ರೌಡಿಯಂತ ಪೇದೆ ನನ್ನತ್ತ ತಿರುಗಿಯೂ ನೋಡಲಿಲ್ಲ..

ಕಾಣದ ಕಡಲಿಗೆ ಹಂಬಲಿಸಿದೆ ಮನ..

ಹೆಜ್ಜೆ 26

ಗುಡ್ಡಗಳ ಕೊರೆತ

avadhi-column-rahul bw-edited2

ಬೆಳಗ್ಗೆ ಬೇಗ ಎದ್ದು ವ್ಯಾಯಾಮ ಮಾಡುವಾಗ ಬೆನ್ನಿನ ನರ ಉಳುಕಿದಂತಾಯಿತು. ಬೆನ್ನು ನೋವು ಈ ಮಾರ್ಗದ ಉದ್ದಕ್ಕೂ ಬಹಳವಾಗಿ ಕಾಡಿತ್ತು. ರಾತ್ರಿ ಮಲಗಿದ್ದಾಗ ಮಂಡಿ ನೋವು ಕೂಡ ಕಾಡುತ್ತಿರುತ್ತದೆ. ರಂಜಿತ್ ಬಂದು ಒಂದನೇ ಅಂತಸ್ತಿನಲ್ಲಿರುವ ತಮ್ಮ ಮನೆಗೆ ಕರೆದುಕೊಂಡು ಹೋಗಿ ಬೆಳಗಿನ ತಿಂಡಿ, ಚಹಾ ಕೊಟ್ಟು ಉಪಚಾರ ಮುಗಿಸಿದ. ಕುಟುಂಬದವರೊಂದಿಗೆ ಒಂದು ಫೋಟೊ ತೆಗೆಸಿಕೊಂಡಿದ್ದೂ ಆಯಿತು. ನಂತರ ರಂಜಿತ್ ನನ್ನನ್ನು ಮುಖ್ಯರಸ್ತೆಯ ತನಕ ಬಿಟ್ಟು ಬೀಳ್ಕೊಟ್ಟ. ನಾನು ಕೂಡ ಅವನಿಗೆ ಮೈಸೂರಿಗೆ ಬರುವಂತೆ ಆಮಂತ್ರಣ ಕೊಟ್ಟೆ.

avadhi- column- rahul- low res- editedಅಲ್ಲಿಂದ ಹೊರಟು ಒಂದು ಇನ್ನೂರು ಹೆಜ್ಜೆ ಹಾಕಿರಬೇಕು ಅಷ್ಟೇ, ಹಿಂದಿನಿಂದ ಬಂದು ಯಾರೋ ಕರೆದಂತೆ ಆಯಿತು. ಯಾರಪ್ಪ ಎಂದು ತಿರುಗಿ ನೋಡಿದರೇ, ರಂಜಿತ್ ಮತ್ತೆ ವಾಪಸ್ಸು ಬಂದು ನಿಂತಿದ್ದ. ನಾ ಏನಾದರು ಮರೆತು ಬಂದಿದ್ದೇನೆಯೇ ಎಂದು ತಿಳಿದು “ಏನೋ ರಂಜಿತ್. ಏನ್ ಆಯ್ತು” ಎಂದು ಕೇಳಿದೆ.

“ಏನು ಇಲ್ಲ ಅಣ್ಣ. ನನಗೆ ನಿಮ್ಮನ್ನು ಬಿಟ್ಟಿದ್ದು ಬೇಜಾರಾಯಿತು. ಮತ್ತೆ ಮಾತಾಡಿಸಬೇಕು ಎನಿಸಿತು. ಅದಕ್ಕೆ ಬಂದೆ. ಹೋಗಿದ್ದು ಬರ್ತೀರಾ ಅಣ್ಣ” ಎಂದು ತನ್ನ ಕಣ್ಣುಗಳನ್ನು ತುಂಬಿಕೊಂಡ. ನನಗೆ ಅಚ್ಚರಿಯಾಯಿತು. ಏನು ಮಾತನಾಡಬೇಕೆಂಬುದು ತೋಚಲಿಲ್ಲ. ಸರಿ ಎಂದು, ಅವನನ್ನು ಸಮಾಧಾನಪಡಿಸಿ ಕಳಿಸಿಕೊಟ್ಟೆ. ನನಗೆ ಅವನ ಮನಸ್ಸಿನಲ್ಲಿರುವ ಖಾಲಿತನವನ್ನು ತೋರಿಸಿತು. ಅವನಿಗೆ ಖಂಡಿತವಾಗಿಯೂ ಒಬ್ಬ ಅಣ್ಣನ ಸ್ಥಾನದಲ್ಲಿರುವ ಮಾರ್ಗದರ್ಶಕನ ಕೊರತೆಯಿತ್ತು. ಅದೇ ಯೋಚನೆಯಲ್ಲಿ ಸ್ವಲ್ಪ ದೂರ ನಡೆದು, ಹೆದ್ದಾರಿ ಹಿಡಿದೆ.

ಹೆದ್ದಾರಿ ಹಿಂದೆ ರಂಗ ಪ್ರತಿಭೆ ಚಿಂದೋಡಿ ಲೀಲಾರ ರಂಗ ಮಂದಿರ ಕಾಣಿಸಿತು. ಒಳಗೆ ಹೋಗಿ ತುಸುಹೊತ್ತು ಸುತ್ತಾಡಿಕೊಂಡು ಬಂದೆ. ನನಗೆ ನಮ್ಮ ಮೈಸೂರಿನ ರಂಗಾಯಣದ ನೆನಪಾಯಿತು. ಹರಿಹರದಿಂದ ಆನಗೋಡು ತನಕದ ಪ್ರಯಾಣದಲ್ಲೇ ನಾಲ್ಕು ಗುಡ್ಡಗಳ ಕೊರೆತ ಎದ್ದು ಕಾಣುತ್ತಿತ್ತು.

ಗಿಡ ಕಡಿದರೆ, ನಾ ಗಿಡ ನೆಡುವೆ.

ಮರ ಕಡಿದರೆ, ನಾ ಮರ ಬೆಳೆಸುವೆ.

ಬತ್ತಿದ ಕೆರೆಗೆ ನಾ ನೀರು ತುಂಬಿಸುವೆ.

ಮೋಡಗಳಿಗೆ ನಾ ಬಿತ್ತನೆ ಮಾಡುವೆ.

ನದಿಗಳ ದಿಕ್ಕು ಬದಲಿಸಿ ನಾ ಜೋಡಣೆ ಮಾಡುವೆ.

ಕೆರೆ-ಕಟ್ಟೆ, ಕಲ್ಯಾಣಿಗಳ ಜೀರ್ಣೋದ್ಧಾರ ಮಾಡುವೆ.

ಪ್ರಾಣಿ ಪಕ್ಷಿಗಳ ಬೇಟೆಯಾಡಿದರೆ, ಅದನ್ನು ಉಳಿಸಿ ಬೆಳೆಸಿ ಸಂಖ್ಯೆ ವೃದ್ಧಿಸಬಹುದು.

ನೀ ಬೆಟ್ಟ, ಗುಡ್ಡ, ಪರ್ವತಗಳನ್ನೇ ಬಗೆದು ಮಾಯ ಮಾಡಿದರೆ,

ನಾ ಅವುಗಳ ಕಟ್ಟಲಾದೀತೇ? ಓ ಪ್ರಕೃತಿ.

ಇದೇ ಯೋಚನೆಗಳ ಸರಮಾಲೆ ಸುತ್ತಿಕೊಂಡು ಭತ್ತ, ಕಬ್ಬು, ತೆಂಗು, ತೇಗು, ಅಡಿಕೆ, ಜೋಳ ಬೆಳೆಗಳ ನೋಟ ಸವಿದು ಹತ್ತನ್ನೆರಡು ಮೈಲುಗಳನ್ನು ಸವೆಸಿ ಆನಗೋಡು ಶಾಲೆಯನ್ನು ತಲುಪಿದಾಗ ಪಾರ್ಥನೆ ಮುಗಿದು ತರಗತಿಗಳು ನಡೆಯುತ್ತಿದ್ದವು. ಶಾಲೆಯ ಮುಖ್ಯಸ್ಥರು ನನ್ನ ವಿಷಯ ತಿಳಿದು ಮಕ್ಕಳನ್ನೆಲ್ಲಾ ಆವರಣದಲ್ಲಿ ಸೇರಿಸಿ, ಧ್ವನಿವರ್ಧಕದ ವ್ಯವಸ್ಥೆಮಾಡಿ ಅನುವುಮಾಡಿಕೊಟ್ಟರು. ಉಪನ್ಯಾಸ ಚೆನ್ನಾಗೇ ಆಯಿತು.

ಆದರೆ ಉಪನ್ಯಾಸದುದ್ದಕ್ಕೂ ಒಬ್ಬ ಶಿಕ್ಷಕಿ ಮಾತ್ರ ತಮ್ಮ ಮುಖವನ್ನು ಸೀರೆಯ ಸೆರಗಿನಲ್ಲಿ ಮುಚ್ಚಿಕೊಂಡು ಮುಸು ಮುಸು ನಗುತ್ತಿದ್ದುದು ನನಗೆ ಬಹಳ ಕಿರಿ ಕಿರಿ ಮಾಡಿತು. ನನ್ನ ನೋಡಿ ನಗುತ್ತಿದ್ದರೋ, ಅಥವಾ ಶಾಲೆಯ ಮುಖ್ಯಸ್ಥರನ್ನು ನೋಡಿ ನಗುತ್ತಿದ್ದರೋ ನನಗೆ ತಿಳಿಯದು. ಆದರೂ ಒಬ್ಬ ಶಿಕ್ಷಕಿಯಾಗಿ ಒಂದು ಸಭೆಯಲ್ಲಿ ಹೀಗೆ ವರ್ತಿಸಿದ್ದು ನನಗೇಕೋ ಇಷ್ಟವಾಗಲಿಲ್ಲ. ಅಲ್ಲಿಯೇ ಕಟ್ಟಡಗಳಿಗೆ ಬಣ್ಣ ತುಂಬುತ್ತಿದ್ದ ವ್ಯಕ್ತಿ ನನ್ನನ್ನು ಸರ್ಕಾರದ ವತಿಯಿಂದ ಬಂದಿರುವೆನೆಂದು ಗ್ರಹಿಸಿ, ಸರ್ಕಾರದ ಕೋಪವನ್ನೆಲ್ಲಾ ನನ್ನ ಮೇಲೆ ತೀರಿಸಿಕೊಂಡ. ಅವನನ್ನು ಕರೆಸಿ ಮಾತನಾಡಿಸಿ ಸಮಾಧಾನ ಪಡಿಸಿ, ಧ್ವನಿವರ್ಧಕವನ್ನು ಅವನ ಕೈಗೆ ಕೊಟ್ಟು ಮಾತನಾಡಲು ಹೇಳಿದೆ. ಹೆದರಿ ನಡುಗಿಬಿಟ್ಟ. ಅವನಿಗೆ ತಿಳಿ ಹೇಳಿದೆ.

“ಗುಂಪಿನಲ್ಲಿ ಗೋವಿಂದಾ ಗೋವಿಂದಾ ಎಂದು ಕೂಗುವುದು ಸುಲಭ. ಅದೇ ಎಲ್ಲರ ಮುಂದೆ ಧೈರ್ಯವಾಗಿ ನಿಂತು ಮಾತನಾಡಲು ಆತ್ಮಸ್ಥೈರ್ಯ ಬೇಕು. ಬೇರೆಯವರು ಸಭೆಯಲ್ಲಿ ಮಾತನಾಡುವಾಗ, ಹೀಗೆ ನೀವು ಗಲಾಟೆಮಾಡಿ ಭಂಗ ತರಬಾರದು” ಎಂದು ತಿಳಿಹೇಳಿದೆ. ಅವನು ತನ್ನ ತಪ್ಪೊಪ್ಪಿಕೊಂಡು, ಕೊನೆಗೂ ನಾನು ಅಲ್ಲಿಂದ ಮೈಸೂರಿಗೆ ಹೋಗುವ ಪೂರ್ಣ ದಾರಿಯನ್ನು ನನ್ನ ಕೈಗಿಟ್ಟ. ಈಗಾಗಲೇ ದಾವಣಗೆರೆಯಿಂದ ಮೈಸೂರಿಗೆ ಹೋಗುವ ಮೂರು ದಾರಿಗಳನ್ನು ತಿಳಿಸಿದ್ದರು. ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂಬುದೇ ದೊಡ್ಡ ಸಮಸ್ಯೆಯಾಗಿತ್ತು. ಅದರಲ್ಲಿ ಇವನೊಬ್ಬ ಆಸಾಮಿ ಇನ್ನೊಂದು ದಾರಿ ತಿಳಿಸಿ ನನ್ನ ತಲೆಯೊಳಗೆ ಹುಳ ಬಿಟ್ಟ. ಶಾಲೆಯ ಆವರಣದಲ್ಲಿ ಬ್ರಿಟೀಷರು ಕಟ್ಟಿಸಿದ್ದ ಕುದುರೆ ಮಂಡಿಯ ಕಟ್ಟಡ ಇನ್ನೂ ಸಧೃಢವಾಗಿ ನಿಂತಿದ್ದು ನನಗೆ ಇಂದಿನ ಕಟ್ಟಡಗಳ ಕಳಪೇ ಕಾಮಗಾರಿಗಳನ್ನು ಅಣಕಿಸಿದಂತೆ ಭಾಸವಾಯಿತು.

ಹಾಗೆಯೇ ಇನ್ನೆರಡು ಮೈಲು ನಡೆದು ನೇರ್ಲಿಗೆ ಪ್ರವೇಶಿಸಿದೆ. ಅಲ್ಲಿ ಪ್ರಾಥಮಿಕ ಶಾಲೆಗಳ ಮಧ್ಯೆ ಕೋಕೋ, ಕಬ್ಬಡಿ, ವಾಲಿಬಾಲ್ ಇತರೆ ಕ್ರೀಡೆಗಳ ಸ್ಪರ್ಧೆ ಏರ್ಪಟ್ಟಿತ್ತು. ಕೆಲವು ನಿಮಿಷಗಳು ಮಕ್ಕಳ ಆಟವನ್ನು ನೋಡಿ ಜನರ ಜೊತೆ ನಾನು ಆ ಊರಿನ ತಂಡವನ್ನು ಕೇಕೆ ಹಾಕಿ, ಚಪ್ಪಾಳೆ ತಟ್ಟುವ ಮೂಲಕ ಬೆಂಬಲಿಸಿದೆ. ಪ್ರಾಥಮಿಕ ಶಾಲೆಯ ಎದುರಿಗೇ ಇದ್ದ ಪ್ರೌಢಶಾಲೆಯ ಆವರಣವನ್ನು ತಲುಪಿ ವಿಷಯ ಮುಟ್ಟಿಸಿದೆ. ಮಧ್ಯಾಹ್ನದ ಬಿಸಿ ಊಟ ಬಡಿಸಿ ಉಪಚರಿಸಿ, ಹೊರಗೆ ಎರಡು ಮರದ ಕೆಳಗೆ ಮಕ್ಕಳನ್ನು ಕೂರಿಸಿ ನನಗೆ ಅನುವು ಮಾಡಿಕೊಟ್ಟರು. ಆಗ ತಾನೆ ಊಟ ಮಾಡಿ ಸಮೃದ್ಧನಾಗಿದ್ದ ನಾನು ಉಪನ್ಯಾಸವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟೆ. ಮಕ್ಕಳೂ ಲವಲವಿಕೆಯಿಂದ ಕೇಳಿ ಖುಷಿಪಟ್ಟರು.

sheepಅಲ್ಲಿಂದ ಆರು ಮೈಲುಗಳ ನಡಿಗೆಯನ್ನು ಮಾಯಕೊಂಡದ ಕಡೆಗೆ ಶುರುಮಾಡಿದೆ. ಮಾರ್ಗ ಮಧ್ಯೆ ನನಗೆ ತಿಳಿಯದ ಭಾಷೆಯಲ್ಲಿ ಮಾತಾಡಿಕೊಂಡು ಮೂರ್ನಾಲ್ಕು ಗುಂಪು ಕುರಿಗಳನ್ನು ಮೇಯಿಸಿಕೊಂಡು ಹೋಗುತ್ತಿದ್ದರು. ನನಗೂ ನಡೆದೂ ನಡೆದೂ ದಣಿವಾಗಿದ್ದರಿಂದ, ಅವರನ್ನು ಮಾತಿಗೆ ಎಳೆದು ಅವರ ಜೊತೆಯೇ ನಡೆಯಲು ಶುರುಮಾಡಿದೆ. ಆಗ ಗೊತ್ತಾಗಿದ್ದು, ಆ ಭಾಗದಲ್ಲೂ ಕೂಡ ಕೆಲವು ಲಂಬಾಣಿ ಜನಾಂಗದವರು ವಾಸವಾಗಿದ್ದಾರೆಂದು. ಕುರಿಗಳ ಜೊತೆ ಹತ್ತಾರು ಕುದುರೆಗಳಿದ್ದುದೂ ವಿಶೇಷ. ಪಟ್ಟಣ ಅಂಗಡಿಗಳಿಂದ ಸಾಮಾನು ಸಾಗಿಸಲು ಅವುಗಳನ್ನು ಉಪಯೋಗಿಸುತ್ತಿದ್ದಾರೆ ಎಂದು ತಿಳಿಯಿತು.

ಅವರಿಂದ ದೊಣ್ಣೆ ಪಡೆದು ಕುರಿ ಕುದುರೆಗಳ ಮೈ ನೆವೆದು ಒಂದೆರಡು ಮೈಲುಗಳ ತನಕ ಅವುಗಳ ಜೊತೆ ನಡೆದೆ. ಅವರನ್ನು ಬಿಟ್ಟು ಎಡಕ್ಕೆ ತಿರುಗಿ ಒಂದರೆಡು ಮೈಲು ನಡೆದರೆ, ಮಾಯಕೊಂಡ ಎಂಬ ಊರು ಸಿಕ್ಕಿತು. ಊರನ್ನು ಹೊಕ್ಕಿ ಅತ್ತ ಇತ್ತ ತಿರುಗಿ ಊರಿನ ಪೋಲಿಸ್ ಸ್ಟೇಷನ್‍ಗೆ ತೆರಳಿ “ಗಾಯಿತ್ರಿ ಗ್ರಾಮೀಣ ವಿದ್ಯಾಸಂಸ್ಥೆ”ಯ ಮಕ್ಕಳ ಮತ್ತು ವೃದ್ಧಾಶ್ರಮದ ಬಗ್ಗೆ ವಿಚಾರಿಸಿದರೆ, ಯಾವುದೋ ತಗಾದೆಯನ್ನು ಸರಿಪಡಿಸುತ್ತಿದ್ದ ಇಬ್ಬರು ಪೇದೆಗಳಲ್ಲಿ ಒಬ್ಬ ನನ್ನತ್ತ ತಿರುಗಿದ. ಅವನಿಗೆ ಆಶ್ರಮದ ಬಗ್ಗೆ ತಿಳಿದಿರಲಿಲ್ಲ. ಪಕ್ಕದಲ್ಲೆ ಕುಳಿತಿದ್ದ ತನ್ನ ಮುಖವೆಲ್ಲ ಕುರೂಪು ಹಾಕಿಸಿಕೊಂಡು ಒಬ್ಬ ರೌಡಿಯಂತೆ ಕಾಣುತ್ತಿದ್ದ ಇನ್ನೊಬ್ಬ ಪೇದೆ ನನ್ನತ್ತ ತಿರುಗಿಯೂ ನೋಡಲಿಲ್ಲ. ಇವನನ್ನೂ ಒಂದೆರಡು ಸಲ ಕೇಳಿ ಸುಮ್ಮನಾದೆ.

ನಾನು ಅಲ್ಲೇ ಅವನ ಉತ್ತರ ಕಾಯುತ್ತಾ ಹತ್ತು ನಿಮಿಷ ನಿಂತಿದ್ದೆ. ಆರಕ್ಷಕನಿಂದ ನನಗೆ ಉತ್ತರ ಬರುವುದಿಲ್ಲ ಎಂದು ಕಾತರಿಯಾದ ತಕ್ಷಣ ಅಲ್ಲಿಂದ ಹೊರಟು ಒಂದಿಬ್ಬರನ್ನು ವಿಚಾರಿಸಿ ಆಶ್ರಮದ ತೆಕ್ಕೆಗೆ ಸೇರಿದೆ. ಅಲ್ಲಿ ನನಗೆ ಉಳಿದುಕೊಳ್ಳಲು ಒಪ್ಪಿಗೆ ದೊರೆಯಿತು. ಅಲೆಮಾರಿಗಳ ಮಕ್ಕಳು, ಏಕ ಪೋಷಕರ ಮಕ್ಕಳು, ಒಡೆದು ಹೋದ ಕುಟುಂಬಗಳ ಮಕ್ಕಳನ್ನು ಇಲ್ಲಿ ತಂದು ರಾಜ್ಯ ಸರ್ಕಾರ ಕೊಡುವ ಸಹಾಯಧನದಿಂದ ವಸತಿ, ಊಟ, ಬಟ್ಟೆ, ಶಿಕ್ಷಣವನ್ನು ಉಚಿತವಾಗಿ ಕೊಡುತ್ತಿದ್ದರು. ವೃದ್ಧಾಶ್ರಮ ಕೇಂದ್ರ ಸರ್ಕಾರದ ಸಹಾಯಧನದಿಂದ ನಡೆಯುತ್ತಿದೆ. ಇದಲ್ಲದೇ ದಾವಣಗೆರೆಯಲ್ಲಿ ಬೀದಿ ತಂಗುದಾಣ ಮತ್ತು ಇತರೆ ಸ್ಥಳಗಳಲ್ಲಿರುವ ಆಶ್ರಮಗಳ ಬಗ್ಗೆ ತಿಳಿದು ಖುಷಿಯಾಯಿತು.

ಈಗಿನ ವಿಶ್ವಕರ್ಮ ಜಿಲ್ಲಾಧ್ಯಕ್ಷರಾದ ಮರಿಯಾಚಾರ್.ಕೆ.ಪಿ ರವರು ಈ ಸಂಸ್ಥೆಯ ಅಧ್ಯಕ್ಷರಾಗಿಯೂ ಬಹಳ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಅಲ್ಲಿಯ ಮಕ್ಕಳು ಬಹುಬೇಗನೇ ನನ್ನನ್ನು ಹಚ್ಚಿಕೊಂಡರು. ನಾ ಬರೆದ ಕವನಗಳನ್ನು ಓದಿ, ಇಷ್ಟಪಟ್ಟು, ನಕ್ಕು ನಲಿದರು. ಕೆಲವರಿಗೆ ಓದುವ ಹವ್ಯಾಸ ಬೆಳೆದಿದ್ದರಿಂದ, ನನ್ನಲ್ಲಿದ್ದ ಪುಸ್ತಕಗಳನ್ನು ಅವರಿಗೆ ಬಳುವಳಿಯಾಗಿ ಕೊಟ್ಟೆ. ನಾನು ಅಲ್ಲೇ ಕಾಯಂ ಆಗಿ ಇರಬೇಕೆಂದು ಒತ್ತಾಯಿಸಿದರು. ಮುಖ ತೊಳೆದು ಊರು ಸುತ್ತಲು ಹೋದೆ. ಊರ ಹೊರಗೆ ಹಿರೇ ಮದಕರಿ ನಾಯಕ ಸಮಾಧಿ ಎಂದು ಫಲಕವಿತ್ತು. ಏನಪ್ಪಾ ಎಂದು ವಿಚಾರಿಸಿದರೆ, ಮದಕರಿ ನಾಯಕನಿಗೆ ಆ ಊರಿನಲ್ಲಿ ಒಂದು ಹೆಣ್ಣಿನ ಸಂಬಂಧವಿದ್ದರಿಂದ ಇಲ್ಲಿನ ಜನರು ಕೋಪಗೊಂಡು ಮದಕರಿಯ ಶಿರಚ್ಛೇದನ ಮಾಡಿ ಅವನ ತಲೆಯನ್ನು ಮಾತ್ರ ಅಲ್ಲಿ ಸಮಾಧಿ ಮಾಡಿದ್ದಾರೆಂಬ ಕಥೆ ತಿಳಿಯಿತು. ಎಷ್ಟು ನಿಜವೋ ಬಲ್ಲವರ್ಯಾರು?

 [ಇಲ್ಲಿಯತನಕ ನಡಿಗೆಯಲ್ಲಿ ಕ್ರಮಿಸಿದ ಅಂದಾಜು ದೂರ = 209 ಮೈಲುಗಳು]

 

‍ಲೇಖಕರು admin

July 9, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: