ರಾಜೇಶ್ವರಿ ಹುಲ್ಲೇನಹಳ್ಳಿ
“ದೂರ ಬೆಟ್ಟದಲ್ಲಿ ಪುಟ್ಟ ಮನೆಯಿರಬೇಕು, ಮನೆಯ ಸುತ್ತ ಹೂವ ರಾಶಿ ಹಾಕಿರಬೇಕು, ತಂಗಾಳಿ ಜೋಗುಳವ ಹಾಡಲಿಬೇಕು. ಬಂಗಾರದ ಹೆಣ್ಣು ನೀನು ನಗುತಿರಬೇಕು ನನ್ನ ಜೊತೆಯಿರಬೇಕು, ನನ್ನ ಜೊತೆಯಿರಬೇಕು.” ಹಾಡಿನ ಸಾಲುಗಳೇ ಸುಂದರ. ಇಂದು ಬೆಟ್ಡ ಗುಡ್ಡಗಳೇ ನೆಲ ಸಮವಾಗುತ್ತಿರುವಾಗ ದೂರ ಬೆಟ್ಟದಲ್ಲಿ ಮನೆ, ಕಟ್ಟಿಕೊಳ್ಳುವುದಾದರೂ ಎಲ್ಲಿ? ಇರುವೆಡೆಯಲ್ಲೇ ಒಂದು ಪುಟ್ಟ ಮನೆಯಿರಲಿ, ಮನೆಯ ಸುತ್ತ ಹೂವಿನ ಗಿಡಗಳು ತುಂಬಿರಲಿ, ಎನ್ನುವ ಪರಿಕಲ್ಪನೆಯವಳು ನಾನು. ಮನೆ ಬಾಡಿಗೆಯದಿರಲಿ, ಸ್ವಂತದ್ದಿರಲಿ, ಪುಟ್ಟದಿರಲಿ, ದೊಡ್ಡದಿರಲಿ, ಮನೆಯ ಮುಂದಿಷ್ಟು ಗಿಡನೆಡುವ ಜಾಗವಿದ್ದರದೆಷ್ಟು ಚಂದ!, ನೆಲವಿಲ್ಲದಿದ್ದರೂ ಸರಿಯೇ ಕುಂಡಗಳಲ್ಲಿಯಾದರೂ ಗಿಡ ನೆಟ್ಟು ಬೆಳಸಿಕೊಂಡರೆ ಅಂದಕ್ಕೋ ಪೂಜೆಗೋ ಒಂದಷ್ಟು ಹೂವು , ಅಡಿಗೆಗೊಂದಿಷ್ಟು ದಿನ ಬಳಸುವ ಕೊತ್ತಂಬರಿ, ಕರಿಬೇವು,ಹಸಿ ಮೆಣಸಿನಕಾಯಿ, ಬಸಳೆ ದೊಡ್ಡ ಪತ್ರೆ, ಚಕ್ರಮುನಿ, ಹೀಗೆ ಒಂದಿಷ್ಟು ಗಿಡಗಳನ್ನು ನೆಟ್ಟು ನಿತ್ಯ ಅವುಗಳಿಗೆ ನೀರು ಹಾಕಿ ಮುಟ್ಟಿ ತುಸು ಮಾತನಾಡಿಸಿದರೆ ಮನಸಿಗದೇನೋ ನೆಮ್ಮದಿಯೆನಿಸುತ್ತದೆ. ಗಿಡದ ಒಂದೊಂದು ಎಲೆ ಚಿಗುರೊಡೆದರೂ ನಾನೇ ಏನೋ ಸೃಷ್ಟಿಸಿದಂತಹ ಸಂಭ್ರಮ!
ಈಗ ಕಾಡೆಲ್ಲ ನಾಡಾಗಿ, ನಗರಗಳಾಗಿ ಹೊಲಗದ್ದೆಗಳೆಲ್ಲ, ಸೈಟುಗಳಾಗಿ ಸೈಟುಗಳಿಗೆ ಬೇಡಿಕೆ ಹೆಚ್ಚಿ ದೊಡ್ಡ ದೊಡ್ಡ ಸೈಟು ಕೊಂಡು ಮನೆ ಕಟ್ಟಿ ಸುತ್ತ ಗಿಡಗಳಿಗಾಗಿ ಜಾಗ ಬಿಡುವುದು ತುಸು ದುಸ್ತರವೇ ಸರಿ. ಹೀಗಿರುವಾಗ ಬಹಳಷ್ಟು ಜನ ಇದ್ದ ಜಾಗದಲ್ಲಿಯೇ ಅಲ್ಪ ಸ್ವಲ್ಪ ಜಾಗವನ್ನು ಗಾರ್ಡನ್ ಗಾಗಿ ಬಿಟ್ಟು ಕೊಂಡು ಗಿಡ ಬೆಳಸಿದರೆ, ಹಲವರು ಕುಂಡಗಳಲ್ಲಿ ತಾರಸಿಯ ಮೇಲೆ ಗಿಡ ಬೆಳೆಸುವ ಹವ್ಯಾಸವನ್ನು ಇಟ್ಟುಕೊಂಡಿದ್ದಾರೆ. ಇದೆಲ್ಲಾ ಗಿಡ ನೆಟ್ಟು ಹೂ ಹಣ್ಣು ಬೆಳೆಸುವ ಮನಸ್ಥಿತಿಯವರ ಪರಿಯಾದರೆ ಇನ್ನು ಹಲವರದ್ದು ಬೇರೆಯೇ ಸರಿ!
ಮನೆಯ ಮುಂದೆ ಇದ್ದ ಇಪ್ಪತ್ತು ಹದಿನೈದು ಅಡಿ ಜಾಗದಲ್ಲಿ ನಾನೋ ಸಿಕ್ಕ ಸಿಕ್ಕ ಸುಮಾರು ಹದಿನೈದು ಬಣ್ಣದ ದಾಸವಾಳ , ಪುಟಾಣಿ ಗೊಂಚಲು ಗುಲಾಬಿ, ಸೇವಂತಿಗೆ, ವಿಳ್ಳೆದೆಲೆ, ಕಾಕಡಾ, ಏಳು ಸುತ್ತಿನ ದುಂಡು ಮಲ್ಲಿಗೆ, ಒಂದು ಸುತ್ತಿನ ದುಂಡು ಮಲ್ಲಿಗೆ, ಕನಕಾಂಬರ, ಬಣ್ಣ ಬಣ್ಣದ ಕ್ರೋಟನ್, (ಜಿರೆನಿಯಂ) ಸೇವಂತಿಗೆ ಪುಟ್ಟದಾಸವಾಳ ಸಿಮೆಂಟಿನ ಕೊಳದಲ್ಲಿ ತಾವರೆ, ಹೀಗೆ ಹತ್ತು ಹಲವು ಹೂವಿನ ಗಿಡಗಳನ್ನು ಹಾಗೂ ನನ್ನ ಮೈದುನ ಪಪ್ಪಾಯ, ಬಾಳೆಗಿಡ, ಚಕ್ರಮುನಿ, ದೊಡ್ಡ ಪತ್ರೆ, ಮದುಮೇಹದ ಮದ್ದಿನ ಗಿಡ, ಕಿಡ್ನಿ ಸಮಸ್ಯೆಗೆ ಉಪಯೋಗಿಸುವ ಗಿಡ, ಬಸಳೆ ಸೊಪ್ಪು, ಹೊನಗಾನೆ ಸೊಪ್ಪು, ತೊಗರಿ ಗಿಡ, ಸುವರ್ಣಗೆಡ್ಡೆ, ಸಿಹಿಯಾದ ಕಬ್ಬು, ಅರಿಶಿಣ, ಹೀಗೆ ಹತ್ತು ಹಲವು ಗಿಡಗಳನ್ನು ಬೆಳೆಸಿದ್ದೆವು . ಮನೆಯಲ್ಲೇ ಹಣ್ಣು ತರಕಾರಿ ಸಿಪ್ಪೆ ಸಗಣಿ ಕಾಫಿ ಟೀ ಚರಟ ಹಾಕಿ ತಯಾರಿಸಿದ ಗೊಬ್ಬರ ಹಾಕುತ್ತಿದ್ದೆವು. ಪ್ರತಿ ದಿನ ಬೆಳಗ್ಗೆ ಗಿಡಗಳಿಗೆ ನೀರುಣಿಸಿ, ಒಂದು ಸುತ್ತು ಎಲ್ಲ ಗಿಡಗಳನ್ನು ಹತ್ತಿರದಿಂದ ನೋಡಿ ಮುಟ್ಟಿ ಮಾತನಾಡಿಸಿ ಹೊಸ ಚಿಗುರನೊಮ್ಮೆ ಮೆಲ್ಲಗೆ ಕೈಯಿಂದ ಸವರಿ, ಮೈದಡವಿ, ಸಂಭಾಷಿಸಿ, ತೃಪ್ತಿಪಡುವುದು ನನ್ನ ದಿನಚರಿ.

ನಾನೋ ಎಲ್ಲಿ ದಾಸವಾಳ ಗಿಡ ಸಿಕ್ಕರೂ ತಂದು ನೆಡುವುದು ಅದು ನೆಲದಲ್ಲಿ ಬೇರೂರಿಭುವಿಯೊಂದಿಗಿನ ತನ್ನ ಬಂಧವನ್ನು ಗಟ್ಟಿಗೊಳಿಸಿ ಚಿಗುರಲಾರಂಭಿಸಿದಾಗ ನೆಟ್ಟ ಗಿಡವ ಬದುಕಿಸಿದೆ ಎಂಬ ನೆಮ್ಮದಿ! ಇನ್ನು ಅದರ ಒಂದೊಂದು ಚಿಗುರು ಮೊಗ್ಗು ಬಿಟ್ಟಾಗ, ಮೊದಲ ಹೂ ಅರಳಿದಾಗ ಕಣ್ತುಂಬ ನೋಡಿ ಆನಂದಿಸಿ, ದೇವರಿಗೆ ಅರ್ಪಿಸಿ ಸಂಭ್ರಮಿಸೋದು ಒಂದು ರೀತಿಯ ಸಾರ್ಥಕ್ಯ ಭಾವ. ಬೆಳಗ್ಗೆ ಎದ್ದು ಗಿಡಗಳೊಂದಿಗಿನ ಮಾತು ಕತೆ ಪುನಃ ಸಂಜೆ ಆಫೀಸಿನಿಂದ ಬಂದೊಮ್ಮೆ ಸಂಭಾಷಣೆ. ಹೀಗಿರುವಾಗ ನಮ್ಮ ಮನೆಯಲ್ಲಿದ್ದ ದಾಸವಾಳ ಹೂವಿಗೆ ಕೆಲವರ ಕಣ್ಣು.
ಒಂದು ದಿನ ಬೆಳಗ್ಗೆ ಅರಳಬೇಕಿದ್ದ ಹಲವಾರು ಮೊಗ್ಗುಗಳು ಬೆಳಗೆದ್ದು ನೋಡಿದರೆ ಗಿಡದಲ್ಲಿ ಮಾಯ!. ತುಂಬಾ ಬೇಸರವಾಯ್ತು ಜೊತೆಗೆ ಕೆಂಡದಂತಹ ಕೋಪ ಕೂಡ ಬಂತು. ನಾನು ಬೆಳಸಿದ ಗಿಡದ ಹೂವನ್ನು ಯಾರೋ ಕದ್ದು ಕಿತ್ತಿರುವುದು! ಅಬ್ಬಾ, ಅದೆಂಥ ಕೆಟ್ಟ ಜನ ಕಂಡೋರ ಮನೆ ಅಂಗಳದ ಹೂವನ್ನು ಕದ್ದು ಅವರ ಮನೆಯ ದೇವರಿಗೋ ಮುಡಿಗೋ ಇಡುವುದು ಅದೆಷ್ಟರ ಮಟ್ಟಿಗೆ ನ್ಯಾಯ? ಎಂದು ಬುಸುಗುಟ್ಟಿದೆ.
