ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಜೇಂದ್ರ ಪ್ರಸಾದ್ ಕಾಲಂ : ಮಿಲರೇಪನ ಪರಿನಿರ್ವಾಣ


ಅತ್ತ ಮಾರ್ಪ ಭಾರತಕ್ಕೆ ಬಂದ ಮೇಲೆ ಮಹಾಗುರು ನರೋಪ ನಿರ್ವಾಣ ಹೊಂದಿದನು. ಇದೀಗ ಮಾರ್ಪನಿಗೂ ಬಹಳ ವಯಸ್ಸಾಗಿತ್ತು. ಕರ್ಗ್ಯುಟ್ಪ ಪರಂಪರೆಯನ್ನು ಮುಂದುವರೆಸಿವವನು ಮಾರ್ಪನ ಶಿಷ್ಯನೇ ಆಗಬೇಕಿತ್ತು. ಹಾಗಾಗಿ ಮಾರ್ಪ ದೇವತೆಗಳ ಸೂಚನೆಗಾಗಿ ಕಾಯ್ದ.. ಸುಮಾರು ದಿನಗಳ ನಂತರ ಮಿಲರೇಪನಿಗೆ ಒಂದು ಕನಸು ಬಿತ್ತು.. ಅದನ್ನು ತಿಳಿದ ಮಾರ್ಪ ಇವನೇ ಕರ್ಗ್ಯುಟ್ಪ ಪರಂಪರೆಯ ಮುಂದಿನ ಗುರು ಎಂದು ತೀರ್ಮಾನಿಸಿದನು.
ಮಿಲರೇಪನಿಗೆ ಹೇಳಿಕೊಡಬೇಕಾದ ಎಲ್ಲ ವಿದ್ಯೆಗಳನ್ನು ಬೋಧನೆಗಳನ್ನು ಮಾಡಿ ಕಡೆಗೆ ‘ತುಮ್ಮೊ’ ಎಂಬ ಎಂತಹ ಚಳಿ, ಥಂಡಿಯಲ್ಲೂ ದೇಹವನ್ನು ಬಿಸಿಯಾಗಿಟ್ಟುಕೊಳ್ಳುವ ತಂತ್ರವನ್ನು ಕೂಡ ಹೇಳಿಕೊಡುತ್ತಾನೆ. ಮತ್ತೆ ಇನ್ನೊಂದಷ್ಟು ದಿನಗಳ ಕಾಲ ಧ್ಯಾನ-ತಪಗಳಲ್ಲಿ ತೊಡಗಿಕೊಳ್ಳುತ್ತಾನೆ
ಈ ಮಧ್ಯೆ ಒಂದು ದಿನ ಮಿಲರೇಪನಿಗೆ ತನ್ನ ಮನೆಯ ಪಾಳುಬಿದ್ದ ಹಾಗೆ ಕನಸೊಂದು ಬಿದ್ದು ತಾಯಿಯ ನೆನಪು ತೀವ್ರವಾಗಿ ಕಾಡಲಾರಂಭಿಸುತ್ತದೆ. ತಾಯಿಯನ್ನೂ ಕಾಣಲೇಬೇಕೆಂದು ಮಾರ್ಪನ ಬಳಿ ತಾನು ಊರಿಗೆ ಹೋಗಲು ಅನುಮತಿ ಕೇಳುತ್ತಾನೆ. ಆದರೆ ಮಾರ್ಪನಿಗೆ ಅವನು ತಾಯಿಯನ್ನು ಕಾಣುವುದು ಸಾಧ್ಯವಿಲ್ಲವೆಂದೂ ಮತ್ತು ಇನ್ನೆಂದೂ ಗುರುಶಿಷ್ಯರು ಮತ್ತೆ ಭೇಟಿಯಾಗಲು ಸಾಧ್ಯವಿಲ್ಲವೆಂದು ತಿಳಿದಿರುತ್ತದೆ. ಹಾಗಾಗಿ ಕೊನೆಯ ಮಂತ್ರ –ತಂತ್ರ ದೀಕ್ಷೆಗಳನ್ನು ಶಿಷ್ಯನಿಗೆ ಉಪದೇಶ ಮಾಡುತ್ತಾನೆ. ತಂತ್ರ ಮರಗದ ಮಂಡಲಗಳನ್ನು ಬರೆದು ದೇವತೆಗಳನ್ನು ಆಹ್ವಾನಿಸಿ ಮಿಲರೇಪನಿಗೆ ಅನುಗ್ರಹ ಒದಗಿಸುತ್ತಾನೆ. ಕನಸನ್ನು ಪ್ರವೇಶ ಮಾಡುವ , ಕನಸಿನ ಮೂಲಗಳನ್ನು ಅದರ ಅರ್ಥಗಳನ್ನು, ಭವಿಷ್ಯವನ್ನು ತಿಳಿದುಕೊಳ್ಳುವ ತನ್ನೆಲ್ಲಾ ವಿದ್ಯೆಗಳನ್ನು ಹೇಳಿಕೊಟ್ಟು ಮುಂದೆ ದೇವತೆಗಳು ಸೂಚಿಸುವ ಯೋಗ್ಯ ಶಿಷ್ಯಯೊಬ್ಬನಿಗೆ ಇದೆಲ್ಲವನ್ನು ಹೇಳಬೇಕೆಂದು ತಮ್ಮ ಗುರು ಪರಂಪರೆಯನ್ನು ಮುಂದುವರಿಸಬೇಕೆಂದು ಕೇಳಿಕೊಳ್ಳುತ್ತಾನೆ.
ಈ ಸಮಯದಲ್ಲೇ ತನ್ನ ವಿರಾಟ್ ಶಕ್ತಿ ಸ್ವರೂಪವನ್ನು ಮಿಲರೇಪನಿಗೆ ತೋರಿಸುವ ಮಾರ್ಪ, ಗುರು ಎಷ್ಟು ಸರಳವಾಗಿ ಮತ್ತು ಗಂಭೀಯರವಾಗಿ ಬದುಕಬೇಕೆಂದುದಕ್ಕೆ ತಾನೇ ನಿದರ್ಶನವಾಗುತ್ತಾನೆ. ಮುಂದೆ ಮಾಡಬೇಕಾದ ಧ್ಯಾನ, ಅಧ್ಯಯನ, ಬೋಧನೆ , ನೀತಿ ನಿರೂಪಣೆಗಳನು ತಿಳಿಸಿ, ಅಂಟಿಸಿದ ಒಂದು ಪತ್ರವನ್ನು ಕೊಟ್ಟು ಮುಂದೆ ಯವತ್ತಾದ್ರೂ ದೊಡ್ಡಕಷ್ಟಕ್ಕೆ ಸಿಲುಕಿದಾಗ ಇದನ್ನು ನೋಡಬೇಕೆಂದು ಹೇಳಿ ತುಂಬು ಪ್ರೀತಿಯಿಂದ ಕಳುಹಿಸಿ ಕೊಡುತ್ತಾನೆ. ಮಾರ್ಪ ಮತ್ತು ಅವನ ಹೆಂಡತಿಗೆ ಮಿಲರೇಪನ ಅತಿಯಾದ ಪ್ರೀತಿ ವಿಶ್ವಾಸಗಳಿದ್ದರೂ ಅದನ್ನು ಮಾರ್ಪ ಎಲ್ಲಿಯೂ ತೋರಗೊಡುವುದಿಲ್ಲ. ಐದಾರು ತಿಂಗಳುಗಳು ನಡೆದು ಕ್ರಮಿಸಬೇಕಿದ್ದ ಅವನ ಊರನ್ನು ಕೇವಲ ಮೂರು – ನಾಲಕು ದಿನಗಳಲ್ಲಿ ತನ್ನ ತಂತ್ರ ಬಲದಿಂದ ತಲುಪಿಬಿಡುತ್ತಾನೆ ಮಿಲರೇಪ.
ಆದರೆ ಅವನಿಗೆ ಆಘಾತ ಕಾದಿರುತ್ತದೆ. ಬಹಳ ಹಿಂದೆಯೇ ಅವನ ತಾಯಿ ತೀರಿಹೋಗಿ , ಮನೆ ಪಾಳುಬಿದ್ದು ಅವನ ತಂಗಿ ಪೇಟಾ ಆನಾಥೆಯಾಗಿ ಊರು ಬಿಟ್ಟು ಹೋಗಿರುತ್ತಾಳೆ. ಊರಿನ ಜನರೆಲ್ಲ ಆ ಮನೆಯನ್ನು ದೆವ್ವಗಳ ಮನೆಯೆಂದು ತಿಳಿದು ಆ ಮನೆಯಿಂದ ಬಹಳ ದೂರ ಉಳಿದಿರುತ್ತಾರೆ. ಇಲ್ಲಿಗೆ ಬರುವ ಮಿಲರೇಪ, ತಾಯಿ ತಂಗಿಯರನ್ನು ನೆನೆದು ಅಪಾರವಾಗಿ ದುಃಖಿಸುತ್ತಾನೆ. ಆ ಮನೆಯಲ್ಲಿಯೇ ಸಿಕ್ಕ ಕೆಲವು ಮೂಳೆಗಳನ್ನು ಒಂದೆಡೆ ಸೇರಿಸಿ ಅವುಗಳ ಮೇಲೆ ಕುಳಿತು, ಅವನ ಅಪ್ಪ ಅಮ್ಮನಿಗೆ ಮುಕ್ತಿ ಸಿಗಲೆಂದು ಬೇಡುತ್ತಾ ಹಗಲು ಇರುಳು 7 ದಿನಗಳ ಕಾಲ ತಪಸ್ಸು ಮಾಡಿ ತನ್ನ ಧ್ಯಾನ ಬಲದಿಂದ ಅವರಿಗೆ ಮುಕ್ತಿ ದೊರಕಲು ಪ್ರಾರ್ಥಿಸುತ್ತಾನೆ. ಇದಾದ ನಂತರ ‘ದ್ರಾಗ್ ಕಾರ್ ತಾಸೋ’ ಎಂಬ ಗುಹೆಯಲ್ಲಿ ಧ್ಯಾನಕ್ಕೆ ಕೂರುತ್ತಾನೆ. ಮಾರ್ಪ ಕೊಟ್ಟಿದ್ದ ಆಹಾರ ಕೆಲವು ದಿನ ಉಪಯೋಗಕ್ಕೆ ಬರತ್ತೆ. ಮುಂದೆ ಭಿಕ್ಷೆ ಬೇಡುತ್ತಾ ತನ್ನ ಧ್ಯಾನ, ಅಧ್ಯಯನ ಮುಂದುವರಿಸುತ್ತಾನೆ., ಆದ್ರೆ ನಡುವೆ ಒಮ್ಮೆ ಅವನ ಅತ್ತೆಯ ಮನೆಯಲ್ಲಿ ಭಿಕ್ಷೆ ಕೇಳಲು ಸಿಕ್ಕಿಕೊಂಡು ಆಕೆ ಹಳೆಯ ಕೋಪಕ್ಕೆ ಇವನ ಮೇಲೆ ನಾಯಿಗಳನ್ನು ಬಿಟ್ಟು ಹಲ್ಲೆ ಮಾಡುತ್ತಾಳೆ. ಮತ್ತೊಮ್ಮೆ ಅವನ ಚಿಕ್ಕಪ್ಪನ ಕೈ ಸಿಕ್ಕಿಕೊಳ್ಳುತ್ತಾನೆ.. ಮಿಲರೇಪನನ್ನು ಕೊಂಡೆ ಬಿಡಬೇಕು ಎಂದು ಅವರೆಲ್ಲ ಅಟ್ಟಾಡಿಸಿಕೊಂಡು ಬಂದಾಗ ಪಿಶಾಚಿಗಳನ್ನು , ಶಾಕಿನಿ ಢಾಕಿನಿಯರನ್ನು ಕರೆಯುತ್ತಾನೆ. ಈತನ ಮಂತ್ರೋಚ್ಚಾರ ಕೇಳಿದ ಜನ ಹೆದರಿಕೊಂಡು ಅವನಿಗೆ ಭಿಕ್ಷೆ ಕೊಟ್ಟು ಕಳುಹಿಸುತ್ತಾರೆ.
ಹೀಗೆ ತಂದ ಎಲ್ಲ ಆಹಾರಗಳು ಖಾಲಿಯಾದ ಮೇಲೆ ಮಿಲರೇಪ ಸಿಕ್ಕಸಿಕ್ಕ ಗಿಡ, ಹುಲ್ಲು, ಸೊಪ್ಪುಗಳನ್ನು ತಿಂದು ಬದುಕಿದ. ಇದರಿಂದ ಅವನ ಇಡೀ ದೇಹ ಸಣ್ಣದಾಗಿ, ಹಸಿರಾಗಿ ರೋಮಗಲೆಲ್ಲಾ ಹುಲ್ಲಿನಂತಾಗಿ ವಿಲಕ್ಷಣವಾಗಿ ಕಾಣುತ್ತಿದ್ದ. ಈ ನಡುವೆ ಜನರ ಕಾಟ ತೊಂದರೆಗಳು ಕೂಡ ಅತಿಯಾದುವು. ಆದರೆ ಮಿಲರೇಪನಿಗೆ ಶಾಂತಿ ಮತ್ತು ಸಂಯಮ ಎರಡು ಆವರಿಸಿಕೊಂಡಿದ್ದವು. ಈ ಸಮಯದಲ್ಲಿ ಅವನ ತಂಗಿ ‘ಪೇಟಾ’ ತನ್ನ ಅಣ್ಣ ವಾಪಸು ಬಂದಿರುವುದು ತಿಳಿದು ಆಗಾಗ್ಗೆ ಅವನಿದ್ದ ಗುಹೆಗೆ ಬಂದು ತಿನ್ನಲು ಅನ್ನ, ಗಂಜಿ ಹಾಗೂ ಉಡಲು ಬಟ್ಟೆ ಕೊಟ್ಟು ಹೋಗುತ್ತಿದ್ದಳು.

ಇದೆಲ್ಲವನ್ನು ತ್ಯಜಿಸಿದ್ದ ಮಿಲರೇಪನ ಮನಸ್ಸು ಮತ್ತು ದೇಹ ವಿಚಿತ್ರವಾಗಿ ವರ್ತಿಸಲು ಶುರು ಮಾಡಿದುವು. ತುಂಬಾ ಮಾನಸಿಕವಾದ ಹಿಂಸೆಯನ್ನು ಅನುಭವಿಸಲು ಶುರುಮಾಡಿದಾಗ ತನ್ನ ಗುರು ಮಾರ್ಪನನ್ನು ನೆನೆಸಿಕೊಂಡ. ತಕ್ಷಣ ಅವನು ಕೊಟ್ಟಿದ್ದ ಪತ್ರ ನೆನಪಿಗೆ ಬಂತು. ಅದನ್ನು ತೆರೆದು ನೋಡಿದಾಗ ಅವನ ಸಮಸ್ಯೆಗೆ ಪರಿಹಾರ ಅಲ್ಲಿತ್ತು. ಮತ್ತೆ ಮನೋನಿಗ್ರಹ ಸಿದ್ದಿಸಿಕೊಂಡ ಮಿಲರೇಪ ಇನ್ನು ಮಹತ್ತಾದ ಅನೇಕ ಮಂತ್ರಸಿದ್ದಿಗಳನ್ನು ಪಡೆಯುತ್ತಾ ಹೋದ. ಅದು ತನಗೆ ಬೇಕಾದ ರೂಪವನ್ನು ಪಡೆಯುವ , ಬೇಕಾದಲ್ಲಿಗೆ ಹೋಗುವ , ಎವರೆಸ್ಟ್ ಶಿಖರದ ತುದಿಗೆ ಹಾರುವಷ್ಟು ಮಟ್ಟಿಗೆ ತಂತ್ರ, ಯೋಗ ಸಿದ್ದಿಗಳನ್ನು ಪಡೆದ.
ಮಿಲರೇಪನ ಸಿದ್ದಿ, ಯೋಗಗಳನ್ನು ತಿಳಿದ ಜನ ತಮ್ಮ ಸ್ವಂತ ಕೆಲಸಗಳಿಗೆ ಅವನ ಬೆನ್ನುಬಿದ್ದರು. ಆದ್ರೆ ಯಾವುದೇ ಕಾರಣಕ್ಕೂ ಈ ಸಿದ್ದಿಗಳನ್ನು ಸ್ವಾರ್ಥಕ್ಕೆ ಬಳಸಬಾರದೆಂದು ಮಿಲರೇಪನಿಗೆ ಗುರುವಿನ ಕಟ್ಟಾಜ್ಞೆಯಾಗಿತ್ತು. ಇದರಿಂದ ಬೇಸತ್ತು ಮಿಲರೇಪ ಎವರೆಸ್ಟ್, ಕ್ಯಿಟ್ ಪುಟ್, ಗುಂಗ್ತಾಂಗ್ ಮುಂತಾದ ಆರು ಪವಿತ್ರ ಸ್ಥಳಗಳಲ್ಲಿ ಧೀರ್ಘ ಕಾಲ ತಪಸ್ಸು ಮಾಡಿದನು. ಹೀಗೆ ಜನರಿಂದ ತಪ್ಪಿಕೊಂಡು ಬೆಟ್ಟಗಳಲ್ಲಿ ಗವಿಗಳಲ್ಲಿ ಅಡವಿ ತಪಸ್ಸಿಗೆ ಕೂರಲು ಜಾಗ ಅರಸುವಾಗಲೇ ಅನೇಕರು ಇವನ ಶಿಷ್ಯರು ಆದರು. ಅಲ್ಲಿಲ್ಲಿ ಇದ್ದ ಸ್ಥಳೀಯ ದೇವತೆಗಳನ್ನು ಮೊದಲು ತನ್ನ ಶಿಷ್ಯರನ್ನಾಗಿಸಿಕೊಂಡ ಮಿಲರೇಪನ ಮುಂದೆ ರೇಚಂಗ್, ಗಾಂಪೋಪ, ಖ್ರಿಯರೇಪ, ಸಬಾನ್ ರೇಪ, ಶಿವೋದ್ ರೇಪ ಮುಂತಾದ ಪ್ರಖ್ಯಾತ ಶಿಷ್ಯರನ್ನು ಪಡೆದುಕೊಂಡ.
ಮುಂದೆ ಟಿಬೇಟಿನ ಮಹಾಯೋಗಿ ಅಂತಲೇ ಹೆಸರಾದ ಮಿಲರೇಪ, ಕ್ರಿ.ಶ.1135ರಲ್ಲಿ ಚೂಬಾರ್ ಎಂಬಲ್ಲಿ ಯೋಗದ ಮೂಲಕ ಪರಿನಿರ್ವಾಣ ಹೊಂದಿದನು.
ಸಾವಲ್ಲು ಪವಾಡ ಪುರುಷ :
· ನ್ಯಾನಮ್ ಮತ್ತು ಬ್ರಿನ್ ಎಂಬ ಎರಡು ಪ್ರದೇಶಗಳ ಜನ ಮಿಲರೇಪನ ಶವಸಂಸ್ಕಾರಕ್ಕೆ ಕಿತ್ತಾಡಲು ಆರಂಭಿಸಿದರು. ಕಡೆಗೆ ಎರಡೂ ಕಡೆಯವರಿಗೂ ಪ್ರತ್ಯೇಕ ಮಿಲರೇಪನ ದೇಹ ಸಿಕ್ಕಿತು. ಶಾಂತಿಯಿಂದಲೇ ಅತ್ಯ ಸಂಸ್ಕಾರ ನಡೆಯಿತು.
· ಆದ್ರೆ ‘ಚೂಬಾರ್’ ನಲ್ಲಿದ್ದ ನಿಜವಾದ ಶವವನ್ನು ಅವನ ಪ್ರಿಯ ಶಿಷ್ಯ ರೇಚಂಗ್ ಬರುವವರೆಗೂ ಸಂಸ್ಕಾರ ಮಾಡದೆ 6-7 ದಿನ ಕಾದಿರಿಸಲಾಗಿತ್ತು.
· ಮಿಲರೇಪನ ಶವ ಸಂಸ್ಕಾರವನ್ನು ರೇಚಂಗ್ ಬರುವಷ್ತ್ರಲ್ಲಿ ಮಾಡಬೇಕೆಂದು ಹೊಸಶಿಷ್ಯರು ಪ್ರಯತ್ನಪಟ್ಟರೂ ಬೆಂಕಿ ಹೊತ್ತಿಕೊಳ್ಳಲೇ ಇಲ್ಲ.
· ಅಲ್ಲಿಗೆ ಬಂದ ರೇಚಂಗ್ , ಮಿಲರೇಪನ ಮೂಕಹ ನೋಡಲು ಕೂಡ ಅವಕಾಶ ಕೊಡಲಿಲ್ಲ ಹೊಸಶಿಷ್ಯರು! ಕಡೆಗೆ ದುಃಖದಿಂದ ರೇಚಂಗ್ ಗುರುವಿನ ಮೇಲೆ ಹಾಡು ಹೇಳಿದಾಗ ಮಿಲರೇಪ ಚಿತೆಯಿಂದಲೇ ರೇಚಂಗ್ ನನ್ನು ಹತ್ತಿರಕ್ಕೆ ಕರೆದ ಉಳಿದ ಶಿಷ್ಯರಿಗೆ ಬುದ್ದಿಮಾತು ಹೇಳಿದ ಮೇಲೆ ಚಿತೆ ಹೊತ್ತಿ ಉರಿಯಿತಂತೆ.
· ಮಿಲರೇಪನ ಅಸ್ತಿ , ಚಿತಾಭಸ್ಮಗಳನ್ನು ಬೌದ್ದತಂತ್ರದ ಐದು ಜನ ಪ್ರಮುಖ ಡಾಕಿನಿಯರು ಶಿಷ್ಯರಿಗೆ ಏನು ಸಿಗದಂತೆ ಕೊಂಡೊಯ್ದುಬಿಟ್ಟರಂತೆ.
· ಸಾಯುವ ಮುನ್ನ ಮಿಲರೇಪ ಕೊಟ್ಟ ಸೂಚನೆಯಂತೆ ಕೆಲವು ದಿನಗಳ ನಂತರ ಅವನು ಹೇಳಿದ್ದ ಬೆಂಕಿಗೂಡನ್ನು ಅಗೆದು ನೋಡಿದಾಗ ಅಲ್ಲಿ ಶಿಷ್ಯರಿಗೆ ಏನು ಸಿಗದಂತೆ ಮಿಲರೇಪನ ಹತ್ತಿಯ ಬಟ್ಟೆ, ಒಂದು ಚೂರಿ, ಸಕ್ಕರೆಯ ಅಚ್ಚು ಸಿಕ್ಕುತ್ತದೆ. ಗುರುವಿನ ನೆನಪಿಗೆ ಅದನ್ನು ಎಲ್ಲರೂ ಕತ್ತರಿಸಿ ಇಟ್ಟುಕೊಳ್ಳುತ್ತಾರೆ ಮತ್ತು ಎಷ್ಟು ತುಂಡು ಮಾಡಿದರು ಅದು ಮುಗಿಯುದೇ ಇಲ್ಲ.
ಇಷ್ಟೆಲ್ಲಾ ಸಂಭವಿಸದ ಮೇಲೆ ರೇಚೆಂಗ್, ಗುರು ಮೊದಲೇ ನಿಯುಕ್ತಿಗೊಳಿಸಿದ್ದ ಕರ್ಗ್ಯುಟ್ಪ ಪರಂಪರೆಯ ಮುಂದಿನ ಗುರು ಗಾಂಪೋಪನಿಗೆ ಮಿಲರೇಪನ ವಸ್ತುಗಳನ್ನು , ಅವನ ಪರಿನಿರ್ವಾಣವನ್ನು ತಿಳಿಸಿ ಸಮಾಧಾನ ಮಾಡುತ್ತಾನೆ.
ಹೆಚ್ಚಿನ ತಿಳುವಳಿಕೆಗೆ :
ಮಿಲರೇಪ ಮತ್ತು ಕಾವ್ಯ :
ಮಿಲರೇಪ ತನ್ನ ಬದುಕಿನುದ್ದಕೂ ತನ್ನ ಭಾವತೀವ್ರತೆಯನ್ನು, ತನ್ನ ಕಷ್ಟ, ನೋವು, ಸೋಲು ಮತ್ತು ಗುರುವಿಗೆ ಶರಣಾಗತಿಯನ್ನು ಆಯಾ ಸಂದರ್ಭಗಳಲ್ಲಿ ಹಾಡುಕಟ್ಟಿ ಹಾಡುತ್ತಿರುತ್ತಾನೆ. ಇಂತಹ ಅಸಂಖ್ಯಾತ ಹಾಡುಗಳು ಟಿಬೇಟಿನಲ್ಲಿ ಈಗಲೂ ಲಭ್ಯವಿವೆ. ಇವನ್ನು ‘ಗುರ್ ಬುಂ’ ಎನ್ನುವ ಹೆಸರಿನಲ್ಲಿ ಸಂಗ್ರಹಿಸಲಾಗಿದೆ ಮತ್ತು ಅಂತರ್ಜಾಲದಲ್ಲಿ ಸಹ ದೊರಕುತ್ತವೆ. ಆಸಕ್ತರು ಓದಬಹುದು.
ಜೇತ್ಸುನ್ ಕಃಬುಮ್ :
ಇದು ಪ್ರಿಯ ಶಿಷ್ಯ ರೇಚಂಗ್ ಬರೆದ ಮಿಲರೇಪನ ಜೀವನ ಚರಿತ್ರೆ. 11-12 ಶತಮಾನದ ಟಿಬೇಟಿನ ಸಾಮಾಜಿಕ, ರಾಜಕೀಯ ಮತ್ತು ಇನ್ನಿತರೆ ಸ್ಟಿತಿಗತಿಗಳನ್ನು ತಿಳಿಯಲು ಸಹ ಇದು ಪ್ರಯೋಜನಕಾರಿಯಾಗಿದೆ. ಕಥೆಯ ನಿರೂಪಣೆ ವಿಧಾನ ಅದ್ಬುತವಾಗಿದೆ ಎಂದು ಬೇಕಾದಷ್ಟೂ ವಿಮರ್ಶಕರು, ಬರಹಗಾರು ”ಜೇತ್ಸುನ್ ಕಃಬುಮ್” ನ ರಚನಾ ವಿಧಾನವನ್ನು ಕೊಂಡಾಡಿದ್ದಾರೆ.
(ಮುಗಿಯಿತು )
 

‍ಲೇಖಕರು G

4 June, 2014

2 Comments

  1. prathibha nandakumar

    ಎಚ್ ಎಸ್ ಶಿವಪ್ರಕಾಶ್ ಅವರ ಕವನ ಸಂಕಲನ ’ಮಿಲರೇಪ’ ಯಾಕಪ್ಪಾ ಹೆಸರಿಸಲಿಲ್ಲ?

  2. ರಾಜೇಂದ್ರಪ್ರಸಾದ್

    ”ಮಿಲರೇಪ” ಕವನ ನಂಗೆ ಭಾರೀ ಪ್ರೀತಿಯದ್ದು… HSS ಕವಿತೆಗಳಲ್ಲಿ ಮಿಲರೇಪ, ರಿಕ್ಯೂನ ಕೊನೆಯ ಟೀ ಸಮಾರಂಭ, ನದಿಯ ನಾಡಿನಲ್ಲಿ, ಸಿಂಗಿರಾಜ ಸಂಪಾದನೆ ಬಹಳ ಇಷ್ಟವಾದುವು. ಆದ್ರೆ ಆ ಹೆಸರಿನ ಕವನ ಸಂಕಲನ ಇರೋದು ನಂಗೆ ಗೊತ್ತಿರಲಿಲ್ಲ. ಕವನ ಮಾತ್ರ ಗೊತ್ತಿತ್ತು. ಬಹುಶಃ ಕನ್ನಡದಲ್ಲಿ ಮಿಲರೇಪನ ಬಗ್ಗೆ ಬರೆದಿರೋದು HSS ಅವರ ಕವಿತೆ, ಮತ್ತೊಬ್ಬರು ಯಾವುದೋ ಪತ್ರಿಕೆ ಅಂಕಣದಲ್ಲಿ ಬರೆದಿದ್ದ ನೆನಪು ಅದು 90 ದಶಕದ ಪೇಪರ್ ಕಟಿಂಗ್ ಇತ್ತು. ನನಗೆ ಸರಿಯಾಗಿ ನೆನಪಿಲ್ಲ ಕನವ್ವ. ಹುಡುಕುವೆ. 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading