ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಜೇಂದ್ರ ಪ್ರಸಾದ್ ಕಾಲಂ : ಕುವೆಂಪು, ಮಾರ್ಕ್ವೆಜ್ ಮತ್ತು ಡೆರಿಡಾ


ಕಥನದ ಪ್ರವೇಶಿಕೆ ಅಷ್ಟು ಸುಲಭವಲ್ಲ.. ನಮ್ಮ ಬದುಕಿನ ಕತೆಗಳು ಬಹುತೇಕ ಬೆನ್ನ ಹಿಂದಣ ಬಯಲಿನಲ್ಲಿ ಹುಟ್ಟಿಕೊಳ್ಳುತ್ತವೆ. ಆದರೆ ಕಥೆಗಾರನ ಕಥೆಗಳು ಮುಚ್ಚಿದ ಕಣ್ಣ ಹಿಂದಣ ರೆಪ್ಪೆಯಲ್ಲಿ ಹುಟ್ಟಿಕೊಳ್ಳುತ್ತವೆ. ಬದುಕು ಮತ್ತು ಕಣ್ರೆಪ್ಪೆಯ ನಡುವೆ ಸೇತುವೆ ಕಟ್ಟುವ ಮತ್ತು ಮುನ್ನೆಡೆಸುವ ಅವನ ಛಾತಿ ಅಷ್ಟು ಸುಲಭಕ್ಕೆ ನಮಗೆ ದಕ್ಕುವುದಿಲ್ಲ. ಒಂದೊಂದೇ ಇಟ್ಟಿಗೆಗಳನ್ನು ಇತ್ತು ಕಟ್ಟುವ ಹಾಗೆ ಹಿನ್ನೆಲೆ.. ಪಾತ್ರ.. ಸನ್ನಿವೇಶ.. ವರ್ಣನೆಗಳನು ಸೇರಿಸುತ್ತಾ ಹೋಗುತ್ತಾನೆ.. ಜೀವ ಎಂಬುದು ಮಾತ್ರ ಅದೆಲ್ಲಿಂದ ಬಂದು ಸೇರಿಕೊಳ್ಳುತ್ತದೋ ?! ಯಾರಿಗೂ ತಿಳಿಯದು. ಈ ಬೆರಗಿನಲ್ಲಿಯೇ ಕಥನವನ್ನು ನನ್ನೊಳಗೆ ಇಳಿಸಿಕೊಳ್ಳುತ್ತೇನೆ. ಆವಾಗ ದಕ್ಕುವ ಆ ಖುಷಿಗೆ ಬಹುಶಃ ‘ರಸೋ ವೈ ಸಃ’ ’ ಎಂದಿದ್ದು ಹಿರೀಕರು ಅನ್ಸತ್ತೆ. ಕಾವ್ಯ ಎಂಬುದೇ ಅನಾದಿಯಿಂದಲೂ ರೂಢಿಗತ ಸಾಹಿತ್ಯ ಎಂದು ಹೇಳುವವರಿದ್ದರಾದರೂ ಕಥನ ಮನೆಯ, ಸಮಾಜದ ಮೌಖಿಕ ಪರಂಪರೆಯ ನೆಪಥ್ಯದಲ್ಲೇ ಬೆಳೆದಿತ್ತು ಮತ್ತು ಅದೇ ಕಾವ್ಯಕ್ಕೂ ಮೊದಲ ಹುಟ್ಟಿದ್ದು ಎಂದೇ ನನ್ನ ನಂಬಿಕೆ ಕೂಡ. ಕಥನ ಎಂದಾಕ್ಷಣ ನನಗೆ ನೆನಪಿಗೆ ಬರೋದು ಕುವೆಂಪು, ಮಾರ್ಕ್ವೆಜ್ ಮತ್ತು ಡೆರಿಡಾ.
ಈ ಮೂವರಿಂದ ಬಹಳಷ್ಟು ಕಥನವನ್ನು ನಾನು ತಿಳಿಯಲು ಸಾಧ್ಯವಾಯಿತು.. ಮೊದಲಿಗೆ ಕುವೆಂಪು ಕಾದಂಬರಿಗಳು ನನಗೆ ಕಥನದ ಪ್ರವೇಶಿಕೆಯನ್ನು ಒದಗಿಸಿದ್ರೆ ನಂತರ ಮಾರ್ಕ್ವೆಜ್ ನ ಓದು ಅದನ್ನು ಬೆಳೆಸಿತು. ಡೆರಿಡಾನಿಂದ ಅದಕ್ಕೊಂದು ಶಾಸ್ತ್ರೀಯ ಪರಿಕಲ್ಪನೆ ಹಾಗೂ ಪರಿಭಾಷೆಗಳು ನನಗೆ ಒದಗಿದುವು. ಮತ್ತು ಇದೆಲ್ಲ ಬಹಳ ಕಾಲದ ಅವಧಿಯಲ್ಲಿ ಘಟಿಸಿದುವು. ಈ ಮೂವರನ್ನು ಸ್ವೀಕರಿಸುವಷ್ಟು ಹರವು ನನ್ನ ಜ್ಞಾನದ ಮಿತಿಯಲ್ಲಿ ಇರಲಿಲ್ಲ. ಈಗಲೂ ಇಲ್ಲ ಕೂಡ!

ಕನ್ನಡದ ಬಹುಮುಖ್ಯ ಸಾರ್ವಕಾಲೀನ ಬರಹಗಾರರಾಗಿರುವ ಕುವೆಂಪು ರೋಮಂಚನಗೊಳಿಸುವ ಕಾವ್ಯ ಸೃಷ್ಟಿಯ ಜೊತೆಗೆ ನಿಬ್ಬೆರಗಾಗುವ ಕಥನವನ್ನು ಕೂಡ ಕೊಟ್ಟಿದ್ದಾರೆ. ಅವರ ಸಣ್ಣ ಕತೆಗಳಿಗಿಂತಲೂ ಎರಡು ಬೃಹತ್ ಕಾದಂಬರಿಗಳು ಕನ್ನಡ ಸಾಹಿತ್ಯಕ್ಕೆ ಸಂದ ಯಮಳ ತಾರೆಗಳು… ಅದ್ರಲ್ಲೂ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಕ್ರಮ ಓದುಗನನ್ನು ಎಷ್ಟು ಒಲವಿನಿಂದ ಬಂಧಿಸುತ್ತದೆ ಎಂಬುದನ್ನು ಓದುಗರನ್ನೆ ಕೇಳಿ ತಿಳಿಯಬೇಕು.. ನನ್ನ ಮಟ್ಟಿಗೆ ಅದು ಆಪ್ಯಾಯಮಾನಕರವಾದ ಓದು. ಸಾವಕಾಶವಾಗಿ ಒಂದು ಬದುಕು ಪೂರ ಆ ಕಾದಂಬರಿಯನ್ನು ಓದುತ್ತಾ ಅನುಭವಿಸುತ್ತಾ ಆನಂದಿಸಬಹುದಾಗಿದೆ. ಆಗಾಗ್ಗೆ ಯು.ಆರ್. ಅನಂತಮೂರ್ತಿ ಅವ್ರು ಭಾರತದಲ್ಲಿ ನೋಬೆಲ್ ಕೊಡಬಹುದಾಗಿದ್ದ ಕೃತಿ ‘ ಮಲೆಗಳಲ್ಲಿ ಮದುಮಗಳು ಎಂದು ಹೇಳುತ್ತಲೇ ಇರುತ್ತಾರೆ. ನನ್ನ ಮನಸು ಕೂಡ ಆ ಮಾತನ್ನು ಅನುಮೋದಿಸುತ್ತದೆ. ‘ಮಲೆಗಳಲ್ಲಿ ಮದುಮಗಳು’ ಓದಲು ಶುರುವಾದ ದಿನಗಳಲ್ಲಿ ಅದುವರೆಗೂ ಅವರ ಕವಿತೆಗಳಲ್ಲಿ ಮೈ ಮರೆತಿದ್ದ ನನಗೆ ಮತ್ತೆ ಯಾವುದೇ ಕವಿತೆಯನ್ನು ಓದುವ ಮನಸ್ಸಾಗಲೇ ಇಲ್ಲ. ಅವರ ಕಥನದ ಓಘ ಕಾವ್ಯವನ್ನು ಮೀರಿಸಿತ್ತು.. ದಿನಕ್ಕೆ 10 ಪುಟಕ್ಕಿಂತ ಹೆಚ್ಚು ಓದೋಕೆ ಆಗ್ತಿರಲಿಲ್ಲ ನನಗೆ. ಅದರ ಸಾಂದ್ರತೆ ಕೆಲವು ಸಲ 4-5 ಪುಟಗಳಿಗೆ ಸಾಕು ಎನ್ನಿಸಿಬಿಡುತ್ತಿತ್ತು.. ಇಡೀ ದಿನ ಓದಿದ್ದನ್ನು picturization ಮಾಡ್ಕೊತಾ ಇದ್ದೆ. ಕಾಡು, ಅಡಿಕೆ ತೋಟ, ಸೋಗೆ ಮನೆಗಳು, ಹಂದಿ ಹಸಿಗೆ, ಬೊಬ್ಬೆ ಸೀರೆ, ಕಳ್ಳು, ಬಿಡಾರ, ಹುಲಿಯ, ಐತ, ಪೀಂಚಲು ಅಲ್ಲಿನ
ಪಾತ್ರ ಪ್ರಪಂಚವೇ ಒಂದು ರೀತಿಯ ಮಾಂತ್ರಿಕತೆ. ಮತ್ತು ಅಷ್ಟೇ ಅಲ್ಲ ಕೂಡ ತಲೆಮಾರುಗಳ ನಡುವೆ ಕಳೆದುಹೋಗುತ್ತಿರುವ ಕೊಂಡಿಗಳನ್ನೂ, ಆಧುನಿಕತೆಯ ಅಬ್ಬರ, ಮಲೆನಾಡಿನ ವರ್ಗಪ್ರಜ್ಞೆಗಳು & ಮತೀಯ ಅಂಧಃಶ್ರದ್ದೆಯನ್ನೂ ಅವರು ಕಟ್ಟಿಕೊಡುವ ರೀತಿ ಅಪೂರ್ವವಾಗಿದೆ.. ಯಾವೊಂದು ಸಣ್ಣ ಸಂಗತಿಯು ಕೂಡ ತಪ್ಪದಂತೆ ಸವಿಸ್ತಾರವಾಗಿ ಕಥನ ಕಟ್ಟುವ ಪ್ರಕ್ರಿಯೆ ನಮ್ಮನ್ನು ಒಳಗೆಳೆದುಕೊಂಡು ಬಿಡುತ್ತದೆ. ಈ ನಡುವೆ ಬೆಸಗರಹಳ್ಳಿ ರಾಮಣ್ಣನವರ ಕಥೆಗಳು ಮಧ್ಯೆ ಮಧ್ಯೆ ಓದಿಗೆ ಸಿಕ್ಕವು. ಮಂಡ್ಯದ್ದೇ ಭಾಷೆ, ಸನ್ನಿವೇಶ, ಬದುಕು ಕಥೆಗೆ ಒಳಪಟ್ಟರೀತಿ ತುಂಬಾ ಆಸಕ್ತಿಯುವಾಗಿತ್ತು … ಸರಕ್ಕನೆ ಮನಸು ಕಾವ್ಯದಿಂದ ಕಥನಕ್ಕೆ ತಿರುಗಿಬಿಟ್ಟಿತು…

ಹೀಗಿರುವಾಗಲೇ ಲೇಖನವೊಂದರಲ್ಲಿ ಕಂಡ ಮಾಂತ್ರಿಕ ವಾಸ್ತವತಾವಾದದ ಕುರಿತ ಉಲ್ಲೇಖ, ಮಾರ್ಕ್ವೆಜ್ ನನ್ನು ಹುಡುಕುವಂತೆ ಮಾಡಿತು.
1924ರಲ್ಲಿ ಕೊಲಂಬಿಯಾ ದೇಶದ ಅರಕಟಕ ಎಂಬ ಊರಲ್ಲಿ ಹುಟ್ಟಿದ ಮಾಕ್ವೆಜ್ ಅಲ್ಲಿನ ಬೊಗೊಟಾ ನಗರ ನ್ಯಾಷನಲ್ ಯೂನಿವೇರ್ಸಿಟಿ ಯಲ್ಲಿ ಓದಿ ಮುಂದೆ ಸ್ಪ್ಯಾನಿಷ್ ಪತ್ರಿಕೆಯೊಂದರಲ್ಲಿ ವರದಿಗಾರನಾಗಿ ತನ್ನ ವೃತ್ತಿ ಜೀವನ ಆರಂಭಿಸುತ್ತಾನೆ. ತನ್ನ ತಾಯಿತಂದೆಯ ಪ್ರೇಮಪ್ರಕರಣ ವನ್ನು, ಅವರ ಹದಿಹರೆಯದ ತೊಳಲಾಟಗಳನ್ನು ಆಧರಿಸಿ ‘ಲವ್ ಇನ್ ದ ಟೈಮ್ ಒಗ್ ಕಾಲರಾ’ ಕಾದಂಬರಿ ರಚಿಸಿದ್ದಾನೆ. ಅವನೆಲ್ಲ ಕೃತಿಗಳು ಜನಪ್ರಿಯವಾಗಿವೆ. ಆದ್ರಲ್ಲು ಅವನ ಮಾಂತ್ರಿಕ ವಾಸ್ತವತವಾದದ ‘ ಒನ್ ಹಂಡ್ರೆಡ್ ಇಯರ್ಸ್ ಆಫ್ ಸ್ಯಾಲಿಟ್ಯುಡ್’’ ಕಾದಂಬರಿ ಜಗತ್ ಪ್ರಸಿದ್ದಿಯನ್ನು, ನೋಬೆಲ್ ಪಾರಿತೋಷಕವನ್ನು ತಂದುಕೊಟ್ಟಿತು. ತನ್ನ ಕಾದಂಬರಿಗಳಲ್ಲಿ ಹಲವಾರು ಶೈಲಿಗಳನ್ನು ಮಾರ್ಕ್ವೆಜ್ ರೂಢಿಸಿಕೊಂಡಿದ್ದ. ತನ್ನದೇ ಒಂದು ಶೈಲಿ ಎಂದು ಯಾವತ್ತೂ ಒಂದಕ್ಕೆ ಅಂಟಿಕೊಳ್ಳದೆ ಕಥನವನ್ನು ಎಷ್ಟು ಸಾಧ್ಯವೋ ಅಷ್ಟು ಭಿನ್ನವಾಗಿ ಪ್ರಯೋಗಿಸುತ್ತಾ .. ಪ್ರಸ್ತುತಪಡಿಸುತ್ತಾ ಹೋದ.. ಹಾಹಾಗಿ ಅವನ ಕಥನದಲ್ಲಿ ಏನೋ ಇದೆ ಎನ್ನುವ ಕಾತುರ ಓದುಗನದ್ದು. ಆರಂಭದಲ್ಲಿನ ನಾನು ಇಂಗ್ಲಿಷ್ ಭಾಷೆಯಲ್ಲಿ ತುಂಬಾ ಬಡವನಾಗಿದ್ದರಿಂದ ( ಈಗಲೂ ಕೂಡ ) ಕನ್ನಡಾನುವಾದವನ್ನು ಹುಡುಕಿ ತಂದೆ. ಮಾರ್ಕ್ವೆಜ್ ನ ಆ ವಾಚಿಕೆಯಲ್ಲಿ ‘ನೂರುವರ್ಷಗಳ ಏಕಾಂತ’ (‘ ಒನ್ ಹಂಡ್ರೆಡ್ ಇಯರ್ಸ್ ಆಫ್ ಸ್ಯಾಲಿಟ್ಯುಡ್’’) ಎನ್ನುವ ಅವನ ಜಗತ್ ಪ್ರಸಿದ್ದ ಕಾದಂಬರಿಯ ಕೆಲವು ಭಾಗಗಳೊಂದಿಗೆ ಮತ್ತಷ್ಟು ಕಥೆಗಳ ಅನುವಾದ ಲಭ್ಯವಿತ್ತು. ಮಾಂತ್ರಿಕ ವಾಸ್ತವತಾವಾದದ ಅಮಲು ಹತ್ತಿಕೊಳ್ಳ ತೊಡಗಿತು.. ಆಗಾಗ್ಗೆ ಅವನ ಬರಹಗಳನ್ನು ಆನ್ಲೈನ್ ನಲ್ಲಿ ಓದಲು ಶುರುವಿಟ್ಟೆ. ಮಾರ್ಕ್ವೆಜ್ ಬಲು ಇಷ್ಟವಾಗಿಬಿಟ್ಟ.. ಅವನ ಮಂಗಳವಾರ ಮಧ್ಯಾಹ್ನದ ಲಘುನಿದ್ರೆ, ಮಕಾಂಡೋದಲ್ಲಿ ಮಳೆಸುರಿಯುತ್ತಿರುವುದನ್ನು ನೋಡುತ್ತಿರುವ ಇಸಾಬೆಲ್ಲಳ ಸ್ವಗತ, ಒನ್ ರೈಟ್ಸ್ ಟು ದ ಕರ್ನಲ್, ಇನ್ನೂ ಮುಂತಾದ ಕಥೆಗಳು ಮತ್ತೆ ಮತ್ತೆ ಓದುವಂತೆ ಮಾಡುತ್ತವೆ. ಲ್ಯಾಟಿನ್ ಅಮೇರಿಕದ ಜನ ಜೀವನ, ಬದುಕಿನ ಸಂಕೀರ್ಣತೆಗಳನ್ನು ತನ್ನ ವಿಶೇಷ ಶೈಲಿಯಲ್ಲಿ ಕಟ್ಟಿ ಕೊಡುವ ಪರಿಗೆ ನಾನು ಸೋತುಹೋದೆ.
ಹೀಗೆ ಕಥನದ ತೆಕ್ಕೆಗೆ ಬಿದ್ದ ನನಗೆ ಮತ್ತೊಂದು ಕೆಟ್ಟಚಾಳಿ ಬೇರೆ ಶುರುವಾಯ್ತು! ಅಕಾಡೆಮಿಕ್ ಆದ ವಿಮರ್ಶಾ ಪ್ರಸ್ಥಾನಗಳನ್ನು, ವ್ಯುತ್ಪತ್ತಿ ಶಾಸ್ತ್ರಗಳ ಅಧ್ಯಯನಕ್ಕೆ ಮನಸು ಮಾಡಿದೆ. ಕುತೂಹಲಕ್ಕೆ ಕಥನ ಶಾಸ್ತ್ರ ಮತ್ತು ಶೈಲಿಶಾಸ್ತ್ರಗಳಲ್ಲಿ ಕಣ್ಣಾಡಿಸಿದಾಗ ನಾನು ಬೆಚ್ಚಿಬಿದ್ದೆ . ಅಯ್ಯೋ ಕಥನದಲ್ಲಿ ಇಷ್ಟೆಲ್ಲ ಇದೆಯಾ? ಒಂದು ಸೃಜನಶೀಲ ಕೃತಿಯನ್ನು ಕೃತಿಕಾರ ಇಷ್ಟೆಲ್ಲ ಯೋಚಿಸಿ ಬರೆಯುತ್ತಾನ? ಅಥವಾ ಇತರದ ಯಾವ ತಿಳುವಳಿಕೆ ಇಲ್ಲದೆ ಬರೆದ ಕೃತಿ ಯಶಸ್ವಿ ಆಗೋದಿಲ್ವಾ? ಇವುಗಳ ಹಂಗು ಮತ್ತು ಅಧ್ಯಯನ ಯಾತಕ್ಕದರೂ ಬೇಕು… ಹೀಗೆ ಹತ್ತಾರು ಪ್ರಶ್ನೆಗಳು ಹುಟ್ಟಿಕೊಂಡವು.. ಕಥನದಿಂದ ಕಥನಶಾಸ್ತ್ರದ ತಿರುಗಿದೆ..

ಹುಡುಕಾಟಕ್ಕೆ ಕೊನೆ ಇಲ್ಲವಲ್ಲ! ಕುತೂಹಲ ಕೆಟ್ಟದಾಗಿ ಚಾಳಿಯೇ ಆಗಿಹೋಯ್ತು.. ಬಾಯಾರಿದ ಮೆದುಳಿನಂತೆ ಹುಡುಕುತ್ತಾ ಹೋದೆ.. ಜೇರಾರ್ ಜೆನತ್, ಮೀಕ್ ಬಾಲ್, ಪರ್ಸಿಲಬಕ್, ಬೆನ್ ವೆನಿಸ್ಟ್, ಡೆರ್ರಿಡ ಬೆನ್ನುಬಿದ್ದೆ.. ನಿರಚನವಾದದ ಡೆರ್ರಿಡ ನನಗ್ಯಾಕೋ ಬಹಳ ಇಷ್ಟವಾಗಿ ಹೋದ.. ಅವನು ಎತ್ತುವ ‘’ ಕಥನ ಎಂದರೇನು? ಕಥನ ಸಾಧ್ಯತೆ ಹೇಗೆ? ಗತಿಶೀಲ ಪ್ರಕ್ರಿಯೆಗಳನ್ನು ಅದು ನಿಭಾಯಿಸುವ ಬಗೆ ಹೇಗೆ ? ಇತ್ಯಾದಿಗಳು ಪ್ರಶ್ನೆಗಳು ಪದೇ ಪದೇ ನನ್ನವು ಕೂಡ ಆದುವು. ಸಂರಚನೆ ಮತ್ತು ನಿರಚನ ಆದ್ರೆ ಕಥನ; ಭಾಷೆ, ಕ್ರಿಯೆ, ಕಾಲ ಇತ್ಯಾದಿ ಕಾಗುಣಿತಗಳು ವಾಣಿಜ್ಯದ ವಿದ್ಯಾರ್ಥಿಯಾದ ನನಗೆ ಸರಿಯಾಗಿ ಅರ್ಥವಾಗದೇ ತಲೆ ಕರೆದುಕೊಂಡು ಸುಮಾರು ದಿನಗಳ ಕಾಲ ಪುಟಗಳನ್ನು ತಿರುಗಿಸುವ ಕಾಯಕ ಮಾಡಿದೆ. ಕೊನೆಗೂ ಇವುಗಳ ಸಹವಾಸ ಬೇಡವೆಂದು ಕೈ ಬಿಟ್ಟು ವಾಪಸು ಕಾವ್ಯಕ್ಕೆ ಬರುವಾಗ ನನಗೆ ಡೆರ್ರಿಡ ಮಾತ್ರ ಒಂದು ಸಣ್ಣ ತಲೆನೋವಾಗಿ ಉಳಿದುಬಿಟ್ಟ.. ಅವನನ್ನು ಅರ್ಥಮಾಡಿಕೊಳ್ಳಲು ನನಗೆ ಸಾಧ್ಯವಾಗಿರಲಿಲ್ಲ. ಆ ಹೊತ್ತಿನಲ್ಲಿ ನಾನು ಮೊದಲ ಎಂ.ಕಾಂ. ವಿದ್ಯಾರ್ಥಿಯಾಗಿದ್ದೆ. ಸಾಹಿತ್ಯದ ಹೊರವಿದ್ಯಾರ್ಥಿಯಾದ ನನಗೆ ಯಾವ ಮಾರ್ಗದರ್ಶನ ಸಿಕ್ಕಿದ್ದೇ ಇಲ್ಲ! ಸಿಕ್ಕುಸಿಕ್ಕಿದ್ದನ್ನೆಲ್ಲಾ ಒಳಹಾಕಿಕೊಳ್ಳುತ್ತ ಹೋದೆ.. ಅಕೌಂಟು, ಮ್ಯಾನೆಜ್ಮೆಂಟು, ಇನ್ವೆಸ್ಟ್ಮೆಂಟ್ ಥಿಯರಿಗಳೊಂದಿಗೆ ಇವೆಲ್ಲ ಕಲಸುಮೇಲೋಗರ ಆಗಿಹೋಗಿದ್ದರ ಪರಿಣಾಮ ನಂತರದ ದಿನಗಳಲ್ಲಿ ಸಾಹಿತ್ಯದ ಓದು ಬಹಳ ಕಡಿಮೆ ಆಗಿಹೋಯ್ತು ಆದ್ರಲ್ಲು ಸೃಜನೇತರ ಸಾಹಿತ್ಯ ಬರವಣಿಗೆಗಳು. ಡೆರ್ರಿಡನ, ಗಾಯತ್ರಿ ಸ್ಪಿವಾಕ್ ಅನುವಾದಿಸಿದ ಆಫ್ ಗ್ರಮಟೋಲೋಜಿ ಪುಸ್ತಕ ಇವತ್ತಿಗೂ ನನಗೆ ಸವಾಲೆಸೆಯುತ್ತಾ ಇದೆ.. ಆ ಪುಸ್ತಕವನ್ನು ನೋಡಿದಾಗಲೆಲ್ಲ ಹಳೆಯ ಪ್ರೇಯಸಿಯಂತೆ ಕಾಡುತ್ತದೆ.
ಈ ಮೂವರು ಮಹನೀಯರು ನನಗೆ ಕಥನವನ್ನು ಕುರಿತ ಆಸಕ್ತಿ, ಉತ್ಸಾಹ, ಗೊಂದಲ ಮತ್ತು ಮತ್ತೆ ಮತ್ತೆ ಓದಿಗೆ ಪ್ರೇರಣೆ ನೀಡುತ್ತಲೇ ಇದ್ದಾರೆ. ಇವತ್ತಿಗೂ ನಾನು ಖಾಲಿ ಖಾಲಿ ಎನಿಸಿದಾಗ ಮಲೆಗಳಲ್ಲಿ ಮದುಮಗಳನ್ನೋ, ಮಾರ್ಕ್ವೆಜ್ ಕತೆಗಳನ್ನೋ ಓದುವುದು ಅಭ್ಯಾಸವಾಗಿ ಹೋಗಿದೆ. ಆದ್ರೆ ಡೆರ್ರಿಡನನ್ನು ಮಾತ್ರ ಸ್ವಲ್ಪ ದೂರದಲ್ಲೇ ಉಳಿಸಿಬಿಟ್ಟಿದ್ದೇನೆ. ಇನ್ನಾದರೂ ಹತ್ತಿರಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಬೇಕಿದೆ.
 

‍ಲೇಖಕರು avadhi

30 April, 2014

2 Comments

  1. Anil Talikoti

    ಸಾಹಿತ್ಯವನ್ನು ಅಕ್ಯಾಡೆಮಿಕ್ ಆಗಿ ಅಧ್ಯಯನ ಮಾಡದ ನಮ್ಮಂತವರ ಗೋಳನ್ನು ಚೆನ್ನಾಗಿ ತೆರೆದಿಟ್ಟಿದ್ದಿರಿ, ನನಗೇನೋ ‘ಕಥನ ಸಾಧ್ಯತೆ’ ಯ ಅತೀ ಓದಿನಿಂದ -ಓದಿನ ಬೆರಗು ಕರಗಿ ಹೋಗುತ್ತದೆ ಎನಿಸುತ್ತದೆ ಒಮ್ಮೊಮ್ಮೆ. ಹಾಗೆ ಸುಮ್ಮನೆ ಓದುವದೆ ಮಜವೇನೋ…
    -ಅನಿಲ

  2. savitha

    ತುಂಬಾ ಚೆನ್ನಾಗಿದೆ ಸರ್. ನನ್ನದೇ ಅನಿಸಿಕೆ ಅಂತೆಯೇ ಇದೆ ಅನ್ಸುತ್ತೆ. ನಾನು ಸಾಹಿತ್ಯವನ್ನು ಅಕಾಡೆಮಿಕ್ ಆಗಿ ಓದಿಲ್ಲ. ಆದರೆ ಈ ಕಾದಂಬರಿಗಳು ಏಎಗ ನನ್ನ ಉಸಿರಾಗಿಬಿತ್ತ್ತಿವೆ. ಮಾರ್ಕ್ಕ್ವೆಜ ನ ಇಂಗ್ಲಿಷ್ ವರ್ಷನ್ ಗಳನ್ನ ಈಗ ಓದುತ್ತಿದ್ದೇನೆ. Sir u just help me how would i get Kannada e books. Thanks a lot for giving such a wonderful article.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading