ಪೈಪು ಹೇಳುವ ಕತೆ!!

ಎಸ್.ಜಿ.ಶಿವಶಂಕರ್
“ರೀ..ರೀ..ಕಾರ್ಪೊರೇಶನ್ನಿನವರು ಬಂದಿದ್ದಾರೆ..”
ಪತ್ನಿಯ ಧ್ವನಿಯಲ್ಲಿದ್ದ ಗಾಬರಿಗೆ ಮುಕುಂದನಿಗೆ ಎಚ್ಚರವಾಯಿತು. ಆಗಿನ್ನೂ ಸ್ವಲ್ಪ ಮಂಪರು ಹತ್ತಿತ್ತು. ಎಚ್ಚರಿಸಿದ್ದಕ್ಕೆ ಪತ್ನಿಯ ಮೇಲೆ ಬೇಸರವಾಯಿತು. ಬೇರೆ ದಾರಿಯಿಲ್ಲದೆ ಎದ್ದು ಕುಳಿತ. ಪತ್ನಿಯ ಮಾತು ಮಧ್ಯಾನ್ಹದ ನಿದ್ರೆಯನ್ನು ಕಿತ್ತೆಸೆದಿತ್ತು. ಆಕೆ ತನ್ನನ್ನು ಎಬ್ಬಿಸಿದ್ದಕ್ಕೆ ಕಾರಣ ಅವನಿಗೆ ಗೊತ್ತಾಯಿತು.
“ಬೇಗ ಏಳಿ, ಅವರು ಹೋಗಿಬಿಡ್ತಾರೆ” ಅಲಮೇಲು ಅವಸರಿಸಿದಳು.
ಬೇಸರವನ್ನು ವ್ಯಕ್ತಪಡಿಸದೆ ಮುಕುಂದ ಶರ್ಟ್ ಏರಿಸಿ, ಡ್ರೆಸ್ಸಿಂಗ್ ಟೇಬಲ್ಲಿನ್ನೊಮ್ಮೆ ಮುಖ ನೋಡಿಕೊಂಡು ಬಾಚಣಿಕೆಯನ್ನು ಕೈಲಿ ಹಿಡಿದಾಗ ಅಲಮೇಲು ಅಸಹನೆಯಿಂದ ಹೇಳಿದಳು:
“ಅಯ್ಯೋ, ಅದೆಲ್ಲಾ ಬೇಕೆ ಈಗ?”
ಅಸಹನೆಯನ್ನು ಹತೋಟಿಗೆ ತಂದುಕ್ಕೊಳ್ಳುತ್ತಾ ಮುಕುಂದ ಈಚೆ ಬಂದ. ಬಾಗಿಲಾಚೆೆ ನಿಂತು ರಸ್ತೆಯತ್ತ ನೋಡಿದ. ಪಕ್ಕದ ಖಾಲಿ ಸೈಟಿನ ಮುಂದೆ ಯಾರೋ ನಿಂತು ಮಾತಾಡುತ್ತಿದ್ದರು. ರಸ್ತೆ ಪಕ್ಕದಲ್ಲಿ ಒಂದು ಜೆಸಿಬಿ ಯಂತ್ರವೂ ಅದರ ಹಿಂದೆ ಎರಡು ಜನರೂ ಕಂಡರು. ಜೆಸಿಬಿ ಮುಂದೆ ಒಂದು ಮೋಟಾರ್ ಬೈಕಿತ್ತು. ಬೈಕಿನವ ಇಂಜಿಯರನೋ ಇಲ್ಲಾ ಸೂಪರ್ವೈಸರೋ ಇರಬೇಕೆನ್ನಿಸಿತು ಮುಕುಂದನಿಗೆ.
“ನಮಸ್ಕಾರ. ಕಾರ್ಪೊರೇಶನ್ನಿನವರಾ..?” ಗೇಟಿನ ಬಳಿ ಬಂದು ಅವರಲ್ಲೊಬ್ಬನನ್ನು ಕೇಳಿದ ವಿಕಾಸ.
“ಹೌದು”
“ದಯವಿಟ್ಟು ಈ ಮೋರಿಯಲ್ಲಿರೊ ಆ ಸಿಮೆಂಟು ಪೈಪು ಎತ್ತಿ ಈಚೆ ಹಾಕಿಸಿ. ಅದಿರೋದ್ರಿಂದ ಮಳೆ ಬಂದಾಗ ನೀರು ಸೀದಾ ನಮ್ಮನೆ ಅಂಗಳಕ್ಕೆ ನುಗ್ಗಿಬಿಡುತ್ತೆ..” ಮುಕುಂದ ಮೋರಿಯಲ್ಲಿದ್ದ ಎರಡು ಸಿಮೆಂಟು ಪೈಪುಗಳನ್ನು ತೋರಿಸಿದ.
“ಈ ಮೋರಿಯೊಳಗೆ ಇವು ಹ್ಯಾಗೆ ಬಂದವು..?” ಸುಮಾರು ಮೂರಡಿ ವ್ಯಾಸ ಆರಡಿ ಉದ್ದದ ಎರಡು ಸಿಮೆಂಟು ಪೈಪುಗಳನ್ನು ಆತ ಅಚ್ಚರಿಯಿಂದ ನೋಡುತ್ತಾ ಕೇಳಿದ.
“ಅದೊಂದು ದೊಡ್ಡ ಕತೆ. ಈ ಪಕ್ಕದ ಸೈಟು ಯಾರದೋ ಗೊತ್ತಿಲ್ಲ. ಇಪ್ಪತ್ತು ವರ್ಷದಿಂದ ಅನಾಥವಾಗಿದೆ. ಈ ಸೈಟಿನ ಹಿಂದಿನ ಮನೆಯವರು ಮನೆ ಕಟ್ಟಿಸೋ ಸಮಯದಲ್ಲಿ ಇಟ್ಟಿಗೆ, ಜಲ್ಲಿ, ಸಿಮೆಂಟು ಹಾಕ್ಕೊಳ್ಳೋಕೆ ಈ ಸೈಟು ಉಪಯೋಗಿಸಿಕೊಂಡರು. ಮೋರಿಗೆ ಮಣ್ಣು ತುಂಬಿಸಿ ಲಾರಿ ಒಳಗೆ ಹೋಗೋ ಹಾಗೆ ಮಾಡಿಕೊಂಡಿದ್ದರು. ಇದರಿಂದ ಮೋರಿ ಬ್ಲಾಕ್ ಆಗಿ, ಒಂದು ದಿವಸ ಜೋರಾಗಿ ಮಳೆ ಬಂದಾಗನಮ್ಮ ಕಾಂಪೌಂಡ್ ಒಳಗೆ ಚರಂಡಿ ನೀರು ನುಗ್ಗಿ ನಮ್ಮ ಕರ್ಮಕ್ಕೆ ಗ್ಯಾರೇಜಲ್ಲಿರೋ ನಮ್ಮ ಸಂಪಿಗೆ ಚರಂಡಿ ನೀರು ಸೇರಿತ್ತು. ಅದನ್ನ ಆತನಿಗೆ ತೋರಿಸಿದ್ದಕ್ಕೆ ಈ ಪೈಪುಗಳನ್ನ ಹಾಕಿ ಅದರ ಮೇಲೆ ಮಣ್ಣು ತುಂಬಿಸಿ ನೀರು ಮುಂದಕ್ಕೆ ಹರಿಯೋಕೆ ಜಾಗ ಮಾಡಿದ್ದರು. ಮಳೆ ಬಂದಾಗೆಲ್ಲಾ ಪೈಪಿನ ಬಾಯಿಗೆ ಪ್ಲಾಸ್ಟಿಕ್ ಕವರ್ ಮುಂತಾದುವು ಸೇರಿ ಚರಂಡಿ ನೀರು ಅಸ್ಥವ್ಯಸ್ಥವಾಗಿ ಹರಿಯುತ್ತೆ. ಮತ್ತೆ ನಮ್ಮ ಮನೆ ಒಳಕ್ಕೆ ನುಗ್ಗೋ ಹೆದರಿಕೇನೂ ಇದೆ. ಇದರ ಬಗೆಗೆ ಪೈಪು ಹಾಕಿದ ಅವರಿಗೆ ಯೋಚನೆಯಿಲ್ಲ್ಲ. ಅವರ ಮನೆ ಪೂರ್ತಿಯಾಯಿತು. ಪೈಪು ಇಲ್ಲೇ ಉಳೀತು! ಅಟ್ಟ ಹತ್ತಿದ ಮೇಲೆ ಏಣಿ ಯಾಕೆ ಬೇಕು?”
ಮುಕುಂದನ ಮಾತಿನಲ್ಲಿ ನೋವು ತುಂಬಿತ್ತು!
“ಪೈಪು ಹಾಕಿಸಿದ್ದವರಿಗೇ ಹೇಳ್ಬೇಕಿತ್ತು. ಒಳಗೆ ಹಾಕಿದವರಿಗೆ ಈಚೆ ಹಾಕೋಕೆ ಗೊತ್ತಾಗೊಲ್ವೇ?”
“ಅವರಿಗೆ ಒಂದ್ಸಲ ಅಲ್ಲ ಹತ್ತು ಸಲ ಹೇಳಿದ್ದೀನಿ. ಅವರು ಅದನ್ನ ಕಿವಿ ಮೇಲೆ ಹಾಕ್ಕೊಳಲ್ಲ. ಮನೆ ಕಟ್ಟೋವಾಗ ಕಂಡಾಗೆಲ್ಲಾ ನಮಸ್ಕಾರ ಮಾಡ್ತಿದ್ದವರು ಈಗ ನೋಡಿಯೂ ನೋಡದಂತೆ ಹೋಗ್ತಾರೆ”
“ಸರಿ, ನೀವೊಂದು ಕಂಪ್ಲೈಂಟ್ ಬರೆದು ಕಾರ್ಪೊರೇಶನ್ ಆಫೀಸಲ್ಲಿ ಕೊಡಿ”
“ನಾನು ಕಾರ್ಪೊರೇಷನ್ ಆಫೀಸಿಗೆ ಅರ್ಜಿ ಕೊಟ್ಟು ಮೂರು ವರ್ಷ ಆಯಿತು. ಆರು ತಿಂಗಳು ಕಳೆದ ಮೇಲೆ ಅಸಿಸ್ಟೆಂಟ್ ಕಮಿಷನಿರನ್ನು ಕಂಡು ಹೇಳಿದ್ದ”
“ಹೌದೆ..? ಏನು ಹೇಳಿದ್ದರು?”
“ನನ್ನ ಅಪ್ಲಿಕೇಶನ್ ಹುಡಿಕಿಸಿ ಸಿಗದೆ ಇದ್ದಾಗ ಒಂದು ಕಾಪಿ ನನ್ನ ಹತ್ರ ತಗೊಂಡರು”
“ಒಂದ್ಕೆಲ್ಸ ಮಾಡಿ. ನನಗೂ ಇನ್ನೊಂದು ಕಾಪಿ ಇದ್ರೆ ಕೊಡಿ”
ಮುಕುಂದ ಒಳಗೆ ಹೋಗಿ ಅರ್ಜಿಯ ಕಾಪಿ ತಂದುಕೊಟ್ಟ.
“ಪ್ರತಿ ಸಲ ನಾನು ಕಾರ್ಪೊರೇಷನ್ನಿನಲ್ಲಿ ವಿಚಾರಿಸೋಕೆ ಹೋದಾಗಲೆಲ್ಲಾ ಅವರು ಅರ್ಜಿಯ ಕಾಪಿ ಕೇಳ್ತಾರೆ. ನಾನು ಕೊಡ್ತಾ ಬಂದಿದ್ದೀನಿ. ಈವರೆಗೆ ಯಾರೂ ನನ್ನ ಮಾತನ್ನಾಗಲೀ ಅರ್ಜಿಯನ್ನಾಗಲೀ ಯಾರೂ ಗಂಭೀರವಾಗಿ ತೆಗೆದುಕೊಂಡೇ ಇಲ್ಲ. ಹತ್ತು ಕಾಪಿ ಮಾಡಿಸಿದ್ದೆ. ನಿಮಗೆ ಕೊಡ್ತಾ ಇರೋದು ಒಂಬತ್ತನೇ ಕಾಪಿ, ಮತ್ತೆ ಒಂದು ಹತ್ತು ಕಾಪಿ ಮಾಡಿಸಬೇಕೂಂತ ಕಾಣಿಸುತ್ತೆ”
“ಈ ಸಲ ಹಾಗಾಗೊಲ್ಲ. ಮೇಲಿನವರ ಹತ್ರ ಮಾತಾಡಿ ಇದಕ್ಕೊಂದು ವ್ಯವಸ್ಥೆ ಮಾಡ್ತೀನಿ”
“ಈಗ, ನಿಮ್ಮ ವೆಹಿಕಲ್ ಬಂದಿದೆ, ಜನಾನೂ ಬಂದಿದಾರೆ..ಈಗ ಎತ್ತಿಸಿಬಿಡಿ”
“ಅಯ್ಯೋ, ಹಾಗೆಲ್ಲಾ ಮಾಡೋಕಾಗೊಲ್ಲ ಸಾರ್. ಇದು ಗುತ್ತಿಗೆದಾರರ ಗಾಡಿ. ರಸ್ತೆ ಅಂಚಲ್ಲಿ ಬಂದಿರೋ ಮಣ್ಣು ತೆಗೆಯೋಕೆ ಬಂದಿರೋದು ಇದು. ಅದಕ್ಕೆ ಮಾತ್ರ ಹಣ ಸಿಗೋದು ಅವರಿಗೆ. ಬೇರೆ ಕೆಲಸ ಇವರ ಕೈಲಿ ಮಾಡಿಸೋಕೆ ಆಗೊಲ್ಲ”
“ಅವರಿಗೆ ದುಡ್ಡು ಕೊಡ್ತೀವೀಂತ ಹೇಳಿ. ಮಾಡಬಹುದು” ಒಳಗಿಂದ ಅಲಮೇಲು ಕೂಗಿದಳು.
“ನೋಡಿ ನಿಮ್ಮ ಕಂಟ್ರಾಕ್ಟರಿಗೇ ಹೇಳಿ ನೋಡಿ. ಅದೇನಾಗುತ್ತೊ ಅಷ್ಟು ದುಡ್ಡು ನಾನು ಕೊಡ್ತೀನಿ”
ಮುಕುಂದ ಪತ್ನಿಯ ಮಾತನ್ನು ಪುನರುಚ್ಚರಿಸಿದ.
“ಅಯ್ಯೋ ಸಾರ್, ನಮ್ಮ ಯಜಮಾನನಿಗೆ ಗೊತ್ತಾದ್ರೆ ನಾನು ಕೆಲ್ಸ ಕಳ್ಕೋಬೇಕಾಗುತ್ತೆ. ದಯವಿಟ್ಟು ಮುಂದೆ ಒಂದು ಮಾತನ್ನೂ ಆಡ್ಬೇಡಿ. ಯಾವ್ಯಾವ ಕೆಲ್ಸ ಯಾರು ಮಾಡ್ಬೇಕೋ ಅವರೇ ಮಾಡ್ಬೇಕು. ಸುಮ್ನೆ ನಮ್ಮನ್ನ ಇಕ್ಕಟ್ಟಿಗೆ ಸಿಕ್ಕಿಸಬೇಡಿ”
ಇದುವರೆಗೂ ಅವರ ಮಾತನ್ನು ಕೇಳಿಸಿಕ್ಕೊಳ್ಳುತ್ತಿದ್ದ ಜೆಸಿಬಿ ಯಂತ್ರದ ಡ್ರೈವರ್ ಕುಳಿತಿದ್ದೆಡೆಯಿಂದಲೇ ಹೇಳಿದ.
“ನಿನ್ನ ಕೈಮುಗಿತೀನಿ, ಆ ಪೈಪು ಆಚೆ ಹಾಕಿಸಿಬಿಡಪ್ಪ. ಅದು ನಮಗೆಷ್ಟು ತೊಂದರೆ ಕೊಡ್ತಿದೇಂತ ಹೇಳೋಕಾಗೊಲ್ಲ. ಗ್ಯಾರೇಜಿನಲ್ಲಿ ನಮ್ಮ ಸಂಪಿದೆ. ಅವರು ಮನೆ ಕಟ್ಟೋವಾಗ ಒಂದ್ಸಲ ಮಳೆ ಬಂದು ಚರಂಡಿ ನೀರು ನಮ್ಮ ಸಂಪಿಗೆ ಹರೀತು. ಇಡೀ ಒಂದು ದಿನ ಸಂಪಿನ ನೀರು ಈಚೆ ಹಾಕಿದೊ. ಯಾರಿಗೆ ಹೇಳ್ಕೋಬೇಕು ನಮ್ಮ ಕಷ್ಟ”
ಅವನ ಮಾತನ್ನು ಕೇಳಿಸಿಕೊಂಡ ಗೇಟಿನ ಬಳಿ ಬಂದ ಅಲಮೇಲು ಕೈಮುಗಿದೇ ಕೇಳಿಕೊಂಡರು.
ಅಲಮೇಲು ಮಾತಿನಲ್ಲಿದ್ದ ಅಸಯಾಕತೆ ಮುಕುಂದನಿಗೆ ನಿಜಕ್ಕೂ ಕೆಟ್ಟದೆನಿಸಿತು. ಎಂತಾ ದೈನ್ಯ ಸ್ಥಿತಿ ತಮ್ಮದು ಎನ್ನಿಸಿತು.
“ಪ್ರತಿ ಸಲ ಮಳೆ ಬಂದಾಗಲೂ ಮೋರಿ ತುಂಬಿ ಹರಿಯುತ್ತೆ. ನೀರು ಹೊರಳಿ ನಮ್ಮ ಕಾಂಪೌಂಡು ಒಳಕ್ಕೆ ನುಗ್ಗುತ್ತೆ. ಒಂದ್ವೇಳಿ ರಾತ್ರಿ ಮಳೆ ಏನಾದ್ರೂ ಬಂದರೆ ನಾನೂ ನನ್ನ ಹೆಂಡತಿ ಯಾವಾಗ ಮಳೆ ನೀರು ಸಂಪು ಸೇರುತ್ತೋಂತ ನಿದ್ರೆ ಕೂಡ ಮಾಡೊಲ್ಲ. ರಿಟೈರಾದಮೇಲೆ ನೆಮ್ಮದಿಯಾಗಿರಬಹುದು ಎಂದ್ಕೊಂಡಿದ್ದೆ! ನೋಡಿ ನಮಗೆ ಎಂತಾ ಪರಿಸ್ಥಿತಿ”
“ಒಂದ್ಕೆಲ್ಸ ಮಾಡಿ ಸಾರ್. ನಿಮ್ಮ ಗೇಟಿನಿಂದಾಚೆ ಒಂದ್ನಾಲ್ಕಿಂಚು ಕಟ್ಟೆ ಕಟ್ಟಿಸಿಬಿಡಿ. ನೀರು ಒಳಕ್ಕೆ ಬರೊಲ್ಲ”
ಬೈಕಿನವನು ತಣ್ಣಗೆ ಹೇಳಿದ.
“ಇದು ಹೇಳೋಕೆ ನೀವೇ ಬೇಕೇನ್ರಿ? ಅದು ನಮಗೆ ಗೊತ್ತಿಲ್ಲಾಂತ ಅಂದ್ಕೊಂಡಿದ್ದೀರಾ..? ನೀವು ಮಾಡಬೇಕಾದ ಕೆಲಸ ಬಿಟ್ಟು ನಮಗೇ ಹೇಳ್ತೀರಾ..?”
ಮುಕುಂದ ರೇಗಿದ.
“ಏನೋ ಹೆಲ್ಪಾಗ್ಲೀಂತ ಹೇಳಿದೆ. ಎನಿವೇ..ಈ ಪೈಪು ಎತ್ತಿಸೋದು ನಮ್ಮ ಕೆಲ್ಸವಲ್ಲ. ಏ..ನೀನು ನಡಿಯೋ!”
ಮುಕುಂದನ ಮಾತಿಗೆ ಅವನಿಗೆ ಕೋಪ ಬಂದಿತ್ತು! ಅಲ್ಲದೆ..? ಸರ್ಕಾರಿ ಅಧಿಕಾರಿಯನ್ನು ಕೇಳುವ ದಾಷ್ಟ್ಯ ಇವನಿಗಿದೆಯಲ್ಲ ಎಂದು ಕೋಪದಿಂದ ಉರಿದ! ಮೋಟಾರ್ ಬೈಕ್ ಸ್ಟಾರ್ಟ್ ಮಾಡಿ ಅವನು ಬುರ್ರನೆ ಹೋದ. ಅವನ ಹಿಂದೆಯೇ ಜೆಸಿಬಿ ಯಂತ್ರ ಮತ್ತು ಅದರ ಹಿಂದಿದ್ದವರೂ ಹೋದರು!
ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾದ ಪೈಪು ಹಾಕಿಸಿದ ಹಿಂದಿನ ಮನೆಯಾತ ಸ್ಕೂಟರಿನಲ್ಲಿ ಮುಕುಂದನ ಮನೆಯ ಮುಂದೆಯೇ ಹೋಗುವುದು ಕಂಡಿತು!
“ರೀ..ರೀ..ಹಲೋ..ಭರಮಪ್ಪ..”ಮುಕುಂದ ಕೂಗಿದ.
ಅವನು ಕೇಳಿಸದಂತೆ ಮುಂದೆ ಹೋಗಿ ತನ್ನ ಮನೆಯ ಕ್ರಾಸಿನಲ್ಲಿ ತಿರುಗಿದ.
“ಅವನನ್ನ ಈಗ್ಯಾಕೆ ಕರೀತೀರಿ..? ಅದರ ಬದಲು ಆ ಕಾರ್ಪೊರೇಷನ್ನಿನವನನ್ನ ಇನ್ನಷ್ಟು ಕೇಳ್ಕೊಂಡಿದ್ರೆ ಪೈಪು ತೆಗೆಸಿ ಹಾಕ್ತಿದ್ದನೋ ಏನೋ..?”
“ನಿನಗೆಲ್ಲೋ ಭ್ರಮೆ ಕಣೆ. ಮಾಡಬೇಕಾದೋರೇ ಕೆಲ್ಸ ಮಾಡೊಲ್ಲ. ಇನ್ನು ಯಾವುದೋ ಕೆಲ್ಸಕ್ಕೆ ಬಂದವನು ಮಾಡ್ತಾನೇನು..? ನೋಡು ಈ ದೇಶದಲ್ಲಿ ಯಾರೂ ಈ ಕೆಲಸ ಮಾಡೊಲ್ಲ”
“ಇನ್ನೂ ಏನೇನು ಅನುಭವಿಸಬೇಕೋ..? ಏನೇನು ನಮ್ಮ ಹಣೇಲಿ ಬರೆದಿದೆಯೋ..?” ಅಸಹಾಯಕ ಸ್ಥಿತಿಗೆ ಅಲಮೇಲು ಕಣ್ಣುಗಳು ಒದ್ದೆಯಾದವು.
“ಸ್ವಂತ ಮನೆ ಅಂತಾ ಕನಸು ಕಾಣ್ತಿದ್ದ್ದೆಯಲ್ಲ? ಈಗ ನೋಡು ನಮ್ಮ ಸ್ಥಿತಿ? ನೆಮ್ಮದಿಯಾಗಿ ನಿದ್ರೇನೂ ಮಾಡೋ ಹಾಗಿಲ್ಲ. ಬಾಡಿಗೆ ಮನೇನೆ ವಾಸಿಯಾಗಿತ್ತು”
“ಹೌದು ಮೂರು ಮೂರು ವರ್ಷಕ್ಕೂ ಸಾಮಾನೆತ್ಕೊಂಡು ಮನೆ ಬದಲಾಯಿಸೋದೇ ಸುಖವಾಗಿತ್ತಲ್ವೇ..?”
ಅಲಮೇಲು ಜಗಳಕ್ಕೆ ನಿಂತಳು.
“ಬೀದೀಲಿ ನಿಂತ್ಕೊಂಡು ಜಗಳ ಆಡೋದು ಬೇಡ. ಒಳಕ್ಕೆ ನಡಿ” ಅಲಮೇಲುಗೆೆ ಕಾಯದೆ ಮುಕುಂದ ಒಳಗೆ ನಡೆದ.
ಅಲಮೇಲು ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಭುಸುಗುಟ್ಟುತ್ತ ಆಚೆ ನಿಂತಿದ್ದಳು!
ಮುಕುಂದನಿಗೆ ನಡೆದ ಘಟನೆಯಿಂದ ಬೇಜಾರಾಗಿತ್ತು. ಒಂದೆಡೆ ನಿದ್ರೆಯೂ ಹಾಳಾಗಿತ್ತು, ನಡೆದ ಮಾತುಕತೆಗಳಿಂದ ಮನಸ್ಸೂ ಕೆಟ್ಟಿತ್ತು.
ಟಿವಿ ಆನ್ ಮಾಡಿ ಕೂತ. ಕ್ರಿಕೆಟ್ ಮ್ಯಾಚು ಕಾಣಿಸಿತು. ಎರಡು ನಿಮಿಷ ನೋಡುತ್ತಿರುವಾಗಲೇ ಸ್ವದೇಶೀಯರು ಒಂದು ವಿಕೆಟ್ಟು ಕಳೆದುಕೊಂಡರು. ‘ತತ್ತೇರೀಕೆ..!’ ಮುಕುಂದ ಗೊಣಗಿದ. ಆಟದಲ್ಲಿ ಮನಸ್ಸು ನಿಲ್ಲಲಿಲ್ಲ.
ಆಗಲೇ ಆಚೆ ಅಲಮೇಲು ಯಾರೊಂದಿಗೋ ಮಾತಾಡುವುದು ಕೇಳಿಸಿತು. ಎದ್ದು ಕಿಟಿಕಿಯಲ್ಲಿ ನೋಡಿದ. ಹಾಲು ಹಾಕುವ ಗೋಪಿ ನಿಂತಿದ್ದ. ಮುಂಗಡವಾಗಿ ಹಣ ಕೇಳಲು ಬಂದಿರಬೇಕೆನ್ನಿಸಿತು.
“ರೀ..ಗೋಪಿ ಬಂದಿದಾನೆ. ಈಚೆ ಬರ್ತೀರಾ..?” ಅಲಮೇಲು ಕೂಗಿದಳು.
ಟಿವಿಯನ್ನು ಆಫ್ ಮಾಡಿ ಮುಕುಂದ ಈಚೆ ಬಂದ.
“ಏನು ಗೋಪಿ? ಏನು ಸಮಾಚಾರ..? ದುಡ್ಡು ಬೇಕಾಗಿತ್ತ?” ಮುಕುಂದ ತಾನಾಗೇ ಕೇಳಿದ.
“ಹೂ ಅಯ್ಯಾರೆ” ಗೋಪಿ ತಲೆಕೆರೆದುಕೊಂಡ.
“ರೀ..ಗೋಪಿಗೆ ಈ ಏರಿಯಾ ಕಾರ್ಪೊರೇಟರು ಗೊತ್ತಂತೆ. ಅವನಿಗೆ ಹೇಳಿ ಈ ಪೈಪು ತೆಗೆಸ್ತಾನಂತೆ. ನೀವು ಗೋಪಿ ಜೊತೆ ಹೋಗಿ ಕಾರ್ಪೊರೇಟರಿಗೆ ಒಂದು ಮಾತು ಹೇಳಿ”
ಅಲಮೇಲು ಉತ್ಸಾಹದಿಂದ ಹೇಳಿದಳು.
“ಕಮಿಷನರಿಗೆ ಹೇಳಿದರೂ ಆಗದಿದ್ದು, ಕಾರ್ಪೊರೇಟರು ಮಾಡ್ತಾನೇನು?” ಮುಕುಂದನ ಮಾತಿನಲ್ಲಿ ಗೋಪಿಯ ಕೈಯಲ್ಲಿ ಇದಾಗದು ಎಂಬ ಉದಾಸೀನವಿತ್ತು.
“ಅಯ್ಯಾರೆ, ಈ ಕೆಲಸ ಮಾಡೋರು ಕಮಿಷನರ್ ಅಲ್ಲ. ಕಾರ್ಪೊರೇಟರು. ನಮ್ಮ ಮನೇ ಹತ್ರಾನೇ ಇರೋದು. ನಾನು ಖಂಡಿತಾ ಮಾಡಿಸಿಕೊಡ್ತೀನಿ. ನನ್ನ ಮಾತು ಅವನು ತೆಗೆದು ಹಾಕೊಲ್ಲ. ಮಳೆಗಾಲ ಬರ್ತಾ ಇದೆ. ಈಗ ಇದನ್ನ ಆಚೆ ಹಾಕಿಸಿದ್ರೆ ಒಳ್ಳೇದು. ಅವತ್ತು ಆದ ಹಾಗೆ ಮತ್ತೆ ಸಂಪಿಗೆ ನೀರು ಸೇರ್ಬಹುದು”
ಗೋಪಿಯ ಮಾತನ್ನು ಮುಕುಂದ ನಂಬಲು ತಯಾರಿರಲಿಲ್ಲ. ಆದರೆ ತೆಗೆದು ಹಾಕುವಂತೆಯೂ ಇರಲಿಲ್ಲ.
“ಸರಿ, ಅದೇನು ಮಾಡಿಸ್ತೀಯೋ ಮಾಡಿಸು. ನಾನೂ ಒಂದು ಮಾತು ಕಾರ್ಪೊರೇಟರಿಗೆ ಹೇಳ್ತೀನಿ. ಎಲ್ಲಿ ಸಿಗ್ತಾರೆ ಅವರು?” ಮುಕುಂದ ತನ್ನನ್ನೇ ತಾನು ಸಮಜಾಯಿಸಿ ಮಾಡಿಕೊಂಡ.
“ನಾಳೆ ಬೆಳಿಗ್ಗೆ ಮನೆಗಳಿಗೆ ಹಾಲಾಕಿ ಬರ್ತೀನಿ. ಆಗ ನನ್ನ ಜೊತೆ ಬನ್ನಿ, ಕರಕೊಂಡು ಹೋಗ್ತೀನಿ”
“ಸರಿ, ಈಗೆಷ್ಟು ದುಡ್ಡು ಬೇಕಾಗಿತ್ತು..?”
“ಐನೂರು ಕೊಡಿ. ಹಸುಗಳಿಗೆ ಹಿಂಡಿ ತರಬೇಕು”
ಹಣ ತರಲು ಮುಕುಂದ ಒಳಗೆ ಹೋದ.
ಗೋಪಿಯ ಮಾತಿನಲ್ಲಿ ಅಲಮೇಲುಗೆ ವಿಶ್ವಾಸ ಮೂಡಿತ್ತು. ಆತ ಖಂಡಿತಾ ಕಾರ್ಪೊರೇಟರನ್ನು ಕರೆದುಕೊಂಡು ಬಂದೇ ಬರುತ್ತಾನೆ ಎಂದು ನಂಬಿದಳು. ಅವಳ ಪಾಲಿಗೆ ದುಃಸ್ವಪ್ನವಾಗಿದ್ದ ಆ ಎರಡು ಸಿಮೆಂಟು ಪೈಪುಗಳು ಈಚೆ ಬಂದು ಮಳೆಗಾಲದ ರಾತ್ರಿಗಳಲ್ಲಿ ತಾವು ನೆಮ್ಮದಿಯಿಂದ ಮಲಗುವ ಕನಸು ಕಾಣುತ್ತಾ ನಿಂತಳು ಅಲಮೇಲು!!
ತಾನು ಐನೂರು ಕೇಳುವ ಬದಲು ಸಾವಿರ ಕೇಳಿದ್ದರೂ ಅಯ್ನೋರು ಕೊಡುತ್ತಿದ್ದರು, ತಾನು ಕಡಿಮೆ ಕೇಳಿದೆ. ಇನ್ನೂ ಐನೂರು ಬೇಕಲ್ಲ ಅದನ್ನು ಹೇಗೆ ಹೊಂದಿಸಲು ಎಂದು ಗೋಪಿ ಯೋಚಿಸುತ್ತಾ ನಿಂತಿದ್ದ!
ಇಷ್ಟೆಲ್ಲಾ ಅವ್ಯವಸ್ಥೆಗೆ ಕಾರಣನಾದ ಹಿಂದಿನ ಮನೆಯಾತ ಬಾಲ್ಕನಿಯಲ್ಲಿ ಮಿಂಚಿ ಮರೆಯಾದ!





0 Comments