(ಐತಿಹಾಸಿಕ ಜೈಲು ಬರೋ ಕಾರ್ಯಕ್ರಮಕ್ಕೆ 38 ವರ್ಷಗಳು)
ನೆಂಪೆ ದೇವರಾಜ್
ಸಾವಿರದ ಒಂಬೈನೂರ ಎಂಬತ್ನಾಲ್ಕರ ಜನವರಿ ೨೬ ರಂದು ಜೈಲು ಬರೋಕ್ಕೇ ರಾಜ್ಯ ರೈತ ಸಂಘ ಕರೆ ಕೊಟ್ಟಿದ್ದೇ ತಡ. ಇಡೀ ಕರ್ನಾಟಕದ ಜೈಲುಗಳು ಭರ್ತಿಯಾದವು. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಬಣಗುಡತೊಡಗಿದವು. ಎಲ್ಲೆಲ್ಲೂ ರೈತರನ್ನು ಹೊತ್ತ ಕೆಎಸ್ಸಾರ್ಟೀಸಿ ಬಸ್ಸುಗಳು?. ‘ನಮ್ಮನ್ನು ನಮ್ಮನ್ನು ಜೈಲಿಗೆ ಕಳುಹಿ! ನಮ್ಮನ್ನು ಜೈಲಿಗೆ ಕಳುಹಿಸಿ’ ಎಂದು ಶಾಲು ಹೊತ್ತ ರೈತರು ದುಂಬಾಲು ಬೀಳುತ್ತಿದ್ದ ದೃಶ್ಯ ಸರ್ವೇಸಾಮಾನ್ಯವಾಗಿತ್ತು. ಕಪ್ಪು ಡಾಂಬರು ರಸ್ತೆಗಳು ರೈತರ ಹಸಿರು ಶಾಲುಗಳಿಂದ ಬಂಗಲೆಗಳ ಎದುರಿನಂಗಳದ ಲಾನುಗಳಾಗಿ ಕಂಗೊಳಿಸುತ್ತಿದ್ದವು.
ಬೆಳಗಾವಿ- ಬಳ್ಳಾರಿ- ಶಿವಮೊಗ್ಗ ಬೆಂಗಳೂರು- ಮೈಸೂರು ಸೇರಿದಂತೆ ಎಲ್ಲ ಜೈಲುಗಳೂ ಭರ್ತಿಯಾಗಿ ಬಯಲು ಬಂಧೀಖಾನೆಗಳು ನಿರ್ಮಾಣಗೊಂಡವು. ಜೈಲಿನೊಳಗೆ ಹೋದವರಿಗಿಂತ ಜೈಲಿನ ಹೊರಗೆ ಬಂಧಿತರಾಗಿದ್ದರೂ ಜೈಲುಗಳ ಕೊರತೆಯಿಂದ ಹಾಗೇ ಹೊರಗಿದ್ದವರು ಲೆಕ್ಕಕ್ಕೇ ಸಿಗದಷ್ಟು. ಮೊಟ್ಟ ಮೊದಲ ಬಾರಿಗೆ ರಾಜ್ಯ ಮತ್ತು ರಾಷ್ಟ್ರದ ಇತಿಹಾಸದಲ್ಲಿ ಎಲ್ಲ ಜೈಲುಗಳು ಭರ್ತಿಯಾಗಿ ಬಯಲು ಬಂಧೀಖಾನೆಗಳೆಂಬ ಹೊಸ ಕಾನ್ಸೆಪ್ಟನ್ನು ಉಂಟು ಮಾಡಲು ಕಾರಣವಾಗಿದ್ದು ಈ ಚಳುವಳಿ!ತುರ್ತು ಸ್ಥಿತಿ ಮತ್ತು ಸ್ವಾತಂತ್ರ್ಯ ಚಳುವಳಿಯಲ್ಲೂ ಬಯಲು ಬಂಧೀಖಾನೆಗಳು ನಿರ್ಮಾಣವಾಗಿರಲಿಲ್ಲ ಎಂಬುದನ್ನು ಗಮನಿಸಬೇಕಾದ ವಿಚಾರ..
ರಾಜ್ಯ ರೈತ ಸಂಘದ ಇಂತಹ ಕರೆಗಳಿಗೆ ತೀರ್ಥಹಳ್ಳಿ ತಾಲೂಕು ರೈತ ಸಂಘ ಸುಮ್ಮನಿರಲಾದೀತೆ. ಅದೂ ಪ್ರೊಫೆಸರ್ ನಂಜುಂಡ ಸ್ವಾಮಿ ಮತ್ತು ಎನ್.ಡಿ ಸುಂದರೇಶ್ ರವರ ಚಾಟಿಯೇಟಿನ ಮಾತುಗಳೂ, ಪತ್ರಿಕಾ ಪದಪುಂಜಗಳಿಂದ ಸಿಂಗಾರಗೊಂಡು ಆಡಳಿತ ನಡೆಸುತ್ತಿದ್ದ ಮುಖ್ಯ ಮಂತ್ರಿ ರಾಮಕೃಷ್ಣ ಹೆಗಡೆಯವರ ಸರ್ಕಾರದ ಮೇಲಿನ ಕೆಂಡದುಂಡೆಯಂತಹ ಟೀಕೆಗಳನ್ನು ಆಲಿಸಿದ ರೈತರಿಗೆ ಜೈಲಿಗೆ ಹೋಗುವುದ್ಯಾವ ಲೆಕ್ಕ.! ಜೋಗದಿಂದ ಬರುವ ೧೧ ಕಿಲೋ ವ್ಯಾಟ್ ನ ವಿದ್ಯುತ್ ತಂತಿಯನ್ನು ಬೇಕಾದರೂ ಮುಟ್ಟಲು ಸಿದ್ದವಾದ ಆತ್ಮಾಹುತಿಯ ಪಡೆಗಳಿದ್ದ ಕಾಲ.

ಇದೀಗ ವಿಷಯಕ್ಕೆ ಬರೋಣ.ನಮ್ಮ ಊರಿನ ಸಮೀಪ ಬಳಗಟ್ಟೆ ದೇವಸ್ಥಾನಕ್ಕೆ ಅರ್ಚಕರಾಗಿದ್ದವರು ನಾಗರಾಜ ಭಟ್ಟರು.ಅತ್ಯಂತ ಸರಳತೆ ಮತ್ತು ಮುಗ್ಧತೆಯ ಆಧಾರದ ಮೇಲೆ ಪೂಜಾ ಕೈಂಕರ್ಯಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಾ ಊರಿನವರ ಸಕಲ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾದವರು. ಈ ಕಾಲದಂತೆ ಪೂಜೆ ಮತ್ತು ಪ್ರಾರ್ಥನೆಗಳ ಮೇಲೆ ಆರ್ಥಿಕ ಉದಾರೀಕರಣದ ಪ್ರಭಾವ ಇರಲಿಲ್ಲ;. ದೇವಸ್ಥಾನಗಳ ಗರ್ಭಗುಡಿಗಳ ಕಾಣಿಕೆ ಅಂಡೆಗಳು ದೇವರೊಂದಿಗೆ ಮಾತಾಡುತ್ತಿದ್ದವು. ಅಡಿಕೆ, ಏಲಕ್ಕಿ, ಅಕ್ಕಿ, ಭತ್ತ, ಕಾಳು ಮೆಣಸು ಮುಂತಾದ ಪದಾರ್ಥಗಳ ಮೇಲೆ ದೇವಸ್ಥಾನದ ಅಭಿವೃದ್ದಿಯು ಸಂಬಂಧವಿಟ್ಟುಕೊಂಡಿತ್ತು. ಬೆಂಗಳೂರಿನ ರಿಯಲ್ ಎಸ್ಟೇಟ್ ಅಥವಾ ರಾಜಕಾರಣಿಗಳ ಜೊತೆ ದೇವಸ್ಥಾನಗಳು ಸಮ್ಮಿಲನಗೊಂಡಿರಲಿಲ್ಲ..ಹಾಗಾಗಿ ದೇವಸ್ಥಾನದ ಒಡೆದ ಹೆಂಚುಗಳನ್ನು ಹಾಕಿಸಲೂ ಅಂದು ಪಡಬಾರದ ಕಷ್ಟಪಡಬೇಕಿತ್ತು.
ಎಂದಿನಂತೆ ನಾಗರಾಜ ಭಟ್ಟರು ಬಳಗಟ್ಟೆ ದೇವಸ್ಥಾನದ ಪೂಜೆಯನ್ನು ಮುಗಿಸಿ ಬಾಣಂಕಿ ಎಂಬ ಊರಿನಲ್ಲಿ ಸತ್ಯನಾರಾಯಣ ವೃತದ ಪೂಜೆ ಮಾಡುವ ಉದ್ದೇಶದಿಂದ ಮಡಿ ಪಂಚೆ, ತಾಮ್ರದ ಮಿರಳೆ ಮತ್ತು ಸೌಟಿನೊಂದಿಗೆ ಹೊರಟಿದ್ದಾರೆ. ದೇವಂಗಿ ಎಂಬ ಊರಿನ ಮುಖಾಂತರ ನಡೆದುಕೊಂಡು ಹೋಗುತ್ತಿದ್ದರು. ದೇವಂಗಿಯಲ್ಲಿ ಅದಾಗ ಭಟ್ಟರು ನೋಡುತ್ತಾರೆ! ಇಡೀ ದೇವಂಗಿ ಸರ್ಕಲ್ ಹಸಿರು ಶಾಲುಗಳೊಂದಿಗೆ ತುಂಬಿ ತುಳುಕುತ್ತಿದೆ. ‘ಹೋರಾಟ ಜೈಲು ಅನ್ಯಾಯ ಬೈಲು’, ‘ಯಾತಕ್ಕಾಗಿ ಹೋರಾಟ, ನ್ಯಾಯಕ್ಕಾಗಿ ಹೋರಾಟ’, ‘ಜೈಲಂತೆ ಜೈಲು. ಇವರ ಅಪ್ಪನದಂತೆ ಜೈಲು’ ಎಂಬ ಘೋಷಣೆಗಳು ಮುಗಿಲು ಮುಟ್ಟುತ್ತಿವೆ.
ಫೋಲೀಸರು ಸಂಧಾನ ಮಾಡುವ ನೆವದಲ್ಲಿ ಚಳುವಳಿಗಾರರನ್ನು ಬಂಧಿಸದೆ ಬಿಟ್ಟು ಹೋಗುವ ನಾಟಕದಲ್ಲಿ ನಿರತರಾಗಿದ್ದರೆ, ಕಾರು ಬಸ್ಸು ಸ್ಕೂಟರುಗಳಲ್ಲಿ ಬಂದ ಪ್ರಯಾಣಿಕರು ರೈತರೊಂದಿಗೆ ಚರ್ಚೆಗಿಳಿದು ‘ದಯಮಾಡಿ ತಮ್ಮ ವಾಹನವನ್ನು ಬಿಟ್ಟು ಬಿಡಿ’ ಎನ್ನುತ್ತಿದ್ದಾರೆ. ಆದರೆ ರೈತರು ಜಪ್ಪಯ್ಯ ಎನ್ನುತ್ತಿಲ್ಲ. ಆರೆಸ್ಟಾದವರನ್ನು ತುಂಬಿಕೊಂಡು ಹೋಗಲು ಆ ಕಾಲದಲ್ಲಿ ಅಪರೂಪದ ಬಸ್ಸಾಗಿದ್ದ ಕೆಎಸ್ಸಾರ್ಟೀಸಿ ಬಸ್ಸುಗಳು ದೇವಂಗಿಯಲ್ಲಿ ಬಂದು ನಿಂತಿವೆ.
ನಾಗರಾಜ ಭಟ್ಟರಿಗೆ ದೇವಂಗಿ ಸರ್ಕಲ್ಲಿನಲ್ಲಿ ಏನಾಗುತ್ತಿದೆ ಎಂದು ಗೊತ್ತಾಗುವುದಕ್ಕೆ ಸ್ವಲ್ಪ ಸಮಯವೇ ಹಿಡಿಯಿತು.ಹಸಿರು ಶಾಲು ಹೊದ್ದು ನವಿಲು ಕಲ್ಲು ಗುಡ್ಡದ ನೆತ್ತಿಗೆ ಕೇಳುವಂತೆ ಕೂಗು ಹಾಕುತ್ತಿರುವ ರೈತರಲ್ಲಿ ಬಹುತೇಕರು ನಾಗರಾಜ ಭಟ್ಟರ ಪರಿಚಿತರು.ಇವರೆಲ್ಲರ ಆವೇಶ, ಉತ್ಸಾಹ, ಕೂಗು, ಜಗಳ, ನಗು ಎಲ್ಲವೂ ನಾಗರಾಜ ಭಟ್ಟರ ಸತ್ಯನಾರಾಯಣ ವ್ರತದ ಪೂಜೆಗೆ ಹೋಗುವ ಕರ್ತವ್ಯವನ್ನು ಮರೆಸಿತು.ತಾಮ್ರದ ಮಿರಳೆ ಮತ್ತು ಮಡಿಯ ಬಟ್ಟೆಯುಟ್ಟಿದ್ದೇನೆ ಅಂಶಗಳು ಭಟ್ಟರಿಂದ ಮರೆಯಾಗತೊಡಗಿತು.
ತಮ್ಮ ಊರಿನವರಿಗೇನೋ ತೊಂದರೆ ಆಗಿದೆ ಎಂದು ತಿಳಿದು ಬಾಣಂಕಿ ಕಡೆ ಹೋಗುವ ಮನಸ್ಸಾಗದ ಭಟ್ಟರು ಒಬ್ಬೊಬ್ಬರನ್ನೆ ಮುಟ್ಟಿ ಮುಟ್ಟಿ ಮಾತಾಡಿಸತೊಡಗಿದರು.ಹೀಗೆ ಮಾತಾಡಿಸುತ್ತಿದ್ದಾಗ ಗುಂಪಿನಲ್ಲಿ ಬಹಳಷ್ಟು ಗೊಂದಲ ಮೂಡತೊಡಗಿತು. ‘ನೀ ಬಾರೋ ನೀ ಬಾರೋ..’ ನೀ ನೀಹತ್ತೋ ಹತ್ತೋ” ”ನಂಗೆ ಗದ್ದೆ ಕೊಯ್ಲದೆ ಬರಲ್ಲ” ಎಂದೊಡನೆ ನೀ ಒಬ್ನೇ ಗದ್ದೆ ಕಂಡವನಾ?”ಎಂಬ ಧ್ವನಿಗಳ ಜೊತೆಗೆ ಮತ್ತಷ್ಟು ಮೊಗೆದಷ್ಟು ಘೋಷಣೆಗಳು.
ಈ ಘೋಷಣೆಗಳೋ ಸಮಚಿತ್ತತೆಯ ಸಾಕಾರ ಮೂರ್ತಿಗಳನ್ನು ರೋಮಾಂಚಿತ ಗೊಳಿಸುವಂತವುಗಳು.ಮಡಿ ಪಂಚೆಯಲ್ಲಿದ್ದ ನಾಗರಾಜ ಭಟ್ಟರನ್ನು ರೈತರ ಘೋಷಣೆ ಹಾಗೂ ಗಡಿಬಿಡಿಗಳು ದನಗಾಹಿಗಳ ಕೊಳಲ ನಾದದಂತೆ ಬೇಡ ಬೇಡವೆಂದರೂ ಸೆಳೆಯತೊಡಗಿದವು. ಜೈಲಿಗೆ ಹೋಗಲು ಸಿದ್ದರಾಗಿ ನಾ ಮುಂದು ತಾ ಮುಂದೆಂದು ಬಸ್ಸು ಹತ್ತುತ್ತಿದ್ದವರ ಜೊತೆ ನಾಗರಾಜ ಭಟ್ಟರೂ ಹತ್ತಿ ಕೂತರು. ಮೊದ ಮೊದಲು ಇವರನ್ನು ಯಾರೂ ಗಮನಿಸಲಿಲ್ಲ.ರೈತ ಚಳುವಳಿ ಮತ್ತು ಪುರೋಹಿತರಿಗೂ ಸಂಭಂಧ ಕಲ್ಪಿಸಿಕೊಳ್ಳುವುದೇ ಅಸಾಧ್ಯದ ಮಾತಾಗಿದ್ದ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು ಜೈಲಿಗೆ ಬರಲಿದ್ದಾರೆ ಎಂಬುದನ್ನು ಯಾರು ಊಹಿಸಿಯಾರು?
ಕೆಎಸ್ಸಾರ್ಟ್ಟೀಸಿ ಬಸ್ಸು ರೈತರನ್ನು ಹೊತ್ತು ಹೊರಟೇ ಬಿಟ್ಟಿತು.ಹೆಚ್ಚೂ ಕಡಿಮೆ ತೀರ್ಥಹಳ್ಳಿಯ ಜಡ್ಜ್ ಸಾಹೇಬರ ಮನೆಗೆ ನಮ್ಮನ್ನೆಲ್ಲ ಕರೆ ತರುವವರೆಗೆ ನಾಗರಾಜ ಭಟ್ಟರನ್ನು ಗಮನಿಸಿದವರೇ ಇಲ್ಲ. ಗೆಳೆಯ ಸುಭಾಶ್ ದೇವಂಗಿ ಸಾಲಾಗಿ ನಿಂತಿದ್ದ ರೈತರ ನಡುವೆ ನಾಗರಾಜ ಭಟ್ಟರನ್ನು ಕಂಡು ಹೌ ಹಾರುತ್ತಾನೆ. ಅದೂ ಮಡಿ ಪಂಚೆ, ಹೆಗಲ ಮೇಲೊಂದು ಶಲ್ಯ. ಕೈಯಲ್ಲಿ ಮಿರಳೆ ಹಿಡಿದು ನಿಂತಿದ್ದಾರೆ! ‘ಅಯ್ಯೋ ಭಟ್ರು ಬಂದಿದ್ದಾರೆ’ ಎಂದಾಗ ಎಲ್ಲರ ದೃಷ್ಟಿ ಒಂದೇ ಏಟಿಗೆ ಭಟ್ಟರ ಮೇಲೆ ಬಿತ್ತು. ಭಟ್ಟರು ಇವರಾರ ನೋಟಕ್ಕೂ ಕವಡೆ ಕಾಸಿನ ಕಿಮ್ಮತ್ತನ್ನು ನೀಡದೆ ನಿರುಮ್ಮಳರಾಗಿ ನಿಂತಿದ್ದಾರೆ.
ತೀರ್ಥಹಳ್ಳಿಯ ಜಡ್ಜ್ ಸಾಹೇಬರು ತಮ್ಮ ಮನೆಯಲ್ಲಿ ಕೂತು’ ನೀವೆಲ್ಲ ಜಾಮೀನು ಪಡೆಯುತ್ತೀರ?’ ಎಂದಾಗ ‘ಇಲ್ಲ’ ಎಂಬುದು ಎಲ್ಲರ ಉತ್ತರವಾಯಿತು.ಹದಿನೈದು ದಿನಗಳ ಜೈಲು ಶಿಕ್ಷೆ ವಿಧಿಸಿ ಬೆಳಗಾವಿಯ ಹಿಂಡೆಲಾಗಾ ಜೈಲಿಗೆ ಕಳುಹಿಸುವ ಆಜ್ಞೆ ಮಾಡಿದರು. ಏಕೆಂದರೆ ಅದಾಗಲೆ ಶಿವಮೊಗ್ಗ ಜಿಲ್ಲೆಯ ಎಲ್ಲ ಜೈಲುಗಳೂ ರೈತರಿಂದ ತುಂಬಿ ಹೋಗಿದ್ದವು.. ನಮ್ಮ ಬಸ್ಸು ತೂದೂರು ದಾಟಿ ಶಿವಮೊಗ್ಗ ಹೋಗುತ್ತಿದ್ದಾಗ ಬಸ್ಸಿನಲ್ಲಿದ್ದ ಭಟ್ಟರನ್ನು ನಿಧಾನವಾಗಿ ಮಾತಿಗೆಳೆದಾಗ ಅವರ ಉತ್ತರ ಸ್ಪಷ್ಟವಾಗಿತ್ತು. ‘ನೀವೆಲ್ಲ ಜೈಲಿಗೆ ಹೋದ್ರೆ ನಮ್ಮ ಪಾಡೇನು? ಅದಕ್ಕಾಗಿ ನಾನೂ ಬಸ್ಸು ಹತ್ತಿದೆ. ಪೂಜೆ ನಾಳೆ ಮಾಡಿದರಾಯಿತು. ಮೊದಲು ರೈತರು’ ಎಂದು ಹೇಳುತ್ತಾ ತಮ್ಮ ಹೆಗಲ ಮೇಲಿದ್ದ ಶಲ್ಯದಿಂದ ಮುಖ ಒರೆಸಿಕೊಳ್ಳತೊಡಗಿದರು.

ಅತ್ತ ಬಾಣಂಕಿಯಲ್ಲಿ ಸದರಿ ಭಟ್ಟರನ್ನು ಕಾದೂ ಕಾದು ಕಡೆಗೆ ನಿರ್ವಾಹವಿಲ್ಲದೆ ವ್ರತ ಪೂರೈಸಲು ಬೇರೊಬ್ಬ ಭಟ್ಟರನ್ನು ಗೊತ್ತು ಮಾಡಿದರಾದರೂ ಅವರೂ ಸಮಯಕ್ಕೆ ಸರಿಯಾಗಿ ಬರದೆ ದೊಡ್ಡ ಫಜೀತಿ ಉಂಟಾಯಿತಂತೆ. ಸತ್ಯನಾರಾಯಣ ವ್ರತ ಮುಗಿಸುವಾಗ ಸಂಜೆ ಐದೂ ಮುಕ್ಕಾಲಾಗಿತ್ತು ಎಂಬ ಸುದ್ದಿ ಜೈಲಿನಿಂದ ಬಿಡುಗಡೆಯಾದ ನಂತರ ತಿಳಿಯಿತು.
ನಮ್ಮಗಳ ಹದಿನೈದು ದಿನಗಳ ಜೈಲು ವಾಸದ ಕತೆ ಹೇಳಿದರೆ ಅದೊಂದು ದೊಡ್ಡ ಪುಸ್ತಕವಾದೀತು. ಅದೀಗ ಬೇಡ. ಜೈಲಿನಿಂದ ಬಿಡುಗಡೆಯಾಗಿ ಮೂರ್ನಾಲ್ಕು ತಿಂಗಳ ನಂತರ ಭಟ್ಟರು ತೀರ್ಥಹಳ್ಳಿ ಪೇಟೆಯಲ್ಲಿ ಯಲ್ಲಿ ಸಿಕ್ಕವರು ‘ಹೋಯ್ ದೇವರಾಜಣ್ಣ ನನ್ನ ಶನಿ ಬಿಟ್ಟು ಹೋಯಿತಲ್ಲ. ನಾನೀಗ ಸರ್ಕಾರಿ ನೌಕರ. ಕೆಲಸ ಸಿಕ್ಕಿದೆ’ ಎಂದರು. ಒಮ್ಮೆ ಸಕದಾಶ್ಚರ್ಯಚಕಿತನಾಗಿ ಅವರತ್ತ ದಿಟ್ಟಿಸತೊಡಗಿದೆ. ಯಾವತ್ತೋ ಎಂಪ್ಲಾಮೆಂಟ್ ಕಛೇರಿಯಲ್ಲಿ ಭಟ್ಟರು ತಮ್ಮ ಹೆಸರನ್ನು ನೊಂದಾಯಿಸಿದ್ದರಂತೆ. ಇವರು ಜೈಲಿನಿಂದ ಬಿಡುಗಡೆಯಾಗಿ ಮನೆಗೆ ಬರುವುದಕ್ಕೂ ಉದ್ಯೋಗ ವಿನಿಮಯ ಕಛೇರಿಯಿಂದ ಇವರ ಹೆಸರಿಗೆ ನೇಮಕಾತಿಯ ಪತ್ರ ಎದುರಾಗುವುದಕ್ಕೂ ಸರಿ ಹೊಂದಿತ್ತು.
ಪಶು ವೈದ್ಯಕೀಯ ಇಲಾಖೆಯಲ್ಲಿ ಕೆಲಸ ದೊರಕಿತ್ತು.. ಇವರು ಜೈಲು ಪಾಲಾದ್ದರಿಂದಲೇ ಇವರ ಶನಿ ಬಿಟ್ಟು ಹೋಗಿ ಸರ್ಕಾರಿ ನೌಕರಿ ದೊರೆಯಲು ಕಾರಣವಾಯಿತು ಎಂಬುದರಲ್ಲಿ ಇವರಿಗೆ ಇಂದಿಗೂ ಬಲವಾದ ನಂಬುಗೆ. ಅದೂ ಅಲ್ಲದೆ ಇವರ ಸಂಸಾರದಲ್ಲಿ ಸದಾ ಜಗಳವಂತೆ. ಜೈಲಿನಿಂದ ಬಂದ ಮೇಲೆ ಅದಕ್ಕೆ ಇತಿ ಶ್ರೀಯುಂಟಾಗಿರುವ ಬಗೆಗಿನ ಕತೆಯನ್ನು ನಾಗರಾಜ ಭಟ್ಟರಿಂದ ಕೇಳಿದರೇ ಚನ್ನ. ಆದರೆ ಬಳಗಟ್ಟೆ ಸುತ್ತ ಮುತ್ತಲಿನ ಗ್ರಾಮಸ್ಥರುಗಳು ‘ನಿಮ್ಮ ಜೈಲು ಬರೋ’ ಕಾರ್ಯಕ್ರಮದಿಂದ ನಮ್ಮ ದೇವಸ್ಥಾನ ಪೂಜೆ ಮಾಡಲು ಭಟ್ಟರಿಲ್ಲದಂತೆ ಮಾಡಿದಿರಿ’ ಎಂದು ಇಂದಿಗೂ ಎನ್ನುವವರಿದ್ದಾರೆ. ಆದರೆ ಭಟ್ಟರದು ಸುಖೀ ಸಂಸಾರ.ರೈತ ಚಳುವಳಿಯ ಬಗ್ಗೆ ಅದೇ ಗೌರವ. ಈ ನಲವತ್ತೆಂಟು ವರ್ಷಗಳ ನಂತರವೂ ಭಟ್ಟರೊಂದಿಗಿನ ಜೈಲು ವಾಸದ ನೆನಪು ಮರೆಯಾಗದೆ ಹಾಗೇ ಉಳಿದಿದೆ.
ಸರ್ವರಿಗೂ ಗಣರಾಜ್ಯೋತ್ಸವದ ಶುಭ ಹಾರೈಕೆಗಳು






0 Comments