ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಹುಲ್ ದ್ರಾವಿಡ್ ತಮ್ಮ ಇಮೇಜ್ ಕಳಚಿಕೊಂಡರು..

ಕೃಷ್ಣ ಭಟ್

ಎರಡು ವಾರದ ಹಿಂದೆ ‘ಕ್ರೆಡ್’ ಇನ್ಶೂರೆನ್ಸ್ ನ ಒಂದು ಜಾಹೀರಾತು ಎಲ್ಲರ ಗಮನ ಸೆಳೆಯಿತು. ಅದರಲ್ಲಿ ಆಟ ಮತ್ತು ಬದುಕಿನಲ್ಲಿ ಅತ್ಯಂತ ತಾಳ್ಮೆಯಿಂದ ಜೀವಿಸುವ ರಾಹುಲ್ ದ್ರಾವಿಡ್ ತಾಳ್ಮೆಗೆಟ್ಟು ನಾನು ಇಂದ್ರಾ ನಗರದ ಗೂಂಡಾ ಎಂದು ಅಬ್ಬರಿಸ್ತಾ ಇದ್ರು, ವಾಹನದ ಕನ್ನಡಿ ಒಡೆದು ಹಾಕ್ತಾ ಇದ್ರು.

ಈ ಜಾಹೀರಾತಿಗೂ ಕಂಪನಿಯ ಉತ್ಪನ್ನಕ್ಕೂ ಏನು ಸಂಬಂಧ ಅಂತ ಹೆಚ್ಚಿನವರಿಗೆ ಅರ್ಥ ಆಗಿಲ್ಲ. ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿದ್ದೂ ಇಲ್ಲ. ಎಲ್ಲ ಜನರು ಗಮನಿಸಿದ್ದು ಮುಖ್ಯವಾಗಿ ರಾಹುಲ್ ದ್ರಾವಿಡ್ ಅವರ ಹೊಸ ಅವತಾರವನ್ನು. ಹೆಚ್ಚಿನವರು ಅನಿರೀಕ್ಷಿತ ಶಾಕ್ ಅನಿಸಿದರೂ ಸೂಪರ್ಬ್ ಆಗಿತ್ತು ಎಂದಿದ್ದಾರೆ. ರಾಹುಲ್ ಅಪ್ಪಟ ಅಭಿಮಾನಿಗಳಿಗೆ ಕೆಲವರಿಗೆ ಇದನ್ನು ಅರಗಿಸಿಕೊಳ್ಳಲು ಕಷ್ಟ ಆಗ್ತಿದೆ. ಇಷ್ಟೆಲ್ಲ ಒಳ್ಳೆ ಹೆಸರಿರುವ, ಇಮೇಜ್ ಹೊಂದಿರುವ ದ್ರಾವಿಡ್ ದುಡ್ಡಿನಾಸೆಗೆ ಗೂಂಡಾ ಆಗ್ಬೇಕಿತ್ತಾ ಅಂತ ಮಾತಾಡಿಕೊಳ್ತಾ ಇದಾರೆ. ಬೇಕಿರ್ತದೆ ಇಂಥದ್ದೊಂದು!

ಎಲ್ಲರ ದೃಷ್ಟಿಯಲ್ಲೂ ರಾಹುಲ್ ಈಸ್ ಎ ವೆರಿ ಗುಡ್ ಬಾಯ್. ಸಿನಿಮಾದಲ್ಲೂ ಅವನನ್ನು ವಿಲನ್ ಆಗಿ ಯಾರೂ ನೋಡಲು ಬಯಸಲಾರರು. ಇದಕ್ಕೆ ಕಾರಣ ಇಮೇಜ್. ಸಾಮಾಜಿಕವಾಗಿ‌ ನಾವು ಕಟ್ಟಿಕೊಳ್ಳುವ ಇಮೇಜ್ ಇದ್ಯಲ್ವಾ… ಅದೊಂದು ಮೌಲ್ಡ್ ತರ ಫಿಕ್ಸ್ ಆಗಿರ್ತದೆ. ಸಾಮಾನ್ಯವಾಗಿ ಪ್ರತಿಯೊಬ್ಬರೂ ಕಷ್ಟಪಟ್ಟು ಇಂತಹುದೊಂದು ಇಮೇಜ್ ಸೃಷ್ಟಿ ಮಾಡಿಕೊಂಡಿರ್ತಾರೆ. ತೀರಾ ಕೆಲವರಿಗೆ ಸಹಜವಾಗಿ ಬಂದಿರಲೂಬಹುದು. ಹೀಗೆ ಬಿಲ್ಡ್ ಮಾಡುವ ಹಂತದಲ್ಲಿ ಅದೆಷ್ಟೋ ಆಸೆ, ಆಕಾಂಕ್ಷೆಗಳನ್ನು ಅದುಮಿಕೊಂಡಿರ್ತಾರೆ. ಇಮೇಜ್ ಗೆ ಹೊಡೆತ ಬಿದ್ದೀತು ಅಂತ.

ಸಣ್ಣ ವಯಸ್ಸಿನಲ್ಲಿ ಲೆಕ್ಚರರ್ ಆದ ಫ್ರೆಂಡ್ ಒಬ್ರು ಹೇಳ್ತಾ ಇದ್ರು. ನನ್ನ ಮನಸಿಗೆ ಇಷ್ಟ ಆಗೋ ಆಗೆ ಡ್ರೆಸ್ ಮಾಡ್ಲಿಕೆ ಆಗಲ್ಲ, ಬಿಂದಾಸ್ ಆಗಿ ಇರಲಾಗದು, ಎಲ್ಲೆಂದರಲ್ಲಿ ಓಡಾಡ್ಲಿಕ್ಕಿಲ್ಲ. ಎಲ್ಲಿ ನನ್ನ ಸ್ಟೂಡೆಂಟ್ಸ್ ಆ ಅವತಾರದಲ್ಲಿ ನೋಡಿ ಬಿಡ್ತಾರೋ ಅನ್ನೋ ಭಯ. ನನ್ನದೇ ಕ್ಲಾಸಿನ ಬೇರೆ ಹುಡುಗಿಯರು ಅಷ್ಟೆಲ್ಲ ಬಿಂದಾಸ್ ಆಗಿರೋದು ನೋಡಿ ಆಸೆ ಆಗ್ತದೆ, ನಾನು ಆಸೆಗಳನ್ನೆಲ್ಲ ಅದುಮಿ ಕೂತಿದ್ದೇನೆ ಅಂತ.

ಯಾವುದೋ ಕಾರಣಕ್ಕೆ ತುಂಬ ಒಳ್ಳೆಯವರು ಅನಿಸಿ ಕೊಂಡೋರು ಕಷ್ಟಪಟ್ಟು ಅದನ್ಬು ಉಳಿಸಿಕೊಳ್ಳೋ ಬದ್ಧತೆಗೆ ಸಿಕ್ಕಿ ಬೀಳೋ ಹಾಗೆ.. ಒಂದು ಕೋಟೆ ಕಟ್ಟಿಕೊಳ್ತದೆ. ಅಂಥ ಚಕ್ರವ್ಯೂಹದಿಂದ ಹೊರಬರಬೇಕು ಅಂತ ಮನಸು ಕಾಯ್ತಾ ಇರ್ತದೆ. ವರ್ಷಾಂತರಗಳಿಂದ ನಿತ್ಯ ಇನ್ ಮಾಡೋನಿಗೆ ಒಂದು ಸಾರಿ ಟೀ ಶರ್ಟ್ ಹಾಕೊಂಡು ಆಫೀಸಿಗೆ ಹೋಗೋಕೆ ಎಷ್ಟು ಕಷ್ಟ ಅಂತ ಅನುಭವಿಸಿದವರಿಗೇ ಗೊತ್ತು. ಆದರೆ, ಇವತ್ತಲ್ಲ ನಾಳೆ ಅದನ್ನು ಸಾಧಿಸ್ಬೇಕು ಅಂತ ಒಳಮನಸು ಹೇಳ್ತಾ ಇರ್ತದೆ.

ರಾಹುಲ್ ದ್ರಾವಿಡ್ ಕೂಡಾ ಇಂತಹುದೊಂದು ಮೇಕ್ ಓವರ್ ಬಯಸಿಕೊಂಡೇ ಬಂದಿರಬಹುದು. ಅವಕಾಶ ಸಿಕ್ಕಾಗ ಒಳಗೆ ಬಚ್ಚಿಟ್ಟುಕೊಂಡ ಒಳಮನಸು ಸಿಡಿದು ಬಿಟ್ಟಿರಬೇಕು. ಜಗತ್ತಿನ ಪರಮ ಗೌರಮ್ಮ ಎನಿಸಿಕೊಂಡಿದ್ದ ಚಿತ್ರ ನಟಿ, ನಿರೂಪಕಿ ಅಪರ್ಣಾ ಅವರೊಳಗಿನ ಹಾಸ್ಯ ಪ್ರಜ್ಞೆಯ ವಿರಾಟ್ ರೂಪ ಬಯಲಾದದ್ದು ಕೂಡಾ ಇಂಥ ಸನ್ನಿವೇಶದಲ್ಲೆ.

ಮದುವೆಯಾದ ಕೂಡಲೇ, ಉದ್ಯೋಗ ಸಿಕ್ಕಿದ ಕೂಡಲೇ ಒಮ್ಮೆಗೇ ವರ್ತನೆಯನ್ನು ಚೇಂಜ್ ಓವರ್, ಮೇಕಪ್ ನ್ನು ಮೇಕ್ ಓವರ್ ಮಾಡಿಕೊಳ್ಳುವ ಹೆಣ್ಮಕ್ಕಳಲ್ಲೂ ಕಾಣೋದು ಇಂತಹುದೊಂದು ಇಮೇಜ್ ಬದಲಾವಣೆಯ ಪ್ರಯತ್ನ‌ ಅನಿಸ್ತದೆ. ನಿಜವೆಂದರೆ, ಹೀಗೊಂದು ಬದಲಾವಣೆಗೆ ಎಲ್ಲರ ಮನಸೂ ತುಡೀತಾ ಇರ್ತದೆ ಅಲ್ವಾ?

‍ಲೇಖಕರು Avadhi

6 May, 2021

1 Comment

  1. Krishna bhat

    ಧನ್ಯವಾದಗಳು ಸರ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading