ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಜಕೀಯ “ನಿರುದ್ಯೋಗ”

gali2.gif

 

 

ಗಾಳಿ ಬೆಳಕು

ನಟರಾಜ್ ಹುಳಿಯಾರ್

ಅಂತೂ ಇಂತೂ ಎರಡು ತಿಂಗಳುಗಳ ರಾಜಕೀಯ “ನಿರುದ್ಯೋಗ”ದ ನಂತರ ಎಂ.ಪಿ.ಪ್ರಕಾಶ್ ಕಾಂಗ್ರೆಸ್ ಸೇರಿದ್ದಾರೆ. ಹಿಂದೊಮ್ಮೆ ಸಮಾಜವಾದಿ ಪಕ್ಷವು ರೂಪಿಸಿದ್ದ “ಕಾಂಗ್ರೆಸ್ ವಿರೋಧಿವಾದ” ಅಥವಾ “ನಾನ್ ಕಾಂಗ್ರೆಸ್ಸಿಸಂ”ನ ಪ್ರತಿಪಾದಕರಾಗಿದ್ದ ಪ್ರಕಾಶ್ ಇಂದು ಕಾಂಗ್ರೆಸ್ ಸೇರಿದ್ದಾರೆ; ಸದ್ಯ, ಅವರು ಬಿಜೆಪಿ ಸೇರಲಿಲ್ಲ ಎಂದು ಅವರ “ಸೋಷಲಿಸ್ಟ್” ಮಿತ್ರರು ಸಂತೋಷಪಟ್ಟಿರಬಹುದು. ಪ್ರಕಾಶ್ ಜೊತೆ ಸೇರಿರುವ 17 ಜನರ ದಂಡಿನಿಂದ ಕಾಂಗ್ರೆಸ್ಸಿಗೆ ಲಾಭವಾಗಲಿದೆಯೋ ಇಲ್ಲವೋ ಎಂಬುದನ್ನು ಬರುವ ಚುನಾವಣೆಯ ಕಾಲದಲ್ಲಿ ನೋಡೋಣ.

ಹತ್ತಾರು ವರ್ಷಗಳಿಂದ, “ಪುಸ್ತಕಗಳನ್ನು ಓದುತ್ತಾರೆ”, “ನಾಟಕ ಬರೆಯುತ್ತಾರೆ”, “ಚರ್ಚಾಪಟುವಿನಂತೆ ತಾತ್ವಿಕವಾಗಿ ಮಾತಾಡುತ್ತಾರೆ” ಎಂದೆಲ್ಲ ಹೊಗಳಿಕೆಗೆ ಪಾತ್ರವಾಗಿದ್ದ ಪ್ರಕಾಶ್ ಈಗ ಕಾಂಗ್ರೆಸ್ ಸೇರಿದ್ದಕ್ಕೆ ಯಾವ ತಾತ್ವಿಕತೆ ಹುಡುಕುತ್ತಿದ್ದಾರೋ ತಿಳಿಯದು. ಆದರೆ ಒಂದು ವರ್ಷವೋ ಅಥವಾ ಆರು ತಿಂಗಳೋ ಪಕ್ಷ ರಾಜಕಾರಣವಿಲ್ಲದೆ ಏನಾದರೂ ಮಾಡಬಹುದು ಎಂಬ ಸಾಧ್ಯತೆಯೇ ಗೊತ್ತಿಲ್ಲದವರಂತೆ ಚಡಪಡಿಸಿದ ಪ್ರಕಾಶ್ ಅವರ ಸ್ಥಿತಿ ಕಂಡರೆ ನಮ್ಮ ರಾಜಕಾರಣಿಗಳ “ನಿರುದ್ಯೋಗ” ಸಮಸ್ಯೆ ಎಂಥದು ಎಂಬುದರ ಬಗ್ಗೆ ಕನಿಕರದಿಂದ ಯೋಚಿಸುವಂತಾಗುತ್ತದೆ. ಕೊನೆಯ ಪಕ್ಷ ತಮ್ಮ ಗುರು ಲೋಹಿಯಾ ಸಾಹೇಬರ “ರಾಜಕೀಯದ ಮಧ್ಯೆ ಬಿಡುವು” ಪುಸ್ತಕವಾದರೂ ಎಂ.ಪಿ.ಪ್ರಕಾಶರನ್ನು ಪ್ರಚೋದಿಸಲಿಲ್ಲವೆ?

ಇನ್ನೊಂದು ಪ್ರಸಂಗ ನೋಡಿ: ಸುಮಾರು ಇಪ್ಪತ್ತು ವರ್ಷ ಕಾಲ ರಾಜಕೀಯದಲ್ಲಿದ್ದ ವ್ಯಕ್ತಿಯೊಬ್ಬರು ಮೊನ್ನೆ ಇದ್ದಕ್ಕಿದ್ದಂತೆ ಒಂದು ಕಂಪನಿ ಸೇರಿಕೊಂಡು ಕೆಲಸ ಮಾಡಲಾರಂಭಿಸಿದರು. ಆದರೆ ಅಲ್ಲಿ ಅವರ ಮನಸ್ಸು ಕೂರುತ್ತಿಲ್ಲ; ಯಾಕೆಂದರೆ ರಾಜಕೀಯದ ಆಕರ್ಷಣೆ ಅವರನ್ನು ಒಂದು ಆಫೀಸಿನಲ್ಲಿ ಬೆಳಗಿನಿಂದ ಸಂಜೆಯವರೆಗೆ ಅಲ್ಲಿ ಕೂರಗೊಡುತ್ತಿಲ್ಲ. ಜಿಲ್ಲಾ ಕೇಂದ್ರವೊಂದರಲ್ಲಿ ಕಾಲೇಜೊಂದನ್ನು ನಡೆಸುವ ರಾಜಕಾರಣಿಯೊಬ್ಬರ ಸ್ಥಿತಿ ಕೂಡ ಹೀಗೇ ಇದೆ. ಹೆಗಡೆಯವರ ಕಾಲದಿಂದ ಜನತಾ ಪಕ್ಷ, ಜನತಾದಳಗಳಲ್ಲೇ ಇದ್ದ ಈತ ಸಿದ್ದರಾಮಯ್ಯನವರು ಜನತಾದಳ ಬಿಟ್ಟ ಮೇಲೆ ತಾನೂ ಅತಂತ್ರನಾದೆನೆಂದು ತಿಳಿದವರು. “ಅಹಿಂದ” ಕಟ್ಟಲೆತ್ನಿಸಿದ ಸಿದ್ದರಾಮಯ್ಯನವರ ಹಿಂದೆ ಹೋಗಿ, ಆನಂತರ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದಾಗ ಹಿಂಜರಿದವರು. ಮೊನ್ನೆ ಸಿಕ್ಕಾಗ “ಈಗ ಈ ಘಟ್ಟದಲ್ಲಿ ಯಾವ ಪಕ್ಷಕ್ಕೆಂದು ಹೋಗಲಿ ಹೇಳಿ? ಕಾಂಗ್ರೆಸ್ ನಲ್ಲಿ ನೂಕುನುಗ್ಗಲಿನ ಪರಿಸ್ಥಿತಿಯಿದೆ. ಅಲ್ಲಿ ಸಿದ್ದರಾಮಯ್ಯನವರನ್ನೇ ಕೇಳುವವರಿಲ್ಲ… ಅತ್ತ ಬಿಜೆಪಿಯ ಮತೀಯವಾದ ನನಗೆ ಒಗ್ಗುತ್ತಿಲ್ಲ…” ಎಂದು ಅವರು ಗೊಣಗತೊಡಗಿದರು. “ಕಾಲೇಜು ನಡೆಸುತ್ತಿರುವ ನೀವು ಸದ್ಯಕ್ಕೆ ಸ್ವಲ್ಪ ದಿನ ರಾಜಕೀಯದ ಗೊಡವೆ ಬಿಡಿ. ನಿಮ್ಮ ಕಾಲೇಜಿನ ಕಡೆಗೆ ಗಮನ ಕೊಡಿ. ಆಮೇಲೆ ಏನಾದರೂ ಮಾಡಿ” ಎಂದು ಸಮಾಧಾನ ಮಾಡಲೆತ್ನಿಸಿದರೆ, ಈ ಹಾದಿಯ ಬಗ್ಗೆ ಅವರಿಗೆ ಯಾವ ಆಸಕ್ತಿಯೂ ಇರಲಿಲ್ಲ. “ಕಲಿತದ್ದು ಬಿಡೇ ಕಳ್ಳ…ಡೇ ಎಂದರೆ ಬಿಟ್ಟು ಏನನ್ನು ನೆಕ್ಕಲಿ?” ಎಂದವಳ ಹಾಗೆ ಅವರು ಕೂಡ ರಾಜಕೀಯವಿಲ್ಲದಿದ್ದರೆ ತಮ್ಮ ಅಸ್ತಿತ್ವವೇ ಇಲ್ಲದವರಂತೆ ಆಡುತ್ತಿದ್ದರು.

ಹಾಗೆ ನೋಡಿದರೆ, ಅವರು ಪಕ್ಷದ ಟಿಕೆಟ್ ಪಡೆದು ಎಲೆಕ್ಷನ್ ಗೆ ನಿಲ್ಲುವ ಲೆವೆಲ್ಲಿನ ರಾಜಕಾರಣಿಯೂ ಅಲ್ಲ. ಆದರೆ ಆಗಾಗ ಜನತಾದಳ ಆಫೀಸ್ ಕಡೆಗೆ ಅಡ್ಡಾಡುವುದು, ಅಲ್ಲಿ ಸಿಕ್ಕವರ ಹತ್ತಿರ ತಮ್ಮ ನಾಲಿಗೆಗೆ ದಕ್ಕಿದಷ್ಟು ರಾಜಕೀಯ ವಿಶ್ಲೇಷಣೆ ಮಾಡಿ ಸಮಾಧಾನಗೊಳ್ಳುವುದು, ಪಕ್ಷದ ಸಮಾರಂಭ ನಡೆದಾಗ ಸಂಭ್ರಮದಿಂದ ಓಡಾಡುವುದು, ಎಲೆಕ್ಷನ್ ಟೈಮಿನಲ್ಲಿ ಪಕ್ಷದ ಅಭ್ಯರ್ಥಿಗಾಗಿ ಓಟು ಕೇಳುತ್ತಾ ಅಡ್ಡಾಡುವುದು, ಈ ಪಾರ್ಟಿಯಲ್ಲಿರುವುದರಿಂದ ತನಗೆ ಎಂಥದೋ ರಕ್ಷಣೆಯಿದೆಯೆಂದು ಭಾವಿಸುವುದು… ಪ್ರಾಯಶಃ ಇಷ್ಟೇ ಅವರ ಸದ್ಯದ ರಾಜಕೀಯ ಚಟುವಟಿಕೆಗಳು.

ದಿನವಿಡೀ ಕೈ ತುಂಬ ಬೇರೆ ಕೆಲಸವಿರುವ ಅವರಿಗೂ ಈಗ ರಾಜಕೀಯ ನಿರುದ್ಯೋಗ ಕಾಡುತ್ತಿದೆಯೆನ್ನುವುದು ಆಶ್ಚರ್ಯ ಹುಟ್ಟಿಸುತ್ತದೆ. ಪ್ರಾಯಶಃ ಮೊನ್ನೆ ತಾನೆ ಶಾಸಕಗಿರಿ ಬಿಟ್ಟವರಲ್ಲಿ ಈ ಚಡಪಡಿಕೆ ಇನ್ನಷ್ಟು ಕಾಡುತ್ತಿರಬಹುದು. ಈ ಶಾಸಕರುಗಳ ಬಗ್ಗೆ ಜನ ಮಾತಾಡುವುದನ್ನು ನೀವೆಲ್ಲ ಕೇಳಿದ್ದೀರಿ: “ಅವನಿಗೇನು ಬಿಡಿ, ಮೊನ್ನೆ ಮೊನ್ನೆಯ ತನಕ ನಲವತ್ತು ತಿಂಗಳು ಎಂಎಲ್ ಎ ಆಗಿದ್ದನಲ್ಲಾ, ಆಗ ಸಾಕಷ್ಟು ಆಸ್ತಿ, ಹಣ ಮಾಡಿದ್ದಾನೆ” ಎಂದು ಜನ ತಿವಿಯುತ್ತಲೇ ಇರುತ್ತಾರೆ. ಆದರೆ ಈ ಹಣ, ಆಸ್ತಿಯಷ್ಟೇ ಅವನಿಗೆ ತೃಪ್ತಿ ತರಲಾರದು. ಈಗ ನಮ್ಮ ಕೆಲವು ನಾಯಕರು ಅರ್ಜೆಂಟ್ ಚುನಾವಣೆ ನಡೆಸಬೇಕೆಂದು ಹೇಳುತ್ತಿರುವುದು ಬಹುಬೇಗ ಜನಸೇವೆ ಮಾಡಿ ಜನರ ಋಣ ತೀರಿಸಬಯಸುವ ಸೇವಾಕಾತರದಿಂದಲ್ಲ; ಬದಲಿಗೆ ತಾವು ಕೊಳ್ಳೆ ಹೊಡೆದ ಹಣವನ್ನು ಹಾಗೂ ಅವರಿವರ ಮನೆಯಲ್ಲಿ ಇಟ್ಟಿರುವ ಕಳ್ಳಹಣವನ್ನು ಸಾಧ್ಯವಾದಷ್ಟೂ ಬೇಗ ಚೆಲ್ಲಿ ಹಗುರಾಗುವ ಹಾಗೂ ಮತ್ತೆ ಅಧಿಕಾರ ಹಿಡಿಯುವ ಆನಂತರ ಮತ್ತಷ್ಟು ಬಾಚುವ ಆಸೆಯಿಂದ ಅಲ್ಲವೆ?

ಇದನ್ನೆಲ್ಲ ನೋಡಿದ ನಾವು ರಾಜಕಾರಣಿಯೆಂದರೆ ಅಧಿಕಾರಕ್ಕೆ ಹಾತೊರೆಯುವ ಭ್ರಷ್ಟ ಎಂದು ಷರಾ ಬರೆಯುವುದು ಸುಲಭ. ಆದರೆ ರಾಜಕಾರಣಿಯೊಬ್ಬ ಸದಾ ಚಟುವಟಿಕೆಯಿಂದ, ಜನರನ್ನು ತನ್ನ ಸುತ್ತಮುತ್ತ ಗುಡ್ಡೆ ಹಾಕಿಕೊಂಡು ಇರಬಯಸುವ ಮನುಷ್ಯ; ಕೆಲವು ಸಲ ಜನರಿಗೆ ಅಷ್ಟಿಷ್ಟು ಕೆಲಸ ಕೂಡ ಮಾಡಿಕೊಡುವ ಮನುಷ್ಯ; ಹೋರಾಡುವ ಮನುಷ್ಯ ಕೂಡ. ಈತ ತನಗೆ ಮುಂದೆ ಲಾಭವಾದೀತು ಎಂಬ ಆಸೆಯಿಂದಲಾದರೂ ಜನರ ಕೆಲಸ ಮಾಡಲು ಸಿದ್ಧವಿರುವ ವ್ಯಕ್ತಿ. ಎಷ್ಟೋ ಸಲ ಅಧಿಕಾರಿಗಳಿಗಿಂತ ಹೆಚ್ಚಾಗಿ ಜನರಿಗೆ ಜವಾಬ್ದಾರನಾಗಿರುವ ವ್ಯಕ್ತಿ ಕೂಡ. ಈ ರಾಜಕಾರಣಿಗಳು ಪ್ರವಾಸ ಮಾಡುವ ರೀತಿ ಹಾಗೂ ಅವರ ಎನರ್ಜಿ ನೋಡಿದರೆ ಅಚ್ಚರಿಯಾಗುತ್ತದೆ. ರಾಜಕೀಯಾಧಿಕಾರದ ಆಸೆಯ ದೊಡ್ಡ ಚಾಲಕ ಶಕ್ತಿಯಿಂದ ಅವರು ಈ ಓಡಾಟಕ್ಕೆ ಶಕ್ತಿ ಒದಗಿಸಿಕೊಳ್ಳುತ್ತಿರುತ್ತಾರೆಂಬುದು ಎಲ್ಲರಿಗೂ ಗೊತ್ತಿದೆ. ಆದರೂ ರಾಜಕಾರಣಿಯ ಶಕ್ತಿ ವಿಚಿತ್ರವಾದುದು ಎಂಬುದನ್ನು ಮರೆಯದಿರೋಣ.

ಈ ದೃಷ್ಟಿಯಿಂದ ನೋಡಿದಾಗ, ರಾಜಕಾರಣಿಯೊಬ್ಬ ರಾಜಕೀಯದಿಂದ ದೂರ ಸರಿಯುವುದು ಸಮಾಜಕ್ಕೆ ನಷ್ಟವಲ್ಲವೇ ಎಂದು ಕೆಲವು ಸಲವಾದರೂ ಅನ್ನಿಸುತ್ತಿರುತ್ತದೆ. ಕೆಲ ವರ್ಷಗಳ ಕೆಳಗೆ, ಅತ್ಯಂತ ಕಿರಿಯ ವಯಸ್ಸಿಗೇ ಸೊಂಡೂರಿನ ಶಾಸಕರಾಗಿದ್ದ ಯು.ಭೂಪತಿಯವರು ಮುಂದೆ ಸ್ಪರ್ಧಿಸುವ ಸಾಧ್ಯತೆ ಇಲ್ಲದ ಸ್ಥಿತಿ ತಲುಪಿದ ಕಾಲದಲ್ಲಿ ನನಗೆ ಹೀಗನ್ನಿಸಿತ್ತು. ಭೂಪತಿ ಜನರ ಜೊತೆ, ಕಾರ್ಮಿಕರ ಜೊತೆ ಇದ್ದು ಕೆಲಸ ಮಾಡಬಲ್ಲ ವ್ಯಕ್ತಿಯಾಗಿದ್ದವರು. ಹತ್ತಾರು ವರ್ಷ ಕಾಲ ಜನರ ಒಡನಾಟವೇ ಅವರ ಮುಖ್ಯ ಬಂಡವಾಳ ಅಥವಾ ಇನ್ ವೆಸ್ಟ್ ಮೆಂಟ್ ಆಗಿತ್ತು. ಅಂಥವರು ರಾಜಕೀಯ ಬಿಡುವುದರಿಂದ ಅಂತಿಮವಾಗಿ ಬಳ್ಳಾರಿ ಕಡೆಯ ಜನರಿಗೇ ನಷ್ಟವಾಗುತ್ತದೆ ಎನ್ನಿಸಿತ್ತು. ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳಿಗೆ ಬೆಳಕು ತಂದು ಅವಕಾಶಗಳನ್ನು ಕಲ್ಪಿಸಿಕೊಟ್ಟ ಎಲ್.ಜಿ.ಹಾವನೂರ್ ಥರದವರು ರಾಜಕೀಯದಿಂದ ಹಿಂದೆ ಸರಿದಾಗ ಕೂಡ ಜನರಿಗೆ ಅಪಾರ ನಷ್ಟವಾಗುತ್ತಿದೆ ಎನಿಸುತ್ತಿತ್ತು. ಹಾಗೆಯೇ ಎ.ಕೆ.ಸುಬ್ಬಯ್ಯನವರಂಥ ನಿಷ್ಠುರ ರಾಜಕಾರಣಿ ಕೊಂಚ ಹಿನ್ನೆಲೆಗೆ ಸರಿದಾಗ ಕೂಡ ಹಾಗೆನ್ನಿಸಿತ್ತು. ಆದರೆ ಇಂಥ ರಾಜಕಾರಣಿಗಳು ಕೂಡ ಚಳುವಳಿ ರಾಜಕಾರಣವನ್ನೋ ಅಥವಾ ಮುಖ್ಯ ಸಾಮಾಜಿಕ ಪ್ರಶ್ನೆಗಳನ್ನು ಇಟ್ಟುಕೊಂಡ ಸಣ್ಣಪುಟ್ಟ ಸಂಘಟನೆಗಳನ್ನು ಕಟ್ಟುವುದನ್ನೋ ಮುಖ್ಯ ಎಂದು ತಿಳಿಯದೆ ಸುಮ್ಮನಾಗುವುದು ವಿಚಿತ್ರ; ಅಧಿಕಾರ ರಾಜಕಾರಣದಿಂದಾಚೆಗಿನ ಸಾಧ್ಯತೆಗಳನ್ನು ಬಲ್ಲ ರಾಜಕಾರಣಿಗಳು ಕೂಡ ತಮ್ಮ ರಾಜಕೀಯ ನಿರುದ್ಯೋಗದ ಅವಧಿಯಲ್ಲಿ ದಿಕ್ಕೆಟ್ಟವರಂತೆ ಅಡ್ಡಾಡುವುದು ಕರುಣಾಜನಕವಾಗಿರುತ್ತದೆ.

ಈ ಬಗೆಯ ಮಂಕನ್ನು ಐದಾರು ವರ್ಷಗಳ ಕೆಳಗೆ ರಾಜಕೀಯ ಪ್ರವೇಶಿಸಿ ಯಾವ ಸಣ್ಣಪುಟ್ಟ ಕುರ್ಚಿಯೂ ಸಿಗದ ಯುವ ರಾಜಕಾರಣಿಗಳೂ ಅನುಭವಿಸುವುದನ್ನು ನೋಡಿರುವೆ. ಯುವ ರಾಜಕಾರಣಿಯೊಬ್ಬ ತಾನು ರಾಜಕೀಯ ಘಟನೆಗಳ ಬಗ್ಗೆ ಆಳವಾಗಿ ಓದಿ, ಚಿಂತಿಸಿ, ವಿಶ್ಲೇಷಿಸಿ ಕೂಡ ಪಕ್ಷಕ್ಕೆ ನೆರವಾಗಬಹುದು ಎಂಬ ಬಗ್ಗೆ ಕೂಡ ಯೋಚಿಸದೇ ಮಂಕುಬಡಿದವನಂತೆ ಅಡ್ಡಾಡುತ್ತಿರುವುದನ್ನು ಅನೇಕ ರಾಜಕೀಯ ಪಕ್ಷಗಳ ಕಚೇರಿಯಲ್ಲಿ ನೋಡುತ್ತಿರುತ್ತೇವೆ. ಹಲವು ವಿದ್ಯಾವಂತ ರಾಜಕಾರಣಿಗಳು ತಮ್ಮ ಬಿಡುವಿನ ವೇಳೆಯಲ್ಲಾದರೂ ಮುಖ್ಯ ರಾಜಕೀಯ ವಿಶ್ಲೇಷಣೆಯ ಪುಸ್ತಕಗಳನ್ನು ಕೂಡ ಓದುವುದಿಲ್ಲವೆಂಬುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ತಮಗೆ ಅಧಿಕಾರವಿಲ್ಲದ ಕಾಲದಲ್ಲಿ ಅಥವಾ ಸಾರ್ವಜನಿಕ ಸಂಪರ್ಕ ಹೆಚ್ಚು ಇಲ್ಲದ ಕಾಲದಲ್ಲಿ ಅರ್ಥಪೂರ್ಣವಾದ ಯಾವುದರಲ್ಲಾದರೂ ತೊಡಗಬಲ್ಲ ಮಾರ್ಗಗಳನ್ನು ಕಂಡುಕೊಳ್ಳಲಾಗದ ರಾಜಕಾರಣಿಗಳಿಗೆ ತಮ್ಮ ಪಾಡಿಗೆ ತಾವು ಇರುವ, ಅಧಿಕಾರವಿಲ್ಲದ ಒಂದು ದಿನವೂ ನಿರುದ್ಯೋಗದ ದಿನವಾಗಿ ಕಾಣುತ್ತದೇನೋ!

ಪರಿಸ್ಥಿತಿ ಹೀಗಿರುವಾಗ, ತಮ್ಮ ದೇಶದ ತರುಣ, ತರುಣಿಯರ ನಿಜವಾದ ನಿರುದ್ಯೋಗದ ಸ್ಥಿತಿಯ ಬಗ್ಗೆ ಈ ನಾಯಕರು ಹೊಸದಾಗಿ ಏನನ್ನು ತಾನೆ ಚಿಂತಿಸಬಲ್ಲರು?

‍ಲೇಖಕರು avadhi

14 March, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading