
ಬೋದಿಲೇರ್ ನನ್ನು ಒಬ್ಬ ಕವಿಯಾಗೆ ಅಷ್ಟೇ ನೋಡಿರುವ ನಮಗೆಲ್ಲಾ ಅವನೊಳಗಿನ ಅಪ್ರತಿಮ ಸೌಂದರ್ಯ ಪ್ರಜ್ಞೆಯ, ಸಂಗೀತ ಸಂಪನ್ನ ಕಲಾವಿಮರ್ಶಕ ಕಂಡೇ ಇಲ್ಲ.
ನಿಜ, ಒಂದರ್ಥದಲ್ಲಿ ಅವನೇ ಈ ಜಗತ್ತಿನ ಮೊದಲ ನವ್ಯಕವಿ. ಅವನ ಕವಿತೆಗಳು ಜಗತ್ತಿನ ನೂರಾರು ಭಾಷೆಗಳಿಗೆ ಅನುವಾದಗೊಂಡವು. ಆದ್ರೆ ಕಲಾ ವಿಮರ್ಶೆಗಳು ಬಹುತೇಕ ಫ್ರೆಂಚ್ ಭಾಷೆಯಲ್ಲೇ ಉಳಿದುಹೋದದ್ದು ವಿಪರ್ಯಾಸ.
19ನೆ ಶತಮಾನದ ಆದಿಯಲ್ಲಿ ರಮ್ಯವಾದದ ನೆರಳಿನಲ್ಲಿ ಬರುತ್ತಿದ್ದ ವಿಕ್ಟರ್ ಹ್ಯೂಗೋ ಮುಂತಾದವರ ಕಾವ್ಯವನ್ನು ಮೊಗೆಮೊಗೆದು ಕುಡಿಯುತ್ತಿದ್ದ ಪ್ಯಾರಿಸಿನ ಜನರಿಗೆ ಒಗರಿನ ವೈನ್ ರುಚಿಯ ನವ್ಯಕಾವ್ಯವ ಉಣಬಡಿಸಿದ್ದು ಮತ್ತು ಅದುವರೆಗೂ ಇದ್ದ ಕಾವ್ಯದ ವ್ಯಾಪ್ತಿಗಳನ್ನು ಮೀರಿ ಖಾಸಗಿತನಗಳನ್ನು, ಎದೆಯ ಒಲವನ್ನು ಪಾರದರ್ಶಕವಾಗಿ ತೆರೆದಿಟ್ಟ ಅಪ್ರತಿಮ ಪ್ರೇಮಕವಿ ಬೋದಿಲೇರ್.
ಆವತ್ತಿಗೂ ಇವತ್ತಿಗೂ ಪ್ಯಾರಿಸ್ ನ ಜನರಿಗೆ ಬೋದಿಲೇರ್ ಕಂಡರೆ ಅಷ್ಟಕಷ್ಟೇ.. ಆದರೆ ಇಡಿಯ ಪ್ರಪಂಚದ ಉದ್ದಗಲಕು ಅವನ ಕವಿತೆಗಳು ಪ್ರಸಾರವಾಗುತ್ತ ಹೋದುವು. ಕವಿತೆಯ, ಕಾವ್ಯಭಾಷೆಯ ಹೊಸ ಕಟ್ಟನ್ನು ನಮ್ಮ ಕೈಗಿತ್ತ ಬೋದಿಲೇರ್ ಬದುಕಿದ್ದು ಕೂಡ ಕಾವ್ಯದಲ್ಲೇ ..ಅವನ ಕಾವ್ಯ & ಕಲೆ ರೂಪುಗೊಂಡದ್ದು ಬದುಕಿನ ಹತಾಶೆ, ನೋವು, ಖಿನ್ನತೆ ಇತ್ಯಾದಿಗಳಲ್ಲಿ
ಯಾರಿವನು?

ಚಾರ್ಲ್ಸ್ ಬೋದಿಲೇರ್ ಹುಟ್ಟಿದ್ದು 1821 ರ ಏಪ್ರಿಲ್ 9 ರಂದು ಫ್ರಾನ್ಸ್ ದೇಶದ ಪ್ಯಾರೀಸ್ ನಲ್ಲಿ. ಅವನ ತಂದೆ ಫ್ರಾಂಕೊಇಸ್ ಬೋದಿಲೇರ್ ಒಳ್ಳೆಯ ಚಿತ್ರ ಕಲಾವಿದನಾಗಿದ್ದ. ತಾಯಿ ಕ್ಯಾರೋಲಿನ್. 1827 ರಲ್ಲಿ ಫ್ರಾಂಕೊಇಸ್ ತೀರಿಹೋದ ಮೇಲೆ ಕ್ಯಾರೋಲಿನ್, ಜಾಕೊಸ್ ಅಪಿಕ್ ನನ್ನು ಮದುವೆಯಾಗುತ್ತಾಳೆ. ಬೋದಿಲೇರ್ ಪ್ರಾಥಮಿಕ ಶಿಕ್ಷಣಗಳನ್ನು ಮುಗಿಸಿ ಪ್ರತಿಷ್ಠಿತ ಕಾಲೇಜಿನಲ್ಲಿ ಕಾನೂನು ಅಭ್ಯಾಸಕ್ಕೆ ಸೇರುತ್ತಾನೆ. ಗೆಳೆಯರೊಂದಿನ ಸಹವಾಸದಲ್ಲಿ ಸದಾ ಗಾಂಜಾ, ಅಫೀಮು, ಹಶಿಶ್ & ಹೆಂಗೆಳೆಯರ ಲೋಲುಪತೆಗೆ ಸಿಕ್ಕಿ ಬೀಳುತ್ತಾನೆ.. ಕೊನೆಗೆ ಇವನ ಮಲತಂದೆ ಬದಲಾವಣೆಗೆಂದು ಕಲ್ಕತ್ತಾಗೆ ಹೋಗುವ ಇಂಡಿಯಾದ ಹಡಗು ಹತ್ತಿಸುತ್ತಾನೆ.. ಸಾಗರದ ನೀಲಿ ಅಲೆಗಳ ಸಂಪನ್ನತೆ, ಹಸಿರು ಭೂರಾಶಿ ಕಂಡು ಮಾರಿಷಸ್ ನಲ್ಲಿ ಕೆಲಕಾಲ ಉಳಿದುಕೊಂಡು ಮತ್ತೆ ಪ್ಯಾರಿಸ್ ಕಡೆ ನಡೆಯುತ್ತಾನೆ. ಈ ಬಾರಿ ಅವನಿಗೆ ಕಾವ್ಯ-ಕಲೆಯ ಸ್ಪೂರ್ತಿಯಾದ ಜೀನ್ ದುವಾಲ್ ಸಿಕ್ಕುತ್ತಾಳೆ.. ಬೋದಿಲೇರ್ ತನ್ನ ಸಾವಿನವರೆಗೂ ಅವಳಿಗಾಗಿ ಕಾವ್ಯಕಲೆಗಳಲ್ಲಿ ಗಾಢವಾಗಿ ಬದುಕುತ್ತಾನೆ. ಆದ್ರೆ ದುವಾಲ್ ಅಕ್ಷರ, ಕಾವ್ಯ-ಕಲೆ ತಿಳಿಯದ.. ಅಷ್ಟೆಲ್ಲ ನಿಷ್ಠೆಯ ಹೆಣ್ಣು ಮಾತ್ರ ಆಗಿರುವುದಿಲ್ಲ. ಇದು ಬೋದಿಲೇರನಿಗೂ ಚೆನ್ನಾಗಿಯೇ ತಿಳಿದಿತ್ತು ಕೂಡ. 1861 ವೇಳೆಯಲ್ಲಿ ಬಹುತೇಕ ದಿವಾಳಿಯಾಗಿದ್ದ ಬೋದಿಲೇರ್ ಇನ್ನಿಲ್ಲದ ಸಾಲ, ಹತಾಶೆಗಳಿಂದ ಸೋತು ಸುಣ್ಣವಾಗಿದ್ದ. 1866 ರಲ್ಲಿ ಪಾರ್ಶ್ವವಾಯು ತಗುಲಿತು. ಇದೇ ರೋಗದಲ್ಲಿ ನರಳುತಾ ಅಗಸ್ಟ್ 31, 1867 ರಲ್ಲಿ ಇನ್ನಿಲ್ಲವಾಗುತ್ತಾನೆ …
ಬರೆದಿದ್ದು :
ಬೋದಿಲೇರ್ ಕಾವ್ಯವೇ ಪ್ರಧಾನವಾಗಿದ್ದ ಕಾಲದಲ್ಲಿ ಹೆಚ್ಚು ಹೆಚ್ಚು ಗದ್ಯವನ್ನು ಬರೆದವನು ಮತ್ತು ಅದನ್ನು ತೀವ್ರವಾದ ಕಾವ್ಯಗಂಧಿಯ ಶೈಲಿಯನ್ನು ಒದಗಿಸಿದವನು. ತನ್ನ ಬರಹಗಳ ಮೂಲಕ ಪ್ಯಾರಿಸಿನ ಜನರನ್ನು , ಬರಹಗಾರರನ್ನು , ವಿಮರ್ಶಕರನ್ನು ಬೆಚ್ಚಿಬೀಳಿಸಿದ್ದನು. ಅವನು ಬರೆದೆಲ್ಲಾ ಕವಿತೆಗಳು ಕೂಡ ಛಂದೊಬಂಧವನ್ನು ಒಡೆದ ಗದ್ಯ ಗಾತ್ರದ, ಶೈಲಿಯ ಕವಿತೆಗಳು.
1857 – ರಲ್ಲಿ ಲೆಸ್ ಪ್ಲೋರ್ ದ ಮಾಲ್ (ಪಾಪದ ಹೂಗಳು )
1869 – ರಲ್ಲಿ ಲೇ ಸ್ಪ್ಲೀನ್ ದೆ ಪ್ಯಾರಿಸ್ (Le Spleen de Paris) ಕವಿತಾ ಸಂಗ್ರಹಗಳು ಪ್ರಕಟಗೊಂಡವು
ಮುಂದೆ ಒಂದು ಶತಮಾನದ ನಂತರ 1988 ರಲ್ಲಿ ‘ ಇಪ್ಪತ್ತು ಗದ್ಯ ಕವನಗಳು’ ಪ್ರಕಟವಾದುವು
1847 ರಲ್ಲಿ ಕಿರು ಕಾದಂಬರಿ ‘ಲಾ ಫ಼ನ್ಫ಼ರ್ಲೊ ‘ಕೃತಿ ರಚಿಸಿದ್ದನು.
ಅಷ್ಟಲ್ಲದೇ ಅಮೇರಿಕೆಯ ಕವಿ ಎಡ್ಗರ್ ಅಲನ್ ಪೋ (Edgar Allan Poe) ನ ಅದ್ಬುತವಾಗಿ ಅನುವಾದಕನಾಗಿದ್ದ.
1860ರಲ್ಲಿ ಪ್ರಕಟವಾದ ಲೆಸ್ ಪರಾಡಿಸ್ ಆರ್ಟಿಫಿಶಿಯಿಲ್ಸ್ (Les Paradis Artificiels) ಮಾದಕ ದ್ರವ್ಯಗಳ ಮತ್ತು ಅದರ ಭ್ರಮಾತ್ಮಕ ನೆಲೆಗಳ ಬಗ್ಗೆ ಸ್ವತಃ ಮಾದಕ ದ್ರವ್ಯಗಳ ವ್ಯಸನಿಯಾಗಿದ್ದ ಬೋದಿಲೇರ್ ಬರೆದ ಜಿಜ್ಞಾಸೆಯ ಪುಸ್ತಕ. ಗಾಂಜಾ ಹಶಿಸ್ ಗಳ ವ್ಯಸನದಲ್ಲಿ ಸಿಲುಕಿದ್ದ ಬೋದಿಲೇರ್ ಅಲ್ಲೂ ಕೂಡ ಮನುಷ್ಯನ ಮನೋ ನಡವಳಿಕೆಗಳನ್ನು , ಐಡಿಯಾಲೋಜಿಗಳನ್ನು ಕುರಿತು ಆಸಕ್ತಿಯುತವಾಗಿ ಮಾತನಾಡುತ್ತಾನೆ.
ಇನ್ನುಳಿದಂತೆ ಹತ್ತಾರು ಕಲಾವಿಮರ್ಶೆಯ ಕೃತಿಗಳಿವೆ ಒಂದೊಂದು ತೀವ್ರವಾದ ಚರ್ಚೆ & ಆಳವಾದ ಚಿಂತನೆಗಳಿಂದ ಕೂಡಿದ್ದವಾಗಿವೆ. ಬೋದಿಲೇರ್ ನ ಹೊಳಹು ಅವತ್ತಿನ ಕಾಲಕ್ಕೆ ತುಂಬಾನೇ ಅಧುನಿಕವಾದವು.. ಅವನೆಲ್ಲ ಆಲೋಚನೆಗಳು ಬರೋಬ್ಬರಿ ಇವತ್ತಿನ ಜಗತ್ತಿಗೆ ತಕ್ಕನದುವು ಆದ್ರೆ ಎರಡು ನೂರು ವರ್ಷಗಳ ಮುಂದಿನವು. ಬೋದಿಲೇರನಿಗೆ ,ಯೂಜೇನ್ ಡೆಲಕ್ರೋಕ್ಸ್ (Eugène Delacroix) , ಗುಸ್ತಾವ್ ಕೌರ್ಬೇಟ್ (Gustave Courbet ) ಎಡೊರ್ಡ್ ಮನೆಟ್ (Édouard Manet), ನಡಾರ್ (Nadar) ಮುಂತಾದ ಅವನ ಕಾಲದ ಬಹುತೇಕ ಕಲಾಕಾರರು ಅವನ ಗೆಳೆಯರೂ ಆಗಿದ್ದರು.
ಕನ್ನಡದಲ್ಲಿ ಲಂಕೇಶ್ ಬೋದಿಲೇರನ ಭಾವ & ಭಾಷೆಗೆ ಕೊರತೆಯಾಗದಂತೆ ”ಲೇ ಫ್ಲೂರ್ ದು ಮಾಲ್” (ಪಾಪದ ಹೂಗಳು ) ಅನುವಾದಿಸಿದ್ದಾರೆ.. ಮತ್ತೊಂದು ”ಲೇ ಸ್ಪ್ಲೀನ್ ದೆ ಪ್ಯಾರಿಸ್” ಅನ್ನು ‘ಮಾಯಾ ಕನ್ನಡಿ’ ಎಂಬ ಹೆಸರಿನಲ್ಲಿ ಎಸ್. ಎಫ಼್. ಯೋಗಪ್ಪನವರ್ ಅನುವಾದಿಸಿದ್ದಾರೆ. ಆದ್ರೆ ಗದ್ಯ ಕೃತಿಗಳು ಭಾರತೀಯ ಭಾಷೆಗಳಲ್ಲಿ ಬಂದಿದ್ದು ನನಗೆ ತಿಳಿದಿಲ್ಲ
ಕಲಾವಿಮರ್ಶೆ :

ಈ ಮೊದಲೇ ಹೇಳಿದಂತೆ ಬೋದಿಲೇರ್ ಮೊದಲಿಂದಲೂ ಕಲೆಯಲ್ಲಿ ಬಹಳ ಆಸಕ್ತ. ಅದು ಅವನ ಗೆಳೆಯರ ಬಳಗದಿಂದ ಬಂದಿತೋ ಅಥವಾ ಅವನ ತಂದೆ ಫ಼್ರಾಂಕೊಯಿಸ್ ಸ್ವತಃ ಕಲಾಕಾರನಾಗಿದ್ದುದರ ವಂಶವಾಹಿ ಗುಣವೋ/ ಪ್ರಭಾವವೋ ಗೊತ್ತಿಲ್ಲ. ಅಥವಾ ಮಾದಕ ದ್ರವ್ಯ, ಹೆಣ್ಣು, ವೈನುಗಳ ಸಂಸರ್ಗದಿಂದ ಉಂಟಾದ ಹೊಸ ಜ್ಞಾನದ ಪರಿಯೋ ಹೇಳಲಾಗದು.. ಆದ್ರೆ ಆವತ್ತಿಗೆ ನೆಲೆಕಂಡಿದ್ದ ರಮ್ಯ ಹಾಗು ವಾಸ್ತವಿಕವಾದಗಳ ಮಿಶ್ರಿತವಾದ ಒರಟು ಪುತ್ಥಳಿಯಂತಿದ್ದ ಬೋದಿಲೇರ್ .
1845ರಲ್ ಸಲೂನ್ ಆಫ್ 1845 ಎಂಬ ಕಲಾವಿಮರ್ಶೆಯ ಕೃತಿಯನ್ನು ಹೊರತಂದ. ಇದು ಆವತ್ತಿನ ಕಾದಂಬರಿ ಮತ್ತು ಪೇಂಟಿಂಗ್ ಗಳನ್ನು ಕುರಿತ ವಿಮರ್ಶೆಯಾಗಿತ್ತು. ವಿಮರ್ಶೆಯ ಪರಿಭಾಷೆ ಬದಲಾಗಿತ್ತು . ಮತ್ತೆ ಮರುವರ್ಷ ಸಲೂನ್ ಆಫ್ 1846 ಹೊರತಂದ. ಗೆಳಯ , ಕಲಾವಿದ ಡೆಲಕ್ರೋಕ್ಸ್ ನ ಮುತುವರ್ಜಿಯಿಂದ ಈ ಕೃತಿ ತುಂಬಾ ಹೆಸರು ಮಾಡಿತು. ಇದರ ಮುಂದಿನ ವರ್ಷ ಅವನ ಕಿರು ಕಾದಂಬರಿ ‘ ನಾ ಫ಼ನ್ಫ಼ರ್ಲೊ ‘ ಪ್ರಕಟವಾಯಿತು.
ಇದೆ ಅವಧಿಯಲ್ಲಿ ಪ್ಯಾರಿಸ್ ನ ಸಮಕಾಲೀನ ಕಲೆ, ಸಾಹಿತ್ಯಗಳ ಕುರಿತಾದ ಹೆಸರಾಂತ ಸಾಪ್ತಾಹಿಕ ಪತ್ರಿಕೆ ‘ಲೇ ಆರ್ಟಿಸ್ಟೇ’ಯಲ್ಲಿ ಸರಣಿ ಲೇಖನಗಳನ್ನು ಬರೆದ.
ಮುಂದೆ 1861ರಲ್ಲಿ ಫ್ರೆಂಚ್ ನಲ್ಲಿ ‘Réflexions sur Quelques-uns de mes Contemporains’ (Reflections on Some of my contemporary) ಹಾಗೂ 1863 ರಲ್ಲಿ Le Peintre de la Vie Moderne (The Painter of Modern Life ) ಕೃತಿಗಳು ಪ್ರಕಟವಾಗುತ್ತವೆ. ಅವನ ಮರಣಾನಂತರ ಅವನ ಬಹುತೇಕ ವಿಮರ್ಶೆಯ ಕೃತಿಗಳು ಪ್ರಕಟಿಸಲ್ಪಡುತ್ತವೆ.
* 1868 ರಲ್ಲಿ Curiosités Esthétiques
* 1868 ರಲ್ಲಿ L’art romantique
* 1897 ರಲ್ಲಿ Fusées
* 1897 ರಲ್ಲಿ Mon Coeur Mis à Nu
* 1992 ರಲ್ಲಿ Critique d’art; Critique musicale
ಮತ್ತು ಇಂಗ್ಲೀಷ್ ಭಾಷೆಗೆ ಅನುವಾದಗೊಂಡ ಕೆಲವು ಕೃತಿಗಳು ಮತ್ತು ಗದ್ಯ ಬರಹಗಳು
* 1955 ರಲ್ಲಿ Mirror of Art
* 1956 ರಲ್ಲಿ The Essence of Laughter
* 1964 ರಲ್ಲಿ The Painter of Modern Life and Other Essays
* 1964 ರಲ್ಲಿ Baudelaire as a Literary Critic
* 1972 ರಲ್ಲಿ Selected Writings on Art and Artist
* 1986 ರಲ್ಲಿ Selected Letters of Charles Baudelaire
ಬೋದಿಲೇರ್ ನ ಕಲಾವಿಮರ್ಶೆಯನ್ನು ಓದಲು ಒಂದು ಸಿದ್ದತೆ ಬೇಕೇಬೇಕು.. ಅವನ ಬರಹಗಳತ್ತ ಈಚೆಗೆ ಸೂಕ್ಷ್ಮವಾಗಿ ಗಮನಿಸಿದಾಗ ‘ಕಲಾವಿಮರ್ಶೆ’ಯನ್ನು ನಾವು ಗಂಭೀರವಾಗಿ ಪರಿಗಣಿಸಿಯೇ ಇಲ್ಲವೇನೋ ಅನ್ನಿಸಿಬಿಟ್ಟಿತು.. ಹಾಗಾಗಿ ಅದರ ಒಂದು ಪರಿಚಯವನ್ನಷ್ಟೇ ನಾನು ಇಲ್ಲಿ ಕೊಡಲು ಪ್ರಯತ್ನಿಸಿದ್ದೇನೆ . ಕಾರಣ ನಾ ಕೂಡ ಬಹುಪಾಲು ಕವಿತೆಗಳಲ್ಲೇ ಮುಳುಗಿ ಹೋದವನು..ಅವನ ಕಾವ್ಯದ ಗಾಢತೆ ಮತ್ತು ಅಮಲಿನಲ್ಲಿ ಗದ್ಯ ಬರಹಗಳು ಅಷ್ಟು ರುಚಿಸದಿದ್ದರು, ಹೊಸ ತುಡಿತಕ್ಕೆ ತಿಳಿದುಕೊಳ್ಳುವ ಹಂಬಲಕ್ಕೆ ನಮ್ಮನ್ನು ಬೀಳಿಸದೆ ಇರವು. ಇತ್ತೀಚಿಗೆ ಕನ್ನಡದಲ್ಲಂತೂ ಹೊಸ ಪೀಳಿಗೆಯ ಕಲಾವಿಮರ್ಶೆಯ ಬರಹಗಳನ್ನು ಕಂಡದ್ದು ಅಪರೂಪ. ಕಲೆ & ಸಂಗೀತ ಹೊಸ ಹೊಸ ಆಯಾಮಗಳಿಗೆ ತೆರೆದುಕೊಂಡು ವಿಶ್ವವ್ಯಾಪಿ ಬೆಳೆಯುತ್ತಿರುವ ಹೊತ್ತಿನಲ್ಲಿ ‘ಕಲಾವಿಮರ್ಶೆಯ’ ಪಾತ್ರ ಬಹಳ ದೊಡ್ಡದು. ಸದ್ಯಕ್ಕೆ ಅವನ ಆಳಕ್ಕೆ ಇಳಿಯಲೆಂದು Mirror of Art & The Painter of Modern Life and Other Essays ಪುಸ್ತಕಗಳನ್ನು ಬಗಲಲ್ಲಿರಿಸಿಕೊಂಡು ಕೂತಿದ್ದೇನೆ.
ರಾಜೇಂದ್ರ ಪ್ರಸಾದ್ ಕಾಲಂ : ಹ್ಯಾಪಿ ಬರ್ತ್ ಡೇ ಬೋದಿಲೇರ್…
ನಿಮಗೆ ಇವೂ ಇಷ್ಟವಾಗಬಹುದು…




Happy birthday Charles Baudelaire!
Informative article rp..
ರಾಜಣ್ಣ ಅಕಸ್ಮಾತ್ತಾಗಿ ನನ್ನ ಕೈಗೆ ಸಿಕ್ಕ ಪಾಪದ ಹೂಗಳು
ಪುಸ್ತಕವನ್ನು ಓದಿದಂದಿನದಿಂದ ನಾನೂ ಬೋದಿಲೇರನೇ ಅಂತಲಾದರೂ ಹೇಳಿಕೊಂಡು ಖುಷಿ ಪಡಬೇಕು ಅನಿಸುತ್ತದೆ,
ಆತನಿಗಿದ್ದ ್ ದುವಾಲ್ ಮೇಲಿನ ಪ್ರೀತಿ ಅಥವಾ ಆ ಇನ್ನೇನೊ
ಓದಿಕೊಂಡಾಗ ಅಕ್ಷರಷಹಃ ಬೆಚ್ಚಿದ್ದೆ,
ನನ್ನ ಅತಿ ಪ್ರಭಾವ ಬೀರಿದ ಏಕೈಕ ವ್ಯಕ್ತಿ ಈ ಬೋದಿಲೇರ್,
ಅಂದಿನಿಂದ ಒಂದಲ್ಲ ಒಂದು ಕುಡಿಯುತ್ತಲೇ ಇದ್ದೇನೆ
ಒಮ್ಮೆ ಕಾವ್ಯ ಒಮ್ಮೆ ವೈನ್ ಮತ್ತು ಋಉಜುತ್ವಗಳನ್ನು.
Informative Article Rajanna… Mayakannadi Pustaka Odidadininda Baudelaire kurithu innoo tilkobeku anno kichhu hatti bittide….
Rukmini N
ಮಾಹಿತಿಯುಕ್ತ, ಉಪಯುಕ್ತ ಲೇಖನ! ಮುಂದಿನ ಸಲ ಲೈಬ್ರರಿಗೆ ಹೋದಾಗ, ನಿಮ್ಮ ಪಟ್ಟಿಯಲ್ಲಿರುವ ಪುಸ್ತಕಗಳಲ್ಲಿ ಸಿಗಬಹುದಾದ(?) ಕೆಲವನ್ನಾದರೂ ಹುಡುಕಿ ತಂದು ಓದಬೇಕೆಂಬ ಮನಸ್ಸಾಗಿದೆ..
ಬೋದಿಲೇರ್ ಒಬ್ಬ ವಿಕ್ಷಿಪ್ತ ಜೀವಿ. ನನ್ನ ಪ್ರಕಾರ ನಿರಾಶಾವಾದಿಯೂ ಹೌದು…ಅವನೇ ಹೇಳಿಕೊಂಡಂತೆ ಅವನಿಗೆ ಯಾವ ನಂಬಿಕೆಗಳೂ ಇರಲಿಲ್ಲ, ಯಾಕೆಂದರೆ ಅವನಿಗೆ ಮಹತ್ವಾಕಾಂಕ್ಷೆಗಳೇ ಇರಲಿಲ್ಲ. ಪ್ರೀತಿ-ಪ್ರೇಮ ಎನ್ನುವುದು ವ್ಯಭಿಚಾರದೆಡೆಗಿರುವ ಆಸೆ, ವ್ಯಭಿಚಾರಕ್ಕಿಂತ ನಿಜವಾದ ಆನಂದ ಮತ್ತೊಂದಿಲ್ಲ ಎಂದವನು ಜೀನ್ ದುಲಾಲ್ ಎನ್ನುವ ಹೆಣ್ಣಿನೊಡನೆ ಸಂಸಾರ ಹೂಡಿ ಎಲ್ಲಾ ವೈರುದ್ಧಗಳ ನಡುವೆ ಶ್ರೇಷ್ಠ ಕಾವ್ಯವನ್ನು ರಚಿಸಿರುವುದು ಸತ್ಯ. ಲಂಕೇಶ್ ಅನುವಾದಿಸಿದ ’ಪಾಪದ ಹೂಗಳು’ ಮನತಟ್ಟುತ್ತದೆ. ಆದರೆ ಎಸ್.ಎಫ್ ಯೋಗಪ್ಪನವರ್ ಅನುವಾದಿಸಿದ ’ಲೆ ಸ್ಪ್ಲಿನ್ ಡಿ ಪ್ಯಾರಿಸ್’(ಮಾಯಾ ಕನ್ನಡಿ) ಚೆನ್ನಾಗಿದ್ದರೂ ಕೆಲವು ಗದ್ಯಕವಿತೆಗಳು ನೀರಸವೆನಿಸುತ್ತವೆ.