ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಗಿತೆನೆ..

ಡಾ.ಬಿ.ಎಂ.ಪುಟ್ಟಯ್ಯ ಅವರ ಕೃತಿ ‘ಬೆಂಕಿಯ ಮಳೆ’

ಈ ಕೃತಿ ಓದಿದ ಜಿ ಎನ್ ಧನಂಜಯ ಮೂರ್ತಿ ಅವರ ಉಕ್ಕಿದ ಭಾವನೆ ಇಲ್ಲಿದೆ.

ಜಿ ಎನ್ ಧನಂಜಯ ಮೂರ್ತಿ

ರಾಗಿತೆನೆ (ಅವ್ವನ ಕುರಿತ ಕೆಲವು ನೆನಪುಗಳು)

ನಮ್ಮ ಹಟ್ಟಿಯಲ್ಲಿ ಗಂಡ ಹೆಂಡತಿಯ ನಡುವೆ ಮುನಿಸಾದರೆ ಹೆಣ್ಣುಮಕ್ಕಳು ತಮ್ಮ ತವರುಮನೆಗೆ ಹೊರಟುನಿಲ್ಲುತ್ತಿದ್ದರು. ಹೆಂಗಸು ತನ್ನ ಮಾತನ್ನು ಅಲ್ಲಗಳೆದು ತನ್ನನ್ನು ಅಗೌರವಿಸಿದಳೆಂಬ ಸ್ವಯಂ ಮತ್ತು ಕೈಕೊಟ್ಟು ಹೋಗುತ್ತಾಳಲ್ಲ ಎನ್ನುವ ಬೇಗುದಿ ಎರಡೂ ಅಸಹನೆಗಳು ಸೇರಿ ಗಂಡಸರು ಕೆನೆದು ನಿಲ್ಲುತ್ತಿದ್ದರು. ಅಂತಹ ಸಂದರ್ಭದಲ್ಲಿ ಗಂಡನ ಸ್ಥಾನದಲ್ಲಿದ್ದವರು ‘ನಾನು ಕಟ್ಟಿದ ತಾಳಿಯನ್ನು ಬಿಚ್ಚಿ ಕೊಟ್ಟು ಹೋಗು’ ಎಂದು ಮುನಿದ ಮಾನಿನಿಯನ್ನು ಒಂಟಿ ಮಾಡಲು ಯೋಜಿಸುತ್ತಿದ್ದರು. ತಾಳಿಯನ್ನು ಬಿಚ್ಚಿಡುವುದೆಂದರೆ ಆ ದಾಂಪತ್ಯ ಕಡಿದುಹೋಯಿತೆಂದೆ ಶಾಸನ. ಗಂಡನಾದವನು ತಾಳಿ ಬಿಚ್ಚಿಟ್ಹೋಗು ಎನ್ನುವ ಆತನ ಮಾತೇ ನೀತಿ. ಕೋರ್ಟಿನಲ್ಲಿ ನ್ಯಾಯಾಧೀಶರು ವಿಚ್ಛೇಧನದ ಆದೇಶ ಬರೆದಂತೆ. ಬಾಳನ್ನೆ ಕತ್ತರಿಸುವ ಇಂತಹ ಭಯಾನಕ ಆಜ್ಞೆ ಬಂದ ತಕ್ಷಣ ಬೆದರುತ್ತಿದ್ದ ಹೆಂಗಸರು ಅದೂವರೆಗೆ ತಮ್ಮ ಮೇಲೆ ನಡೆದಿದ್ದ ಎಲ್ಲ ಪೈಶಾಚಿಕ ದಾಳಿಗಳನ್ನು ಕಣ್ಣೀರಿನಲ್ಲಿಯೆ ಕರಗಿಸಿ ತವರಿಗೋಗಲೆಳುಸುತ್ತಿದ್ದ ಕಾಲನ್ನು ಹಿಂದಕ್ಕೆಳೆದುಕೊಳ್ಳುತ್ತಿದ್ದರು. ಹಟ್ಟಿಯಲ್ಲಿ ಸರ್ವೇಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಸರಪಾಡುತ್ತಿದ್ದ ಟೇಪುರೆಕಾರ್ಡುಗಳಲ್ಲಿ ‘ಗಂಡನ ಪಾದಪೂಜೆ ಮಾಡಬೇಕಮ್ಮ ನೀನು, ಗಂಡಗಿಂತ ಮಿಗಿಲಾದ ದೇವರು ಇಲ್ಲಮ್ಮ’ ಎಂಬ ಜನಪದ ಗೀತೆಯೂ ಒಂದು. ಅದು ಕೆಲವರ ಮನೆಯಲ್ಲಿ ಹಾಗೂ ಎಲ್ಲರ ಮನದಲ್ಲಿ ಅನುರಣಿಸುತ್ತಿತ್ತು.

ಹನ್ನೊಂದು ವರ್ಷಗಳ ಅವಧಿಯಲ್ಲಿ ಅವ್ವನಿಗೆ ಹದಿನೈದಕ್ಕೂ ಹೆಚ್ಚು ಬಾರಿ ಸ್ಕ್ಯಾನಿಂಗ್ ಮಾಡಿಸಿರಬಹುದು. ನಾಳೆ ಸ್ಕ್ಯಾನಿಂಗ್ ಇದೆ ಎಂದು ಹೇಳಿದರೂ ಅವ್ವ ಬೆಂಡೋಲೆಗಳನ್ನು ಹೊರತುಪಡಿಸಿ, ಬೇರಾವ ವಸ್ತುಗಳನ್ನೂ ಮನೆಯಲ್ಲಿಯೆ ಬಿಚ್ಚಿಟ್ಟುಬರಲು ಒಪ್ಪುತ್ತಿರಲಿಲ್ಲ. ಸ್ಕ್ಯಾನಿಂಗ್ ಪ್ರೊಸಿಜರ್ ಸಮಯ ಬಂದಾಗ ಮೂಗುನತ್ತು, ಕರಿಮಣಿಸರ, ಕಾಲುಂಗುರಗಳನ್ನು ಬಿಚ್ಚಿ ನನ್ನ ಕೈಗಿತ್ತು ಪರೀಕ್ಷೆಗೆ ಹೋಗುತ್ತಿದ್ದಳು. ಒಮ್ಮೆ ಮನೆಯಲ್ಲಿ ‘ಅವ್ವ ಸ್ಕ್ಯಾನಿಂಗ್ ಇದ್ದಾಗ ಇವನ್ನೆಲ್ಲ ಮನೆಯಲ್ಲಿಯೆ ಇಟ್ಟೋಗಬೇಕು ಕಣವ್ವಾ’ ಎಂದೆ. ‘ದೇವ್ರು ಒಪ್ತನೆನಪ್ಪ ಇವುಗಳ್ನೆಲ್ಲ ನಾನು ಧರಿಸಿದ ಮೇಲೆ ತಾನೆ ನೀವೆಲ್ಲ ಹುಟ್ಟಿದ್ದು,’-ಮರ್ಮ ನುಡಿದಳು. ಅಂದಿನಿಂದ ಈ ವಿಷಯವನ್ನು ಅವಳೊಡನೆ ಎತ್ತಲಿಲ್ಲ.

ಒಮ್ಮೆ ಕೊಪ್ಪದ ಮನೆಯಲ್ಲಿ ಅವ್ವನ ಜೊತೆ ಜಗಳವಾಯಿತು. ಕಹಿಯಾದ ಮಾತಾದವು. ಆ ಕರಾಳ ದಿನದಂದು ‘ನೀನು ನನಗೇನು ಮಾಡಿಸಿದ್ದೀಯ? ಒಂದೇ ಒಂದು ಗ್ರಾಮು ಚಿನ್ನ ನನ್ನ ಮೈಮೇಲೆ ಇಲ್ಲ. ನಿಮ್ಮಪ್ಪನನ್ನು ಕಟ್ಟಿಕೊಂಡ ಲಾಗಾಯ್ತು ಈ ಕರಿಮಣಿಗಳದ್ದೇ ಕಾರುಬಾರು’ ಎಂದು ಕೊರಳ ಸರವನ್ನು ಅಳಿದು ನನ್ನತ್ತ ಎಸೆದಳು. ಅಂದು ನಾನೂ ಸ್ವಲ್ಪ ಉಚಾಯಿಸಿಯೆ ಮಾತನಾಡಿಬಿಟ್ಟೆ. ಇಬ್ಬರ ನಡುವೆ ಒಗರು ಉಲ್ಬಣಗೊಂಡಿತು. ಹೆಂಡತಿಯ ಕುಮ್ಮಕ್ಕಿನಿಂದ ಹೀಗೆ ಆಡುತ್ತಿದ್ದೀಯ ಎಂದು ರೇಗಿಸಲು ತೊಡಗಿದಳು. ಸೊಸೆಗೂ ತರಿದಳು. ರಾತ್ರಿಯೆಲ್ಲ ಹಾರಾಡಿದಳು. ಬಾಡಿಗೆ ಮನೆ. ಮಾನಕ್ಕಂಜಿದೆ. ಸುಮ್ಮನೆ ಮಲಗಲು ಯತ್ನಿಸಿದೆ. ನಿದ್ದೆ ಹತ್ತಲಿಲ್ಲ. ಅವಳು ಸುಮ್ಮನಿರಲು ಸಿದ್ಧಳಿರಲಿಲ್ಲ. ತನ್ನ ಬಾಳಿನಾದ್ಯಂತ ಹೆಪ್ಪುಗಟ್ಟಿದ್ದ ಎಲ್ಲ ಅಸಹನೆಗಳೂ ಒಮ್ಮೆಯೆ ಅಮ್ಮೈಸಿ ಸ್ಫೋಟಗೊಂಡವು. ಬೆಳಗಾಯಿತು. ಬುಸುಗುಡುವುದು ನಿಂತಿರಲಿಲ್ಲ.

ಮನದಲ್ಲಿ ಮನೆಬಿಟ್ಟು ಹೋಗಲು ನಿರ್ಧರಿಸಿದ್ದಾಳೆ. ತೂಗು ಹಾಕಿದ್ದ ಅಂಗಿಯ ಜೇಬುಗಳನ್ನು ತಡಕಿದ್ದಾಳೆ. ಪುಡಿಗಾಸೂ ಸಿಕ್ಕಿಲ್ಲ. ಅದಕ್ಕೂ ಉರಿದಳು. ಪರಿಸ್ಥಿತಿಯನ್ನು ಗಮನಿಸಿದೆ. ವಿಕೋಪಕ್ಕೆ ತಿರುಗಿರುವುದು ಅರಿವಾಯಿತು. ಎಲ್ಲಿಯಾದರೂ ತಪ್ಪಿಸಿಕೊಂಡು ಹೋದರೆ ಏನು ಗತಿ? ಅಕ್ಷರಶಃ ಭೀತನಾದೆ. ಕಾಯ ಕಂಪಿಸಿತು. ಪರಿಪರಿಯಾಗಿ ಬೇಡಿಕೊಂಡೆ. ಉದ್ವಿಗ್ನತೆ ಕಡಿಮೆಯಾಗಬಹುದೆಂದು ಆಕೆಗಾಗಿ ಮಾಡಿರುವ ತ್ಯಾಗಗಳನ್ನೆಲ್ಲ ನೆನಪಿಗೆ ತರಲು ಯತ್ನಿಸಿದೆ. ಬಸ್ಸಿನಲ್ಲಿ ತೊಡೆಯ ಮೇಲೆ ಮಲಗಿಸಿಕೊಂಡೇ ಆಸ್ಪತ್ರೆಗೆ ಹೋಗುತ್ತಿದ್ದುದು, ಹೊಟ್ಟೆಯಾಳನಾಗಿದ್ದ ನಾನು ಅವಳ ಸರ್ಜರಿ ಮುಗಿಯುವವರೆಗೂ ಹಸಿವನ್ನು ತಡೆದುಕೊಂಡೇ ಇರುತ್ತಿದ್ದುದು, ಯಾವ ಬಂಧುಗಳ ನೆರವಿಲ್ಲದೆ ಇಲ್ಲಿಯ ವರೆವಿಗೂ ಅವಳ ಪ್ರಾಣರಕ್ಷಣೆಗಾಗಿ ಹೋರಾಡುತ್ತಿದ್ದುದು, ಆಸ್ಪತ್ರೆಯ ಖರ್ಚಿಗೆ ಸಾಲ ಮಾಡಿರುವುದು ಮುಂತಾದ ಸಂಕಥನಗಳನ್ನು ನೆನಪಿಸಿ ಅವಳಲ್ಲಿನ ತಾಯ್ತನವನ್ನು ಕೆಣಕಲು ಯತ್ನಿಸಿದೆ. ಫಲಿಸಲಿಲ್ಲ. ಇಲ್ಲ ನಾನು ಸ್ವಲ್ಪ ದಿನ ಊರಿಗೋಗಿ ಬರ್ತಿನಿ ನಿನಗೆ ಹೇಗಿದ್ದರೂ ರಜೆ ಇದೆ ಮಕ್ಕಳನ್ನು ನೋಡಿಕೊ ನಾನು ಹೋಗುವವಳೆ ಸೈ ಕಡ್ಡಿ ತುಂಡಾಗುವಂತೆ ನುಡಿದಳು. ಮನೆಬಿಟ್ಟು ಹೊರಡುವ ನಿರ್ಧಾರದಿಂದ ಕದಲಲಿಲ್ಲ. ಕೈಚೀಲವೊಂದಕ್ಕೆ ಬಟ್ಟೆಗಳನ್ನು ತುರುಕಿಕೊಂಡು ಹೊರಟೇಬಿಟ್ಟಳು. ಬೇಡ ಕಣವ್ವಾ ಎಂದು ಅಂಗಲಾಚಿದೆ. ‘ನನ್ನನ್ನು ಇಲ್ಲಿಯೆ ಬಿಟ್ಟುಬಿಡು. ಹಾದ್ಯಾಗೆಲ್ಲ ಬಂದು ಮರ್ಯಾದೆ ಕಳೆದುಕೊಳ್ಳಬೇಡ’:- ಕೋಪ, ಆವೇಶ ಮತ್ತು ಆದೇಶ ಮೂರೂ ಮುಪ್ಪುರಿಗೊಂಡ ಗಂಟಲು. ಇನ್ನೂರು ರೂಪಾಯಿಯ ಮೂರು ನೋಟುಗಳಿದ್ದವು. ಕೈಗಿತ್ತೆ. ಬೈಕಿನಲ್ಲಿ ಬಿಡುತ್ತೇನೆ ಎಂದೆ. ಬೇಕಿಲ್ಲ ಎಂದಳು. ಹಾದಿಯಲ್ಲಿ ನಡೆದು ಹೋಗುವುದನ್ನು ಕಿಟಕಿಯಿಂದ ನೋಡುತ್ತಿದ್ದೆ. ಕರುಳು ಕಿತ್ತು ಬಂದವು. ಆಕೆಗೆ ಕ್ಯಾನ್ಸರ್ ಇದೆ ಎಂದು ಗೊತ್ತಾದ ಮೇಲೆ ಸಾರ್ವಜನಿಕ ಸಾರಿಗೆಯಲ್ಲಿ ಒಬ್ಬಳೆ ಸಂಚರಿಸಿದ ಮೊದಲ ಮತ್ತು ಕೊನೆಯ ದಿನವದು.

ಸಂಜೆಯಾಗುವವರೆಗೆ ಸೂಜಿಮೊನೆಯ ಮೇಲೆ ನಿಂತೆ. ಹಟ್ಟಿಗೆ ಫೋನು ಮಾಡಿ ಅಲವತ್ತೆ. ತಂಗಿ ಸಮಧಾನಿಸಿದಳು. ಆದರೆ ರಾತ್ರಿ ಎಂಟು ಗಂಟೆಯಾದರೂ ಮನೆಮುಟ್ಟಿಲ್ಲ. ಆತಂಕ ದ್ವಿಗುಣಗೊಂಡಿತು. ಮಾತ್ರೆ ನುಂಗುತ್ತಿದ್ದ ದೇಹ ಎಲ್ಲಿ ತರಗೆಲೆಯಂತೆ ಬಿದ್ದು ಹೋಯಿತೊ? ಬಸ್ಸಿನಲ್ಲಿ ದುರುಳರ ಕೈಗೆನಾದರೂ ಸಿಕ್ಕಳೊ? ವಾಂತಿಯಿಂದ ಸುಸ್ತಾಗಿ ಬಿದ್ದಳೊ? ನಿದ್ದೆ ತಿಳಿಯದೆ ಮುಂದಿನ ನಿಲ್ದಾಣವನ್ನು ಮುಟ್ಟಿದಳೊ? ಕಳ್ಳಕಾಕಾಪೋಲಿಗಳ ಕೈಗೆ ಈಡಾದಳೊ? ಊಹಿಸಿದಷ್ಟೂ ಎದೆಯ ಕುಂಡ ಹೊತ್ತಿ ಹಲವು ನಾಲಗೆಗಳಾಯಿತು. ಮನೆಯಲ್ಲಿದ್ದ ಪಾಸ್ಪೋರ್ಟ್ ಸೈಜಿನ ಫೋಟೊವನ್ನು ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಬಾಳೆಹೊನ್ನೂರು, ಜಯಪುರ, ಸಖರಾಯಪಟ್ಟಣದ ಗೆಳೆಯರಿಗೆ ಶೇರ್ ಮಾಡಿದೆ. ಎಲ್ಲರೂ ಬಸ್ಟಾಂಡ್‌ಗಳನ್ನು ನಿಟ್ಟಿಸಿ ಸುಳಿವಿಲ್ಲವೆಂದು ವರದಿಸಿದರು. ಕಳೆದುಕೊಂಡೆ ಎನಿಸಿತು. ರಾತ್ರಿಯನ್ನು ಯುಗದಂತೆ ಕಳೆದೆವು. ಬೆಳಗ್ಗೆ ನಮ್ಮ ಮಾವನ ಮಕ್ಕಳನ್ನು ಕಲ್ಮರಡಿ ಮಠಕ್ಕೆ ಅಟ್ಟಿದೆ. ಅಲ್ಲಿ ಮಠದಿಂದ ಎದ್ದು ಬಗಲಲ್ಲಿ ಬ್ಯಾಗು ಅವಚಿಕೊಂಡು ನಡೆದುಬರುತ್ತಿದ್ದಳಂತೆ. ನಮ್ಮ ಮಾವನ ಮಗ ರಾಘು ಮನೆಯನ್ನು ಮುಟ್ಟಿಸಿದ. ಕರುಣೆ, ಶೋಕಗಳಿಂದ ಕಂಗೆಟ್ಟಿದ್ದ ಮನ ರುದ್ರವಾಗಿ ಕುಣಿಯಲಾರಂಭಿಸಿತು. ಎಲಾ! ಎಷ್ಟೊಂದು ತ್ಯಾಗಕ್ಕೂ ಬೆಲೆಯೆ ಇಲ್ಲವಲ್ಲ. ರೇಗಿ ಹೋದೆ.

ಹಟ್ಟಿಯಲ್ಲಿ ಹೊಸಮನೆಯನ್ನು ಕಟ್ಟಿಯಾಗಿತ್ತು. ಅದರ ಪ್ರವೇಶಕ್ಕೆ ಜವಳಿ ಖರೀದಿಗೆಂದು ಬಾಣಾವಾರಕ್ಕೆ ಹೋಗಿ ಬಟ್ಟೆ ತಂದೆವು. ಹೊಸ ಮನೆಯತ್ತಿರ ಕಾರು ನಿಲ್ಲಿಸುವವನಿದ್ದೆ. ಅವ್ವ ಕಾರಿನಿಂದ ಇಳಿದು ಹಿಂದಿನ ಸೀಟಿನಲ್ಲಿದ್ದ ಬ್ಯಾಗುಗಳನ್ನು ತೆಗೆದುಕೊಳ್ಳುತ್ತಿದ್ದಾಳೆ. ನಾನು ಎಕ್ಸಾಲೈಟರನ್ನು ಒತ್ತಿದೆ. ಕಾರಿನ ಗಾಲಿ ಅರಿದು ಅವ್ವನ ಪಾದದ ಮೇಲೆಯೆ ನಿಂತಿದೆ. ಗಗನಕ್ಕೆ ಮುಟ್ಟುವಂತೆ ಕೂಗಿಕೊಂಡಳು. ಪದ್ಮ, ಮಕ್ಕಳ ದನಿಯೆಲ್ಲ ಸೇರಿ ತಾರಕಕ್ಕೇರುತ್ತಿದೆ. ಏನಾಗಿದೆ ತಿಳಿಯಲಿಲ್ಲ. ಕಕ್ಕಾವಿಕ್ಕಿಯಾದೆ. ಬಹುಶಃ ನನ್ನ ಮಗ ಕಾರಿನ ಚಕ್ರಕ್ಕೆ ಸಿಲುಕಿರಬೇಕೆಂದುಕೊಂಡೆ. ನೆರೆದ ಜನರ ಕೂಗು, ಗದ್ದಲ ನಿಲ್ಲದಿರುವುದರಿಂದ ಬ್ರೇಕನ್ನು ಒತ್ತಿ ಹಿಡಿದೆ. ಚಕ್ರ ಅವ್ವನ ಕಾಲ ಮೇಲೆ ಹಾಗೆಯೆ ನಿಂತಿದೆ. ಕಿರುಚಿಯೆ ಕಿರುಚಿದಳು. ಹೇಗೆ ಮುಂದಕ್ಕರಿಸಿದೆನೋ ತಿಳಿಯಲಿಲ್ಲ. ಎಲ್ಲರೂ ಬೆವೆಯುತ್ತಿದ್ದೆವು. ಕೈ ಹಿಡಿದು ಹಳೆಮನೆಗೆ ಕರೆದುಕೊಂಡು ಹೋದೆವು. ಅವಳ ಎಡಗಾಲಿನಲ್ಲಿದ್ದ ಉಂಗುರ ಮುರುಟಿ ಹೋಗಿ ಬೆರಳು ಊದಿಕೊಳ್ಳಲಾರಂಭಿಸಿತ್ತು. ಹೆಂಗಸರೆಲ್ಲ ಸೇರಿಕೊಂಡು ಕುಶಾಲಿನಿಂದ ಉಂಗುರವನ್ನು ಬೆರಳಿನಿಂದ ಕಳಚಿದರು. ಹೆಚ್ಚು ಏಟಾಗಿರಲಿಲ್ಲ.

ಅಲ್ಲಿಂದ ಒಂದು ತಿಂಗಳಿನ ಹೊತ್ತಿಗೆ ನಜ್ಜುಗುಜ್ಜಾಗಿದ್ದ ಆ ಕಾಲುಂಗರವನ್ನು ಸಖರಾಯಪಟ್ಟಣದ ಆಚಾರಿಯಂಗಡಿಯಲ್ಲಿ ರಿಪೇರಿ ಮಾಡಿಸಿಕೊಂಡಳು. ಅವಳ ಕಳೇಬರವನ್ನು ಬೆಂಕಿಗೆ ಕೊಡುವ ಮುನ್ನ ಕಾಲಿನಲ್ಲಿದ್ದ ಬೆಳ್ಳಿ ಕಾಲುಂಗುರಗಳನ್ನು ಅಪ್ಪ ಕಸಿದುಕೊಳ್ಳುತ್ತಿದ್ದ. ಸ್ಕ್ಯಾನಿಂಗ್ ಪರೀಕ್ಷೆಗೆ ಹೋಗುವ ಮುನ್ನ ಅವಳೆ ಬಿಚ್ಚಿ ನನ್ನ ಕೈಗಿಡುತ್ತಿದ್ದಳು. ಅಂತಿಮವಾಗಿ ಅವಳು ಯಾರಿಗಾಗಿ ಅವುಗಳನ್ನೆಲ್ಲ ತೆಗೆದಿರಿಸುವುದು ಅಪರಾಧ ಎಂದು ಭಾವಿಸಿದ್ದಳೊ ಆ ವ್ಯಕ್ತಿಗೆಯೆ ಅವು ಸಮರ್ಪಿತವಾದವು.

‍ಲೇಖಕರು Admin

23 October, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading