ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲಕ್ಷ್ಮಣ ಕೊಡಸೆ ‘ವಯೋವಿಕಾಸ’ದ ಕಥನ

ಕೇಶವ ಮಳಗಿ

ಲಕ್ಷ್ಮಣ ಕೊಡಸೆ ಕನ್ನಡದ ಹಿರಿಯ ಪತ್ರಕರ್ತರು, ವಿಶಿಷ್ಟ ಬಗೆಯ ಗದ್ಯ ಲೇಖಕರು. ವೃತ್ತಿ ಮತ್ತು ಪ್ರವೃತ್ತಿಗಳೆರಡಕ್ಕೂ ನ್ಯಾಯವೊದಗಿಸುವಂತೆ ಪತ್ರಿಕಾ ವರದಿ, ಲೇಖನ, ಅಂಕಣ ಬರಹಗಳ ಜತೆಜತೆಗೆ ಕಥೆ, ಕಾದಂಬರಿಗಳ ಮೂಲಕ ಒಳಗಿನ ಲೇಖಕನನ್ನು ಜತನದಿಂದ ಕಾಪಾಡಿಕೊಂಡು ಬಂದವರು. ಏಕಕಾಲಕ್ಕೆ ಎರಡು ಹರಿತ ಕಠಾರಿಗಳ ಮೇಲಿನ ಸವಾರಿ ಸುಲಭ ಸಾಧ್ಯವಲ್ಲ. ಹಾಗೆಂದೇ, ಕತ್ತಿಯಲುಗಿನ ಮೇಲೆ ನಡೆಯುತ್ತ ಎರಡೂ ಬದಿಯ ಅಕ್ಷರಲೋಕವನ್ನು ಜಯಿಸಿದವರ ಸಂಖ್ಯೆ ವಿರಳ.

ಬಹುಶಃ ಲೇಖಕ ಕೊಡಸೆಯವರಲ್ಲಿ ಅಡಗಿರುವ ಮುಗ್ಧತೆ ಮತ್ತು ಹೊಂದಾಣಿಕೆಯ ಸ್ಥಿತಿ ಎರಡನ್ನೂ ನಿಭಾಯಿಸಲು, ಸಾಧಿಸಲು ಅನುವು ಮಾಡಿಕೊಟ್ಟಿರಬೇಕು. ಬಾಲ್ಯದಿಂದಲೂ ಯಾವುದನ್ನೂ ಕಹಿಯಾಗಿ ನೋಡದ, ಜಾತಿಯ ಗರಳಕ್ಕೆ ಗಂಟಲನ್ನು ಒಗರಾಗಿಸಿಕೊಳ್ಳದ ಸಮಚಿತ್ತತೆ ಲಕ್ಷ್ಮಣ ಕೊಡಸೆಯವರ ಒಟ್ಟಾರೆ ಬರಹಗಳಲ್ಲಿ ಎದ್ದು ಕಾಣುವ ಅಂಶವಾಗಿದೆ.

ಕೊಡಸೆಯವರ ಈಗಿನ ಕೃತಿ ಮಿತ್ರಲಾಭ'ವನ್ನು ಸುಲಭವಾಗಿ ಆತ್ಮಕಥೆ ಎಂದು ಕರೆದುಬಿಡಬಹುದು. ಆದರೆ, ಹಾಗೆ ಕರೆಯಲು ಹಿಂಜರಿಕೆಯಾಗಲು ಕಾರಣ, ಆತ್ಮನಿರೂಪಣೆಯ ಅಂಶಗಳಿದ್ದೂ ಇದು ಅದಕ್ಕಿಂತ ಹೆಚ್ಚಿನದನ್ನು ಹೇಳಲು ಹವಣಿಸುತ್ತಿರುವುದು ಮತ್ತು ಇದು ಕೊಡಸೆಯವರೇ ಹೇಳಿರುವಂತೆ ‘ಅಲ್ಪವಿರಾಮ’ ಮಾತ್ರವಾಗಿದ್ದು ಬೆಳೆಯುವ ಸಾಧ್ಯತೆಯನ್ನು ಹೊಂದಿರುವುದು.

ವ್ಯಕ್ತಿಯೊಬ್ಬ ಬಾಲ್ಯವನ್ನು ದಾಟುತ್ತ, ತಾರುಣ್ಯಕ್ಕೆ ಕಾಲಿಟ್ಟು ತನ್ನ ಬದುಕನ್ನು ಕಟ್ಟಿಕೊಳ್ಳಲು ನಡೆಸಿದ ಸೆಣೆಸಾಟವನ್ನು ಹಿಡಿದಿಡುವ ಈ ಕೃತಿಯನ್ನು ಇಂಗ್ಲಿಶ್ ನಲ್ಲಾಗಿದ್ದರೆ ಸುಲಭವಾಗಿ ‘ಕಮಿಂಗ್ ಆಫ್ ಏಜ್ ನೆರೆಟೀವ್' ಎಂದು ಹೇಳಿಬಿಡಬಹುದಾಗಿತ್ತು. ಇಂಗ್ಲೀಷ್‌ ನಲ್ಲಿಯಾದರೂ ‘ಕಮಿಂಗ್ ಆಫ್ ಏಜ್’ ಪರಿಕಲ್ಪನೆಯ ಸಾಹಿತ್ಯ, ಸಿನಿಮಾ ಗಮನಾರ್ಹ ಸಂಖ್ಯೆಯಲ್ಲಿ ಲಭ್ಯವಿವೆ. ಆದರೆ, ಇಂತಹ ‘ವಯೋವಿಕಾಸ' ಕಥನಗಳಿಗೆ ಕನ್ನಡ ಭಾಷೆ ಇನ್ನೂ ನುಡಿಗಟ್ಟನ್ನು ಟಂಕಿಸಿಕೊಳ್ಳಬೇಕಿದೆ.

ಹರೆಯಕ್ಕೆ ಒಂದೊಂದು ಸಂಸ್ಕೃತಿಯಲ್ಲಿ ಒಂದೊಂದು ವ್ಯಾಖ್ಯಾನವಿರಲು ಸಾಧ್ಯ. ಹದಿಮೂರರಿಂದ ಇಪ್ಪತ್ತೊಂದು ವಯೋಮಾನದವರೆಗೆ ಈ ವಯೋವಿಕಾಸವನ್ನು ಗುರುತಿಸಲಾಗುತ್ತದೆ. ಭಾರತೀಯ ಸಮಾಜದಲ್ಲಿ ಗಂಡು ಅಥವ ಹೆಣ್ಣು ಮದುವೆಗೆ ಸಿದ್ಧರಾದರೆಂದರೆ ಅವರು ವಯಸ್ಕರಾದಂತೆ. ಬಾಲ್ಯ ಪೋಷಕರ ಅವಲಂಬನೆಯಲ್ಲಿ ಕಳೆಯುತ್ತದೆ. ವ್ಯಕ್ತಿ ಇಪ್ಪತ್ತೊಂದರ ಆಸುಪಾಸು ತಲುಪಿದ್ದೇ ತನ್ನ ಬದುಕಿನ ಎಲ್ಲ ಹೊಣೆಗಾರಿಕೆಯನ್ನು, ವೈಯಕ್ತಿಕ ಇಷ್ಟಾನಿಷ್ಟಗಳನ್ನು ತಾನೇ ಸಾಕ್ಷಾತ್ಕರಿಸಿಕೊಳ್ಳುವಂತೆ ರೂಪಾಂತರಗೊಳ್ಳುವುದು ಈ ವಯೋ ವಿಕಾಸದ ಸೋಜಿಗ.

ಅವಲಂಬನೆಯು ಸ್ವಾವಲಂಬನೆಯಾಗಿ ಬದಲಾಗುವುದೇ ಇಲ್ಲಿನ ಬಹುಮುಖ್ಯ ಕ್ರಿಯೆ. ಈ ವಿವರಣೆ ಕೊಡಸೆಯವರ ಪ್ರಸ್ತುತ ಕೃತಿಯ ರೂಪುರೇಶೆಯನ್ನು ಚೆನ್ನಾಗಿ ಅರಹುತ್ತದೆ. ಕೊಡಸೆ ಮಲೆನಾಡಿನವರು. ಬಾಲ್ಯದ ಭಾವಕೋಶವನ್ನು ರೂಪಿಸಿದ ಮಲೆನಾಡು ಪರಿಸರ, ಹರೆಯದ ಬಳಿಕ ಬದುಕು ಕಟ್ಟಿಕೊಟ್ಟ ನಗರಗಳಲ್ಲಿನ ಅನುಭವಗಳ ಮುಖಾಮುಖಿ ಅವರ ಬಹುಪಾಲು ಬರಹಗಳ ಭಿತ್ತಿಯಾಗಿವೆ. ಮಲೆನಾಡಿನ ಲೇಖಕರಿಗೆ ಬದುಕಿನ ಸುಖದುಃಖಗಳನ್ನು ಅಲ್ಲಿನ ದತ್ತವಾದ ಜೀವಪರಿಸರವು ಮೃದುಗೊಳಿಸುವ ಗುಣವನ್ನು ಹೊಂದಿರಬೇಕು.

ಬಯಲು ಸೀಮೆಯಲ್ಲಿನಂತೆ ಭೌಗೋಳಿಕ ಉಗ್ರತೆ, ರೂಕ್ಷತೆ ಜೀವವ್ಯಾಪಾರವನ್ನು ಇನ್ನಷ್ಟು ಕಹಿಯಾಗಿಸದು. ಎಲ್ಲ ಒಳ್ಳೆಯ ಸಾಹಿತ್ಯದಂತೆ, ಸದ್ಯದ ವಯೋವಿಕಾಸ ಕಥನವು ಕೇವಲ ಬಾಲಕನೊಬ್ಬ ತರುಣನಾಗಿ ಬೆಳೆಯುವ ಕಥಾನಕ ಮಾತ್ರವಾಗಿರದೆ, ಒಂದು ಸಮುದಾಯದ ಸಾಂಸ್ಕೃತಿಕ ಸಂಕಥನವಾಗಿ ಓದುಗರನ್ನು ಎದುರುಗೊಳ್ಳುವುದು ಈ ಕೃತಿಯ ಹೆಚ್ಚುಗಾರಿಕೆಯಾಗಿದೆ.

ಈ ಕಥನದಲ್ಲಿ ಬಲಾಢ್ಯ ಶೂದ್ರ ಸಮುದಾಯಗಳ ಆಚೆಗಿರುವ ಬಹುಸಮುದಾಯಗಳ ಮೊದಲ ಮತ್ತು ಎರಡನೆಯ ತಲೆಮಾರಿನ ಶ್ರಮಜೀವಿಗಳು ತಮ್ಮ ಕುಟುಂಬವನ್ನು ಘನತೆಯಿಂದ ಸಲುಹುವುದು, ನಿಧಾನಕ್ಕೆ ಸ್ವಂತ ಪರಿಶ್ರಮದಿಂದ ಸಾಮಾಜಿಕ ಚಲನಶೀಲತೆ ಪಡೆಯುವುದನ್ನು ಕಾಣುತ್ತೇವೆ.

ಜನವಿದೂರ ಕಾನನದ ನಡುವೆ ಬದುಕಿದ್ದರೂ, ತಮ್ಮ ಕುಟುಂಬ ಮತ್ತು ಸಮುದಾಯಗಳು ಶಿಕ್ಷಿತರಾಗುವುದರಿಂದ ಮತ್ತು ಸಂಘಟಿತರಾಗುವುದರಿಂದ ಮಾತ್ರ ವೈಯಕ್ತಿಕ-ಸಾಮುದಾಯಿಕ ಉನ್ನತಿಯನ್ನು ಸಾಧಿಸಲು ಸಾಧ್ಯವೆಂಬ ಮುಂಗಾಣ್ಕೆಯನ್ನು ಆ ಹಿರಿಯ ತಲೆಮಾರಿನವರು ಹೊಂದಿದ್ದರು ಎಂಬುದನ್ನು ಈ ಕಥನವು ಮತ್ತೆ ಮತ್ತೆ ಪ್ರಸ್ತಾಪಿಸುತ್ತದೆ. ದೀವರು ಇಲ್ಲವೆ ಹಳೇಪೈಕದವರು ಎಂದು ಗುರುತಿಸುವ ಸಮುದಾಯದ ಹಿರಿಯರು ತಮ್ಮ ಸತತ ಪರಿಶ್ರಮ ಮತ್ತು ಜಾಣ್ಮೆಗಳಿಂದ ಸಮಾಜದಲ್ಲಿ ಗೌರವ-ಪ್ರತಿಷ್ಠೆ ಪಡೆದ ಬಗೆಯನ್ನು ಈ ಕೃತಿಯು ಚೆಲುವಾಗಿ ನಿರೂಪಿಸುತ್ತದೆ.

ಲಕ್ಷ್ಮಣ ಕೊಡಸೆಯವರ ತಂದೆ ಅಂತಹ ದೂರಗಾಮಿ ಕಾಣ್ಕೆಯನ್ನು ಹೊಂದಿದ್ದರು ಎಂಬುದನ್ನು ಇಲ್ಲಿ ಅತ್ಯಂತ ನಿರುದ್ವಿಗ್ನವಾಗಿ ಚಿತ್ರಿಸಲಾಗಿದೆ. ಮಲೆನಾಡಿನ ಸಂಕಥನವೆಂದರೆ ಕುವೆಂಪು ಮತ್ತು ತೇಜಸ್ವಿಯವರನ್ನು ಪ್ರಸ್ತಾಪಿಸದೆ ಮುಂದುವರೆಯಲು ಹೇಗೆ ಸಾಧ್ಯ? ಆದರೆ, ಕೊಡಸೆಯವರು ಹೊಸನಗರ ತಾಲೂಕಿನ ಶೂದ್ರ ಸಮುದಾಯಕ್ಕೂ, ಕುವೆಂಪು ಅವರ ಕೃತಿಗಳ ಭಿತ್ತಿಯಾದ ತೀರ್ಥಹಳ್ಳಿಯ ಶೂದ್ರ ಸಮುದಾಯಗಳಿಗೂ ಇರುವ ಭಿನ್ನತೆಯನ್ನು ಚೆನ್ನಾಗಿಯೇ ವಿವರಿಸಿದ್ದಾರೆ.

ತೀರ್ಥಹಳ್ಳಿ ತಾಲೂಕಿನ ಭೂ ಒಡೆಯರು ಪ್ರಮುಖವಾಗಿ ಒಕ್ಕಲಿಗರು. ಅಲ್ಲಿನ ದೀವರು ಸ್ವಂತಕ್ಕೆ ತೋಟ-ಗದ್ದೆಗಳನ್ನು ಹೊಂದುವಂತಿರಲಿಲ್ಲ. ಮಾತ್ರವಲ್ಲ, ಒಕ್ಕಲಿಗರ ಸಾಂಸ್ಕೃತಿಕ ಮೇಲರಿಮೆಯ ಪ್ರತೀಕವಾದ ಮದುವೆ ಮತ್ತಿತರ ಆಚರಣೆಗಳನ್ನು ಅನುಕರಿಸುವಂತಿರಲಿಲ್ಲ.ಮಲೆಗಳಲ್ಲಿ ಮದುಮಗಳು’ ಕೃತಿಯಲ್ಲಿ ಹಳೇಪೈಕದ ಸೇಸನಾಯ್ಕರು ಇಂಥ ದಬ್ಬಾಳಿಕೆಯ ವಿರುದ್ಧ ತಮ್ಮದೇ ಅರ್ಥದಲ್ಲಿ ಧ್ವನಿಯೆತ್ತುವುದನ್ನು ಕಾಣುತ್ತೇವೆ. ವ್ಯತಿರಿಕ್ತವಾಗಿ, ಹೊಸನಗರ ತಾಲೂಕಿನ ಭೂಹಿಡುವಳಿದಾರರಲ್ಲಿ ಹೆಚ್ಚಿನವರು ಲಿಂಗಾಯತರು.

ಈ ಕಾರಣವಾಗಿಯೇ ದೀವರು ಅಂಗೈಯಗಲದ ತೋಟ, ಗದ್ದೆಯನ್ನು ಹೊಂದಿ, ಲಿಂಗಾಯತರ ಜಮೀನನ್ನು ಗೇಣಿ ಪಡೆದು ಆದಾಯ ಹೆಚ್ಚಿಸಿಕೊಳ್ಳುವ ಮಾರ್ಗ ಕಂಡುಕೊಂಡಿದ್ದರು ಎಂದು ಕೊಡಸೆ ಹೇಳುತ್ತಾರೆ. ಮಲೆಗಳಲ್ಲಿನ ಮದುಮಗಳು' ಕೃತಿಯಲ್ಲಿನ ಅನೇಕ ಪಾತ್ರಗಳು ಕೊಡಸೆಯವರ ಕಥನದಲ್ಲಿ ಜೀವಂತ ವ್ಯಕ್ತಿಗಳಾಗಿ ಬರುತ್ತಾರೆ. ಅಲ್ಲಿನ ಸೇಸನಾಯ್ಕರಂತೆಯೇ ಇಲ್ಲಿಯೂ ಒಂದು ಜೀವಂತ ಪಾತ್ರವಿದೆ. ಮತ್ತು ಆ ಪಾತ್ರವಾದಬಡಿಯ ನಾಯ್ಕರ’ ನಿಜ ಜೀವನದಲ್ಲಿನ ಹೋರಾಟ, ಅವರ ಸುತ್ತ ಕಟ್ಟಿದ್ದ ದಂತಕಥೆ ಮತ್ತು ಅವರು ಪಡೆದ ಯಶಸ್ಸಿನ ನಿರೂಪಣೆ ಮನ ಮುಟ್ಟುವಂತಿವೆ.

ಕುವೆಂಪು ಮತ್ತು ತೇಜಸ್ವಿಯವರ ಕೃತಿಗಳು ಮಲೆನಾಡಿನ ಒಟ್ಟಾರೆ ಶೂದ್ರ ಸಮುದಾಯಗಳ ವಿಕಾಸದ ಕಥೆಯನ್ನು ತೆರೆದಿಟ್ಟರೆ, ಕೊಡಸೆಯವರ ಕೃತಿಗಳು (ಕಾದಂಬರಿ, ಕಥೆ, ಕೆಲವು ಅಂಕಣ ಬರಹಗಳು ಮತ್ತು ಸದ್ಯದ ಕೃತಿ) ಆ ಶೂದ್ರ ಸಮುದಾಯದ, ಒಂದು ನಿರ್ದಿಷ್ಟ ಕೆಳ ಸಮುದಾಯವಾದ ದೀವರ ಜನಾಂಗದ ಬದುಕಿನ ಕಷ್ಟಸುಖಗಳನ್ನು ಅನಾವರಣಗೊಳಿಸುತ್ತವೆ.

ಅತ್ಯಂತ ಸಮೀಪದಿಂದ ಕಂಡುಂಡು ಕಥೆಯನ್ನು ಕಂಡಿರಿಸುವುದು; ಅನುಭವಕ್ಕೊಳಗಾದವನು ತನ್ನ ಕಥೆಯನ್ನು ತಾನೇ ಕಥಿಸುವುದು, ಇಷ್ಟೇ ವ್ಯತ್ಯಾಸ. ಆದರೆ, ಲೇಖಕನೊಬ್ಬನ ಕಲಾಭಿಜ್ಞತೆ, ಕುಸುರಿ, ಅಪ್ಪಟ ಪ್ರಾಮಾಣಿಕತೆ ಮತ್ತು ಸ್ವಾನುಭೂತಿಗಳು ಆಯಾ ಕೃತಿಗಳನ್ನು ಎಲ್ಲ ಕಾಲಕ್ಕೂ ಸಮಕಾಲೀನಗೊಳಿಸುವ ಗುಣವನ್ನು ಪಡೆದಿರುತ್ತವೆ. ಈ ಕೃತಿಯಲ್ಲಿ ಸಾಂಸ್ಕೃತಿಕ ವಿವರಗಳು, ಆಧುನಿಕತೆಯ ಭರಾಟೆಯಲ್ಲಿ ಮರೆಯಾಗಿರಬಹುದಾದ, ಬದುಕಿನ ಭಾಗವೇ ಆಗಿದ್ದ ನುಡಿಗಟ್ಟುಗಳು ಕಿಕ್ಕಿರಿದಿವೆ.

ದಡಪೆ, ಹ್ವಾಕೆ, ಇಚ್ಚಾಲು (ನಿರ್ದಿಷ್ಟ ಬಗೆಯ ಉಕ್ಕೆ, ಉಳುಮೆ); ಆಯಾ ಕಾಲಕ್ಕೆ ಆರ್ಥಿಕ ಸ್ಥಿತಿಗತಿ ಅವಲಂಬಿಸಿ ವಿಸ್ತಾರಗೊಳ್ಳುತ್ತ ಹೋಗುವ ಮೂರು-ಐದಂಕಣದ ಹುಲ್ಲಿನ ಮನೆಗಳು, ಪದೋನ್ನತಿಗೊಂಡ ಮಂಗಳೂರು ಹಂಚಿನ ಮನೆಗಳು, ರೆಡಿ' (ರೇಡಿಯೊ), ಬೈಸಿಕಲ್, ತೀರ್ಥಹಳ್ಳಿ-ಸಾಗರದ ನಡುವಿನ ಜಲ್ಲಿ ರಸ್ತೆಯಲ್ಲಿ ಕ್ವಚಿತ್ತಾಗಿ ಓಡಾಡುತ್ತಿದ್ದ ಬಸ್ಸು, ಶಿಕಾರಿ ಹುಚ್ಚಿನ ಯಜಮಾನರು, ಹಸಿಗೆಯ ವಿಧಾನಗಳು, ಕವಳಿಗೆ ಪದ್ಧತಿ ಇತ್ಯಾದಿಗಳು ಓದುಗರಿಗೆ ಕಂಡರಿಯದ ಸಾಂಸ್ಕೃತಿಕ ಲೋಕದ ಚೆಲುವನ್ನು ಕಾಣಿಸಬಲ್ಲವು.

ಇಲ್ಲಿ ಪ್ರಸ್ತಾಪಗೊಂಡ ವಿನಿಮಯ ಪದ್ಧತಿಯ ವಿವರಗಳು ಒಂದು ಸಮಾಜ ಹೇಗೆ ಪರಸ್ಪರ ಅವಲಂಬಿತವಾಗಿ ಸ್ವಾವಲಂಬಿಯಾಗಿರಬಲ್ಲುದು ಎಂಬುದನ್ನೇ ತೋರುತ್ತದೆ. ಇಲ್ಲಿನ ವಿನಿಮಯದಲ್ಲಿ ಹಣ ಮತ್ತು ವ್ಯವಹಾರಗಳು ಪ್ರಧಾನವಾಗಿರದೆಸಂಬಂಧ’ ಮತ್ತು ಸಾಮಾಜಿಕ ಹೊಣೆಗಾರಿಕೆ' ಮುಂಚೂಣಿಯಲ್ಲಿರುವುದು ಕೂಡ ಇಂದಿನ ಸಮಾಜಕ್ಕೆ ಪಾಠವನ್ನೇ ಹೇಳಬಲ್ಲುದು. ಈ ಕೃತಿಯನ್ನು ವಿಶಾಲವಾಗಿ ಎರಡು ಭಾಗಗಳಲ್ಲಿ ನೋಡಬಹುದು.

ಮೊದಲ ಭಾಗದಲ್ಲಿ ಒಬ್ಬ ಸಾಧಾರಣ ಹುಡುಗ ಪ್ರಾಥಮಿಕ ಶಾಲೆ, ಮಾಧ್ಯಮಿಕ ಶಿಕ್ಷಣ ಪಡೆದು, ಹೈಸ್ಕೂಲಿಗೆ ದೊಡ್ಡ ಊರು ಸೇರುವುದು. ಆನಂತರ ಪದವಿ, ಸ್ನಾತಕೋತ್ತರ ಪದವಿ ಪಡೆಯುವುದು. ಈ ಶೈಕ್ಷಣಿಕ ಹೋರಾಟವು ಒಂದು ಮಹಾಯಾತ್ರೆ. ಎಲ್ಲ ಬಡ ಸಮುದಾಯಗಳ ಮಕ್ಕಳೂ ಅನುಭವಿಸುವಂಥದ್ದು. ಹೋರಾಟದ ಮೂಲಕ ಶಿಕ್ಷಣ ಪಡೆಯುವುದು ಒಂದು ಹಂತವಾದರೆ, ಬಳಿಕ ಉದ್ಯೋಗ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವುದು ಎರಡನೆಯ ಘಟ್ಟ.

ಈ ಎಲ್ಲ ಹಂತಗಳಲ್ಲಿಯೂ ಕುಟುಂಬ, ಗ್ರಾಮ ಸಮುದಾಯ, ಅಕ್ಕಪಕ್ಕದ ಊರಿನ ಜನ, ಬಳಗ, ಹಿತೈಷಿಗಳು, ಗೆಳೆಯರು ಆಸರೆ ಒದಗಿಸುವುದರಿಂದಲೇ ಬದುಕು ಸಹ್ಯ ಎಂಬ ವಿಶಾಲಾರ್ಥವನ್ನು ಕೃತಿ ನೀಡುತ್ತದೆ. ಸಹಬಾಳ್ವೆಯ ಮನಸ್ಥಿತಿ ಜೀವನದ ಕಡುಕಷ್ಟಗಳನ್ನು ಪಾರು ಮಾಡಿಸುತ್ತದೆ ಎಂಬ ನಿಲುವನ್ನು ವ್ಯಕ್ತಪಡಿಸುತ್ತದೆ. ಸ್ನಾತಕೋತ್ತರ ಪದವಿಯ ನಂತರ ಸ್ವಾವಲಂಬಿ ಬದುಕಿಗಾಗಿ ನಡೆಸುವ ಪ್ರಯತ್ನಗಳನ್ನು ಎರಡನೆಯ ಭಾಗವೆಂದು ಗುರುತಿಸಬಹುದು.

ಆ ಕಾಲದ ಹಿರಿಯ ಸಾಹಿತಿಗಳು, ಸಹಪಾಠಿಗಳು, ಪತ್ರಕರ್ತರು, ಪರಿಚಿತರು, ರಾಜಕೀಯ-ಸಾಂಸ್ಕೃತಿಕ ವಾತಾವರಣದ ವಿವರಗಳು ಇಲ್ಲಿವೆ. ತುರ್ತುಪರಿಸ್ಥಿತಿ ಮತ್ತು ಆಗಿದ್ದ ಸಾಮಾಜಿಕ ಸನ್ನಿವೇಶದ ಪ್ರಸಂಗಗಳು ಇಂದಿನ ತಲೆಮಾರಿನ ಓದುಗರಿಗೆ ಹೊಸ ವಿವರಗಳಾಗಿ ಕಾಣಬಲ್ಲವು. 1970-80ರ ದಶಕದಲ್ಲಿ ಪದವಿ, ಪ್ರತಿಭೆ, ಹೊಸತನ್ನು ಸಾಧಿಸುವ ಹುಮ್ಮಸ್ಸು, ಸಾಮಾಜಿಕ ಕಳಕಳಿಗಳಿದ್ದರೂ ದೇಶದ ನಿರುದ್ಯೋಗ ಸಮಸ್ಯೆ ಹೇಗೆ ಯುವಕರನ್ನು ಅಪ್ರತಿಭರನ್ನಾಗಿಸಿ, ಹಣ್ಣಾಗಿಸಿತ್ತು ಎಂಬುದು ಕಣ್ಣಿಗೆ ಕಟ್ಟುವಂತಿದೆ.

ಈ ಬಗೆಯ ಸನ್ನಿವೇಶವೇ ಆ ಕಾಲದ ಯುವಕರು ವೃತ್ತಿಗಳಲ್ಲಿ ಸಾಧಿಸಿದ ದಕ್ಷತೆ, ಕ್ಷಮತೆ, ಬದ್ಧತೆ ಮತ್ತು ಪ್ರಾಮಾಣಿಕತೆಗೆ ಅನುವು ಮಾಡಿಕೊಟ್ಟಿತೆ? ಮೊದಲ ತಲೆಮಾರಿನ ಸಾಕ್ಷರ ಸಮುದಾಯ ತನ್ನ ಸಾಮಾಜಿಕ ಜವಾಬ್ದಾರಿ ಸರಿಯಾಗಿ ನಿರ್ವಹಿಸದಿದ್ದುದರಿಂದಲೇ ಸಮಾಜವು ವಿಘಟಿತವಾಯಿತೆ? ಎಂಬುದು ಅಧ್ಯಯನ ಯೋಗ್ಯ ವಿಷಯ. ಕೊಡಸೆಯವರ ಬದುಕಿನ ಏಳುಬೀಳಿನ ಕಥೆಯನ್ನು ಓದುಗರು ಕೃತಿಯಲ್ಲಿಯೇ ಎದುರುಗೊಂಡಾಗ ಅತ್ಯಂತ ನಿಖರ ಓದಿನ ಅನುಭವ ಪಡೆಯಬಲ್ಲರು.

ಈ ಕೃತಿ ಏನನ್ನೋ ನೆನಪಿಸಿಕೊಳ್ಳುತ್ತ, ನಿವೃತ್ತಿಯ ಬದುಕಿನ ಪ್ರಸ್ತಾಪದೊಂದಿಗೆ ಅಂತ್ಯವಾಗಿದೆ. ಆದರೆ, ನಾನು ಮಾತ್ರ, ಕೊಡಸೆಯವರು ಮಾರ್ಚ್ ಒಂದು, 1978ರಂದು ಪ್ರಜಾವಾಣಿ ಸೇರಿದ ಘಟನೆಯೊಂದಿಗೆ ಅಂತ್ಯ ಕಲ್ಪಿಸಿಕೊಳ್ಳುವೆ. ಈ ಘಟನೆಗೆ ಒಂದು ಐತಿಹಾಸಿಕ ಮಹತ್ವವಿದೆ. ಅಂದು ಪ್ರಜಾವಾಣಿ ಸೇರಿದ ಆರು ತರುಣರು ಸ್ನಾತಕೋತ್ತರ ಪದವೀಧರರು ಮತ್ತು ಹಿಂದುಳಿದ ಸಮುದಾಯಗಳಿಗೆ ಸೇರಿದವರು.

ಕ್ರಮವಾಗಿ, ಲಕ್ಷ್ಮಣ ಕೊಡಸೆ, ಡಿ.ವಿ. ರಾಜಶೇಖರ, ಶಿವಾಜಿ ಗಣೇಶನ್, ಇಂದೂಧರ ಹೊನ್ನಾಪುರ, ಇ.ವಿ. ಸತ್ಯನಾರಾಯಣ ಮತ್ತು ಚೌಡೇಗೌಡ ಬೀಡನಹಳ್ಳಿ ಈ ತರುಣ ಪತ್ರಕರ್ತರು. ಇವರಲ್ಲಿ, ಡಿ.ವಿ. ರಾಜಶೇಖರ ಮತ್ತು ಇಂದೂಧರ ಹೊನ್ನಾಪುರ ಕವಿಗಳೆಂದು ಪರಿಚಿತರಾಗಿದ್ದವರು ಆಮೇಲೆ, ಪ್ರವೃತ್ತಿಯನ್ನು ಸಂಪೂರ್ಣ ಬಿಟ್ಟುಕೊಟ್ಟಿದ್ದು ಸೋಜಿಗ.

ಆ ಅರ್ಥದಲ್ಲಿ ಕೊಡಸೆಯವರು ತಮ್ಮ ಅಂತರಂಗದ ಲೇಖಕನ ಕಿಚ್ಚನ್ನು ಇನ್ನೂ ಉಳಿಸಿಕೊಂಡಿದ್ದಾರೆ. ಹೇಳಬೇಕಿರುವುದು ಅದಲ್ಲ. ಒಂದು ಸಂಕ್ರಮಣ ಕಾಲಘಟ್ಟದಲ್ಲಿ ಪತ್ರಿಕಾಕ್ಷೇತ್ರಕ್ಕೆ ಬಂದ ಕೊಡಸೆ ಪೀಳಿಗೆಯವರುನಡುಕರ’ ತಲೆಮಾರಿನವರು. ಆ ಮೊದಲು ಮೇಲ್ಜಾತಿಯ ಪ್ರಾಬಲ್ಯದಲ್ಲಿದ್ದ ಪತ್ರಿಕಾರಂಗ ತನ್ನ ಸ್ವರೂಪವನ್ನು ಬದಲಾಯಿಸಿಕೊಂಡ ಕಾಲಘಟ್ಟವಿದು.

ಕೊಡಸೆ ತಲೆಮಾರಿನವರು ಎದುರಿಸಿದ ವೃತ್ತಿ ತಲ್ಲಣ, ಸಂಕಟ, ಸವಾಲು ಮತ್ತು ಅದನ್ನು ವೈಯಕ್ತಿಕ ನೆಲೆಯಲ್ಲಿ ಹಾಗೂ ಸಮಾನ ಮನಸ್ಕ ನೆಲೆಯಲ್ಲಿ ಕಂಡುಕೊಂಡ ಪರಿಹಾರ ಮತ್ತು ಸಾಧ್ಯತೆಗಳನ್ನು ಕೃತಿ ಚರ್ಚಿಸುವುದಿಲ್ಲ. ಅದನ್ನು ಪ್ರತ್ಯೇಕವಾಗಿಯೇ ಬರೆಯಬೇಕು ಎಂದು ಕೊಡಸೆಯವರೇ ಹೇಳಿಕೊಂಡಿದ್ದಾರೆ. ಸಂಘರ್ಷದ ಹಾದಿ ನೀಡಿದ ಒಳನೋಟ, ಪಕ್ವತೆ ಮತ್ತು ಸಾಧ್ಯವಾಗಿಸಿದ ಗುಣಾತ್ಮಕ ಬದಲಾವಣೆಗಳು ಇಂದಿನ ಲೇಖಕರಿಗೆ, ತರುಣ ಪತ್ರಕರ್ತರಿಗೆ ಹೊಸ ಬೆಳಕನ್ನು ಮೂಡಿಸಬಲ್ಲವು.

ವೃತ್ತಿಪರತೆ, ವೃತ್ತಿದಕ್ಷತೆ, ವೈಯಕ್ತಿಕ ನೆಲೆಯ ಬದ್ಧತೆ ಮತ್ತು ಸಮುದಾಯಗಳ ಕುರಿತ ಕಳಕಳಿ ಗೈರುಹಾಜರಾಗಿರುವ, ಹುಸಿ ಶ್ರೇಷ್ಠತೆ, ಸ್ವಜನ ಪಕ್ಷಪಾತ, ಜಾತಿ, ಪ್ರಾದೇಶಿಕತೆ, ಉಪಭಾಷೆಗಳ ರಾಜಕಾರಣದಲ್ಲಿ ಮುಳುಗಿರುವ ಈ ತಲೆಮಾರಿನ ಪತ್ರಿಕಾರಂಗದ ವೃತ್ತಿಪರರಿಗೆ ಹಿಂದೆಂದಿಗಿಂತ ಇಂದು ಅಂತಹ ಒಳನೋಟಗಳು ಅಗತ್ಯವಾಗಿವೆ.

ಉಳಿದಂತೆ, ಈಗಾಗಲೇ ಹೇಳಿದಂತೆ ಮನೆಯವರಿಂದ ಅತಿ ಸಾಮಾನ್ಯ ಅನ್ನಿಸಿಕೊಂಡಿದ್ದ ಬಾಲಕನೊಬ್ಬ ತನ್ನ ವಯೋವಿಕಾಸದಲ್ಲಿ ಹೇಗೆ ತನ್ನ ಸ್ವಾವಲಂಬಿ ಬದುಕನ್ನು ರೂಪಿಸಿಕೊಂಡ ಎಂಬುದನ್ನು ಈ ಕೃತಿ ಅತ್ಯಂತ ಪರಿಣಿತ ಭಾಷೆಯಲ್ಲಿ ತೆರೆದಿಡುತ್ತದೆ. ಇಂತಹ ಹಲವು ಕಾರಣದಿಂದಲೇ ಇದೊಂದು ಶುಷ್ಕ ಆತ್ಮನಿರೂಪಣೆಯಾಗದೆ, ಸಾಂಸ್ಕೃತಿಕ-ಸಾಮಾಜಿಕ ಸಂಕಥನವಾಗಿ ಓದುಗರನ್ನು ನಿಧಾನಕ್ಕೆ ಆವರಿಸುವ ಗುಣವನ್ನು ಪಡೆದಿದೆ.

ಅಂದಹಾಗೆ, ಲಕ್ಷ್ಮಣ ಕೊಡಸೆ ನಾನು ಕಿರು ಕಾಲಾವಧಿಯಲ್ಲಿ ಪ್ರಜಾವಾಣಿಯಲ್ಲಿದ್ದಾಗ ನನ್ನ ಬಾಸ್' ಆಗಿದ್ದವರು. ಅವರ ವಿಶ್ವಾಸಕ್ಕೆ ಕೃತಜ್ಞತೆಗಳು.

ಸಹೃದಯಿ ಮಿತ್ರ ರವೀಂದ್ರ ಸಿರಿವರ ತಮ್ಮ ಸ್ವರ ಪ್ರಿಂಟ್ ಅಂಡ್ ಪಬ್ಲಿಕೇಶನ್ ಮೂಲಕ ಪ್ರಕಟಿಸಿದ ನನ್ನಮಿತ್ರಲಾಭ’ ಕೃತಿ ಇಂದು ಕೈಸೇರಿದ ಖುಷಿಯಲ್ಲಿ ಕೃತಿಗೆ ಪ್ರವೇಶರೂಪದ ಮಾತುಗಳನ್ನು ಬರೆದ ಮಿತ್ರ ಕೇಶವ ಮಳಗಿ ಅವರ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ.

ಈ ಕೃತಿಯು ನವಕರ್ನಾಟಕ ಹಾಗೂ ಅಂಕಿತ ಪುಸ್ತಕ ಮಳಿಗೆಯಲ್ಲಿ ದೊರೆಯುತ್ತದೆ. ಮತ್ತು ರವೀಂದ್ರನಾಥ್ ಸಿರಿವರ ಅವರಲ್ಲಿಯೂ ದೊರೆಯುತ್ತದೆ. ಸಂಪರ್ಕ ಸಂಖ್ಯೆ: 98441 09706)

‍ಲೇಖಕರು Avadhi

26 September, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading