ರೂಪಕಗಳಲ್ಲಿ ಕಂಡ ಬದುಕಿನ ಚಿತ್ರಗಳು

ಎಚ್ ಆರ್ ರಮೇಶ

**

ಕುಮಾರವ್ಯಾಸನನ್ನು ರೂಪಕಗಳ ಚಕ್ರವರ್ತಿ ಎಂದು ಅಭಿಜಾತ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಕರೆಯುತ್ತಾರೆ. ಆಧುನಿಕ ಸಾಹಿತ್ಯ ಕನ್ನಡದ ಸಂದರ್ಭದಲ್ಲಿ, “ಸ್ವಲ್ಪ ಮಟ್ಟಿಗೆ” (ಅಭಿಜಾತ ವಿದ್ವಾಂಸರ ಕ್ಷಮೆಕೋರಿ), ಜಯಂತ ಕಾಯ್ಕಿಣಿಯವರನ್ನು ಹಾಗೆ ಕರೆಯಬಹುದೇನೋ. ಏಕೆಂದರೆ ಅವರ ಕವಿತೆ ಮತ್ತು ಕತೆ (ಗದ್ಯವನ್ನು ಒಳಗೊಂಡು) ರೂಪಕ ಮತ್ತು ಇಮೇಜುಗಳಿಂದ ತುಂಬಿರುತ್ತವೆ. ಮತ್ತು, ಅಲ್ಲಿ ಅಭಿವ್ಯಕ್ತಗೊಳ್ಳುವ ವಿವರಣೆಗಳು, ಚಿತ್ರಣಗಳು ಅವರ ದೃಷ್ಟಿಗೆ ಎಡತಾಗಿ ಭಾಷೆಯನ್ನೂ ಹೊತ್ತುಕೊಂಡು ಬಂದು ರೂಪಕಗಳಾಗಲೆಂದೇ ಬಂದು ಕುಳತಂತೆ ಇರುತ್ತವೆ.

ಸೂಕ್ಷ್ಮವಾಗಿ ಗಮನಿಸಿದಲ್ಲಿ ಬದುಕು  ರೂಪಕಗಳ ರಾಶಿಯಾಗಿ ತೋರುವುದು. ಒಂದು ಮತ್ತೊಂದರ ರೀತಿ ಇರುವುದಿಲ್ಲ. ಆದರೆ ಸಾಹಿತ್ಯ ಆ ವೈರುಧ್ಯವನ್ನೇ ಸಾದೃಶಿಕರಿಸಿ ಒಂದಕ್ಕೊಂದು ಸಹಜ ಸಂಬಂಧವನ್ನು ಬೆರೆಸಿ, ತೋರಿಸುತ್ತದೆ. ಬೌದ್ಧ ದಾರ್ಶನಿಕ ನಾಗಾರ್ಜುನ ತಾನು ಅದೃಶ್ಯನಾಗುವ ಕಲೆಯನ್ನು ಸಿದ್ದಿಸಿಕೊಂಡಿದ್ದನಂತೆ. ಅದರ ಪರಿಣಾಮವಾಗಿ ತನ್ನ ಸ್ನೇಹಿತರ ಜೊತೆಗೂಡಿ ರಾಣಿಯರ ವಾಸಕ್ಕೆ ಹೋಗಿ ಅವರ ಸೌಂದರ್ಯವನ್ನು ಸವಿಯುತ್ತಿದ್ದನಂತೆ. ಆದರೆ ಹತ್ತು ದಿನದ ಕಳ್ಳ ಒಂದು ದಿನ ಸಿಕ್ಕಿಬೀಳುವಂತೆ ಅವನ ಸ್ನೇಹಿತರು ಸಿಕ್ಕಿ ಬೀಳುತ್ತಾರೆ, ಅದರೆ ನಾಗಾರ್ಜುನ ತನ್ನ ರಹಸ್ಯ ವಿದ್ಯೆಯಿಂದಾಗಿ ಬಚಾವಾಗುತ್ತಾನೆ. ಆದರೆ ತನ್ನ ಸ್ನೇಹಿತರಿಗಾದ ಶಿಕ್ಷೆಯನ್ನು ಕಂಡು, ವೈರಾಗ್ಯ ಮೂಡಿ ಅಲೌಕಿಕದ ಕಡೆ ಆಸಕ್ತಿ ವಹಿಸಿ ಸಂತನಾಗುತ್ತಾನೆ. ಈ ಘಟನೆಯನ್ನು  ಡಿ.ಆರ್ ನಾಗರಾಜ್ ನಾಗಾರ್ಜುನನ ವ್ಯಕ್ತಿತ್ವಕ್ಕೆ ಮತ್ತು ಜೀವನಕ್ಕೆ ಒಂದು ಮಹಾನ್ ರೂಪಕದಂತೆ ವ್ಯಾಖ್ಯಾನಿಸುತ್ತಾರೆ. ಈ ಹಿನ್ನಲೆಯಲ್ಲಿ ರೂಪಕಗಳಿಂದ ಹೊಸ ಹೊಸ ರೂಪಕಗಳು ಹೇಗೆ ರೂಪು ತೆಳೆಯುತ್ತವೆ ಎನ್ನುವುದನ್ನು ಮತ್ತು ಜಯಂತರ ಬರಹದಲ್ಲಿ ಬದುಕು ರೂಪಕಗಳಲ್ಲಿ ವ್ಯಕ್ತವಾಗುವುದನ್ನು ಹೇಳುವುದಕ್ಕೆ ಇದನ್ನು ಇಲ್ಲಿ ಪ್ರಸ್ತಾಪಿಸಿರುವೆ. ಇವರ ಕತೆ, ಕವಿತೆ ಅಥವಾ ಗದ್ಯಗಳಿಗೆ  ಮೂಲದಲ್ಲಿ ಅಂತಹ ವ್ಯತ್ಯಾಸವಿಲ್ಲ.  ಅವರ ಸ್ಪಷ್ಪ ಮತ್ತು ಸೂಕ್ಷ್ಮ ಗ್ರಹಿಕೆಯಲ್ಲಿ ಬದುಕಿನ ವಿವರಣೆಗಳು ನವಿರಾಗಿ ಬಿಂಬಿತವಾಗುತ್ತವೆ. ಸಂತೋಷ, ಅಥವಾ ಸಾವು, ಅಥವಾ ದುಃಖ ಸಮ ಚಿತ್ತವಾಗಿ, ಅಷ್ಟೇ ತೀಕ್ಷ್ಣ ವಾಗಿ ಭಾಷೆಯೊಳಗೆ ಮಲ್ಲಿಗೆಯ ದಂಡೆ, ಮಾಲೆಯಲ್ಲಿ ಪೋಣಿಸಲ್ಪಟ್ಟು ಸಹಜದಲ್ಲಿ ಒಂದನ್ನೊಂದು ಸಾವಯವ ಬಂಧದಲ್ಲಿ ಮಿಳಿತಗೊಂಡಂತೆ ಇರುತ್ತವೆ. ಆಗ ಬಿಡಿ ಬಿಡಿಯಾದ ವಸ್ತು, ವಿಷಯ, ಮನುಷ್ಯ ಮತ್ತು ಜೀವನ ಇಡಿಯಾಗುವುದು. ಇಡಿಯಾಗಿ ರೂಪಗಳು ರೂಪಕಗಳಾಗಿ ಬದುಕಿನ ಪ್ರತೀಕವಾಗುವುವು. ಅವಿರತದ ಬದುಕಿನ ಧ್ಯಾನದಲ್ಲಿ ಭಾಷೆಯೇ ಸಂವೇದನೆಯಾಗಿ ಅಭಿವ್ಯಕ್ತಿಯನ್ನು ಗಟ್ಟಿಗೊಳಿಸಿ ಸಹಜ ಅನುಭವ, ನೋಟ, ದೃಷ್ಟಿ, ಅಲೌಕಿಕದ ಕಾಂತಿಯನ್ನು ಪಡೆದು ಸೀದ ಮನಸು ಮತ್ತು ಹೃದಯಕ್ಕೆ ಹಿತವಾದ ತತ್ವವನ್ನು ಸಾಕಾರಗೊಳಿಸುತ್ತದೆ. ಅನುಭವವೇ ಅನುಭಾವವಾಗಿ ಸತ್ಯದ ಪಲುಕು, ಅಲೆಗಳಾಗಿ, ಬದುಕಿನ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿಯೇ  ಕವಿತೆ ಎನ್ನುವುದು ಜಯಂತರಿಗೆ ಇ.ಸಿ.ಜಿ ಯಂತೆ ಕಾಣುತ್ತದೆ. ಇದು ಕಂಡದ್ದಲ್ಲ ಭಾಷೆಯ ಕಾಣ್ಕೆ. ಜ್ಞಾನಿ, ಕಲಾವಿದ ಅಥವಾ ಕವಿ ಎಲ್ಲಾ ಗೋಡೆಗಳನ್ನು, ಸಾಮಾಜಿಕ ಕಲ್ಪಗಳನ್ನು, ತಾರತಮ್ಯಗಳನ್ನು ಮೀರಿ ಲೋಕದ ಜೊತೆಗೆ ಸ್ಪಂದಿಸುತ್ತಿರುತ್ತಾರೆ. ಆಗ ಬದುಕು ಇಡಿಯಾಗಿ ಸಿಕ್ಕುವುದು. ಅಂತಹದ್ದೊಂದು ಅನುಭವವನ್ನು ಈ ತಾರಿದಂಡೆ ಕೃತಿಯು ಆಗಿಸುತ್ತದೆ.

ಗೆಳೆತನ ಎನ್ನುವುದು ಅರ್ಥಕ್ಕೆ ನಿಲುಕದ್ದು, ತುಂಬ ಆಳವಾಗಿ ಧೇನಿಸಿದರೆ ಬದುಕೇ ಅರ್ಥಕ್ಕೆ ಸಿಕ್ಕಿ ಬೀಳುವುದಿಲ್ಲ; ಮತ್ತೂ ಯಾವುದೂ ಸಹ ಅರ್ಥ ವ್ಯಾಪ್ತಿಯ ಒಳಗೆ ಇರುವುದಿಲ್ಲ. ನಮ್ಮ ಕಲ್ಪನೆಗಳು ಅಷ್ಟೆ ಎಲ್ಲ. ಆದರೆ ನಮ್ಮ ಇರುವಿಕೆಯಲ್ಲಿ ಗೆಳೆತನಕ್ಕೆ ಪೊರೆಯುವ ಗುಣ ಇದ್ದು ಅದನ್ನು ಧಾರೆ ಎರೆಯುದು ಸಂಬಂಧಗಳನ್ನು ಗಟ್ಟಿಗೊಳಿಸುವುದು. ಅದು ನಮ್ಮ ಬದುಕಿನ ಪಯಣವನ್ನು ನಮಗೆ ಅರಿವಿಲ್ಲದೆ ನಡೆಸಿ ಬಿಟ್ಟಿರುತ್ತದೆ. ಜಯಂತರ ಬದುಕಲ್ಲೂ ಅಂತಹ ಪೊರೆಯುವ ಗೆಳೆಯರು ಸಾಕಷ್ಟಿರುವುದನ್ನು ತಮ್ಮ ಈ ಬರಹಗಳಲ್ಲಿ ಅವರು ಚಿತ್ರಿಸಿರುವುದರಲ್ಲಿ ಕಾಣಬಹುದಾಗಿದೆ. ಅಂತಹ ಆಪ್ತ ಸಾಂಗತ್ಯಗಳಲ್ಲಿ ಬರಹಗಾರ ಮುಕುಂದ ಜೋಷಿ ಕೂಡ ಒಬ್ಬರು. ಅವರ ಬಗ್ಗೆ ಬರೆಯುತ್ತ, ಕೇವಲ ಅವರ ಬಗ್ಗೆಯಷ್ಟೇ ಬರೆಯದೆ ತಮ್ಮ ಮುಂಬೈ ಮತ್ತು ಕರ್ನಾಟಕದಲ್ಲಿನ ಒಂದು ಕಾಲದ ಸಾಂಸ್ಕೃತಿಕ ಚರಿತ್ರೆಯನ್ನೇ ತಮ್ಮ ಅಚ್ಚಳಿಯದೇ ಉಳಿದಿರುವ ನೆನಪುಗಳಲ್ಲಿ  ತಮ್ಮ ಎಂದಿನ ಸಿಗ್ನೇಚರ್ ಶೈಲಿಯ ಭಾಷೆಯ ಮಾಂತ್ರಿಕತೆಯಲ್ಲಿ ಚಿತ್ರಿಸುತ್ತಾರೆ. ಕೆಲವು ಸಾಲುಗಳು ಹೀಗಿವೆ: ಓದಿದ ಪುಸ್ತಕ.  ನೋಡಿದ ನಾಟಕ ಸಿನೆಮಾಗಳ ಜೊತೆ ಓದದ ಪುಸ್ತಕ, ನೋಡದ ನಾಟಕ ಸಿನೆಮಾಗಳ ಬಗ್ಗೆ ನಾವು ಮೈ ಮರೆತು ಹರಟುತ್ತಿದ್ದೆವು. ಎರಡು ಮೂರು ತಾಸು ಗಟ್ಟಲೆ ರಸ್ತೆ ಬದಿಯಲ್ಲಿ ನಿಂತು ಮಾತಾಡುತ್ತಿದ್ದೆವು. ಹೇಳಲು ಹೊರಟಿದ್ದು ಅರ್ಧದಲ್ಲೇ ಪರಸ್ಪರ ತಿಳಿದು ಮತ್ತು ಅಲ್ಲಿಂದ ಟಿಸಿಲೊಡೆದು ಇನ್ನೆಲ್ಲೋ ವಿಲಕ್ಷಣವಾಗಿ ಹಬ್ಬುವ ಮಾತಿನ ಬಳ್ಳಿಗೆ ಕಾಲದ ಮಂಟಪವೇ ಬೇಕಾಗಿರಲಿಲ್ಲ. ಹೀಗಾಗಿ ದಣಿವೇ ಇರಲಿಲ್ಲ. 

ಈ ಪುಸ್ತಕದ ಪ್ರತಿ ಬರೆಹಕ್ಕೂ ಆಳದಲ್ಲಿ ಆತ್ಮ ಕಥನದ ಪಲಕುಗಳು ಮೆತ್ತೆಕೊಂಡಿವೆ.

ಈ ಕೃತಿಯಲ್ಲಿ ಮೂರು ಭಾಗಗಳು ಇದ್ದು ಅವು ಜಯಂತರ ಒಟ್ಟೂ ವ್ಯಕ್ತಿತ್ವವು ರೂಪುಗೊಂಡ ಕ್ರಮಕ್ಕೆ ಪ್ರತೀಕದಂತಿದ್ದು ಅದು ಸಾಂದ್ರವಾಗಿ ಇಲ್ಲಿ ವ್ಯಕ್ತವಾಗಿದೆ. ಇಲ್ಲಿಯ ಭಾಷೆಗೆ ಅಷ್ಟೊಂದೆಲ್ಲ ದೂರಕಿತಾ, ಇಲ್ಲ, ಗ್ರಹಿಕೆಯ ಆಳ, ಅಗಲ ಈ ಪರಿಯಲ್ಲಿ ಅಗಾಧವಾಗಿದೆಯಾ ಎನ್ನುವ ಸೋಜಿಗವನ್ನು ಉಂಟುಮಾಡಿ, ಸೂಜಿಗಲ್ಲಿನಂತೆ ಸೆಳೆಯುವುದು. ಇಲ್ಲಿಯ ಎಲ್ಲ ಬರಹಗಳಲ್ಲಿ ಹುದುಗಿರುವ ತಾತ್ವಿಕತೆಯೆಂದರೆ ಅದು ಲೇಖಕ ಜಯಂತರು ತನಗೆ ಏನೆಲ್ಲ ಗೊತ್ತಿದೆ ಎನ್ನುವುದನ್ನು ತೋರಿಸುವುದಲ್ಲ; ಬದಲಿಗೆ, ತಾನು ಅಷ್ಟೊಂದೆಲ್ಲ ಅನುಭವಗಳಲ್ಲಿ ಭಾಗಿಯಾಗಿ ಲೋಕ ತನ್ನನ್ನು ಹೇಗೆ ಬೆಳೆಸಿತು ಎನ್ನುವುದಾಗಿದೆ. ಮತ್ತು ಇವರು ಪ್ರತಿಫಲಿಸುವ ಪ್ರತಿ ಸಂಗತಿಯಲ್ಲಿ ಕಾಣುವುದು ಮಿಡಿವ ಅಂತಃಕರಣ, ಮನುಷ್ಯತ್ವ.

ಛದ್ಮವೇ಼ಷದ ಕುರಿತು ಬರೆಯುತ್ತ ಅದು ಹೇಗೆ ಮನುಷ್ಯನ ವಿಕೃತಿಗಳನ್ನು ತೋರಿಸಿ ಮನುಷ್ಯನ ಅಹಮ್ಮನನ್ನು ತಿವಿಯುತ್ತದೆ ಎನ್ನುವುದನ್ನು ಅನೇಕ ದೃಷ್ಟಾಂತಗಳ ಮೂಲಕ ಕಟ್ಟಿ ಕೊಡುತ್ತಾರೆ. ಈ ಲೇಖನದಲ್ಲಿ  ಅನೇಕ  ಬಾಲ್ಯಕಾಲದ ಚಿತ್ರಣಗಳು, ಅನುಭವಗಳು ದಟ್ಟವಾಗಿ ವ್ಯಕ್ತಗೊಂಡಿರುವುದು ಜಯಂತರ ಬದುಕಿನ ಬಗೆಗಿನ ನಿಷ್ಟೆ, ತದಾತ್ಮವನ್ನು ತೋರಿಸುತ್ತದೆ.

‘ಕವಿತೆಯ ಮೌನಭಂಗ’ ಎನ್ನುವ ಲೇಖನ ಕಾವ್ಯದ ಕುರಿತು ಇರುವ ತೀವ್ರತೆರನಾದ ಸ್ಪಂದನೆ. ಧ್ಯಾನ ಮತ್ತು ಲೇಖಕ ತನಗೆ ತಾನೇ ಗುನುಗಿಕೊಂಡಿರುವ ಸ್ವಗತ. ಕಾವ್ಯ ಹೇಗೆ ವಾಚ್ಯವಾಗುತ್ತದೆ ಮತ್ತು ಹೇಳಿಯೂ ಹೇಳದೆ ತನ್ನ ಅರ್ಥದ ಸಂಕೀರ್ಣತೆಯನ್ನು ಒಡಲಲ್ಲಿ ಇಟ್ಟುಕೊಂಡಿರುತ್ತದೆ ಎನ್ನುವುದನ್ನು ರೂಪಕಗಳ ಮೂಲಕವೇ ಲವ್ಲಿಯಾಗಿ ಸೆರೆ ಹಿಡೆಯಲು ‘ಇಷ್ಟ’ಪಟ್ಟಿದ್ದಾರೆ. ಅರ್ಥವಾಗುವುದಕ್ಕೆ ಮೊದಲೇ ಆಗುವ ಅನುಭವವೇ ಕವಿತೆ ಎಂದು ಬರೆದು ಓದುಗರನ್ನು ತಲೆದೂಗುವಂತೆ ಮಾಡುತ್ತಾರೆ. ಇದರ ನಂತರದ ಲೇಖನ ಇದಕ್ಕೆ ಅವಳಿಯಂತೆ ಇದೆ. ಕವಿತೆ ಒಂದು ವಿಚಿತ್ರ ಶಕ್ತಿಯಾಗಿ, ಉನ್ಮಾದವಾಗಿ, ನೆಳಲು ಬೆಳಕಿನ ಆಟವಾಗಿ ಮನುಷ್ಯನನ್ನು ಕೆಣಕುತ್ತಲೇ ಬಂದಿದೆ. ಕವಿತೆಯನ್ನು ಓದಿದ ನಂತರವೇ ಮನುಷ್ಯನೊಬ್ಬ ಕವಿಯಾಗುತ್ತಾನೆ ಎಂದು ಆಪ್ತವಾಗಿ ಬರೆದು ತನ್ನ ಬರೆಹದ ಒಳಗೆ ನಮ್ಮನ್ನು ಹೂಗುಚ್ಛವನ್ನು ಕೊಟ್ಟು ಸ್ವಾಗತಿಸುವಂತೆ ನಿಧಾನ ಒಳಗೆ ಕರೆದುಕೊಳ್ಳುತ್ತಾರೆ. ಅಂಗೈಯಪ್ಟಗಲದ ಈ ಒಂದು ಪುಟ್ಟ ಬರಹದಲ್ಲಿ  ಒಂದು ಶತಮಾನದ ಕನ್ನಡ ಕವಿತೆಯ ಭಿತ್ತಿಯನ್ನು ಮುಷ್ಟಿ ಗ್ಯಾಹ್ಯವೆನ್ನುವಂತೆ ತೋರಿಸಲು ಪ್ರಯತ್ನಿಸಿರುವುದು ಮನಸ್ಸಿಗೆ ಮುದ ನೀಡುತ್ತದೆ. 

‘ಮಾರುವೇ಼ಷದ ಇಷ್ಟ ದೇವತೆಗಳು’ ಬರಹವು ಕತೆಯಾಗಲು ಜಾರಿ ಕವಿತೆ ಆಗುವಂತೆ ಕಂಡು, ಇಲ್ಲ, ತಾನು ಗದ್ಯವೇ ಆಗಬೇಕೆಂದು ಹಠ ಮಾಡಿದಂತಿದೆ. ಹಾಗಾಗಿಯೇ ಈ ಗದ್ಯಕ್ಕೆ ಕವಿತೆಯ ಚೆಲುವು, ಕತೆಯ ಸ್ಪಷ್ಟತೆ ಏಕಕಾಲದಲ್ಲಿ ಪ್ರಾಪ್ತವಾಗಿದೆ.

“ತಾರಿದಂಡೆ”ಯ ಮೊದಲ ಭಾಗದಲ್ಲಿ ಜಯಂತರು ತಮ್ಮ ಬಾಲ್ಯಕಾಲದ ಮತ್ತು ಧಾರವಾಡ ಹಾಗೂ ಮುಂಬೈಗೂ ಹೋಗುವುದಕ್ಕೂ ಮುನ್ನ ತಾವು ಗೋಕರ್ಣದಲ್ಲಿ ಕಳೆದ ದಿನಗಳ ನೆನಪುಗಳ ಚಿತ್ರಣವನ್ನು ಅವರ ತಾಯಿ ಮಲ್ಲಿಗೆದಂಡೆಯನ್ನು ಕಟ್ಟುತ್ತಿದ್ದ ರೀತಿಯಲ್ಲಿ ಅಭಿವ್ಯಕ್ತಿಸಿರುವ ಕ್ರಮ ತುಂಬ ಆಕರ್ಷಣೀಯವಾಗಿದೆ. ಬಹುಷಃ ಅವರ ಸೊಗಸಾದ ಭಾಷಾ ಅಭಿವ್ಯಕ್ತಿಗೆ, ಶೈಲಿಗೆ ಅವರ “ಮಾಮಾ ಶಾಂತಾ” ಕಟ್ಟುತ್ತಿದ್ದ ಮಲ್ಲಿಗೆ ದಂಡೆಯೂ ಕಾರಣವಾಗರಬಹುದು!

ಎರಡನೇ ಭಾಗದಲ್ಲಿ ಕೆಲವು ವ್ಯಕ್ತಿ ಚಿತ್ರಣಗಳಿದ್ದಾವೆ. ಇವುಗಳಲ್ಲಿ ತುಂಬ ಗಮನಸೆಳೆಯುವಂತಹದ್ದು ಅವರ ತಾಯಿ ಶಾಂತಾ ಕಾಯ್ಕಿಣಿ ಅವರನ್ನು ಕುರಿತಾದದ್ದು. ಈ ಬರೆಹದಲ್ಲಿ ಜಯಂತರು ಎಲ್ಲಿಯೂ ಭಾವುಕರಾಗದೆ ತನ್ನನ್ನು ತನ್ನ ಅಪ್ಪನನ್ನು ಪೊರೆದ ಅವರ ಅಮ್ಮನ ಘನವ್ಯಕ್ತಿತ್ವವನ್ನು ತಮಗೆ ಧುಮ್ಮಿಕ್ಕಿಬಂದ ಎಲ್ಲ ನೆನಪುಗಳನ್ನು ಎಲ್ಲೂ ಇಡಿಕಿರಿದು ಕಾಣದಂತೆ ಹಿಡಿದಿಟ್ಟಿದ್ದಾರೆ. ಅವರ ತಾಯಿಯು  ತಮ್ಮ ಬದುಕಿದ ರೀತಿ ಮತ್ತು ಮುಕ್ತಮನಸ್ಸಿನ ವ್ಯಕ್ತಿತ್ವದಿಂದಾಗಿ, ಹಾಗೂ ಆಧುನಿಕ ಯೋಚನೆಯ ಧೋರಣೆಯನ್ನು ಇಟ್ಟುಕೊಂಡಿದ್ದುದರ ಸಲುವಾಗಿ, ಯಾವ ಫೆಮಿನಿಸ್ಟ್ ಗೂ ಕಮ್ಮಿ ಇಲ್ಲದಂತೆ   ಕಾಣಿಸುತ್ತಾರೆ. ಅವರ ಬದುಕಿನ ಮತ್ತು ಬದುಕಿದ ಪರಿ ಕಾದಂಬರಿಯೊಂದಕ್ಕೆ ಭಿತ್ತಿಯಂತೆ  ಕಂಡುಬರುತ್ತದೆ. ಅವರ ಬಗ್ಗೆ ಕೆಲವು ಸಾಲುಗಳು ಹೀಗಿವೆ: ಎಂದೋ ನಿಂತು ಹೋಗಿದ್ದ ತನ್ನ ಶಿಕ್ಷಣವನ್ನು ಮುಂದುವರೆಸುವ ಹಂಬಲ ಆಕೆಗೆ ಎಷ್ಟಿತ್ತು ಅಂದರೆ, ನಾನು ಕುಮಟಾ ಬಾಳಿಗಾ ಕಾಲೇಜಿನಲ್ಲಿ ಬಿ.ಎಸ್ಸಿ ಓದುತ್ತಿದ್ದಾಗ ಅವಳು ಬಾಹ್ಯವಾಗಿ ಓದಿ ಬಿ.ಎ. ಪರೀಕ್ಷೆ ಬರೆಯಲು ನನ್ನ ಕಾಲೇಜಿನ ಸೆಂಟರನ್ನೇ ಆಯ್ದುಕೊಂಡು , ಪಾಸೂ ಆಗಿ ಶ್ರೀಮತಿ ಶಾಂತಾ ಕಾಯ್ಕಿಣಿ ಬಿ. ಎ. (ಇಂಗ್ಲಿಷಿನಲ್ಲಿ)  ಎಂದು ರಬ್ಬರ್ ಸ್ಟ್ಯಾಂಪು ಮಾಡಿಸಿಕೊಂಡಳು. ಅಲ್ಲದೆ ಪತ್ರ ಬರೆಯುವಾಗ ಕಳಿಸಿದವರ ವಿಳಾಸ ಬರೆಯುವಾಗಲೂ ಬಿ.ಎ. ಸೇರಿಸಿಯೇ ಹೆಸರು ಬರೆಯುತ್ತಿದ್ದಳು. ಹೀಗೆ ಹತ್ತು ಹಲವು ಚಿತ್ರಣಗಳನ್ನು ಯಾವ ಸಂಕೋಚವಿಲ್ಲದೆ ಜಯಂತರು ಕೊಡುತ್ತಾರೆ ಇಲ್ಲಿ. ಅವರ ತಾಯಿಗೆ ಸ್ಲೀವ್ ಲೆಸ್ ಬ್ಲೌಸ್ ಅನ್ನು ಹಾಕಿಕೊಳ್ಳುವ ಅದಮ್ಯ ಆಸೆಯೂ ಇರುತ್ತದೆ. ಆದರೆ ಹೊರಗಡೆ ಅದು ಸಾಧ್ಯವಾಗದೆ ಇದ್ದಾಗ ಮನಯ ಒಳಗಡೆಯೇ ಇರುವ ರವಿಕೆಯ ತೋಳುಗಳನ್ನು ಹರಿದು ಸ್ಲೀವ್ ಲೆಸ್ ಬ್ಲೌಸ್ ರೀತಿ ಮಾಡಿಕೊಂಡು ಧರಿಸುತ್ತಿದ್ದ ಅವರ ಪರಿ  ಸೋಕಾಲ್ಡ್  ಫೆಮಿನಿಸ್ಟ್ಗಳನ್ನು ಹುಬ್ಬೇರಿಸುವಂತೆ ಮಾಡುವುದು. ಅವರು ಮುಖಕ್ಕೆ ಪೌಡರನ್ನು ತುಂಬ ಇಷ್ಟಪಟ್ಟು ಹಚ್ಚಿಕೊಳ್ಳುತ್ತಿದ್ದ ಬಗೆಯನ್ನು ಜಯಂತರು ನಿರೂಪಿಸಿರುವುದು ಓದುಗರಲ್ಲಿ ಒಂದು ಬೆಚ್ಚನೆಯ ನಗುವನ್ನು ಮೂಡಿಸಿ, ಅವರೊಳಗಿನ ಮಗುತನವನ್ನು ಮತ್ತು ಸೌಂದರ್ಯ ಪ್ರಜ್ಞೆಯನ್ನು ತುಂಬ ಮಜವಾಗಿ ತೋರಿಸುತ್ತಾರೆ.    ಅವರು ತನ್ನ ಕುಟುಂಬಕ್ಕೆ ದುಡಿದ ಮತ್ತು ಮಿಡಿದ ಪರಿ ಓದುಗರಿಂದ ಒಂದು ಹ್ಯಾಟ್ಸಾಪನ್ನು ಪಡೆಯದೆ ಇರದು. ಬಹುಷಃ ಜಗದ ಎಲ್ಲ ತಾಯಂದರೂ ಸಹ ಹಾಗೆಯೇನೋ ಅನ್ನಿಸುತ್ತದೆ. ಅವರು ಕುಟುಂಬಕ್ಕೆ ಪೊರೆದ ಪರಿ ಲಂಕೇಶರ ‘ಅವ್ವ’ (ಬನದ ಕರಡಿ) ಅನ್ನು ನೆನಪಿಸುತ್ತದೆ. 

ತಮ್ಮ “ಎದೆಗೆ ಬಿದ್ದ ಅಕ್ಷರದಲ್ಲಿ”ನ ‘ನಡೆದು ಬಂದ ಅರಿವು’ ಎನ್ನುವ ಒಂದು ಪುಟ್ಟ ಬರಹದಲ್ಲಿ ದೇವನೂರು ಮಹಾದೇವ ಅವರು ಹಳಕಟ್ಟಿಯವರು ಅರಿವು, ಜ್ಞಾನದ ಬಗೆಗೆ ಹೇಳಿದ್ದ- ಅರಿವು ಎಂದರೆ ತನ್ನಷ್ಟಕ್ಕೆ ತಾನು ಇರುವ ಕೇವಲ ತಿಳುವಳಿಕೆ, ಜ್ಞಾನ ಮಾತ್ರ ಅಲ್ಲ; ಅದು ಕ್ರಿಯೆಯ ಅನುಭವದಿಂದ ಮೂಡುವುದು, ಅದು ಕೇಳಿ ತಿಳಿದದ್ದಲ್ಲ, ಕ್ರಿಯೆಯಲ್ಲಿ ಮೂಡಿದ  ತಿಳುವಳಿಕೆ. ಅದು ತರ್ಕವಲ್ಲ. ನಡೆಯಿಂದ ನುಡಿ ಹುಟ್ಟಿದರೆ ಅದು ಅರಿವು- ಎನ್ನುವ ಮಾತುಗಳನ್ನು ಪ್ರಸ್ತಾಪಿಸಿ, ವಚನಕಾರರಿಗೆ ಇದ್ದದ್ದು ಅಂತಹ ಅರಿವು ಎಂದು ಹೇಳುತ್ತಾರೆ. ಅಂತಹ ಒಂದು ವ್ಯಕ್ತಿತ್ವಕ್ಕೆ ತುಸು ಹತ್ತಿರವಿದ್ದಂತಹ , ತಮ್ಮ  ನಡೆ ಮತ್ತು ನುಡಿಯ ನಡುವೆ ಪಾರದರ್ಶಕತೆಯನ್ನು ಕಾಪಾಡಿಕೊಂಡು ‘ಸದ್ಯದ ಆತಂಕಗಳಿಗೆ ಯಾವ ಮುಲಾಜಿಲ್ಲದೆ ಖುಲ್ಲಾಮ್ಮು ಖುಲ್ಲವಾಗಿ ಪ್ರತಿಕ್ರಿಯಿಸುತ್ತಿದ್ದಂತಹ ಭಾರತೀಯ ನಾಟಕ ರಂಗದಲ್ಲಿ  ಬಹು ಮುಖ್ಯರಾದ ಕನ್ನಡದ ಗಿರೀಶ ಕಾರ್ನಾಡರನ್ನು,  ಜಯಂತರು, ‘ಖಾನೆಸುಮಾರಿಗೆ’ ಸಿಗದ ಘನವಂತ ಕಾರ್ನಾಡ ಎಂದು ಕರೆದು,  ಹೀಗೆ ಕಾಣಿಸುತ್ತಾರೆ : ‘ಇಡೀ ಸಮಾಜವನ್ನೇ ವಾತ್ಸಲ್ಯದಿಂದ ಖಾಸಾಗಿಯಾಗಿಸಿಕೊಂಡ ಈ ಮೇಧಾವಿಯಲ್ಲಿ ಅಂತರಂಗ, ಬಹಿರಂಗ ಎಂಬ ಒಡಕೇ ಇರಲಿಲ್ಲ.  ಹೀಗಾಗಿ ಈತ ಖಾಸಗಿಯಾಗಿ ಮಾತಾಡಿದ್ದು ಸಹಜವಾಗೇ ಸಾರ್ವಜನಿಕವಾಗುತ್ತಿತ್ತು. ಸಾರ್ವಜನಿಕವಾಗಿ ಮಾತಾಡುವುದೂ ಒಂದು ಖಾಸಗೀ ಕೌಟುಂಬಿಕತೆಯಲ್ಲಿರುತ್ತಿತ್ತು. ನಾಟಕಗಳು, ಸಿನಿಮಾ ಇವಿಷ್ಟನ್ನೇ ಇಟ್ಟುಕೊಂಡರೆ ನಮಗೆ ಪೂರ್ತಿ ಸಿಗದ ಕಾರ್ನಾಡ್, ಅವರ ಕಥನೇತರ ಬರವಣಿಗೆಯಲ್ಲಿ “ ಆಗೊಮ್ಮೆ ಈಗೊಮ್ಮೆ, “ಮೆಲುಕು”, ಆಡಾಡತ ಆಯುಷ್ಯ”ದಲ್ಲಿ ಒಂದು ಕಾಲಖಂಡದ ಸಾಕ್ಷಿಪ್ರಜ್ಞೆಯಂತೆ ಅಗಾಧವಾಗಿ ಆವರಿಸಿ ನಿಲ್ಲುತ್ತಾರೆ’.

ರಾಜಕಾರಣವು ‘ಕೆಲವೊಂದು’ ಪ್ರಗತಿಯ ಹೆಸರಿನಲ್ಲಿ ಸಮಾಜವನ್ನು  ಬರ್ಬರವಾಗಿ ಅವನತಿಯತ್ತ ಕೊಂಡೊಯ್ಯುವುದನ್ನು ನಮ್ಮ ಎದೆಗೆ ಸೀದ ನಾಟುವಂತೆ ತಮ್ಮ ಹರಿತವಾದ ಭಾಷೆಯಲ್ಲಿ ವ್ಯಕ್ತಪಡಿಸುತ್ತಾರೆ ‘ತಾರಿದಂಡೆ’ ಎನ್ನುವ ಬರೆಹದಲ್ಲಿ. ಆಂತರ್ಯದಲ್ಲಿ ನೇತ್ಯಾತ್ಮಕ ರಾಜಕಾರಣವನ್ನು ಕುರಿತು ಹೇಳುತ್ತಿದ್ದರೂ, ‘ತಾರಿದಂಡೆ’ ಎನ್ನುವುದು ತಾವು ಬೆಳೆದು ಬಂದ ಗೋಕರ್ಣ ಸೀಮೆಯ ಒಂದು ಅಸ್ಮಿತೆಯಾಗಿ ಕಾಣುತ್ತದೆ ಇಲ್ಲಿ. ಆ ಅಸ್ಮಿತೆಯು ಅಳಿದು ಹೋದುದನ್ನು ಹೇಳುವಾಗ ವಿಷಣ್ಣರಾಗುತ್ತಾರೆ   ಈ ಲೇಖನದ ಆಸುಪಾಸು ಒಂದು ಮನಸ್ಸಿಗೆ ಥ್ರಿಲ್ ಕೊಡುವ ಕದಂತಾಲ್ ಎನ್ನುವ ಬರಹವಿದ್ದು, ಅದನ್ನು ಓದಲು ಮರೆಯದಿರಿ, ಮರೆತು ನಿರಾಶರಾಗದಿರಿ!     

ಮೊದಲ ಭಾಗ ತಮ್ಮ ಸಂವೇದನೆಗೆ, ಒಟ್ಟೂ ಬರಹಕ್ಕೆ ಹಿನ್ನೆಲೆಯಾಗಿ ಕಂಡು ಬಂದರೆ, ಈ ಪುಸ್ತಕದ ಎರಡನೇ ಭಾಗವು ತುಂಬ ಗಮನಾರ್ಹವಾದುದಾಗಿದೆ. ಇಲ್ಲಿ ಜಯಂತರ ಸೃಜನ ಶೀಲ ನೆಲೆ, ಸೆಲೆ ಹಾಗೂ ಪ್ರೇರಣೆಗಳನ್ನು ಕಾಣಬಹುದಾಗಿದೆ.  ‘ಭಾವನಾ’ ಪತ್ರಿಕೆಯನ್ನು ರೂಪಿಸಲು ಶೇಕ್ಸ್ಪಿಯರ್ ಗೆ ನಮಸ್ಕಾರ ಪುಸ್ತಕ ಖ್ಯಾತಿಯ ಶಾ. ಬಾಲುರಾವ್ ಕುರಿತು ತಮ್ಮ ನೆನಪುಗಳನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ, ಇತ್ತೀಚಿನ   ದಿನಗಳಲ್ಲಿ ಹಿಂದಿ ಚಿತ್ರರಂಗದ ಖಡಕ್ಕಾದ ತನ್ನ ಅನನ್ಯ ನಟನಾ ಶೈಲಿಯಿಂದ ತನ್ನದೇ ಚಾಪನ್ನು ಮಿಂಚನಂತೆ ಮೂಡಿಸಿ ಹೋದ ‘ಲಂಚ್ ಬಾಕ್ಸ್’ ಖ್ಯಾತಿಯ  ನಟ ಇರ್ಫಾನ್ ಖಾನ್ ಅನ್ನು ಹೀಗೆ ಕಾಣುತ್ತಾರೆ ಅವರ ಬಗೆಗಿನ ಒಂದು ಲೇಖನದಲ್ಲಿ: ಚೆನ್ನಾಗಿರುವ ಮೇಕಪ್ ಯಾವುದು ಅಂದರೆ ಮೇಕಪ್ಪೇ ಮಾಡಿಲ್ಲಪ್ಪಾ ಅಂಥ ಅನಿಸುವಂಥದ್ದು. ಒಳ್ಳೆಯ ಪ್ತತಿಭೆ, ಒಳ್ಳೆಯ ನಟನೆ ಆ ಥರ. ಮೌನದ ಸಮುದ್ರದಂತಿರುವ  ಇರ್ಫಾನ್ ಖಾನ್ ಅಂಥಾ ನಟ.

ನಾಗೇಶ ಹೆಗಡೆ ಅವರಿಗೆ ಬರೆದಿರವ ಒಂದು ಪತ್ರ ಇಲ್ಲಿದೆ. ತನ್ನ ವಿಶಿಷ್ಟ ಶೈಲಿಯ ಭಾಶೆಯಿಂದಾಗಿ ಈ ಕೃತಿಯ ಲಕ್ಷ್ಮಣವನ್ನು ಮತ್ತೊಂದು ನೆಲೆಗೆ ಕೊಂಡೊಯ್ಯುತ್ತದೆ.

ಭಾಗ ಮೂರರಲ್ಲಿ ಜಯಂತರು ತಾವು  ಓದಿದ ಕೆಲ ಪುಸ್ತಕಗಳ ಕುರಿತು ಹಾಗೂ ‘ಸಂಯುಕ್ತ ಕರ್ನಾಟಕ’, ‘ಪ್ರಜಾವಾಣಿ’ ಪತ್ರಿಕೆಗಳ ಬಗ್ಗೆ ಬರೆದಿರುವ ಲೇಖನಗಳು ಅವರ ಸೂಕ್ಷ್ಮ ಸಂವೇದನೆಯ ಓದಿಗೆ ಕನ್ನಡಿ. ಒಂದು ಕಾಲದ ಸಾಕ್ಷಿ ಪ್ರಜ್ಞೆಯಾಗಿ ಪತ್ರಿಕೆಗಳು ಹೇಗೆಲ್ಲ ಕೆಲಸ ಮಾಡುವುವು ಮತ್ತು ಮನುಷ್ಯ ಪ್ರಜ್ಜೆಯ ಎಲ್ಲ ಆಯಾಮಗಳ ಮೇಲೆ ಸಾಹಿತ್ಯಿಕ ಕೃತಿಗಳು ಯಾವ ಬಗೆಯಲ್ಲಿ ಪ್ರಭಾವ ಬೀರ ಬಲ್ಲವು ಎನ್ನುವುದನ್ನು ತಮ್ಮದೇ ಬಗೆಯಾದ ಆಪ್ತ ಶೈಲಿಯಲ್ಲಿ ಹೇಳುತ್ತಾರೆ ಇಲ್ಲಿ. ಆತ್ಮಕಥನದ ಕುರಿತು ಇರುವ ಒಂದು ಲೇಖನ ಆತ್ಮಕಥನವನ್ನು ಹೀಗೆ ವರ್ಣಿಸುತ್ತಾರೆ ಜಯಂತರು : ಆತ್ಮಕಥನ ಬರೆಯುವುದೆಂದರೆ ಬೀದಿಗಾಯಕನೊಬ್ಬ ಕೊರಳಿಗೆ ಹಾರ್ಮೋನಿಯಂ ಕಟ್ಟಿಕೊಂಡು ಹಾಡುತ್ತ ನಡೆದಂತೆ. ಆ ಹಾರ್ಮೋನಿಯಂ ಹಗುರವಲ್ಲ, ಮಣಭಾರ. ಕೊರಳಿಗೆ ಬಿದ್ದ ಸಂಸಾರದ ಭಾರ ಅದು. ಆದರೆ, ಅದರಿಂದಲೇ ಸಂಗೀತವನ್ನು ಹೊಮ್ಮಿಸಿ ಅವನು ಹಾಡುತ್ತಾನೆ. ಒಂದು ಘನವಾದ ಆರ್ತವಾದ ಆತ್ಮವಿಮುಖ ಕ್ಷಣದಲ್ಲಿ, ಅದು ಎಲ್ಲರ ಸೊಲ್ಲಾಗುತ್ತದೆ. ಇಂತಹ ಅಪರೂಪದ ಹೋಲಿಕೆಗಳು ಇಲ್ಲಿನ ಪ್ರತಿ ಬರಹದಲ್ಲೂ ಶ್ರಾವಣದ ಮಳೆಯಂತೆ ಜಿನುಗುತ್ತವೆ.

ಒಟ್ಟಾರೆ ಇವರ ಬರಹಕ್ಕೆ ಖುಷಿ ಕೊಡುವ ಗುಣ ಹಣ್ಣಿನೊಳಗಿನ ರಸದ ಪರಿಮಳ ಆವರಿಸುವಂತೆ ಇದೆ. ತಾರಿ ದಂಡೆ ಅಂದರೆ ನದಿ ದಾಟಿಸುವ ದೋಣಿಯನ್ನು ಜನ ಹಿಡಿಯುವ ಜಾಗ. ಸಾಹಿತ್ಯವೂ ಹಾಗೆ ಅಲ್ಲವೆ ತನ್ನ ವೈಚಾರಿಕತೆ ಮತ್ತು ಉತ್ಕೃಷ್ಟ ಇಮ್ಯಾಜಿನೇಷನ್ನಿನ ಮೂಲಕ ಬದುಕಿನ ಸತ್ಯಗಳನ್ನು ಅನೇಕ ಸ್ತರಗಳಲ್ಲಿ ಅರಿಯಲು ಅನುವು ಮಾಡುವ ತಾರಿದಂಡೆಯಲ್ಲವೇ???

●●●

‍ಲೇಖಕರು avadhi

April 2, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: