ಈ ರೈಲು ಸುಮ್ಮನೆ ಹೋಗುವುದಿಲ್ಲ.. ಸಾವಿರಾರು ಮೆಗಾ ಸೀರಿಯಲ್ ಗಳೋ ಅಸಂಖ್ಯಾತ ಚಲನಚಿತ್ರಗಳೋ ಆಗುವಷ್ಟು ಕಥೆಗಳನ್ನು ಹೇಳುತ್ತಾ, ತೋರಿಸುತ್ತಾ & ನಮ್ಮನ್ನು .. ನಮ್ಮ ಬದುಕನ್ನೂ ಅಣಕಿಸುತ್ತಾ, ಕೆಣಕುತ್ತಾ ಹೋಗುತ್ತದೆ.. ಸುಮ್ಮನೆ ಜೋರು ಶಬ್ದ ಮಾಡಿ ಹೋಗುವ ‘ಶತಾಬ್ದಿ’ಯ ಜಾಯಮಾನದಲ್ಲ ‘ಪ್ಯಾಸೆಂಜರ್ ರೈಲಿನದ್ದು’.
ಎಷ್ಟೆಷ್ಟು ಜೀವದ ಜೀವಂತಕತೆಗಳು, ಹಸಿರ ಹೂಬಳ್ಳಿಯೊಂದು ಬಾಯ್ತೆರೆದು ಮಾತಾಡಿದಂತೆ ಶುರುವಾಗಿ ಸುರಿವ ಕೆಂಡದ ಮಳೆಯವರೆಗೂ…. ಬರಿಯ ಕಥೆಗಳೇ ತುಂಬಿವೆ ಇಲ್ಲಿ. ಕಥೆಗಳು ಎಂದು ಮುಗು ಮುರಿಯುವಂತಿಲ್ಲ, ಇವೆಲ್ಲ ಉಸಿರಿರುವ ಕಥೆಗಳು.. ಟಿಕೇಟು ಕೊಳ್ಳಲು ಆಗದೇ ಹತ್ತಿದ ಬಡವನಿಂದ ಶುರುವಾಗಿ ಲಕ್ಷಗಟ್ಟಲೆ ಹಣವ ಬ್ಯಾಗಿಗೆ ತುರುಕಿಕೊಂಡು ಹೋಗುವ ಸಿರಿವಂತನವರೆಗೂ! ಜಾತಿಯೊಂದನ್ನು ಹೇಳಲಾಗದ ಕೇಳಲಾಗದ, ಉಪಖಂಡದ ವೈವಿಧ್ಯತೆಯಲ್ಲಿ ಏಕತೆಯನ್ನು ಮೆರೆವ ಒಂದೇ ಜಾಗ! ಹೊಟ್ಟೆ ತುಂಬಿದ ಹೆಬ್ಬಾವಿನಂತೆ ಹರಿಯುತ್ತಾ, ತುಂಟ ಹುಡುಗರ ಹಾಗೆ ಆಗಾಗ್ಗೆ ಶಿಳ್ಳೆ ಹಾಕುತ್ತ , ಉಬ್ಬಸವೇನೋ ಎಂಬಂತೆ ಏದುಸಿರುಬಿಡುತ್ತಾ, ಗೊನೆ ತುಂಬಿದ ಬಾಳೆಯ ತರದಿ ಪ್ಯಾಸೆಂಜರ್ ರೈಲು ಬರುವುದೊಂದು ಚೆಂದವೇ ಚೆಂದ.
ನಾನು ಮಂಡ್ಯದಲ್ಲಿ ಬಿ.ಕಾಂ. ಓದು ಮುಗಿಸಿದ ಮೇಲೆ ಎಂ.ಕಾಂ. ಓದಿಗೆಂದು ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ವಾಣಿಜ್ಯ ಅಧ್ಯಯನ ವಿಭಾಗಕ್ಕೆ ಅರ್ಜಿ ಹಾಕಿದ್ದೆ. ಅದೃಷ್ಟವಶಾತ್ ಸಾಂಸ್ಕೃತಿಕ ಮೀಸಲಾತಿಯಲ್ಲಿ ನನಗೆ ಸೀಟು ಸಿಕ್ಕಿತು. ನನ್ನ ಜೊತೆ ಅರ್ಜಿಹಾಕಿದ್ದ ಒಂದಿಬ್ಬರಿಗೆ ಸೀಟು ಸಿಕ್ಕವು. ಉಳಿದಂತೆಲ್ಲ ಖಾಸಗಿ ಕಾಲೇಜು ಸೇರಿದರು.. ಗೆಳೆಯರೆಲ್ಲ ಪ್ಲಾನು ಮಾಡಿ ನಿತ್ಯವು ರೈಲಿನಲ್ಲಿ ಓಡಾಡುವುದೆಂದು ತೀರ್ಮಾನಿಸಿದೆವು.. ಅಬ್ಬಬ್ಬ ಎಂದರೆ ೧ ಗಂಟೆಯ ಪ್ರಯಾಣ ಅಷ್ಟೇ ಆಗಿದ್ದರಿಂದ ಎಲ್ಲರು ಸಮ್ಮತಿಸಿದರು.. ಬಸ್ ಪಾಸು ಮಾಡಿಸಿಕೊಳ್ಳುವುದು ಇನ್ನು ಅನುಕೂಲಕರವಾಗಿತ್ತಾದರೂ ವಿದ್ಯಾರ್ಥಿಗಳ ಪಾಸು ಎಂದ ಕೂಡಲೇ ಕಂಡಕ್ಟರ್ ಗಳು ಮಾಡಿಕೊಳ್ಳುವ ಮುಖ ನೋಡಲು ನನಗೆ ಇಷ್ಟವಿರಲಿಲ್ಲ. ಅಲ್ಲದೆ ದುಬಾರಿ ಕೂಡ ಆಗಿತ್ತದು. ಕೇವಲ ೮೦ ರೂಪಾಯಿಗೆ ಒಂದು ತಿಂಗಳ ಪರ್ಯಂತ ಮಂಡ್ಯ ಮೈಸೂರು ಎಷ್ಟು ಎಷ್ಟು ಬೇಕಾದರೂ ಯಾವಾಗ ಬೇಕಾದರೂ ಹೋಗಬಹುದಿತ್ತು ಆದ್ರೆ ಬಸ್ ಪಾಸ್ ನಲ್ಲಿ ಇಂತಹ ಅವಕಾಶ ಇರಲಿಲ್ಲ.
ಮೊದಲ ಮುಂಗಾರು ಮಳೆ ಬೀಳುವ ಹೊತ್ತು.. ರೈಲು ಜೀವನ ಶುರುವಾಯಿತು.. ಪ್ಯಾಸೆಂಜರ್ ಎಂದ ಮೇಲೆ ಕೇಳಬೇಕೆ, ಜನವೋ ಜನ.. ಮೈಸೂರು ಕಡೆಗೆ ಬರುವ ಬೆಂಗಳೂರಿನ ಮೊದಲ ರೈಲು ಆದ್ದರಿಂದ ಸದಾ ಜಿಗಿಗುಡುತ್ತಿತ್ತು. ಬಹುತೇಕ ನಿಂತೇ ಪ್ರಯಾಣ ಆಗಾಗ ಪುಟ್ ಬೋರ್ಡಿನ ಮೇಲೆ ಕೂತು ಲೋಕಾಭಿರಾಮದ ಮಾತು.

ಕಾಲೇಜು, ಸಿಲಬಸ್ಸು, ಮೇಷ್ಟ್ರು ಅವನು ಇವಳು ಮಾತಿಗೆ ಕೊನೆಯೆಲ್ಲಿ? ಎಲ್ಲೆಲ್ಲಿಗೋ ಹೋಗಿ ಬಿಡುತ್ತಿತ್ತು.. ಹುಡುಗಿಯರದ್ದು ಕೆಲವು ಗುಂಪುಗಳು ಇದ್ದುವು.. ಕೆಲವು ಉದ್ಯೋಗಕ್ಕೂ ಓದಿಗೂ ಹೋಗುವ ಗುಂಪುಗಳು .. ಇನ್ನುಕೆಲವರಂತು ಬೆಂಗಳೂರಿನಿಂದಲೇ ಮೈಸೂರಿಗೆ ಕೆಲ್ಸಕ್ಕೆ ಬರುವ ನೂರಾರು ಜನರ ಹತ್ತಾರು ಗುಂಪುಗಳೂ ಇದ್ದುವು ಅವುಗಳೆಲ್ಲ ಸಮಯಾಧಾರಿತವಾಗಿದ್ದುವು.. ಅವೆಲ್ಲ ಪ್ಯಾಸೆಂಜರ್ ರೈಲಿಗೆ ಪ್ರಾಶಸ್ತ್ಯ ಕೊಡುತ್ತಿರಲಿಲ್ಲ. ಇವರೆಲ್ಲಾ ಆಯಾ ಊರಿನಲ್ಲಿ ಸಿಗುವ ಗೆಳೆಯರಿಗೆಂದೇ ಪೇಪರ್ರು, ಕರ್ಚಿಫ್, ಬ್ಯಾಗು , ಏನಾದ್ರು ಒಂದು ಸಿಕ್ಕಿದ್ದು ಸೈಟಿನ ಮೇಲಿಟ್ಟುರಿಸರ್ವ್ ಮಾಡಿ ಬಿಡುತ್ತಿದ್ದರು.. ಉಳಿದವರಿಗೆ ನಿಲ್ಲಲು ಜಾಗ ಸಿಕ್ಕಿದ್ದರೆ ಸಾಕಿತ್ತು. ಇನ್ನೂ ನಮ್ಮ ಹಳ್ಳಿಯ ಜನರಂತೂ ಪಂಚೆ, ಟರ್ಕಿ ಟವೆಲ್ಲು ಉದ್ದುದ್ದ ಹಾಸಿ ಬಿಡುತ್ತಿದ್ದರು.. ಅದೇ ರೆಸರ್ವೆಷನ್ನು! ಹೀಗೆ ಕೂರಲು ಸೀಟಿನ ತೊಂದರೆ ಹೆಚ್ಚಾಗುತ್ತಲೇ ಹೋಯಿತು ( ಬಸ್ ಪ್ರಯಾಣ ದರ ದುಬಾರಿಯಾದ ಕಾರಣ) ಲಗೇಜು ಏರಿಸುವ ಮೆಜುಗತ್ತಿನ ಮೇಲೂ ಪವಡಿಸಲು ಅನುವಾದೆವು. ಕೆಲವರಂತೂ ಎಲ್ಲ ಬೋಗಿಗಳಲ್ಲೂ ಅಡ್ಡಾಡಲು ಶುರು ಮಾಡಿದರು.. ಈ ಅಡ್ದಾಟ ಮುಗಿವ ವೇಳೆಗೆ ಮೈಸೂರು ತಲುಪಿರುತಿದ್ದೋ..
ಈ ನಡುವೆ ಕಾಫಿ- ಟೀ, ಮದ್ದೂರು ವಡೆ ಮಾರುವ ಹುಡುಗರು, ಸೊಪ್ಪು ಸೀಬೆಹಣ್ಣು ಕಡಲೆಕಾಯಿ ಮಾರುವ ಹಳ್ಳಿಗರು, ಭಿಕ್ಷುಕರು, ಮಂಗಳಮುಖಿಯರು, ಮನೆ ಬಿಟ್ಟವರು ಅಬ್ಬಬ್ಬಾ ಅದೆಷ್ಟು ಚಿತ್ರ ವಿಚಿತ್ರ ಕೇಸಿನ ಜನರು. ಎಲ್ಲರದ್ದು ಒಂದು ರಾದ್ದಾಂತ.. ಧಾವಂತ ಇದ್ದದ್ದೇ.. ಓಡುವ ರೈಲು ಇಡೀ ಜಗತ್ತನ್ನೇ ಹೊತ್ತೊಯ್ಯುತ್ತಿದೆಯೇನೋ ಎನ್ನುವಷ್ಟರ ಮಟ್ಟಿಗೆ ಬದುಕಿನ ದೂರುಗಳನ್ನು ಹೊತ್ತ ಜೀವಗಳು ಅದರೊಳಗೆ ಪ್ರಯಾಣ ಮಾಡುತ್ತ ಇರುತ್ತಿದ್ದವು.. ಈಗಲೂ ಮಾಡುತ್ತಿವೆ ಕೂಡ. ಎಲ್ಲವೂ ಪರಿಹಾರವನ್ನು ನಿರೀಕ್ಷಿಸುತ್ತಾ ಒಳಗೊಳಗೇ ಸಾಂತ್ವನಗೊಳಿಸಿಕೊಳ್ಳುತ್ತ ಯಾವುದೊ ಓಟಕ್ಕೆ ಸಿದ್ದವಾಗುವುದನ್ನು ಒಳಗಣ್ಣು ಕಾಣದೇ ಇರದು. ಸ್ವಲ್ಪ ದಿನಗಳ ಅಂತರದಲ್ಲೇ ರೈಲಿನ ಕಸಿವಿಸಿ ಆರಂಭವಾಯಿತು. ನಮ್ಮ ಸಮಯಕ್ಕೆ ರೈಲು ಬರುತ್ತಿರಲ್ಲ ಅದಕ್ಕೆ ಬೇಕಿದ್ದ ಸಮಯಕ್ಕೆ ರೈಲು ಬರುತ್ತಿರುವಂತೆ ತೋರಿತು .. ರೈಲಿಗಾಗಿ ಕಾಯುವುದೇ ಕೆಲಸವಾಗಿ ಬಿಟ್ಟಿತು.. ನಮ್ಮ ಸಂಯಮ ಮುರಿದು ಸಿಕ್ಕ ರೈಲು ಏರಲು ಆರಂಭಿಸಿದೋ.. ಮೈಸೂರು-ಬೆಂಗಳೂರು ನಡುವಣ ಜೋಡಿ ರೈಲು ಮಾರ್ಗದ ಕೆಲಸಗಳು ತ್ರೀವ್ರ ಪ್ರಗತಿಯಲ್ಲಿದ್ದುವು. ಇಷ್ಟಕ್ಕೇ ಬೇಸ್ತು ಬಿದ್ದ ನನ್ನ ಗೆಳೆಯರು ಒಬ್ಬರಾಗಿ ಮೈಸೂರಿನಲ್ಲಿ ನೆಲೆ ಕಂಡುಕೊಂಡರು. ಹಾಸ್ಟೆಲ್ಲು . ಪಿಜಿ , ಅವರದೇ ರೂಮು ಹೀಗೆ ಏನೇನೋ ವ್ಯವಸ್ತೆ ಮಾಡಿಕೊಂಡರು. ನಾನು ಮಾತ್ರ ಯಥಾವತ್ ಒಬ್ಬಂಟಿಯಾದೆ.
ಒಂಟಿ ಪ್ರಯಾಣ ಆರಂಭವಾದ ನಂತರದಲ್ಲಿ ಪ್ಯಾಸೆಂಜರ್ ಮತ್ತು ಎಕ್ಸ್ಪ್ರೆಸ್ಸು ಎರಡೂ ರೈಲುಗಳಲ್ಲೂ ಕಾಲಿಟ್ಟೆ.. ಸಿಕ್ಕಿದ್ದರಲ್ಲಿ ಮೈಸೂರು ತಲುಪುವ ಆಲೋಚನೆ ಶುರುವಾಯಿತು. ಆದ್ರೆ ಈ ಎಕ್ಸ್ ಪ್ರೆಸ್ಸು ಟ್ರೈನುಗಳಲ್ಲಿ ಜೀವಂತಿಕೆ ಅನ್ನೋದು ಅರೆಜೀವ ಎಂತಾಯ್ತು. ಸದಾ ಕಾಲ ನಿದ್ದೆ ಹೊಡೆಯುವ, ಮೊಬೈಲು, ಎಫ್ ಎಮ್ಮು , ಐ ಪಾಡ್ ಗಳ ಕಲರವಗಳಲ್ಲಿ ಮುಳುಗಿರುವ ಜನ.. ಮಲ್ಲಿಗೆಯ ವಾಸನೆ ಕನಕಾಂಬರ ಹೂಗಳ ನಗು ಇಲ್ಲಿ ಕಾಣುತ್ತಿರಲಿಲ್ಲ.. ಒಂದು ಕೋಮ ಸ್ಥಿತಿಯಲ್ಲಿರುವ ಆಸ್ಪತ್ರೆಯ ಕೋಣೆಯಂತೆ ಭಾಸವಾಗುತ್ತಿತ್ತು. ಬರುಬರುತ್ತ ನಾ ಕೂಡ ಅಲ್ಲಿನ ರೋಗಿಯಾದೆ. ಓದು & ಬದುಕಿಗಿಂತ ದಿನ ಹೆಚ್ಚು ಸಮಯ ರೈಲು, ರೈಲು ಕಾಯುವಿಕೆ ಇದರಲ್ಲೇ ಕಳೆದು ಹೋಗಲು ಆರಂಭಿಸಿತು. ಒಂಟಿತನ ಹೆಚ್ಚು ಕಾಣಬಾರದೆಂದು ನಾ ಕೂರುವ ಪಕ್ಕದ ಸೀಟು ಸದಾ ಕಲ ಖಾಲಿ ಇರುವಂತೆ ನೋಡಿಕೊಂಡೆ.. ನನ್ನ ಬ್ಯಾಗು, ಬುಕ್ಕು ಯಾವುದೊ ಒಂದು ಇತ್ತು ರಿಸರ್ವ್ ಮಾಡುತ್ತ ಇದ್ದೇ. ನನಗೊಪ್ಪುವ ಗೆಳೆಯ ಸಿಕ್ಕುತ್ತಾನೆ ಎಂದು. ರೈಲು ಪ್ರಯಾಣದ ಕೊನೆ ದಿನ ಕೂಡ ಅ ಸೀಟು ಖಾಲಿಯೇ ಇತ್ತು! ಈ ತಿರುವಿನಲ್ಲೇ ಬದುಕಿನ ಬೇರೆ ಬೇರೆ ಮಜಲುಗಳ ಕಾಣುವುದಕ್ಕೂ . ಮಹತ್ತರವಾದ ದರ್ಶನಗಳ ಓದಿಗೂ ಒಂದು ಅಮೋಘವಾದ ಏಕಾಂತ & ಏಕಾಗ್ರತೆ ಲಭ್ಯವಾಯ್ತು.
ಈ ನಡುವೆ ಕೆಲವು ಉದ್ಯೋಗಿಗಳೂ, ಅನಿಮೇಷನ್ ಅಭ್ಯಾಸ ಮಾಡುತ್ತಿರುವ ಕೆಲವು ಹುಡುಗರು ಪರಿಚಯವಾದರು.. ಹಲವಾರು ಗುಂಪುಗಳು ಕೂಡ. ಓದಿನ ರುಚಿ ಇವರಲ್ಲೇಕೋ ಇರಲು ಬಿಡಲಿಲ್ಲ ಎರಡು ವರ್ಷಗಳ ಕಾಲ ಒಬ್ಬನೇ ರೈಲು ಪ್ರಯಾಣ ಮಾಡಿದೆ.. ಈ ಅವಧಿಯಲ್ಲಿ ಜನರನ್ನು, ಪರಿಸರವನ್ನು ಸೂಕ್ಷ್ಮವಾಗಿ ಗಮನಿಸುವ ಆಲೋಚಿಸುವ ಕಣ್ಣು ತೆರೆಕೊಂಡಿತು. ದಿನನಿತ್ಯ ಒಂದೊಂದು ಕಥೆ, ಹುಟ್ಟು-ಸಾವುಗಳ ಸುದ್ದಿಯನ್ನೂ ಹೊತ್ತು ತರುತ್ತಿತ್ತು ರೈಲು. ಸೀಬೆಹಣ್ಣು ಕೂಗಿ ಮಾರುವ ಹೆಂಗಸಿನ ಎದೆಯ ನೋವು.. ಕಾಣದ ಕುರುಡು ಗಂಡನ ಕೈ ಹಿಡಿದು ಭಿಕ್ಷೆ ಬೇಡುವ ಹೆಣ್ಣು , ಹಾಡು ಹೇಳುತ್ತಾ ದಮ್ಮಡಿ ಕಾಸಿಗೆ ಕೈ ಒಡ್ಡುವ ವಯಸ್ಸಾದ ಅಜ್ಜ, ಹಣಕ್ಕೆ ಪೀಡಿಸುವ ಮಂಗಳಮುಖಿಯರು, ಪುಸ್ತಕ ಮಾರುವ ಹುಡುಗ ಎಲ್ಲಕ್ಕಿಂತ ಹೆಚ್ಚು ಬರಿಗಾಲಲ್ಲೇ ನಡೆವ ಗಾವಿಲರು ಎಷ್ಟು ಅಸಂಖ್ಯ ಪಾತ್ರಗಳು! ಈ ಪ್ಯಾಸೆಂಜರ್ ರೈಲು ನನಗ್ಯಾಕೋ ಸಂವಿಧಾನದ ಮೂರ್ತ ರೂಪ ಅನ್ನಿಸತೊಡಗಿತ್ತು.
ಮೈಸೂರು ಪ್ಯಾಸೆಂಜರ್ ರೈಲು ಈವಾಗ ನನ್ನೆದೆಯಲ್ಲಿ ಸದಾ ಓಡಾಡುತ್ತಿದೆ .. ಅದ್ರ ನೆನಪುಗಳು, ನೋವುಗಳು, ದೂರುಗಳ ಜೊತೆಯಲ್ಲಿ .
ರಾಜೇಂದ್ರ ಪ್ರಸಾದ್ ಕಾಲಂ : ಮೈಸೂರು ಪ್ಯಾಸೆಂಜರ್
ನಿಮಗೆ ಇವೂ ಇಷ್ಟವಾಗಬಹುದು…





Ishta aayithu….
Thanks Sudhesh 🙂
Hello Rajendra,
Nimma padabalake thumbaa chennagide. Upameyagalanthoo, heLi maadisidanthe.. Thumbaa chennagi barediddeera.:)