“ಎಲ್ಲಿಂದಲೋ ಬಂದವರು“ ಸಿನೆಮಾಕ್ಕೆ ಲಂಕೇಶರು ಬರೆದ ಮೂರು ಹಾಡುಗಳು ಕನ್ನಡ ಚಿತ್ರರಂಗದಲ್ಲೇ ಬಲು ಅಪರೂಪದವು. ಅವುಗಳಲ್ಲಿ “ಕೆಂಪಾದವೋ…” ಹಾಡು ಅತ್ಯಂತ ಜನಪ್ರಿಯ. ಅದರ ಜೊತೆಗೇ “ಎಲ್ಲಿದ್ದೆ ಇಲ್ಲೀತಂಕ…” ಮತ್ತು “ಕರಿಯವ್ನ ಗುಡಿ ತಾವ…” ಹಾಡುಗಳನ್ನು ಇಲ್ಲಿ ಕೊಡುತ್ತಿದ್ದೇವೆ. ಪಠ್ಯವಾಗಿ ಅವನ್ನು ಓದಿಕೊಳ್ಳುವಾಗ ಸಿಗುವ ಖುಷಿ ನಿಮ್ಮದೂ ಆಗಲಿ ಎಂದು.
ಕೆಂಪಾದವೋ ಎಲ್ಲಾ
ಕೆಂಪಾದವೋ
ಹಸುರಿದ್ದ ಗಿಡಮರ
ಬೆಳ್ಳಗಿದ್ದ ಹೂವೆಲ್ಲ
ನೆತ್ತರ ಕುಡಿಧಾಂಗೆ ಕೆಂಪಾದವೋ
ಹುಲ್ಲು ಬಳ್ಳಿಗಳೆಲ್ಲ
ಕೆಂಪಾದವು
ನೂರು ಕಂದಮ್ಮಗಳು
ಕೆಂಪಾದವು
ಜೊತೆಜೊತೆಗೆ ನಡೆದಾಗ
ನೀಲ್ಯಾಗಿ ನಲಿದಂಥ
ಕಾಯುತ್ತ ಕುಂತಾಗ
ಕಪ್ಪಾಗಿ ಕವಿದಂಥ
ನುಡಿನುಡಿದು ಹೋದಾಗ
ಪಚ್ಚಾಯ ತೆನೆಯಂಥ
ಭೂಮಿಯು ಎಲ್ಲಾನೂ
ಕೆಂಪಾದವೋ
ನನಗಾಗ ಕೆಂಪಾದವೋ
ಕೆಂಪಾದವೋ ಎಲ್ಲಾ
ಕೆಂಪಾದವೋ
* * *
ಕರಿಯವ್ನ ಗುಡಿ ತಾವ
ಅರಳ್ಯಾವೆ ಬಿಳಿ ಹೂವು
ಸೀಮೆಯ ಜನ ಕುಣಿದು ನಕ್ಕಾಂಗದ
ತುಂಟ ಹುಡುಗ್ಯಾರಲ್ಲಿ
ನೆವ ಹೇಳಿ ಬರುತಾರೆ
ಹರೆಯದಾ ಬಲೆಯಲ್ಲಿ ಸಿಕ್ಕಾಂಗದ
ಊರಿಂದ ನಾಕ್ ಹೆಜ್ಜೆ
ಹಾಕಿದರೆ ಕಾಣ್ತೈತೆ
ಚೆಂದಾಗಿ ಹರಿತಾಳೆ ಐರಾವತಿ
ಮಳೆಗಾಲ ಬಂದಾಗ
ಮೈಮರೆತು ಹರಿದವಳು
ಬ್ಯಾಸ್ಗ್ಯಾಗೆ ಬಸವಳಿದ ಐರಾವತಿ
ಕರಿಯವ್ನ ಗುಡಿ ತಾವ
ಪಣ ತೊಟ್ಟು ಗೆದ್ದವರು
ಇನ್ನೂ ಬದುಕೇ ಅವರೆ ಸರದಾರರು
ಕಟ್ಟೊಡೆದು ಬಡಿದಾಡಿ
ಉಯ್ಯಾಲೆ ತೂಯ್ದಾಡಿ
ಮನಸಾರೆ ಮೆಚ್ಚಿಸಿದ ಸರದಾರರು
ಅಲ್ಲೊಂದು ಗಿಣಿ ಕೂತು
ಕಥೆಯೊಂದ ಹೇಳೈತೆ
ಕೇಳಾಕೆ ನಾನಿಲ್ಲ ಊರೊಳಗೆ
ಕಥೆ ನಡೆದ ದಿನದಿಂದ
ಕೆಂಪಾಗಿ ಹರಿದವಳೆ
ಕಥೆಗಳಾ ಮಾರಾಣಿ ಐರಾವತಿ
ಕರಿಯವ್ನ ಗುಡಿ ತಾವ
ಅರಳ್ಯಾವೆ ಬಿಳಿ ಹೂವು
ಸೀಮೆಯ ಜನ ಕುಣಿದು ನಕ್ಕಾಂಗದ
ತುಂಟ ಹುಡುಗ್ಯಾರಲ್ಲಿ
ನೆವ ಹೇಳಿ ಬರುತಾರೆ
ಹರೆಯದಾ ಬಲೆಯಲ್ಲಿ ಸಿಕ್ಕಾಂಗದ
* * *
ಎಲ್ಲಿದ್ದೆ ಇಲ್ಲೀತಂಕ
ಎಲ್ಲಿಂದ ಬಂದ್ಯವ್ವ
ನಿನ ಕಂಡು ನಾನ್ಯಾಕೆ ಕರಗಿದೆನೊ
ಸುಡುಗಾಡು ಹೈದನ್ನ
ಕಂಡವಳು ನೀನ್ಯಾಕೆ
ಈಟೊಂದು ತಾಯಾಗಿ ಮರುಗಿದೆಯೊ
ನೂರಾರು ಗಾವುದ
ಬಂದಿದ್ದೆ ಕಾಣವ್ವ
ಬಂದಿಲ್ಲ ಅನಿಸಿತ್ತು ನೋಡಿದರೆ
ಇಲ್ಲೇ ಈ ಮನೆಯಾಗೆ
ಹುಟ್ಟಿದ್ದೆ ಅನಿಸಿತ್ತು
ನಿನ್ನನ್ನ ಆ ಗಳಿಗೆ ನೋಡಿದರೆ
ಎಲ್ಲಿದ್ದೆ ಇಲ್ಲೀತಂಕ
ಎಲ್ಲಿಂದ ಬಂದ್ಯೆವ್ವ
ನಿನ ಕಂಡು ನಾನ್ಯಾಕೆ ಕರಗಿದೆನೊ
0 ಪ್ರತಿಕ್ರಿಯೆಗಳು