ಸಿ ಎನ್ ರಾಮಚಂದ್ರನ್
ಶರತ್ ಎಚ್. ಕೆ. ಅವರು ಈ ವಿಷಯವನ್ನು ಕುರಿತು ಬರೆದಿರುವ, ಲೇಖನ (ಲೇಖನದ ಕೊಂಡಿ) ಮತ್ತು ಅದಕ್ಕೆ ಬಂದಿರುವ ಎರಡು ಪ್ರತಿಕ್ರಿಯೆಗಳನ್ನು ಗಮನಿಸಿ ನನ್ನ ಅನಿಸಿಕೆಗಳನ್ನು ಈ ಮೂಲಕ ಹಂಚಿಕೊಳ್ಳುತ್ತಿದ್ದೇನೆ. ತಮ್ಮ ಲೇಖನದಲ್ಲಿ, ಶರತ್ ‘ರ‍್ಯಾಗಿಂಗ್’ ಅನ್ನು ಸಮರ್ಥಿಸಿಕೊಂಡಿಲ್ಲ, ಸರಿ; ಆದರೆ ಆರೋಗ್ಯಕರ ಕಾಲೆಳೆಯುವಿಕೆ ಮತ್ತು ಕೀಟಲೆಗೆ ಅವಕಾಶವಿರಲಿ ಎಂಬುದಷ್ಟೆ ಬರಹದ ಆಶಯ. ಕೆಲವೊಮ್ಮೆ ತಪ್ಪು-ಸರಿ ಎಂಬುದು ಎರಡು ಬದಿಯ ಅತಿರೇಕದ ತುತ್ತತುದಿಯಾಗಿರುವ ಸಾಧ್ಯತೆಯೂ ಇದೆ ಅಲ್ಲವೇ? ಎಂಬ ಅವರ ತೀರ್ಮಾನ ಈ ವಿಷಯಕ್ಕೆ ಸಂಬಂಧಿಸಿದಂತೆ ಬಹಳ ಸರಳೀಕೃತ ಹೇಳಿಕೆ; ಅವರಿಗೆ ರ‍್ಯಾಗಿಂಗ್ ಎಂಬ ಪಿಡುಗಿನ ಆಳ-ಅಗಲ ಸಂಪೂರ್ಣವಾಗಿ ಗೊತ್ತಿಲ್ಲ ಎಂದು ನನಗೆ ತೋರುತ್ತದೆ.
ರ‍್ಯಾಗಿಂಗ್ ಸಮಸ್ಯೆಗೆ ಒಂದು ಇತಿಹಾಸವಿದೆ; ಇದು ವಸಾಹತುಶಾಹಿ ಕಾಲದಲ್ಲಿ ಇಂಗ್ಲಂಡ್ನಲ್ಲಿ ಇದ್ದಂತಹ ಒಂದು ವೈಚಾರಿಕ ನಿಲುವಿನ ಪರಿಣಾಮ: ಅದೆಂದರೆ, ಏಷಿಯಾ-ಆಫ್ರಿಕಾದಂತಹ ‘ಅನಾಗರಿಕ-ಬರ್ಬರ’ ರಾಷ್ಟ್ರಗಳಲ್ಲಿ ಆಡಳಿತಗಾರರಾಗಿ ಹೋಗುವಂತಹ ಬ್ರಿಟಿಷ್ ಯುವಕರು ‘ರಫ್ ಅಂಡ್ ಟಫ್’ ಆಗಿರಬೇಕು; ಅವರು ತುಂಬಾ ಭಾವನಾಶೀಲರಾಗಿ ಅಥವಾ ಸೂಕ್ಷ್ಮ ಸಂವೇದನೆಯವರಾಗಿ ಇದ್ದರೆ -ಎಂದರೆ ‘sissi’ ಗಳಾಗಿದ್ದರೆ (‘ಹೆಣ್ಣಿಗ’ರಾಗಿದ್ದರೆ) ಅಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ – ಎಂಬ ನಿಲುವು. ವಸಾಹತುಶಾಹಿ ವೈಚಾರಿಕತೆ ಎಂದರೆ ಪುರುಷ-ಕೇಂದ್ರಿತ ವೈಚಾರಿಕತೆಯೇ. ಆ ಕಾರಣದಿಂದಲೇ ಅಂದಿನ ಪ್ರಸಿದ್ಧ ರಗ್ಬಿ- ಈಟನ್-ಹ್ಯಾರೋ ಮುಂತಾದ ‘ಪಬ್ಲಿಕ್ ಸ್ಕೂಲುಗಳಲ್ಲಿ’ (ಎಂದರೆ ‘ಪ್ರತಿಷ್ಠಿತ ಖಾಸಗಿ ಸ್ಕೂಲು’ಗಳಲ್ಲಿ) ಮುಂದಿನ ವಸಾಹತುಶಾಹಿ ಆಡಳಿತಗಾರರಿಗೆ ತರಬೇತು ನೀಡಲಾಗುತ್ತಿತ್ತು; ಆ ತರಬೇತಿಯ ಒಂದು ಆಯಾಮ ರ‍್ಯಾಗಿಂಗ್. ಇಂತಹ ಶಾಲೆಗಳಲ್ಲಿ ರ‍್ಯಾಗಿಂಗ್ ಎಷ್ಟು ಕ್ರೂರವಾಗಿರುತ್ತಿತ್ತು ಎಂಬುದನ್ನು ಅತ್ಯಂತ ನೈಜವಾಗಿ ಟಾಮ್ ಹ್ಯೂಸ್ ತನ್ನ ಕಾದಂಬರಿಯಲ್ಲಿ ಕಟ್ಟಿಕೊಡುತ್ತಾನೆ (Thomas Hughes, Tom Brown’s School Days, 1857).
ವಸಾಹತುಶಾಹಿ ಯುಗದಲ್ಲಿ ಈ ಬಗೆಯ ಶಿಕ್ಷಣ ಹಾಗೂ ನಿಲುವು ಭಾರತವನ್ನೂ ಪ್ರವೇಶಿಸಿದುವು ಮತ್ತು ಸ್ವಾತಂತ್ರ್ಯಾನಂತರ ಉಚ್ಚ ಶಿಕ್ಷಣ ಕ್ಷೇತ್ರದಲ್ಲಿ ವಿಜೃಂಭಿಸಿದುವು. ಸ್ವತಂತ್ರ ಭಾರತದ ಪ್ರತಿಷ್ಠಿತ ಉಚ್ಚ ಶಿಕ್ಷಣ ಸಂಸ್ಥೆಗಳಲ್ಲಿ ಈ ಬಗೆಯ ವರ್ತನೆಯನ್ನು ಮತ್ತು ಅದರ ಪರಿಣಾಮಗಳನ್ನು ಡಾ. ಭೈರಪ್ಪನವರ ತಂತು ಕಾದಂಬರಿ ತುಂಬಾ ನೈಜವಾಗಿ ಕಟ್ಟಿಕೊಡುತ್ತದೆ. ರ‍್ಯಾಗಿಂಗ್ಗ್ಗೆ ಸಂಬಂಧಿಸಿದ ಕೆಲವು ಅಂಶಗಳು ಹೀಗಿವೆ:
1)ರ‍್ಯಾಗಿಂಗ್ ನಡೆಯುವುದು ಮೆಡಿಕಲ್-ಎಂಜಿನಿಯರಿಂಗ್-ಐ ಐ ಟಿ ಮುಂತಾದ ‘ಪ್ರತಿಷ್ಠಿತ’ ತಾಂತ್ರಿಕ ಕಾಲೇಜುಗಳಲ್ಲಿ ಮಾತ್ರ ಕಂಡುಬರುತ್ತದೆ. ಆರ್ಟ್ಸ್-ಸಯನ್ಸ್-ಕಾಮರ್ಸ್-ಲಲಿತಕಲೆಗಳು ಇತ್ಯಾದಿ ಕಾಲೇಜುಗಳಲ್ಲಿ ಅಗಣ್ಯವಾಗಿರುತ್ತದೆ.
2) ಮೊದಲ ವರ್ಷದ ವಿದ್ಯಾರ್ಥಿಗಳನ್ನು ‘ರ‍್ಯಾಗಿಂಗ್’ ಮಾಡುವವರು, ಹೆಚ್ಚಾಗಿ ಎರಡನೆಯ/ಮೂರನೆಯ ವರ್ಷದ ವಿದ್ಯಾರ್ಥಿಗಳು; ಕೊನೆಯ ವರ್ಷದ ವಿದ್ಯಾರ್ಥಿಗಳು ಹೆಚ್ಚಾಗಿ ಇದರಲ್ಲಿ ಭಾಗವಹಿಸುವುದಿಲ್ಲ.

3)ರ‍್ಯಾಗಿಂಗ್ ಮಾಡುವುದು ಕೇವಲ ‘ಕಾಲೆಳೆಯುವುದರಲ್ಲಿ/ ಕೀಟಲೆ ಮಾಡುವುದರಲ್ಲಿ’ ಮುಗಿಯುವುದಿಲ್ಲ; ಎಲ್ಲರೆದುರಿನಲ್ಲಿ ಬೆತ್ತಲಾಗುವುದು, ಬೆತ್ತಲೆ ಹಾಸ್ಟಲ್ ಬಿಲ್ಡಿಂಗ್ನ ಸುತ್ತ ರಾತ್ರಿ ಓಡುವುದು, ಮಧ್ಯರಾತ್ರಿಯಲ್ಲಿ ಆ ಹಾಸ್ಟೆಲ್ನಲ್ಲಿ ಇರುವ ಸೀನಿಯರ್ ಹುಡುಗರ ರಾಶಿ ಬಟ್ಟೆ ಒಗೆಯುವುದು; ತಲೆಕೆಳಗಾಗಿ ಗಂಟೆಗಟ್ಟಲೆ ನಿಲ್ಲುವುದು, ಬಲಾತ್ಕಾರದಿಂದ ಪ್ಯಾಕ್ಗಟ್ಟಲೆ ಸಿಗರೇಟ್ ಸೇದುವುದು, ನಾಲ್ಕೈದು ಪೆಗ್ ರಮ್/ವಿಸ್ಕಿ ಕುಡಿಯುವುದು, ಮುಷ್ಠಿಮೈಥುನ-ಗುದ ಮೈಥುನಗಳಿಗೆ ತಮ್ಮನ್ನು ಒಪ್ಪಿಸಿಕೊಳ್ಳುವುದು, ಸೀನಿಯರ್ ಹುಡುಗರ ‘ಮುಖಮೈಥುನ’ ಮಾಡುವುದು ಮತ್ತು ‘ಸಾಮೂಹಿಕ ಗುದಮೈಥುನ’ಕ್ಕೆ ತಮ್ಮನ್ನು ಒಪ್ಪಿಸಿಕೊಳ್ಳುವುದು, ಇತ್ಯಾದಿ. ಈ ರೀತಿ, ಸಾಮಾನ್ಯವಾಗಿ, ಕಾಲೇಜು ಪ್ರಾರಂಬವಾದ ಮೊದಲ ತಿಂಗಳು ಪ್ರತಿ ರಾತ್ರಿಯೂ ಹೀಗೆ ನಡೆಯುತ್ತದೆ.
4) ರ‍್ಯಾಗಿಂಗ್ ಗೆ ಅನೇಕ ಸಂಕೀರ್ಣ ಕಾರಣಗಳಿರುತ್ತವೆ: ಹಿಂಸಾರತಿಯ ಮನಸ್ಸು (Sadism): ಇನ್ನೊಬ್ಬರಿಗೆ ದೈಹಿಕ-ಮಾನಸಿಕ ಹಿಂಸೆ ಕೊಟ್ಟು ತೃಪ್ತಿಪಡೆಯುವುದು), ಜಾತಿ-ವರ್ಗಪ್ರಜ್ಞೆ (ಕೆಳಜಾತಿಯವರ ವಿರುದ್ಧ ತಿರಸ್ಕಾರ/ ಫ್ರೀ ಸೀಟ್ ಪಡೆದವರ ವಿರುದ್ಧ ಇರುವ ಸಿಟ್ಟು -‘ಈ ಬಡ್ಡೀ ಮಗ ಕುಡುಮಿಗೆ ಫ್ರೀ; ನಾವು ಲಕ್ಷಾಂತರ ದುಡ್ಡು ಕೊಟ್ಟು ಬಂದಿರುವವರು’), ಅನ್ಯ ಭಾಷಿಕ/ಪ್ರಾಂತೀಯ/ದೇಶವಾಸಿಗಳ ಬಗ್ಗೆ ಇರುವ ಅಸಹನೆ (‘ಇವರು ಅಲ್ಲಿಂದ ಬಂದು ನಮ್ಮನ್ನೇ ಮೀರುತ್ತಾರೆ’), ತಂದೆ-ತಾಯಿಯವರ ಹಣ-ಅಧಿಕಾರಗಳ ಕೊಬ್ಬು (‘ನಮ್ಮನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ’), ಇತ್ಯಾದಿ.
5) ರ‍್ಯಾಗಿಂಗ್ ಪರಿಣಾಮವಾಗಿ ಶಿಕ್ಷಣವನ್ನು ಅರ್ಧಕ್ಕೇ ಬಿಟ್ಟವರ, ಅಗಾಧ ಖಿನ್ನತೆಗೆ (Depression) ಒಳಗಾದವರ, ಮತ್ತು ಸತ್ತವರ ಸಂಖ್ಯೆ ಸಾವಿರಾರು.
6) ಈ ಕಾರಣದಿಂದಾಗಿಯೇ, ಜುಲೈ 24, 2010ರಲ್ಲಿ ಸುಪ್ರೀಂ ಕೋರ್ಟ್ ಒಂದು ಚರಿತ್ರಾರ್ಹ ತೀರ್ಪು ಕೊಟ್ಟಿತು; ಮತ್ತು ರ‍್ಯಾಗಿಂಗ್ ಅನ್ನು ‘ರೇಪ್’ ಸಮನಾಗಿ ಕಂಡಿತು. ಮುಂದೆ ಇದೇ ‘Anti-Ragging Law’ ಆಗಿ ಜಾರಿಗೆ ಬಂದಿತು. ಅನಂತರ, ಸುಪ್ರೀಂ ಕೋರ್ಟ್ ನ ಸೂಚನೆಗಳನ್ನನುಸರಿಸಿ, ಅನೇಕ ರಾಷ್ಟ್ರೀಯ/ಪ್ರಾಂತೀಯ ಸಹಾಯಕ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದುವು; ಅವುಗಳಲ್ಲಿ ಮುಖ್ಯವಾದವುಗಳೆಂದರೆ:ADAR ( Against Drug And Ragging), JAGORI, SAVE (Society Against Violence in Education), National Anti-Ragging Helpline (2009), ಇತ್ಯಾದಿ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಪ್ರತಿಯೊಂದು ಪ್ರತಿಷ್ಠಿತ ಕಾಲೇಜು/ವಿವಿಯಲ್ಲಿ ರ‍್ಯಾಗಿಂಗ್ ಅನ್ನು ವಿರೋಧಿಸುವ ಸಂಘಗಳು ರಾಷ್ಟ್ರಾದ್ಯಂತ ಜನ್ಮ ತಾಳಿವೆ.
***
ರ‍್ಯಾಗಿಂಗ್ ಅನ್ನು ನಿಷೇಧಿಸುವ ಅತ್ಯಂತ ಕಠೋರ ಕಾನೂನು ಇಂದು ಅಸ್ತಿತ್ವದಲ್ಲಿದರೂ ಈ ಪಿಡುಗು ಸಂಪೂರ್ಣವಾಗಿ ನಿಂತಿಲ್ಲ; ನಿಲ್ಲುವಂತೆ ಕಾಣುವುದಿಲ್ಲ. ಇದಕ್ಕೆ ಕಾರಣಗಳು ಅನೇಕ:
1) ಸಂಬಂಧಿಸಿದ ಕಾಲೇಜುಗಳು/ ಸಂಸ್ಥೆಗಳು ತಮ್ಮ ಸಂಸ್ಥೆಯ ಹೆಸರು ಕೆಡುತ್ತದೆಂಬ (ಮತ್ತು ಆ ಕಾರಣದಿಂದ ಡೊನೇಶನ್ ಪ್ರಮಾಣ ಕಮ್ಮಿಯಾಗುವ ಭೀತಿಯಿಂದ) ರ‍್ಯಾಗಿಂಗ್ ಘಟನೆಗಳನ್ನು ಮುಚ್ಚಿ ಹಾಕುತ್ತವೆ; ಬೆಳಕಿಗೆ ಬರುವ ಘಟನೆಗಳಿಗಿಂತ ವಾಸ್ತವ ಘಟನೆಗಳು ಹತ್ತು ಪಟ್ಟು ಹೆಚ್ಚಿರುತ್ತವೆ.
2) ಪ್ರಭಾವಿ ತಂದೆ-ತಾಯಂದಿರು ತಮ್ಮ ಮಕ್ಕಳು ಈ ಕಾರ್ಯದಲ್ಲಿ ತೊಡಗಿದ್ದರೆ, ಅವರನ್ನು ತಮ್ಮ ಪ್ರಭಾವದ ಮೂಲಕ ರಕ್ಷಿಸುತ್ತಾರೆ; ಘಟನೆ ಪೋಲೀಸ್ ಸ್ಟೇಷನ್ ತಲಪದಂತೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. (‘Boys will be boys’ you know)
3) ಎಲ್ಲದಕ್ಕಿಂತ ಮುಖ್ಯವಾಗಿ, ಎಲ್ಲಿಯವರೆಗೆ ‘ಹುಡುಗರು ಹೆಣ್ಣಿಗರಾಗಬಾರದು; ‘ಯಾವುದಕ್ಕೂ ಹೆದರಬಾರದು’ ಎಂಬುದು ಪೋಷಕರ, ಶಿಕ್ಷಕರ, ಸಮಾಜದ ನಿಲುವಾಗಿರುತ್ತದೋ; ಎಂದರೆ ‘ಗಂಡಸ್ತನ’ವನ್ನು ಶಕ್ತಿಪ್ರದರ್ಶನದ ನೆಲೆಯಲ್ಲಿ ವ್ಯಾಖ್ಯಾನಿಸಲಾಗುತ್ತದೋ ಅಲ್ಲಿಯವರೆಗೂ ಈ ಪಿಡುಗು (ಮತ್ತು ಅದರ ಮುಂದಿನ ಹೆಜ್ಜೆಯಾದ ಅತ್ಯಾಚಾರ) ಮುಂದುವರೆಯುತ್ತಲೇ ಇರುತ್ತವೆ.






Very rightly said sir. The last paragraph accurately describes the cause and the horrid repercussions of such notions!
ಸಿಎನ್ನಾರ್ ವಿಷಯದ ಕುರಿತು ಸಮಗ್ರವಾಗಿ, ತಮ್ಮ ಎಂದಿನ ಖಚಿತತೆಯಲ್ಲಿ ಬರೆದಿರುವುದು, ನಿಜಕ್ಕೂ ಮಾರ್ಗದರ್ಶಿಯಾಗಿದೆ. ’ರ‍್ಯಾಗಿಂಗ್’ ಕುರಿತಾಗಲೀ, ’ಅತ್ಯಾಚಾರ’ದ ಕುರಿತಾಗಲೀ ಮಾತನಾಡುವಾಗ, ಬರೀ ವೈಯಕ್ತಿಕ ಅನುಭವಗಳ ಸಾಧಾರೀಕರಣ ಸಾಕಾಗುವುದಿಲ್ಲ.ಅವುಗಳ ಹುಟ್ಟು, ಬೆಳವಣಿಗೆ, ಪರಿಣಾಮ ಸ್ವರೂಪಗಳನ್ನು ವಿಸ್ತರಿಸಿ ತಿಳಿದುಕೊಂಡು ಮಾತನಾಡುವ ಜರೂರಿದೆ. ಸಮಾಜವ್ಯಾಪಿಯಾದ ಸಮಸ್ಯೆಗಳ ಬಗ್ಗೆ ಮಾತನಾಡುವಾಗ, ಒಂದು ಮಟ್ಟಿಗೆ ಶಟವಾಗುವುದು, ಕಟ್ಟುಪಾಡುಗಳನ್ನು ಸಾವಾಧಾನದಲ್ಲಿ ನಾವೇ ಹಾಕಿಕೊಳ್ಳುವುದು ಅವಶ್ಯಕವಾಗಿರುತ್ತದೆ. ’ಅಯ್ಯೋ!ಏನ್ರೀ, ಒಂದು ಹಗುರ ಲಯದಲ್ಲಿ ಹೇಳೋದು ತಪ್ಪಾ-ಎಲ್ಲದಕ್ಕೂ ಸಿರಿಯಸ್ಸಾಗುತ್ತೀರ!ಈಗಿನವರು ಹಗುರವಾಗಿ, ಅವರ ಭಾಷೆಯಲ್ಲಿ ಹೇಳಿದ್ರೆ ಕೇಳ್ತಾರೆ; ನೀವು ಹೀಗೆ ಬೋಧನೆ ಶುರುಚ್ಚಿಕೊಂಡ್ರೆ ಬಿಟ್ಟೋಡ್ತಾರೆ…’ ಅನ್ನೋ ಹಲವಾರು ಕಾಮೆಂಟುಗಳನ್ನು ನಾನು ಕೇಳಿದ್ದೇನೆ. ಶರತ್ ಹೀಗೆ ಹಗುರವಾಗಿ ಹೇಳಿಲ್ಲ, ನಿಜ. ಆದರೆ, ಇಂದಿನ ಅಂಕಣ ಬರಹಗಳ-ಅದರಲ್ಲೂ ದೊಡ್ಡ ಪತ್ರಿಕೆಗಳ ಅಂಕಣ ಬರಹಗಳ ವ್ಯಾಕರಣವೇ, ಓದುಗರು ಹೆಚ್ಚು ಯೋಚಿಸದೇ ಸರ ಸರಾ ಓದಿಸಿಕೊಂಡು ಹೋಗುವ ಹಾಗಿರ‍್ಬೇಕು ಅಂತ ಆಗಿಹೋಗಿರೋದ್ರಿಂದ- ವಿದ್ಯಮಾನಗಳನ್ನು ತೀರ ಹಗುರಗೊಳಿಸಿ, ತೆಳುವಾದ ವ್ಯಕ್ತಿಗತ ಅನುಭವವನ್ನೇ ಲೋಕಸಹಜವೆಂಬ ಗತ್ತಲ್ಲಿ ಅಭಿಪ್ರಾಯಗಳನ್ನು ’ಎಸೆಯುವ’ ಶೈಲಿಯ ಬಗ್ಗೆಯೂ ಎಚ್ಚರವಾಗಿರೋದು ಕ್ಷೇಮ ಅನ್ನೋದನ್ನು ಸಿಎನ್ನಾರ್, ಚೆನ್ನಾಗಿ ವಿವರಿಸಿದ್ದಾರೆ. ಅವರಿಗೆ ಇದು ತುರ್ತು ಅನ್ನಿಸಿ ಪ್ರತಿಕ್ರಿಯಿಸಿದ್ದು ಇನ್ನೂ ಖುಷಿಯ ಸಂಗತಿ.ಹಾಗೆಯೇ-ಈ ’ರ‍್ಯಾಗಿಂಗ್’ ಮತ್ತು ’ಗ್ಯಾಗಿಂಗ್’ಗಳು ಬರಿ ಹದಿಹರೆಯದ ಹುಂಬ ಹುಮ್ಮಸ್ಸಿನ ಅಭಿವ್ಯಕ್ತಿ ಮಾತ್ರವಾಗಿರದೇ, ಸಮಾಜದಲ್ಲಿರುವ ಹಲವು ನಮೂನೆಯ ಯಜಮಾನಿಕೆಗಳನ್ನು ಸಹಜಗೊಳಿಸುವ ನಿತ್ಯಕ್ರಿಯೆಯೂ ಆಗಿರುತ್ತವೆ; ಈ ಬಗೆಯ ಮನೋಭಾವ ಹೇಗೆ ಜಾತಿ ಕ್ರೌರ‍್ಯವನ್ನು ನಡೆಸುವ ಬಗೆಯೂ ಆಗುತ್ತದೆ ಎಂದು ಸೂಕ್ಷ್ಮವಾಗಿ ಕಾಣಿಸುವ, ಜಾತಿ ಅಸಮಾನತೆ ಹಾಗು ಅಪಮಾನಗಳ ಬಗ್ಗೆ ನಾಗರಾಜ ಮಂಜುಳೆಯವರು ನಿರ್ದೇಶಿಸಿದ ’ಫಂಡ್ರಿ’(ಮರಾಠಿ,2013)ಅಪರೂಪದ ಸಿನಿಮಾದ ಕೆಲವು ದೃಷ್ಯಗಳು ತಟ್ಟನೆ ಕಣ್ಣೆದಿರು ಕಟ್ಟಿದವು. ಯೋಚಿಸುವಂತೆ ಮಾಡಿದ ಸಿಎನ್ನಾರ್ ಅವರಿಗೆ ನಾನು ಋಣಿ.
ಹಿರಿಯರಾದ ಸಿ ಎನ್ ರಾಮಚಂದ್ರನ್ ಹಾಗು ಕೆ.ಫಣಿರಾಜ್ ಅವರಿಗೆ ಧನ್ಯವಾದಗಳು. ನಿಮ್ಮ ಅಭಿಪ್ರಾಯಗಳಿಂದ ನನಗರಿವಿಲ್ಲದ ಒಂದಷ್ಟು ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯವಾಯಿತು. ನಾನು ಓದಿದ ಮತ್ತು ಕೆಲಸ ಮಾಡುತ್ತಿರುವ ಕಾಲೇಜು ಪರಿಸರದಲ್ಲಿ ರಾಗಿಂಗ್ನ ವಿಕೃತ ರೂಪಗಳು ನನ್ನ ಗಮನಕ್ಕೆ ಬಾರದಿರುವುದು ರಾಗಿಂಗ್ ಕುರಿತು ನನ್ನಲ್ಲಿ ಈ ನಿಲುವು ಮೂಡಲು ಕಾರಣವಾಗಿರಬಹುದು.
‘ ವಿಕೃತಿಯೇ ರ‍್ಯಾಗಿಂಗ್ ಅನ್ನುವುದಾದರೆ, ಅದಕ್ಕೆ ನಿಷೇಧ ಹೇರಿರುವುದೇ ಸೂಕ್ತ.’ ಎಂದು ಬರಹದಲ್ಲಿ ಉಲ್ಲೇಖಿಸಿದ್ದೇನೆ. ನನಗೆ ನೀವು ತಿಳಿಸಿರುವ ರಾಗಿಂಗ್ ಇತಿಹಾಸದ ಕುರಿತು ಅರಿವಿರಲಿಲ್ಲ. ಅರಿವು ನಿರಂತರವಾಗಿ ದಕ್ಕುವ ಪ್ರಕ್ರಿಯೆಯಾಗಿರುವುದರಿಂದ ನಿಮ್ಮಂತಹ ಹಿರಿಯರಿಂದ ಕಲಿಯಲು ಉತ್ಸುಕನಾಗಿದ್ದೇನೆ. ಪ್ರತಿಕ್ರಿಯಿಸಿದ್ದಕ್ಕೆ ಸಿ ಎನ್ ರಾಮಚಂದ್ರನ್ ಹಾಗು ಕೆ.ಫಣಿರಾಜ್ ಇಬ್ಬರಿಗೂ ಮತ್ತೊಮ್ಮೆ ಧನ್ಯವಾದಗಳು.
ಲೇಖನ ವಿವರವಾಗಿದೆ. ಈ ಸಮಸ್ಯೆಯ ೊಳ್ಳೆಯ ವಿಶ್ಲೇಷಣೆ .ಸರ್ಕಾರಿ ಮೆಡಿಕಲ್ ಹಾಗೂ ಇಂಜನಿಯರಿಂಗ ಕಾಲೆಜುಗಳಲ್ಲಿ ಕೂಡ ragging ಗೆ ಹೆಚ್ಚು ಅವಕಾಶವಿರಲಿಲ್ಲ. ಈಗ ಹೇಗಿದೆಯೋ ಗೊತ್ತಿಲ್ಲ. ಅದು ಈಗಲೂ ನಿಜವಾದರೆ ಆಗ ragging ಗೆ ಕಾರಣ ಡೊನೇಷನ್ ನೀಡುವ ಹಳ್ಳಿಗಾಡಿನ , ನಗರದ ಶ್ರೀಮಂತರು ಅವರ ಧನ ಮದ ಅಧಿಕಾರ ಮದ . ಅದರಲ್ಲಿಯೇ ಮಿಂದು , ಮುಳುಗಿ ಮಕ್ಕಳನ್ನು ಬೆಳೆಸಿದ ರೀತಿಯ ಪರಿಣಾಮವಾದ ಅಮಾನವೀಯತೆ ಎಂದು ಹೇಳಬಹುದೇ ?
ನನ್ನ ಲೇಖನಕ್ಕೆ ಧನಾತ್ಮಕವಾಗಿ ಪ್ರತಿಕೃಯಿಸಿರುವ ಶ್ರೀ ಜಿ. ಎನ್. ನಾಗರಾಜ್, ಡಾ. ಕೆ. ಫಣಿರಾಜ್, ಶ್ರೀ ಶರತ್ ಎಚ್. ಕೆ. ಮತ್ತು ಶ್ರೀಮತಿ ಸರಳಾ ಇವರಿಗೆ ನಾನು ಆಭಾರಿಯಾಗಿದ್ದೇನೆ. ಖೇದದ ಮಾತೆಂದರೆ, ಎರಡು ವರ್ಷಗಳ ಹಿಂದೆ ಬೆಂಗಳೂರಿನ ತಾಂತ್ರಿಕ ಕಾಲೇಜೊಂದರಲ್ಲಿ ನಡೆದ ರ‍್ಯಾಗಿಂಗ್ ಮತ್ತು ಅದರಿಂದಾದ ಸಾವು-ನೋವು ಇನ್ನೂ ಹಸಿಯಾಗಿರುವಾಗಲೇ, ಎರಡು ದಿನಗಳ ಹಿಂದೆ, ಚಿಕ್ಕಬಳ್ಳಾಪುರದ ಕಾಲೇಜೊಂದರಲ್ಲಿ ನಡೆದಿರುವ ರ‍್ಯಾಂಗಿಂಗ್‍ನ ಸುದ್ದಿ ಇಂದು ಬಂದಿದೆ (“ಪ್ರಜಾವಾಣಿ,” ೧೯/೯/, ಪು. ೩ A). ಪ್ರಾಯಃ, ನಾಗರಾಜ್ ಅವರು ಹೇಳುವಂತೆ, “ಶ್ರೀಮಂತರು ಅವರ ಧನಮದ, ಅಧಿಕಾರ ಮದ, ಅದರಲ್ಲಿಯೇ ಮಿಂದು, ಮುಳುಗಿ, ಮಕ್ಕಳನ್ನು ಬೆಳೆಸಿದ ರೀತಿಯ ಪರಿಣಾಮವಾದ ಅಮಾನವೀಯತೆ” ಈ ಬಗೆಯ ರ‍್ಯಾಗಿಂಗ್, ಅತ್ಯಾಚಾರ, ಇವುಗಳಿಗೆ ಕಾರಣವೆಂದು ಕಾಣುತ್ತದೆ. ಎಂದಾದರೂ ಉಚ್ಚ-ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತವೆಯೆ? ಎಂಬ ಪ್ರಶ್ನೆಯೆದ್ದು, ಒಂದು ಬಗೆಯ ಖಿನ್ನತೆ ಮನಸ್ಸನ್ನು ಆವರಿಸುತ್ತದೆ. ಸಿ. ಎನ್. ರಾಮಚಂದ್ರನ್
ರಾಮಚಂದ್ರನ್ ರವರಿಗೆ ವಂದನೆಗಳು . ಪ್ರತಿಷ್ಠಿತ ಖಾಸಗಿ ಸಂಸ್ಥೆಗಳು ಈ ಕೆಲಸ ಮಾಡುವುದು ಸಾದ್ಯವೇ ಇಲ್ಲ. ಹತ್ತಾರು ಲಕ್ಷದಿಂದ ಕೋಟಿ ರೂಗಳವರೆಗಿನ ಆದಾಯ ಒಬ್ಬೊಬ್ಬ ವಿದ್ಯಾರ್ಥಿಯಿಂದ ಬರುವಾಗ ಕಾಲೇಜು ಆಡಳಿತದ ಬಾಯಿ ಕಟ್ಟುತ್ತದೆ . ಅದು ಸಾಧ್ಯವಾಗುವುದು ಬಾಧಿತ ವಿದ್ಯಾರ್ಥಿಗಳು ಒಟ್ಟಾಗಿ ಪ್ರತಿಭಟಿಸುವುದು ಸಾಧ್ಯವಾದಾಗಲೇ. ಅವರಲ್ಲಿ ಇದನ್ನು ಎದುರಿಸುವ ಕೆಚ್ಚು ಮೂಡಿದಾಗಲೇ. ಆಗಲೇ ಅಢಳಿತ ಮತ್ತು ಪೋಲಿಶರು ಕಾನೂನು ಜಾರಿ ಮಾಡಲು ಮುಂದಾಗುವುದು. ರಾಜ್ಯದಲ್ಲಿ ಪ್ರವೇಶಕ್ಕಾಗಿ ಅತಿ ಹೆಚ್ಚು ಹಣ ಪಡೆಯುವ ಕಾಲೇಜುಗಳ ಸುತ್ತ ೆಂತಹ ದಂಧೆಗಳು ನಡೆಯುತ್ತವೆ ಎಂಬುದನ್ನು ನೋಡಿದರೆ ಅಂತಹವಕ್ಕೆ ಮುಕ್ತ ಅವಕಾಶವನ್ನು ಆಡಳಿತ ಮಂಡಳಿಯೇ ನೀಡಿದೆಯೇನೋ ಎನ್ನುವಂತಿರುತ್ತದೆ.