ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರ್ಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಡ್ರಪತಿಗಳು ಮತ್ತು ರಾಜ್ಯಪಾಲರು ತಮ್ಮ ಸಾಂಪ್ರದಾಯಿಕ ಹಾಗು ಔಪಚಾರಿಕ ಭಾಷಣ ಮಾಡುವುದು ಸಾಂವಿಧಾನಿಕ ಪರಂಪರೆಯಾಗಿ ಬೆಳೆದು ಬಂದಿದೆ. ಅಕ್ಷರಷಃ ಅಧಿಕಾರರೂಢ ಪಕ್ಷದ ಭಾಷಣವನ್ನು ಪ್ರಾತಿನಿಧಿಕವಾಗಿ ಓದುವ ಈ ಪರಂಪರೆಯ ಔಚಿತ್ಯವೇನೇ ಇರಲಿ, ರಾಜ್ಯಪಾಲರ ಭಾಷಣದಲ್ಲಿ ಮುಂಬರುವ ದಿನಗಳಲ್ಲಿ ನೂತನ ಸರ್ಕಾರದ ಸಂಭಾವ್ಯ ನೀತಿಗಳು, ಯೋಜನೆಗಳು ಮತ್ತು ಧ್ಯೇಯೋದ್ದೇಶಗಳು ಮುಖ್ಯವಾಗಿ ಕಾಣುವುದು ಉಚಿತ. ಆದರೆ ಪ್ರಸಕ್ತ ಭಾರತೀಯ ರಾಜಕಾರಣದಲ್ಲಿ ರಾಜ್ಯಪಾಲರ ಹುದ್ದೆ ಮತ್ತು ಕಚೇರಿ ರಾಜಕೀಯ ಚೌಕಟ್ಟಿನಲ್ಲಿ ಬಂಧಿಸಲ್ಪಟ್ಟಿರುವುದರಿಂದ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲರು/ರಾಷ್ಟ್ರಪತಿಗಳು ಮಾಡುವ ಭಾಷಣದಲ್ಲಿ ನಿಷ್ಪಕ್ಷಪಾತ ಧೋರಣೆ ಮತ್ತು ವಸ್ತುನಿಷ್ಠ ದೃಷ್ಟಿಕೋನವನ್ನು ನಿರೀಕ್ಷಿಸುವುದು ಅಸಾಧ್ಯ. ಕರ್ನಾಟಕ ವಿಧಾನಸಭೆಯ ಪ್ರಸಕ್ತ ಅಧಿವೇಶನದಲ್ಲಿ ರಾಜ್ಯಪಾಲ ಹಂಸರಾಜ್ ಭರದ್ವಾಜ್ ಮಾಡಿರುವ ಭಾಷಣವನ್ನು ಭಿನ್ನವಾಗಿ ನೋಡಲಾಗುವುದಿಲ್ಲ.
ಭಾರತೀಯ ಪ್ರಜಾತಂತ್ರದ ಮತ್ತೊಂದು ವೈರುಧ್ಯ ಮತ್ತು ವಿಪರ್ಯಾಸಕರ ವಿಡಂಬನೆ ಎಂದರೆ ಇಲ್ಲಿ ವಿರೋಧ ಪಕ್ಷ ಎಂದರೆ ಆಳುವ ಪಕ್ಷದ ಪ್ರತಿಯೊಂದು ಹೆಜ್ಜೆಯನ್ನೂ ವಿರೋಧಿಸಲೇಬೇಕೆಂಬ ಅಘೋಷಿತ ನಿಯಮ ಜಾರಿಯಲ್ಲಿದೆ. ಈ ಒಂದು ವಿದ್ಯಮಾನ ಎಷ್ಟು ಹಾಸ್ಯಾಸ್ಪದವಾಗಿದೆ ಎಂದರೆ ಹಿಂದಿನ ಸರ್ಕಾರದಲ್ಲಿ ಖುದ್ದು ಸಚಿವರಾಗಿದ್ದವರೂ ಚುನಾವಣೆಯ ನಂತರ ಪಕ್ಷ ಬದಲಿಸಿದಲ್ಲಿ ತಮ್ಮದೇ ಪಕ್ಷದ ನೀತಿಗಳನ್ನು ಖಂಡಿಸಲಾರಂಭಿಸುತ್ತಾರೆ. ಚುನಾವಣೆ ಮುಗಿದ ನಂತರ ವಿರೋಧ ಪಕ್ಷವಾಗಿ ಹೊರಹೊಮ್ಮುವ ಪಕ್ಷಗಳಿಗೆ ಸಂವಿಧಾನ ನಿಷ್ಠೆ ಮತ್ತು ಪ್ರಜಾನಿಷ್ಠೆ ಮುಖ್ಯವಾಗುವುದೇ ಹೊರತು, ಆಡಳಿತಾರೂಢ ಪಕ್ಷದ ವೈರತ್ವವಲ್ಲ ಎಂಬ ಸರಳ ಸತ್ಯವನ್ನೂ ನಮ್ಮ ರಾಜಕೀಯ ಪಕ್ಷಗಳು ಗ್ರಹಿಸದೆ ಇರುವುದು ದುರಾದೃಷ್ಟಕರ. ಹಾಗಾಗಿಯೇ ರಾಜ್ಯಪಾಲರ ಅಥವಾ ರಾಷ್ಟ್ರಪತಿಗಳ ಔಪಚಾರಿಕ ಭಾಷಣವನ್ನು ವಸ್ತುನಿಷ್ಠವಾಗಿ ಪರಿಶೀಲಿಸದೆ ನೇರವಾಗಿ ಖಂಡಿಸುವ ಒಂದು ಪ್ರವೃತ್ತಿ ಎಲ್ಲ ಪಕ್ಷಗಳಲ್ಲೂ ಕಂಡುಬರುತ್ತದೆ.
ಪ್ರಸಕ್ತ ಅಧಿವೇಶನದಲ್ಲಿ ರಾಜ್ಯಪಾಲ ಹಂಸರಾಜ್ ಭರದ್ವಾಜ್ ತಮ್ಮ ಭಾಷಣದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಭವಿಷ್ಯದ ನೀತಿಗಳನ್ನು ಮತ್ತು ಹಲವು ಜನಪರ ಯೋಜನೆಗಳನ್ನು ಸಾದರಪಡಿಸಿದ್ದಾರೆ. ಬಿಪಿಎಲ್ ಕುಟುಂಬಗಳಿಗೆ ಒಂದು ರೂ ಕಿಲೋ ಅಕ್ಕಿ, ಕೈಗೆಟುಕುವ ದರದಲ್ಲಿ ಮನೆ, ಸಾವಿರ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರು, ಶಾಲೆಗಳಲ್ಲಿ ಪ್ರತ್ಯೇಕ ಶೌಚಾಲಯ, ಕೃಷಿಕರ ವಲಸೆ ತಪ್ಪಿಸಲು ಕೃಷಿ ಬೆಲೆ ಆಯೋಗ ರಚನೆ, ಕಾವೇರಿ ಪಾತ್ರದ ಯೋಜನೆಗಳಿಗೆ ಮರುಜೀವ ಹೀಗೆ ರಾಜ್ಯದ ಎಲ್ಲ ವರ್ಗಗಳನ್ನೂ ಸಂತೃಪ್ತಿಪಡಿಸುವ ಮಹದಾಕಾಂಕ್ಷೆಯ ಯೋಜನೆಗಳನ್ನು ಸಿದ್ಧರಾಮಯ್ಯ ಸರ್ಕಾರ ಸಿದ್ಧಪಡಿಸಿದೆ. ಆದರೆ ಇವೆಲ್ಲವೂ ಚುನಾವಣಾ ಆಶ್ವಾಸನೆಗಳಷ್ಟೇ ಪವಿತ್ರ ಮತ್ತು ಅಷ್ಟೇ ವಿಶ್ವಾಸಾರ್ಹ ಎಂಬ ಸಂಗತಿ ಮತದಾರರಿಗೆ, ಪ್ರಜ್ಞಾವಂತ ಜನರಿಗೆ ತಿಳಿದಿದೆ. ಸರ್ಕಾರದ ಈ ಘೋಷಣೆಗಳ ಹಿಂದಿರುವ ಹಣಕಾಸಿನ ಸಾಮಥ್ರ್ಯ ಮತ್ತು ವಸ್ತುಸ್ಥಿತಿಯನ್ನು ಕೂಲಂಕುಷವಾಗಿ ಅರಿತು ಟೀಕೆ ಮಾಡುವುದು ಯಾವುದೇ ಪ್ರಬುದ್ಧ ರಾಜಕೀಯ ಪಕ್ಷದ ಕರ್ತವ್ಯ. ಆದರೆ ರಾಜ್ಯದ ಪ್ರಮುಖ ವಿರೋಧ ಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿ ರಾಜ್ಯಪಾಲರ ಭಾಷಣ ಕೇಳಿದ ಕೂಡಲೇ ಇದರಲ್ಲಿ ಹೊಸತೇನೂ ಇಲ್ಲ ಎಂದು ಹಳಿಯುವುದು ವಿರೋಧ ಪಕ್ಷಗಳ ಅಪ್ರಬುದ್ಧತೆಯನ್ನು ತೋರಿಸುತ್ತದೆ.
ವಿರೋಧ ಪಕ್ಷಗಳ ಮತ್ತೊಂದು ಆಕ್ಷೇಪ ಎಂದರೆ ರಾಜ್ಯಪಾಲರು ಹಿಂದಿನ ಐದು ವರ್ಷಗಳಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಹಗರಣಗಳನ್ನು ಪ್ರಸ್ತಾಪಿಸಿ, ಬಿಜೆಪಿ ಸರ್ಕಾರದ ಭ್ರಷ್ಟತೆಯಿಂದ ರಾಜ್ಯದ ಘನತೆಗೆ ಧಕ್ಕೆ ಉಂಟಾಗಿರುವುದನ್ನು ಪ್ರಸ್ತಾಪಿಸಿರುವುದು. ಇದೇನು ರ್ಭರಃರ್ಥ ಪ್ರಮಾದವೇನಲ್ಲ. ರಾಜ್ಯಪಾಲರ ಭಾಷಣ ಎಂದರೆ ಆಳುವ ಪಕ್ಷದ ಭಾಷಣ ಎಂದು ಸ್ವೀಕರಿಸಿರುವ ನಮ್ಮ ಪ್ರಜಾಸತ್ತೆಯಲ್ಲಿ ಸರ್ಕಾರದ ವಿರೋಧಿಗಳನ್ನು ರಾಜ್ಯಪಾಲರು ಟೀಕಿಸುವುದು ಅಚ್ಚರಿಯ ಮಾತೇನಲ್ಲ. ವಾಸ್ತವಾಂಶವೆಂದರೆ ನೈತಿಕ ಮೌಲ್ಯಾಧಾರಿತ ರಾಜಕಾರಣವನ್ನು ಮಾರುಕಟ್ಟೆ ಮೌಲ್ಯಾಧಾರಿತ ವ್ಯವಸ್ಥೆಯನ್ನಾಗಿ ವ್ಯವಸ್ಥಿತವಾಗಿ ಪರಿವರ್ತಿಸಿದ ಬಿಜೆಪಿ ಮತ್ತು ಅಂತಹ ಭ್ರಷ್ಟ, ಕೋಮುವಾದಿ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರಣವಾದ ಜೆಡಿಎಸ್ ಪಕ್ಷಕ್ಕೆ ರಾಜ್ಯಪಾಲರ ಕಟುನುಡಿಗಳನ್ನು ಪ್ರತಿರೋಧಿಸುವ ನೈತಿಕ ಹಕ್ಕು ಇರುವುದಿಲ್ಲ. ರಾಜ್ಯಪಾಲರು ಹಿಂದಿನ ಸರ್ಕಾರವನ್ನು ಟೀಕಿಸುವ ಮೂಲಕ ತಮ್ಮ ವ್ಯಾಪ್ತಿಯನ್ನು ಮೀರಿದ್ದಾರೆ ಎಂದು ಆರೋಪಿಸುವ ವಿರೋಧ ಪಕ್ಷಗಳು ತಮ್ಮದೇ ಸರ್ಕಾರ ಇದ್ದಲ್ಲಿ ರಾಜ್ಯಪಾಲರಿಗೆ ಸ್ವಾಯತ್ತ ಅಧಿಕಾರ ನೀಡುವುವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆಳುವ ಪಕ್ಷಗಳು ನಿರ್ಮಿಸುವ ಚೌಕಟ್ಟಿನಲ್ಲೇ ಮಾತನಾಡುವ ರಾಜ್ಯಪಾಲರು ವಿರೋಧ ಪಕ್ಷಗಳಿಂದಲು ಇಂತಿಷ್ಟೇ ಮಾತನಾಡಬೇಕು ಎಂಬ ನಿರ್ಬಂಧಕ್ಕೊಳಗಾದಲ್ಲಿ ಆ ಸಾಂವಿಧಾನಿಕ ಹುದ್ದೆಯ ಪಾವಿತ್ರ್ಯತೆಯಾದರೂ ಎಲ್ಲಿ ಉಳಿಯುತ್ತದೆ ?
ಒಂದು ವೇಳೆ ರಾಜ್ಯಪಾಲರು ಬಿಜೆಪಿ ಸರ್ಕಾರವನ್ನು ಟೀಕಿಸಿದ್ದು ತಪ್ಪು ಎಂದೇ ಪರಿಗಣಿಸಿದರೂ ರಾಜ್ಯಪಾಲರ ಭಾಷಣದ ಔಚಿತ್ಯವನ್ನು ಪ್ರಶ್ನಿಸುವುದರ ಬದಲು ಬಿಜೆಪಿ ತನ್ನ ಆಡಳಿತಾವಧಿಯ ಅವಘಡಗನ್ನು ಕುರಿತು ಆತ್ಮ ವಿಮರ್ಶೆ ಮಾಡಿಕೊಳ್ಳುವುದು ಒಳಿತು. ಕಾಂಗ್ರೆಸ್ ಸರ್ಕಾರಗಳು 60 ವರ್ಷಗಳಲ್ಲಿ ಸಾಧಿಸದಿರುವುದನ್ನು ಐದೇ ವರ್ಷದಲ್ಲಿ ಸಾಧಿಸುವ ಛಲ ತೊಟ್ಟು ಅಧಿಕಾರದ ಗದ್ದುಗೆ ಏರಿದ ಬಿಜೆಪಿ ಸರ್ಕಾರ ಮೂವರು ಮುಖ್ಯಮಂತ್ರಿಗಳ ಅವಧಿಯಲ್ಲಿ ರಾಜ್ಯದ ಇತಿಹಾಸದಲ್ಲೇ ಕಾಣದಷ್ಟು ಭ್ರಷ್ಟತೆಯನ್ನು ಕೇವಲ ಮೂರು ವರ್ಷಗಳಲ್ಲಿ ಸಾಧಿಸಿದೆ. ಆಪರೇಷನ್ ಕಮಲ ಎಂಬ ಮಾರುಕಟ್ಟೆ ಪದ್ಧತಿಯನ್ನು ವಿಧಾನಸೌಧದಲ್ಲಿ ಜಾರಿಗೊಳಿಸಿದ ಮಾಜಿ ಸೀಎಂ ಯಡಿಯೂರಪ್ಪ ರಾಜ್ಯ ರಾಜಕಾರಣದಲ್ಲಿ ಭ್ರಷ್ಟತೆಗೆ ಒಂದು ಹೊಸ ವ್ಯಾಖ್ಯಾನ ನೀಡಿದ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ತಾವು ಭ್ರಷ್ಟರು ನಿಜ ಆದರೆ ತಮಗಿಂತಲೂ ಭ್ರಷ್ಟರಿದ್ದಾರೆ ಎಂಬ ವಾದಸರಣಿಯಿಂದಲೇ ತಮ್ಮ ಭ್ರಷ್ಟ ಸಾಮ್ರಾಜ್ಯವನ್ನು ವಿಸ್ತರಿಸಿದ ಮಾಜಿ ಸೀಎಂ ರಾಜ್ಯಪಾಲರ ಹೇಳಿಕೆಯನ್ನು ಖಂಡಿಸುವುದು ಹಾಸ್ಯಾಸ್ಪದ.
ನಿಜ, ರಾಜ್ಯಪಾಲರ ಭಾಷಣ ಸಂಯಮದಿಂದ ಕೂಡಿರಬೇಕು. ವಸ್ತುನಿಷ್ಠವಾಗಿರಬೇಕು. ಸಂವಿಧಾನಬದ್ಧವಾಗಿರಬೇಕು. ಆದರೆ ಜನತೆಯನ್ನು ಪ್ರತಿನಿಧಿಸುವ ರಾಜಕೀಯ ಪಕ್ಷಗಳಲ್ಲಿ ಸಂಯಮದೊಡನೆ ಸಂವೇದನೆ, ಜನಪರ ಕಾಳಜಿ ಮತ್ತು ಆತ್ಮವಿಮರ್ಶೆಯ ಇಚ್ಚಶಕ್ರಿಯೂ ಇರುವುದು ಅಗತ್ಯ. ಒಂದು ವೇಳೆ 2014ರ ಲೋಕಸಭಾ ಚುನಾವಣೆಗಳಲ್ಲಿ ಎನ್ಡಿಎ ಅಧಿಕಾರಕ್ಕೆ ಬಂದಲ್ಲಿ ಅಂದಿನ ರಾಷ್ಟ್ರಪತಿಗಳು ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಹಗರಣಗಳನ್ನು ಪ್ರಸ್ತಾಪಿಸಲೂಬಹುದು. ಆದರೆ ಇದಾವುದೂ ಗಣನೆಗೆ ಬರುವುದಿಲ್ಲ. ಕೇಂದ್ರ ಸರ್ಕಾರದ ಭ್ರಷ್ಟತೆ ಬಿಜೆಪಿಯ ಭ್ರಷ್ಟತೆಯನ್ನು ಸ್ವೀಕಾರಾರ್ಹವಾಗಿ ಮಾಡುವುದಿಲ್ಲ. ಅಥವಾ ರಾಜ್ಯಪಾಲರು ಪ್ರಸ್ತಾಪಿಸದಿದ್ದರೆ ಬಿಜೆಪಿಯ ಭ್ರಷ್ಟತೆ ಮರೆಯಾಗುವುದೂ ಇಲ್ಲ. ನಾಡಿನ ಮತದಾರರು ಹೆಚ್ಚು ಪ್ರಬುದ್ಧರಾಗಿರುವುದನ್ನು ಇತ್ತೀಚಿನ ಚುನಾವಣೆಗಳು ನಿರೂಪಿಸಿವೆ. ಈ ಕಟು ಸತ್ಯವನ್ನು ರಾಜಕೀಯ ಪಕ್ಷಗಳು ಗ್ರಹಿಸುವುದು ಇಂದಿನ ತುರ್ತು ಅಗತ್ಯತೆ. ಕಾಂಗ್ರೆಸ್ ಪಕ್ಷವನ್ನೂ ಸೇರಿದಂತೆ ರಾಜಕೀಯ ಪಕ್ಷಗಳು ಆತ್ಮವಿಮರ್ಶೆ ಮಾಡಿಕೊಳ್ಳದಿದ್ದರೆ ಪಕ್ಷಗಳಿಗೆ ಮಾತ್ರವಲ್ಲ ಪ್ರಜಾತಂತ್ರ ವ್ಯವಸ್ಥೆಗೇ ಉಳಿಗಾಲವಿರುವುದಿಲ್ಲ .






ಬಹುಷಃ ನಿಮ್ಮ ಪ್ರತಿ ಸಾಲುಗಳಲ್ಲೂ ಕೂಡ BJP ಪಕ್ಷದ ಮೇಲಿನ ನಿಮ್ಮ ಅಸಹನೆ ಎದ್ದು ಕಾಣುತ್ತದೆ. ನಿಮ್ಮ ಲೇಖನ ಪಕ್ಷಾತೀತವಾಗಿದ್ದರೆ ನಾನು ಖಂಡಿತ ನಿಮ್ಮ ವಾದವನ್ನು ಒಪ್ಪುತ್ತಿದ್ದೆ. ನಿಮ್ಮ ಪ್ರಕಾರ ರಾಜ್ಯಪಾಲರೇ ಸರಿ ಎನ್ನುವುದಾದರೆ ಅವರೇಕೆ ಕೇಂದ್ರದಲ್ಲಿಯ ಸೋನಿಯಾರ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ. ಮೇಡಂನ ಆದೇಶದಂತೆ BJP ಸರಕಾರವಿರುವ ತನಕ ಆ ಪಕ್ಷವನ್ನು ಗೋಳು ಹೊಯ್ದುಕೊಂಡ ರಾಜ್ಯಪಾಲರಿಗೆ ತನ್ನ ಅಧಿಕಾರದ ಮೇಲೆ ಅಥವಾ ತಾನಿರುವ ಸ್ಥಾನದ ಮೇಲೆ ಕೊಂಚವಾದರೂ ಗಮನವಿರಲಿಲ್ಲವೇ? ಯಾವುದೇ ಯೋಜನೆ ಕಾರ್ಯಗತಗೊಂಡಾಗ ಮಾತನಾಡದ ಈ ಮೌನಿ, ಏನೇ ಆದರೂ ದಿನಕ್ಕೊಂದು ಹೇಳಿಕೆ ಕೊಡುತ್ತಿದ್ದರಲ್ಲ. ಈಗ್ಯಾರು ಈ ಪುಣ್ಯಾತ್ಮನ ಬಾಯಿಗೆ ಬೇಗ ಜಡಿದಿದ್ದಾರೆ? ಅಷ್ಟಕ್ಕೂ ಅವರು ಕಾಂಗ್ರೆಸ್ ನ ಏಜೆಂಟ್ ನಂತೆ ಕೆಲಸ ಮಾಡುತ್ತಿದ್ದಾರೆ ಎಂದಿದ್ದು ಕೇವಲ BJP ಯಷ್ಟೇ ಅಲ್ಲ . ಇಡೀ ರಾಜ್ಯದ ಜನತೆಗೆ ಗೊತ್ತು. ಸ್ವಾಮಿ, ಅಧಿಕಾರರೂಢ ಪಕ್ಷ ಕೊಟ್ಟ ಭಾಷಣವನ್ನು ಓದಿದರೆ ತಪ್ಪಿಲ್ಲ ಅಂತ ಅದ್ಯಾವ ಮಾನದಂಡಗಳಿಂದ ಹೇಳಿದ್ದೀರಿ? ಅವರು ಹಾಗೆ ಮಾಡಿದರೂ ಆ ಭಾಷಣದ ಪ್ರತಿಯಲ್ಲೇನಿದೆ ಅನ್ನುವುದನ್ನು ಅರ್ಥ ಮಾಡಿಕೊಂಡು ಓದುವ ಪರಿಜ್ಞಾನವಿರಬೇಕು.
ಅಧಿಕಾರರೂಢ ಪಕ್ಷ ಭಾಷಣ ಪ್ರತಿಯಲ್ಲಿ “ಕೆಂಚಾಲೋ ಮಚ್ಚಾಲೋ, ಹೆಂಗವ್ಲಾ….” ಅಂತ ಬರೆದುಕೊಟ್ಟಿದ್ದರೆ ಅದನ್ನೂ ಓದುತ್ತಿದ್ದರೋ ಹೇಗೆ?
ಗಮನಿಸಿ: ನಾನು ಕೂಡ BJP ಯ ಪರವಾಗಿ ಮಾತನಾಡುತ್ತಿಲ್ಲ. ಪ್ರತಿಯೊಬ್ಬರಿಗೂ BJP ಪಕ್ಷ ನಡೆದುಕೊಂಡ ರೀತಿ, ಅದರ ಭ್ರಷ್ಟ ಅಧಿಕಾರದ ಬಗ್ಗೆ ಅಸಮಾಧಾನವಿದೆ.ಅದಕ್ಕಾಗಿಯೇ ಮತದಾರ ನಿಸ್ಸಂಕೋಚದಿಂದ BJP ಗೆ “ಕೈ” ಕೊಟ್ಟಿದ್ದಾನೆ.. ರಾಜ್ಯಪಾಲರಾದವರೊಬ್ಬರು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು ಎನ್ನುವುದಷ್ಟೇ ನನ್ನ ಇಂಗಿತ.
ರಾಜ್ಯಪಾಲರ ಸ್ಥಾನವೇ ಅನಗತ್ಯ. ಹಾಗಿರುವಾಗ ಅವರ ಭಾಷಣದ ಬಗ್ಗೆ ವಿವಾದ ಸಹಜ. ಇಂದಿನ ಸಂವಿಧಾನದ ಚೌಕಟ್ಟಿನಲ್ಲಿ ಕೊಡ ಮಾಡಿದ ಅವಕಾಶದಂತೆ ಸರಕಾರವೆಂಬುದು ಯಾವುದೇ ಪಕ್ಷದ್ದಾದರೂ ಅದು ನಡೆಯುವುದು ಸಂವಿಧಾನದ ‘ಮುಖ್ಯಸ್ಥರಾದ’ ರಾಷ್ಟ್ರಪತಿ/ರಾಜ್ಯಪಾಲರ ಹೆಸರಿನಲ್ಲಿ. ಹೀಗಾಗಿಯೇ ಪ್ರತಿ ಆದೇಶಗಳೂ ರಾಜ್ಯಪಾಲರ ಹೆಸರಿನಲ್ಲೇ ಹೊರಬೀಳುವುದು. ಅವರು ನನ್ನ ಸರಕಾರವೆಂದೇ ಹೇಳುವುದು. ಈ ಹಿನ್ನೆಲೆಯಲ್ಲಿ ಸರಕಾರದ ಧೋರಣೆ, ನೀತಿಗಳನ್ನು, ಮುಂದಿನ ಯೋಜನೆ,ಭರವಸೆಗಳನ್ನು ಅವರು ತಮ್ಮ ಭಾಷಣದಲ್ಲಿ ಅಭಿವ್ಯಕ್ತಿಸಿದ್ದಾರೆ. ಇದೆಲ್ಲಾ ಮಾಮೂಲು. ಗಮನಿಸಬೇಕಾದ್ದು ಈ ಕಾಂಗ್ರೆಸ್ ಸರಕಾರ ಉದಾರೀಕರಣದ ಆರ್ಥಿಕ ನೀತಿಗಳನ್ನು ಕೈ ಬಿಟ್ಟಿಲ್ಲ. ನಾಳೆ ಇವರು ವಿಶ್ವ ಬಂಡವಾಳಗಾರರ ಸಮಾವೇಶ ಮಾಡಿ ರೈತರನ್ನು ಒಕ್ಮಿಕಲೆಬ್ಬಿಸಿ ಭೂಮಿ ಪರಭಾರೆ ಮಾಡುವಾಗ ‘ಡೀಲ್’ ನಡೆಯದೇ ಏರ್ಪಡುತ್ತದೆ ಎಂಬುದು ಒಂದು ದೊಡ್ಡ ಭ್ರಮೆ. ಈ ವ್ಯವಹಾರದಲ್ಲಿ ‘ಹಂಚಿಕೆ’ಗಳಿಗಾಗಿ ಈ ಪಕ್ಷದಲ್ಲಿಯೂ ಇರುವ ಭೂಮಾಫಿಯಾಗಳು ಸೆಡ್ಡು ಹೊಡೆದು ಕುಸ್ತಿ ಹಿಡಿಯೋಲ್ಲ ಎಂದು ಹೇಳಲಾಗುವುದಿಲ್ಲ. ಮತ್ತೊಂದೆಡೆ ಕೇಂದ್ರವೇ ರಾಜ್ಯಗಳಿಗೆ ಅಗತ್ಯವಿರುವಷ್ಟು ಕೋಟಾದಷ್ಟು ಅಕ್ಕಿಯನ್ನು ಕೊಡದೇ ಅದರಲ್ಕಲಿ ಸಿಂಹ ಪಾಲು ಕಡಿತ ಮಾಡಿ ಆಹಾರದ ಅಭದ್ರತೆ ಸೃಷ್ಟಿಸುತ್ತಿರುವಾಗ ಸಿದ್ಧರಾಮಯ್ಯನವರು ಅದೇಗೆ ಸರಿದೂಗಿಸುತ್ತಾರೋ ನೋಡಬೇಕು. ಇದು ಅಸಾಧ್ಯವೇನಲ್ಲ. ಆದರೆ ಇದಕ್ಕೆ ರಾಜಕೀಯ ಇಚ್ಛಾಶಕ್ತಿ, ಆರ್ಥಿಕ ಬೆಂಬಲ ಬೇಕು. ಮುಂದಿನ ಕಸರತ್ತುಗಳನ್ನು ಕಾದು ನೋಡೋಣ.ಒಟ್ಟಾರೆ ದಿವಾಕರ್ ರವರು ಪ್ರಸ್ಥಾಪಿಸಿದಂತೆ ಬಿಜೆಪಿಯ ಭ್ರಷ್ಟತೆ ಬಗ್ಗೆ ರಾಜ್ಯಪಾಲರು ಹೇಳಿರುವುದು ಸಮಯೋಚಿತವಾಗಿದೆ, ಅವರು ಹಿಂದಿನ ಸರಕಾರದ ದುರಾಡಳಿತದ ಬಗ್ಗೆ ಜನ ಬೇಸತ್ತಿದ್ದಾರೆ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಆಡಳಿತ ಮಾಡಿ ಎಂದಿರುವುದು ಅರ್ಥಪೂರ್ಣ. ಇದನ್ನೂ ಆಡಳಿತ ಪಕ್ಷವೇ ಬರೆದುಕೊಟ್ಟಿದೆ ಎನಿಸುವುದಿಲ್ಲ ಬದಲಾಗಿ ಸ್ವತಃ ಹೇಳಿರಬಹುದಾದ ಸಾಧ್ಯತೆಗಳನ್ನೂ ತಳ್ಳಿ ಹಾಕಬೇಕಿಲ್ಲ. ಇನ್ನು ಬಹುತೇಕ ರಾಜ್ಯಪಾಲರು ಕೇಂದ್ರ ಸರಕಾರದ ಅಣತಿಯಂತೆಯೇ ಕಾರ್ಯ ನಿರ್ವಹಿಸುವುದು ಗುಟ್ಟೇನಲ್ಲ .
ಆದರೆ ಪ್ರಸಕ್ತ ಭಾರತೀಯ ರಾಜಕಾರಣದಲ್ಲಿ ರಾಜ್ಯಪಾಲರ ಹುದ್ದೆ ಮತ್ತು ಕಚೇರಿ ರಾಜಕೀಯ ಚೌಕಟ್ಟಿನಲ್ಲಿ ಬಂಧಿಸಲ್ಪಟ್ಟಿರುವುದರಿಂದ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲರು/ರಾಷ್ಟ್ರಪತಿಗಳು ಮಾಡುವ ಭಾಷಣದಲ್ಲಿ ನಿಷ್ಪಕ್ಷಪಾತ ಧೋರಣೆ ಮತ್ತು ವಸ್ತುನಿಷ್ಠ ದೃಷ್ಟಿಕೋನವನ್ನು ನಿರೀಕ್ಷಿಸುವುದು ಅಸಾಧ್ಯ. ರಾಜ್ಯಪಾಲರ ಭಾಷಣ ಎಂದರೆ ಆಳುವ ಪಕ್ಷದ ಭಾಷಣ ಎಂದು ಸ್ವೀಕರಿಸಿರುವ ನಮ್ಮ ಪ್ರಜಾಸತ್ತೆಯಲ್ಲಿ ಸರ್ಕಾರದ ವಿರೋಧಿಗಳನ್ನು ರಾಜ್ಯಪಾಲರು ಟೀಕಿಸುವುದು ಅಚ್ಚರಿಯ ಮಾತೇನಲ್ಲ
ಈ ವಾಕ್ಯಗಳನ್ನು ಗಮನಿಸಿದ್ದಲ್ಲಿ ನಿಮ್ಮ ಟೀಕೆ ಭಿನ್ನವಾಗಿರುತ್ತಿತ್ತು. ಬಿಜೆಪಿ ಅಧಿಕಾರದಲ್ಲಿದ್ದಾಗ ಇದೇ ರಾಜ್ಯಪಾಲರ ಭಾಷಣ ಬಿಜೆಪಿ ಸರ್ಕಾರದ ಪರವಾಗಿರುತ್ತದೆ ಅಲ್ಲವೇ ? ಈ ಪ್ರವೃತ್ತಿಯನ್ನು ಹೋಗಲಾಡಿಸುವ ಇಚ್ಚಾಶಕ್ತಿ ನಮ್ಮ ಆಳ್ವಿಕರಲ್ಲಿ ಇಲ್ಲ. ಇದು ಎಲ್ಲ ಪಕ್ಷಗಳಿಗೂ ಅನ್ವಯಿಸುತ್ತದೆ.
ಹೌದು, ನಿಜ
ಹೌದು ದಿವಾಕರ್ ಸರ್.