ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಕೆಟ್ ದೈವ ತಿರುಪತಿ ತಿಮ್ಮಪ್ಪ ಮತ್ತು ರಾಕೆಟ್ ಉಡಾವಣೆ!

ಜೈಕುಮಾರ್ ಹೆಚ್ ಎಸ್

ಭಾರತ ಜ್ಞಾನ ವಿಜ್ಞಾನ ಸಮಿತಿ, ಐಐಎಸ್ಸಿ ಆವರಣ, ಬೆಂಗಳೂರು

ರಾಕೆಟ್ ರೂಪದ ಪೇಟ ತೊಡುವ ತಿರುಪತಿ ತಿಮ್ಮಪ್ಪ ನಮ್ಮ ದೇಶದ ರಾಕೆಟ್ ದೈವ ಎಂದೇ ಹಲವರು ನಂಬುತ್ತಾರೆ! ಅವರಲ್ಲಿ ನಮ್ಮ ದೇಶದ ಬಾಹ್ಯಾಕಾಶ ಸಂಸ್ಥೆ (ಇಸ್ತ್ರೋ) ಯ ಮುಖ್ಯಸ್ಥ ಡಾ: ರಾಧಕೃಷ್ಣನ್ರವರು ಕೂಡ ಒಬ್ಬರು. ಅವರೇ ಸ್ವತ: ತಾವು ತಿರುಪತಿ ತಿಮ್ಮಪ್ಪನ ದೊಡ್ಡ ಭಕ್ತರೆಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಇಸ್ತ್ರೋ ಸಂಸ್ಥೆಯು ಅಂತರಿಕ್ಷಕ್ಕೆ ಪ್ರತಿ ರಾಕೆಟ್ವೊಂದನ್ನು ಹಾರಿಬಿಡುವ ಮುನ್ನ ಸಂಸ್ಥೆಯ ಮುಖ್ಯಸ್ಥರು ಮತ್ತು ಕೆಲ ವಿಜ್ಞಾನಿಗಳು ಸಾಮಾನ್ಯವಾಗಿ ಪೂಜೆ ಮಾಡುತ್ತಾರೆ ಎಂದು ಹೇಳಲಾಗುತ್ತದೆ. ಆದರೆ ಹೀಗೆ ಪೂಜೆ ಮಾಡಿದ ನಂತರವೂ ವೈಫಲ್ಯಗೊಂಡು ಆಗಸದಿಂದ ನೆಗೆದು ಬಿದ್ದು ಬೂದಿಯಾದ ಉಪಗ್ರಹಗಳ ಪಟ್ಟಿಯನ್ನು ಯಾರೂ ಲೆಕ್ಕ ಇಡುವುದಿಲ್ಲ. ನಮ್ಮ ಭೂಮಿಯ ಸುತ್ತ ವಿವಿಧ ದೇಶಗಳು ಹಾರಿಬಿಟ್ಟಿರುವ ಸುಮಾರು ಒಟ್ಟಾರೆ 3000 ಉಪಗ್ರಹಗಳು ಸುತ್ತುತ್ತಿವೆ. ಇದುವರೆಗೂ ಭಾರತವೂ ಕೂಡ ಒಟ್ಟು 39 ಉಪಗ್ರಹಗಳನ್ನು ಹಾರಿಬಿಟ್ಟಿದ್ದು, ಇವುಗಳಲ್ಲಿ ಯಶಸ್ಸುಗೊಂಡು ಉದ್ದೇಶಿತ ಕಕ್ಷೆ ತಲುಪಿರುವುದು 27 ಮಾತ್ರ. ಉಳಿದವು ವಿಫಲವಾಗಿವೆ.

ವಿಜ್ಞಾನಿಗಳ ವೈಯುಕ್ತಿಕ, ಅವೈಜ್ಞಾನಿಕ ನಂಬಿಕೆಗಳು ಎಷ್ಟೋ ಸಾರಿ ಜನರಲ್ಲಿ ಅಂಥದೇ ಮೂಢನಂಬಿಕೆಗಳನ್ನು ಹರಡುವಲ್ಲಿ ಕಾರಣವಾಗುತ್ತವೆ. ಪೂಜೆ, ಪ್ರಾರ್ಥನೆ, ಹೋಮ, ಹವನ, ಯಜ್ಞ, ಇತ್ಯಾದಿ ಧಾರ್ಮಿಕ ನಂಬಿಕೆಯ ಆಚರಣೆಗಳನ್ನು ನೆರವೇರಿಸುವುದು ಫಲ ನೀಡುವಂತಿದ್ದರೆ, ಯಾವ ಉಪಗ್ರಹಗಳೂ ವೈಫಲ್ಯ ಕಾಣುತ್ತಿರಲಿಲ್ಲ. ಉಪಗ್ರಹಗಳನ್ನು ಹೊತ್ತೊಯ್ಯುವ ರಾಕೆಟ್ಗಳನ್ನು ಹಾರಿಸುವ ಮುನ್ನ ಈ ರಾಕೆಟ್ ಮತ್ತು ಉಪಗ್ರಹಗಳು ಸುಸಜ್ಜಿತ, ಅತ್ಯಾಧುನಿಕ ವೈಜ್ಞಾನಿಕ ಮಾನದಂಡಗಳಿಗೆ ಪೂರಕವಾಗಿಯೇ ಎಂಬುದು ಖಾತರಿಯಾಗಬೇಕು. ಅಲ್ಲದೆ, ಹಾರಿಬಿಡುವ ಮುನ್ನ ಯಾವುದೇ ಬಿರುಗಾಳಿ, ಚಂಡಮಾರುತ, ಇತ್ಯಾದಿ ಹವಾಮಾನ ವೈಪರೀತ್ಯಗಳು ಇರಬಾರದು ಎಂಬ ವಿಚಾರಗಳನ್ನು ಇವರು ಮುಂಚೂಣಿಗೆ ತರುವುದಿಲ್ಲ.ಅದಕ್ಕಿಂತಲೂ ಮುಖ್ಯವಾಗಿ, ನಾವು ಆಗಸದೆಡೆ ಏನನ್ನೇ ಎಸೆದರೂ ಅದು ವಾಪಸು ಭೂಮಿಗೆ ಬಂದು ಬೀಳುತ್ತದೆ ಇದಕ್ಕೆ ಕಾರಣ ಭೂಮಿಯ ಗುರುತ್ವಶಕ್ತಿ. ಅದನ್ನು ಮೀರಿ ಹೋಗುವ ವೇಗದ ವಸ್ತು ಮಾತ್ರವೇ ವಾಪಸು ಬೀಳದೆ ಮೇಲೇರುವ ಶಕ್ತಿ ಹೊಂದಿರುತ್ತದೆ. ಹಾಗಾಗಿ ರಾಕೆಟ್ನ ವೇಗ ಸೆಕೆಂಡಿಗೆ 11.2 ಕಿ.ಮೀ ಇದ್ದರೆ ಮಾತ್ರ ಭೂಮಿ ಬಿಟ್ಟು ಅಂತರಿಕ್ಷ ಸೇರಲು ಸಾಧ್ಯ. ಇಲ್ಲದಿದ್ದಲ್ಲಿ ಯಾವ ದೇವರೂ ಪ್ರಾರ್ಥನೆ, ಹೋಮಗಳೂ ಕೂಡ ಅದನ್ನು ಮೇಲೆ ಹೊತ್ತೊಯ್ಯಲಾರವು.
ತಿರುಪತಿ ತಿಮ್ಮಪ್ಪನ ಪೂಜೆಯ ನಂತರವೂ ವಿಘ್ನಗಳು!
ತೀರಾ ಇತ್ತೀಚೆಗೆ, ಅಂದರೆ, ಆಗಸ್ಟ್ 19 ರಂದು ಜಿಎಸ್ಎಲ್ವಿ-ಡಿ5 ಎಂಬ ಹೆಸರಿನ ರಾಕೆಟ್ ನ್ನು ಶ್ರೀ ಹರಿಕೋಟಾ ಉಡಾವಣಾ ಕೇಂದ್ರದಿಂದ ಅಂತರಿಕ್ಷಕ್ಕೆ ಹಾರಿಬಿಡಲು ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಹಿಂದಿನ ದಿನ ಇಸ್ತ್ರೋ ಮುಖ್ಯಸ್ಥರು ತಿರುಪತಿ ತಿಮ್ಮಪ್ಪನ ದರ್ಶನವನ್ನೂ ಕೂಡ ಮಾಡಿ, ರಾಕೆಟ್ ಮಾದರಿಯೊಂದನ್ನು ಅರ್ಪಿಸಿ ಬಂದಿದ್ದು ಎಲ್ಲೆಡೆ ಚಿತ್ರ ಸಮೇತ ವರದಿಯಾಯಿತು. ಈ ರಾಕೆಟ್, ಜಿಸ್ಯಾಟ್-14 ಎಂಬ ಉಪಗ್ರಹವನ್ನು ಹೊತ್ತೊಯ್ಯಬೇಕಿತ್ತು. ಈ ಉಪಗ್ರಹದ ಮುಖ್ಯ ಕಾರ್ಯಭಾರ ಏನೆಂದರೆ ದೂರದರ್ಶನಕ್ಕೆ ಸಿಗ್ನಲ್ ಬಿತ್ತರಿಸಲು ಮತ್ತು ದೂರಸಂಪರ್ಕ ಸಂವಹನಕ್ಕೆ ಸಹಕಾರಿಯಾಗುವುದು. ರಾಕೆಟ್ ತೂಕ 414 ಟನ್, ಎತ್ತರ 49 ಮೀಟರ್ ಇದ್ದರೆ, ಉಪಗ್ರಹದ ತೂಕ ಸುಮಾರು 2 ಟನ್ ಇತ್ತು. ಜಿಎಸ್ಎಲ್ವಿ ರಾಕೆಟ್ 3 ಹಂತದ ಇಂಜಿನ್ ಹೊಂದಿದೆ. ಮೊದಲ ಹಂತದಲ್ಲಿ ಅದು ಘನ ಇಂಧನವನ್ನು ಬಳಸಿದರೆ, ಎರಡನೇ ಹಂತದಲ್ಲಿ ದ್ರವ ಇಂಧನ ಮತ್ತು ಕೊನೆಯ ಹಂತದಲ್ಲಿ ಕ್ರಯೋಜನಿಕ್ ಇಂಧನ ಬಳಸುತ್ತದೆ.ಇನ್ನೇನು ರಾಕೆಟ್ ಮೇಲೆ ಉಪಗ್ರಹವನ್ನು ಕೂರಿಸಿ ಹಾರಿಸಿಬಿಡುವ ಎನ್ನುವ ಒಂದೂಕಾಲು ಘಂಟೆ ಮುನ್ನವಷ್ಟೆ ದೊಡ್ಡ ದೋಷವೊಂದು ಕಣ್ಣಿಗೆ ಬಿತ್ತು. ರಾಕೆಟ್ನ ಎರಡನೇ ಹಂತದ ದ್ರವ ಇಂಧನ ಟ್ಯಾಂಕ್ನಿಂದ ಸೋರಿಕೆಯಾಗುತ್ತಿತ್ತು. ಇದನ್ನು ಕಡೆಗಣಿಸಿ ರಾಕೆಟ್ ದೈವ ತಿಮ್ಮಪ್ಪನ ಮೇಲೆ ಭಾರ ಹಾಕಿ ಉಡಾಯಿಸಿದಲ್ಲಿ ಇದೂ ಕೂಡ ನೆಗೆದು ಬೂದಿಯಾಗುವುದರಲ್ಲಿ ವಿಜ್ಞಾನಿಗಳಿಗೆ ಸಂದೇಹವೇ ಇರಲಿಲ್ಲ. ಉಡಾವಣೆಯನ್ನು ಕೈಬಿಟ್ಟು ಅದರ ಸೋರಿಕೆ ನಿಲ್ಲಿಸಲು ರಿಪೇರಿ ಆರಂಭಿಸಿದರು. ಇದೀಗ ಉಡಾವಣೆ ದಿನಾಂಕವನ್ನು ಡಿಸೆಂಬರ್ ತಿಂಗಳಿಗೆ ಮುಂದೂಡಿದ್ದಾರೆ.
ಪೂಜೆಯ ನಂತರವೂ ಉಡಾವಣೆ ಮುಂದೂಡಲ್ಪಟ್ಟ ಮಂಗಳಯಾನ
ಅಕ್ಟೋಬರ್ 28 ರಂದು ಮಂಗಳ ಗ್ರಹಕ್ಕೆ ಹಾರಿಬಿಡಬೇಕಾಗಿದ್ದ ‘ಮಂಗಳಯಾನ್’ ಎಂಬ ಹೆಸರಿನ ಉಪಗ್ರಹದ ಉಡಾವಣಾ ದಿನಾಂಕವನ್ನು ಕೆಟ್ಟ ಹವಾಮಾನ ಪರಿಸ್ಥಿತಿಯಿಂದಾಗಿ ನವೆಂಬರ್ 5ಕ್ಕೆ ಮುಂದೂಡಬೇಕಾಯಿತು. ಮಂಗಳ ಗ್ರಹಕ್ಕೆ ತೆರಳುವ ಉಪಗ್ರಹವನ್ನು ಹೊತ್ತೊಯ್ಯುವ ರಾಕೆಟ್ ಭೂಮಿಯನ್ನು ಸುತ್ತು ಹಾಕಿ ಫೆಸಿಫಿಕ್ ಸಾಗರದಾಚೆ ಸಾಗಿ ಹೋಗುತ್ತದೆ. ಈ ಪ್ರದೇಶದಲ್ಲಿ ರಾಕೆಟ್ ಸಾಗುವಾಗ 20 ನಿಮಿಷಗಳ ಕಾಲ ಅದು ಗ್ರೌಂಡ್ ಸ್ಟೇಷನ್ಗೆ ಕಾಣುವುದಿಲ್ಲ. ಈ ಹಿನ್ನೆಲೆಯಲ್ಲಿ ಅದು ಯಾವುದೇ ವೈಫಲ್ಯವಿಲ್ಲದೆ ಹೋಗುತ್ತಿದೆಯೆಂದು ಖಾತರಿ ಪಡಿಸಿಕೊಳ್ಳಲು ಫೆಸಿಫಿಕ್ ಸಾಗರದ ಬಳಿಯ ಫಿಜಿ ಎಂಬ ದೇಶದ ಹತ್ತಿರಕ್ಕೆ ನಳಂದ ಮತ್ತು ಯಮುನ ಎಂಬ ಎರಡು ಹಡಗುಗಳನ್ನು ಇಸ್ತ್ರೋ ಕಳುಹಿಸಬೇಕಾಗಿತ್ತು. ಸಾಗರದೊಳಗಿನ ಅತೀವ ಹವಾಮಾನ ಏರುಪೇರು, ಅತಿವೇಗದ ಮಾರುತಗಳು, ಇತ್ಯಾದಿಯಿಂದಾಗಿ ಹಡಗುಗಳನ್ನು ನಿಗಧಿತ ಸ್ಥಳಕ್ಕೆ ಕಳುಹಿಸಲು ಸಾಧ್ಯವಾಗದ ಕಾರಣ ಉಡಾವಣೆಯ ದಿನಾಂಕವನ್ನು ಮುಂದೂಡಲಾಯಿತು. ಹಿತಕರ ಹವಾಮಾನವಿಲ್ಲದಿದ್ದರೆ ನವೆಂಬರ್ 19 ರವರೆಗೂ ಉಡಾವಣೆಗಾಗಿ ಕಾಯಬೇಕು ಎನ್ನಲಾಗಿತ್ತು. ಇಷ್ಟೆಲ್ಲ ವೈಜ್ಞಾನಿಕ ಸಿದ್ದತೆ ಕೈಬಿಟ್ಟು ತಿರುಪತಿ ತಿಮ್ಮಪ್ಪನ ಮೇಲೆ ಭಾರ ಹಾಕಿ ಉಡಾವಣೆ ಮಾಡಲು ಸಾಧ್ಯವೇ?
ಅಮೇರಿಕಾದ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಗಳು ಇಂತಹ ಕೆಲವು ಮೂಢನಂಬಿಕೆ ಇಟ್ಟುಕೊಂಡಿದ್ದಾರೆ. ಮೊನ್ನೆ ನಮ್ಮ ವಿಜ್ಞಾನಿಗಳು ಮಂಗಳ ಗ್ರಹಕ್ಕೆ ಉಪಗ್ರಹ ಕಳುಹಿಸುವಾಗ ಅಮೇರಿಕಾದ ನಾಸಾ ವಿಜ್ಞಾನಿಗಳು ಶುಭ ಹಾರೈಸಿ ಕಡ್ಲೆಕಾಯಿ ಕಳುಹಿಸಿಕೊಟ್ಟಿದ್ದರು! ಇದೇನಪ್ಪ ಶುಭ ಹಾರೈಸಿ ತಾಯತ ಅಥವಾ ನಿಂಬೆಕಾಯಿ ಕಳುಹಿಸಿಕೊಡುವ ಬದಲು ಕಡ್ಲೆಕಾಯಿ ಕಳುಹಿಸಿಕೊಟ್ಟಿದ್ದಾರೆ ಅಂತೀರಾ? 1964 ರಲ್ಲಿ ಆ ವಿಜ್ಞಾನಿಗಳು ಉಪಗ್ರಹ ಹಾರಿಬಿಡುವಾಗ ತುಂಬಾ ಟೆನ್ಸನ್ ಇತ್ತಂತೆ. ಅಷ್ಟರಲ್ಲಾಗಲೇ 6 ಉಪಗ್ರಹಗಳು ಉಡಾವಣೆ ಹಾರಿ ಸೋತಿದ್ದವಂತೆ. ಏಳನೆಯದನ್ನು ಹಾರಿಸುವಾಗ ಯಾರೋ ಒಬ್ಬ ವಿಜ್ಞಾನಿ ಕಡ್ಲೆಕಾಯಿ ತಿನ್ನುತ್ತಾ ಕುಳಿತಿದ್ದನಂತೆ. ಏಳನೆಯ ಉಪಗ್ರಹ ಯಶಸ್ವಿಯಾಗಿ ಅಂತರಿಕ್ಷದಲ್ಲಿ ಕಕ್ಷೆಯನ್ನು ಸೇರಿತಂತೆ. ಅಂದಿನಿಂದ ಇನ್ನು ಮುಂದೆ ಯಾವುದೇ ಉಪಗ್ರಹ ಉಡಾವಣೆ ಸಮಯದಲ್ಲಿ ಎಲ್ಲರಿಗೂ ಕಡ್ಲೆಕಾಯಿ ವಿತರಿಸುವುದು ಸಂಪ್ರದಾಯವಾಗಿ ಬೆಳೆದುಬಂದಿದೆ!

‍ಲೇಖಕರು G

6 November, 2013

11 Comments

  1. narayanaswamy kempaiah

    melina abhiprayagalalli obbaru bittrare bahutekaru vicharikavagi matanadiruvudu nanage santasada vichara. nanu nennne beligge Rajendra Chenniyavara bali ide radhakrishnan murkatanada bagge matanadidde. Eetana atirekalu ondalla erdalla. ISRO Chairman ada takshana Guruvayooru devastanakke beti kottu homa-havana maadisidda bhoopa eeta. ivarella bouddika divali eddavaru.

    • Sharmila

      Ok, let’s make Rajendra Chenni the director of ISRO then.

  2. ಜೆ.ವಿ.ಕಾರ್ಲೊ, ಹಾಸನ

    ಇದೆಲ್ಲಾ ನಮ್ಮ ವಿಜ್ಞಾನಿಗಳಿಗೆ ಗೊತ್ತಿಲ್ಲವೆಂದಲ್ಲ. ಇವರೆಲ್ಲಾ ಪ್ರಯೋಗಶಾಲೆಗಳಲ್ಲಿ ಮಾತ್ರ ವಿಜ್ಙಾನಿಗಳು. ಹೊರಗೆ ಮಾಮೂಲಿ ಭಾರತೀಯರು!

  3. ಮಂಜುನಾಥ ಕೊಳ್ಳೇಗಾಲ

    ವಿಜ್ಞಾನಿಗಳ ’ಮೂಢನಂಬಿಕೆ’ಯ ವಿರುದ್ಧ ಮಾತಾಡುವವರಲ್ಲೆಲ್ಲಾ ನಾನು ಗಮನಿಸಿದ್ದು ಒಂದು ಗಲಿಬಿಲಿ. ಅದೆಂದರೆ, ವಿಜ್ಞಾನಕ್ಕೂ ವೈಜ್ಞಾನಿಕ ಚಿಂತನೆಗೂ ಭಾವನೆಗಳಿಗೂ ಥಳುಕು ಹಾಕುವುದು. ಮೊದಲಿಗೇ ಸ್ಪಷ್ಟಪಡಿಸಿಬಿಡುತ್ತೇನೆ, ರಾಕೆಟ್ ಹಾರಿಸುವ ಮೊದಲು ತಿಮ್ಮಪ್ಪನಿಗೋ ಹನುಮಪ್ಪನಿಗೋ ರಾಕೆಟ್ ಹೋಮ ಮಾಡಿಸಬೇಕೆಂಬ ಪಕ್ಷವಲ್ಲ ನನ್ನದು. ಹೆಚ್ಚೆಂದರೆ ಇವೆಲ್ಲ ನಕ್ಕುಕೊಂಡು ಸುಮ್ಮನಾಗಬಹುದಾದ ವಿಷಯಗಳು. ಹೋಮದ ಚಿತ್ರ ನೋಡಿ ನಾನು ಮಾಡಿದ್ದೂ ಅಷ್ಟೇ. ಆದರೆ ಈ ವಿಜ್ಞಾನಿಗಳನ್ನು ನೋಡಿ ಉಳಿದವರಲ್ಲೂ ’ಮೂಢನಂಬಿಕೆ’ ಹರಡುತ್ತದೆಯೆಂಬ ಭಯ, ವಿಜ್ಞಾನಿಯು ಮಷೀನಿನಷ್ಟು ನಿರ್ಭಾವುಕನಾಗಿರುತ್ತಾನೆಂಬ ಮೂಢನಂಬಿಕೆಯಿಂದಲೇ ಬಂದದ್ದು.
    ನಂಬಿಕೆ ಭಾವಪ್ರಪಂಚದ್ದು. ತಾರ್ಕಿಕತೆ ಬುದ್ಧಿಪ್ರಪಂಚದ್ದು. ಎಲ್ಲಿ ತರ್ಕ ನಡೆಯುವುದಿಲ್ಲವೋ ಅಲ್ಲಿ ನಂಬಿಕೆಯ ಸಾಮ್ರಾಜ್ಯ. ನಮ್ಮಲ್ಲಿ ಬುದ್ಧಿ, ತರ್ಕಗಳು ಬಲಿಯುವ ಮೊದಲೇ, ಹುಟ್ಟಿನಿಂದ ಬಂದದ್ದು ಭಾವನೆಗಳ ಪ್ರಪಂಚ, ಅದು ಅಮೂರ್ತ, ಅತಾರ್ಕಿಕ, ಕೆಲವೊಮ್ಮೆ ಅಕಾರಣ ಕೂಡ. ವ್ಯಕ್ತಿತ್ವದ ಮೇಲಿನ ಪ್ರೈಮರ್ ಇದ್ದಂತೆ ಭಾವನೆಗಳು. ಬುದ್ಧಿ ಅದರ ಮೇಲಿನ ಬಣ್ಣ. ಆದ್ದರಿಂದ ಬುದ್ಧಿ ನಿಲುಕದೆಡೆಯಲ್ಲೆಲ್ಲಾ ಸಹಜವಾಗಿಯೇ ಕಾಣುವುದು ಭಾವನೆ, ಮತ್ತು ಅದರ ಅಭಿವ್ಯಕ್ತಿಯಾದ ನಂಬಿಕೆಯೇ. ವಿಜ್ಞಾನಿಯ ಮನಸ್ಸಿನಲ್ಲಿ ಭಾವನೆಗಳ ಮೇಲೆ ಬುದ್ಧಿಯ ಹಿಡಿತ, ನಂಬಿಕೆಯ ಮೇಲೆ ತರ್ಕದ ಹಿಡಿತ ಉಳಿದವರಿಗಿಂತ ತುಸು ಬಲವಾಗಿರುತ್ತದೆಯಾದರೂ ಅದು ಭಾವನೆ/ನಂಬಿಕೆಗಳನ್ನೇ ಇಲ್ಲವೆನ್ನಿಸಿಬಿಡುವುದಿಲ್ಲವಲ್ಲ, ಅವರೂ ನಮ್ಮಂತೆಯೇ ಮನುಷ್ಯರೇ! ರಾಕೆಟ್ಟನ್ನು ಯಶಸ್ವಿಯಾಗಿ ಹಾರಿಸುವುದಕ್ಕೆ ಬೇಕಾದ್ದನ್ನೇನೂ ಮಾಡದೇ ಅವರು ಬರೀ ತಿಮ್ಮಪ್ಪನ ಭಜನೆ ಮಾಡಿ ರಾಕೆಟ್ಟನ್ನು ಹಾರಿಸಹೊರಟಿದ್ದರೆ ಅವರು ಅಯೋಗ್ಯರೆನ್ನುವುದರಲ್ಲಿ ಯಾವುದೇ ಸಂಶಯವಿರುತ್ತಿರಲಿಲ್ಲ, ಆದರೆ ವಿಷಯ ಅದಲ್ಲವಲ್ಲ. ನೀವೇ ಹೇಳಿದಂತೆ ಹೋಮದನಂತರವೂ ಅನೇಕ ಅಡಚಣೆಗಳು ಬಂದುವು. ತಿಮ್ಮಪ್ಪನಿಗೆ ಹೋಮ ಮಾಡಿದ್ದೇವೆಂದು ಅವರು ಅದನ್ನು ಕಡೆಗಣಿಸಲಿಲ್ಲ. ಅದಕ್ಕೇನು ಮಾಡಬೇಕೋ ಮಾಡಿಯೇ ಮಾಡಿದರು. ವೈಜ್ಞಾನಿಕವಾಗಿ ಆಗಬೇಕಾದ್ದೆಲ್ಲ ಆದಮೇಲೆ ಇನ್ನು ಅವರವರ ನಂಬಿಕೆಯನ್ನು ಅವರು ಆಚರಿಸಿದರೆ ನಮ್ಮದೇನು ತಕರಾರು? ನಾಸಾ ವಿಜ್ಞಾನಿ ಶುಭಹಾರೈಸಿ ಕಡಲೇಕಾಯಿ ಕಳಿಸಿದರೆ ಅದನ್ನು ನೋಡಿ ನಕ್ಕುಕೊಂಡು ಸುಮ್ಮನಾಗಬೇಕೋ ಪ್ರತಿಭಟಿಸಬೇಕೋ? ನನಗೇನೋ ಮೊದಲನೆಯದೇ ಸರಿಯೆನ್ನಿಸುತ್ತದೆ. ಅವನೇನಾದರೂ “ಈ ಕಡಲೇಕಾಯಿ ತಿನ್ನಿ, ಮತ್ತೇನೂ ಮಾಡಬೇಡಿ” ಎಂದಿದ್ದರೆ, ಇವರು ಅದರಂತೆ ನಡೆದಿದ್ದರೆ, ಅದು ಪ್ರತಿಭಟನೆಗೋ ಮತ್ತೊಂದು ಕ್ರಮಕ್ಕೋ ಅರ್ಹ, ಅಲ್ಲವೇ? ವಿಜ್ಞಾನಿಗೆ ನಂಬಿಕೆಯೇ ಇರಬಾರದೆನ್ನುವುದು, ಮಾರಿಗೆ ಕೋಣವನ್ನು ಬಲಿಕೊಡಬೇಕೆನ್ನುವಷ್ಟೇ ಅಥವ ಅದಕ್ಕಿಂತ ಹೆಚ್ಚಿನ ಕಂದಾಚಾರ – ಏಕೆಂದರೆ ಎರಡನೆಯದರಲ್ಲಿ ಕೊಂದ ಕೋಣನನ್ನು ತಿಂದಾದರೂ ತೃಪ್ತಿಪಡುವ ಅವಕಾಶವಿದೆ ಆದರೆ ಮೊದಲನೆಯದರಲ್ಲಿ, ತನ್ನ ಪ್ರಯತ್ನವೆಲ್ಲವನ್ನೂ ಮಾಡಿದವನು ತನ್ನ ನಂಬಿಕೆಯನ್ನೂ ನೆರವೇರಿಸಿದ್ದರಿಂದ ಬರುವ ಮನಸ್ಸಮಾಧಾನಕ್ಕೂ ಅವಕಾಶವಿಲ್ಲ!

    • Ananda Prasad

      ಇಸ್ರೋದ ಅಧ್ಯಕ್ಷ ರಾಧಾಕೃಷ್ಣನ್ ಅವರು ತಮ್ಮ ಮನೆಯಲ್ಲಿ ರಾಕೆಟಿನ ಪ್ರತಿಕೃತಿಗೆ ಪೂಜೆ, ಹೋಮ ಹವನ ಮಾಡಿದ್ದರೆ ಅದನ್ನು ಯಾರೂ ಪ್ರಶ್ನಿಸುತ್ತಿರಲಿಲ್ಲ, ಅದು ಅವರ ನಂಬಿಕೆ ಎಂದು ತಿಳಿದುಕೊಳ್ಳಬಹುದು. ಅವರು ಇಸ್ರೋ ಎಂಬ ಭಾರತ ಸರ್ಕಾರದ ಹಣದಿಂದ ಅಂದರೆ ಪ್ರಜೆಗಳ ಹಣದಿಂದ ನಡೆಯುವ ಸಂಸ್ಥೆಯ ಅಧ್ಯಕ್ಷನಾಗಿ ಸರ್ಕಾರದ ಒಂದು ಕಾರ್ಯಕ್ರಮವಾದ ಮಂಗಳಯಾನದ ರಾಕೆಟ್ಟಿನ ಪ್ರತಿಕೃತಿಯನ್ನು ತಿರುಪತಿಯಲ್ಲಿ ಇಟ್ಟು ಸಾರ್ವಜನಿಕವಾಗಿ ಪೂಜೆ, ಹೋಮ ಹವನ ಮಾಡಿಸುವುದು ಉತ್ತಮ ಬೆಳವಣಿಗೆಯೇನೂ ಅಲ್ಲ. ಇದನ್ನು ಪ್ರಜ್ಞಾವಂತರು ವಿರೋಧಿಸುವುದರಲ್ಲಿ ತಪ್ಪಿಲ್ಲ. ಸರ್ಕಾರವು ಧರ್ಮನಿರಪೇಕ್ಷ ಸಂವಿಧಾನವನ್ನು ಅಳವಡಿಸಿಕೊಂಡಿರುವಾಗ ಸರ್ಕಾರದ ಯಾವುದೇ ಕಾರ್ಯಕ್ರಮಗಳು ಯಾವುದೇ ಆಚರಣೆಳಿಲ್ಲದೆ ಆರಂಭವಾಗಬೇಕಾಗಿರುವುದು ಅಗತ್ಯ. ರಾಕೆಟ್ಟನ್ನು ಖಾಸಗಿ ಸಂಸ್ಥೆಯೊಂದು ಹಾರಿಸುವುದಾದರೆ ಅವರು ತಮ್ಮ ನಂಬಿಕೆಗಳನುಸಾರ ಪೂಜೆ, ಹೋಮ ಹವನ ಮಾಡಿಸಲು ಯಾರೂ ಆಕ್ಷೇಪಿಸಲಾರರು. ಪುರೋಹಿತಶಾಹಿಯಿಂದ ಸರ್ಕಾರ ಹಾಗೂ ಅದರ ಕಾರ್ಯಕ್ರಮಗಳು ಮುಕ್ತವಾಗಿರಬೇಕಾದದ್ದು ಪ್ರಜಾಪ್ರಭುತ್ವ ವ್ಯವಸ್ಥೆಯ ಬೆಳವಣಿಗೆಗೆ ಅತೀ ಅಗತ್ಯ.

  4. harsha

    ಪ್ರಕೃತಿಯನ್ನು ಅರ್ಥಮಾಡಿಕೊಳ್ಳುವ ವೈಜ್ಞಾನಿಕವಾದ ಸಮಗ್ರ ದೃಷ್ಟಿಕೋನವು ವಿಜ್ಞಾನಿಗಳಿಗೆ ಇರಬೇಕು ಎಂದು ಯಾರಾದರೂ ನಿರೀಕ್ಷಿಸುವುದು ಸರಿಯಾಗಿಯೇ ಇದೆ. ಅದರೆ ಎಷ್ಟೋ ಸಾರಿ ವಾಸ್ತವ ಹಾಗಿರುವುದಿಲ್ಲ. ವಿಜ್ಞಾನಿಗಳಲ್ಲಿ ವಿಜ್ಞಾನದ ಕೆಲವೊಂದು ಶಾಖೆಗಳಲ್ಲಿ ಮಾತ್ರ ಸ್ವಲ್ಪ ಆಳವಾದ ಅಧ್ಯಯನ ನಡೆಸಿದವರು, `ಸಂಶೋಧನೆ’ ನಡೆಸಿದವರು ಕೂಡ ಇರುತ್ತಾರೆ. ಪ್ರಕೃತಿಯ ಭೌತಿಕ ಪ್ರಯೋಗಗಳು ಮತ್ತು ಧಾರ್ಮಿಕ ಆಚರಣೆಗಳ ನಡುವೆ ಸದಾ ಗೆರೆ ಹಾಕಿಕೊಂಡೇ ಇರುತ್ತಾರೆ. ಇದಕ್ಕೆ ನಮ್ಮ ಶಿಕ್ಷಣ ಪದ್ದತಿ ಪುಷ್ಟಿ ನೀಡುತ್ತಿದೆ.
    ಅಂಶಿಕವಾಗಿ ಮಾತ್ರ ವಿಜ್ಞಾನದ ತಿಳುವಳಿಕೆ ಪಡೆದ ಇಂಥವರು ಖಾಸಗಿಯಾಗಿ ಪೂಜೆ ಹವನ ಇತ್ಯಾದಿ ಮಾಡಿಕೊಂಡರೆ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಲಾರರು. ಆದರೆ ತಮ್ಮ ನಂಬಿಕೆ, ಆಚರಣೆಗಳನ್ನು ಸಾರ್ವಜನಿಕ ವಲಯಕ್ಕೆ ತರುವ ಧಾರ್ಮಿಕ ನಡವಳಿಕೆಯಿಂದ `ಬಾಹ್ಯಾಕಾಶ ವಿಜ್ಞಾನಿಗಳೇ ತಿರುಪತಿ ತಿಮ್ಮಪ್ಪನಿಗೆ ಶರಣಾದ ಮೇಲೆ ಇನ್ನು ಸಾಮಾನ್ಯರಾದ ನಮ್ಮದೇನು ಮಹಾ’ ಎಂಬ ಅಭಿಪ್ರಾಯ ಜನರಲ್ಲಿ ಮೂಡಿ ಅವರು ಇನ್ನಷ್ಟು ಮೂಢನಂಬಿಕೆಗಳ ದಾಸರಾಗುವಂತೆ ಮಾಡುವ ಅಪಾಯ ಇದ್ದದ್ದೇ.

  5. Swarna

    Hisenberg said “the first drop from the glass of natural science makes you a atheist but at the bottom god is waiting for you”. ಮಂಜುನಾಥ ಕೊಳ್ಳೇಗಾಲರವರು ಹೇಳಿದಂತೆ ಏನೂ ಮಾಡದೇ ವಿಜ್ಞಾನಿಗಳು ತಿಮ್ಮಪ್ಪನೆಡೆಗೆ ಕೈ ತೋರಿಸಿದ್ದರೆ ಈ ತರಹದ ಚರ್ಚೆಗಳಿಗೆ ಅರ್ಥವಿರುತಿತ್ತು. ಎಲ್ಲ ನಂಬಿಕೆಗಳಿಗೂ ಕಾರಣ, ತರ್ಕಗಳನ್ನು ಹುಡುಕುತ್ತಾ ಹೋದರೆ ಬದುಕು ಇನ್ನೂ ಶಿಥಿಲವಾದೀತು .

  6. Mahesh

    ಅರಿವನ್ನು ಆಧರಿಸಿ ತಾರ್ಕಿಕ ಲೆಕ್ಕಾಚಾರಗಳ ಮೂಲಕ ಫಲಿತಾಂಶಗಳನ್ನು ನಿಖರವಾಗಿ ಲೆಕ್ಕ ಹಾಕುವುದೇ ನಮ್ಮ ಗುರಿಯಾಗಿರಬೇಕು. ಕೆಲವೊಂದು ಸಂದರ್ಭದಲ್ಲಿ ಈಗ ಇರುವ ಅರಿವುಗಳ ಮೇಲೆ ಆಧರಿಸಿದ ತಾರ್ಕಿಕ ಲೆಕ್ಕಾಚಾರಗಳು ಫಲಿತಾಂಶಗಳನ್ನು ಅಸ್ಪಷ್ಠವಾಗಿ ತೋರಿಸುತ್ತವೆ ಮತ್ತು ನಿಖರವಾಗಿ ಊಹಿಸಲು ಅಸಾಧ್ಯವಾಗಿರುತ್ತದೆ. ( ಫಲಿತಾಂಶಗಳ ಸಂಭವನೀಯತೆ <1 :)). ಅಂತಹ ಸಂದರ್ಭಗಳಲ್ಲಿ ನಮ್ಮ ಕೈಮೀರಿದ ಲೆಕ್ಕಾಚಾರಗಳಿಗೆ ದೇವರ ಹೆಸರನ್ನು ಹೇಳುವುದು ಮತ್ತು ದೇವರ ಮೇಲಿನ ನಂಬಿಕೆಯ ಆಧಾರ ಅಥವಾ ಇನ್ಯಾವುದೋ ನಂಬಿಕೆಯ (ಕಡಲೆಕಾಯಿ ತಿನ್ನುವುದು!) ಆದಾರದ ಮೇಲೆ ಫಲಿತಾಂಶ ನಾವು ಚಿಂತಿಸಿದಂತೆ ಆಗಬಹುದು ಎಂದು ಕಾರ್ಯಪ್ರವೃತ್ತರಾಗುವುದು ಜಗತ್ತಿನಾದ್ಯಂತ ಕಂಡುಬರುವ ಸಂಗತಿ. ಇಸ್ರೋದ ಅದ್ಯಕ್ಷರು ಕಾರ್ಯಪ್ರವೃತ್ತರಾಗುವ ಮೊದಲು ದೇವರ ಮೊರೆ ಹೋಗಿದ್ದಾರೆ ಎಂದರೆ ಮಂಗಳಯಾನದಲ್ಲಿ ಅರಿವಿನ ಆಧಾರದ ಮೇಲೆ ನಡೆದ ತಾರ್ಕಿಕ ಲೆಕ್ಕಾಚಾರಗಳು ಫಲಿತಾಂಶದಲ್ಲಿ ಅಸ್ಪಷ್ಟತೆಯನ್ನು ತೋರಿಸಿವೆ ಎಂದು ಊಹಿಸಬಹುದು. ಮಂಗಳಯಾನದ ಫಲಿತಾಂಶಗಳು ಏನೇ ಇರಲಿ , ಅವುಗಳು ನಮ್ಮ ಅರಿವನ್ನು ಹೆಚ್ಚಿಸಿ ಮುಂದಿನ ಸಾರಿ ಮಂಗಳಯಾನ ಮಾಡಬೇಕಾದರೆ ತಾರ್ಕಿಕ ಲೆಕ್ಕಾಚಾರಗಳು ಫಲಿತಾಂಶಗಳನ್ನು ಹೆಚ್ಚು ನಿಖರವಾಗಿ ತೋರಿಸಲಿ ಎಂಬುದು ನಮ್ಮ ಆಶಯ. ದೇವರು, ನಂಬಿಕೆಗಳ ಮೊರೆ ಹೋಗಿಯಾದರೂ ಈ ಕಠಿಣವಾದ ಕಾರ್ಯವನ್ನು ಕೈಗೆತ್ತಿಕೊಂಡು , ಯಶಸ್ಸು ಪಡೆಯಲು ಹೆಣಗಾಡುತ್ತಿರುವ ಇಸ್ರೋದವರಿಗೆ ಅಭಿನಂದನೆಗಳು.

  7. Sharmila

    “ಅವರು ಇಸ್ರೋ ಎಂಬ ಭಾರತ ಸರ್ಕಾರದ ಹಣದಿಂದ ಅಂದರೆ ಪ್ರಜೆಗಳ ಹಣದಿಂದ ನಡೆಯುವ ಸಂಸ್ಥೆಯ ಅಧ್ಯಕ್ಷನಾಗಿ ಸರ್ಕಾರದ ಒಂದು ಕಾರ್ಯಕ್ರಮವಾದ ಮಂಗಳಯಾನದ ರಾಕೆಟ್ಟಿನ ಪ್ರತಿಕೃತಿಯನ್ನು ತಿರುಪತಿಯಲ್ಲಿ ಇಟ್ಟು ಸಾರ್ವಜನಿಕವಾಗಿ” is this true? How do u know he spent government money on the pooja?

    • Ananda Prasad

      ಇಲ್ಲಿ ನಾನು ಇಸ್ರೋ ಅಧ್ಯಕ್ಷ ಸರ್ಕಾರದ ಹಣವನ್ನು ತಿರುಪತಿಯಲ್ಲಿ ಪೂಜೆ, ಹೋಮ ಹವನ ಮಾಡಿಸಲು ಉಪಯೋಗಿಸಿದ್ದಾರೆ ಎಂದು ಹೇಳಿಲ್ಲ. ಅವರು ತಮ್ಮ ಸ್ವಂತ ಹಣವನ್ನು ಬಳಸಿದ್ದಾರೋ ಅಥವಾ ಇಸ್ರೋ ಸಂಸ್ಥೆಯ ಹಣವನ್ನು ಬಳಸಿದ್ದಾರೋ ನನಗೆ ಗೊತ್ತಿಲ್ಲ. ವಿವಾದ ಇರುವುದು ಪೂಜೆಗೆ ಬಳಸಿದ ಹಣದ ವಿಷಯದಲ್ಲಿ ಅಲ್ಲ. ಸರಕಾರೀ ಸಂಸ್ಥೆಯ ಮುಖ್ಯಸ್ಥನ ಸ್ಥಾನದಲ್ಲಿ ಇದ್ದುಕೊಂಡು ಸರ್ಕಾರದ ಒಂದು ಯೋಜನೆಯಾದ ಮಂಗಳಯಾನದ ರಾಕೆಟ್ ಪ್ರತಿಕೃತಿಯನ್ನು ತಿರುಪತಿಯಲ್ಲಿ ಇಟ್ಟು ವೈಜ್ಞಾನಿಕ ಮನೋಭಾವಕ್ಕೆ ವಿರುದ್ಧವಾಗಿ ನಡೆದುಕೊಂಡದ್ದರ ಬಗ್ಗೆ. ರಾಧಾಕೃಷ್ಣನ್ ಅವರು ಓರ್ವ ಭಕ್ತನಾಗಿ ತಿರುಪತಿಗೆ ಹೋಗಿ ಪೂಜೆ ಸಲ್ಲಿಸಿದ್ದರೆ ಯಾರ ಆಕ್ಷೇಪವೂ ಇರುತ್ತಿರಲಿಲ್ಲ ಮತ್ತು ಸುದ್ದಿಯೂ ಆಗುತ್ತಿರಲಿಲ್ಲ. ಅವರು ಅಲ್ಲಿಗೆ ಹೋಗಿ ಸರ್ಕಾರದ ಕಾರ್ಯಕ್ರಮವಾದ ಮಂಗಳಯಾನದ ರಾಕೆಟ್ಟಿನ ಪ್ರತಿಕೃತಿ ಇಟ್ಟು ಪೂಜೆ, ಹೋಮ ಹವನ ಮಾಡಿಸಿದ್ದು ಉತ್ತಮ ಬೆಳವಣಿಗೆ ಅಲ್ಲ. ಅವರು ಸರ್ಕಾರದ ಯೋಜನೆಯ ಪ್ರತಿಕೃತಿಯನ್ನು ಅಲ್ಲಿಗೆ ತೆಗೆದುಕೊಂಡು ಹೋಗಿ ದೇಶಕ್ಕೆ ವೈಜ್ಞಾನಿಕ ಮನೋಭಾವದ ವಿರುದ್ಧ ಸಂದೇಶ ಕೊಟ್ಟಿದ್ದಾರೆ. ಇದುವೇ ವಿವಾದಕ್ಕೆ ಕಾರಣ.

  8. HARISH KUMAR M G

    ಇಸ್ರೋ ನಡೆಸಿದ ಐತಿಹಾಸಿಕ ಮಂಗಳಯಾನ ಉಪಗ್ರಹ ವೈಜ್ಞಾನಿಕ ಮತ್ತು ತಂತ್ರಜ್ಞಾನದಿಂದಲೇ ಉಡಾವಣೆಗೊಂಡಿದ್ದರೂ ಅದನ್ನು ತಯಾರಿಸಿದವರು ಮಾನವರು ಇದು ಎಲ್ಲರಿಗೂ ತಿಳಿದ ವಿಷಯ. ಹಾಗೆಯೇ ಮಾನವ ದೇವರನ್ನು ನಂಬುವುದರಲ್ಲಿ ಯಾವ ತಪ್ಪು ಇಲ್ಲ. ನಂಬಿಕೆ ಅನ್ನುವುದು ಅವರವರ ಭಾವಕ್ಕೆ ತಕ್ಕಂತೆ ಇರುತ್ತದೆ. ಹಾಗಾಗಿ ತಿರುಪತಿ ತಿಮ್ಮಪ್ಪನಿಗೆ ಪೂಜೆ ಸಲ್ಲಿಸುವುದರಲ್ಲಿ ಯಾವ ತಪ್ಪು ಇಲ್ಲ ಕಾರಣ ದೈವ ನಂಬಿಕೆ ಯಿಂದ ಮಾನವನಿಗೆ (ನಂಬಿದವರಿಗೆ) ಧನಾತ್ಮಕ ಶಕ್ತಿ ದೊರೆಯುತ್ತದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading