’ರೈಲಿಳಿದುಹೋದವರೆಲ್ಲ ಏನಾದರೋ ಗೊತ್ತಿಲ್ಲ…’ – ತ್ರಿವೇಣಿ ಶ್ರೀನಿವಾಸರಾವ್

ಎರಡು ಕವಿತೆಗಳು

ತ್ರಿವೇಣಿ ಶ್ರೀನಿವಾಸರಾವ್

ಪ್ರೀತಿಯ ಕವಿಗೊಂದು ಇಮೇಲು!

ಕವಿಗಳೇ,

ಇಲ್ಲಿಂದ ಹೋದಮೇಲೆ

ನಿಮ್ಮಿಂದ ಸುದ್ದಿಯಿಲ್ಲ,

ಸಮಾಚಾರ ತಿಳಿಯೋಣವೆಂದರೆ

ಈಗ ಬಳೆಗಾರ ಬರುವುದಿಲ್ಲ
ಭವಾನಿ ಕಂಗನ್, ಮಹಿಳಾ ಬ್ಯಾಂಗಲ್
ಬಂದ ಮೇಲೆ ಅವನಿಗೂ ಕೆಲಸವಿಲ್ಲ, ಪಾಪ!
ಪತ್ರ ವ್ಯವಹಾರಕ್ಕೂ
ಪುರಸೊತ್ತಿಲ್ಲದ ಹೊತ್ತಲ್ಲಿ
ಈಮೇಲೇ ಮೇಲೆನಿಸಿತು.
 
ನಾವು ಕ್ಷೇಮ,
ನೀವು ಹೇಗಿದ್ದೀರಿ?
ಮೊನ್ನೆ ಊರಿಗೆ ಬಂದಿದ್ದಾಗ
ನಿನ್ನ ಮನೆಯ ಮುಂದೆಲ್ಲ ಸುತ್ತಿಸುಳಿದೆ ;
ಜಗಲಿಯಲ್ಲಿ ಅಕ್ಕಿ ಆರಿಸುತ್ತಾ ಕುಳಿತವಳಿಲ್ಲ,
ಹೊಸಿಲ ಬಳಿ ಬಂದೊಡನೆ
`ಹೆಸರೇನು’ ಎನ್ನುವರಿಲ್ಲ,
ವಿಚಾರಿಸೋಣವೆಂದರೆ
ಹಣ್ಣಿನಂಗಡಿ ಮುಚ್ಚಿತ್ತು
ಹೂವಿನಾಕೆ ವ್ಯಾಪಾರಮುಗಿಸಿ
ಎದ್ದುಹೋಗಿದ್ದಳು.
 
ಇಲ್ಲೇನಾಗಿದೆ ಕೇಳಿ;
ಬಹುಮಹಡಿ ಕಟ್ಟಡಗಳ
ನಡುವಿರುವ ನನಗೆ
ಹಾಲುಚಂದಿರ ಬಂದರೂ
ಕಾಣುವುದಿಲ್ಲ,
ರಾಯರಿಗೆ ಮಾವನ ಮನೆ
ಬರೀ ಬೋರು.
ಪದುಮ ಹೊರಗಾದರೂ
ಕೂರುವುದಿಲ್ಲ
ಸಾಫ್ಟ್ವೇರ್ ಉದ್ಯೋಗಿ ಹೆಂಡತಿ
ಮನೆಯೊಳಗಿರುವುದಿಲ್ಲ,
ಕೋಟಿ ರೂಪಾಯಿಯೂ ಈಗ
ಅಷ್ಟೇನು ದೊಡ್ಡದುಡ್ಡಲ್ಲ ಬಿಡಿ.
 
ತಾವರೆಕೆರೆ, ನವಿಲೂರು, ಹೊನ್ನೂರುಗಳೆಲ್ಲ
ಈಗ ದುಬಾರಿ ಸೈಟುಗಳಾಗಿವೆ,
ಜೋಯಿಸರ ಮಗನಿಗೆ
ಹೆಣ್ಣು ಸಿಕ್ಕುವುದು
ಇದ್ದಿದ್ದೂ ಕಷ್ಟವಾಗಿದೆ
ಚಿತ್ರದುರ್ಗ-ಮೈಸೂರು
ರೈಲಿಳಿದುಹೋದವರೆಲ್ಲ
ಏನಾದರೋ ಗೊತ್ತಿಲ್ಲ.
 
ವಿಚಿತ್ರವೆನಿಸುವುದೆಂದರೆ
ತಿಂಗಳ ಕಂದಗಳೆಲ್ಲ
ಬೆಳೆದು ಮನೆ ತೊರೆದರೂ
ತೌರಹಂಬಲ ಕಳಚಿಕೊಳ್ಳುವುದು
ಈಗಲೂ ಅಷ್ಟೇನೂ ಸುಲಭವಲ್ಲ!
 

ಯಾವ ಮೋಹನ?


ಮದುವೆಯಾಗಿ
ಇಪ್ಪತ್ತೈದು ಕಳೆದರೂ
ಆಗೀಗ ಫಂಕ್ಷನ್ನುಗಳಲ್ಲಿ
ಹೊರಗೆ ಬಂದು
ಉಸಿರೆಳೆದುಕೊಳ್ಳುವ
ಅದೇ ಭಾರಿ ದುಬಾರಿ
ಧಾರೆ ಸೀರೆಗಳು,
 
ಎಂದೋ ಫ್ಯಾಷನ್ ಆಗಿದ್ದು
ಈಗ ಫ್ಯಾಷನ್ ಅಂಗಳದಿಂದ
ಒದ್ದಾಚೆ ಹಾಕಿರುವ
ಅದೇ ಉದ್ದ ತೋಳಿನ
ಅಂಚು ತೊಡಿಸಿದ
ರವಿಕೆಗಳಲ್ಲಿ
ಬಾಬ್ ಅಲ್ಲದ,
ಜಡೆಯೂ ಅಲ್ಲದ
ಕರಿ-ಬಿಳಿ ಕೂದಲಿಗೆ
ಮೆಹಂದಿ ಸೋಕಿದ
ಕೆಂಬಣ್ಣದ ರಂಗು.
 
ಬಂಗಾರ ಈ ಪಾಟಿ ಏರಿರದ
ಕಾಲದಲ್ಲೆಂದೊ ಕೊಂಡಿಟ್ಟುಕೊಂಡ
ಚಿನ್ನ-ವಜ್ರ-ವೈಢೂರ್ಯಗಳ
ಮಿನುಗು ಮಿಣುಕುಗಳ ನಡುವೆ
ಮಿಂಚು ಕಳಕೊಂಡ
ಮಂಕು ಕಣ್ಣುಗಳು,
 
ಸತ್ಯನಾರಾಯಣ, ನವಗ್ರಹ,
ಹುಟ್ಟುಹಬ್ಬ, ಸೀಮಂತ, ವಾರ್ಷಿಕೋತ್ಸವ
ಎಲ್ಲದಕ್ಕೂ ಅದೇ ಅದೇ
ಚಪಾತಿ-ಕರ್ರಿ,
ನಾನ್-ಮಟರ್ ಪನೀರ್,
ಚಿಪ್ಸ್-ಸೋಡ-ಸಮೋಸ-ಢೋಕ್ಲಾ
ಫ್ರೈಡ್ ರೈಸ್-ರಾಯಿತ, ಇತ್ಯಾದಿ
ಸಿದ್ಧ ಮೆನುಗಳ ಕೃತಕ ದುನಿಯ,
ಹಾಯ್! ಹೌ ಆರ್ ಯು?
ಐ ಆಮ್ ಫೈನ್!
ಹೌ ವಾಸ್ ಯುವರ್ ಇಂಡಿಯ ಟ್ರಿಪ್?
ಹನಿ ಆತ್ಮೀಯತೆಯಿಲ್ಲದ
ಮಾತುಕಥೆಯ ನಡುವೆ
ಕಿಣಿಕಿಣಿಸುವ ಚಮಚ-ಮುಳ್ಳುಗಳು
 
ಬೆಳೆದ ಮಕ್ಕಳಿಗಿನ್ನೂ
ಮದುವೆಯಾಗದ ಕೊರಗು,
ಶುಗರ್, ಬೀಪಿ, ಕೊಲೆಸ್ಟರಾಲ್…
ಮೈತುಂಬ ಅಡರಿಕೊಂಡು
ಕಿರಿಕಿರಿ ಮಾಡುವ
ಇಪ್ಪತ್ತೆಂಟು ರೋಗ
ಅರವತ್ತು ಎಂದೋ ದಾಟಿದ್ದರೂ
ಇನ್ನೂ ಹಗುರವಾಗಿರದ
ಬಾಳ ನೊಗ
ಇವುಗಳ ನಡುವೆ
ಮತ್ತೆ ಮತ್ತೆ ನೆನಪಾಗುವ
ಅಡಿಗರ ಅದೇ ಹಳೆ ರಾಗ
ಯಾವ ಮೋಹನ ಮುರಳಿ ಕರೆಯಿತು?
ದೂರ ತೀರ ನಿನ್ನಕೆ ನಿನ್ನನು?

‍ಲೇಖಕರು avadhi

May 26, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

10 ಪ್ರತಿಕ್ರಿಯೆಗಳು

  1. Badarinath Palavalli

    ಮೊದಲ ಕವನದಲ್ಲಿ ಕೆ.ಎಸ್. ನರಸಿಂಹಸ್ವಾಮಿಯವರ ಸಮಗ್ರ ಕಾವ್ಯಗಳ ಕಿರು ನೋಟ ಲಭಿಸಿತು. ದಾಂಪತ್ಯ ಬದುಕಿನ ಪ್ರತಿ ಮಜಳಿಗೂ ಒಗ್ಗುವ ಕವಿತೆ ಬರೆದು ಕೊಟ್ಟ ಮಲ್ಲಿಗೆ ಕವಿ ಅವರು.
    “ರೈಲಿಳಿದುಹೋದವರೆಲ್ಲ
    ಏನಾದರೋ ಗೊತ್ತಿಲ್ಲ.” ಬದುಕಿನ ವಿಪರ್ಯಾಸವೇ ಅಂತು…
    ಎಯರಾದನೇ ಕವನದ ಹೂರಣವೇ ಮನಸೆಳೆಯುತ್ತದೆ. ಯಾಂತ್ರೀಕೃತ ಜೀವನದ ಪೊಳ್ಳು ಇಲ್ಲಿ ಸಾದೃಶ್ಯವಾಗಿದೆ. ಅಡಿಗರಂತೂ ನಾವು ಸದಾ ಕಾಲ ನೆನೆಯ ಬೇಕಾದ ಕವಿ. ಇನ್ನು,
    “ಎಲ್ಲದಕ್ಕೂ ಅದೇ ಅದೇ
    ಚಪಾತಿ-ಕರ್ರಿ,
    ನಾನ್-ಮಟರ್ ಪನೀರ್,
    ಚಿಪ್ಸ್-ಸೋಡ-ಸಮೋಸ-ಢೋಕ್ಲಾ
    ಫ್ರೈಡ್ ರೈಸ್-ರಾಯಿತ, ಇತ್ಯಾದಿ” ಸಾಂಪ್ರದಾಯಿಕತೆ ನಿಧಾನವಾಗಿ ಮರೆಯಾಗುತ್ತಿರುವ ಕೆಟ್ಟ ಸೂಚನೆ ಇದು.
    ಕವನಗಳಲ್ಲಿಯ ಕಳಕಳಿ ಮತ್ತು ಸರಳತೆ ಮನಸ್ಸಿನ ಆಳಕ್ಕೆ ಇಳಿಯುತ್ತದೆ.

    ಪ್ರತಿಕ್ರಿಯೆ
  2. ಅಶೋಕ ಶೆಟ್ಟರ್

    ಕಳೆದುಹೋದದ್ದರ ಕುರಿತ ಕೊರಗು ಮೆಲುದನಿಯಲ್ಲಿ ತಕ್ಕಷ್ಟು ವ್ಯಂಗ್ಯವನ್ನು ಬಳಸಿಕೊಂಡು ಪರಿಣಾಮಕಾರಿಯಾಗಿ ಮೂಡಿ ಬಂದಿದೆ…ಇಷ್ಟವಾದವು

    ಪ್ರತಿಕ್ರಿಯೆ
  3. Tejaswini Hegde

    ವಿಚಿತ್ರವೆನಿಸುವುದೆಂದರೆ
    ತಿಂಗಳ ಕಂದಗಳೆಲ್ಲ
    ಬೆಳೆದು ಮನೆ ತೊರೆದರೂ
    ತೌರಹಂಬಲ ಕಳಚಿಕೊಳ್ಳುವುದು
    ಈಗಲೂ ಅಷ್ಟೇನೂ ಸುಲಭವಲ್ಲ!………….. ವ್ಹಾ!!
    ತ್ರಿವೇಣಕ್ಕ…. ತುಂಬಾ ಇಷ್ತವಾದವೂ ಎರಡೂ ಕವನಗಳು.. ಅದರಲ್ಲೂ ಮೊದಲನೆಯದು ಮತ್ತೂ ಆಪ್ತವೆನಿಸಿತು.

    ಪ್ರತಿಕ್ರಿಯೆ
  4. ಪ್ರಮೋದ್

    ಈಗಿನ ಪೊಳ್ಳು ಜೀವನದ ವಿಷಾದ, ವಿಷಣ್ಣತೆ, ವಿಪರ್ಯಾಸಗಳನ್ನು ಒ೦ದೇ ಉಸಿರಲ್ಲಿ ಓದಿಸಿ ಬರಿಯ ನಿಟ್ಟುಸಿರು ಮಾತ್ರ ಉತ್ತರವಾಯಿತು.
    ಒಳ್ಳೆಯ, ಕಹಿ ಸತ್ಯದ ಬದುಕಿನ ಕವಿತೆ

    ಪ್ರತಿಕ್ರಿಯೆ
  5. ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ

    ಕವಿತೆಗಳೆರಡು ತುಂಬಾ ಹಿಡಿಸಿದವು.ಅತಿ ಆಧುನಿಕರಾಗುತ್ತಿರುವ ನಾವುಗಳು ನಮ್ಮ ಪರಂಪರೆಯ ಕೊಂಡಿಗಳನ್ನು ಕಳಚಿಕೊಂಡು ಹೊಸದರತ್ತ ಮುಖಮಾಡಿರುವ ಈ ಸಂಕ್ರಮಣದ ಸಂದರ್ಭದಲ್ಲಿ ನಾವು ನಮ್ಮನ್ನು ಹುಡುಕಿಕೊಳ್ಳಬೇಕಾಗಿದೆ.ನಮ್ಮ ಕೆ.ಎಸ್.ನ. ಅವರ ಕಾವ್ಯ ಕಟ್ಟಿ ಕೊಟ್ಟ ಬದುಕಿನ ವೈಶ್ಯಾಲತೆ,ಮೋಹಕತೆ,ಆತ್ಮೀಯ ಒಡನಾಟ,ಪ್ರೇಮ,ಪ್ರೀತಿ,ದಾಂಪತ್ಯದ ಸವಿ ಸವಿ ಹಾಡುಗಳು ,ಅವುಗಳ ಸಂದರ್ಭಗಳನ್ನು ಮರಳಿ ತರಲಾದೀತೆ..
    ಆದರೆ,
    ‘ತೌರ ಹಂಬಲ ಕಳಚಿಕೊಳ್ಳುವುದು
    ಈಗಲೂ ಅಷ್ಟೇನು ಸುಲಭವಲ್ಲ.’

    ಪ್ರತಿಕ್ರಿಯೆ
  6. Vanamala V

    ತುಂಬಾ ಚೆನ್ನಾಗಿದೆ. ಇಷ್ಟವಾಯ್ತು ಮೇಡಂ…

    ಪ್ರತಿಕ್ರಿಯೆ
  7. Triveni

    ನನ್ನ ಕವನಗಳನ್ನು ಮೆಚ್ಚಿದ ಇಲ್ಲಿ ಮತ್ತು ನನ್ನ ಫೇಸ್‍ಬುಕ್ ವಾಲಿನಲ್ಲಿ ಲೈಕ್, ಕಾಮೆಂಟ್, ಮೆಸೆಜ್ ಮೂಲಕ ಮೆಚ್ಚುಗೆ ಸೂಚಿಸಿದ ಎಲ್ಲರಿಗೂ, ಧನ್ಯವಾದಗಳು. ಪ್ರಕಟಿಸಿದ ಅವಧಿಗೂ!

    ಪ್ರತಿಕ್ರಿಯೆ
  8. Smitha

    Preetiya Triveni
    Nimma kavithe ‘yava mohana’ tumba chennagide. Nothing but the truth!!! Awesome!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: