ರಾಜ್‌ ವರ್ಸಸ್‌ ವಿಷ್ಣು…

ಕೃಷ್ಣಮೂರ್ತಿ ಬಿಳಿಗೆರೆ

ಎಪ್ಪತ್ತು ಎಂಬತ್ತರ ದಶಕಗಳು ರಾಜ್‌ಕುಮರ್‌ ಮತ್ತು ವಿಷ್ಣುವರ್ಧನ್‌ ಮಾಮೇರಿ ಮಿಂಚುತ್ತಿದ್ದ ಕಾಲ. ಆಗ ತಾನೆ ಅಭಿಮಾನಿ ಸಂಘಗಳು ಹುಟ್ಟಿ  ಹೀರೋಗಳ ಹುಟ್ಟು ಹಬ್ಬದ ದಿನವನ್ನು ಹುಡುಕಿ ಭರ್ಜರಿ ಆಚರಣೆ ಶುರು ಮಾಡಿದ್ದವು. ಅವರವರ ಯೋಗ್ಯತಾನುಸಾರ ಕಟೌಟ್‌ಗಳು ರಾರಾಜಿಸುತ್ತಿದ್ದವು. ರಾಜ್‌ ಮತ್ತು ವಿಷ್ಟು ಕಟೌಟ್‌ಗಳು ಆಕಾಶದೆತ್ತರಕ್ಕೆ ಇರಬೇಕಾಗಿದ್ದುದು ಕಡ್ಡಾಯವಾಗಿತ್ತು. ಹೂವಿನ ಹಾರ ಸೇಬಿನ ಹಾರಗಳಿಂದ ಸಿಂಗಿರಿಸುತ್ತಿದ್ದರು. ಎತ್ತರೆತ್ತರದ ಕಟೌಟ್‌ ಗಳಿಗೆ ಕ್ರೇನ್‌ ಮೂಲಕ ಹಾರ ಹಾಕಿ ಹಾಲೆರೆಯುವ ಪದ್ದತಿ ಜಾರಿಗೆ ಬಂತು.    ಆಸ್ಪತ್ರೆಗಳಿಗೆ ನುಗ್ಗಿ  ರೋಗಿಗಳಿಗೆ ಹಣ್ಣು 

ಹಂಪಲು ಕೊಡುವುದು ಒಂದು ಕಾಯಿಲೆಯೇ ಆಯಿತು. ಅವರಿಗೆ ಇಷ್ಟವಿರಲಿ ಬಿಡಲಿ ಇವರು ಕೊಟ್ಟ ಯಾವುದೇ ಹಣ್ಣುಗಳನ್ನು,ಬ್ರೆಡ್ಡುಗಳನ್ನು ಇವರ ಮುಂದೆಯೇ ರೋಗಿಗಳು ತಿನ್ನಲೇಬೇಕಾದ ಅನಿವಾರ್ಯತೆ ಉಂಟಾಯಿತು. ಮುಂದುವರೆದು ರಕ್ತದಾನ ಶಿಬಿರಗಳು ನಡೆಯತೊಡಗಿ ಆಚರಣೆ ಹೊಸ ಬಣ್ಣ ಪಡೆಯಿತು. ಕನ್ನಡ ರಾಜ್ಯೋತ್ಸವಗಳ ಭರಾಟೆ ಆರಂಭವಾದದ್ದು ಇದೇ ಕಾಲದಲ್ಲಿ. ಇದನ್ನೆಲ್ಲಾ  ನೋಡುತ್ತಿದ್ದ ನಮಗೆ ಇನ್ನೂ ಹೆಚ್ಚು ಹೆಚ್ಚು ಸಿನೆಮ ನೋಡಲು ಪ್ರೇರಣೆಯಾಗುತ್ತಿತ್ತು. ಹಾಗೇ ಮಾಡುತ್ತಿದ್ದೆವು. ಮಸಾಲೆ ದೋಸೆಗೆಂದು ಇಟ್ಟುಕೊಂಡಿದ್ದ ದುಡ್ಡನ್ನು ಪಿಚ್ಚರ್‌ ನೋಡಲು ಸದ್ವಿನಿಯೋಗಿಸಿ ಹಲ್ಲಲ್ಲು ಬಿಡುತ್ತಿದ್ದುದು ಸತ್ಯ ನಾನು ರಾಜ್‌ಕುಮಾರರನ್ನು ಹಿಗ್ಗಮುಗ್ಗಾ ಹೊಗಳಿ ಮೂರು ಕವಿತೆಗಳನ್ನು ಬರೆದು ಗಾಯತ್ರಿ ಟಾಕೀಸಿನ ಗಾಜಿನ ನೋಟೀಸ್‌ ಬೋರ್ಡ್‌ ಗೆ ತಗುಲಿಸಿ ರೋಮಾಂಚಿತನಾದದ್ದು ಆಗಲೇ. 

ಅರವತ್ತು ಎಪ್ಪತ್ತರ ದಶಕದಲ್ಲಿ ಸಿನೆಮ ಒಂದು ಸಂಸ್ಕೃತಿಯಾಗಿ ಬೆಳೆದು, ಎಂಬತ್ತು ತೊಂಬತ್ತರ ಹೊತ್ತಿಗೆ ಒಂದು ಗೀಳಾಗಿ ವಿಸ್ತರಿಸುತ್ತಿತ್ತು. ಸಿನೆಮಾಗಳಲ್ಲಿ ಹೀರೋಗಳನ್ನು ಹಾಡಿ ಹೊಗಳುವ ಡೈಲಾಗುಗಳು ಎಗ್ಗಿಲ್ಲದೆ ಸದ್ದು ಮಾಡುತ್ತಿದ್ದವು. ಹೀರೋಗಳನ್ನು ಸೋಲೇ ಇಲ್ಲದ ವೀರಾಧಿ ವೀರರನ್ನಾಗಿ ಅಟ್ಟಕ್ಕೇರಿಸುವ ಪರಿಪಾಠ ಬೆಳೆಯುತ್ತಿತ್ತು. ಕತೆಗೆ ತಕ್ಕ ಹೀರೋ ಅಲ್ಲ, ಹೀರೋಗೆ ತಕ್ಕ ಕತೆ ಎನ್ನುವಂತಾಗಿ ತಳಬುಡವಿಲ್ಲದ ಸಿನೆಮಾಗಳು ಹುಟ್ಟಿ ತಲೆಕೆಡಿಸತೊಡಗಿದ್ದವು. ನಾಯಕ ನಟನೆಂಬ ವ್ಯಕ್ತಿಯನ್ನು ಬಿಟ್ಟರೆ ಮಿಕ್ಕವರೆಲ್ಲ ಸೈಡ್‌ ಆಕ್ಟರ್‌ ಗಳಾಗಿ ಕಳೆದು ಹೋಗಲಾರಾಭಿಸಿದ್ದ ಕಾಲವದು.

ನಾವು ತುಮಕೂರಿನಲ್ಲಿ ಓದುತ್ತಿದ್ದ ಎಂಬತ್ತರ ದಶಕದಲ್ಲಿ ರಾಜ್‌ ಮತ್ತು ವಿಷ್ಣು ಎದುರಾಳಿಗಳೇನೋ ಎನ್ನುವಂತೆ ಅವರವರ ಅಭಿಮಾನಿ ಸಂಘಗಳು ಪರಸ್ಪರ ರಕ್ತ ಚೆಲ್ಲಿಕೊಂಡು ಬೀದಿಗಳಲ್ಲಿ ಅಂಗಿ ಹರಿದುಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು. ಹೊಸ ಸಿನೆಮಾ ರಿಲೀಸ್‌ ಆಗುವ ದಿನವನ್ನು ಅವರವರ ಅಭಿಮಾನಿಗಳು ತಮ್ಮ ಅಭಿಮಾನದ ಹಸಿವಿನಿಂದ ಕಾಯುತ್ತಿದ್ದರು.ಹೊಟೆಲ್‌ ಕ್ಲಿನರ್‌ಗಳು, ಸಪ್ಲೆಯರ್‌ಗಳು ಕನ್ನಡ ಚಿತ್ರರಂಗವನ್ನು ಬಹುವಾಗಿ ಉಳಿಸಿ ಬೆಳೆಸುತ್ತಿದ್ದ ಕಾಲವದು. ಬಿಡುಗಡೆಯ ಹಿಂದಿನ ದಿನವೇ ಆಹೋರಾತ್ರಿ ಟಾಕೀಸಿನ ಎದುರು ಪವಡಿಸಿ ಮಾರನೇ ದಿನ ಟೆಕೆಟ್‌ ಕೊಂಡು ಸಿನೆಮ ನೋಡುತ್ತಿದ್ದರು.

ಹೊಸ ಸಿನೆಮಾದ ಮೊದಲ ಶೋ ನೋಡುವುದು ಆಗ ಘನತೆಯ ವಿಷಯವಾಗಿತ್ತು. ಅದಕ್ಕಾಗಿ ನಾನೂ ಒಮ್ಮೆ ಪ್ರಯತ್ನಿಸಲು ಹೋಗಿ ಕ್ಯೂನಿಲ್ಲುವ ತಂತಿ ಜಾಲರಿಯಲ್ಲಿ ಜನರ ಕಾಲಿಗೆ ಸಿಕ್ಕಿಕೊಂಡು ಬದುಕಿ ಉಳಿದರೆ ಸಾಕೆಂದು ತಪ್ಪಿಸಿಕೊಂಡು ಬಂದ ನೆನಪು ಗಾಢವಾಗಿ ಉಳಿದಿದೆ. ಬ್ಲಾಕ್‌ ಟಿಕೆಟ್‌ ಕೊಂಡು ಸಿನೆಮಾ ನೋಡುವುದೂ ಆಗ ಗೌರವದ ಸಂಕೇತವಾಗಿತ್ತು. ಅನೇಕರು ಹಾಗೇ ಮಾಡುತ್ತಿದ್ದರು. ಆಗ ಬ್ಲಾಕ್‌ ಟಿಕೆಟ್‌ ಮಾರುವುದನ್ನೇ ಒಂದು ಪೂರ್ಣಕಾಲಿಕ ಉದ್ಯೋಗ ಮಾಡಿಕೊಂಡವರ ಪಡೆಯೇ ಇರುತ್ತಿತ್ತು. ಅವರಿಗೆ ರಾಜ್‌ ವಿಷ್ಣು ಇನ್ನಿತರರ ನಡುವೆ ಭಿನ್ನ ಭೇದಗಳಿರಲಿಲ್ಲ. ರಾಜ್‌ ವಿಷ್ಣು ಸಿನೆಮಾಗಳು ಮಾತ್ರ ಸಿಕ್ಕಾಪಟ್ಟೆ ಹಾಲು ಕೊಡುವ ಹಸುಗಳಾಗಿದ್ದುದರಿಂದ ಹೊಸ ಸಿನೆಮಾಗಳ ಬಿಡುಗಡೆಗೆ ಅವರು ಕಾಯುತ್ತಿದ್ದರು. 

ಹೀಗಿರುತ್ತಿರಲಾಗಿ ಇಷ್ಟು ಹಿನ್ನೆಲೆಯೊಂದಿಗೆ ನನ್ನಿಬ್ಬರು ಗೆಳೆಯರ ರಾಜ್‌ ವರ್ಸಸ್‌ ವಿಷ್ಣು ವಿಚಾರವನ್ನು ಆರಂಭಿಸಬಹುದು. ಒಬ್ಬ ರಾಜ್‌ ಅಭಿಮಾನಿ, ಇವನು ರಾಜ್‌ಕುಮಾರ್‌ ನಟಿಸಿದ ಯಾವ ಸಿನೆಮಾ ಬಂದರೂ ನೋಡದೇ ಬಿಡುತ್ತಿರಲಿಲ್ಲ. ಬಂದು ಹೋದ ಹಳೆ ಚಿತ್ರಗಳಿಗೂ ಅಷ್ಟೇ ಗೌರವ ಸಲ್ಲಿಸುತ್ತಿದ್ದ. ಹೊಟೆಲ್‌ ಕಾರ್ಮಿಕರು, ಇನ್ನಿತರ ಶ್ರಮಿಕ ವರ್ಗದವರಂತೆಯೇ ಇವನೂ ಸಹ ಒಂದು ಸಿನೆಮಾವನ್ನು ನಾಲ್ಕಾರು ಸಲ ನೋಡುವ ಮೂಲಕ ಕನ್ನಡ ಚಿತ್ರರಂಗದ ಏಳಿಗೆಗೆ ಕಾರಣಕರ್ತನಾಗಿದ್ದ, ಮುಖ್ಯ ಡೈಲಾಗುಗಳನ್ನು ಬೈಹಾರ್ಟ್‌ ಹೊಡೆಯುವುದು ಇದರಿಂದ ಸಾಧ್ಯವಾಗಿತ್ತು. ಅದರಲ್ಲಿ ಸಂಪತ್ತಿಗೆ ಸವಾಲ್‌ ಚಿತ್ರದ ಡೈಲಾಗುಗಳಲ್ಲಿ ಈತ ಪರಿಣತಿ ಪಡೆದಿದ್ದ. ರಾಜ್‌ ಸಿನೆಮಾ ಕತೆಗಳನ್ನು  ನಮ್ಮ ರೂಮಿನಲ್ಲಿ ಪುಂಕಾನುಪುಂಕವಾಗಿ ಹೇಳುತ್ತಿದ್ದ. ಎಲ್ಲರೂ ಕಡ್ಡಾಯವಾಗಿ ಕೇಳಿಸಿಕೊಳ್ಳಲೇ ಬೇಕಾಗಿತ್ತು. ಮಧ್ಯೆ ಮಧ್ಯೆ ಇತರ ನಾಯಕ ನಟರನ್ನು ಹಿಗ್ಗಾ ಮುಗ್ಗಾ ಚಚ್ಚುತ್ತಿದ್ದರೂ ಯಾರೂ ದೂಸರಾ ಮಾತಾಡುವಂತಿರಲಿಲ್ಲ.

ಒಮ್ಮೊಮ್ಮೆ ತನ್ನ ಅಭಿಮಾನದ ಅಸಲಿತನವನ್ನು ಸಾಬೀತು ಮಾಡಲು ನಮ್ಮೆಲ್ಲರನ್ನು ರಾಜ್ ಸಿನೆಮಾಕ್ಕೆ ಸ್ವಂತ ದುಡ್ಡಿನಲ್ಲಿ ಕರೆದೊಯ್ಯುತ್ತಿದ್ದನು. ಹುಲಿಯ ಹಾಲಿನ ಮೇವು, ಕವಿರತ್ನ ಕಾಳಿದಾಸ , ಭಭ್ರುವಾಹನ, ನಾನೊಬ್ಬ ಕಳ್ಳ ಮುಂತಾದ ಅನೇಕ ಸಿನೆಮಾಗಳನ್ನು ತೋರಿಸಿದ ಪುಣ್ಯ ಅವನೆಗೇ ಸೇರಬೇಕು. ಅವನ ಅಣ್ಣ ಕೊಡುತ್ತಿದ್ದ ಎಕ್ಸಟ್ರಾ ದುಡ್ಡು ಅವನನ್ನು ಹೀಗೆ ಮಾಡಲು ಪ್ರೇರೇಪಿಸುತ್ತಿತ್ತು. ವಿಚಿತ್ರವೆಂದರೆ ಈ ಸಿನೆಮಾಗಳಿಗೆಲ್ಲಾ ಇವನ ಎದುರಾಳಿ ವಿಷ್ಣು ಕಟ್ಟಾ ಅಭಿಮಾನಿ ಗೆಳೆಯನನ್ನೂ ಕರೆದುಕೊಂಡು ಹೋಗುತ್ತಿದ್ದುದು.

ಈತ ಕನ್ನಡ ಸಿನೆಮಾಗಳಲ್ಲಿ ರಾಜ್‌ಕುಮಾರ್‌ ಚಿತ್ರಗಳನ್ನು ಮಾತ್ರ ನೋಡುತ್ತಿದ್ದ ಈ ಗೆಳೆಯ ಹಿಂದಿ, ತೆಲುಗು, ತಮಿಳು, ಮಲೆಯಾಳಂ ಸಿನೆಮಾಗಳನ್ನು ಧಾರಾಳವಾಗಿ ನೋಡುತ್ತಿದ್ದುದರಿಂದ ಅಪಾರ ಅನುಭವ ಗಳಿಸಿದ್ದನು. ಒಂದು ದಿನದಲ್ಲಿ ಐದು ಶೋಗಳಲ್ಲಿ ವಿವಿಧ ಸಿನೆಮಾಗಳನ್ನು ನೋಡಿದ ದಾಖಲೆ ಹೊಂದಿದ್ದ ಈತನ ಮುಂದೆ ನಾವೆಲ್ಲ ಬಚ್ಚಾಗಳಾಗಿ ಅವನು ಸಿನೆಮಾಗಳ ಮತ್ತು ಅದರ ಹೀರೊ ಹೀರೊಯಿನ್‌ ಗಳ ಬಗೆಗೆ ಹೇಳುತ್ತಿದ್ದುದನ್ನು ಸುಮ್ಮನೆ ಕೇಳಿಕೊಂಡು ಕಾಲ ನೂಕ ಬೇಕಾಗಿತ್ತು.  

ಇನ್ನು ವಿಷ್ಣು ಅಭಿಮಾನಿ ಗೆಳೆಯ ರಾಜ್‌ ಅಭಿಮಾನಿಯಷ್ಟು ವೀರನಲ್ಲ. ಆರ್ಥಿಕವಾಗಿಯೂ ಸಬಲನಾಗಿರಲಿಲ್ಲ. ನಮ್ಮಂತೆಯೇ ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದ ಇವನು ವಿಷ್ಣು ಅಭಿಮಾನವನ್ನು ಅಷ್ಟೊಂದು ರಭಸವಾಗಿ ತೋರಬಲ್ಲವನಾಗಿರಲಿಲ್ಲ. ಈತ ಹೊಸದಾಗಿ ಬಿಡುಗಡೆಯಾಗುತ್ತಿದ್ದ ವಿಷ್ಣು ಸಿನೆಮಾಗಳನ್ನು ರಿಲೀಸ್‌ ಆದ ತಕ್ಷಣ ನೋಡಲು ಸಫಲನಾಗದಿದ್ದುದು ಇವನಿಗೆ ಅಭಿಮಾನದಳತೆಗೋಲಲ್ಲಿ ಕಡಿಮೆ ಅಂಕ ಬರುತ್ತಿದ್ದವು. ಆದರೇನು ಎಂದೋ ನೋಡಿದ ವಿಷ್ಣು ಸಿನೆಮಾಗಳ ಕತೆಯನ್ನು ವಿಷ್ಣು ಅಭಿನಯವನ್ನೂ, ಪ್ರಣಯ ದೃಶ್ಯಗಳನ್ನೂ ಪರಿಪರಿಯಾಗಿ ವರ್ಣಿಸುತ್ತಿದ್ದನು. ನಾಗರ ಹಾವು, ಸೊಸೆ ತಂದ ಸೌಭಾಗ್ಯ, ಸಿನೆಮಾಗಳೇ ಸಾಕು ವಿಷ್ಣುವಿನ ಅಭಿನಯ ಮತ್ತು ಮಾತಿನ ವರಸೆಗಳನ್ನು ಅಜರಾಮರಗೊಳಿಸಲು… ಇನ್ನು ಇತ್ಯಾದಿಯಾಗಿ ವರ್ಣಿಸುತ್ತಿದ್ದರೆ ಮುಂದಕ್ಕೆ ಅವಕಾಶವನ್ನೇ ಕೊಡದೆ  ರಾಜ್‌ ಅಭಿಮಾನಿ ವಿಷ್ಣುವರ್ಧನ್‌ ಸಿನೆಮಾಗಳನ್ನು ಹೀನಾಮಾನವಾಗಿ ತೆಗಳುತ್ತಿದ್ದನು.

ವಿಷ್ಣು ಬಗೆಗೆ ಉಚಾಯಿಸಿ ಮಾತಾಡುತ್ತಿದ್ದನು. ವಿಷ್ಣು ಎಡಚ ನೀನು ಎಡಚ ಅದಕ್ಕೆ ನಿನಗೆ ವಿಷ್ಣುವರ್ಧನ್‌ ಪ್ರಿಯ, ಅವನಿಗೆ ಡ್ಯಾನ್ಸ್‌ ಬರಲ್ಲ, ನಡೆಯುವುದೂ ಅಷ್ಟೆ, ಪೌರಾಣಿಕ, ಐತಿಹಾಸಿಕ ಪಾತ್ರಗಳು ಅವನಿಗೆ ಒಪ್ಪುವುದೇ ಇಲ್ಲ, ರಾಜ್‌ ಹಾಗಲ್ಲ ಯಾವುದೇ ಪಾತ್ರಕ್ಕೂ ಸೈ, ಡ್ಯಾನ್ಸ್‌ ನೋಡುವುದೇ ಮಜ, ಪ್ರಣಯ ದೃಶ್ಯಗಳಲ್ಲಿ ರಾಜ್‌ ಮೀರಿಸುವವರೇ ಇಲ್ಲ… ಆಗ ವಿಷ್ಣು ಅಭಿಮಾನಿ ರಾಜ್‌ಕುಮಾರರನ್ನು ಅವರ ಸಿನೆಮಾಗಳನ್ನು ಇವನಂತೆ ಕರುಣೆ ಇಲ್ಲದೆ ತೆಗಳಲು ಇಷ್ಟಪಡದೆ ನರಳುತ್ತಿದ್ದ. ಈ ವಿಷ್ಣು ಅಭಿಮಾನಿ ವಿಷ್ಣುವನ್ನು ಹೊಗಳುತ್ತಿದ್ದನಷ್ಟೆ, ಅಂತರಂಗದಲ್ಲಿ ರಾಜ್‌ ಪ್ರಿಯನೂ ಆಗಿದ್ದ. ಅವನ  ಸ್ಥಿತಿ ನಮಗೆ ನೋವುಂಟು ಮಾಡುತ್ತಿತ್ತು. 

ರಾಜ್‌ ಅಭಿಮಾನಿಯ ಕಠೋರ ಟೀಕೆಗಳಿಗೆ ಉತ್ತರಿಸಲು ತನ್ನ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದ ಈ ಗೆಳೆಯ ನಮ್ಮ ಬೆಂಬಲ ಯಾಚಿಸುತ್ತಿದ್ದ, ರಾಜ್‌ ಅಭಿಮಾನಿಯ ಕ್ರೂರ ದಾಳಿ ಒಮ್ಮೊಮ್ಮೆ ನಮ್ಮನ್ನು ಸದರಿ ವಾಗ್ವಾದದಲ್ಲಿ ಬೀಳಲು ಪ್ರೇರೇಪಿಸುತ್ತಿತ್ತು. ನಮಗೆ ತೋಚಿದ ಪರ ವಿರೋಧ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೆವು. ನಮ್ಮ ಯಾರ ಮಾತುಗಳಿಗೂ ಅಲ್ಲಿ ಕಿಮ್ಮತ್ತಿರಲಿಲ್ಲ. ನಾವು ಅವರ ಹೋರಾಟದ ಮಧ್ಯ ಪ್ರವೇಶಿಸಿದಷ್ಟು ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿತ್ತು,  ಕೊನೆಗೆ ಹೆಚ್ಚು ಓಟು ರಾಜ್‌ ಪರವಾಗಿಯೇ ಬೀಳುತ್ತಿದ್ದುದರಿಂದ ವಿಷ್ಣು ಅಭಿಮಾನಿಗೆ ನ್ಯಾಯ ಸಿಗುವುದು ದುಸ್ತರವಾಗುತ್ತಿತ್ತು. 

ಒಮ್ಮೆ ರಾಜ್‌ ಅಭಿಮಾನಿ ವಿಷ್ಣುವಿಗೆ ಹಾಡಲು ಬರುವುದಿಲ್ಲವೆಂದು ತೀರ್ಪು ಕೊಟ್ಟ. ಇದರಿಂದ ರೊಚ್ಚಿಗೆದ್ದ ವಿಷ್ಣು ಅಭಿಮಾನಿ ಗೆಳೆಯ ತಕ್ಷಣವೇ ರಾಜ್‌ ಅಭಿಮಾನಿಯೂ ಸೇರಿದಂತೆ ನಮ್ಮಿಬ್ಬರನ್ನೂ ಆಗ ತಾನೆ ಹೊಸದಾಗಿ ಸೋಮೇಶ್ವರ ಬಡಾವಣೆಯಲ್ಲಿ ಆರಂಭವಾಗಿದ್ದ  ಲೈಕ್‌ ಮ್ಯೂಸಿಕ್‌  ಎಂಬ ಮ್ಯೂಸಿಕ್‌ ಬಾರ್‌ ಗೆ ಕರೆದೊಯ್ದು ಇಪ್ಪತೈದು ಪೈಸೆ ತೆತ್ತು ವಿಷ್ಣು ಹಾಡಿರುವ ಜಿಮ್ಮಿಗಲ್ಲು ಚಿತ್ರದ ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ ಎಂಬ ಹಾಡು ಹಾಕಿಸಿ ಕೇಳಿಸಿದ. ಒಮ್ಮೆಯಲ್ಲ  ಮೂರು ಬಾರಿ ಅದೇ ಹಾಡು ಹಾಕಿಸಿದ. ಅಲ್ಲಿದ್ದವರೆಲ್ಲಾ ಕೇಳಿ ಸಂತೋಷ ಪಟ್ಟಂತೆ ಕಂಡಿತು.

ವಿಷ್ಣು ಆ ಹಾಡನ್ನು ಇದ್ದುದರಲ್ಲಿ ಚೆನ್ನಾಗಿಯೇ ಹಾಡಿದ್ದಾರೆ. ಆದರೆ ರಾಜ್‌ ಅಭಿಮಾನಿ ಮಾತ್ರ ಹಾಡನ್ನು ‘ಏರಿಳಿತಗಳೇ ಇಲ್ಲದ ಏಕತಾನತೆಯಿಂದ ಕೂಡಿದ ಹಾಡುಗಾರಿಕೆಯಿದೆ ಎಂದೂ, ಹಾಡಿನ ಸಾಹಿತ್ಯ  ಹುಸಿ ಆದರ್ಶ ಸಾರುತ್ತಿದೆ’ಯೆಂದು, ಸಾಹಿತ್ಯದ ಜವಾಬ್ದಾರಿ ವಿಷ್ಣುಗೆ ಸಂಬಂಧಿಸಿದ್ದಲ್ಲದಿದ್ದರೂ ಅದನ್ನೂ ವಿಮರ್ಶಿಸಿ ಬಿಸಾಕಿದ. ಒಟ್ಟು ಎಪ್ಪತೈದು ಪೈಸೆ ಕಳೆದುಕೊಂಡದ್ದಲ್ಲದೆ ಈ ಬಗೆಯ ಟೀಕೆಯನ್ನು ಕೇಳಬೇಕಾಗಿ ಬಂದುದಕ್ಕೆ ಬೇಸರಗೊಂಡ ಗೆಳೆಯ ನಮ್ಮ ಸಹಾಯ ಯಾಚಿಸಿದ, ವಿಷ್ಣು ಅಭಿಮಾನಿ ನಮಗೆ ಅಲ್ಲೆ ಕೊಡಿಸಿದ ಕಾಫಿ ನಮ್ಮನ್ನು ತಡಕಾಡುವಂತೆ ಮಾಡಿತು.

‍ಲೇಖಕರು Admin

October 29, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: