ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲಕ್ಷಾಂತರ ರೂಪಾಯಿ ಪಗಾರ ಹೋಯ್ತಲ್ಲಾ? ನಿಮಗೆ ಬೇಸರವಿಲ್ಲವೇ?

ಕಾಣದ ಕಡಲಿಗೆ ಹಂಬಲಿಸಿದೆ ಮನ..

ಹೆಜ್ಜೆ 17

ಹುರುಪಿನ ಸಂವಾದ

avadhi-column-rahul bw-edited2

ಕಳೆದ ಮೂರು ದಿನಗಳಿಂದ ನನ್ನ ನಡಿಗೆಯ ಗತಿ ವೇಗವಾಗಿ, ಹೆಚ್ಚು ಮೈಲುಗಳನ್ನು ಕ್ರಮಿಸತೊಡಗಿದ್ದೆ. ತೊಡೆಯ ಸಂದಿಗಳು ಒಂದಕ್ಕೊಂದು ಸ್ಪರ್ಶಿಸಿ ಗಾಯಗಳಾಗಿದ್ದವು. ಪ್ರತಿ ದಿನ ರಾತ್ರಿ ತೊಡೆಯ ಸಂದಿಗೆ ಮತ್ತು ಪಾದದಲ್ಲಿ ಮೂಡಿದ್ದ ಬೊಬ್ಬೆಗಳಿಗೆ ಕೊಬ್ಬರಿ ಎಣ್ಣೆ ಹಚ್ಚಿ ತಿಕ್ಕುತ್ತಿದ್ದೆ. ಬೆಳಿಗ್ಗೆಯ ಹೊತ್ತಿಗೆ ಗಾಯಗಳು ಸ್ವಲ್ಪ ಮಾಗುತ್ತಿದ್ದವು.

ಹೋಟೆಲಿನ ನೆಲ ಅಂತಸ್ತಿನಲ್ಲಿರುವ ಉಪಹಾರ ಮಂದಿರದಲ್ಲಿ ಇಡ್ಲಿ, ವಡೆ, ಸಾಂಬಾರ್ ಜಡಿದು, ಚಹಾ ಕುಡಿದು, ಪ್ರೌಢಶಾಲೆಯನ್ನು ಹುಡುಕಿಕೊಂಡು ಹೊರಟೆ. ಬ್ರಿಟೀಷರ ಕಾಲದಲ್ಲಿ ಕಟ್ಟಿಸಿದ್ದ ಈ ಭಾಗದ ಅತೀ ಹಳೆಯ ಶಾಲೆಯಾದ ಮುನಿಸಿಪಲ್ ಹೈಸ್ಕೂಲ್ ತಲುಪಿದೆ. ಒಂದು ಶತಮಾನ ಹಳೆಯ ಕಟ್ಟಡವಾದರೂ avadhi- column- rahul- low res- editedಬಹಳ ಗಟ್ಟಿಮುಟ್ಟಾಗಿರುವುದು ಅಂದಿನ ನಿಷ್ಠೆ ಮತ್ತು ಮಾಡುವ ಕೆಲಸದಲ್ಲಿದ್ದ ನಿಪುಣತೆಯನ್ನು ಎತ್ತಿ ತೋರಿಸುತ್ತಿತ್ತು. ಆ ಶಾಲೆಯಲ್ಲಿ ಪರೀಕ್ಷೆ ನಡೆಯುತಿದ್ದರಿಂದ, ಮುಖ್ಯೋಪಾಧ್ಯಾಯರು ನನಗೆ ಪ್ರಾರ್ಥನೆ ಸಮಯದಲ್ಲೇ ಇಪ್ಪತ್ತು ನಿಮಿಷಗಳ ಕಾಲಾವಕಾಶ ಮಾಡಿಕೊಟ್ಟರು. ರಾಷ್ಟ್ರ ಗೀತೆ ಮುಗಿಯುತ್ತಿದ್ದಂತೆ ನನಗೆ ಸಿಕ್ಕ ಸಮಯದಲ್ಲೇ ತ್ವರಿತವಾಗಿ ನಾಟಕವಾಡಿಸಿ, ನಕ್ಕು ನಲಿಸಿ, ಪ್ರತಿಜ್ಞೆ ಪಡೆದು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಬೀಳ್ಕೊಟ್ಟೆ.

ನಂತರ ಸರ್ಕಾರಿ ಕನ್ನಡ ಪ್ರೌಢಶಾಲೆಯನ್ನು ತಲುಪಿದೆ. ಕೆಲಸದ ಮೇಲೆ ಹೊರಗೆ ಹೋಗಿದ್ದ ಶಾಲೆಯ ಮುಖ್ಯೋಪಾಧ್ಯಾಯರು ಸ್ವಲ್ಪ ಹೊತ್ತಿನ ನಂತರ ಬಂದರು. ಬಿ.ಬಿ ಕಂದಾಟಿಯವರು ಬಿ.ಕಾಂ, ಬಿ.ಎಡ್, ಕೆ.ಇ.ಎಸ್ ಪದವಿ ಮುಗಿಸಿದ್ದು, ಶಾಲೆಯನ್ನು ದಕ್ಷವಾಗಿ ನಡೆಸಿಕೊಂಡು ಹೋಗುತ್ತಿದ್ದುದು ಕಂಡುಬಂತು. ನನ್ನ ವಿಷಯ ತಿಳಿದುಕೊಂಡು, ಸುಮಾರು ಎರಡು ಗಂಟೆಗಳ ಕಾಲ ಸಂವಾದ ನಡೆಸಿದ ನಂತರ ಪುಸ್ತಕ ಮುದ್ರಣ ಮತ್ತು ಮಾರಾಟದ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು. ನನಗಿದ್ದ ಮಾಹಿತಿ ತಂತ್ರಜ್ಞಾನ ಪರಿಣಿತಿಯಿಂದ ಶಿಕ್ಷಣ ಮತ್ತು ವ್ಯವಸಾಯ ಕ್ಷೇತ್ರದಲ್ಲಿ ಏನಾದರು ಕೊಡುಗೆ ನೀಡುವಂತೆ ಉತ್ತೇಜಿಸಿದರು.

ಮಧ್ಯಾಹ್ನದ ಬಿಸಿ ಊಟ ಬಡಿಸಿ ಉಪಚರಿಸಿದರು. ಶಿಕ್ಷಕರನ್ನು ಮತ್ತು ಮಕ್ಕಳನ್ನು ಒಂದು ದೊಡ್ಡದಾದ ಕೊಠಡಿಯಲ್ಲಿ ಸೇರಿಸಿ ನನ್ನ ಉಪನ್ಯಾಸಕ್ಕೆ ಅನುವು ಮಾಡಿಕೊಟ್ಟರು. ನನಗೆ ಬೇಕಾದಷ್ಟು ಸಮಯವನ್ನು ತೆಗೆದುಕೊಂಡು ಉಪನ್ಯಾಸ ಮಾಡುವ ಸ್ವಾತಂತ್ರ್ಯ ನೀಡಿದರು. ಉಪನ್ಯಾಸ ಚೆನ್ನಾಗೇ ಆಯಿತು. ನಂತರ ಶಿಕ್ಷಕರೊಳಗೊಂಡಂತೆ ವಿದ್ಯಾರ್ಥಿಗಳೆಲ್ಲರೂ ನನಗೆ ಪ್ರಶ್ನೆ ಕೇಳುವಂತೆ ಉತ್ತೇಜಿಸಿದರು. ನಿಧಾನವಾಗಿ ಶುರುವಾದರೂ, ನಂತರ ಕೆಳಗಿನ ಪ್ರಶ್ನೆಗಳ ಸುರಿಮಳೆಯೇ ಸುರಿಯಿತು.

ಪ್ರಶ್ನೆ: ನಿಮ್ಮ ಕೆಲಸಕ್ಕೆ ಪ್ರೇರಣೆ ಯರು?

ನಾನು: ನಮ್ಮವರೇ ಆದ ಸಾಲುಮರದ ತಿಮ್ಮಕ್ಕ.

ಪ್ರಶ್ನೆ: ಆ ದೀರ್ಘ ಪ್ರಯಾಣ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಿದೆಯೇ?

ನಾನು: ಕಾಲ್ನಡಿಗೆ ಶುರುಮಾಡುವ ಮುಂಚೆ ಉಪವಾಸ, ಯೋಗ ಮತ್ತು ಪ್ರತಿದಿನದ ಕಾಲ್ನಡಿಗೆಯಿಂದ ದೇಹ ಮತ್ತು ಮನಸ್ಸು ಎರಡನ್ನೂ ಸಿದ್ಧಗೊಳಿಸಿದ್ದೆ. ಆದ್ದರಿಂದ ಇಲ್ಲಿಯವರೆಗೂ ಸಣ್ಣ ಪುಟ್ಟ ಗಾಯಗಳನ್ನು ಬಿಟ್ಟರೆ, ಬೇರೆ ಯಾವುದೇ ಪರಿಣಾಮ ಬೀರಿಲ್ಲ.

ಪ್ರಶ್ನೆ: ಇಗ್ಲೆಂಡ್‍ಗೂ ಭಾರತಕ್ಕೂ ಇರುವ ಭಿನ್ನತೆ ಅಥವಾ ಸಾಮ್ಯತೆ ಏನು?

ನಾನು: ಇಲ್ಲಿ ಚರ್ಚೆಗಳು ಬಹಳ, ಕೆಲಸ ವಿರಳ. ಅಲ್ಲಿ ಚರ್ಚೆಗಳ ಜೊತೆ ಕೆಲಸವನ್ನೂ ಕೂಡ ಮಾಡುತ್ತಾರೆ.

ಪ್ರಶ್ನೆ: ಅಲ್ಲಿ ಯಾರಾದರು ಬಯಲಿನಲ್ಲಿ ಶೌಚ ಮಾಡಿದರೆ ಏನ ಮಾಡುತ್ತಾರೆ?

ನಾನು: ಹಾಗೆ ಮಾಡುವುದೇ ಅಪರೂಪ. ಮಾಡಿ  ಸಿಕ್ಕಿಹಾಕಿಕೊಂಡರೆ, ಅಲ್ಲಿಯ ನ್ಯಾಯಾಲಯ ತಪ್ಪು ಮಾಡಿದವನಿಗೆ ಮೂರು ದಿನ ಸಾರ್ವಜನಿಕ ಶೌಚಾಲಯಗಳನ್ನು ತೊಳೆಯುವ ಶಿಕ್ಷೆ ವಿಧಿಸುತ್ತಾರೆ.

ಪ್ರಶ್ನೆ: ನಮ್ಮ ಮನೆಯ ಮುಂದಿನ ಮರಗಳನ್ನು ಸರ್ಕಾರದವರು ಕಡಿಸಿದರೆ ಹೇಗೆ ತಡೆಯುವುದು?

ನಾನು: ಪ್ರಶ್ನೆ ಕೇಳಿ ವಿಚಾರಣೆ ಮಾಡಿ. ಅಗತ್ಯ ಬಿದ್ದರೆ ಸಾರ್ವಜನಿಕರೊಳಗೊಂಡಂತೆ ಒಂದು ಹೋರಾಟ ಮಾಡಿ. ಶಿಕ್ಷಣ, ಆಹಾರ, ಆರೋಗ್ಯ ಹೇಗೆ ನಮ್ಮ ಹಕ್ಕೋ? ಹಾಗೆ ಸ್ವಚ್ಛಂದ ಪರಿಸರವೂ ನಮ್ಮ ಹಕ್ಕು. ಈ ಹಕ್ಕನ್ನು ಉಳಿಸಿಕೊಳ್ಳಿ.

ಪ್ರಶ್ನೆ: ನೀವು ಒಬ್ಬರೆ ಜಾಗೃತಿ ಮೂಡಿಸುತ್ತಿದ್ದೀರೋ ಅಥವಾ ಬೇರೆ ಯಾರಾದರು ಕೈ ಜೋಡಿಸಿದ್ದಾರೋ?

ನಾನು: ಶುರುಮಾಡಿದ್ದು ಒಬ್ಬನೇ. ಆದರೆ ದಾರಿಯಲ್ಲಿ ನನ್ನ ಕೆಲಸಕ್ಕೆ ನಿಮ್ಮಂತ ಸಾವಿರಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕೈ ಜೋಡಿಸಿದರು.

ಪ್ರಶ್ನೆ: ಈ ಕೆಲಸಕ್ಕೆ ನಿಮ್ಮ ಮನೆಯವರ ಸಹಕಾರವಿದೆಯೇ?

ನಾನು: ಇಲ್ಲ. ನನ್ನ ಕಾರ್ಯದ ಬಗ್ಗೆ ಪೂರ್ಣ ವಿವರ ಪಡೆದ ಮೇಲೆ ಅವರೆಲ್ಲಾ ಹೆಮ್ಮೆ ಪಡುತ್ತಾರೆ.

ಪ್ರಶ್ನೆ: ಪರಿಸರದ ದಿನಾಚರಣೆ ಬಗೆಗಿನ ನಿಮ್ಮ ಅಭಿಪ್ರಾಯ?

ನಾನು: ಫೋಟೋಗೆ ಪೋಸ್ ಕೊಟ್ಟು ದಿನಪತ್ರಿಕೆಗಳಲ್ಲಿ ಬರುವ ವ್ಯಂಗ್ಯ ನಾಟಕಗಳು ಅಷ್ಟೇ. ಏನು ಪ್ರಯೋಜನವಿಲ್ಲ. ಪರಿಸರವನ್ನು ಒಂದು ದಿನದ ಆಚರಣೆಯಿಂದ ಉಳಿಸಿಕೊಳ್ಳಲಾಗುವುದಿಲ್ಲ. ಪರಿಸರ ಬಗೆಗಿನ ಕೆಲಸ ನಮ್ಮೆಲ್ಲರ ದೈನಂದಿನ ಚಟುವಟಿಕೆಗಳಲ್ಲಿ ಒಂದಾಗಬೇಕು.

ಪ್ರಶ್ನೆ: ಈ ಕೆಲಸದಿಂದ ನಿಮಗೆ ಯಾವ ಲಾಭವಿದೆ?

environmentನಾನು: ನನಗೊಬ್ಬನಿಗೇ ಅಲ್ಲ, ಒಳ್ಳೆಯ ಪರಿಸರವನ್ನು ಕಾಪಾಡಿಕೊಂಡರೆ ನಮಗೆಲ್ಲಾ ಲಾಭವಿದೆ.

ಪ್ರಶ್ನೆ: ಲಕ್ಷಾಂತರ ರೂಪಾಯಿಗಳ ಪಗಾರ ಹೋಯ್ತಲ್ಲಾ? ನಿಮಗೆ ಅದರ ಬಗ್ಗೆ ಬೇಸರವಿಲ್ಲವೇ?

ನಾನು: ಕಳೆದುಕೊಂಡಿದ್ದು ಬೇರೆ ಯಾವುದಾದರೂ ರೂಪದಲ್ಲಿ ನನ್ನ ಕೈ ಸೇರುತ್ತದೆ. ಇದು ನಾನು ನನ್ನ ಜೀವನದಲ್ಲಿ ಕಂಡುಕೊಂಡ ಸತ್ಯ. ಹೀಗಾಗಿ ಪಗಾರ ಹೋದುದರ ಬಗ್ಗೆ ಚಿಂತೆಯಿಲ್ಲ.

ಪ್ರಶ್ನೆ: ಇದರಿಂದ ಬದಲಾವಣೆ ತರಬಹುದು ಎಂದುಕೊಂಡಿದ್ದೀರ?

ನಾನು: ಅದು ನಾವೆಲ್ಲ ಹೇಗೆ ಜಾಗೃತರಾಗಿ ಕೆಲಸ ಮಾಡುತ್ತೇವೆ ಎಂಬುದರ ಮೇಲೆ ಅವಲಂಭಿತವಾಗಿದೆ. ನಾನಂತೂ ಯಾವಾ ಕೆಲಸವಾದರೂ ಆಶಾಭಾವನೆಯಿಟ್ಟುಕೊಂಡು ಕೆಲಸ ಮಾಡುತ್ತೇನೆ.

ಪ್ರಶ್ನೆ: ನಿಮ್ಮ ಈ ಪ್ರಯಾಣ ಯಾವುದೇ ರೀತಿ ಪರಿಣಾಮ ಬೀರದಿದ್ದರೆ ನಿಮಗೆ ನಿರಾಸೆ ಮೂಡುತ್ತದೆಯೇ?

ನಾನು: ನಿರಾಸೆಯ ಪ್ರಶ್ನೆಯೇ ಬರುವುದಿಲ್ಲ. ಪರಿಣಾಮ ಬೀರದಿದ್ದರೆ, ನನ್ನ ಈ ಪಯಣದ ತಪ್ಪುಗಳನ್ನು ತಿದ್ದಿಕೊಂಡು ಇನ್ನೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೇನೆ.

ಪ್ರಶ್ನೆ: ನಮ್ಮ ಜನರು ಹೇಗೆ ಸಹಕರಿಸಿದ್ದಾರೆ?

ನಾನು: ಇಂತಹ ಸೇವೆಗಳಲ್ಲಿ ತೊಡಗಿದಾಗ ಎಲ್ಲಾ ತರಹದ ವ್ಯಕ್ತಿಗಳು ಎದುರುಗೊಳ್ಳುತ್ತಾರೆ. ಕೆಲವರು ಸಹಕರಿಸಿ ಪ್ರೋತ್ಸಾಹಿಸುತ್ತಾರೆ. ಇನ್ನು ಕೆಲವರು ಕಾಲೆಳೆಯುತ್ತಾರೆ. ಯಾವುದಕ್ಕೂ ಧೃತಿಗೆಡಬಾರದು.

ಪ್ರಶ್ನೆ: ಪ್ಲಾಸ್ಟಿಕ್ ಬಗ್ಗೆ ನಿಮ್ಮ ಅಭಿಪ್ರಾಯ?

ನಾನು: ಪ್ಲಾಸ್ಟಿಕ್ ಇಲ್ಲದೆ ಬದುಕುವುದನ್ನು ನಮ್ಮ ಪೂರ್ವಜರು ತೋರಿಸಿಕೊಟ್ಟಿದ್ದಾರೆ. ಪ್ಲಾಸ್ಟಿಕ್‍ಗೆ ಪರ್ಯಾಯವಾಗಿ ಪೇಪರ್, ಬಟ್ಟೆ ಹಾಗೆ ಗೋಣಿ ಚೀಲದ  ಬ್ಯಾಗ್‍ಗಳನ್ನು ಉಪಯೋಗಿಸಬಹುದು. ಪ್ಲಾಸ್ಟಿಕ್‍ನ್ನು ಯಾವುದೇ ಕಾರಣಕ್ಕೂ ಭೂಮಿಗೆ ಹೋಗಲು ಬಿಡಬಾರದು.

leavesಪ್ರಶ್ನೆ: ನಮ್ಮ ಶಾಲೆಯ ಬಗ್ಗೆ ನಿಮ್ಮ ಅಭಿಪ್ರಾಯ?

ನಾನು: ಉಪನ್ಯಾಸವನ್ನು ಸಂವಾದವಾಗಿ ತಿರುಗಿಸಿದ್ದರ ಬಗ್ಗೆ ನನಗೆ ಬಹಳ ಖುಷಿ ಇದೆ. ಶಾಲೆಯನ್ನು ಉನ್ನತ ಮಟ್ಟಕ್ಕೆ ಏರಿಸಲು ಇನ್ನೂ ಸಾಕಷ್ಟು ಪ್ರಯತ್ನಗಳು ನಡೆಯಬೇಕು. ಇದರ ಬಗ್ಗೆ ನಿಮ್ಮ ಶಾಲೆಯ ಶಿಕ್ಷಕ ವೃಂದದ ಜೊತೆ ಚರ್ಚೆ ಮಾಡುತ್ತೇನೆ.

ಪ್ರಶ್ನೆ: ಮತ್ತೆ ನಮ್ಮ ನಿಮ್ಮ ಭೇಟಿ?

ನಾನು: ಪರಿಸರದ ಉಳಿವಿನ ಕಡೆಗೆ ಅದ್ಭುತವಾದ ಕೆಲಸಮಾಡಿ. ನಾನೇ ಖುದ್ದಾಗಿ ಬಂದು ಅಭಿನಂದಿಸಿ ಹೋಗುತ್ತೇನೆ.

ಹೀಗೆ ಹಲವು ಗಂಟೆಗಳ ಕಾಲ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಯಿತು. ನಂತರ ಶಿಕ್ಷಕರ ಜೊತೆ ಚಹಾ ಹೀರುತ್ತಾ ಪ್ರತ್ಯೇಕ ಚರ್ಚೆ. ನಂತರ ನನಗೆ ಹಣ್ಣುಗಳನ್ನು ನೀಡಿ ಅಭಿನಂದಿಸಿ, ನನ್ನನ್ನು ಹಾವೇರಿಯಲ್ಲೇ ಉಳಿಯುವುವಂತೆ ವಿನಂತಿಸಿ ಸಿಂಧಗಿ ಮಠದಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಿಕೊಟ್ಟರು. ಹಾವೇರಿಯಿಂದ ರಾಣೆಬೆನ್ನೂರಿನವರೆಗೆ ಇರುವ ಪ್ರೌಡಶಾಲೆಗಳ ಬಗ್ಗೆ ಮಾಹಿತಿ ನೀಡಿ ನನ್ನನ್ನು ಬೀಳ್ಕೊಟ್ಟರು. ನಂತರ ಆವರಣದಲ್ಲಿ ವಿದ್ಯಾರ್ಥಿಗಳು ಶುಭಹಾರೈಸಿ ನನ್ನನ್ನು ಸಿಂಧಗಿ ಮಠದ ತನಕ ತಂದುಬಿಟ್ಟು ಹೋದರು.

ಮಠದಲ್ಲಿ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಶಿವಬಸವಯ್ಯ ಆರಾಧ್ಯ ಮಠ ಅವರನ್ನು ಭೇಟಿಯಾಗಿ ನನ್ನ ವಿಚಾರ ತಿಳಿಸಿದೆ. ನನಗೆ ಊಟ, ವಸತಿ ಕೊಡಲು ಒಪ್ಪಿ ಮಠದ ಹಿನ್ನಲೆ ತಿಳಿಸಿದರು. ಇದೊಂದು ಸಂಸ್ಕೃತ ಪಾಠಶಾಲೆಯಾಗಿದ್ದು, ಶಿಕ್ಷಣವನ್ನು ಮುಗಿಸದೆ ಸಮಾಜಕ್ಕೆ ಕಂಟಕವಾಗಬಲ್ಲ ಅಭ್ಯರ್ಥಿಗಳನ್ನು ತಂದು, ಮೂರು ವರ್ಷಗಳ ಕಾಲ ಅವರಿಗೆ ಉಚಿತವಾಗಿ ವೇದ, ಜೋತಿಷ್ಯ,ಸಂಸ್ಕೃತ ಕಲಿಸುವದರೊಂದಿಗೆ ಸಾಮಾಜಿಕ ಕಳಕಳಿ ಮೆರೆಯುತ್ತಿದ್ದಾರೆ. ರಾತ್ರಿಯ ದಾಸೋಹವನ್ನು ಉಂಡು ನನಗೆ ಕೊಟ್ಟಿದ್ದ ಕೋಣೆಯಲ್ಲಿ ಮಲಗಿದೆ. ಮೂರು ರಾತ್ರಿಯಿಂದ ಐಷಾರಾಮಿ ನಿದ್ರೆ ಮಾಡಿದ್ದ ನನಗೆ ಜಮಖಾನಕ್ಕೆ ಒಗ್ಗಿಕೊಳ್ಳಲು ತುಸು ಕಷ್ಟವೇ ಆಯಿತು. ಅದರ ಜೊತೆ ಸೊಳ್ಳೆಗಳ ಕಾಟ ಬೇರೆ.

[ಇಲ್ಲಿಯತನಕ ನಡಿಗೆಯಲ್ಲಿ ಕ್ರಮಿಸಿದ ಅಂದಾಜು ದೂರ = 125 ಮೈಲುಗಳು]

‍ಲೇಖಕರು admin

1 July, 2016

4 Comments

  1. Anonymous

    Nice… interesting…

    • ರಾದ

      ಧನ್ಯವಾದಗಳು 🙂
      ಹೆಜ್ಜೆ ಹೆಜ್ಜೆಗೂ ನಮ್ಮ ಜೊತೆಯಿದ್ದು ಸಹಕರಿಸಿ. ಹಿಂದಿನ ಮತ್ತು ಮುಂದೆ ಬರುವ ಅಧ್ಯಾಯಗಳನ್ನು ಓದಿ. ಇಷ್ಟಪಟ್ಟರೆ ನಿಮ್ಮ ಸ್ನೇಹಿತರಿಗೂ ತಿಳಿಸಿ.

    • ರಾದ

      ಧನ್ಯವಾದಗಳು 🙂
      ಹೆಜ್ಜೆ ಹೆಜ್ಜೆಗೂ ನಮ್ಮ ಜೊತೆಯಿದ್ದು ಸಹಕರಿಸಿ. ಹಿಂದಿನ ಮತ್ತು ಮುಂದೆ ಬರುವ ಅಧ್ಯಾಯಗಳನ್ನು ಓದಿ. ಇಷ್ಟಪಟ್ಟರೆ ನಿಮ್ಮ ಸ್ನೇಹಿತರಿಗೂ ತಿಳಿಸಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading