ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಜೇಶ್ವರಿ ತೇಜಸ್ವಿ ಅವರ ಗಟ್ಟಿಕಂಠದ ಮಾತು ನೆನಪಾಗುತ್ತಿದೆ…

ಸಚಿನ್ ತೀರ್ಥಹಳ್ಳಿ

ರಾಜೇಶ್ವರಿ ತೇಜಸ್ವಿಯವರು ಬರೆದ ‘ನನ್ನ ತೇಜಸ್ವಿ’ ಪುಸ್ತಕದಲ್ಲಿ ಒಂದು ತಮಾಷೆಯ ಪ್ರಸಂಗ ಬರೆದಿದ್ದಾರೆ. ತೇಜಸ್ವಿ ಮೂಡಿಗೆರೆಯಿಂದ ಮೈಸೂರಿಗೆ ತಮ್ಮ ಸ್ಕೂಟರಲ್ಲೇ ಯಾವಾಗಾಲೂ ಹೋಗುತ್ತಿದ್ದರಂತೆ. ಹಾಗೆ ಒಮ್ಮೆ ಮೈಸೂರಿಂದ ಬರುವಾಗ ರಸ್ತೆ ಬದಿ ಯಾವುದೋ ಹೂವಿನ ಗಿಡ ನೋಡಿ ಗಾಡಿ ನಿಲ್ಲಿಸಿದರಂತೆ. ರಾಜೇಶ್ವರಿಯವರೂ ಇಳಿದುಕೊಂಡರು.

ಹೂವಿನ ಗಿಡವನ್ನ ಎಂದಿನ ತಮ್ಮ ಕೂತುಹಲದ ಕಣ್ಣಲ್ಲಿ ನೋಡಿ ಸೀದಾ ವಾಪಾಸು ಬಂದು ಸ್ಕೂಟರ್ ಸ್ಟಾರ್ಟ್ ಮಾಡಿಕೊಂಡು ಹೊರಟೇಬಿಟ್ಟರಂತೆ. ತಾನು ಕೂತಿದ್ದೇನೋ ಇಲ್ಲವೊ ಎಂಬುದನ್ನು ಕೂಡ ಗಮನಿಸದೆ ಹೋಗುತ್ತಿದ್ದರೆ ನಾನು ಇನ್ನೂ ಹತ್ತೇ ಇಲ್ಲ ಅಂತ ಕೂಗುತ್ತಿದ್ದೆ, ನನ್ನ ಕೂಗಾಟ ನೋಡಿ ಸುತ್ತಮುತ್ತ ಇದ್ದವರು ಕೂಡ ಕೂಗಿ ಕರೆದರೂ ತೇಜಸ್ವಿ ದಾರಿ ಮಧ್ಯೆ ನನ್ನನ್ನು ಒಬ್ಬಳನ್ನೇ ಬಿಟ್ಟು ಹೋಗೇ ಬಿಟ್ಟರು ಆಮೇಲೆ ಸುಮಾರು ಹೊತ್ತಾದ ಮೇಲೆ ವಾಪಾಸು ಬಂದು ಹತ್ತಿಸಿಕೊಂಡು ಹೋದರು ಅಂತ ಬರೆದುಕೊಂಡಿದ್ದಾರೆ.

ಆ ಪುಸ್ತಕದಲ್ಲಿ ಒಂದು ಸುಧೀರ್ಘ ದಾಂಪತ್ಯದ ಇಂತಹ ಅನೇಕ ಕ್ಷಣಗಳನ್ನು ಅವರು ದಾಖಲಿಸಿದ್ದಾರೆ. ನಾನು ಅನೇಕ ಬಾರಿ ಮೂಡಿಗೆರೆಗೆ ಹೋದಾಗ ಬೇಲೂರು ರಸ್ತೆಯಲ್ಲಿ ಅಡ್ಡಾಡುವಾಗ ಯಾವತ್ತೂ ಅವರ ಮನೆಗೆ ಹೋಗುವ ಧೈರ್ಯ ಮಾಡಿರಲಿಲ್ಲ. ಇದು ನಾನು ಜೋಗಿ ಸಾರ್ ಮತ್ತು ಲಿಂಗದೇವರು ಅವರು ೨೦೧೭ ರಲ್ಲಿ ಹೋದಾಗ ತೆಗೆದ ಫೋಟೋ. ಅವರ ಗಟ್ಟಿಕಂಠದ ಮಾತು, ನಿಷ್ಕಲ್ಮಶ ನಗು, ಕೊಟ್ಟ ಕಾಫಿಯ ಘಮ ಎಲ್ಲವೂ ಈಗ ನೆನಪಾಗುತ್ತಿದೆ.

ತೇಜಸ್ವಿ ತಮ್ಮ ಕೊನೆಯ ಪುಸ್ತಕ ಮಾಯಾಲೋಕದ ಕೊನೆಯ ಚಾಪ್ಟರಿನಲ್ಲಿ ಒಂದು ಮಹಾಮಳೆಯ ವರ್ಣನೆ ಮಾಡಿದ್ದಾರೆ. ಅಂತಹದೇ ಒಂದು ಮಹಾ ಮಳೆಯನ್ನ ನಾವಿಬ್ಬರೂ ಸುಮಾರು ಒಂದು ಗಂಟೆಗಳ ಕಾಲ ಮಾತಿಲ್ಲದೆ ಕತೆಯಿಲ್ಲದೆ ನೋಡುತ್ತಾ ಸುಮ್ಮನೆ ಕೂತಿದ್ದೆವು ಅಂತ ರಾಜೇಶ್ವರಿಯವರು ಕೂಡ ಬರೆದಿದ್ದಾರೆ. ಅವರಿಬ್ಬರು ಇಲ್ಲದ ಈ ಕ್ಷಣದಲ್ಲಿ ನನಗೆ ನೆನಪಾಗುತ್ತಿರುವುದು ಅವರಿಬ್ಬರ ನಡುವಿದ್ದ ಮೌನ ಮತ್ತು ಆ ಮೌನಕ್ಕೆ ಸದಾ ಸಾಕ್ಷಿಯಾಗುತ್ತಿದ್ದ ಮಲೆನಾಡಿನ ಮಳೆ.

‍ಲೇಖಕರು Admin

14 December, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading