ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಜೇಂದ್ರ ಪ್ರಸಾದ್ ಕಾಲಂ : ನಮ್ಮೂರ ಮಾರಾಣಿ ಶಿಂಷೆ

ಶಿಂಷಾ- ನನ್ನೆದೆಯ ಮಗ್ಗುಲ ನದಿ ಪಾತ್ರ .. ನನ್ನನು ಅತಿಯಾಗಿ ಪ್ರಭಾವಿಸಿದ, ನೆನಪುಗಳಲ್ಲಿ ಸದಾ ಹಸಿರಾಗಿರುವ ತೊರೆ. ನಾವು ಹಳ್ಳಿಗರು ಅದನ್ನು ನದಿ ಎನ್ನುವುದಿಲ್ಲ.. ತೊರೆ ಅಂತಲೂ ಕೆಲವೊಮ್ಮೆ ಈ ಹಿಂದೆ ಏಕಾಏಕಿ ನೆರೆ ಬರುತ್ತಿದ್ದರಿಂದ ಇದನ್ನು ”ಕಳ್ಳ ಹೊಳೆ” ಎಂತಲೂ ಕರೆಯುವುದುಂಟು. ನನ್ನ ತಾಯಿ ಹಾಗೂ ತಂದೆಯ ಎರಡೂ ಹಳ್ಳಿಗಳು ಇದೇ ನದಿದಂಡೆಯಲ್ಲಿ ಇದ್ದುದರಿಂದ ನನ್ನ ಹಾಗೂ ಶಿಂಷೆಯ ಒಡನಾಟ ಸ್ವಲ್ಪ ಹೆಚ್ಚು. ಮತ್ತು ಇದು ನನ್ನೂರಿನಲ್ಲಿ ತುಮಕೂರು, ಮಂಡ್ಯ ಜಿಲ್ಲೆಯ ಗಡಿ ಕೂಡ. ಈ ಎರಡೂ ಜಿಲ್ಲೆಗಳ ಕೆಲವು ಪ್ರದೇಶಕ್ಕೆ ಕುಡಿಯುವ ನೀರು & ವ್ಯವಸಾಯಕ್ಕೆ ಈ ನದಿಯೇ ಮೂಲ.. ಮಳೆಗಾಲದಲ್ಲಿ ಮಳೆ ಉಳಿದಂತೆ ಸೇರಿಕೊಳ್ಳುವ ಸಣ್ಣ ಪುಟ್ಟ ತೊರೆಗಳು, ಮದ್ದೂರು ಕಡೆಯಿಂದ ಬರುವ ನಾಲೆಯ ಅಳಿದುಳಿದ ನೀರು ಈ ಹೊಳೆಯ ಜೀವಾಳ.
ನಾನು ನನ್ನ ಊರಿಗೆ ಹೋದಾಗಲೆಲ್ಲ ಮನೆಗೂ ಮೊದಲು ಹೊಳೆಗೆ ಹೋಗಬೇಕೆನ್ನುವ ಹಠ, ಅಲ್ಲೇ ಪಕ್ಕದಲ್ಲೇ ಗುಡಿ. ಗುಡಿಯ ಎದುರಿನ ತೋಪಿನಲ್ಲಿದ್ದ ಕಲ್ಲಿನ ಜೋಪಡಿ, ಪ್ರಕಾರದ ರೀತ್ಯ ಇದ್ದ ರಚನೆಗಳು ನನಗೆ ಬಲು ಪ್ರಿಯವಾಗಿದ್ದೋ .. ಗಿಡಗಂಟಿಗಳು ಬೆಳೆದು ಪಾಳು ಬಿದ್ದಿದ್ದ ಅಲ್ಲಿಗೆ ನಾ ಹೋಗುತ್ತಿರಲಿಲ್ಲವಾದರೂ ಅದನ್ನು ನೋಡುವುದೇ ಆನಂದ ನನಗೆ.. ಅದನ್ನು ಊರಿನವರು ‘ಕದಂಬ ಋಷಿಗಳ ಅಶ್ರಮವೆಂದು, ಹೊಳೆದಂಡೆಯ ಗುಡಿಯನ್ನು ಅ ಋಷಿಗಳೇ ಸ್ಥಾಪಿಸಿದೆಂದು ನಂಬುತ್ತಾರೆ… ಅಂತೆಯೇ ಶಿಂಷೆಗೆ ‘ಕದಂಬ’ ನದಿಯೆಂದೂ ಹೆಸರಿರುವುದು ನಿಜ.. ಕಡಬದ ಹೊಳೆ, ಮದ್ದೂರು ಹೊಳೆ ಎಂತಲೂ ಆಯಾ ಪರಿಸರ ವ್ಯಾಪ್ತಿಯಲ್ಲಿ ಕರೆಯುತ್ತಾರೆ..

ನನ್ನ ಬಾಲ್ಯದ ದಿನಗಳಲ್ಲಿ ಬಟ್ಟೆ -ಪಾತ್ರೆ ತೊಳೆಯಲು ಅಜ್ಜಿ ಅಮ್ಮ ಹೊರಟರೆಂದರೆ ನಾನು ಜೊತೆಗೆ ಹೊರಟುಬಿಡುತ್ತಿದ್ದೆ.. ಪಾತ್ರೆ ತುಂಬುವ ಮಂಕರಿಗೆ ಚೂರು ಅನ್ನ ಹಾಕಿ ಮೀನು ಹಿಡಿಯುವ ಸಾಹಸ ನನ್ನದು ಸಣ್ಣ ಪುಟ್ಟ ಮೀನು ಹಿಡಿದು ಬಾಕ್ಸ್ ಒಂದರಲ್ಲಿ ಮನೆಗೆ ತರುವಷ್ಟರಲ್ಲಿ ಅವು ಸತ್ತೇ ಹೋಗುತ್ತಿದ್ದವು.. ಹಸನಾದ ಮರಳಿನ ಮೇಲ್ಮೈ ಮೇಲೆ ೨-೩ ಅಡಿಯಷ್ಟು ಮಾತ್ರ ನೀರು ಅದ್ರಲ್ಲಿ ಆಟವಾಡಲು ಈಜು ಬಾರದ ನನಗೆ ಹೇಳಿ ಮಾಡಿಸಿದ ಹಾಗೆ ಇತ್ತು. ನನ್ನ ಕುಟುಂಬ ಹಳ್ಳಿ ತೊರೆದು ನಗರದಲ್ಲಿ ನೆಲೆಸಿದ ಮೇಲೂ ಮಂಡ್ಯದಿಂದ ಹುಲಿಯೂರು ದುರ್ಗ ಬಳಸಿಹೋದರೆ ಬಸ್ಸಿನ ತಾಕಲಾಟವೆಂದು ಮದ್ದೂರು -ಕೊಪ್ಪ ಮುಖಾಂತರ ಹೋಗಿ ಹೊಳೆ ಪಕ್ಕದೂರಿನಲ್ಲಿ ಇಳಿದು ನದಿ ದಾಟಿ ಹೋಗುವ ಮಾರ್ಗವನ್ನೇ ಸದಾ ನಾನು ಅಪ್ಪನಿಗೆ ಒತ್ತಾಯಿಸುತ್ತಿದ್ದೆ.
ಅವಗಿನ್ನೂ ಸೇತುವೆ ಕಟ್ಟಿರಲಿಲ್ಲ. ಅ ನಡೆದಾಟದ ಖುಷಿ ಹೇಳಿಕೊಳ್ಳಲು ಆಗುವುದಿಲ್ಲ.. ವರ್ಷಕ್ಕೊಮ್ಮೆ ಜಾತ್ರೆಯ ಸಮಯದಲ್ಲಿ ಮನೆದೇವರ ಪೂಜೆಗೆಂದು ಇದೇ ಹೊಳೆಯ ದಂಡೆಯಲ್ಲಿ ಮನೆಯ ಹೆಣ್ಣುಮಕ್ಕಳೆಲ್ಲ ಸೇರಿಕೊಳ್ಳುತ್ತಿದ್ದರು .. ನಾನು ಎಂದಿನಂತೆ ನೀರಿನಲ್ಲಿ ಆಟವಾಡೋದು, ಮೀನು ಹುಡುಕೋದು.. ಹೀಗೆ ಶಿಂಷಾ ಕೇವಲ ನನ್ನ ಬಾಲ್ಯವನ್ನು ಮಾತ್ರವಲ್ಲ , ಒಂದು ಪರಂಪರೆಯನ್ನು ಕೂಡ ಕಟ್ಟಿಕೊಡುತ್ತದೆ..
ಶಿಂಷೆ ಎಲ್ಲಿಯವಳು ?
ಅವಳು ಹುಟ್ಟುವುದು ತುಮಕೂರಿನ ನರಸಿಂಹದೇವರ ದೇವಳದ ದೇವರಾಯನ ದುರ್ಗದಲ್ಲಿ.. ಮುಂದೆ ತುರುವೇಕೆರೆ ತಾಲೂಕಿನಲ್ಲಿ ಹರಿದು ಕುಣಿಗಲ್ ತಾಲೂಕು ಪ್ರವೇಶ ಮಾಡಿದ ಮೇಲೆ ನಾಗಮಂಗಲದಿಂದ ಹರಿದು ಬರುವ ವೀರವೈಷ್ಣವಿ ನದಿ ಶಿಂಷೆಯಲ್ಲಿ ಸೇರಿಕೊಳ್ಳುತ್ತಾಳೆ ಹಾಗೆಯೆ ಯಡಿಯೂರು ಬಳಿಯ ಮಾರ್ಕೋನಹಳ್ಳಿಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ೧೯೩೮ ರಲ್ಲಿ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್. ಎಮ್. ವಿಶ್ವೇಶ್ವರಯ್ಯನವರ ಮಾರ್ಗದರ್ಶನದಲ್ಲಿ ಕಟ್ಟಿಸಿದ ಅಣೆಕಟ್ಟೆಯಲ್ಲಿ ನಿಂತು ಬಿಡುತ್ತಾಳೆ.
೧೯೩೦ ದಶಕದಲ್ಲಿ ಸಮುದ್ರ ಮಟ್ಟದಿಂದ ೭೩೧.೫೭ ಮೀ.ಗಳಷ್ಟು ಎತ್ತರದಲ್ಲಿ .. ೧೫೮೪ ಚದರ ಮೈಲುಗಳಷ್ಟು ವಿಸ್ತಾರವಾಗಿ ಕಟ್ಟಲಾದ ಈ ಕಟ್ಟೆಯಿಂದ ೬೦೪೦ ಹೆಕ್ಟೇರ್ ಕೃಷಿ ಭೂಮಿಗೆ ನೀರು ಒದಗುತ್ತದೆ. ಏಷ್ಯಾ ಖಂಡದಲ್ಲಿಯೇ ಮೊದಲ ಬಾರಿಗೆ ಸ್ವಯಂಚಾಲಿತ ಸೈಫೋನ್ ವ್ಯವಸ್ಥೆಯನ್ನು ಇಲ್ಲಿ ಅಳವಡಿಸಲಾಗಿದೆ . ನೀರಿನ ಒಳಹರಿವು ಹೆಚ್ಚಳವಾದಾಗ ಮತ್ತು ನೀರಿನ ಮಟ್ಟ ನಿಗದಿತ ಮಟ್ಟ ತಲುಪಿದಾಗ, ಹೆಚ್ಚುವರಿ ನೀರು ಮಾನವರಹಿತ ಅಣೆಕಟ್ಟಿನ ಗೇಟ್ ಮೂಲಕ ಹೊರಗೆ ಹೋಗುತ್ತದೆ. ಕ್ರಸ್ಟ್ ಗೇಟ್ ಗಳನ್ನು ತೆರೆಯಲು ಯಾವುದೇ ವ್ಯಕ್ತಿಯ ಅಗತ್ಯವಿಲ್ಲ. ಅಣೆಕಟ್ಟೆಯಲ್ಲಿ ೨೭-೩೦ ಬಗೆಯ ಮೀನುಗಳು ಲಭ್ಯವಿವೆ ಅವುಗಳಲ್ಲಿ ೧೩ ಬಗೆಯ ವಾಣಿಜ್ಯೋದ್ದೇಶದ ಮೀನುಗಳು ಕೂಡ ಇಲ್ಲಿವೆ.
ಇಲ್ಲಿಂದ ಮುಂದೆ ಹರಿಯುವಷ್ಟು ನೀರು ಬಿಟ್ಟಾಗಷ್ಟೇ ಹರಿಯುತ್ತಾಳೆ.. ೨೦೦೦ ಇಸವಿಯಲ್ಲಿ ನೆರೆ ಬಂದು ಕಟ್ಟೆ ತುಂಬಿ ಗೇಟುಗಳನ್ನು ಒಡೆದು ನೀರು ಹೊರಬಿಡಲಾಯ್ತು.. ಅವಾಗ ನಾನು ಮದ್ದೂರಿನ ಚಾಮನಹಳ್ಳಿಯಲ್ಲಿ ಇದ್ದೆ. ಮದ್ದೂರಿನ ಮೈಸೂರು – ಬೆಂಗಳೂರು ಹೆದ್ದಾರಿಯ ಸೇತುವೆ ಮುಳುಗು ಹೋಗಿತ್ತು ( ಈಗಿನ ವಾಸುದೇವ ಅಡಿಗಾಸ್ ಹೋಟೆಲ್ ಬಳಿಯ ಸೇತುವೆ ) ಈಚಿನ ವರ್ಷಗಳಲ್ಲಿ ಮಾರ್ಕೋನ ಹಳ್ಳಿಯ ಅಣೆಕಟ್ಟೆ ತುಂಬುವುದು ಅಪರೂಪ.. ಹಾಗಾಗಿ ಮುಂದೆ ಕುಣಿಗಲ್ ತಾಲೂಕಿನ ಸ್ವಲ್ಪ ಭಾಗ ಹಾಗು ಮದ್ದೂರು , ಮಳವಳ್ಳಿ ತಾಲೂಕುಗಳಲ್ಲಿ ಸಣ್ಣ ಪುಟ್ಟ ತೊರೆಗಳು, ನಾಲೆಯ ನೀರು ಸೇರಿ ಶಿಂಷೆ ಹರಿಯುತ್ತಾಳೆ.
ಮಳವಳ್ಳಿ ಬಳಿಯಲ್ಲಿನ ತೊರೆಕಾಡನಹಳ್ಳಿಯಲ್ಲಿ ಶಿಂಷೆ ತಡೆದು ನಿಲ್ಲಿಸಿ ಒಂದು ಕಾರು ಸಲೀಸಾಗಿ ಚಲಿಸಬಹುದಾದ ದೊಡ್ಡ ದೊಡ್ಡ ಕಬ್ಬಿಣದ ಪೈಪುಗಳಲ್ಲಿ ( ಅಂತಹ ೪ ಪೈಪುಗಳು ) ಬೆಂಗಳೂರಿಗೆ ಕುಡಿಯುವ ನೀರಾಗಿ ಬಳಸಿಕೊಳ್ಳಲು ಪಂಪುಮಾಡಿ ಸಾಗಿಸಲಾಗುತ್ತಿದೆ.. ಇನ್ನುಳಿದ ನೀರು ಮಾತ್ರ ಶಿವನಸಮುದ್ರದ ಕಡೆಗೆ ಸಾಗುತ್ತದೆ
ಮಳವಳ್ಳಿ ತಾಲೂಕಿನ ಶಿಂಷಾಪುರದಲ್ಲಿ ಶಿಂಷಾ ಜಲವಿದ್ಯುತ್ ಯೋಜನೆಯು ಸರ್. ಕೆ. ಶೇಷಾದ್ರಿ ಅಯ್ಯರ್ ಅವರ ನೇತೃತ್ವದಲ್ಲಿ ೧೯೦೧ರಲ್ಲಿಯೇ ಪ್ರಾರಂಭವಾಗಿ ೧೯೦೪ರಲ್ಲಿ ವಿದ್ಯುಕ್ತವಾಗಿ ಏಷ್ಯಾ ಖಂಡದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಜಲವಿದ್ಯುತ್ ಉತ್ಪಾದಿಸಲಾಯಿತು.. ಆರಂಭದಲ್ಲಿ ಕೋಲಾರದ ಚಿನ್ನದ ಗಣಿಗೂ ನಂತರದ ದಿನಗಳಲ್ಲಿ ಬೆಂಗಳೂರು, ಮೈಸೂರು ನಗರಗಳಿಗೂ ವಿದ್ಯುತ್ ಸರಬರಾಜು ಮಾಡಲಾಯಿತು.. ಇಲ್ಲಿನ ಶಿವನಸಮುದ್ರ ಕಣಿವೆಯಲ್ಲಿ ಶಿಂಷೆ, ಕಾವೇರಿಯೊಂದಿಗೆ ಸಮಾಗಮಗೊಂಡು ಗಗನ ಚುಕ್ಕಿ, ಭರ ಚುಕ್ಕಿಯಾಗಿ ಧುಮುಕುತ್ತಾಳೆ.
ಎಲ್ಲೋ ಹುಟ್ಟಿ ಎಲ್ಲೋ ಹರಿದು ಎಲ್ಲೋ ನಿಂತು ಇನ್ನೆಲ್ಲೋ ಸೇರಿಹೋಗುವ ಶಿಂಷೆ ಕಾವೇರಿಯಷ್ಟೇ ಮುಖ್ಯಳು ನಮಗೆ.
ಇವಾಗ ಹೆಂಗವ್ಳೆ ?
ಮಳೆಗಾಲದಲ್ಲಿ ತುಂಬಿ ಹರಿವ ಶಿಂಷೆ ಬೇಸಗೆಯಲ್ಲಿ ಒಣಗುತ್ತಾಳೆ. ಈಚಿನ ವರ್ಷಗಳಲ್ಲಿ ಚೆನ್ನಪಟ್ಟಣ, ರಾಮನಗರದ ಕಣ್ವ, ಅರ್ಕಾವತಿ ನದಿಗಳಿಗೆ ಆದ ಗತಿಯೇ ಇದೀಗ ಶಿಂಷೆಗೂ ಒದಗಿಬಂದಿದೆ. ಇಡಿ ನದಿ ಪಾತ್ರವು ಅಮಾನುಷ ಹಲ್ಲೆಗೆ ಒಳಗಾಗಿದೆ! ಕಳೆದ ದಶಕದಲ್ಲಿ ರೈತರು, ವ್ಯಾಪಾರಿಗಳು ಅವ್ಯಾಹತವಾಗಿ ಶಿಂಷೆಯಾ ಬಗೆದು ಮರಳು ಮಾರಿದ್ದಾರೆ. ನೀರು ಹರಿಯುವ ಹೊತ್ತಿನಲ್ಲೂ ಆಸೆಗೆ ಕಬ್ಬಿಣದ ಕೊಪ್ಪರಿಗೆಗಳನ್ನು ತೆಪ್ಪದಂತೆ ತೇಲಿಸಿಕೊಂಡು ನೀರಿನಲ್ಲಿ ಮುಳುಗಿ ಮರಳು ತೆಗೆದಿದ್ದಾರೆ.. ಪರಿಣಾಮ ಅಂತರ್ಜಲ ಕುಸಿತ, ವ್ಯವಸಾಯ ಮತ್ತು ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ.. ಶಿಂಷೆಯ ದೆಸೆಯಿಂದ ಉಂಟಾಗಿದ್ದ ದೊಡ್ಡ ದೊಡ್ಡ ಕೆರೆಗಳು ಒಣಗಿವೆ.
ನದಿ ಪಾತ್ರದ ಉದ್ದಕ್ಕೂ ಆಳದ ಗುಂಡಿಗಳು.. ಅಲ್ಲಲ್ಲಿ ನಿಂತ ಕೊಚ್ಚೆ ನೀರಿನ ಹಾಗೆ ಕಣೋ ಹೊಳೆನೀರು ಕಂಡಾಗ ಕಣ್ಣುಗಳು ತೇವಗೊಳ್ಳುತ್ತವೆ. ನದಿ ಜೋಡಣೆಗೆ ಮುಂದಾಗುವ ಸರ್ಕಾರಗಳು ನದಿಗಳ ಪುನಶ್ಚೇತನ ಕ್ಕೆ ಮುಂದಾಗುವುದಿಲ್ಲ.. ಎಲ್ಲದಕ್ಕೂ ಸರ್ಕಾರವನ್ನು ದೂರುವುದಕ್ಕಿಂತಲೂ ಸ್ಥಳೀಯರು ತಮ್ಮ ಜೀವಜಲದ ಬಗ್ಗೆ ನಿಗಾ ವಹಿಸಲಿಲ್ಲ ಕೊರಗು ನನ್ನನು ಕಾಡುತ್ತಲೇ ಇದೆ.
ಮೊನ್ನೆ ಯುಗಾದಿಗೆ ಮೊದಲು ಮನೆದೇವರ ಪೂಜೆಗೆಂದು ಊರಿಗೆ ಹೋದಾಗ ಹೊಳೆ ಬದಿಯ ಹಳ್ಳದಲ್ಲಿ ಪೂಜೆ ಶುರುವಾಯ್ತು… ಅಪ್ಪ ನಿಟ್ಟುಸಿರುಬಿಟ್ಟು ‘ ಆ ಮೆಟ್ಲು ಲೆವೆಲ್ಲಿಗೆ ನೀರು ಬರೋದು.. ನಾವು ಈ ಕಡೆಗೆ ಊರಿಗೆ ಬರೋಕೆ ತಿಂಗಳು ತಕಳದು … ಹತ್ತೇ ವರ್ಷದಲ್ಲಿ ಜೆಸಿಬಿ, ಟ್ರಾಕ್ಟರು ಎಲ್ಲಾನು ತಂದು ಬಗೆದು ಹಾಕ್ಬಿಟ್ರು .. ಇವ್ರೇನೋ ಉಂಡ್ರು ಮುಂದಿನ ಮಕ್ಳು ಕಥೆ ಏನಪ್ಪಾ’ ಅಂತ ಸುತ್ತಾ ಕಣ್ಣಾಡಿಸುವಾಗ ಕಣ್ಣುಗಳಲ್ಲೂ ಶಿಂಷೆ ಹರಿತಾ ಇದ್ಲು …
 

‍ಲೇಖಕರು G

3 April, 2014

7 Comments

  1. amardeep.ps

    chennagide lekhana RP……LIKE IT…

  2. Anantharamesh

    ಇಂಥ ಕಳಕಳಿಯ ಲೇಖನಗಳು ಮತ್ತಷ್ಟು ಬೇಕಾಗಿವೆ. ನಿಮ್ಮ ಲೇಖನದಿಂದ ಕೆಲವು ಕಣ್ಣುಗಳಾದರೂ ತೆರೆಯಲಿ.

  3. vageesha JM

    rajanna.. beautufully described your memories with Shimshaa river.. nice

  4. ಪರಮೇಶ್ವರ ಗುರುಸ್ವಾಮಿ

    ಸ್ವಾತಂತ್ರ್ಯ ಪೂರ್ವ ಹಳೇ ಮೈಸೂರಿನ ಯಾವ ಜಲಾಶಯವನ್ನು ತೆಗೆದುಕೊಂಡರೂ ಸರ್ ಎಂವಿ ಅವರಿಗೇ ಅದರ credit ಕೊಡುವ ಮೂಢ ನಂಬಿಕೆ ಯನ್ನು ನಮ್ಮಲ್ಲಿ ಅನೂಚಾನವಾಗಿ ಬಿತ್ತಿಕೊಂಡು ಬರಲಾಗಿದೆ. ಸರ್ಕಾರ ಪ್ರಕಟಿಸುವ ಮಾಹಿತಿಗಳೂ ಈ ಮೂಢ ನಂಬಿಕೆಯನ್ನು ಪೋಷಿಸಿಕೊಂಡೇ ಬಂದಿದೆ. ದಾಖಲೆಗಳ ಪ್ರಕಾರ ಸರ್ ಎಂವಿ ಅವರು ಮೈಸೂರು ಸಂಸ್ಥಾನದಲ್ಲಿ ಸೇವೆ ಸಲ್ಲಿಸಿದ್ದು 1909ರಿಂದ 1919 ರವರೆಗೆ. ಮೊದಲ 3 ವರ್ಷ ಮುಖ್ಯ ಇಂಜಿನಿಯರ್ ಆಗಿದ್ದರು. ಉಳಿದ ಕಾಲ ದಿವಾನರಾಗಿದ್ದರು. ಅವರು ಯಂತ್ರ ಸದೃಶ ಶಿಸ್ತನ್ನು ಹೊಂದಿದ್ದ ಅಪ್ರತಿಮ ಕೌಶಲವುಳ್ಳ ಇಂಜಿನಿಯರ್ ಆಗಿದ್ದರು.

  5. Rajendra Prasad

    @ಗುರುಸ್ವಾಮಿ ಅವರೇ: ಸರ್. ಎಂ.ವಿ. ನೀವು ಹೇಳಿದಂತೆ 1909-1919 ವರಗೆ ಮಾತ್ರ ಅಧಿಕಾರದಲ್ಲಿದ್ದರು.. ಆದ್ರೆ ಅಧಿಕಾರಕ್ಕೆ ಬರುವ ಮೊದಲೂ ನಂತರವೂ ಮೈಸೂರು ಸಂಸ್ಥಾನದ ಬಹುತೇಕ ಯೋಜನೆಗಳಿಗೆ ಅವರ ಸಲಹೆಗಳು / ಯೋಜನೆಗಳು ಸಿಕ್ಕವು. ಕೆ. ಶೇಷಾದ್ರಿ ಅಯ್ಯರ್ ಅವರ ಕಾಲದಿಂದ ಆರ್ಕಾಟ್ ರಾಮಸ್ವಾಮಿ ಮೊದಲಿಯಾರ್ ಅವರ ಕಾಲದವರೆಗೂ.. ನಂತರದ ಸ್ವತಂತ್ರ ಭಾರತದ ಸರ್ಕಾರಕ್ಕೂ ಅವರ ಸೇವೆ ಸಿಕ್ಕಿದೆ ಅನ್ನುವುದನ್ನು ಮರೆಯುವಂತಿಲ್ಲ…

  6. Santhoshkumar Lm

    🙁

  7. satish javaregowda

    Kavi ninna lekhana super.higeye bari shiva…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading