ರಾಮನನ್ನು ಹುಡುಕುತ್ತಾ, ಕಬೀರನ ದಾರಿಯಲ್ಲಿ…

ಜಿ ಪಿ ಬಸವರಾಜು

ಗೋಡ್ಸೆಯ ಗುಂಡುಗಳು ತಮ್ಮ ಎದೆಯನ್ನು ಹೊಕ್ಕಾಗ ಗಾಂಧೀಜಿ ಬಾಯಿಂದ ಹೊರಬಿದ್ದ ಶಬ್ದ: ‘ಹೇ ರಾಮ್!’
ರಾಮ ಗಾಂಧೀಜಿಗೆ ಒಂದು ನಂಬಿಕೆಯಾಗಿದ್ದ; ಆದರ್ಶವಾಗಿದ್ದ; ಮೌಲ್ಯವಾಗಿದ್ದ. ರಾಮ, ಅಲ್ಲಾ, ಈಶ್ವರ -ಈ ಮೂರೂ ಪದಗಳು ಗಾಂಧೀಜಿಗೆ ಅದಲುಬದಲು ಮಾಡಬಹುದಾಗಿದ್ದ ಸತ್ಯಗಳಾಗಿದ್ದವು. ‘ನನ್ನ ಕಲ್ಪನೆಯ ರಾಮ ಈ ಭೂಮಿಯ ಮೇಲೆ ಜೀವಿಸಿದ್ದನೋ ಇಲ್ಲವೋ, ಆದರೆ ‘ರಾಮರಾಜ್ಯ’ ಎಂಬುದು ನನ್ನ ಆದರ್ಶದ ರಾಜ್ಯ. ಈ ರಾಜ್ಯದಲ್ಲಿ ಎಲ್ಲರೂ ಸಮಾನರು; ಎಲ್ಲರಿಗೂ ಸಮಾನ ಹಕ್ಕುಗಳು. ನ್ಯಾಯವೆಂಬುದು ಈ ರಾಜ್ಯದಲ್ಲಿ ದುಬಾರಿಯಲ್ಲ; ಕಾಲನುಂಗುವ ಕ್ರಿಯೆಯೂ ಅಲ್ಲ. ಅದು ನಿಜವಾದ ಪ್ರಜಾಪ್ರಭುತ್ವ’ ಎಂದು ಗಾಂಧೀಜಿ ಹೇಳುತ್ತಿದ್ದರು. ರಾಮರಾಜ್ಯ ಎಂದರೆ ಹಿಂದೂ ರಾಜ್ಯವಲ್ಲ; ಅದು ದೈವಿಕ ರಾಜ್ಯ, ದೇವರ ರಾಜ್ಯ-ಎಂಬುದೂ ಅವರ ಮಾತೇ.
ಬಾಬಾ ಸಾಹೇಬ ಅಂಬೇಡ್ಕರ್ ಅವರಿಗೆ ರಾಮ ಹಾಗಿರಲಿಲ್ಲ. ಶೂದ್ರ ಶಂಭೂಕನನ್ನು ಕೊಂದವನು ರಾಮ; ವಾಲಿಯನ್ನು ಮೋಸದಿಂದ ಹತಮಾಡಿದವನು ರಾಮನೇ; ತುಂಬು ಬಸಿರಿ ಸೀತೆಯನ್ನು ಕಾಡಿಗಟ್ಟಿದ ನಿರ್ದಯಿ ರಾಮ. ಜಾತಿವ್ಯವಸ್ಥೆಯ ಸುಡು ಬಾಣಲೆಯಲ್ಲಿ ಬೆಂದ ಅಂಬೇಡ್ಕರ್ ಅವರಿಗೆ ರಾಮ ಭಿನ್ನವಾಗಿಯೇ ಕಂಡ. ಅದು ಅವರ ಅನುಭವ; ನೋಟ.
ಲೋಹಿಯಾ ರಾಮನನ್ನು ಸಂಸ್ಕೃತಿಯ ನೆಲೆಯಲ್ಲಿ ನಿಂತು ಗ್ರಹಿಸಲು ನೋಡಿದರು. ಅಲ್ಲಿ ರಾಮನಿಗೆ ಇರಬಹುದಾದ ಅರ್ಥದ ಪದರುಗಳನ್ನು ಬಿಡಿಸಿ ನೋಡಲು ಪ್ರಯತ್ನಿಸಿದರು. ಅವರ ಗ್ರಹಿಕೆ ಇನ್ನೊಂದು ನೆಲೆಯದು.
ಇವತ್ತು ರಾಮನನ್ನು ನೋಡುವುದು ಸುಲಭವಲ್ಲ. ಎಷ್ಟು ಸೂಕ್ಷ್ಮ ಮತ್ತು ಸಂಕೀರ್ಣ ಸನ್ನಿವೇಶದಲ್ಲಿ ನಾವಿಂದು ಬದುಕುತ್ತಿದ್ದೇವೆಂದರೆ ‘ರಾಮ’ ಎಂದ ಕೂಡಲೇ ಸಿಟ್ಟಿಗೇಳುವವರಿದ್ದಾರೆ; ರಾಮಸೇನೆಯನ್ನು ಕಟ್ಟಿ ರಕ್ತಹರಿಸಲು ತುದಿಗಾಲಲ್ಲಿ ನಿಂತವರೂ ಇದ್ದಾರೆ. ರಾಮನ ಹೆಸರಿನಲ್ಲಿ ಧರ್ಮಗಳ ಕೋಟೆ ಕಟ್ಟುವವರಿದ್ದಾರೆ. ‘ರಾಮ’ನನ್ನು ಬಿಕರಿಗಿಟ್ಟು ಮಾರಿ, ಹಣ ಎಣಿಸುವವರಿದ್ದಾರೆ. ರಾಮ ಅಹಿಂಸೆಯ ಪ್ರತೀಕವೇ, ರಾಮ ನ್ಯಾಯ ಧರ್ಮಗಳ ಪರವೇ? ಇಂಥ ಪ್ರಶ್ನೆಯನ್ನು ಕೇಳಿಕೊಳ್ಳಲಾಗದ ಸ್ಥಿತಿ ನಮ್ಮದು.
ರಾಮನನ್ನು ಹುಡುಕುತ್ತ ಹೊರಡುವವರಿಗೆ ಇನ್ನೋ ಕೆಲವು ಪ್ರಶ್ನೆಗಳಿವೆ: ರಾಮ ಸಗುಣನೇ, ನಿಗರ್ುಣನೇ; ಇತಿಹಾಸ ಪುರುಷನೇ, ಪೌರಾಣಿಕನೇ? ಅಥವಾ ಸುಡುವ ವರ್ತಮಾನವೇ? ಅಥವಾ ರಾಮ ನಂಬಿಕೆಯೇ, ಕಲ್ಪನೆಯೇ?

ಹೋಗಲಿ, ರಾಮ ಎಂಬುವವನು ಎಲ್ಲಿದ್ದಾನೆ?
ತಮ್ಮ ಕ್ಯಾಮೆರಾವನ್ನು ಹಿಡಿದುಕೊಂಡು ರಾಮನನ್ನು ಹುಡುಕಲು ಹೊರಡುವ ಶಬನಂ ವೀರಮಣಿ ಎಂಬ ಸಾಕ್ಷ್ಯಚಿತ್ರ ತಯಾರಿಕೆಯ ಕುತೂಹಲಿ, ಭೂಪಾಲ, ಇಂದೂರ್, ದಿಲ್ಲಿ, ಮುಂಬೈ, ಪೂನಾ, ಕಾನ್ಪುರ, ಬಿಕನೇರ್, ವಾರಣಾಸಿ, ಪೋಖ್ರಾನ್, ಅಮೃತಸರ, ಲಾಹೋರ್, ಅಯೋಧ್ಯೆ ಹೀಗೆ ಎಲ್ಲೆಲ್ಲೋ ಅಲೆಯುತ್ತಾರೆ; ರಾಮ ಕಂಡಾನೆಂದು ಹುಡುಕುತ್ತಾರೆ.
ಅಯೋಧ್ಯೆಗೆ ಬಂದ ಕೂಡಲೇ ಕ್ಯಾಮೆರಾದ ಉನ್ಮಾದ ಹೆಚ್ಚಾಗುತ್ತದೆ. ಅಲ್ಲಿ ವಾದ ವಿವಾದಗಳು ಕಾಣಿಸುತ್ತವೆ. ಮಂದಿರ ಮಸೀದಿಗಳು ಕಾಣಿಸುತ್ತವೆ. ಪುರಾಣ ಇತಿಹಾಸವಾಗುತ್ತದೆ; ಇತಿಹಾಸ ವರ್ತಮಾನವಾಗುತ್ತದೆ; ರಾಮ ಬಿಕರಿಗಿಟ್ಟ ಸರಕಾಗಿರುವುದನ್ನೂ ಇಲ್ಲಿ ನೋಡಬಹುದು. ಅಯೋಧ್ಯಯಲ್ಲಿ ಮಸೀದಿಯನ್ನು ಉರುಳಿಸಿದ ಚಿತ್ರಗಳು, ವೀಡಿಯೋಗಳು ಬಿರುಸಿನಿಂದ ಮಾರಾಟವಾಗುತ್ತವೆ. ಕ್ಯಾಮೆರಾ ಮುಂದೆ ತಾಕತ್ತಿನ ಮಾತುಗಳನ್ನು ಆಡುವವರು ಬಂದುಹೋಗುತ್ತಾರೆ. ಧರ್ಮ, ಧರ್ಮಯುದ್ಧ, ನಂಬಿಕೆ, ಅಹಂಕಾರ, ಹಿಂಸೆ, ರಣರಂಗ ಎಲ್ಲವೂ ರಾಮನ ಹೆಸರಿನಲ್ಲಿಯೇ ಎದುರಾಗುತ್ತವೆ.
ಅಯೋಧ್ಯೆ ರಾಮಜನ್ಮಭೂಮಿಯಲ್ಲವೇ?
ರಾಮನಿಗೆ ಜನ್ಮವೂ ಇಲ್ಲ; ಭೂಮಿಯೂ ಇಲ್ಲ. ಅವನು ಭೂಮಿ-ಆಕಾಶ, ಊರು-ರಾಜ್ಯ, ಗಡಿ-ಗುಡಿ, ಮೂತರ್ಿ-ಪೂಜೆ ಹೀಗೆ ಎಲ್ಲವನ್ನೂ ಮೀರಿದವನು. ಈ ಅತೀತನನ್ನು ಹುಡುಕುವುದು ಎಲ್ಲಿ?
ಶಬನಂ ದಾರಿ ಹುಡುಕಿಕೊಳ್ಳುತ್ತಾರೆ. ಕಬೀರನ ಬಳಿಗೆ ಬರುತ್ತಾರೆ. ರಾಮನಿಲ್ಲದ ಜಾಗವಿಲ್ಲ ಎನ್ನುತ್ತಾನೆ ಕಬೀರ. ರಾಮ ಕೃಷ್ಣ ಅಲ್ಲಾ ಎಲ್ಲವೂ ಒಂದೇ; ಅದು ರಾಮ; ಅದು ಬೆಳಕು. ರಾಮನಿಗಾಗಿ ಎಲ್ಲೆಲ್ಲಿಯೋ ಹುಡುಕಬೇಡ; ರಾಮ ನಿನ್ನಲ್ಲಿಯೇ ಇದ್ದಾನೆ. ನಿನ್ನಲ್ಲಿಯೇ ಹುಡುಕಿಕೋ. ಪ್ರತಿ ಆತ್ಮದಲ್ಲಿಯೂ ರಾಮನಿದ್ದಾನೆ.
ರಾಮನಿಗೆ ಆಕಾಶ-ಭೂಮಿಗಳ ತಡೆಗಳಿಲ್ಲ; ಅವನು ಸಗುಣನೂ ಅಲ್ಲ, ನಿಗರ್ುಣನೂ ಅಲ್ಲ; ಅವನೂ ಇತಿಹಾಸವೂ ಅಲ್ಲ, ಪುರಾಣವೂ ಅಲ್ಲ; ಅವನು ನಿಗಿನಿಗಿ ವರ್ತಮಾನ; ಎಲ್ಲವನ್ನೂ ತುಂಬಿಕೊಂಡ ವರ್ತಮಾನ. ಕಬೀರನೂ ರಾಮನ ಹಾಗೆಯೇ ಎಲ್ಲವನ್ನೂ ದಾಟಿದವನು; ಮೀರಿದವನು.
15ನೇ ಶತಮಾನದ ಅನುಭಾವಿ ಕಬೀರ ತೋರುವ ದಾರಿ ರಾಮನ ಬಳಿಗೆ ನಡೆಯುತ್ತದೆ. ಕಬೀರನದೇ ಒಂದು ಪಂಥ. ಈ ಪಂಥದಲ್ಲಿ ನಡೆಯುವವರ ಸಂಖ್ಯೆ ಇವತ್ತು ಭಾರತದಲ್ಲಿ ಅದೆಷ್ಟೋ ಲಕ್ಷಗಳನ್ನು ದಾಟಿದೆ. ಆದರೆ ಕಬೀರ ಎಲ್ಲ ಪಂಥಗಳನ್ನು ಮೀರಿದವನು. ಕಾಲ ದೇಶಗಳನ್ನು ಮೀರಿದವನು; ಸೀಮೆಗಳನ್ನು ಮೀರಿದ ನಿಸ್ಸೀಮ.
ಆದರೂ ಶಬನಂ ತಮ್ಮ ಕ್ಯಾಮೆರಾದಲ್ಲಿ ಕಬೀರನನ್ನು ಮತ್ತು ರಾಮನನ್ನು ಹಿಡಿಯಲೇ ಬೇಕು. ಅವನು ನಿಗರ್ುಣನಾದರೆ ಕ್ಯಾಮೆರಾ ಹಿಡಿಯಲಾರದು. ಕಬೀರನ ತತ್ವವನ್ನು ಸಾರುವವರು, ಹಾಡುವವರು ಸಗುಣರೇ. ಇವರ ಸುತ್ತಲೇ ಕ್ಯಾಮೆರಾ ಓಡುತ್ತದೆ. ಭಾರತದಲ್ಲಿ ಕಬೀರನನ್ನು ಹಾಡುವವರು ಹೆಚ್ಚಾಗಿ ತಳವರ್ಗಕ್ಕೆ ಸೇರಿದವರು. ಯಾವ ಧರ್ಮವೂ ಮಾನ್ಯಮಾಡದ, ಎಲ್ಲಿಯೂ ಪ್ರವೇಶವಿಲ್ಲದ, ಎಲ್ಲಿಯೂ ಮುಟ್ಟಿ ಮಾತನಾಡಿಸದ ಜನರನ್ನು ಕಬೀರ ಮುಟ್ಟುತ್ತಾನೆ; ಮಾತನಾಡಿಸುತ್ತಾನೆ; ಹಾಡಿಸುತ್ತಾನೆ; ಮೋಡಿಮಾಡಿ ಮೈಮರೆಸುತ್ತಾನೆ. ಅವರಿಗೆಲ್ಲ ಕಬೀರ ಒಂದು ಧರ್ಮವಲ್ಲ; ವೃತ್ತಿಯೂ ಅಲ್ಲ; ಹಣಗಳಿಸುವ ತಂತ್ರವಲ್ಲ. ಅವನು ಒಂದು ಮೌಲ್ಯ, ಅವನು ಒಂದು ನಂಬಿಕೆ. ಬದುಕಿನ ಗುರಿ ಮುಟ್ಟಿಸಬಲ್ಲ ಸಾಧನ ಕಬೀರ. ಕಬೀರನಲ್ಲಿ ರಾಮನೂ ಇರುವುದರಿಂದ ಕಬೀರನನ್ನು ಮುಟ್ಟಿದರೆ ರಾಮ ಸಿಕ್ಕ ಹಾಗೆಯೇ.
ಕಬೀರ ಮಂದಿರ ಕಟ್ಟಿ ಕುಳಿತವನಲ್ಲ. ಅವನು ಬೀದಿಗೆ ಇಳಿದವನು; ಸಂತೆಯಲ್ಲಿ ನಿಂತವನು. ಎಲ್ಲರ ನಡುವೆ ನಿಂತವನ ಸವಾಲುಗಳು ಹಲವು. ಮೊದಲು ತನ್ನ ಸುತ್ತ ಇರುವವರನ್ನು ಆತ ಅರಿಯಬೇಕು. ಅವರ ನೋವು, ಸಂಕಟ, ಸುಖಗಳಿಗೆ ಮಿಡಿಯಬೇಕು. ಅವರನ್ನು ಮುಟ್ಟಿ ಮಾತಾಡಿಸಬೇಕು. ಮಾತಾಡಿಸಲು ಅವರದೇ ಭಾಷೆ ಬೇಕು. ಅವರ ಭಾವ ತಿಳಿಯಬೇಕು. ಎದೆಯಾಳಕ್ಕೆ ಇಳಿದು ಒಂದಾಗಬೇಕು. ಕಬೀರ ಇದ್ದದ್ದೇ ಹಾಗೆ; ಎಲ್ಲರ ನಾಡಿಮಿಡಿತದ ಹಾಗೆ.
ಸೂಫಿಗಳು, ಸಂತರು, ಕಾಪಾಲಿಕರು, ತಾಂತ್ರಿಕರು, ವೈಷ್ಣವ ಪಂಥದ ಸಾಧಕರು ಹೀಗೆ ಎಲ್ಲ ಕಡೆಯಿಂದಲೂ ತನಗೆ ಬೇಕಾದುದನ್ನು ಪಡೆದುಕೊಂಡವನು ಕಬೀರ. ಅವನ ಹುಟ್ಟಿನ ಸುತ್ತಲೇ ಅನೇಕ ಕತೆಗಳಿವೆ. ಒಂದೊಂದು ಕತೆಯೂ ಭಿನ್ನ. ಹುಟ್ಟು ಯಾವುದೇ ಇರಲಿ, ಕಬೀರ್ ಎಲ್ಲರನ್ನೂ ತನ್ನ ಜೊತೆಯಲ್ಲಿ ಮುನ್ನಡೆಸಲು ನೋಡಿದ. ಧರ್ಮ, ಜಾತಿ, ಪಂಥ ಯಾವುದೂ ಅವನನ್ನು ಬಂಧಿಸಲಿಲ್ಲ. ಈ ಕಾರಣಕ್ಕಾಗಿಯೇ ಕಬೀರ್ ಎಲ್ಲ ಹಾಡುಗಾರರಿಗೆ ಮೆಚ್ಚು. ಸೂಫಿಗಳು, ಜಾನಪದ ಗಾಯಕರು, ಖವ್ವಾಲಿ ಹಾಡುವವರು ಎಲ್ಲರಲ್ಲೂ ಕಬೀರನ ಹಾಡುಗಳಿವೆ; ಕಬೀರನೂ ಅವರ ಎದೆಯಲ್ಲಿ ಇದ್ದಾನೆ.
ಕಬೀರನನ್ನು ಬಿಚ್ಚುಗತ್ತಿಗೆ ಹೋಲಿಸುವವರಿದ್ದಾರೆ. ಅವನ ಹೇಳುವುದು ಸತ್ಯವನ್ನೇ. ಸತ್ಯ ಯಾವಾಗಲೂ ಇಬ್ಬಾಯ ಖಡ್ಗವೇ. ಅದು ಬರುತ್ತಲೂ ಕೊಯ್ಯುವುದು; ಹೋಗುತ್ತಲೂ ಕೊಯ್ಯುವುದು. ಕಬೀರ್ ತಾನು ಕಂಡದ್ದನ್ನು, ಅಂದರೆ ಸತ್ಯವನ್ನು ಹೇಳಿದ.
ಕಬೀರನನ್ನು ಆವಾಹಿಸಿಕೊಂಡವರಲ್ಲಿ ಬಹುಪಾಲು ಹೆಚ್ಚು ಓದಿದವರಲ್ಲ; ಪುಸ್ತಕಗಳ ಮೂಲಕ ಅವರು ಕಬೀರನನ್ನು ಹುಡುಕಿದವರಲ್ಲ. ಅವನ ಕಾವ್ಯದ ಮೂಲಕ, ಹಾಡುಗಳ ಮೂಲಕ ಕಬೀರನನ್ನು ಒಳಗೆ ಬಿಟ್ಟುಕೊಂಡವರು. ಹಾಡುತ್ತ, ಹಾಡುತ್ತ ಕಬೀರನನ್ನು ತಿಳಿಯಲು ನೋಡಿದವರು; ಇತರರಿಗೆ ತಿಳಿಸಲು ನೋಡಿದವರು. ಬದುಕಿನಲ್ಲಿಯೇ ಕಬೀರನನ್ನು ಹುಡುಕಿಕೊಂಡವರು. ಕಬೀರನ ಮಾತುಗಳ ಅರ್ಥವನ್ನು, ತತ್ವವನ್ನು ಸರಳ ರೀತಿಯಲ್ಲಿಯೇ ಅರಿತವರು. ಅವರಿಗೆ ಬದುಕು ಬೇರೆಯಲ್ಲ; ಕಬೀರ ಬೇರೆಯಲ್ಲ. ಇಂಥವರು ಎಲ್ಲೆಲ್ಲೂ ಸಿಗುತ್ತಾರೆ: ಜಾನಪದ ಗಾಯಕರು, ಖವ್ವಾಲಿ ಹಾಡುಗಾರರು, ಸೂಫಿ ಗೀತಕಾರರು ಹೀಗೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಹಾಡುವವರಲ್ಲೂ ಕಬೀರ ಸಿಕ್ಕುತ್ತಾನೆ. ಕಬೀರನ ಭಜನೆಗಳನ್ನು ಹಾಡದ ಶಾಸ್ತ್ರೀಯ ಸಂಗೀತಗಾರರೇ ಇಲ್ಲವೇನೋ ಎನ್ನುವಂಥ ಸ್ಥಿತಿ ಇವತ್ತು ಇದೆ. ಆದರೆ ಕಬೀರನನ್ನು ಹಿಂದೂಸ್ತಾನೀ ಸಂಗೀತ ಕ್ಷೇತ್ರಕ್ಕೆ ಕರೆದುತಂದವರು ಕುಮಾರ ಗಂಧರ್ವ. 1970ರ ದಶಕದಲ್ಲಿ, ಐದು ವರ್ಷಗಳ ತಮ್ಮ ಮೌನ-ಧ್ಯಾನಗಳಲ್ಲಿ ಕಬೀರನನ್ನು ಕಂಡುಕೊಂಡು, ಅವನನ್ನು ಸ್ವಾಗತಿಸಿ ಹಾಡಿದವರು ಕುಮಾರ ಗಂಧರ್ವರೇ. ನಂತರ ಎಲ್ಲೆಲ್ಲೂ ಕಬೀರನೇ ಕಾಣಿಸಿಕೊಂಡ.
ಕಬೀರನನ್ನು ಕೇಳಿದರೆ ಅಲ್ಲಿ ರಾಮ ಮೂಡುತ್ತಾನೆ; ಹೊಸ ಬೆಳಕು ಮೂಡುತ್ತದೆ.

‍ಲೇಖಕರು G

March 16, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

3 ಪ್ರತಿಕ್ರಿಯೆಗಳು

  1. Gopaala Wajapeyi

    ಕಬೀರ ಸ್ಥಾವರನಲ್ಲ, ಜಂಗಮ. ಹರಿವ ತೊರೆಯ ಹಾಗೆ, ಬೀಸು ಗಾಳಿಯ ಹಾಗೆ, ದೊಂದಿಯ ಬೆಳಕಿನ ಹಾಗೆ.
    ಆತನ ‘ದೋಹೆ’ಗಳಂತೂ ನಿತ್ಯವೂ ಹೊಸ ಅರ್ಥ ಕೊಡುವಂಥವು.

    ಪ್ರತಿಕ್ರಿಯೆ
  2. ಅಕ್ಕಿಮಂಗಲ ಮಂಜುನಾಥ

    ಲೇಖನ ತುಂಬಾ ಚೆನ್ನಾಗಿದೆ.

    ಪ್ರತಿಕ್ರಿಯೆ
  3. NS Shankar

    ಗೋಡ್ಸೆಯ ಗುಂಡುಗಳು ಬಾಪೂಜಿಯ ಎದೆ ಹೊಕ್ಕಾಗ ಅವರು ಕೇವಲ ‘ಓ’ ಎಂದು ಉದ್ಗರಿಸಿ ಕುಸಿದು ಬಿದ್ದರೆಂದು ಆಗ ಅವರ ಜೊತೆಯಲ್ಲಿದ್ದವರು ಹೇಳಿದ್ದಾರೆ. ನಂತರದವರು ನಾಟಕೀಯ ಪರಿಣಾಮಕ್ಕಾಗಿ ಗಾಂಧೀಜಿ ‘ಹೇ ರಾಂ’ ಎಂದರು ಎಂಬ ಕಥೆ ಹಬ್ಬಿಸಿದಂತೆ ತೋರುತ್ತದೆ. ಇದು ಇಮಗೂ ಗೊತ್ತಿರುವ ಸಂಗತಿಯೇ ಅಂದುಕೊಂಡಿದ್ದೇನೆ ಬಸವರಾಜ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: