ಕೊನೆಗೂ ಒಸಾಮಾ ಬಿನ್ ಲಾಡೆನ್ ಹತನಾಗಿದ್ದಾನೆ. ಕಳೆದ ಎರಡು ದಶಕಗಳಲ್ಲಿ ಅಂತಾರಾಷ್ಟ್ರೀಯ ಭಯೋತ್ಪಾದನೆಗೆ ಹೊಸ ಭಾಷ್ಯವನ್ನೇ ಬರೆದ ಲಾಡೆನ್ ತನ್ನ ಸೃಷ್ಟಿಕರ್ತನ ದಾಳಿಗೇ ಗುರಿಯಾಗಿರುವುದು ಇತಿಹಾಸದ ಒಂದು ವೈಶಿಷ್ಟ್ಯ. 1980ರ ದಶಕದಲ್ಲಿ ಆಘ್ಪಾನಿಸ್ತಾನದಲ್ಲಿ ನೆಲೆಮಾಡಿದ್ದ ಸೋವಿಯಟ್ ಸೇನೆಯನ್ನು ಹಿಮ್ಮೆಟ್ಟಿಸಲು ಅಮೆರಿಕ ಹೂಡಿದ ತಂತ್ರಗಾರಿಕೆಯ ಪ್ರತಿಫಲ ಈ ಬಿನ್ ಲಾಡೆನ್ ಎಂಬ ದೈತ್ಯ. ವಿಶ್ವದ ಭೂಪಟದಲ್ಲಿ ಕಮ್ಯುನಿಸಂ ಇಲ್ಲದಂತೆ ಮಾಡುವ ಹುನ್ನಾರದಲ್ಲಿ ಅಮೆರಿಕ ಪ್ರಯೋಗಿಸಿದ ಅಸ್ತ್ರಗಳು ಹಲವಾರು. ಕೆಲವು ದೇಶಗಳಲ್ಲಿ ಆಂತರಿಕ ದಂಗೆ, ಇನ್ನು ಕೆಲವು ದೇಶಗಳ ಮೇಲೆ ನೇರ ಆಕ್ರಮಣ, ಕೆಲವು ದೇಶಗಳಿಗೆ ಆಥರ್ಿಕ ದಿಗ್ಭಂಧನ ಇವೆಲ್ಲವೂ ಅಸಾಧ್ಯ ಎನಿಸಿದರೆ ಬಂಡುಕೋರರ ಸೃಷ್ಟಿ.
ಸೋವಿಯಟ್ ಸೇನೆಯನ್ನು ಎದುರಿಸಲು ಮತ್ತು ಕಮ್ಯುನಿಸಂ ವಿರುದ್ಧ ಜನಾಭಿಪ್ರಾಯ ಸೃಷ್ಟಿಸಲು ಅಮೆರಿಕದ ಸಾಮ್ರಾಜ್ಯಶಾಹಿ ಬಳಸಿದ್ದು ಎರಡು ಪ್ರಮುಖ ಅಸ್ತ್ರಗಳನ್ನು. ಮೊದಲನೆಯದು ಪೆಂಟಗನ್ನಲ್ಲಿ ತಯಾರಿಸಲಾಗುವ ಅತ್ಯಾಧುನಿಕ ಪಾಶವೀ ಶಸ್ತ್ರಾಸ್ತ್ರಗಳು. ಎರಡನೆಯದು ಅರಬ್ ರಾಷ್ಟ್ರಗಳಲ್ಲಿ ಪುಟಿದೇಳುತ್ತಿದ್ದ ಇಸ್ಲಾಮಿಕ್ ಜಿಹಾದ್ ಪರಿಕಲ್ಪನೆ ಮತ್ತು ಅದರ ಹಿಂದಿನ ಸಮರಶೀಲ ಧೋರಣೆ. ಈ ಎರಡೂ ಅಸ್ತ್ರಗಳ ಸಮ್ಮಿಲನದ ಮಾನಸ ಪುತ್ರನೇ ಒಸಾಮ ಬಿನ್ ಲಾಡೆನ್ ಎಂಬ ಪೆಡಂಭೂತ. ಸೌದಿ ಅರೇಬಿಯಾದಲ್ಲಿ ತನ್ನದೇ ಆದ ಗುಂಪು ರಚಿಸಿಕೊಂಡಿದ್ದ ಒಸಾಮಾನನ್ನು ಅಮೆರಿಕಕ್ಕೆ ಕರೆತಂದು, ಪಾಕಿಸ್ತಾನದ ನೆಲದಲ್ಲಿ ಆತನ ನಿಷ್ಠಾವಂತ ತಂಡಕ್ಕೆ ಶಸ್ತ್ರಾಸ್ತ್ರ ತರಬೇತಿ ನೀಡಿ, ಆಫ್ಘಾನಿಸ್ತಾನದ ಬೆಟ್ಟ ಕಣಿವೆಗಳಲ್ಲಿ ಸೋವಿಯಟ್ ಸೇನೆಯ ವಿರುದ್ಧ ಹೋರಾಡುವ ನೈಪುಣ್ಯತೆಯನ್ನು ಕಲಿಸಿ, ಒಂದು ಬಂಡುಕೋರ ಸೇನೆಯನ್ನೇ ಸೃಷ್ಟಿಸಿದ ಅಮೆರಿಕಾದ ಸಾಮ್ರಾಜ್ಯಶಾಹಿಗೆ ತಾನು ಸೃಷ್ಟಿಸಿದ್ದು ಒಂದು ಪೆಡಂಭೂತ ಎಂದು ಅರಿವಾಗುವಷ್ಟರಲ್ಲಿ ವಿಶ್ವ ವಾಣಿಜ್ಯ ಕೇಂದ್ರದ ಬೃಹತ್ ಕಟ್ಟಡ ಕುಸಿದು ಬಿದ್ದಿತ್ತು.
ತನ್ನ ಬುಡಕ್ಕೆ ನೀರು ಬಂದಾಗಲೇ ಎಚ್ಚೆತ್ತು ಒಸಾಮಾನನ್ನು ಬೇಟೆಯಾಡತೊಡಗಿದ ಅಮೆರಿಕಾಗೆ ಅದಕ್ಕೂ ಮುನ್ನ ಲಾಡೆನ್ ನಡೆಸಿದ ದುಷ್ಕೃತ್ಯ-ಕುಕೃತ್ಯಗಳಾಗಲೀ, ಬಾಂಬ್ ದಾಳಿಗಳಾಗಲೀ, ಭಯೋತ್ಪಾದಕ ಕೃತ್ಯಗಳಾಗಲೀ ಕಾಣಲೇ ಇಲ್ಲ. ಏಕೆಂದರೆ ದಾಳಿಗೊಳಗಾದದ್ದು ಅಮೆರಿಕದ ಪ್ರಜೆಗಳಲ್ಲ. ಬಳಸಲಾಗಿದ್ದು ಪೆಂಟಗನ್ನ ಶಸ್ತ್ರಾಸ್ತ್ರಗಳು. ಕಳೆದ ಹತ್ತು ವರ್ಷಗಳಿಂದ ತನ್ನ ಶತ್ರುವನ್ನು ವಿರತ ಶ್ರಮವಹಿಸಿ ಬೇಟೆಯಾಡಿದ ಅಮೆರಿಕಾ ಕೊನೆಗೂ ಲಾಡೆನ್ನನ್ನು ಅಂತ್ಯಗೊಳಿಸಿದೆ. ಅದೂ ತಾನು ತರಬೇತಿ ನೀಡಿದ ಪಾಕಿಸ್ತಾನದ ನೆಲದಲ್ಲೇ. ಬಹುಶಃ ಲಾಡೆನ್ಗೆ ಪಾಕಿಸ್ತಾನವೇ ಕರ್ಮಭೂಮಿಯಾಗಿತ್ತೇನೋ. ಸೃಷ್ಟಿಕರ್ತನಿಂದಲೇ ಹತನಾಗುವ ಭಾಗ್ಯ ಇದ್ದದ್ದು ನಮ್ಮ ಪುರಾಣಗಳಲ್ಲಿನ ರಾಕ್ಷಸರಿಗೆ ಮಾತ್ರ. ಈಗ ಲಾಡೆನ್ಗೂ ಅದು ಲಭಿಸಿದೆ. ಲಾಡೆನ್ ಸಾವು ಅಮೆರಿಕದಲ್ಲಿ ವಿಜೃಂಭಣೆಯಿಂದ ಸ್ವಾಗತಿಸಲ್ಪಟ್ಟಿದೆ. ಜನತೆ ಬೀದಿಗಿಳಿದು ಸಂಭ್ರಮಿಸುತ್ತಿದ್ದಾರೆ. ಅಧ್ಯಕ್ಷ ಒಬಾಮ ದಿಗ್ವಿಜಯದ ನಗೆ ಬೀರುತ್ತಿದ್ದಾರೆ.
