ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೇಣುಕಾ ಕೋಡಗುಂಟಿ ಅವರ ‘ಕಂದೀಲಿನ ಕುಡಿ’ಯ ಬೆಳಕಲ್ಲಿ…

ಮಂಡಲಗಿರಿ ಪ್ರಸನ್ನ

ಭರವಸೆಯ ಕವಯಿತ್ರಿ ರೇಣುಕಾ ಕೋಡಗುಂಟಿ ಅವರ ಹೊಸ ಕಾವ್ಯ ಸಂಕಲನ ಕಂದೀಲಿನ ಕುಡಿ’ ಅವಲೋಕಿಸುವ ಸಂದರ್ಭದಲ್ಲಿ ಅವರ ಮೊದಲ ಕಾವ್ಯ ಸಂಕಲನ ಬಳಪದ ಚೂರು’ (೨೦೧೧) ಸಂಕಲನದ ಕೆಲ ಕವಿತೆಗಳು ನೆನಪಾದವು. ಆ ಹಿನ್ನೆಲೆಯಲ್ಲಿ, ದಶಕದ ನಂತರ ಈಗ ಪ್ರಕಟವಾಗಿರುವ `ಕಂದೀಲಿನ ಕುಡಿ’ಯಲ್ಲಿ ಸಾಕಷ್ಟು ಪರಿವರ್ತನೆಯ ಕಾವ್ಯವನ್ನು ಸೂಕ್ಷ್ಮವಾಗಿ ಗಮನಿಸಬಹುದು. ಆದರೆ ಕವಿಯ ಮೂಲ ಆಶಯ ಬತ್ತದಂತೆ ರೇಣುಕಾ ಕೋಡಗುಂಟಿ ತಮ್ಮ ಕಾವ್ಯಾಸಕ್ತಿಯ ಸೆಲೆಯನ್ನು, ಜೀವದ್ರವ್ಯವನ್ನು ಕಾಪಿಟ್ಟುಕೊಂಡಿದ್ದಾರೆ ಎಂಬುದು ಸಂತಸದ ಸಂಗತಿ. ಒಂದು ದಶಕದ ಅವಧಿಯಲ್ಲಿ ಒಬ್ಬ ಕವಿಯ ಸ್ಥಿತ್ಯಂತರದಲ್ಲಿ ಆಗಿರುವ ಕುತೂಹಲಗಳನ್ನು ಇಲ್ಲಿನ ಕವಿತೆಗಳಲ್ಲಿ ಕಾಣಬಹುದು. ಇರದಿದ್ದಲ್ಲಿ ʻಕಂದೀಲುʼ ಅಂತಹ ಕವಿತೆ ಹುಟ್ಟಲು ಸಾಧ್ಯವೆ ಎನ್ನುವುದೆ ಎಂಬ ಪ್ರಶ್ನೆ ಸಹಜವೆ. ಆ ಕವಿತೆಯನ್ನೇ ನೋಡಿ:

`ಕತ್ತಲು ಕಾಲಿಡುವ ದಾರಿಯಾಗ
ಬಿಗುಮಾನದ ಕಡ್ಡಿಪಟ್ಟಣ
ಬಾಯಿಗೆ ಬೀಗ ಜಡಿದುಕೊಂಡು
ಬಾಗಿಲಿಗೆ ಬೇಲಿ ಬಡಿದುಕೊಂಡ
ಹೊತ್ತಿನ್ಯಾಗ….’ (ಕಂದೀಲು)

ತನ್ನ ಸಹನೆಯ ಕಿಡಿಯಿಂದಲೆ ಹೊತ್ತಿ ಉರಿವ ಕಂದೀಲು ಎಂಬ ರೂಪಕ, ದೇವರುಗಳ ಅತೀತವನ್ನು, ಗಾಳಿಯ ನಿಸರ್ಗತೆಯನ್ನು ಸವಾಲಾಗಿ ಸ್ವೀಕರಿಸುವುದು ಈ ಕವಿತೆಯ ಸಾರ್ಥಕತೆಯ ವಿಶಿಷ್ಟ ಗುಣ. ಇಂತಹ ಹೊಸ ಕಾವ್ಯಪ್ರಯೋಗದ ಕಾರಣ ರೇಣುಕಾ ಕೋಡಗುಂಟಿ ಅವರೊಳಗಿನ ಸಾಹಿತ್ಯದ ಅಭಿರುಚಿ ಮತ್ತು ಕುತೂಹಲ…. ಅಲ್ಲಮ ಹೇಳುವಂತೆ ನೆಲದ ಮರೆಯ ನಿಧಾನದಂತೆ’ ಬೆಚ್ಚಗೆ ಹಾಗೆ ಉಳಿದುಕೊಂಡಿದೆ. ಒಬ್ಬ ಬರಹಗಾರನಿಗೆ ಈ ನಿಧಾನ ಗತಿ’ ಅತ್ಯಂತ ಅವಶ್ಯವೂ ಮತ್ತು ಅನಿವಾರ್ಯವೂ ಆಗಿದ್ದು ಅದು ಕವಿಯ ಕಾವ್ಯಾಸಕ್ತಿ, ಅನುಭವ, ಕವಿ ಜಗತ್ತನ್ನು ನೋಡುವ ವಿಶಾಲ ದೃಷ್ಟಿಕೋನ ಮತ್ತು ಕವಿಯ ಒಟ್ಟಾರೆಯ ವಿಸ್ತಾರತೆ ಮತ್ತು ಸಾಕ್ಷಿಪ್ರಜ್ಞೆಗೆ ಸವಾಲಾಗಿ ನಿಲ್ಲುತ್ತದೆ. ಅನೇಕ ಜಂಜಡಗಳಿಗೆ ಒಂದು ವಿಭಿನ್ನ ಬಿಡುಗಡೆಯ ಮಾರ್ಗವಾಗಿ ರೇಣುಕಾ ಅವರಿಗೆ ಇಲ್ಲಿ ಕವಿತೆಗಳು ಕಾಡಿವೆ.

ಆರೋಗ್ಯಕರ ನಿಲುವು, ಮಹಿಳಾ ಸಂವೇದನೆ, ಸಮಕಾಲೀನ ವಿಷಯಗಳ ಕಾವ್ಯ ಕುತೂಹಲದಂತಹ ತುಡಿತ ಇಲ್ಲಿನ ಕವಿತೆಗಳಲ್ಲಿ ಮೂಡಿಬಂದಿರುವ ಪ್ರಮುಖ ಅಂಶಗಳು. ರೇಣುಕಾ ಕೋಡಗುಂಟಿ ಅವರ ತಳಮಳ, ಸಂಘರ್ಷ, ಬದುಕನ್ನು ತೀವ್ರ ಕುತೂಹಲದಿಂದ ನೋಡಿದ್ದರ ಫಲ ಹೊಸ ಕವಿತೆಗಳಲ್ಲಿ ಗುರುತಿಸಬಹುದು. ಒಡಲಾಳದ ಜಗಳದ ಜೊತೆ ಸುತ್ತಲ ಸಮಾಜವನ್ನು, ಪ್ರಭುತ್ವವನ್ನು, ಮನುಷ್ಯನ ಗುಣಾವಗುಣಗಳನ್ನು, ಆಧುನಿಕತೆಯ ಸೋಗಲಾಡಿತನವನ್ನು, ಪ್ರೀತಿ ಹಾಗೂ ಮನುಷ್ಯ ಸಂಬಂಧಗಳ ನವಿರತೆ ಇಲ್ಲಿನ ಕವಿತೆಗಳ ವಸ್ತು.

ಯಾವುದನ್ನು ನಾವು ದೇವರೆನ್ನಬೇಕು? ಇದೊಂದು ಸಾರ್ವಕಾಲಿಕ ಪ್ರಶ್ನೆ. ದೇವರ ಅಮೂರ್ತ ಕಲ್ಪನೆಯಲ್ಲಿ ಅರ್ಥ, ಅನರ್ಥಗಳೆರಡೂ ಚಲಾವಣೆಯಲ್ಲಿರೂ ನಮ್ಮ ಸಮಾಜದಲ್ಲಿ ಈ ಕವಿತೆ ನೀಡುವ ವಿವರಣೆ:

‘ಒಂದು ಪುಟ್ಟಿಯ ತುಂಬ ಮಣ್ಣನ್ನು ತಂದು
ಅದಕ್ಕೆ ನೀರನ್ನು ಸೇರಿಸುತ್ತಾ ಹದವಾಗಿ ನಾದಿ
ಕಣ್ಣು, ಕಿವಿ, ಮೂಗು ಬಾಯಿ ಕೈಕಾಲು ಮಾಡಿದಾಗ
ಮಣ್ಣು ದೇವರಾಯಿತು
ಒಂದು ಪುಟ್ಟಿಯ ತುಂಬಾ ನೀರನ್ನು ತಂದು
ಅದರೊಳಗೆ ಇರಿಸಿದಾಗ ದೇವರು ಮಣ್ಣಾಯಿತು’ (ಮಣ್ಣು ಮತ್ತು ದೇವರು)

ದೇವರು ಗುಡಿ, ಮಸೀದಿ, ಚರ್ಚುಗಳಲ್ಲಿದ್ದಾನೆ ಎಂಬ ನಮ್ಮ ಹುಂಬತನಗಳಿಗೆ ಅನ್ನ ಕೊಡುವ ಮಣ್ಣು, ಮಳೆ ಕೊಡುವ ಆಕಾಶದಂತಹ ನಿಸರ್ಗವೆ ನಿಜವಾದ ದೇವರು ಎಂಬ ಭಾವ ಈ ಕವಿತೆಯಲ್ಲಿ ಕಾಣುತ್ತದೆ. ಈ ಕವಿತೆಯಲ್ಲಿ ದೇವರನ್ನು ಕುರಿತ ಕಲ್ಪನೆ ಅದ್ಬುತ ಮತ್ತು ವಾಸ್ತವ ಸಂಗತಿ.
ರೇಣುಕಾ ಕೋಡಗುಂಟಿ ಅವರ ಇಂತಹ ವಿಷಯಗಳ ವ್ಯಾಪ್ತಿ ತುಂಬಾ ದೊಡ್ಡದು. ಅವ್ವನಿಂದ ಹಿಡಿದು ಸಮಾಜಮುಖಿವರೆಗೆ, ದೇವರಿಂದ ಹಿಡಿದು ಬುದ್ಧ, ಬಸವ, ಶರೀಫ್, ಗಾಂಧಿವರೆಗಿನ ವಿಸ್ತಾರದ್ದು. ಇಲ್ಲಿ ವ್ಯಕ್ತಿ ಮತ್ತು ವ್ಯಕ್ತಿತ್ವದ ಹಾಗೂ ಸಮಾಜದ ಓರೆ ಕೋರೆಗಳ ನೋಟದೊಂದಿಗೆ ಬಹುತ್ವದ ಹಿನ್ನೆಲೆಯಲ್ಲಿ ಅವಲೋಕಿಸಿ ರಚಿಸಿರುವ ಕವಿತೆಗಳು ಸೇರಿಕೊಂಡಿವೆ. ಅವ್ವ ಮತ್ತು ಅಪ್ಪನ ತೀವ್ರ ಪ್ರಭಾವಕ್ಕೆ ಒಳಗಾದಂತೆ ಕಾಣುವ ರೇಣುಕಾ, ತಮ್ಮ ಕವಿತೆಗಳಲ್ಲಿ ಈ ವ್ಯಕ್ತಿಗಳ ಗಾಢತೆ ಬದುಕನ್ನ ಅರಳಿಸಿದ ಮರವಾಗಿ, ನೆರಳಾಗಿ, ತಂಪಾಗಿಸಿದ ನೋಟವಿದೆ.

‘ಹಾಳೆಯ ಮೇಲೆ ಅವ್ವಾ ಎಂದು ಗೀಚಿದೆ
ಅದು ಮರವಾಗಿ ಅರಳಿ
ಹಸಿರಾಗಿ ನೆರಳಾಗಿ ಉಸಿರಾಗಿ
ತಂಪನ್ನೂ ಎರೆಯಿತು’  (ಅವ್ವ)

ಅವ್ವ ಮತ್ತು ಅಪ್ಪನ ಅಗಾಧತೆ ಕುರಿತು ಇಲ್ಲಿನ ಕೆಲ ಕವಿತೆಗಳಲ್ಲಿ ಕಟ್ಟಿಕೊಟ್ಟಿರುವ ಕವಯಿತ್ರಿ ಓದುಗರಿಗೆ ಇಂತಹ  ಪ್ರತಿಮೆಗಳ ಮೂಲಕ ವಿಶಿಷ್ಟ ಆಪ್ತತೆಯನ್ನು ಒದಗಿಸಿದ್ದಾರೆ. ಕವಿತೆಯೆಂಬುದು ಹೃದಯದ ಆಳದಲ್ಲಿ ಹಾಡುವ ಮನದ ಹಕ್ಕಿಯಾದ್ದರಿಂದ ಭಾವನಾತ್ಮಕ ಸಂಬಂಧಗಳು ರೇಣುಕಾ ಅವರಿಗೆ ಸಾಧ್ಯವಾಗಿದ್ದು ಅವರ ಒಳಗಣ್ಣ ಸೂಕ್ಷ್ಮತೆಯಿಂದ. ಕೆಲ ಕವಿತೆಗಳಲ್ಲಿ ಇಣುಕು ಹಾಕಿರುವ ಅವರ ಗ್ರಾಮೀಣ ಭಾಷಾ ಸೊಗಡು ಸಹ ಅವರ ಇಲ್ಲಿನ ಕಾವ್ಯರಚನೆಗೆ ಆಯಸ್ಕಾಂತದ ಆಕರ್ಷಣೆ ನೀಡಿದೆ.

ಮುಟ್ಟಿನ ಈ ಕವಿತೆ ಭಾರತೀಯ ಮಹಿಳೆಯರ ಆರ್ತನಾದದಂತಿದೆ. ಜಗತ್ತಿನಲ್ಲಿ ಇರುವುದು ಎರಡೆ ಜಾತಿ: ಒಂದು ಗಂಡು, ಮತ್ತೊಂದು ಹೆಣ್ಣು. ಇಷ್ಟಿದ್ದರೂ ನಮ್ಮ ಸಮಾಜದಲ್ಲಿ ಹೆಣ್ಣನ್ನು ನೋಡುವ ಪರಿ ಬದಲಾಗಿಲ್ಲ. ‘ಹೇಣ್ಣು ಹೆಣ್ಣೆಂದೇತಕೆ ಬೀಳುಗಳೆವರು…ಕಣ್ಣು ಕಾಣದ ಗಾವಿಲರು…’ ಎಂದೆಲ್ಲ ಹೆಣ್ಣಿನ ಕುರಿತ ಅದೆಷ್ಟೇ ಹೇಳಿದ್ದರೂ, ಮಹಿಳೆಯ ಸಹಜ ದೈಹಿಕ ಕ್ರೀಯೆಯೂ ನಮ್ಮಲ್ಲಿ ಒಂದು ದುರಂತದ ವಿಷಯವಾಗಿ ಕಾಡಿದೆ. ಈ ಕುರಿತ ಪದ್ಯದ ಸಾಲು:

 `ಮುಟ್ಟಿಲ್ಲದೆ ಜಗವಿಲ್ಲ
ಮುಟ್ಟಿಲ್ಲದೆ ಬದುಕೂ ಇಲ್ಲ
ಮುಟ್ಟಿಲ್ಲದೆ ತೊಟ್ಟಿಲುಗಳೂ ಇಲ್ಲ….
ಹತ್ತಿಕ್ಕದಿರಿ, ಬಂಧಿಸದಿರಿ ಗಡುವ ನೀಡದಿರಿ
ಬಿಗಿದಿಟ್ಟುಕೊಂಡ ದುಃಖವೆಲ್ಲಾ
ಹರಿಯಲಿ, ಭೋರ್ಗರೆಯಲಿ
ಎದೆ ಭಾರ ಹಗುರಾಗಲಿ’ (ಮುಟ್ಟು)

ಮುಟ್ಟಿನ ಸಹಜ ಕ್ರೀಯೆ ವರ್ಣನೆ… ಬಿಗಿದಿಟ್ಟುಕೊಂಡ ದುಃಖವೆಲ್ಲಾ ಹರಿಯಲಿ, ಭೋರ್ಗರೆಯಲಿ, ಎದೆ ಭಾರ ಹಗುರಾಗಲಿ ಎನ್ನುವ ಮಾತುಗಳಲ್ಲಿ ಭಾರತೀಯ ಮಹಿಳೆಯ ಆತ್ಮರೋಧನ ಅಡಗಿದೆ ಎನ್ನುವ ಭಾವವಿದೆ. ಪ್ರೀತಿ ಪ್ರೇಮದಂತಹ ನವಿರಾದ ಎಳೆಗಳನ್ನು ಬಿಚ್ಚಿಡುವಲ್ಲಿಯೂ ತಡವರಿಸದ ರೇಣುಕಾ ಬರೆಯುತ್ತಾರೆ.

‘ಅಡುಗೆಯಲ್ಲಿ ಬೆರೆತುಹೋದ
ಉಪ್ಪಿನಂತೆ ನಾ ಬೆರೆತು
ಹೋಗಿರುವೆ ಗೆಳೆಯ
ನಿನ್ನಯ ಒಡಲಲ್ಲಿ’ (ನಾ ನಿನ್ನೊಳಗೆ) ಎನ್ನುವ ನವಿರು ಭಾವಗಳಿವೆ.
ಬಸವಣ್ಣನ ಚಿಂತನೆಗಳು ಸರ್ವಕಾಲಕ್ಕೂ ಸಮಾಜ ಮುಖಿಯಾಗೆ ಬಂದಂಥವು. ಆದರೆ ಅವೆಲ್ಲವೂ ಈಗ ಸವಕಲು ಶಬ್ದಗಳಾಗಿ ಕೆಲವರ ಬಾಯಲ್ಲಿ ಮಲೀನವಾಗಿವೆ:

‘ಸಾಲು ದೀಪಗಳ ದಾರಿಯಲಿ
ತುಂಬಿ ತುಳುಕುವ ಗಾಢಾಂಧತೆಯನ್ನು ಕಂಡ
ಅಣ್ಣನ ಆತ್ಮವು ಕುರುಡಿಲ್ಲದ
ಸಮಾಜಕ್ಕಾಗಿ ಹಂಬಲಿಸುತಿದೆ’ (ಮತ್ತೊಮ್ಮೆ ಬಸವಣ್ಣ)

ಬಸವಣ್ಣನ ಕನಸುಗಳು ಆಧುನಿಕ ಜಗತ್ತಿನಲ್ಲಿ ಭಗ್ನಗೊಂಡು ಕುರುಡನಂತೆ ಅಲೆಯುತ್ತಿವೆ ಎಂಬುದಕ್ಕೆ ಈ ಕವಿತೆ ಸಾಕ್ಷಿ.
ಪ್ರಚಾರ ಮಾತ್ರವೆ ಆಗಿ ಉಳಿದಿರುವ ಬಸವಣ್ಣ ಜನರ ಬಾಯಲ್ಲಿ ಸವೆಯುತ್ತಿರುವುದು ವರ್ತಮಾನದ ಕಾಲಸಂದರ್ಭದ  ದುರಂತಗಳಲ್ಲಿ ಒಂದು.
ಎಲಿಯಟ್ ಮಹಾಕವಿಯ ಬೆನ್ನಿಗೆ ಬಂದ ಕವಿ ಡಬ್ಲೂ.ಎಚ್.ಆಡೆನ್ ತನ್ನ ಯೇಟ್ಸ ಕವಿಯ ನೆನಪಿಗೆ’ ಕವಿತೆಯಲ್ಲಿ ಬರೆಯುತ್ತಾ ಬದುಕು ಬದುಕಾಗಲಿಕ್ಕೆಂದು ಇರುವ ವಿಧಾನ ಕಾವ್ಯ, ಕಾವ್ಯ ಬದುಕಿನ ಮುಖ ಎಂದೇ ಅದಕ್ಕೆ ಅನಂತ ಬದುಕು’ ಎಂದಿರುವ ಮಾತು ಕವಯಿತ್ರಿ ರೇಣುಕಾ ಕೋಡಗುಂಟಿ ಅವರ ವಿಚಾರದಲ್ಲಿ ತೀರ ವಾಸ್ತವ ಎನಿಸುತ್ತದೆ. ಬದುಕಿನ ವಿವಿಧ ಮಗ್ಗುಲುಗಳನ್ನೆ ಕಾವ್ಯವಾಗಿಸಿರುವ, ಸೂಕ್ಷ್ಮ ಮನಸ್ಸಿನ ಮಾನವೀಯ ತುಡಿತಗಳು, ಸಾಮಾಜಿಕ ಕಾಳಜಿ, ಕಳಕಳಿ ಮತ್ತು ಬದ್ಧತೆ ಅವರ ಕಾವ್ಯ ಚಿಂತನೆಯಲ್ಲಿ ಕಂಡುಬಂದಿರುವುದು ಗಮನಾರ್ಹ ಸಂಗತಿಗಳು. ಕವಿ ತನ್ನ ನೋವು, ಸಂಕಟ, ಖುಷಿಯನ್ನು ಮಾತ್ರವಲ್ಲ ಇನ್ನೊಬ್ಬರ ನೋವು, ಸಂತೋಷ, ಸಂಕಟಗಳಿಗೆ ಸ್ಪಂದಿಸಿದಾಗ ಮಾತ್ರ ಕ್ಷಿಷ್ಟಕರ ಬದುಕನ್ನು ಒಳಗಣ್ಣಿನಿಂದ ನೋಡಿ ಸಂವೇದಿಸಲು ಸಾಧ್ಯ.

‘ಕೌದಿ, ಗಾಂಧಿ ಮತು ದೇವರು, ಮಣ್ಣು ದೇವರು, ಕನಸಿನ ರಾಜ್ಯ, ಹೆಣ ಅನಾಥವಾಗಿದೆ, ಬಲು ಸುಲಭದ ಕಾಲವಿದು, ನಿರಾಸೆ, ಪ್ರಜಾಪ್ರಭುತ್ವ’ ಇಂತಹ ಕವಿತೆಗಳಲ್ಲಿ ರೇಣುಕಾ ಅವರು ನೈತಿಕತೆಯ ಪ್ರಶ್ನೆಯ ಮೂಲಕ ಪ್ರಭುತ್ವವನ್ನು ಪ್ರಶ್ನಿಸುತ್ತಾರೆ. ಪ್ರಜಾಪ್ರಭುತ್ವವನ್ನು ಇನ್ನಿಲ್ಲದಂತೆ ಅಪಹಾಸ್ಯ ಮಾಡುತ್ತಿರುವವರಲ್ಲಿ ನಮ್ಮ ರಾಜಕಾರಣಿಗಳೆ ಮೊದಲಿಗರು. ರಾಜಕಾರಣಿಗಳ ನಡವಳಿಕೆಯಿಂದ ಅರ್ಥ ಕಳೆದುಕೊಳ್ಳುತ್ತಿರುವ ಪ್ರಜಾಪ್ರಭುತ್ವ, ಜನಸೇವೆ, ಅಂತಹ ಪದಗಳು ಸವಕಲು ನಾಣ್ಯದಂತಾಗಿದೆ, ರಾಜಕಾರಣಿಗಳ ಅವಕಾಶವಾದಿತನಕ್ಕೆ ಜೀವಂತ ಉದಾಹರಣೆಗಳಾಗಿವೆ.

‘ಕಲ್ಲಿನಂತಹ ಎದೆಯ ನೆಲದಾಳದಲ್ಲಿ
ಸುರಂಗದ ದಾರಿಯ ಅಗೆದು
ಹರಿಸುವೆ ಭಾವದ ಹೊನಲು’

ಎಂದೆ ವಾಖ್ಯಾನಿಸುತ್ತ, ಕಾವ್ಯದ ವಿಷಯ ವೈವಿಧ್ಯತೆಗೆ ಹಪಹಪಿಸದ ರೇಣುಕಾ ಕೋಡಗುಂಟಿ ವಾಸ್ತವತೆಯ ಹಿನ್ನೆಲೆಯಲ್ಲಿ ಮೂಡಿಬಂದು ಬೆರಗು ಮತ್ತು ಬೇಗುದಿಯ ಕವಿತೆಗಳು, ಸುಟ್ಟುಹೊಳೆದಂತೆ ಭಾಸವಾಗುವ ಜೀವನಾನುಭಗಳೆ ಈ ಸಂಕಲನದಲ್ಲಿ ಮೂಡಿಬಂದಿವೆ.

‍ಲೇಖಕರು Admin

12 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading