'ಕನ್ನಡಕ್ಕೆ ತಪ್ಪಿದ ’ಅನಂತ’ ಅವಕಾಶ' – ಡಾ. ಬಿ.ಆರ್. ಸತ್ಯನಾರಾಯಣ ಬರೆಯುತ್ತಾರೆ

ಡಾ. ಬಿ.ಆರ್. ಸತ್ಯನಾರಾಯಣ

ಕನ್ನಡದ ಕಾದಂಬರಿಕಾರನೊಬ್ಬ ಮೆನ್ ಬೂಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡು ಸಂಚಲನ ಮೂಡಿಸಿದ್ದು ಈಗ ಸವಿನೆನಪು ಅಷ್ಟೆ. ಆ ಪ್ರಶಸ್ತಿ ಸಿಗಲಿಲ್ಲ. ಅದಕ್ಕೆ ಕಾರಣಗಳೇನೇ ಇರಲಿ; ಆ ಮೂಲಕ ಕನ್ನಡಕ್ಕೊಂದು ’ಅನಂತ’ ಅವಕಾಶ ತಪ್ಪಿ ಹೋಗಿದೆ; ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಕಾಶಿಸುವ ಅವಕಾಶ ಅದು. ಆದರೆ ಅದರಿಂದ ನಿರಾಶೆ ಪಡಬೇಕಿಲ್ಲ. ಅದೇನೆ ಇರಲಿ. ಈ ಕಾರಣದಿಂದ ಕೇಂದ್ರಬಿಂದುವಾದವರು ನಮ್ಮ ಅನಂತಮೂರ್ತಿಯವರು. ಸುಮಾರು ವರ್ಷಗಳ ಹಿಂದೆ ನಾನು ಮೊದಲು ಓದಿದ್ದು ಅವರ ಭಾರತೀಪುರ ಕಾದಂಬರಿ. ಅದು ನನ್ನನ್ನು ಚಿಂತನೆಯನ್ನು ಬೇರೊಂದು ಮಗ್ಗುಲಿಗೆ ಹೊರಳುವಂತೆ ಮಾಡಿತ್ತು (ಆದರೆ ಅದು ನನ್ನ ಮೊದಲ ಓದಿನಲ್ಲಲ್ಲ! ನಂತರದ ಮರು ಓದುಗಳಲ್ಲಿ. ಮೊದಲ ಓದಿನಲ್ಲಿ ನನಗೆ ಇಷ್ಟವಾಗಿದ್ದು ಅದರಲ್ಲಿ ಅನಂತಮೂರ್ತಿಯವರು ಹೇಳಿರುವ ಎರಡು ಪೋಲಿಕತೆಗಳು ಮಾತ್ರ! ಅಂತಹ ಪೋಲಿಕತೆಗಳನ್ನೂ ಶಿಷ್ಟಸಾಹಿತ್ಯದ ನಡುವೆ ಹೇಳಿ ’ಶಿಷ್ಟಪೋಲಿಕತೆ’ ಎನ್ನುವಂತೆ ಮಾಡಿರುವ ಅವರ ಪ್ರತಿಭೆ ನಮಸ್ಕಾರಗಳು). ನಂತರ ಅವರ ಸಮಗ್ರ ಸಾಹಿತ್ಯವನ್ನೂ ಓದುವ ಅವಕಾಶ ನನ್ನದಾಯಿತು. ಈ ಸಂದರ್ಭದಲ್ಲಿ ನನ್ನನ್ನು ಪ್ರಶ್ನೆಯೊಂದು ಮತ್ತೆ ಮತ್ತೆ ಕಾಡುತ್ತಿದೆ. ಮೆನ್ ಬೂಕರ್ ಬಹುಮಾನಕ್ಕೆ ಅನಂತಮೂರ್ತಿಯವರ ಮೊದಲ ಕಾದಂಬರಿಯಾದ ಸಂಸ್ಕಾರವನ್ನು ಮಾತ್ರ ಏಕೆ ಪರಿಗಣಿಸಿದರು? ಅದರ ನಂತರ ಅನಂತಮೂರ್ತಿಯವರು ಬರೆದ ಯಾವ ಕಾದಂಬರಿಯೂ ಅದರ ಸಮೀಪ ಹೋಗಲಾಗಲಿಲ್ಲವೇ? ಸಾಹಿತ್ಯ ಬಜಾರಿನಲ್ಲಿ ಅನಂತಮೂರ್ತಿಯವರ ಸಾಹಿತ್ಯದ ಗ್ರಾಫ್ ಸಂಸ್ಕಾರದ ನಂತರ ಏರಲೇ ಇಲ್ಲವೆ? ಇದು ನನ್ನನ್ನು ನಿಜಕ್ಕೂ ಆಶ್ಚರ್ಯಕ್ಕೆ ತಳ್ಳಿದೆ.

ನನ್ನನ್ನು ಆಶ್ಚರ್ಯಕ್ಕೆ ತಳ್ಳಿರುವ ಮತ್ತೊಂದು ಅಂಶವೆಂದರೆ, ಕೇವಲ ತನ್ನ ಮೊದಲ ಕಾದಂಬರಿಯ ಯಶಸ್ಸನ್ನು ಸುಮಾರು ಐವತ್ತು ವರ್ಷಗಳ ಕಾಲ ಜೀವಂತವಾಗಿಟ್ಟು ಅದರ ಸಂತೋಷವನ್ನು ಅನುಭವಿಸುತ್ತಿರುವ ಅನಂತಮೂರ್ತಿಯವರ ವ್ಯಕ್ತಿತ್ವ! ಅದೊಂದೆ ಕೃತಿಯ ಕಾರಣದಿಂದ ಅನಂತಮೂರ್ತಿಯವರು ಮೆನ್ ಬುಕರ್ ಹೊಸ್ತಿಲಲ್ಲಿ ನಿಂತಿದ್ದರೆ!? ಒಟ್ಟಾರೆ ಸ್ಥೂಲವಾಗಿ ಗಮನಿಸಿದಾಗ, ಅನಂತಮೂರ್ತಿಯವರ ಸಾಹಿತ್ಯಕ ವ್ಯಕ್ತಿತ್ವಕ್ಕೆ ಸಂಸ್ಕಾರವೊಂದೇ ಆಧಾರ. ಸಂಸ್ಕಾರದ ನಂತರವೂ ಅನಂತಮೂರ್ತಿ ಪ್ರಕಾಶಶಿಸುತ್ತಿದ್ದಾರೆ ಎಂದರೆ, ಅದು ಅನಂತಮೂರ್ತಿಯವರ ’ಸಕಾಲಿಕ’ ’ಸಂದರ್ಭೋಚಿತ’ ಚಿಂತನಾಶಕ್ತಿ, ಮತ್ತು ಅದರ ಪರಿಣಾಮಕಾರಿ ಪ್ರಸ್ತುತಿಯಿಂದ ಮಾತ್ರ ಎಂದೆನ್ನಿಸುತ್ತದೆ. ಅನಂತಮೂರ್ತಿಯವರು ತಾವು ನಿಂತ ನೆಲವನ್ನು ಎಂದೂ, ಯಾವ ಕ್ಷಣವೂ ಮರೆತವರಲ್ಲ. ತಮಗೆ ಸಿಕ್ಕ ಯಾವ ಅವಕಾಶವನ್ನೂ ಅವರು ಹಾಳು ಮಾಡಿಕೊಂಡವರಲ್ಲ. ಅದು ಸಣ್ಣದಿರಲಿ ದೊಡ್ಡದಿರಲಿ ಯಾವುದನ್ನೂ ಹಾಳು ಮಾಡಿಕೊಂಡವರಲ್ಲ.

ಉದಾಹರಣೆಗೆ ನೋಡಿ. ಅವರು ಭಾಗವಹಿಸಿದ ಸಭೆ ಸಮಾರಂಭಗಳು, ಹಂಚಿಕೊಂಡ ವೇದಿಕೆಗಳು ಯಾವು ಎಂಬುದರ ಪ್ರಜ್ಞೆ ಅವರಲ್ಲಿ ಸದಾ ಜಾಗೃತವಾಗಿರುತ್ತದೆ. ಅದನ್ನು ಒಂದು ರೀತಿಯಲ್ಲಿ ಸ್ಟೇಜ್ ಮ್ಯಾನರ್ಸ್ ಎಂದೂ ಕರೆಯಬಹುದು! ತಾವು ನಿಂತಿರುವ ವೇದಿಕೆ ಸಾಮಾನ್ಯ ಪುಸ್ತಕ ಬಿಡುಗಡೆಯ ಪುಟ್ಟ ಸಮಾರಂಭದ್ದಾಗಿರಲಿ, ರಾಜ್ಯಮಟ್ಟದ ವೇದಿಕೆಯಾಗಿರಲಿ, ರಾಷ್ಟ್ರ-ಅಂತರಾಷ್ಟ್ರ ಮಟ್ಟದ್ದಾಗಿರಲಿ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಪದವಿಯಾಗಿರಲಿ ಅವೆಲ್ಲದರ ಅರಿವು ಅವರಿಗಿರುತ್ತದೆ ಹಾಗೂ ಅವನ್ನು ಅವರು ಸಮರ್ಥವಾಗಿ ಬಳಸಿಕೊಳ್ಳುತ್ತಾರೆ. ಎಲ್ಲಿ ಏನು ಹೇಳಬೇಕು? ಎಷ್ಟು ಹೇಳಬೇಕು? ಹಾಗೆ ಹೇಳುವುದರಿಂದ ಆಗುವ ಪರಿಣಾಮ, ಅದರಿಂದ ಅಂತಿಮವಾಗಿ ಅನಮತಮೂರ್ತಿ ಎಂಬ ಸಾಹಿತ್ಯಕ ವ್ಯಕ್ತಿತ್ವಕ್ಕೆ ಆಗುವ ಲಾಭ, ಸ್ವಲಾಭ ಇವೆಲ್ಲವೂ ಆ ಅರಿವಿನಿಂದಲೇ ಮೂಡುತ್ತಿರುತ್ತವೆ. ಇದು ಒಂದು ರೀತಿಯಲ್ಲಿ ಮನುಷ್ಯನ ಹುಟ್ಟುಗುಣ ಎನ್ನಬಹುದೇನೋ.

ಆದರೆ ಇಂತಹ ಸಂದರ್ಭದಲ್ಲಿ ಅವರ ವೈಚಾರಿಕ ನೆಲೆಗಟ್ಟೇ ಎಷ್ಟೋ ಬಾರಿ ಅಲ್ಲಾಡಿ ಹಲವರ ಅನುಮಾನಕ್ಕೆ ಕಾರಣವಾಗಿದ್ದೂ ಉಂಟು. ವೈಚಾರಿಕತೆಯ ವೇಷವನ್ನೇ ತೊಟ್ಟಿದ್ದರೂ ಅಭಿಪ್ರಾಯಗಳು ಬದಲಾಗುವುದುಂಟು. ’ಕೆಲವು ವರ್ಷಗಳ ಹಿಂದಿನವರೆಗೆ ಕನ್ನಡ ಹಳಗನ್ನಡ ಸಾಹಿತ್ಯದ ಅಧ್ಯಯನ ನನಗೆ ಆಗಿಲ್ಲ. ಅದರ ಪ್ರಭಾವ ಕಡಿಮೆ’ ಎನ್ನುತ್ತಿದ್ದ ಅನಂತಮೂರ್ತಿಯವರು, ಮೊನ್ನೆ ಇದ್ದಕ್ಕಿದ್ದ ಹಾಗೆ, ಕನ್ನಡದ ಪಂಪ, ಕುಮಾರವ್ಯಾಸ, ಬಸವ ಮತ್ತು ಅಲ್ಲಮರನ್ನು ಉಲ್ಲೇಖಿಸಿ ’ನನ್ನ ಲಿಟರರಿ ಹೀರೋಗಳು’ ಎನ್ನುತ್ತಾರೆ! (ಗಾರ್ಡಿಯನ್ ಪತ್ರಿಕೆಯ ಸಂದರ್ಶನ) ಆದರೆ ಅವರ ಲಿಟರರಿ ಹೀರೋಗಳ ಪೈಕಿ ಒಬ್ಬನ ಯಾವುದೇ ಕೃತಿಯನ್ನು, ಅಥವಾ ಅದರ ಭಾಗವನ್ನು ಹೋಗಲಿ ಪಂಪನ ನಾಲ್ಕಾರು ಪದ್ಯಗಳನ್ನೊ ಅಥವಾ ಬಸವ-ಅಲ್ಲಮರ ಒಂದಷ್ಟು ವಚನಗಳನ್ನೊ ಇಂಗ್ಲಿಷಿಗೆ ಭಾಷಾಂತರಿಸುವ ಅಥವಾ ಅವುಗಳ ಮಹತ್ವವನ್ನು ಇಂಗ್ಲಿಷಿನಲ್ಲಿ ಬರೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡವನ್ನು ಪ್ರಕಾಶಿಸುವ ಕೆಲಸವನ್ನು ಅವರು ಮಾಡಲೇ ಇಲ್ಲ ಎಂಬುದನ್ನು ಗಮನಿಸಿದಾಗ ’ಹೀಗೇಕೆ?’ ಎಂಬ ಪ್ರಶ್ನೆ ಮುಂದೆ ಬರುತ್ತದೆ. ಉತ್ತರ ನನಗಂತೂ ಗೊತ್ತಿಲ್ಲ! (ಆದರೆ ಒಂದು ವಿಷಯವನ್ನು ಗಮನಿಸಬೇಕು: ಇಂಗ್ಲಿಷಿನಿಂದ ಕನ್ನಡಕ್ಕೆ ಹೊತ್ತು ತಂದು ಹಾಕಿದ ಇಂಗ್ಲಿಷ್ ಪ್ರೊಫೆಸರುಗಳೇ ಜಾಸ್ತಿ! ಅವರಿಗೆ ಕನ್ನಡದಿಂದ ಒಂದಷ್ಟನ್ನಾದರೂ ಇಂಗ್ಲಿಷಿಗೆ ಹೊತ್ತು ಹಾಕಬೇಕು ಅನ್ನಿಸದೇ ಇರುವುದು ಕನ್ನಡದ ದುರ್ದೈವ)

ಒಂದು ರೀತಿಯಲ್ಲಿ ಅನಂತಮೂರ್ತಿಯವರ ಮನಸ್ಸು ಓಪೆನ್ ಬುಕ್. ಹಿಡೆನ್ ಅಜೆಂಡಾ ಎಂಬುದು ಇದ್ದಿರಬಹುದೇ ಎಂಬುದು ಹಲವಾರು ಬಾರಿ ಅವರನ್ನು ಅವರ ಸಾಹಿತ್ಯವನ್ನು ಪ್ರೀತಿಸುತ್ತಿರುವವರಿಗೆ ಅನ್ನಿಸಿದರೂ, ಅನಂತಮೂರ್ತಿಯವರು ಮಾತ್ರ ತಮಗನ್ನಿಸಿದ್ದನ್ನು ನೇರವಾಗಿ ಯಾವ ಹಾಗೂ ಯಾರ ಮುಲಾಜಿಗೂ ಒಳಪಡದೆ ಧೈರ್ಯವಾಗಿ ಹೇಳುತ್ತಾರೆ. ನಿಜವಾಗಿಯೂ ಇದು ಅನುಕರಣೀಯ ನಡವಳಿಕೆ. ಅವರಷ್ಟು ನೇರವಾಗಿ ನರೇಂದ್ರಮೋದಿಯವರನ್ನು ಟೀಕಿಸುವ ವಿರೋಧಿಸುವ ಇನ್ನೊಬ್ಬ ಚಿಂತಕರನ್ನು ನಾನು ನೋಡಿಲ್ಲ. ’ಯಾರ್ರೀ ಈ ಅನಂತಮೂರ್ತಿ’ ಎಂದು ಅಬ್ಬರಿಸಿದ್ದ ಕುಮಾರಸ್ವಾಮಿಯ ಉಪವಾಸ ಭಂಗ ಮಾಡಲು ಜ್ಯೂಸ್ ಕುಡಿಸುವ ಕಾರ್ಯಕ್ರಮಕ್ಕೆ ಹೋಗಲೂ ಅವರು ಹಿಂಜರಿಯುವುದಿಲ್ಲ ಹಾಗೂ ಪೂರ್ವಾಗ್ರಹಪೀಡಿತರಾಗುವುದಿಲ್ಲ.

ಮೊನ್ನೆ ಚುನಾವಣೆಗಳು ನಡೆದಾಗ, ನೇರವಾಗಿಯೇ ಕಾಂಗ್ರೆಸ್ಸನ್ನು ಬೆಂಬಲಿಸಿದರು. (ಬಸವನಗುಡಿ ಕ್ಷೇತ್ರದ ಕತ್ರಿಗುಪ್ಪೆ ಮೈಸೂರುಮಲ್ಲಿಗೆ ಪಾರ್ಕಿನಲ್ಲಿ, ಚುನಾವಣೆಯ ಮುನ್ನಾ ದಿನ ವಾಕ್ ಮಾಡುತ್ತಿದ್ದ ಹಿರಿಯರೊಬ್ಬರ ಅಭಿಪ್ರಾಯದಂತೆ ’ಅನಂತಮೂರ್ತಿಯವರ ಅಂತಿಮ ಆಸೆ ಯಾವುದಾದರು ರಾಜ್ಯಕ್ಕೆ ಗವರ್ನರ್ ಆಗುವುದು. ಅದಕ್ಕೆ ಕಾಂಗ್ರೆಸ್ಸನ್ನು ಬಹಿರಂಗವಾಗಿ ಬೆಂಬಲಿಸುತ್ತಿದ್ದಾರೆ’. ಹಿಂದೆ ಗುಲ್ಬರ್ಗ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಕುಲಾಧಿಪತಿಯಾಗಿ ನೇಮಕವಾದಾಗ, ಅದೇ ಗುಂಪಿನಲ್ಲಿ ಕೇಳಿದ್ದು: ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ, ಕುಲಾಧಿಪತಿಯಾಗಿ ೮೦ರ ಹರೆಯದ ಅನಂತಮೂರ್ತಿಯವರ ಅಗತ್ಯ ಇದೆಯೊ ಇಲ್ಲವೊ? ಆದರೆ ಅನಂತಮೂರ್ತಿಯವರಿಗೆ ಮಾತ್ರ ಅದರ ಅವಶ್ಯಕತೆ ಇದೆ. ಏಕೆಂದರೆ, ದಿನಿತ್ಯ ನಡೆಯಬೇಕಾಗಿರುವ ಡಯಾಲಿಸಿಸ್ ಮತ್ತು ಇತರ ವೈದ್ಯಕೀಯ ಖರ್ಚು ಭರಿಸಲು!- ಎಲ್ಲಿಯೊ ಕುಳಿತು, ಯಾವ ಉದ್ದೇಶದಿಂದಲೊ, ಸ್ವಾರ್ಥದಿಂದಲೊ, ನಿಸ್ವಾರ್ಥದಿಂದಲೊ ಅನಂತಮೂರ್ತಿಯಂತವರು ತೆಗೆದುಕೊಳ್ಳುವ ನಿರ್ಧಾರಗಳು ಸಾರ್ವಜನಿಕವಾಗಿ ಹೇಗೆ ಸ್ವೀಕರಿಸಲ್ಪಡುತ್ತವೆ ಎಂಬುದಕ್ಕೆ ಉದಾಹರಣೆಯಾಗಿವೆ ಮೇಲಿನ ಅಭಿಪ್ರಾಯಗಳು)

ನಾನಂತೂ ೪೯:೫೧ ರ ಅನುಪಾತವನ್ನಿಟ್ಟುಕೊಂಡು ಅನಂತಮೂರ್ತಿಯವರೇ ಮೆನ್ ಬೂಕರ್ ಬಹುಮಾನಕ್ಕೆ ಆಯ್ಕೆಯಾಗುತ್ತಾರೆ ಎಂದು ಕಾದುಕುಳಿತಿದ್ದೆ. ಆಗಲಿಲ್ಲ. ಆದರೆ ಈಗಿನ ಪ್ರಶ್ನೆ, ಅಷ್ಟೊಂದು ಸ್ಟೇಜ್ ಮ್ಯಾನರ್ಸ್ ಇರುವ ಅನಂತಮೂರ್ತಿಯವರು ಬೂಕರ್ ಬಹುಮಾನದ ಅಂತಿಮ ಸುತ್ತಿನಲ್ಲಿ, ಆ ಅಂತರಾಷ್ಟ್ರೀಯ ವೇದಿಕೆಯನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲವೇ!? ಅವರು ವಾಚಿಸಿದ ಅನುವಾದದ ಗುಣಮಟ್ಟ ಸರಿಯಿರಲಿಲ್ಲವೆ? ಅನುವಾದಿಸಿದವರು ಯಾರು? ಅನಂತಮೂರ್ತಿಯವರೆ? ಅಥವಾ ಅವರೇ ಹೇಳಿರುವಂತೆ, ಕನ್ನಡದಲ್ಲಿ ಮೊದಲು ವಾಚಿಸಿ ನಂತರ ಇಂಗ್ಲಿಷಿನಲ್ಲಿ ವಾಚಿಸಿದ್ದು ಸರಿಯಾಗಲಿಲ್ಲವೆ? (ಅದೇ ರೀತಿ ಅಂದರೆ ಮೊದಲು ರಚಿತವಾದ ಭಾಷೆ ನಂತರ ಅನುವಾದ ವಾಚಿಸಬೇಕೆಂಬ ನಿಬಂಧನೆಯೇನಾದರೂ ಇದೆಯೇ? ನನಗೆ ಗೊತ್ತಿಲ್ಲ.) ಕರ್ನಾಟಕದಲ್ಲೋ ಭಾರತದಲ್ಲೋ ಅವರು ತಮ್ಮ ಮಾತುಗಳಿಂದ ಜನರನ್ನು ಮಾದ್ಯಮವನ್ನು ಸೂಜಿಗಲ್ಲಿನಂತೆ ಹಿಡಿದು ನಿಲ್ಲಿಸಿದಂತೆ ಅಲ್ಲೇಕೆ ಮಾಡಲಾಗಲಿಲ್ಲ?

ಅನಂತಮೂರ್ತಿಯವರ ಅಭಿವ್ಯಕ್ತಿಯ ಪರಿಭಾಷೆಯನ್ನು ನಾವು ಸರಿಯಾಗಿ ಅರ್ಥಮಾಡಿಕೊಂಡಿಲ್ಲವೊ ಅಥವಾ ಬೂಕರ್ ಬಹುಮಾನದ ಅಂತರಾಷ್ಟ್ರೀಯ ಸಮಿತಿ ಸರಿಯಾಗಿ ಅರ್ಥಮಾಡಿಕೊಳ್ಳಲಿಲ್ಲವೊ ಹೇಳುವುದು ಕಷ್ಟ. ಬಹುಶಃ ಇನ್ನೊಮ್ಮೆ ಬೂಕರ್ ಅವಕಾಶ ಸಿಕ್ಕರೆ ಅನಂತಮೂರ್ತಿಯವರು ಅಲ್ಲಿಯೂ ಯಶಸ್ವಿಯಾಗುತ್ತಾರೆ. (ಆದರೆ ಎರಡನೆಯ ಬಾರಿಗೆ ನಾಮನಿರ್ದೇಶನ ಮಾಡುತ್ತಾರೊ ಇಲ್ಲವೊ ನನಗೆ ಗೊತ್ತಿಲ್ಲ)

ಅನಂತಮೂರ್ತಿಯವರ ಸಾಹಿತ್ಯದ ಒಬ್ಬ ಓದುಗನಾಗಿ, ಅವರು ಭಾಗವಹಿಸಿದ ಸಮಾರಂಭಗಳಲ್ಲಿ ಮಾಡಿದ ಭಾಷಣಗಳ ಕೇಳುಗನಾಗಿ, ವರದಿಗಳ ಓದುಗನಾಗಿ, ನನ್ನನ್ನು ಅತಿಯಾಗಿ ಸೆಳೆದ ತುಮಕೂರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದ ಓದುಗನಾಗಿ, ಮೊನ್ನೆ ಮೊನ್ನೆ ಗಾರ್ಡಿಯನ್ ಪತ್ರಿಕೆಯಲ್ಲಿನ ಅವರ ಸಂದರ್ಶನವನ್ನು ಮತ್ತು ಮೆನ್ ಬೂಕರ್ ಪ್ರಶಸ್ತಿ ಕೈತಪ್ಪಿದಾಗ ಅವರು ನೀಡಿದ ಪ್ರತಿಕ್ರಿಯೆ ಎಲ್ಲವನ್ನೂ ಓದಿದವನಾಗಿ ನನಗನ್ನಿಸಿದ್ದು ಬಹುಶಃ ಅನಂತಮೂರ್ತಿಯವರಷ್ಟು ಸಂಕೀರ್ಣ ವ್ಯಕ್ತಿತ್ವದ ಲಿಟರರಿ ಸೆಲೆಬ್ರಿಟಿ ಕರ್ನಾಟಕದಲ್ಲಿ ಮಾತ್ರ ಏಕೆ ಭಾರತದಲ್ಲಿಯೂ ಇಲ್ಲ ಎಂದು.

 

‍ಲೇಖಕರು avadhi

May 26, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. h. r. laxmivenkatesh

    ಬಹುಶಃ ಅನಂತಮೂರ್ತಿಯವರಷ್ಟು ಸಂಕೀರ್ಣ ವ್ಯಕ್ತಿತ್ವದ ಲಿಟರರಿ ಸೆಲೆಬ್ರಿಟಿ ಕರ್ನಾಟಕದಲ್ಲಿ ಮಾತ್ರ ಏಕೆ ಭಾರತದಲ್ಲಿಯೂ ಇಲ್ಲ ಎಂದು.ಒಂದು ಚಿಕ್ಕ ತಪ್ಪು ಮಾಡಿದಂತಿದೆ, ಸತ್ಯನಾರಾಯಣಾರೇ…ನೀವು ಹೇಳಬೇಕಾದದ್ದು ವಿಶ್ವದಲ್ಲಿ ಸಹಿತ ಎನ್ನುವ ಪದಗುಚ್ಛವನ್ನು ?
    ಇಂತಹ ಸೆಲೆಬ್ರಿಟಿಗಳನ್ನು ಹೊಗಳುವುದುದು ಲೋಕಾರೂಢಿ. ನೀವು ಅದಕ್ಕೆ ಬದ್ಧರು ಸಹಿತ…
    ನಿಜವಾದ ಸೆಲೆಬ್ರಿಟಿ ನಮ್ಮ ಮನದಾಳದಲ್ಲಿರುವವರು, ಡಾ. ಎಸ್. ಎಲ್. ಭೈರಪ್ಪನವರು. ಅವರು ಅತ್ಯಂತ ಸರಳ ವ್ಯಕ್ತಿತ್ವದವರು, ಈ ಪಾಶ್ ಕಲ್ಚರ್ ಅವರು ಇಷ್ಟಪಡುವುದಿಲ್ಲ.
    ಅವರ ಹೇಳಿಕೆಗಳನ್ನು ಹೇಳಲು ಅವರು ಸ್ವಾತಂತ್ರ್ಯರು. ನನ್ನಂತಹ ಸಾಮಾನ್ಯಾನಹಾಗೆ… ಅವರನ್ನು ಅಷ್ಟು ಹೀನಾಯವಾಗಿ ನಡೆಸಿಕೊಳ್ಳುವುದು ನಿಮ್ಮ-ನಮ್ಮ ಬೂಕರ್ ಪ್ರಶಸ್ತಿಪಡೆಯಲು ಸಕತ್ ಅರ್ಹರು ಎಂದು ಹೇಳುವ ಜನರ ಪ್ರಿಯ ವ್ಯಕ್ತಿಗೆ ಸರಿಯೆ ? ನಿಜವಾಗಿ ಯೋಚಿಸಿದರೆ ಅದರಲ್ಲೇನು ತಪ್ಪಿದೆ ? ಕೆಲವೇ ಶ್ರೀರಂಗಪಟ್ಟಣದ ಅರ್ಚಕಪರಿವಾರವ ಟಿಪ್ಪು ಕೊಟ್ಟ ಚಿಲ್ಲರೆ ಕಾಸಿಗೆ, ಬಂಗಾರಕ್ಕೆ, ಪದವಿಗೆ ತೃಪ್ತರಾಗಿ ನಮ್ಮ ರಾಜ್ಯದ ಒಡೆಯರನ್ನೇ ಬಯ್ಯುವ ಹುನ್ನಾರ ಮಾಡಿದ್ದದ್ದು ಸರಿಯೆ. ಇಷ್ಟಕ್ಕೂ ಆ ದಿವಾನ್ ಪೂರ್ಣಯ್ಯ ಎಂತಹ ದ್ರೋಹಿ ಎನ್ನುವುದು ನಮಗೆ ತಿಳಿಯುತ್ತದೆ. ಏನೋ ವೈಮನಸ್ಯ ಬಂದರೆ, ರಾಜರನ್ನು ಬೇರೆಯವರ ಕೈಗೆ ಒಪ್ಪಿಸಲು ಹಿಂಜರಿಯದ ಮಹಾ ಧೂರ್ತ ಬ್ರಾಹ್ಮಣ ಆತ !

    ಪ್ರತಿಕ್ರಿಯೆ
  2. Shashikala

    neevugalu yaaru EnE hEli, Anathamurthy avara swantha baduku niluvu EnE irali, avaru kannada sahithya kanDa athyantha srujanasheela barehagaara haagu medhaavi. Avara kathegalu( Aidu dashakada kathegalu) kaadambarigalu maththu avara barahagalannu nODi.

    ಪ್ರತಿಕ್ರಿಯೆ
  3. Gururaja kathriguppe

    It is sad that whenever there is an article about URA, some people immediately rush with BYRAPPA’S name. They are free to criticise article, if they don’t like it. but why they bring unnecessarily BYRAPPA, DIVAN POORNAIAH, TIPPU SULTHAN ? meaningless comment.

    ಪ್ರತಿಕ್ರಿಯೆ
  4. Ananthamurthy

    Nanna dialyses ge yaarindaloo naanu hanhavannu padeyutta illa. Sullu helabaradu. Idannu naanu helalu bekagi madiruvudannu naanu kshamisalaare.

    ಪ್ರತಿಕ್ರಿಯೆ
  5. samyuktha

    I second Mr. Gururaja Kathriguppe! Everyone will have plus and minus…its wise to take the plus from every writer…rather than merely criticizing laureates with baseless comparisons!!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: