
ಜಿ ಎನ್ ನಾಗರಾಜ್
ಕರಾಕೃರವರ ಜನಪದ ಸಾಹಿತ್ಯ ಅಕಾಡೆಮಿಯ ಅಪೂರ್ವ ಸಂಗ್ರಹಗಳು .
ಜಾನಪದದ ಮೂಲಕ ಭೂಮಿ ತಾಯಿಯ ಆರೋಗ್ಯದ ಬಗ್ಗೆ ನೆನೆಯೋಣ.
ಬೆಳಗಾಗ ನಾನೆದ್ದು ಯಾರ‌್ಯಾರ ನೆನೆಯಾಲಿ
ಎಳ್ಳು ಜೀರಿಗೆ ಬೆಳೆಯೋಳ / ಭೂಮಿತಾಯ
ಎದ್ದೊಂದು ಗಳಿಗೆ ನೆನೆದೇನ”
ಜಾನಪದ ಮನುಷ್ಯನಿಗೆ ಭಾಷೆಯ ಬಳಕೆ ಸಿದ್ದಿಸಿದ ದಿನದಿಂದ ರೂಪುಗೊಂಡ ಸಾಹಿತ್ಯ. ಬೆಳಗಾಗ ನಾವೆದ್ದು ಭೂಮಿ ತಾಯನ್ನು ನೆನೆಯುವಂತೆಯೇ ಮೊದಲ ಕಾವ್ಯ , ಕಥೆ, ಕಲೆ, ಸಂಗೀತ,ನೃತ್ಯ ಮತ್ತೇನೇನೋ ಆದ ಜಾನಪದದ ಕೃತಿಗಳ ಪರಿಚಯದಿಂದ ನನ್ನ ಪುಸ್ತಕ ಪರಿಚಯ ಮಾಲೆಯ ಲೇಖಗಳನ್ನು ಆರಂಭಿಸುವ ಇಚ್ಛೆ ನನ್ನದು.
ಜಾನಪದ ಸಾಹಿತ್ಯವಾಗಿ ಸೆಳೆದಂತೆ ತನ್ನ ವಿರಾಟ್ ರೂಪಗಳೆಲ್ಲವುಗಳಿಂದ ನನ್ನನ್ನು ಸೆಳೆದಿದೆ. ಇಲ್ಲಿಯವರೆಗೆ ಕರ್ನಾಟಕದಲ್ಲಿ ಅಲಕ್ಷಿತವಾಗಿರುವ ಜಾನಪದ ಆಚರಣೆಗಳ , ಜಾನಪದ ಪುರಾಣ, ಕಥಾನಕಗಳ ಮೂಲಕ್ಕೆ ಹೋಗುವ ಶೋಧದಲ್ಲಿ ತೊಡಗಿದ್ದೇನೆ. ಕರ್ನಾಟಕದ ಇತಿಹಾಸದ ಮೊದಲ ಹಂತವನ್ನು , ರಾಜ ಪೂರ್ವ ಹಂತದ ಜನ ಜೀವನವನ್ನು ತಿಳಿದುಕೊಳ್ಳುವಲ್ಲಿ ಈ ಅಮೂಲ್ಯ ಮೂಲವನ್ನು ಬಳಸಿಕೊಳ್ಳದೆ ಇತಿಹಾಸಕಾರರು ಕರ್ನಾಟಕಕ್ಕೆ ಅಪಚಾರ ಮಾಡುತ್ತಿದ್ದಾರೆ. ಆ ಬಗ್ಗೆ ಮುಂದಿನ ಅನೇಕ ಬರಹಗಳಲ್ಲಿ ಬರಲಿದೆ .
ಈ ಬಾರಿ ಕನ್ನಡಿಗರ ಕಣ್ಣಳತೆಯಿಂದ ಕಾಣೆಯಾಗಿರುವ ಕ.ರಾ. ಕೃ ಎಂದು ಹೆಸರಾಂತ ಕ.ರಾ.ಕೃಷ್ಣಸ್ವಾಮಿಯವರ ಬಗ್ಗೆ. ಸರ್ಕಾರ ಜಾನಪದ ಅಕಾಡೆಮಿ ಸ್ಥಾಪಿಸುವ ಬಗ್ಗೆ ಯೋಚಿಸುವ ಎಷ್ಟೋ ಮೊದಲೇ ತಾವೇ ಮೈಸೂರಿನಲ್ಲಿ ಒಂದು ಜನಪದ ಸಾಹಿತ್ಯ ಅಕಾಡೆಮಿ ಸ್ಥಾಪಿಸಿ ಅನೇಕ ಸಂಕಲನವನ್ನು ಪ್ರಕಟಿಸಿದರು . ಅವರ ಈ ಸಂಕಲನಗಳಿಗೆ ವಿಶ್ವ ಪ್ರಸಿದ್ಧ ಕಲಾವಿದ ಆರೆಸ್ಸೆನ್- ಆರ್ ಎಸ್ ನಾಯುಡುರವರ ಚಿತ್ರಗಳು ಸೊಬಗು ನೀಡುತ್ತಿದ್ದವು.
” ರಾಗಿ ಕಲ್ಲಿನ ಮೇಲೆ ಚೆಲ್ಯಾವ ನಮ ಹಾಡು
ಬಲ್ಲಂತ ಜಾಣರು ಬರಕೊಳ್ಳಿ / ಅಹಾ ,
ಬಳ್ಳ ತಕ್ಕೊಂಡು ಅಳಕೊಳ್ಳಿ “
ಹಾಗೆಯೇ ಈ ಹಾಡೂ ಇದೆ
” ಹಾದೀಲಿ ಹೋಗೋರೆ ಹಾಡೆಂದು ಹೇಳ್ಬೇಡಿ
ಹಾಡಲ್ಲ ನನ್ನ ಒಡಲುರಿ / ಅದು
ಬೆವರಲ್ಲ ನನ್ನ ಕಣ್ಣೀರು “
ಹೀಗೆ ಎಷ್ಟೊಂದು ತ್ರಿಪದಿಗಳು , ಎಷ್ಟೊಂದು ಲಾವಣಿಗಳು , ಮತ್ತೆಷ್ಟೊಂದು ರೂಪದ ಹಾಡುಗಳು
ಕರಾಕೃರವರ ಸಂಕಲನಗಳ ಹೆಸರೇ ಮನಸ್ಸನ್ನು ಸೆಳೆಯುತ್ತಿದ್ದವು.
ಮಲ್ಲಿಗೆ ನಗುತಾವೆ
ಸಂಪಿಗೆ ಅರಳ್ಯಾವೆ
ಹಚ್ಚ ಹೊಂಬಾಳೆ ಕುಣಿದಾವೆ
ನಾಡ ಮೇಲೆಲ್ಲಾ ಹರಿದಾವೆ
ಹೆಣ್ಣ ಕೊಟ್ಟೇವು
ಸೂಸಿ ಹರಿದಾಳ ಶಿವಗಂಗೆ
ಜಾನಪದ ಪ್ರೇಮ ಗೀತೆಗಳು .
ಇತ್ಯಾದಿ ಇತ್ಯಾದಿ
ಜಾನಪದ ವನ್ನು ಜನಪ್ರಿಯಗೊಳಿಸುವುದರಲ್ಲಿ ಆದ್ಯರಾದ ಕರಾಕೃ ಅವರನ್ನು ನೆನೆಯೋಣ





0 Comments