ಯಾರು ಯಾರೋ ನಿವಾಳಿಸಿ ಒಗೆದ ದೆವ್ವದ ನೈವೇದ್ಯ ತಿನ್ನುತ್ತಿದ್ದೆ..

ನನ್ನ ಜನ ಪ್ರಾಣಿಗಳಲ್ಲ, ಮನುಷ್ಯರು: ಲಕ್ಷ್ಮಣ್ ಗಾಯಕವಾಡ್

ಮಾತುಕತೆ : ಡಾ.ಎನ್.ಜಗದೀಶ್ ಕೊಪ್ಪ

 

ಒಮ್ಮೊಮ್ಮೆ ನಾನು ಸ್ಮಶಾನಕ್ಕೆ ಹೋಗಿ, ಯಾರು ಯಾರೋ ನಿವಾಳಿಸಿ ಒಗೆದ ದೆವ್ವದ ನೈವೇದ್ಯ ತಿನ್ನುತ್ತಿದ್ದೆ. ಅದು ದೆವ್ವದ ಊಟವೆಂದು ಅದನ್ನು ಯಾರೂ ಮುಟ್ಟುತ್ತಿರಲಿಲ್ಲ. ಆದರೆ ನನ್ನ ಹೊಟ್ಟೆಯೊಳಗೆ ಬಿದ್ದ ಬೆಂಕಿಯಿಂದಾಗಿ ನನಗೆ ದೆವ್ವದ ಅಂಜಿಕೆಯಾಗುತ್ತಿರಲಿಲ್ಲ. ತೆಂಗು ಒಡೆದು ಕೊಬ್ಬರಿ ತಿನ್ನುತ್ತಿದ್ದೆ. ನೈವೇದ್ಯದ ಮೇಲೆ ಬಿದ್ದ ಮಣ್ಣು, ಕಸ-ಕಡ್ಡಿ ಸರಿಸಿ ಉಳಿದಿದ್ದನ್ನು ಹೊಟ್ಟೆಗೆ ತುರುಕುತ್ತಿದ್ದೆ. ಅನಂತರ ಮನೆಗೆ ಮರಳುತ್ತಿದ್ದೆ. ಒಮ್ಮೆ ಮನೆಯಲ್ಲಿ ಎಂಟತ್ತು ದಿನಗಳಿಂದ ಉಪವಾಸ, ಆಗ ಅಪ್ಪ ಯಾರಿಂದಲೋ ಒಂದಾಣೆ ಸಾಲ ತಂದು ಚಟಾಕು ಬೆಲ್ಲ ಖರೀದಿಸಿ ಬೆಲ್ಲದ ನೀರು ಮಾಡಿದ ಎಲ್ಲರೂ ಒಂದೊಂದು ಕಪ್ಪು ಕುಡಿದೆವು. ನಾನು ಅಪ್ಪನನ್ನು ತಬ್ಬಿ ಬಿಕ್ಕಿ ಬಿಕ್ಕಿ ಅಳುತ್ತಿದ್ದೆ. ತಿಪ್ಪೆಯಲ್ಲಿ ಬಿದ್ದ ಹುಣಸೆ ಬೀಜವನ್ನು ತಂದು ಸುಟ್ಟು ತಿನ್ನುತ್ತಿದ್ದೆ. ದಾದಾ ಪರ ಊರಿಗೆ ಹೋಗಿ ಹಂದಿ ಮರಿ ಕದ್ದು ತರುತ್ತಿದ್ದ. ಬಹಳ ಹಸಿವೆಯಾದರೆ, ಜೋಳ ಬೀಸಿದ ಕಲ್ಲಿನ ಮೇಲೆ ಉಪ್ಪು ಹಾಕಿ ಕಲ್ಲಿಗೆ ಅಂಟಿರುತ್ತಿದ್ದ ಜೋಳದ ಹಿಟ್ಟನ್ನು ನಾಲಿಗೆಯಿಂದ ನೆಕ್ಕುತ್ತಿದ್ದೆ. ಹೀಗೆ ನನ್ನ ಹಸಿವನ್ನು ಹಿಂಗಿಸಿಕೊಳ್ಳುತ್ತಿದ್ದೆ.

lakshman gaikwad3ಬಡತನ ಮತ್ತು ಹಸಿವನ್ನು ಕುರಿತು ಇದಕ್ಕಿಂತ ಪರಿಣಾಮಕಾರಿ ಶಬ್ಧಗಳಲ್ಲಿ ವಾಖ್ಯಾನ ಮಾಡಲು ಅಥವಾ ಬರೆಯಲು ಸಾಧ್ಯವೆ? ಇಂತಹ ಪ್ರಶ್ನೆಯನ್ನು ಹುಟ್ಟುಹಾಕುವುದರ ಮೂಲಕ ನಾವು ನೋಡಿರದ, ಕೇಳಿರದ, ಓದಿರದ ಲೋಕವೊಂದನ್ನು ನಮ್ಮೆದುರು ಅನಾವರಣಗೊಳಿಸಿ ನಮ್ಮನ್ನು ಬೆಚ್ಚಿ ಬೀಳಿಸಿದವರು ಮರಾಠಿ ದಲಿತ ಲೇಖಕ ಲಕ್ಷ್ಮಣ್ ಗಾಯಕವಾಡ್.

 

ಕಳ್ಳತನವನ್ನು ಕುಲ ಕಸಬಾಗಿಸಿಕೊಂಡಿದ್ದ ಅಲೆಮಾರಿ ಬುಡಕಟ್ಟು ಕುಟುಂಬದಲ್ಲಿ ಜನಿಸಿ, ತಾನು ಅನುಭವಿಸಿದ ನೋವು, ಅಪಮಾನ, ಹಸಿವು ಮತ್ತು ವ್ಯವವಸ್ಥೆಯ ದೌರ್ಜನ್ಯವನ್ನು ಯಾವುದೇ ಅಲಂಕಾರಿಕ ಶಬ್ಧಗಳ ಹಂಗಿಲ್ಲದೆ ತಣ್ಣನೆಯ ದನಿಯಲ್ಲಿ ಹೇಳುತ್ತಾ, ಓದುಗರ ಕಣ್ಣನ್ನು ಒದ್ದೆ ಮಾಡಿ, ನಮ್ಮ ಗ್ರಹಿಕೆಯ ನೆಲೆಗಟ್ಟುಗಳನ್ನು ಅಲುಗಾಡಿಸಿದವರು. ಮುಗ್ಧ ಮನಸ್ಸಿನ, ಎದೆಯಲ್ಲಿ ಕಿಂಚಿನಿತೂ ಕಲ್ಮಶವಿಲ್ಲದ ಲಕ್ಷ್ಣಣ್ ಗಾಯಕವಾಡ್ ಜೊತೆ ಕುಳಿತು ಮಾತನಾಡುವುದೆಂದರೇ, ನಮ್ಮ ಹಳೆಯ ಬಾಲ್ಯದ ಗೆಳೆಯನ ಎದುರು ಕುಳಿತು ಮಾತನಾಡಿದ ಅನುಭವವಾಗುತ್ತದೆ.

ಆತ್ಮಕಥೆಯ ಸಿದ್ದ ಮಾದರಿಗಳನ್ನು ಹೊಡೆದು ಹಾಕಿ ಭಾರತೀಯ ಸಾಹಿತ್ಯ ಲೋಕ ಮರಾಠಿ ಆತ್ಮಕಥೆಗಳತ್ತ ತಿರುಗಿ ನೋಡುವಂತೆ ಮಾಡಿದ ಪ್ರಮುಖ ಲೇಖಕರಲ್ಲಿ ಗಾಯಕ್ವಾಡ್ ಅದ್ವಿತೀಯರು. ಅವರ ಆತ್ಮಕಥೆ ಉಚಲ್ಯಾ ಭಾರತದ ಬಹುತೇಕ ಭಾಷೆಗೆ ಅನುವಾದಗೊಂಡಿದೆ. ( ಕನ್ನಡಕ್ಕೆ ಚಂದ್ರಕಾಂತ ಪೊಕಳೆ ಅನುವಾದಿಸಿದ್ದು ಈ ಕೃತಿಯನ್ನು ನವಕರ್ನಾಟಕ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ)

ನಮ್ಮ ದೇವನೂರು ಮಹಾದೇವರ ಕುಸುಮಬಾಲೆ  ಕೃತಿಯಂತೆ, ಉಚಲ್ಯಾ ಪುಟ್ಟ ಕೃತಿಯಾದರೂ ಇದು ಉಂಟು ಮಾಡಿದ ಪರಿಣಾಮ ಮಾತ್ರ ಅಗಾಧವಾದುದು. ತನ್ನ ತಾಯಿ, ಬಯಲಿನಲ್ಲಿ ಎಮ್ಮೆ ಹಾಕಿದ ಸಗಣಿಯನ್ನು ಎತ್ತಿಕೊಂಡು ನೀರಿನಲ್ಲಿ ಕಲಸಿ ಅದರಲ್ಲಿ ತೇಲುತ್ತಿದ್ದ ಜೋಳದ ಕಾಳುಗಳನ್ನು ಆರಿಸಿ ಹಿಟ್ಟು ಮಾಡಿ ನಂತರ ರೊಟ್ಟಿ ಮಾಡಿ ಬಡಿಸುತ್ತಿದ್ದುದನ್ನು ಹಾಗೂ ಸಗಣಿಯ ವಾಸನೆಯ ಆ ರೊಟ್ಟಿಯನ್ನು ಹಸಿವು ನೀಗಿಸಿಕೊಳ್ಳಲು ತಾನು ಬಾಲ್ಯದಲ್ಲಿ ತಿನ್ನುತ್ತಿದ್ದ  ಸಂಗತಿಯನ್ನು ಲಕ್ಷ್ಮಣ್ ಗಾಯಕವಾಡ್ ತಮ್ಮ ಆತ್ಮಚರಿತ್ರೆಯಲ್ಲಿ ನಿರ್ಭಾವುಕರಾಗಿ ತೆರೆದಿಟ್ಟಾಗ ಇಡೀ ಭಾರತದ ಸಾಂಸ್ಕೃತಿಕ ಜಗತ್ತು ಬೆಚ್ಚಿ ಬಿದ್ದಿತ್ತು. ಆವರೆಗೆ ಹಸಿವು ಕುರಿತು ಬರೆದಿದ್ದ ಕಾವ್ಯವಾಗಲಿ, ಕತೆ, ಕಾದಂಬರಿಯಾಗಲಿ, ಎಲ್ಲವೂ ನೈಪಥ್ಯಕ್ಕೆ ಸರಿದು ಹೋದವು.

uchalya kannadaಉಚಲ್ಯಾ (ಅಲೆಮಾರಿ) ಆತ್ಮಕಥನದಿಂದ ಭಾರತದ ಸಾಹಿತ್ಯಾಸಕ್ತರ ಗಮನ ಸೆಳೆದ ಗಾಯಕವಾಡ್ ತಮ್ಮ ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಮಹಾರಾಷ್ಟ್ರದ ಅತ್ಯುನ್ನುತ ಸಾಹಿತ್ಯ ಪ್ರಶಸ್ತಿ ಗಳಿಸಿದ ನಂತರ ಸಾಹಿತ್ಯ ಕೃಷಿಗಿಂತ ಹೆಚ್ಚಾಗಿ ತಾನು ಹುಟ್ಟಿ ಬೆಳೆದು ಬಂದ ನರಕದ ಸುಧಾರಣೆಗೆ ಟೊಂಕಕ ಕಟ್ಟಿನಿಂತಿದ್ದಾರೆ. ಲಾತೂರಿನಿಂದ ಮುಂಬೈ ನಗರಕ್ಕೆ ವಾಸ್ತವ್ಯ ಬದಲಿಸಿರುವ ಲಕ್ಷ್ಮಣ್ ತಮ್ಮ ಜನಾಂಗವೂ ಸೇರಿದಂತೆ, ಅನೇಕ ಅಲೆಮಾರಿ ಬುಡಕಟ್ಟು ಜನಾಂಗಗಳನ್ನು ಕತ್ತಲೆಯ ಕೂಪದಿಂದ ಮೇಲೆತ್ತಲು ಶ್ರಮಿಸುತ್ತಿದ್ದಾರೆ. ಮುಂಬೈ ನಗರದ ಕೊಳಚೆಗೇರಿಗಳ ಸುಧಾರಣೆ, ಪೌರ ಕಾರ್ಮಿಕರ ಶ್ರೇಯೋಭಿವೃದ್ಧಿ ಹೀಗೆ ಹಲವು ಯೋಜನಗೆಳನ್ನು ತಲೆ ತುಂಬಾ ತುಂಬಿಕೊಂಡು ಮಹಾರಾಷ್ಟ್ರದ ಉದ್ದಕ್ಕೂ ಓಡಾಡುತ್ತಿದ್ದಾರೆ.

ಉಚಲ್ಯಾ ಕೃತಿಯ ಪ್ರಕಟಣೆಯ ನಂತರ ಆಗಿರುವ ತಮ್ಮ ಬದುಕಿನ ಬದಲಾವಣೆ ಕುರಿತು ಪ್ರಶ್ನಿಸಿದಾಗ, ಲಕ್ಷ್ಣಣ್ ನನ್ನೆದೆರು ಅನುಭವವನ್ನು ತೆರೆದಿಟ್ಟಿದ್ದು ಹೀಗೆ,

ನನ್ನ ಆತ್ಮ ಕಥೆ ಉಚಲ್ಯಾ ನಾನು ನಿರೀಕ್ಷೆ ಮಾಡಿರದಷ್ಟು ಹೆಚ್ಚು ಜನಪ್ರಿಯತೆಯನ್ನು ನನಗೆ ತಂದುಕೊಟ್ಟಿತು. ಇದೇ ಜನಪ್ರಿಯತೆಯನ್ನು ಆಧಾರವಾಗಿಟ್ಟುಕೊಂಡು ನಾನು ಅನೇಕ ಕೃತಿಗಳನ್ನು ಬರೆದು ಹಣ ಸಂಪಾದಿಸಬಹುದಿತ್ತು. ಆದರೆ ಅದು ಆತ್ಮವಂಚನೆಯ ಕೆಲಸ ಎನಿಸಿಬಿಟ್ಟಿತು. ಹಾಗಾಗಿ ನನ್ನಿಂದ ಹೆಚ್ಚಿನ ಸಾಹಿತ್ಯ ಕೃಷಿ ಸಾಧ್ಯವಾಗಿಲ್ಲ. ಭಾರತದ ಬಹುತೇಕ ಭಾಷೆಗಳಿಗೆ ಉಚಲ್ಯಾ ಅನುವಾದವಾಗಿದ್ದರೂ ಕೂಡ ಅತಿ ಹೆಚ್ಚು ಪ್ರೀತಿ ಮತ್ತು ಪ್ರಶಂಸೆ ಕರ್ನಾಟಕದ ಓದುಗರಿಂದ ನನಗೆ ಲಭ್ಯವಾಗಿದೆ. ಅದು ನನ್ನನ್ನು ಕನ್ನಡಿಗರಿಗೆ ಋಣಿಯಾಗಿರುವಂತೆ ಮಾಡಿದೆ. ನಾನು ಲಾತೂರ್, ಸೊಲ್ಲಾಪುರ, ಪುಣೆ, ಮುಂಬೈ ನಗರಗಳಲ್ಲಿ ಓಡಾಡುವಾಗ ನನ್ನ ಕಿವಿಗೆ ಕನ್ನಡದ ಶಬ್ದಗಳು ಬಿದ್ದರೆ ರೊಮಾಂಚನಗೊಳ್ಳುತ್ತೇನೆ. ಈಗಾಗಲೇ ಶೇಕಡ ಎಪ್ಪತ್ತರಷ್ಟು ಭಾಗ ಕನ್ನಡದ ಭಾಷೆ ನನಗೆ ಅರ್ಥವಾಗುತ್ತದೆ. ಎಂದರು.

ನಿಮ್ಮ ಕಾರ್ಯಚಟುವಟಿಕೆಗಳ ಬಗ್ಗೆ ಸ್ವಲ್ಪ ವಿವರಿಸಿ ಎಂದೆ. ಲಕ್ಷ್ಮಣ್ ಅತ್ಯಂತ ವಿನೀತರಾಗಿ, ಭಾವುಕರಾಗಿ ವಿವರಿಸುತ್ತಿದ್ದರು. ಮಾತಿನ ನಡುವೆ ಬೇಡವೆಂದರೂ ಅವರ ಬಾಲ್ಯದ ಕಹಿ ನೆನಪುಗಳು ತೂರಿ ಬರುತ್ತಿದ್ದವು. ಅವುಗಳನ್ನು ಮೀರಿ ಯೋಜನೆಯ ವಿವರಗಳನ್ನು ವಿವರಿಸಿದರು.

ಸಂತೆಗಳಲ್ಲಿ ಕೇವಲ ಒಂದು ರೂಪಾಯಿ ಅಥವಾ ಎರಡು ರೂಪಾಯಿ ಕಳ್ಳತನ ಇಲ್ಲವೆ, ಕುರಿ, ಕೋಳಿ ಕದ್ದು ಪೊಲೀಸರ ಕೈಯಲ್ಲಿ ವಾರಗಟ್ಟಲೆ ಬೂಟಿನ ಒದೆ ತಿಂದ ನನ್ನ ಕುಟುಂಬದ ಮತ್ತು ನನ್ನ ಸಮುದಾಯದ ಜನರ ಅಪಮಾನದ ಬದುಕು ನನ್ನ ನೆನಪಿನಿಂದ ಈಗಲೂ ಮಾಸಿಲ್ಲ. ಈಗ ಅಂತಹ ಕೃತ್ಯಗಳು ನಡೆಯುತ್ತಿಲ್ಲವಾದರೂ ತಮ್ಮ ಜೀವನ ನಿರ್ವಹಣೆಗಾಗಿ ನಗರಗಳಿಗೆ ವಲಸೆ ಹೋಗಿ ಕೊಳಗೇರಿಗಳಲ್ಲಿ ವಾಸಿಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ನನ್ನ ಬುಡಕಟ್ಟು ಜನಾಂಗವೂ ಸೇರಿದಂತೆ ಅನೇಕ ಅಲೆಮಾರಿ ಜನಾಂಗಳಿವೆ. ನಿಶ್ಚಿತ ನೆಲೆಯಿಲ್ಲದೆ, ದುಡಿಯಲು ಕೆಲಸವಿಲ್ಲದೆ ಅತಂತ್ರರಾಗಿ ಅಲೆಯುತ್ತಿದ್ದಾರೆ. ಅವರಿಗೆಲ್ಲಾ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಇದು ನನ್ನ ಜೀವನದ ಕನಸು.

uchalyaಒಂದು ನೆಮ್ಮದಿಯ ಸಂಗತಿಯೆಂದರೆ ನಾನು ಬರಹಗಾರನಾಗಿ ಪ್ರಸಿದ್ಧಿಯಾದ ನಂತರ ಅಧಿಕಾರಿಗಳು, ಜನಪ್ರತಿನಿಧಿಗಳ ಹತ್ತಿರ ಯಾವುದೇ ಚೌಕಾಶಿ ಇಲ್ಲದೆ ಕೆಲಸವಾಗುತ್ತಿದೆ. ನನ್ನ ಈ ಜನಪ್ರಿಯತೆಯನ್ನು ದಲಿತರ, ಅಲೆಮಾರಿಗಳ ಬದುಕಿನ ಸುಧಾರಣೆಗೆ ಬಳಸಿಕೊಳ್ಳುತ್ತಿದ್ದೇನೆ. ನನ್ನ ಜನಾಂಗಕ್ಕೆ ಶಾಶ್ವತ ನೆಲೆ ಕಲ್ಪಿಸುವ ನಿಟ್ಟಿನಲ್ಲಿ ಸಕರ್ಾರದ ಪಾಳು ಬಿದ್ದ ಭೂಮಿಯಲ್ಲಿ ಸಹಕಾರ ತತ್ವದಡಿ ಬೇಸಾಯ ಮಾಡಿಸುವ ಪ್ರಯೋಗವನ್ನು ಆರಂಬಿಸಿದ್ದೇನೆ. ಆದರೆ, ವಿದರ್ಭ, ಮರಾಠವಾಡ ಪ್ರಾಂತ್ಯಗಳಲ್ಲಿ ಬರಗಾಲ ಮತ್ತು ಕೃಷಿ ಉತ್ಪನ್ನಗಳ ಮೇಲಿನ ಬೆಲೆ ಕುಸಿತದಿಂದ ರೈತರು ಕೃಷಿ ಚಟುವಟಿಕೆಯಿಂದ ವಿಮುಖರಾಗಿ ನಗರದತ್ತ ವಲಸೆ ಹೊರಟಿದ್ದಾರೆ. ಇದು ಒಮ್ಮೊಮ್ಮೆ ನನ್ನ ಆತ್ಮ ಸ್ಥೈರ್ಯವನ್ನು ಕುಗ್ಗಿಸುತ್ತಿದೆ. ನೋಡೋಣ ಏನಾಗುತ್ತೆ ಎಂದು ನಿಟ್ಟುಸಿರುಬಿಟ್ಟರು.

ತುಸು ಮೌನದ ನಂತರ ಮಾತು ಮುಂದುವರಿಸಿದ ಗಾಯಕವಾಡ್, ಪುಲೆ ಮತ್ತು ಅಂಬೇಡ್ಕರ್ ರವರ ಸಾಮಾಜಿಕ ನ್ಯಾಯದ ತತ್ವವನ್ನು ಆಧಾರವಾಗಿಟ್ಟುಕೊಂಡು ನನ್ನ ಸಮುದಾಯದಂತಹ ಎಲ್ಲಾ ದಮನಿತರ ಏಳಿಗೆಗೆ ದುಡಿಯುತ್ತಿದ್ದೇನೆ. ಈ ದೇಶವನ್ನಾಳಿದ ಬ್ರಿಟಿಷರು ಕಲಿಸಿಹೋದ, ಬಡವರನ್ನು ಪ್ರಾಣಿಗಳಂತೆ ನೋಡುವ ದೃಷ್ಟಿಕೋನ ಮೊದಲು ಬದಲಾಗಬೇಕು. ಈ ದೇಶದ ಜನ, ನನ್ನ ಸಮುದಾಯವನ್ನು, ಮತ್ತು ಬಡ ದಲಿತರನ್ನು ಪ್ರಾಣಿಗಳಂತೆ ನೋಡದೆ, ಮನುಷ್ಯರಂತೆ ನೋಡುವ ಗುಣ ಬೆಳಸಿಕೊಳ್ಳಬೇಕು. ಇದಕ್ಕಾಗಿ ನಾನು ಪ್ರಾಣ ತೆರಲು ಸಿದ್ಧ ಎಂದರು. ಸಾವಿರ ಕೋಟಿಗಳ ಹಗರಣಗಳನ್ನು ಏನೇನೂ ಅಲ್ಲವೆಂಬಂತೆ ನೋಡುವ ಈ ಸಮಾಜದ ಜನರು ಹಸಿವೆಗಾಗಿ ಹತ್ತು ರೂಪಾಯಿ ಕದ್ದ ಕಳ್ಳನನ್ನು ದರೋಡೆಕೋರನಂತೆ ನೋಡುವ ದೃಷ್ಟಿಕೋನವನ್ನು ನಾನು ಹೇಗೆ ಅರಗಿಸಿಕೊಳ್ಳಲಿ? ಎಂದು ನನ್ನತ್ತ ಪ್ರಶ್ನೆ ಎಸೆದರು.

ಹೀಗೆ ನಮ್ಮ ಮಾತುಕತೆ ಮುಂದುವರಿಯುತ್ತಿರುವಾಗಲೇ ಧಾರವಾಡದ ಜನಸಾಹಿತ್ಯ ಸಮಾವೇಶದ ಆಶಯ ನುಡಿ ಮಾತನಾಡಲು ಕರೆ ಬಂದ ಕಾರಣ, ಮಾತು ಅಲ್ಲಿಗೆ ತುಂಡಾಯಿತು.

‍ಲೇಖಕರು g

April 14, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. Jayalaxmi Patil

    ‘ಉಚಲ್ಯಾ’ ಓದುವಾಗ ಅದೆಷ್ಟು ಬಾರಿ ನಡುಗಿಹೋಗಿದ್ದೆನೋ ಲೆಕ್ಕವೇ ಇಲ್ಲ!ಹಸಿವಿನಿಂದ ಕಂಗಾಲಾಗುವುದು ಎಂದರೇನೆಂದೇ ಗೊತ್ತಿರದ ನಾನು, ಉಚಲ್ಯಾ ಓದಿ ಅದಾವ ಪರಿ ದಿಗ್ಭ್ರಮೆಗೊಂಡಿದ್ದೆಯಂದರೆ ಅದೆಷ್ಟೋ ದಿನಗಳ ಕಾಲ ಉಣ್ಣಲು ತಟ್ಟೆಯನ್ನು ಕೈಗೆತ್ತಿಕೊಂಡಾಗಲೆಲ್ಲ ಉಚಲ್ಯಾ ನೆನಪಾಗಿ, ತೀರ ಹೊಟ್ಟೆಚುರುಗುಟ್ಟುವವರೆಗೂ ನನಗರಿವಿಲ್ಲದೇ ವಿಶಾದವೊಂದನ್ನು ಹೊತ್ತು ಸುಮ್ಮನೆ ಕುಳಿತುಬಿಡುತ್ತಿದ್ದೆ.

    ಪ್ರತಿಕ್ರಿಯೆ
  2. chalam

    ನನ್ನ ಆತ್ಮ ಕಥೆ ಉಚಲ್ಯಾ ನಾನು ನಿರೀಕ್ಷೆ ಮಾಡಿರದಷ್ಟು ಹೆಚ್ಚು ಜನಪ್ರಿಯತೆಯನ್ನು ನನಗೆ ತಂದುಕೊಟ್ಟಿತು. ಇದೇ ಜನಪ್ರಿಯತೆಯನ್ನು ಆಧಾರವಾಗಿಟ್ಟುಕೊಂಡು ನಾನು ಅನೇಕ ಕೃತಿಗಳನ್ನು ಬರೆದು ಹಣ ಸಂಪಾದಿಸಬಹುದಿತ್ತು. ಆದರೆ ಅದು ಆತ್ಮವಂಚನೆಯ ಕೆಲಸ ಎನಿಸಿಬಿಟ್ಟಿತು.
    ಈ ರೀತಿ ಎಷ್ಟು ಜನ ಪ್ರಸಿದ್ದರಿಗೆ ಅನಿಸಲು ಸಾದ್ಯ.ಧನ್ಯವಾದಗಳು ಗಾಯಕ್ವಾಡ್ ಸಾರ್

    ಪ್ರತಿಕ್ರಿಯೆ
  3. ಉದಯಕುಮಾರ್ ಹಬ್ಬು

    ಸಾಹಿತ್ಯದಿಂದ ಹೆಸರು ಮಾಡುವ ಜನರಿಗಿಂತ ತನ್ನ ದಲಿತ ಸಮುದಾಯದ ಉನ್ನತಿಗಾಗಿ ತನ್ನ ಜನಪ್ರಿಯತೆಯನ್ನು ಉಪಯೋಗಿಸುವ ಪ್ರಜ್ನೆ ಕೆಲವೇ ಕೆಲವು ಕನ್ನಡದ ಸಾಹಿತಿಗಳಿಗೆ ಸಾಧ್ಯವಾಗಿದೆ. ಸಾಹಿತಿಗಳಲ್ಲಿ ದಲಿತ ಸಾಹಿತಿಗಳು ಮತ್ತು ಬಲಿತ ಸಾಹಿತಿಗಳ ಎರಡು ವರ್ಗ ಇದೀಗ ಪ್ರಾರಂಭಗೊಂಡಿದೆ. ಇತ್ತೀಚಿಗೆ ಅದು ತೀವ್ರವಾಗಿ ಕಾಣಿಸುತ್ತಿದೆ. ಗಾಯಕವಾಡ ಅವರೇ ನಿಮಗಿದೋ ಕೋಟಿ ಪ್ರಣಾಮ ಉದಯಕುಮಾರ ಹಬ್ಬು, ಕಿನ್ನಿಗೋಳಿ

    ಪ್ರತಿಕ್ರಿಯೆ
  4. ಸುಧಾ ಚಿದಾನಂದಗೌಡ

    ಉಚಲ್ಯಾ ನನ್ನನ್ನು ತುಂಬ ಪ್ರಭಾವಿಸಿದ ಕೃತಿ.

    ಪ್ರತಿಕ್ರಿಯೆ
  5. sathish babu

    ಗಾಯಕವಾಡ ಅವರ ಉಚಲ್ಯಾ ಆತ್ಮಕಥೆ ನೀಡಿದ ಅನುಭವ, ಮೂಡಿಸಿದ ತಲ್ಲಣಗಳು ವಿವರಿಸಲಸಾಧ್ಯ. ಈ ಬರಹದ ಮೂಲಕ ಮತ್ತೊಮ್ಮೆ ಓದುವಂತೆ ಮಾಡಿದ್ರಿ ಸಾರ್‌……,
    -ಸತೀಶ್‌ ಬಾಬು, ಮಂಡ್ಯ

    ಪ್ರತಿಕ್ರಿಯೆ
  6. rajashekar

    ಉಚಲ್ಯಾ ನನ್ನನ್ನು ಮನುಷ್ಯನನ್ನಾಗಿ ಮಾಡಿದ ಕೃತಿ.

    ಪ್ರತಿಕ್ರಿಯೆ
  7. Sangeeta Kalmane

    ಈ ಬರಹ ಓದಿದ ಮೇಲೆ “ಉಚಲ್ಯಾ” ಕೃತಿ ಓದಲೆ ಬೇಕು. ಹಾಗೆ ನಿಮ್ಮ ಜನಾಂಗದ ಶ್ರೇಯೋಭಿವೃದ್ಧಿಗೆ ಕೈಲಾದ ಸಹಾಯ ಮಾಡುವ ಹಂಬಲ. ಖಾತೆ ನಮೂದಿಸಿದ್ದರೆ ಒಳ್ಳೆಯದಿತ್ತು. ಇಲ್ಲಿ ಹೃದಯದ ಹಸಿವು, ಹೊಟ್ಟೆಯ ಹಸಿವು ಓದಿ ಮನ ಕಿವುಚಿದ ಅನುಭವ. ಧನ್ಯವಾದಗಳು.

    ಪ್ರತಿಕ್ರಿಯೆ
  8. Anonymous

    Uchaloya oduvaga alu bandittu – eegaloo kanna hani oresikonde – nice article

    ಪ್ರತಿಕ್ರಿಯೆ
  9. shrikant prabhu

    ಊಟದ ಹುಡುಕಾಟದಲ್ಲಿ ಕನಿಷ್ಟ ಮರ್ಯಾದೆಯನ್ನೂ ಉಳಿಸಿಕೊಳ್ಳಲಾಗದ ಜನರ ತಳಮಳ ಸಂಕಟದ ಕಥೆ. ಹುಟ್ಟಿನ ಕಾರಣದಿಂದಾಗಿಯೇ ಅಪಮಾನಿತ ಬದುಕು ಬದುಕುತ್ತಾ ಇರುವ ಎಷ್ಟೊಂದು ಜನಾಂಗಗಳು ನಮ್ಮ ನಡುವೆ ಇವೆ.ಊಟಕ್ಕೆ ಅರ್ಧ ಘಂಟೆ ತಡವಾದರೆ ಜಗತ್ತು ಮುಳುಗುವುದೇನೋ ಅನ್ನಿಸುತ್ತಿರುತ್ತದೆ ಕೆಲಬಾರಿ ನಮಗೆ. ಉಚಲ್ಯಾ ಒಂದು ಅವಮಾನಿತ ಬದುಕಿನ ನಿಜದ ಮಾರ್ಮಿಕ ದಾಖಲೆ.ಮುಖಕ್ಕೆ ಹೊಡೆದಂತಿರುವ ಕಟು ಸತ್ಯ. ಧನ್ಯವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: