ರಶ್ಮಿ ಈಗ 'ಸುಮ್ ಸುಮ್ನೇ ನಗ್ತಾರೆ…!'

ರಿಯಲ್ ಸ್ಟಾರ್ ಮಾತುಗಳ ನೆನಪು

1457752_10152153086351057_1736302095_n

ರಶ್ಮಿ ಕಾಸರಗೋಡು

ಎಂದಿನಂತೆ ಆ ದಿನವೂ ಸುದ್ದಿ ಮಾಡುವುದರಲ್ಲಿ ನಾವು ಬ್ಯುಸಿಯಾಗಿದ್ದೆವು . ಆಗ ಯಾರದರೂ ನಿರೂಪಣೆ ಮಾಡ್ತೀರಾ? ಉಪೇಂದ್ರ ಬರ್ತೀದ್ದಾರೆ, ಯಾರಾದ್ರೂ ರೆಡಿ ಇದ್ದೀರಾ?… ಹೀಗೆ ಕೇಳಿದ್ದು ಅಡ್ಮಿನ್ ಡಿಪಾರ್ಟ್ ಮೆಂಟ್ ನವರು. ಅರೇ..ಇಂಡಿಯನ್ ಎಕ್ಸ್ ಪ್ರೆಸ್ ನಂಥಾ ದೊಡ್ಡ ಸಂಸ್ಥೆಯಲ್ಲಿ ನಿರೂಪಣೆ ಮಾಡೋಕೆ ರೆಡಿ ಇದ್ದೀರಾ? ಎಂದು ನಮ್ಮ ಸೆಕ್ಷನ್ ಗೆ ಬಂದು ಕೇಳಿದ್ದು ಅಚ್ಚರಿ ಹುಟ್ಟಿಸಿತ್ತು. ಬೆಳಗ್ಗಿನ ಶಿಫ್ಟ್ ನಲ್ಲಿ ಇದ್ದದ್ದು ನಾವು ನಾಲ್ಕೈದು ಜನ, ಪರಸ್ಪರ ಮುಖ ನೋಡಿಕೊಂಡೆವು. ಮಾಡ್ತೀರಾ? ಮತ್ತೊಮ್ಮೆ ಕೇಳಿದರು.
ಅದೇನು ಭಂಡ ಧೈರ್ಯ ಬಂದು ಬಿಡ್ತೋ ನಾ ಕಾಣೆ. ಹೂಂ ಅಂದು ಬಿಟ್ಟೆ.
ಆಮೇಲೆ ಎಷ್ಟು ಹೊತ್ತು ಇರುತ್ತದೆ ಎಂದು ಕೇಳಿದೆ. ಐದೇ ನಿಮಿಷ, ವಿಷಯ ಹೇಳಿ ಕೊಡ್ತೀವಿ ಅಂದ್ರು. ಕೊಂಚ ಸಮಧಾನವಾಯ್ತು . ಆಮೇಲೆ ಸ್ವಲ್ಪ ಹೊತ್ತಾದ ನಂತರ ಜಿ ಎಂ ನಿಂದ ಬುಲಾವ್ ಬಂತು.
ನೀವು ನಿರೂಪಣೆ ಮಾಡ್ತೀರಾ?
ಕೈ ಕಂಪಿಸುತ್ತಿತ್ತು. ಯೆಸ್ ಸರ್ ಅಂದೆ.
ಇದು ಮೊದಲ ಬಾರಿ ಅಲ್ವಾ?
ಯೆಸ್ ಸರ್..
ಸೋ..ಸ್ಕ್ರಿಪ್ಟ್ ನಲ್ಲಿ ಇಷ್ಟೆಲ್ಲಾ ವಿಷ್ಯಗಳು ಇರ್ಬೇಕು ಎಂದು ಹೇಳಿ ಇನ್ನೊಂದು ಗಂಟೆಯಲ್ಲಿ ಎಲ್ಲ ವಿಷ್ಯ ಕಲೆಕ್ಟ್ ಮಾಡಿ ಸ್ಕ್ರಿಪ್ಟ್ ರೆಡಿ ಮಾಡಿಕೊಂಡು ಬನ್ನಿ ಅಂದ್ರು..
ಚೇಂಬರ್ ನಿಂದ ಹೊರಗೆ ಕಾಲಿಡುತ್ತಿದ್ದಂತೆ ಅಯ್ಯೋ!! ಇಷ್ಟೊಂದು ಕಷ್ಟ ಇದೆಯಾ..ಯಾಕಾಗಿ ಒಪ್ಪಿಕೊಂಡೆನೋ ಎಂದನಿಸಿ ಬಿಡ್ತು.
ಮರುಕ್ಷಣದಲ್ಲೇ ಅಷ್ಟು ಬೇಗ ಯಾಕೆ ಸೋಲ್ಬೇಕು?. ಎಲ್ಲ ಸರಿ ಹೋಗುತ್ತದೆ ಎಂದು ನನ್ನನ್ನು ನಾನೇ ಸಮಾಧಾನ ಮಾಡಿಕೊಂಡು ಕಾರ್ಯಕ್ರಮದ ಮಾಹಿತಿ ಕಲೆಕ್ಟ್ ಮಾಡಿ ಸ್ಕ್ರಿಪ್ಟ್ ರೆಡಿ ಮಾಡಿಕೊಂಡೆ.
ಜಿಎಂ ಹೇಳಿದ ಸಮಯಕ್ಕೆ ಸರಿಯಾಗಿ ಸ್ಕ್ರಿಫ್ಟ್ ಹಿಡ್ಕೊಂಡು ಅವರ ಚೇಂಬರ್ ಗೆ ಹೋದೆ.
ಇಂಗ್ಲಿಷ್ ನಲ್ಲಿ ನನಗೆ ವಿವರಿಸಲು ಬರುವುದಿಲ್ಲ, ಅದಕ್ಕಾಗಿ ಕನ್ನಡದಲ್ಲಿ ಬರೆದ ಸ್ಕ್ರಿಪ್ಟ್ ನ್ನು ಮಲಯಾಳಂನಲ್ಲಿ (ಜಿಎಂ ಅವರು ಕೇರಳದವರು) ವಿವರಿಸಿದೆ. ಅವರು ಓಕೆ ಅಂದಾಗ ಸ್ವಲ್ಪ ಧೈರ್ಯ ಬಂತು. ಆ ದಿನ ಸಹೋದ್ಯೋಗಿಯೊಬ್ಬರ ಬರ್ತ್ ಡೇ ಲಂಚ್ ಇದ್ದ ಕಾರಣ ನಾವೆಲ್ಲರೂ ಹೋಟೆಲ್ ಗೆ ಹೋಗಿದ್ದೆವು . ಅರ್ಧ ಊಟದ ಮಧ್ಯೆ ಫೋನ್ ಬಂತು. ಉಪೇಂದ್ರ ಅವರು ಬಂದ್ರು ಎಲ್ಲಿದ್ದೀರಾ?
ಹೊರಗೆ ಜುಮುರು ಮಳೆ, ಈಗ ಬಂದೆ ಎನ್ನುತ್ತಾ ಒಂದೇ ಓಟ ಆಫೀಸು ಕಡೆಗೆ.
ಏದುಸಿರು ಬಿಡುತ್ತಾ ನಿಂತವಳ ಕೈಯಲ್ಲಿ ಮೈಕ್ ಕೊಟ್ಟು ಅನೌನ್ಸ್ ಮಾಡಿ ಬಿಡಿ ಅಂದ್ರು
ಒಮ್ಮೆಲೆ ತಲೆ ಗಿರ್ರ್ ಅಂದು ಬಿಡ್ತು..ಕೈ ನಡುಗುತ್ತಿದೆ. ಗೊತ್ತಿದ್ದ ಎಲ್ಲಾ ಭಾಷೆಗಳು ಮರೆತು ಹೋದವು!!!
ಹಿಂದಿನಿಂದ ಸಹೋದ್ಯೋಗಿಯೊಬ್ಬರು ಹೇಳಿ ಮೇಡಂ ಅಂದ್ರು..
ನಡುಗುತ್ತಾ..ಎಲ್ಲರಿಗೂ ಸ್ವಾಗತ ಅಂತ ಹೇಳಿದೆ .
ಭಯ ಯಾಕೆ? ಫಸ್ಟ್ ಟೈಮ್ ಅಲ್ವಾ…ಏನೂ ಆಗಲ್ಲ…ತಪ್ಪಾದ್ರೂ ನಾವೇ ತಾನೆ ಇಲ್ಲಿ ಇರೋದು ಅಂದ್ರು ಇನ್ನೊಬ್ಬ ಸಹೋದ್ಯೋಗಿ.
ನೋಡ ನೋಡುತ್ತಿದ್ದಂತೆಯೇ ಉಪೇಂದ್ರ, ಪ್ರಿಯಾಂಕಾ ಉಪೇಂದ್ರ ಬಂದೇ ಬಿಟ್ರು..
11846547_10153551884701057_3021912622769468606_n
ಎದೆ ಬಡಿತ ಬೆಂಗಳೂರು ಆಟೋ ಮೀಟರ್ ನಂತೆ ರೊಯ್ಯನೆ ಓಡುತಿತ್ತು.
ಅವರಿಗೆ ಸ್ವಾಗತ ಹೇಳುತ್ತಿದ್ದಂತೆಯೇ ಧೈರ್ಯ ಬರತೊಡಗಿತು. ಮತ್ತೆ ಸಲೀಸಾಗಿ ಮಾತಾಡಿದೆ.
ಬೆಳಗ್ಗೆ ಬರುವಾಗ ಸ್ವಾಗತದ ಬ್ಯಾನರ್ ನೋಡಿ, ಉಪೇಂದ್ರ ಅವರನ್ನು ಒಂದು ಕ್ಷಣ ನೋಡಿದರೆ ಸಾಕು ಎಂದು ಮನಸ್ಸು ಹಂಬಲಿಸುತ್ತಿತ್ತು. ಈಗ ಉಪೇಂದ್ರ ಅವರ ಪಕ್ಕದಲ್ಲೇ ನಿಂತು ನಿರೂಪಣೆ ಮಾಡ್ತಾ ಇದ್ದೀನಿ. ನಮ್ಮ ಕಚೇರಿಯ ಎಲ್ಲ ಸಹೋದ್ಯೋಗಿಗಳು , ಹೊರಗಿನವರು ಎಲ್ಲರೂ ವೇದಿಕೆಯ ಮುಂದಿದ್ದಾರೆ.
ಇಂಥಾ ಸಮಾರಂಭದಲ್ಲಿ ನಾನು ನಿರೂಪಣೆ ಮಾಡ್ತಾ ಇದ್ದೀನಿ ಅನ್ನೋದು ನನ್ನಲ್ಲಿಯೇ ಅಚ್ಚರಿ ಹುಟ್ಟಿಸುತ್ತಿದೆ.
ಅಷ್ಟೊತ್ತಿಗೆ ಮಳೆ ಶುರುವಾಯ್ತು. ಅಭಿಮಾನಿಗಳು ಮುಗಿ ಬೀಳತೊಡಗಿದಾಗ ಅವರನ್ನು ನಿಯಂತ್ರಿಸುವುದು ಹೇಗೆ ಎಂಬುದು ನನಗೆ ತಿಳಿಯುತ್ತಿಲ್ಲ. ಸಂಯಮ ಕಾಪಾಡಿಕೊಳ್ಳಿ ಎಂದು ಹೇಳಿದರೂ ಅವರ್ಯಾರೂ ಕ್ಯಾರೇ ಅನ್ನಲಿಲ್ಲ. ನೂಕು ನುಗ್ಗಾಟ, ಸಿಡಿದೇಳುತ್ತಿದ್ದ ಪೊಲೀಸರನ್ನು ಕಂಡಾಗ ಇಲ್ಲಿ ಇನ್ನೇನೋ ಆಗಿ ಬಿಡುತ್ತದೆ ಎಂದು ಭಯವಾಗಿತ್ತು.
ಅದರಲ್ಲೊಬ್ಬ ಅಭಿಮಾನಿಯನ್ನು ಪೊಲೀಸ್ ಹಿಡಿದು ತಳ್ಳುತ್ತಿದ್ದರು. ಆ ಯುವಕನಿಗೆ ಉಪೇಂದ್ರ ಜತೆ ಫೋಟೋ ಕ್ಲಿಕ್ಕಿಸುವ ಬಯಕೆ. ನೂಕು ನುಗ್ಗಲಿನ ನಡುವೆ ಉಪೇಂದ್ರ ಆ ಅಭಿಮಾನಿಯನ್ನು ಹತ್ತಿರ ಕರೆದು ಫೋಟೋ ತೆಗಿಸಿಕೊಂಡಿದ್ದು ನೋಡಿದಾಗ ಅವರ ಮೇಲಿನ ಅಭಿಮಾನ ಇನ್ನೂ ಹೆಚ್ಚಾಯ್ತು. ಅಭಿಮಾನಿಗಳೊಂದಿಗೆ ನಗುನಗುತ್ತಾ ಬೆರೆತು, ಅವರನ್ನು ಖುಷಿ ಪಡಿಸಿದ ಪರಿ ಇನ್ನೂ ನನ್ನ ಕಣ್ಣ ಮುಂದೆ ಇದೆ.
ತುಂಬಾನೇ ಚೆಂದ ನಗು ಅವರದ್ದು .ಅದೆಷ್ಟು ಮುಕ್ತವಾಗಿ, ಮುಗ್ಧವಾಗಿ ನಗ್ತಾರೆ ಗೊತ್ತಾ ಅವರು!
ಅವರ ನಗುವನ್ನೇ ನೋಡುತ್ತಾ ನಿಂತಾಗ ರೋಮಾಂಚನ..ಬ್ಯಾಕ್ ಗ್ರೌಂಡ್ ನಲ್ಲಿ ಚಿಟ ಪಟ ಮಳೆ ಬೇರೆ…
ರಿಯಲ್ ಸ್ಟಾರ್ ಉಪೇಂದ್ರ
ಅದೆಷ್ಟು ಅನ್ವರ್ಥ ನಾಮ!!
ನಿರೂಪಣೆ ಮುಗಿಸಿ ನಮ್ಮ ಆಫೀಸಿನ ಗೆಸ್ಟ್ ಹೌಸ್ ನಲ್ಲಿ ಅವರ ಜತೆ ಫೋಟೋ ತೆಗೆಸಿಕೊಳ್ಳಲು ಹೋದಾಗ, ನೀವು ತುಂಬಾ ಚೆನ್ನಾಗಿ ಮಾತಾಡ್ತೀರಿ ಅಂದು ಬಿಟ್ರು ಉಪೇಂದ್ರ.
ಥ್ಯಾಂಕ್ಸ್ …ಎಂದು ಹೇಳಿ ಅವರ ಪಕ್ಕ ನಿಂತು ಫೋಟೋ ತೆಗಿಸಿಕೊಂಡಾಗ ಮನಸ್ಸೊಳಗೆ ನಧೀಂ ಧೀಂ ಧೀಂ…
ಅವರಿಬ್ಬರ ಆಟೋಗ್ರಾಫ್ ತೆಗೆದುಕೊಂಡು ಹೊರಗೆ ಬಂದಾಗ ಜಗತ್ತೇ ಜಯಿಸಿದ್ದಷ್ಟು ಖುಷಿ
ಆಮೇಲೆ ಬಂದು ಸುದ್ದಿ ಮಾಡುವ ಮೂಡ್ ಕೂಡಾ ಇರಲಿಲ್ಲ. ಹೇಗೋ ಕೆಲಸ ಮುಗಿಸಿ ಹಾಸ್ಟೆಲ್ ಗೆ ಬಂದ ನಂತರ ಬರೀ ಉಪೇಂದ್ರ ..ಉಪೇಂದ್ರ..ಉಪೇಂದ್ರ..
“ಉಪೇಂದ್ರ ಅವರು ಹಾಗೆಲ್ಲಾ ಚೆನ್ನಾಗಿದೆ ಎಂದು ಹೇಳಲ್ಲ..ಅವರು ಯಾರನ್ನೂ ಮೆಚ್ಚಿಸಲು ಹೇಳುವುದೇ ಇಲ್ಲ, ನೇರಾ ನೇರ ಮಾತುಗಳು ಅವರದ್ದು. ಅದಕ್ಕೆ ಅವರು ರಿಯಲ್ ಸ್ಟಾರ್..ಯು ಆರ್ ಲಕ್ಕಿ” ಅಂದ್ಳು ನನ್ನ ರೂಂ ಮೇಟ್
ದೂರದಲ್ಲಿ ಸುಮ್ ಸುಮ್ನೇ ನಗ್ತಾಳೆ ಹಾಡು ಕೇಳಿಸುತ್ತಿದೆ ಅನ್ನೋ ಅನುಭವ.. ಮತ್ತೆ ಮತ್ತೆ ಉಪೇಂದ್ರ ಅವರ ಮಾತುಗಳು ರಿಂಗಣಿಸುತ್ತಿತ್ತು
ಉಫ್ …ಅದೇ ಗುಂಗಿನಲ್ಲಿದ್ದ ನನಗೆ ರಾತ್ರಿ 2 ಗಂಟೆಯಾಗಿದ್ದೂ ಗೊತ್ತಾಗಲಿಲ್ಲ..
ನಾಳೆ ಮತ್ತೆ ಬೆಳ್ ಬೆಳಗ್ಗೆದ್ದು ಆಫೀಸಿಗೆ ಓಡ್ಬೇಕಲ್ಲಾ ಎಂದು ನನ್ನ ಖುಷಿಯ ಡಬ್ಬಿಗೆ ಒಂದಷ್ಟು ದುಡ್ಡು ಹಾಕಿ, ಮುಸುಕೆಳೆದು ಕೊಂಡೆ..
ಉಪೇಂದ್ರ ಅವರ ಅಭಿಮಾನಿಗಳಲ್ಲಿ ನಾನು ಒಬ್ಬಳು ಅಷ್ಟೇ. ಅವರಿಗೆ ನಾನ್ಯಾರೆಂದು ನೆನಪಿರಲಿಕ್ಕಿಲ್ಲ. ಆದರೆ ಅವರು ಹೇಳಿದ ಮಾತುಗಳು, ಈ ಮಧುರ ನೆನಪುಗಳು, ಅನುಭವಗಳೆಲ್ಲವೂ ನನ್ನ ಮನಸ್ಸಲ್ಲಿ ಅಚ್ಚಳಿಯದೆ ಉಳಿದಿರುತ್ತದೆ.
ಅವರ ಆಟೋಗ್ರಾಫ್ ಈಗ ನನ್ನ ಅಮೂಲ್ಯ ಸೊತ್ತುಗಳಲ್ಲೊಂದು.

‍ಲೇಖಕರು G

August 12, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: