'ರೇ'ಯವರ ಅಪೂರ್ ಸರಣಿಯನ್ನೊಮ್ಮೆ ನೋಡಲೇ ಬೇಕು..


 
 
 
ರಾಘವನ್ ಚಕ್ರವರ್ತಿ
 
 
 
’ಅಪೂರ್’ ಸರಣಿ ಹಾಗೂ ’ಅಸನಿ’ ಸಂಕೇತ್’ ಚಿತ್ರಗಳನ್ನೊಮ್ಮೆ ನೋಡಬೇಕು
ಸತ್ಯಜಿತ್ ರೇ ನಿರ್ದೇಶನದ ’ಅಸನಿ ಸಂಕೇತ್’ (ಅಶೋನಿ ಸಂಕೇತ್, ಬಂಗಾಲಿ ಉಚ್ಚಾರಣೆಯಲ್ಲಿ ’ಒಶೋನಿ ಶೊಂಕೇತ್’)ನ ಚಿತ್ರೀಕರಣದ ಸಂದರ್ಭದಲ್ಲಿನ ಒಂದು ಸ್ತಬ್ಧಚಿತ್ರ. ರೇ ಒಡನೆ ಇರುವವರು, ಅವರ ಅಚ್ಚುಮೆಚ್ಚಿನ ಕ್ಯಾಮೆರಾಮನ್ ಸೌಮೇಂದು ರಾಯ್. ರೇ ಯವರ ಬಹುತೇಕ ಚಿತ್ರಗಳಿಗೆ ’ಕಣ್ಣಾ’ದವರು ಸೌಮೇನ್.
ರೇ ನಿರ್ದೆಶನದ ಚಿತ್ರಗಳಲ್ಲಿ ’ಅಸನಿ ಸಂಕೇತ್’ ಗೆ ಒಂದು ವಿಶಿಷ್ಟ ಸ್ಥಾನವಿದೆ. ಬಿಭೂತಿ ಭೂಷಣ್ ಬ್ಯಾನರ್ಜೀಯವರ ಇದೇ ಹೆಸರಿನ ಕಾದಂಬರಿಯನ್ನು ಆಧರಿಸಿದ ಈ ಚಿತ್ರದಲ್ಲಿ ರೇ ಮೊದಲ ಬಾರಿಗೆ ’ಕಲರ್’ ಬಳಸಿದರು. ಕಪ್ಪು-ಬಿಳುಪಿನಲ್ಲಿಯೇ ಚರಿತ್ರಾರ್ಹ ಕಥಾನಕಗಳನ್ನು ಹೊಸೆಯುತ್ತಿದ್ದ ರೇ, ಮೊದಲ ಬಾರಿ ’ಕಲರ್’ ಸಿನಿಮಾ ಮಾಡಿದ್ದು ಒಂದು ವಿಶೇಷ.

ಈ ಚಿತ್ರದಲ್ಲಿ ಎರಡನೆಯ ವಿಶ್ವಯುದ್ಧದ ಸಂದರ್ಭದಲ್ಲಿ, ಮಾನವ ತನ್ನ ಸ್ವಯಂಕೃತಾಪರಾಧದಿಂದ ಸೃಷ್ಟಿಸಿದ ಭೀಕರ ಕ್ಷಾಮ(ಬರಗಾಲ)ಕ್ಕೆ ಬಂಗಾಲದ ಹಳ್ಳಿಯೊಂದು ಸ್ಪಂದಿಸಿ ಹೈರಾಣಾದ ಕಥೆಯಿದೆ. ಆ ರುದ್ರ-ಭಯಂಕರ ಕ್ಷಾಮ Bengal Famine of 1943 ಎಂದೇ ಇತಿಹಾಸದಲ್ಲಿ ದಾಖಲಾಗಿದೆ. ಬಂಗಾಲವೊಂದರಲ್ಲೇ ಸುಮಾರು ೨೦ ಲಕ್ಷ ಜನರನ್ನು ಆ ಕ್ಷಾಮ ಆಪೋಷಣೆ ತೆಗೆದುಕೊಂಡಿತು. ಬಂಗಾಲದ ಹಳ್ಳಿಯೊಂದರಲ್ಲಿ ಈ ಕ್ಷಾಮದಿಂದಾದ ಭೀಕರ ಪರಿಣಾಮ, ತದನಂತರ ಆದ ನೈತಿಕ ಮೌಲ್ಯಗಳ ಅಧಃಪತನ, ತೀವ್ರವಾಗಿ ಅಸ್ಥವ್ಯಸ್ಥವಾಗುವ ಜನಜೀವನ ಕ್ರಮಗಳನ್ನು ರೇ ಮನಮುಟ್ಟುವಂತೆ ಹೇಳಿದ್ದಾರೆ.
ನಿಧಾನಗತಿಯಲ್ಲಿ ಸಾಗುವ ಚಿತ್ರದಲ್ಲಿ, ಆ ಹಳ್ಳಿಯೂ ಒಂದು ಪಾತ್ರವೇ. ಇಡೀ ಹಳ್ಳಿಯಲ್ಲಿ ಗಂಗಾಚರಣ್ (ಸೌಮಿತ್ರೋ ಚಟರ್ಜೀ) ಒಬ್ಬನೇ ಬ್ರಾಹ್ಮಣ. ಉಳಿದವರೆಲ್ಲಾ ಕೆಳ ಜಾತಿಯ ಜನ. ಹಳ್ಳಿಯಲ್ಲಿ ಜಾತಿ-ತಾರತಮ್ಯ, ಅಸ್ಪೃಶ್ಯತೆಗಳಿವೆ. ಗಂಗಾಚರಣ್ ಆ ಊರಿನ ಮುಖ್ಯ ಶಿಕ್ಷಕ, ಪುರೋಹಿತ, ವೈದ್ಯ ಎಲ್ಲಾ. ಮೇಲ್ಜಾತಿಯ ಎಲ್ಲಾ ಗತ್ತು ಹೊಂದಿರುವ ಗಂಗಾನಿಗೆ ತನ್ನ ಜಾತಿಗೆ ಬೇಕಾದ ಎಲ್ಲಾ ಗೌರವಗಳೂ ಸಂದಾಯವಾಗುತ್ತಿರುತ್ತದೆ. ಆತ ಒಳ್ಳೆಯ ಮಾತುಗಾರ ಸಹಾ. ಊರಿನಲ್ಲಿ ಬರದ ಛಾಯೆ ಕಂಡುಬಂದಾಗಲೂ ಗಂಗಾನ ಗತ್ತು-ಠೇಂಕಾರಕ್ಕೇನೂ ಕಡಿಮೆ ಇಲ್ಲ. ಧಾನ್ಯ-ತರಕಾರಿಯೆಲ್ಲಾ ಮನೆಗೆ ಬರುತ್ತಿರುತ್ತದೆ. ಆತ ನಡೆದಾದುವಾಗ ಕೈಯಲ್ಲೊಂದು ಬಿಡಿಸಿದ ಕಪ್ಪು ಛತ್ರಿ. ಅದು ಆತನ ಗತ್ತು-ಒಣ ಜಂಭವನ್ನು ಸಂಕೇತಿಸುತ್ತದೆ.

ಊರಲ್ಲಿ ಬರ ತನ್ನ ಕಬಂಧ ಬಾಹುಗಳನ್ನು ಬೀಸಲಾರಂಭಿಸುತ್ತದೆ. ಮೊದಲು ಬರೀ ಸೀಮೆ ಎಣ್ಣೆಗೆ ಮಾತ್ರ ಇದ್ದ ಅಭಾವ ಈಗ ಅಕ್ಕಿ-ದವಸ ಧಾನ್ಯಗಳಿಗೂ ಆವರಿಸಿದೆ. ಬರಬರುತ್ತಾ ಅಕ್ಕಿ ಇಲ್ಲದಾಗುತ್ತದೆ. ವ್ಯಾಪಾರಿಗಳು ಆಹಾರಧಾನ್ಯಗಳನ್ನು ಮುಚ್ಚಿಟ್ಟು ಮುಗಿದುಹೋಯಿತೆಂದು ಸುಳ್ಳು ಹೇಳಲಾರಂಭಿಸುತ್ತಾರೆ. ಯುದ್ಧ, ನಾಡಿನ ಸಕಲ ಸಂಪನ್ಮೂಲಗಳನ್ನೂ ಜನತೆಯ ಅರಿವಿಲ್ಲದೇ ನುಂಗಲಾರಂಭಿಸುತ್ತದೆ. ಊರಲ್ಲಿ ಹಾಹಾಕಾರವೇಳುತ್ತದೆ. ಶಾಂತಿ ಕದಡುತ್ತದೆ. ಭಿಕ್ಷುಕರನ್ನೇ ಕಾಣದ ಊರಿನಲ್ಲಿ ಭಿಕ್ಷಾಟನೆ ಆರಂಭವಾಗುತ್ತದೆ. ಅಕ್ಕಿಗಾಗಿ ಜನ ನಾಚಿಕೆ-ಸ್ವಾಭಿಮಾನಗಳನ್ನು ಬಿಡಬೇಕಾಗುತ್ತದೆ. ವಿವಾಹಿತ ಹೆಣ್ಣು ಮಗಳೊಬ್ಬಳು ಮನೆಯವರ ಹಸಿವು ತೀರಿಸಲು ಕ್ಷುದ್ರರೂಪಿಯೊಬ್ಬನ ’ಕರೆ’ಗೆ ಓಗೊಡುತ್ತಾಳೆ. ಆಕೆಗದು ಇಷ್ಟವಿಲ್ಲದಿದ್ದರೂ ಪರಿಸ್ಥಿತಿಯ ಅನಿವಾರ್ಯತೆಯಿಂದ ಅಸಹಾಯಕಳಾಗಿದ್ದಾಳೆ. ಆಕೆಯ ಮನೆಯಲ್ಲಿ ’ಅಕ್ಕಿ’ಯ ತೀವ್ರ ಬೇಡಿಕೆಯಿದೆ. ಆ ಕುರೂಪಿ ಅಕ್ಕಿಯ ಆಸೆ ತೋರಿಸಿ ಆಕೆಯನ್ನು ದುರುಪಯೋಗಪಡಿಸಿಕೊಳ್ಳುತ್ತಾನೆ.
ಗೃಹಿಣಿಯಾಗಿದ್ದ ಗಂಗಾನ ಪತ್ನಿ ತಾನೂ ದಿನಗೂಲಿ ಕೆಲಸಕ್ಕೆ ಹೋಗುತ್ತೇನೆಂದಾಗ ಗಂಗಾ ಮೊದಲು ತಿರಸ್ಕರಿಸುತ್ತಾನೆ. ಆದರೆ ಸಂಸಾರ ನಿರ್ವಹಣೆಗೆ ಆಕೆಯೂ ದುಡಿಯುವ ಅನಿವಾರ್ಯವಿದೆ. ಗಂಗಾ ಒಪ್ಪುತ್ತಾನೆ. ಊರಿನ ಭೀಕರ ಕ್ಷಾಮ, ಕ್ರಮೇಣ ಗಂಗಾನಿಗೆ ಕೆಲವು ಜೀವನ ಪಾಠಗಳನ್ನು ಹೇಳಿಕೊಡುತ್ತದೆ. ಮೇಲ್ಜಾತಿಯ ಗತ್ತು-ಸೆಡವುಗಳನ್ನು ಆತ ಸಡಲಿಸಿಕೊಳ್ಳಲಾರಂಭಿಸುತ್ತಾನೆ. ಗಂಗಾ ದುಡಿಯಲು ಆರಂಭಿಸುತ್ತಾನೆ. ಅದುವರೆಗೂ ತಾನು ಒಪ್ಪಿದ್ದ ಸಾಮಾಜಿಕ ವ್ಯವಸ್ಥೆಯನ್ನು ಗಂಗಾ ಪ್ರಶ್ನಿಸಲಾರಂಭಿಸುತ್ತಾನೆ.

ಅಸ್ಪೃಶ್ಯರ ಬಗ್ಗೆ ಇದ್ದ ತಿರಸ್ಕಾರ ಕ್ರಮೇಣ ಮಾಯವಾಗುತ್ತದೆ. ಅಸ್ಪೃಶ್ಯನೊಬ್ಬ ತನ್ನ ಮನೆಯ ಮುಂದೆ ತೀವ್ರ ಹಸಿವು-ಸಂಕಟದಿಂದ ಸತ್ತಾಗ, ವಿಚಲಿತನಾಗುವ ಗಂಗಾ, ಶವದ ’ನಾಡಿ’ ಹಿಡಿದು ನೋಡಿ ಸತ್ತದ್ದನ್ನು ಖಚಿತಪಡಿಸಿಕೊಳ್ಳುತ್ತಾನೆ. ಊರು ಅಚ್ಚರಿಯಿಂದ ಗಂಗಾನನ್ನು ನೋಡುತ್ತದೆ. ಶವ ಸಂಸ್ಕಾರಕ್ಕೂ ಗಂಗಾ ಸಹಾಯ ಹಸ್ತ ಚಾಚುತ್ತಾನೆ. ರೇ ನಿರೂಪಿಸಿರುವ ’ಹಳ್ಳಿ’ ಬೆರಗಾಗಿಸುತ್ತದೆ. ಸಾವಿರಾರು ಮೈಲಿಗಳ ದೂರದಲ್ಲಾದ ಯುದ್ಧವೊಂದು ಭಾರತದ ಗ್ರಾಮೀಣ ಪರಿಸರವನ್ನು ಅಲ್ಲೋಲ-ಕಲ್ಲೊಲ ಮಾಡುತ್ತಾ, ಸಾಮಾಜಿಕ ಸಮಸ್ಯೆಗಳನ್ನು ಸೃಷ್ಟಿಸುತ್ತಲೇ, ಸಂಕುಚಿತ ವ್ಯಕ್ತಿತ್ವವನ್ನು ವಿಕಸನಗೊಳಿಸುವ ಕಾಡುವ ಕಥೆಯೊಂದನ್ನು ರೇ ಒಂದು ದಂತಕಥೆಯಂತೆ ಹೇಳುತ್ತಾರೆ.
ಇದು ಅವರಿಗೆ ಮಾತ್ರ ಸಾಧ್ಯ. ನ್ಯೂಯಾರ್ಕ್ ಟೈಮ್ಸ್ ಘೋಷಿಸಿರುವ ವಿಶ್ವಸಿನಿಮಾದ ಶ್ರೇಷ್ಟ ಸಾವಿರ ಸಿನಿಮಾಗಳಲ್ಲಿ, ’ಅಸನಿ ಸಂಕೇತ್’ ಗೂ ಒಂದು ಸ್ಥಾನ. ಚಿತ್ರಜಗತ್ತು ರೇ ರವರನ್ನು ಏಕೆ ಕೊಂಡಾಡುತ್ತದೆ ಎಂಬುದನ್ನು ತಿಳಿಯಲಿಕ್ಕಾದರೂ, ಅವರ ’ಅಪೂರ್’ ಸರಣಿ ಹಾಗೂ ’ಅಸನಿ’ ಸಂಕೇತ್’ (ಕನಿಷ್ಟ) ಚಿತ್ರಗಳನ್ನೊಮ್ಮೆ ನೋಡಬೇಕು.

‍ಲೇಖಕರು avadhi

January 21, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: