ತು. ಒಂದೆರಡು ಆನೆ ಕಂಡವು, ನೀರಿನಲ್ಲಿ ಸಂಬಾರ ಜಿಂಕೆ, ದಡದಲ್ಲಿ ಒಂದೆರಡು ಕೊಕ್ಕರೆ, ಒಂದು ನವಿಲು.. ಹೀಗೆ ಸಿಕ್ಕಿದವು. ದೂರದಲ್ಲೊಂದು ನೀಲಕಂಠ, ಇತ್ತ ಒಂದು ಕುಟ್ರ. ಊರಿನ ಬಳಿಯೆ ಸಿಗುವಂತಹವು. ಅವಾದರೂ ಒಳ್ಳೆಯ ಷಾಟ್ ಆಗಲಿಲ್ಲ. ಒಂದು ರಾತ್ರಿ ಬಂಡೀಪುರದಲ್ಲಿ ಉಳಿಯಲೇಬೇಕೆಂದು ಬಂದಿದ್ದವಳು ಡ್ರೈವರಿಗೆ ನಡೆ ಊರಿಗೆ ವಾಪಸ್ ಹೋಗೋಣ ಎನ್ನುವಲ್ಲಿಗೆ ಒಂದೇ ಸಫಾರಿಯ ಬಂಡೀಪುರದ ಎರಡನೆ ಯಾತ್ರೆ ಸಂಪನ್ನವಾಯಿತು, ಬಂಡೀಪುರದ ಕನಸಿನ ಇನ್ನೊಂದು ಗಾಲಿಯೂ ಕಳಚಿತು.
ಇಷ್ಟಾದರೂ ಮೋಹ ತೀರದ ಮೋಹ… ಏನೋ ದಾಹ ಏನೋ ಮೋಹ ಎಂದು ನಮ್ಮಣ್ಣಾವ್ರು ಕೆರಳಿದ ಸಿಂಹದಲ್ಲಿ ಹಾಡಿದ ಹಾಗೆ. ಏನಾದರೂ ಸಿಗಬಹುದೆಂಬ ನಿರೀಕ್ಷೆಗಳು ಮೂರನೇ ಪ್ರಯಾಣಕ್ಕೆ ಅನುಗೊಳಿಸಿದವು. ಹೊರಟೂ ಬಿಟ್ಟೆ ಪ್ರವಾಸ ಆಯೋಜಕ ನವೀನ್‌ರಾಜ್ ಜೊತೆಗೆ. ಮೈಸೂರಿನಿಂದ ನನ್ನನ್ನು ಬಂಡೀಪುರಕ್ಕೆ ಕರೆದೊಯ್ದರು. ಈ ಸಲ ಬಂಡೀಪುರದ ಅಂಚಿನ ಖಾಸಗಿ ನೆಲೆಯಲ್ಲಿ ಉಳಿಯಲು ವ್ಯವಸ್ಥೆ ಮಾಡಿದ್ದರು. ಎರಡು ಸಫಾರಿಗಳು, ಕೆಲವು ಆನೆಗಳು, ಹಸಿರು ಬಾಲದ ಕಳ್ಳಿಪೀರ. ಆಹಾ ನನ್ನ ದುರ್ವಿಧಿಯೆ! ಕಳ್ಳಿಪೀರನ ಚಿತ್ರ ತೆಗೆಯಲು ಬಂಡೀಪುರದ ಕಾಡಿಗೆ ಹೋಗಬೇಕೆ ಎಂಬ ಕೀಟಲೆಯ ಪ್ರಶ್ನೆ ಕಾಡಿತು. ನವಿಲು ಬರಲೋ ಬೇಡವೋ ಎಂದು ಅನುಮಾನದಲ್ಲಿ ಇಣುಕಿ ಓಡಿಹೋಯಿತು.
ತಲೆಯ ಮೇಲೆ ಗಾಯಗಳಿದ್ದ ಮರಿಯನ್ನು ಕಣ್ಣೆಚ್ಚರಿಕೆಯ ಕಾವಲಿನಲ್ಲಿ ನೀರಿಗಿಳಿಸಿ, ಏಳಿಸಿ ಜೊತೆಗೆ ಕರೆದೊಯ್ಯುತ್ತಿದ್ದ ವಾತ್ಸಲ್ಯದ ನೋಟ ಮನ ತುಂಬಿತು. ಎದೆಯಲ್ಲಿ ಬೇರುಗಟ್ಟಿದ ವಾತ್ಸಲ್ಯಕ್ಕೆ ಜೀವಿಗಳ ನಡುವೆ ಅಂತರವೆಲ್ಲಿದೆ. ಅತ್ಯಂತ ಬುದ್ಧಿಶಾಲಿ ಎಂದು ತನಗೆ ತಾನೇ ಬೆನ್ನು ತಟ್ಟಿಕೊಂಡ ಮಾನವರಲ್ಲಿರುವ ಒಲವು ವಾತ್ಸಲ್ಯಗಳು ಪ್ರಾಣಿಪಕ್ಷಿ ಪ್ರಪಂಚದಲ್ಲಿ ಕಾಣಸಿಗುವುದಕ್ಕಿಂತ ಅತಿಶಯವಲ್ಲ. ಹಿಡಿಗಾತ್ರದ, ಬೆರಳುದ್ದದ ಹಕ್ಕಿಗಳು ಪುಟ್ಟ ಮರಿಗಳನ್ನು ಜತನದಿಂದ ಕಾಪಾಡಲು ಕಟ್ಟುವ ಗೂಡು, ಅಡಿಗಡಿಗೆ ತಂದು ತಿನ್ನಿಸುವ ಪರಿ, ಮಾನವರದ್ದಕ್ಕಿಂತ ಏನೂ ಕಮ್ಮಿಯದಲ್ಲ. ಪೊರೆಯುವ ಗುಣ ಎಲ್ಲ ಜೀವಿಗಳಲ್ಲೂ ಅಸಾಮಾನ್ಯ.

ಮೂರನೆಯ ಸಲದ ವಸತಿಯ ನೆಲೆಯಲ್ಲಿ sunbirdಗಳು ಸಿಕ್ಕವು. ಅಯ್ಯೋ ದೇವರೇ ಹಕ್ಕಿಗಳಿಲ್ಲದ ಇಂತಹ ಯಾತ್ರೆಯ ಸಹವಾಸವೇ ಬೇಡವೇ ಬೇಡಾ ಅನ್ನಿಸಿ ಮೂರನೇ ಯಾತ್ರೆಯನ್ನು ಮುಕ್ತಾಯ ಮಾಡಿ ಊರು ಸೇರಿ ಬಂಡೀಪುರದ ಮೇಲಿನ ಮೋಹವನ್ನು ಸಂಪೂರ್ಣವಾಗಿ ತೊರೆದೇಬಿಟ್ಟೆ, ಬಿಟ್ಟುಬಿಟ್ಟೆ. ಅಳಿದುಳಿದಿದ್ದ ಗಾಲಿಗಳು ಉರುಳಿಯೇ ಹೋದವು. ಬಂಡೀಪುರದಲ್ಲಿ ಹಕ್ಕಿಗಳು ಇಲ್ಲವೆಂದಲ್ಲ, ನಿಧಾನವಾಗಿ ನೋಡುತ್ತಾ ಹೋದರೆ ಕೆಲವು ಸಿಕ್ಕಾವು. ಆದರೆ ಅವಸರದ ಸಫಾರಿಯಲ್ಲಿ ಸಿಕ್ಕುವುದು ಕಡಿಮೆ. ಸಿಕ್ಕರೂ ಗಾಡಿ ನಿಲ್ಲಿಸುವುದು ಕಡಿಮೆ. ಕಾಡಿನಲ್ಲಿ ಎಲ್ಲೆಂದರಲ್ಲಿ, ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದಿಲ್ಲ, ನಿಲ್ಲಿಸಿ ಇಳಿಯುವಂತಿಲ್ಲ. ಹಕ್ಕಿಗಳು ಒಳಬರುವುದೂ ಇಲ್ಲ. ಅದಕ್ಕಿಂತ ಮಿಗಿಲಾಗಿ ಅಡ್ಡಾದಿಡ್ಡಿಯಾಗಿ ಬೆಳೆದ ಪಾರ್ಥೇನಿಯಂ ಕಾಡಿನಲ್ಲಿ ಪ್ರಾಣಿಗಳಾದ ಹುಲಿ, ಆನೆಗಳೆ ಸರಿಯಾಗಿ ಕಾಣುವುದಿಲ್ಲ ಎಂದ ಮೇಲೆ ಇನ್ನು ಹಕ್ಕಿಗಳ ಪಾಡೇನು? ಪಾಪ ಕಾಡನ್ನು ನೋಡಿಕೊಳ್ಳುವವರು ಆಗಾಗ ಕಳೆ ಕಿತ್ತು ಖಾಲಿ ಮಾಡುತ್ತಾರೆ, ಆದರೆ ಪಾರ್ಥೇನೀಯಂ ಅಸುರ ಅವರ ಶ್ರಮದ ದುಡಿಮೆಗೆ ಮೂರು ಕಾಸಿನ ಮರ್ಯಾದೆ ಕೊಡದೆ ಎದೆಯೆತ್ತರಕ್ಕೆ ಬೆಳೆದು ನಿಂತು ನೀನಾರಿಗಾದೆಯೋ ಹುಲುಮನುಜ ಎಂದೂ ಹುಲ್ಲೂ ಅಣಕಿಸಿ ನಗುವಂತಾಗಿರುವುದೇ ವಿಪರ್ಯಾಸ.
ಎರಡನೆಯ ಬಂಡೀಪುರದ ಪಯಣದ ಆರಂಭಕ್ಕೆ ನಂಜನಗೂಡಿನ ಬಳಿಯ ಹದಿನಾರು ಊರಿನ ಕೆರೆಗೆ ಹೋಗಿದ್ದೆ. ಯಾರೋ ಹೇಳಿದ್ದರು, ಇಲ್ಲಿಗೆ ಬಹುದೂರದ ಮಂಗೋಲಿಯಾದಿಂದ ಪಟ್ಟೆತಲೆಯ ಬಾತುಗಳು ಬಂದೇ ಬರುತ್ತವೆಂದು. ಪಟ್ಟೆತಲೆ ಇರಲಿ ಯಾವ ತಲೆಯ ಬಾತುಗಳೂ ಕಾಣಲಿಲ್ಲ. ಬಂಡೀಪುರಕ್ಕೆ ಹೇಗೂ ಮಧ್ಯಾಹ್ನ ತಲುಪುವುದು ತಾನೇ ಎಂದು ಬೆಳ್‌ಬೆಳಿಗ್ಗೆಯೇ ಎದ್ದು ಮಂಡ್ಯದಿಂದ ಹೊರಟಿದ್ದೆ. ಆದರೆ ಹದಿನಾರು ನಿರಾಶೆಯ ಶಾಪಕ್ಕೆ ತುತ್ತಾಗುತ್ತಿತ್ತು. ಡ್ರೈವರಿಗೆ ನಡೆ ಹೋಗೋಣ… ದಾರಿಯಲ್ಲಿ ಏನಾದರೆ ಕಂಡರೆ ಕಂಡವಕ್ಕೆ ಕಣ್ಣು ಹಾಕೋಣ ಎಂದೆ.
ಕೆರೆಯ ಏರಿ ಇಳಿದು ಇನ್ನೇನು ಗಾಡಿ ಏರಬೇಕು, ಎಲ್ಲಿಂದಲೋ ಹಕ್ಕಿಗಳ ದನಿ ಕೇಳಿಬರುತ್ತಿದೆ ಅನಿಸಿತು. ಕಿವಿ ಚುರುಕಾದವು. ತಲೆಯೆತ್ತಿ ನೋಡಿದರೆ ಆಕಾಶದಗಲಕ್ಕೂ ಹಾರಿ ಬರುತ್ತಿವೆ bar headed goose ಹಿಂಡು. ಮಿಂಚು ಸಂಚರಿಸಿದಂತಾಯ್ತು. ಖುಷಿಯೋ ಖುಷಿ. ಕ್ಯಾಮೆರಾ ಸಮೇತ ಎತ್ತಿದ ತಲೆ ತಗ್ಗಿಸಲಿಲ್ಲ. ಹಕ್ಕಿಯಾನದ ಆರಂಭದಲ್ಲಿ ನನಗೆ ತಲೆಯೆತ್ತಿದರೆ ಕಣ್ಣು ಕತ್ತಲಿಡುತ್ತಿತ್ತು, ವಯಸ್ಸಾಗಿತ್ತಲ್ಲ. ಹಕ್ಕಿ ಅಲೆತಕ್ಕೆ ಇಳಿದ ಮೇಲೆ ಕತ್ತು ಮೇಲೆತ್ತಿ ನೋಡಲೆಂದೇ ಒಂದಿಷ್ಟು neck exercise ಮಾಡಿ ಒಂದು ಹದಕ್ಕೆ ತಂದುಕೊಂಡಿದ್ದೆ.

ನೋಡುತ್ತೇನೆ, ದಿಕ್ಕೆ ಬಸಿರಾಗಿ ಹಡೆದು ಹೊರಬಿಡುತ್ತಿದೆಯೋ ಎಂಬಂತೆ ಸಾಲು ಸಾಲು ಪಟ್ಟೆತಲೆಯ ಬಾತುಗಳು ಬರುತ್ತಲೇ ಇದ್ದವು, ಬಿಟ್ಟ ಬಾಯಿ ಮುಚ್ಚಲೂ ಮರೆತೆಹೋಯಿತು. ಕಣ್ಣು ನೋಡುತ್ತಲೇ ಇತ್ತು, ಕ್ಯಾಮೆರಾ ಕ್ಲಿಕ್ಕಿಸುತ್ತಲೇ ಇತ್ತು. ಆ ದೇವಮಹಾಶಯ ಬಾನಂಗಳದ ದೊಡ್ಡ ಕಾಗದದಲ್ಲಿ ಸತತವಾಗಿ ರುಜು ಮಾಡುತ್ತಲೇ ಇದ್ದ. ಕಾಲೇಜಿನ ಪ್ರಾಂಶುಪಾಲೆಯಾಗಿ ಆಡಳಿತ ಹಿಡಿದಾಗ ಒಮ್ಮೊಮ್ಮೆ ದಿನವೊಂದಕ್ಕೆ 2-3 ಸಾವಿರ ರುಜು ನಾನು ಹಾಕಿದಂತೆ, ಸಾವಿರ ಸಾವಿರ ಸಂಖ್ಯೆಯಲ್ಲಿ ಹಕ್ಕಿಗಳು ಬರುತ್ತಲೇ ಇವೆ. ನಾನು ಮಾತ್ರವೇ ಇರಲಿಲ್ಲ ಅಲ್ಲಿ, ನನ್ನೊಳಗಿನ ಕುವೆಂಪುವೂ ಜೊತೆಗಿದ್ದರು. ಎಷ್ಟಾದರೂ ಈ ಹಕ್ಕಿ ಪಯಣಕ್ಕೆ ಪ್ರೇರಣೆ ನೀಡಿ ಮುನ್ತಳ್ಳಿದವರೆ ಅವರು. ಪ್ರಕೃತಿಯನ್ನು ಪ್ರೀತಿಸಲು, ಮನಸ್ಸನ್ನು ವಿಶಾಲವಾಗಿ ಇರಿಸಿಕೊಳ್ಳಲು ದಾರಿ ತೋರಿದ ದೀಕ್ಷಾಗುರು ಅವರು.
ಇದ್ದಕ್ಕಿದ್ದಂತೆ ಏನೋ ಸದ್ದಾಯಿತು. ಹಕ್ಕಿಯತ್ತಲೆ ನೆಟ್ಟ ನೋಟದ ಧ್ಯಾನಕ್ಕೆ ಭಂಗ ಬಂದಿತು. ತಲೆ ಕೆಳಗಿಳಿಸಿ ತಿರುಗಿ ನೋಡಿದೆ, ಬ್ಯಾಗುಗಳನ್ನು ನೇತು ಹಾಕಿಕೊಂಡ ಟಿ.ವಿ.ಎಸ್ ಗಾಡಿ ಏರಿ ಕೆಳಗೆ ನಿಂತಿತು. ಅದರಿಂದಿಳಿದ ಠೊಣಪನೊಬ್ಬ ನೋಡ ನೋಡುತ್ತಿದ್ದಂತೆ ಒಂದು ಕಲ್ಲು ತೆಗೆದ, ಮೇಲೆಸೆದ, ದೇವದತ್ತನಂತೆ. ಕಣ್ಣಂಚಿನಲ್ಲಿ ನೀರು ಜಿನುಗಿತು, ಮನಸ್ಸು ಬುದ್ಧನಾಗಿತ್ತು. ಪಟ್ಟೆಬಾತಿಗೆ ತಾಗಿ ಕೆಳಗೆ ಬಿದ್ದು ತೆವಳತೊಡಗಿತು. ಬಂದ ಹಂತಕ ಕೈಚಾಚಿ ಹಕ್ಕಿ ಹಿಡಿದ. ಬಿಡಿಸಿಕೊಳ್ಳುವ ಹಕ್ಕಿಯ ಹೋರಾಟಕ್ಕೆ ಠೊಣಪ ಗೋಣು ಮುರಿದು ಅದರ ಜೀವಕ್ಕೆ ಕೊನೆ ಹಾಡಿದ. ಅದನ್ನು ಹಿಡಿದು ಏರಿ ಇಳಿದ, ಗಾಡಿಗೆ ಕಟ್ಟಿಕೊಂಡ, ಹೊರಟೂ ಬಿಟ್ಟ ಯಾವೊಂದು ಪಶ್ಚಾತ್ತಾಪದ ಎಳೆಯೂ ಇಲ್ಲದೆ. ಹಕ್ಕಿಗೆ ಬಿಟ್ಟ ಬಾಣಕ್ಕೆ ಶೋಕಿಸಲು ಎಲ್ಲರೂ ವಾಲ್ಮೀಕಿಗಳಲ್ಲ, ರಾಮಾಯಣದ ಸೃಷ್ಟಿಯೂ ಆಗುವುದಿಲ್ಲ. ಎತ್ತಣ ಕಾಡಿನ ಹಕ್ಕಿ! ಎತ್ತಣ ಮುನಿಯ ಮೌನವ ಕೆಣಕಿತು! ಅಚ್ಚರಿಯ ನನ್ನೀ ಜೀವಾಳದ ಪಾಡು ಹಾಡಿನೊಳಿಣಿಕಿತು. ಶೋಕದೆಳೆಯಲಿ ಶ್ಲೋಕ ಹೆಣೆದಿರೆ ಲೋಕವೆ ರಸವುಂಡಿದೆ. ಯಾರ ದುಃಖಕೊ ಯಾರೆ ಅತ್ತರು ಎಲ್ಲರಿಗೂ ಸಮ ಕಂಡಿದೆ. ಕ್ರೌಂಚವಧದ ದುಃಖ ಮನುಷ್ಯ ಬದುಕಿನ ಶೋಕದ ಕತೆಯಾದ ರಾಮಾಯಣ ಆಗುತ್ತದೆ. ಸಾಮಾನ್ಯೀಕೃತ ಆದಾಗ ಲೋಕ ಅದರ ರಸವನ್ನು ಉಣ್ಣುವುದು ಸಾಧ್ಯ.

ಅಯ್ಯೋ! ಎಷ್ಟು ಕನಸುಗಳ ಬಂಡಿ ಏರಿಕೊಂಡು ಊರಲ್ಲದ ಊರಿನಿಂದ ಹಿಮದ ಬೆಟ್ಟಗಳನ್ನು ದಾಟಿ ಸಾವಿರಾರು ಮೈಲಿ ಪಯಣಿಸಿ ದೂರಬಂದ ಹಕ್ಕಿಗಳಿವು. ತಮ್ಮ ಸಂತತಿಯನ್ನು ಬೆಳೆಸಿಕೊಂಡು ಸಂತಸದಿಂದ ಊರಿಗೆ ಮರಳುವ ಕನಸುಗಣ್ಣ ಮುದ್ದು ಹಕ್ಕಿಗಳಿವು. ಹಿಡಿಮಾಂಸದ ದುರಾಶೆಗೆ ಬಿದ್ದು ಈ ಅನಾಹುತ. ನನ್ನ ಶಬ್ದಕೋಶದಲ್ಲಿದ್ದ ಇಲ್ಲದ ಬೈಗಳುಗಳನ್ನೆಲ್ಲಾ ಅವನಿಗೆ ಮನಸಿನಲ್ಲೇ ಸುರಿಸಿದೆ, ಸುರಿಯುತ್ತಿದ್ದ ಕಣ್ಣೀರಿನ ಜೊತೆಗೆ. ಅದನ್ನು ತಿಂದ ನಿನಗೂ ಯಾರಾದರೂ ಹೀಗೆ ಮಾಡಲಿ ಎಂದೇ ಹಿಡಿಶಾಪ ಹಾಕಿದೆ. ಬುದ್ಧನ ಹಾಗೆ ಗುಣಪಡಿಸಿ ಬದುಕಿಸುವ ಶಕ್ತಿ ನನಗೆಲ್ಲಿದೆ? ಆ ಕ್ರೂರಿಯ ಜೊತೆ ಜಗಳ ಆಡುವ ತಾಕತ್ತಂತೂ ಕಾಣದ ಊರಿನಲ್ಲಿ ಒಬ್ಬಂಟಿಯಾದ ನನಗಿರಲಿಲ್ಲ. ಆದರೂ ಹಕ್ಕಿಪಯಣದ ಇಷ್ಟು ವರ್ಷಗಳಲ್ಲಿ ಎಷ್ಟೆಷ್ಟು ದೂರ ದೂರದ ಊರು ಕಾಡುಮೇಡು ತಿರುಗಿದ್ದರೂ ಆ ಠೊಣಪ ಹಿಡಿದ ಪಟ್ಟೆತಲೆಯ ಬಾತುಕೋಳಿಯ ಚಿತ್ರ ಮನದಿಂದ ಮರೆಯಾಗದೆ ಮನುಷ್ಯನ ಕ್ರೌರ್ಯದ ಪ್ರತೀಕವಾಗಿ ಕಾಡುತ್ತಲೇ ಇದೆ, ಕಣ್ಣಂಚನ್ನು ಆರ್ದ್ರಗೊಳಿಸುತ್ತಲೇ ಇದೆ.
ಭೂಮಿಯ ಮೇಲೆ ಇರುವುದೆಲ್ಲಾ ಕೇವಲ ನನಗಾಗಿಯೇ ಎಂಬ ಸ್ವಾರ್ಥವನ್ನೇ ಹೊದ್ದು ಹಾಸಿಕೊಂಡವರನ್ನು ಬದುಕಿನುದ್ದಕ್ಕೂ ಕಂಡ ಕಾರಣದಿಂದಲೇ ಗಾಂಧೀಜಿ ಹೇಳಿದ್ದು `ಭೂಮಿಯು ಮನುಷ್ಯನ ಅಗತ್ಯಗಳನ್ನು ಪೂರೈಸುತ್ತದೆ, ದುರಾಸೆಯನ್ನಲ್ಲ’ ಎಂದು. ನಾನು ಹಕ್ಕಿ ಹಿಂದೆ ಹೊರಟ ಇಷ್ಟು ವರ್ಷಗಳಲ್ಲಿ ಹಕ್ಕಿ ಚಿತ್ರ ಹಿಡಿದ ನನ್ನೂರಿನ ಬಳಿಯ ಅಥವಾ ದೂರದ ತಾಣಗಳೆಲ್ಲಾ ಮೊದಲಿದ್ದ ಹಾಗೇ ಇಲ್ಲ, ಉಳಿದಿಲ್ಲ. ನನ್ನೂರಿನ ಸುತ್ತಮುತ್ತಣ ಹಳ್ಳಿ, ತೋಟ-ತುಡಿಕೆಗಳನ್ನು ನಗರದ ತೆಕ್ಕೆಯೊಳಗೆ ಎಳೆದು ತರುತ್ತಿದೆ. ನವಿಲು ಜಾಗರವಾಡಿದ ಜಾಗಗಳಲ್ಲಿ ಜನ ಬಂದಿದ್ದಾರೆ, ಸೈಟುಗಳಾಗಿವೆ, ಮನೆಗಳೆದ್ದಿವೆ. ಬೇಲಿ ಹಾಕಿದ್ದಾರೆ, ಹತ್ತಿರದ ಹಳ್ಳಿಗಳು ನಗರದೊಳಗೆ ಸೇರಿ ಅಸ್ತಿತ್ವ ಕಳೆದುಕೊಂಡು ಕಾಣೆಯಾಗಿವೆ… ಗಾಬರಿಯಾಗುತ್ತಿದೆ… ಜೀವ ಬೆದರಿ ಬೆಚ್ಚುತ್ತಿದೆ. ಚಾರ್‌ಧಾಮ್ ಯಾತ್ರಿಕರ ಸೌಕರ್ಯಕ್ಕಾಗಿ ರಸ್ತೆಗಳನ್ನು ಅಗಲಿಸಲು ಪಕ್ಕದ ಕಾಡುಬೆಟ್ಟಗಳೆಲ್ಲಾ ಬೋಳಾಗುತ್ತಿವೆ. ನಮ್ಮ ಅವಸರದ ಓಟಕ್ಕಾಗಿ ಬೆಟ್ಟಗಳು ಬರಿದಾಗಿ ಉತ್ತರಾಖಂಡದಲ್ಲಿ ಲ್ಯಾಂಡ್ ಸ್ಲೈಡು. ಸಾತ್ತಾಲದ ಕಾಡುಗಳಲ್ಲಿ ಸೌದೆಗಾಗಿ ಮರಗಿಡ ಬರಿದಾಗುತ್ತಿವೆ.
ಹಕ್ಕಿಗಳು ನೀರಿಗಾಗಿ ಬರುವ ತಾಣದಲ್ಲಿ ಸ್ಮಶಾನದಲ್ಲಿ ಶವ ಸಂಸ್ಕರಿಸಲು ಸುತ್ತ ಇರುವ ಮರಗಿಡಗಳು ಕಾಣೆಯಾಗುತ್ತಿವೆ. ಉರಿದ ಬೂದಿ ಹಕ್ಕಿಗಳು ಕುಡಿಯುವ, ನೀರಾಟವಾಡುವ ನೀರಿನಲ್ಲಿ ಕದಡಿ ಕಲಬೆರಕೆ ಆಗಿಹೋಗುತ್ತಿದೆ. ಹಕ್ಕಿಗಳ ಪಕ್ಕದಲ್ಲಿ ಹೆಣ ಉರಿದರೂ, ಉರಿಯದ ಕಟ್ಟಿಗೆಗಳ ರಾಶಿ ಕಣ್ಣಿಗೆ ಕರಾಳ ಸತ್ಯವನ್ನು ರಾಚುತ್ತವೆ. ಬಂಡೀಪುರಕ್ಕೆ ಸ್ವಾರ್ಥಿಗಳು ಬೆಂಕಿ ಹಚ್ಚಿ ವಿಕೃತಾನಂದ ಪಡೆಯುತ್ತಿದ್ದಾರೆ. ಮಾನವ ತಾನು ಹೋದ ಜಾಗದಲ್ಲೆಲ್ಲಾ ತನಗೆ ಅನುಪಯುಕ್ತ ಎನಿಸಿದ್ದನ್ನೆಲ್ಲಾ ಸುರಿಸುರಿದು ಸುರಿಹೊಂಡ ಆಗಿಸಿದ್ದಾನೆ. ನಡೆಯುವ ದಾರಿಯಲ್ಲಿ ತಾನು ಉರುಳಿಸಿದವೆ ತನಗೆ ಉರುಳಾಗುತ್ತವೆಂಬ ಸತ್ಯ ಮನವರಿಕೆ ಮಾಡಿಸಲು ಇನ್ನೆಷ್ಟು ದುರಂತಗಳು, ಅವಘಡಗಳು ಸಂಭವಿಸಬೇಕಿದೆಯೋ… ಕಾಲವೇ ಏನೇನು ಇರಿಸಿದ್ದೀಯೋ ನೀನು. ನಮಗೆ ಏನೇನು ತೋರಿಸಲಿದ್ದೀಯೋ ನೀನು. ಕಾಲವಾವನ ಕೀಳು ಮಾಡದು ಶೂಲಪಾಣಿಯೆ ಬಲ್ಲನು.
| ಇನ್ನು ಮುಂದಿನ ವಾರಕ್ಕೆ ।









0 Comments