ಆದರೆ ಅಮೆರಿಕ ಅಂತ್ಯಗೊಳಿಸಿರುವುದು ಒಬ್ಬ ಲಾಡೆನ್ನನ್ನು ಮಾತ್ರ. ಕಳೆದ ಎರಡು ದಶಕಗಳಲ್ಲಿ ಸಾಮ್ರಾಜ್ಯಶಾಹಿಗಳ ಅಧಿಕಾರಲಾಲಸೆಯ ಪ್ರತಿಫಲವಾಗಿ ವಿಶ್ವದಾದ್ಯಂತ ಸಾವಿರ ಲಾಡೆನ್ಗಳು ಸೃಷ್ಟಿಯಾಗಿದ್ದಾರೆ. ಪೆಂಟಗನ್ನಲ್ಲಿ ತಯಾರಾಗುವ ಶಸ್ತ್ರಾಸ್ತ್ರಗಳನ್ನು ಖಚರ್ು ಮಾಡಲು ಅಗತ್ಯವಾದ ಬಳಕೆದಾರರನ್ನು ಸಾಮ್ರಾಜ್ಯಶಾಹಿ ಸೃಷ್ಟಿಸುತ್ತಲೇ ಇದೆ. ಲಷ್ಕರ್, ಹೂಜಿ, ಜೆಇಎಮ್ ಹೀಗೆ ಹತ್ತು ಹಲವು ಸಂಘಟನೆಗಳು ಬೆಳೆಯುತ್ತಲೇ ಇವೆ. ಈ ಸಂಘಟನೆಗಳ ಹಿಂದಿರುವ ಶಕ್ತಿ ಯಾವುದೇ ಧರ್ಮ ಅಥವಾ ಧಮರ್ಾಧಾರಿತ ನಂಬಿಕೆಗಳಲ್ಲ. ಬದಲಾಗಿ ಸಾಮ್ರಾಜ್ಯಶಾಹಿಗಳ ಬಂಡವಾಳ ಮತ್ತು ಶಸ್ತ್ರಾಸ್ತ್ರ ಉದ್ಯಮ. ಒಬ್ಬ ಲಾಡೆನ್ ಮೃತನಾದದ್ದಕ್ಕೆ ಸಂಭ್ರಮಿಸುತ್ತಿರುವ ಸಂದರ್ಭದಲ್ಲೇ ಸೇಡಿನ ಪ್ರತಿದಾಳಿಯ ಮುನ್ಸೂಚನೆಯನ್ನೂ ನೀಡುತ್ತಿರುವ ಸಾಮ್ರಾಜ್ಯಶಾಹಿಗಳಿಗೆ ತಾವು ನಿಮರ್ಿಸಿದ ಕರ್ಮಭೂಮಿಯಲ್ಲಿ ಪಳಗಿ, ನುರಿತಿರುವ ಸಾವಿರಾರು ಒಸಾಮಾಗಳು ಪುಟಿದೇಳುತ್ತಾರೆ ಎಂಬ ಸತ್ಯದ ಅರಿವು ಇರಲೇ ಬೇಕು.
ಲಾಡೆನ್ನ ಸಾವು ಲಾಡೆನ್ನ ಅಂತ್ಯವಷ್ಟೇ. ಭಯೋತ್ಪಾದನೆಯ ಅಂತ್ಯವಲ್ಲ. ಅಂತಾರéಾಷ್ಟ್ರೀಯ ಭಯೋತ್ಪಾದನೆಯ ಅಂತ್ಯವಾಗಬೇಕಿರುವುದು ವ್ಯಕ್ತಿಗಳ ಸಾವಿನ ಮೂಲಕವಲ್ಲ, ಸೈದ್ಧಾಂತಿಕ ಗೆಲುವಿನ ಮೂಲಕ. ಪಾಪಪ್ರಜ್ಞೆಯೇ ಇಲ್ಲದ ಸಾಮ್ರಾಜ್ಯಶಾಹಿಗಳ ಆಕ್ರಮಣ ಶೀಲತೆ ಮತ್ತು ಅಧಿಪತ್ಯ ರಾಜಕಾರಣದ ಪ್ರವೃತ್ತಿ ಅಂತ್ಯಗೊಳ್ಳುವವರೆಗೂ ಭಯೋತ್ಪಾದನೆ ಅಂತ್ಯಗೊಳ್ಳುವುದೂ ಇಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ಅರಬ್ ರಾಷ್ಟ್ರಗಳಲ್ಲಿ ಸಂಭವಿಸುತ್ತಿರುವ ವಿದ್ಯಮಾನಗಳತ್ತ ಒಮ್ಮೆ ಗಮನಹರಿಸಿದಲ್ಲಿ ಈ ಸತ್ಯ ದರ್ಶನವಾಗುತ್ತದೆ. ತನ್ನ ಆಥರ್ಿಕತೆಯ ರಕ್ಷಣೆಗಾಗಿ ಪ್ರಜಾತಂತ್ರವನ್ನೇ ಹೊಸಕಿ ಹಾಕಿ ನಿರಂಕುಶ ಪ್ರಭುಗಳನ್ನು, ಸವರ್ಾಧಿಕಾರಿಗಳನ್ನು ಪೋಷಿಸುವ ಸಾಮ್ರಾಜ್ಯಶಾಹಿಗಳು ಈಗ ಅರಬ್ ರಾಷ್ಟ್ರಗಳ ಬೀದಿಬೀದಿಗಳಲ್ಲಿ ಕೇಳಿಬರುತ್ತಿರುವ ಪ್ರಜಾಸತ್ತೆಯ ದನಿಗಳನ್ನು ಅಡಗಿಸುವ ಮಾರ್ಗಗಳತ್ತ ನೋಡುತ್ತಿದ್ದಾರೆ. ಲಿಬಿಯಾದತ್ತ ಒಮ್ಮೆ ಕಣ್ಣು ಹಾಯಿಸಿದರೆ ಭಯೋತ್ಪಾದನೆಯ ಗೂಡಾರ್ಥವನ್ನು ಗ್ರಹಿಸಬಹುದು.
ಚಿಕ್ಕ ಪುಟ್ಟ ದೇಶಗಳ ಸಾರ್ವಭೌಮತ್ವವನ್ನೂ ಲೆಕ್ಕಿಸದೆ ತನ್ನ ಮಾನವ ರಹಿತ ವಿಮಾಗಳನ್ನು ಉಪಯೋಗಿಸಿ ಮನುಜ ಜೀವಗಳನ್ನು ಬಲಿತೆಗೆದುಕೊಳ್ಳುವ ಪಾಶವೀ ಸಾಮ್ರಾಜ್ಯಶಾಹಿಗಳು ಈ ದೇಶಗಳಲ್ಲಿ ಮತ್ತಷ್ಟು ಒಸಾಮಾಗಳನ್ನು ಸೃಷ್ಟಿಸುವುದಂತೂ ಸತ್ಯ. ತೈಲ ಸಂಪತ್ತಿನ ಒಡೆತನಕ್ಕಾಗಿ ಭ್ರಾತೃಘಾತುಕತೆಯನ್ನು ಪೋಷಿಸುತ್ತಾ ವಿವಿಧ ದೇಶಗಳಲ್ಲಿ ಆಂತರಿಕ ಕ್ಷೊಭೆ ಹರಡಲು ಪ್ರೇರಣೆ ನೀಡುತ್ತಿರುವ ನ್ಯಾಟೋ ಎಂಬ ಪಾಶವೀ ಮಿಲಿಟರಿ ಒಕ್ಕೂಟ, ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದ್ದ ಜಿಹಾದಿ ಶಕ್ತಿಗಳಿಗೆ ಕಾಯಕಲ್ಪ ಒದಗಿಸುತ್ತಿರುವುದು ಸ್ಪಷ್ಟವಾಗುತ್ತಿದೆ. ಅರಬ್ ರಾಷ್ಟ್ರಗಳಲ್ಲಿ ಜಿಹಾದಿಯ ಸುಳಿವೂ ಇಲ್ಲದೆ ಪ್ರಜಾತಂತ್ರಕ್ಕಾಗಿ ಹೋರಾಡುತ್ತಿರುವ ಯುವಜನತೆಯ ಮೇಲೆ ನಡೆಯುತ್ತಿರುವ ಅಮಾನವೀಯ ಆಕ್ರಮಣಗಳು ಮತ್ತಷ್ಟು ಅಲ್ಖೈದಾಗಳನ್ನು ಸೃಷ್ಟಿಸಿದರೂ ಅಚ್ಚರಿಯೇನಿಲ್ಲ.. ಇದು ಜಗತ್ತಿನ ಜನತೆ ಎದುರಿಸುತ್ತಿರುವ ಆತಂಕ ಮತ್ತು ಭೀತಿ. ಈ ಭೀತಿಯ ಹಿನ್ನೆಲೆಯಲ್ಲೇ ಲಾಡೆನ್ ಅಂತ್ಯವನ್ನು ವಿಜೃಂಭಣೆಯಿಂದ ಆಚರಿಸುತ್ತಿರುವ ಅಮೆರಿಕಾ ತನ್ನ ಸಾಮ್ರಾಜ್ಯಶಾಹಿ ನೀತಿಗಳ ಪರಿಣಾಮವಾಗಿ ಮತ್ತೊಮ್ಮೆ ಸೃಷ್ಟಿಯಾಗುತ್ತಿರುವ ಒಸಾಮಾಗಳನ್ನು ಗಮನಿಸದೇ ಹೋದಲ್ಲಿ ಲಾಡೆನ್ನ ಸಾವು, ಒಂದು ಯುಗದ ಆರಂಭವಾಗುವುದೇ ಹೊರತು ಅಂತ್ಯವಾಗುವುದಿಲ್ಲ.








uttahamavada vishleshane. samkshipta.adare ade samaydalli bharathadallina komuvadavoo kooda bhayotpadaka manassugalannu sristisalu thanna kanike needide.jothege eeshanya bhrathada, kashmirada,nereya srilankada ltte ityadigalige alliya janara dukha dummanagalige kivikodada nammade kendrikrita darbarugaloo karana