ಸರಿ ಇದು ಹೀಗೆ ಎರಡು ಮೂರು ಬಾರಿ ಆದಾಗ ಅಕ್ಕ ಪಕ್ಕದವರೊಂದಿಗೆ ಈ ಕುರಿತು ಹೇಳಿದೆ. ನೆರೆಮನೆಯ ಸುಮ “ರಾಜಕ್ಕ ಯಾರೋ ಒಬ್ಬ ಹೆಂಗಸು ಕಿತ್ತುಕೊಂಡು ಹೋದರು, ನಾನು ನಿಮ್ಮನ್ನು ಕೇಳಿರಬಹುದೆಂದು ಸುಮ್ಮನಾದೆ ಎಂದರು.” “ಅಯ್ಯೋ ಹೌದಾ ಯಾರದು?ನನಗೆ ಯಾರೂ ಕೇಳಿಲ್ಲವಲ್ಲಾ” ಎಂದೆ. ಹೀಗೆ ಮತ್ತೆ ಒಂದೆರಡು ಬಾರಿ ಇದೇ ಪುನರಾವರ್ತನೆಯಾಯ್ತು. ನಾನೋ ಸೂರ್ಯ ವಂಶಿ! ನಿತ್ಯವೂ ಸೂರ್ಯೋದಯದ ನಂತರ ಏಳುತ್ತಿದ್ದ ನಾನು ಅಂದು ಏನಾದರಾಗಲಿ ಎಂದು ನಸುಕಿನಲ್ಲೇ ಎದ್ದು ಹೂಗಳ್ಳರ ಕಂಡು ಹಿಡಿಯಲೇ ಬೇಕೆಂದು ಪಣ ತೊಟ್ಟು ಕಿಟಕಿಯಲಿ ನೋಡುತ್ತಾ ನಿಂತೆ. ಅತ್ತಿಂದ ಒಬ್ಬ ದಢೂತಿ ಹೆಂಗಸು ಮನೆಯ ಮುಂದೆ ಬಂದವಳೇ ಅತ್ತಿತ್ತ ನೋಡಿ ಕಾಂಪೌಂಡಿಗೊರಗಿ ನೆಗೆನೆಗೆದು ಕೈಗೆಟುಕಿದ ಹೂವನ್ನು ಕಿತ್ತುಕೊಳ್ಳುತ್ತಾ ಎಟುಕದಿದ್ದಾಗ ರೆಂಬೆಗಳನು ಬಾಗಿಸಿ ಹೂವಿನೊಂದಿಗೆ ಎಲೆಗಳೂ ಸೇರಿದಂತೆ ಅವಸರದಲಿ ಕಿತ್ತುಕೊಂಡು ತನ್ನ ಕೈ ಹಿಡಿಯಲ್ಲಿ ಮುಚ್ಚಿಟ್ಟುಕೊಂಡ ಪ್ಲಾಸ್ಟಿಕ್ ಕವರಿಗೆ ತುರುಕಿ ಕೊಳ್ಳುವಷ್ಟರಲ್ಲಿ ಮೆಲ್ಲಗೆ ಬಾಗಿಲು ತೆರೆದ ನಾನು ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು “ಯಾರ್ರೀ ಅದು ಯಾಕ್ರೀ ಹೂವು ಕೀಳ್ತಿದಿರಾ? ಎಂದೆ. ಆಕೆ ತುಸುವೂ ಅಂಜದೆ ನಾನು ಕಣ್ರೀ ಇಲ್ಲೇ ಸ್ವಲ್ಪ ಮುಂದೆ ನಮ್ಮ ಮನೆ” ಎಂದರು. “ಸರಿ ಯಾಕೆ ನಮ್ಮನೆ ಗಿಡದ ಹೂವೆಲ್ಲ ನೀವು ಕಿತ್ತಕೊಳ್ಳುತ್ತಿದ್ದೀರಲ್ಲ?” ಎಂದರೆ “ಅಯ್ಯೋ ಎಷ್ಟೊಂದು ಹೂವು ಬಿಟ್ಟಿದೆ ಅದ್ರಲ್ಲಿ ಒಂದ್ನಾಲ್ಕು ಕಿತ್ತು ಕೊಂಡ್ರೆ ಏನಾಗುತ್ತೆ ಬಿಡಿ” ಎಂದರು ಭಂಡತನದಿಂದ! ಅವರ ಮಾತನ್ನು ಕೇಳಿದ ನನಗೆ ಎಲ್ಲಿಲ್ಲದ ಕೋಪ ಬಂತು. “ಅಲ್ಲಾರೀ ನಾವು ಕಷ್ಟ ಪಟ್ಟು ಮಕ್ಕಳನ್ನು ಸಾಕಿದಂತೆ ಗಿಡಗಳ ಆರೈಕೆ ಮಾಡಿ ಚಂದ ಕಾಣಲೆಂದು, ನಮ್ಮ ಮನೆಯ ಪೂಜೆಗೆಂದು ಹೂ ಬೆಳಸಿದರೆ ನೀವು ಸಲೀಸಾಗಿ, ಕಿತ್ಕೊಂಡ್ರೆ ಏನಾಗುತ್ತೆ ಅಂತೀರಲ್ಲಾ ಏನ್ ಕಥೆ” ಎಂದರೆ “ಅಯ್ಯೋ ಬಿಡಿ ದೇವರಿಗೆ ನೀವು ಮುಡಿಸಿದರೇನು ನಾವು ಮುಡಿಸಿದರೇನು ಎಲ್ಲಾ ಒಂದೇ” ಎನ್ನೋದೆ. ತುಸುವೂ ಅಂಜದೆ ಅಳುಕದೆ.!
ಮಬ್ಬಿನಲ್ಲೇ ಬಂದು ಹೂ ಕದಿಯುತ್ತಿದ್ದ ಆಕೆಯನ್ನು ನೋಡಿ ಬಾಲ್ಯದಲ್ಲಿ ನಾವು, “ರವಿ ಮೂಡಿ ಹೂಗಳು ಅರಳುವ ಮೊದಲೇ ಹೂವಾಡಗಿತ್ತಿ ಏಳುವಳು ನಮ್ಮ ಹೂವಾಡಗಿತ್ತಿ ಏಳುವಳು” ಎಂಬ ಹಾಡಿಗೆ ನೃತ್ಯ ಮಾಡಿದ್ದು ನೆನಪಾಗಿ. ಆ ಹಾಡನ್ನು ಬದಲಿಸಿ ಈಗ “ರವಿ ಮೂಡಿ ಹೂಗಳು ಅರಳುವ ಮೊದಲೇ ಹೂ ಕದಿಯುವಾಕೆ ಏಳುವಳು ಯಾರೋ ಹೂ ಕದಿಯುವಾಕೆ ಏಳುವಳು ಕದ್ದು ಹೂ ಕೀಳೂವಳು!” ಎನ್ನಬೇಕೆನಿಸಿತು. “ತುಂಬಾ ಚನ್ನಾಗಿ ಹೇಳಿದ್ರಿ ನೀವು. ನಿಮಗೆ ಹೂ ಬೇಕು ಅಂದ್ರೆ ನಿವೂ ಗಿಡ ನೆಟ್ಟು ಬೆಳಸಿ ದೇವರಿಗೆ ಮುಡಿಸಿ ಇಲ್ಲವೇ ದುಡ್ಡುಕೊಟ್ಟು ತಂದು ಮುಡಿಸಿ ಅದನ್ನು ಬಿಟ್ಟು ಕಂಡೋರ ಮನೆಯ ಹೂವನ್ನು ಕಳ್ಳತನದಿಂದ ಕಿತ್ತುಕೊಂಡು ಹೋಗಿ ದೇವರಿಗೆ ಮುಡಿಸಿದರೆಷ್ಟು ಬಿಟ್ಟರೆಷ್ಟು? ಕಣ್ಣೆದುರೇ ಸಿಕ್ಕಿ ಬಿದ್ದರೂ ನಿಮ್ಮ ವಾದ ನೋಡಿ ಹೇಗಿದೆ?” ಎಂದಾಗ, “ಅಯ್ಯೋ, ನೀವು ಹೂ ಬೆಳಸಿ ಸುಮ್ನೇ ಗಿಡದಲ್ಲೇ ಬಿಟ್ಟರೆ ಏನ್ ಚಂದ ಅದ್ರ ಬದ್ಲು ನಾವಾದ್ರೂ ದೇವರಿಗೆ ಮುಡಿಸ್ತಿವಿ ತಗೊಳಿ” ಎಂದರಾಕೆ. “ಹೌದೌದು ನಮ್ಮ ಮನೆಯ ಹೂವು ನಿಮ್ಮ ಮನೆಯ ದೇವರ ಫೋಟೋಗೆ! ಚನ್ನಾಗಿದೆ ನಿಮ್ಮ ವಾದ. ನಮ್ಮ ಮನೇಲೂ ದೇವರ ಫೋಟೋಗಳಿವೆ ನಾವೂ ಪೂಜೆ ಮಾಡ್ತಿವಿ ಕಣ್ರೀ ” ಎಂದೆ. ಅಂದಿನಿಂದ ನಮ್ಮ ಮನೆಯ ಹೂವು ಕೀಳುವುದನ್ನು ಬಿಟ್ಟರೂ ಬೇರೆ ಮನೆಯ ಹೂ ಕೀಳಲು ಆರಂಭಿಸಿದರೇ ಹೊರತು ಅವರ ಹೂ ಕದಿಯುವ ಚಾಳಿಯನ್ನು ಮಾತ್ರ ಬಿಡಲಿಲ್ಲ!
ಇನ್ನು ಹಳೆಯ ಮಾಸ್ಟರ್ ಕಾಲೇಜಿನ ವಿದ್ಯಾರ್ಥಿಗಳಿಂದ ಮತ್ತೊಂದು ಸಮಸ್ಯೆ ಶುರುವಾಯ್ತು. ಕಾಲೇಜಿನ ಸಮೀಪವೇ ಇದ್ದ ನಮ್ಮ ಮನೆಯ ದಾಸವಾಳದ ಹೂವಿಗೆ ಅಲ್ಲಿಯ ಮಕ್ಕಳು, ತಾಯಂದಿರು, ಹಲವೊಮ್ಮೆ ಅಲ್ಲಿಯ ಲ್ಯಾಬ್ ಸಿಬ್ಬಂದಿಗಳು ಕೂಡ practicalಗೆ ಹೂ ಬೇಕೆಂದು ನಾವು ಮನೆಯ ಒಳಗಿದ್ದರೆ ಸಲೀಸಾಗಿ ಗೇಟ್ ತೆಗೆದು ಬಂದು ಮಳೆಗಾಲದಲ್ಲಂತೂ ಗಾರ್ಡನ್ ಒಳಗೆ ನುಗ್ಗಿ ಮಣ್ಣಾದ ಶೂಗಳಿಂದ ಮನೆಯ ಪೋರ್ಟಿಕೋ ಕೂಡ ಮಣ್ಣುಮಯ ಮಾಡಿ ಹೋಗುತ್ತಿದ್ದರು. ಅದಲ್ಲದೆ ಹೂ ಕಿತ್ತುಕೊಂಡು ಗೇಟ್ ಹಾಕದೇ ಹೋಗಿ ದನ ನುಗ್ಗಿ ಇದ್ದ ಬದ್ದ ಗಿಡವನ್ನೆಲ್ಲಾ ತಿಂದು ಗಾರ್ಡನ್ ಅವಸಾನ ಮಾಡುವುದು ಬೇರೆ! ಏನೋ ಓದುವ ಮಕ್ಕಳು ಎಂದು ಒಬ್ಬರಿಗೋ ಇಬ್ಬರಿಗೋ ಕೊಟ್ಟರೆ ಮರು ದಿನ ಮತ್ತೊಬ್ಬರು! ನಮ್ಮ ಮನೆಯ ಹೂವಿನಿಂದ ಓದುವ ಮಕ್ಕಳಿಗೆ ಅನುಕೂಲವಾದರೆ ಅದೂ ಕೂಡ ದೇವರಿಗೆ ಹೂ ಮುಡಿಸಿದಷ್ಟೇ ಸಾರ್ಥಕ್ಯ. ಆದರೆ ಆ ಮಕ್ಕಳು ಹೇಳದೆ ಕೇಳದೆ ಹೂ ಕಿತ್ತು ಗೇಟ್ ಹಾಕದೆ ದನ ನುಗ್ಗಿ ಗಿಡಗಳು ಹಾಳಾದಾಗ ಎಲ್ಲಿಲ್ಲದ ಸಂಕಟವಾಗುತ್ತಿತ್ತು.

ಇದರಿಂದ ಬೇಸತ್ತ ನಾನು ಒಮ್ಮೆ Master Collegeನ ಗೌಡೇಗೌಡರು ಸಿಕ್ಕಾಗ ಎಲ್ಲವನ್ನೂ ವಿವರಿಸಿ “ಸರ್ ನೀವು ಫೀಸೋ, ಡೊನೇಷನ್ನೋ ತೆಗೆದುಕೊಳ್ಳುವಾಗ ದಾಸವಾಳ ಹೂವಿಗೂ ಸೇರಿಸಿ ತೊಗೊಳ್ಳಿ ಹಾಗೇ ನಿಮ್ಮಲ್ಲೇ ಕೆಲವು ದಾಸವಾಳ ಗಿಡವನ್ನು ಬೆಳಸಿ ಮಕ್ಕಳಿಗೆ ಉಪಯೋಗವಾಗುವಂತೆ ಮಾಡಿ ಇಲ್ಲದಿದ್ದರೆ ನಿಮ್ಮ ವಿದ್ಯಾರ್ಥಿಗಳಿಂದ ನಮ್ಮ ಗಾರ್ಡನ್ ಹಾಳು” ಎಂದು ಹೇಳಿದ್ದೆ ಕೂಡ! ಪಾಪ ಅವರು “ಹೌದಾ ಮೇಡಂ ನಿಮ್ಮಲ್ಲಿಗೆ ಬರ್ತಾರಾ ನನ್ನ ಗಮನಕ್ಕೆ ಬಂದಿಲ್ಲ ಬಿಡಿ” ಎಂದರು. ವೃತ್ತಿಯಲ್ಲಿ ಬೋಧಕರಾದ ಗೌಡೇಗೌಡರು ಈಗ ಪೃವೃತ್ತಿಯಲ್ಲಿ ಗಿಡ ನೆಟ್ಟು ಹಸಿರು ಬೆಳಸಿ ಪರಿಸರ ಉಳಿಸುವ ಕಾಯಕದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದು ಶ್ಲಾಘನೀಯ.
ನಾವು ನೆಟ್ಟು ಬೆಳಸಿದ ಗಿಡದ ಹೂವು ಹಣ್ಷನ್ನು ನೆರೆ ಹೊರೆಯವರಿಗೆ ಸ್ನೇಹಿತರಿಗೆ ಕೊಡಬೇಕೆನಿಸುತ್ತದೆ. ಆದರೆ ಯಾರಾದರೂ ಕದ್ದರೆ ಮಾತ್ರ ತುಂಬಾ ಕೋಪ ಬರುತ್ತದೆ. ಅದೆಲ್ಲಾ ಸರಿ ಇನ್ನು ಈ ವಾಕ್ ಹೋಗುವ ಹಲವರಿಗೆ ತಮ್ಮ ವಾಕ್ ಜೊತೆಗೆ ತಮ್ಮ ಮನೆಯ ಮುದ್ದಿನ ನಾಯಿಯ ಬಹಿರ್ದೆಶೆ ಕಾರ್ಯಕ್ರಮದೊಂದಿಗೆ ಎಲ್ಲರ ಮನೆಯ ಕಾಂಪೌಂಡ್ ಹತ್ತಿರವಿದ್ದ ಕೈಗೆಟಕುವ ಹೂಗಳನ್ನು ಕಿತ್ತುಕೊಂಡು ಹೋಗುವ ಕಾಯಕ ಬೇರೆ. ಅದರಲ್ಲೂ ಕರಿಬೇವಿನ ಗಿಡ ಕಾಂಪೌಂಡ್ ಹತ್ತಿವಿದ್ದರೆ ಅದರ ಕಥೆ ಮುಗಿದಂತೆಯೇ ಬಿಡಿ. ಹಾದಿಯಲ್ಲಿ ಹೋಗುವವರೆಲ್ಲ ಕಿತ್ತು ಮರವನ್ನು ಸ್ಕೆಲಿಟನ್ನಂತೆ ಮಾಡಿ ಬಿಡುತ್ತಾರೆ.!
ಒಮ್ಮೆ ಗಿಡಗಳು ಹೂವಿನ ಕುರಿತು ಕಛೇರಿಯಲ್ಲಿ ಮಾತನಾಡುವಾಗ ಸಹೋದ್ಯೋಗಿಯೊಬ್ಬರು “ನಮ್ಮ ಮನೆಯಲ್ಲಿ ಪೂಜೆಗೆ ಹೂವು ಕೊಳ್ಳುವುದಿಲ್ಲ” ಎಂದರು. “ಹಾಗಾದ್ರೆ ನಿಮ್ಮ ಮನೆಯಲ್ಲಿ ತುಂಬಾ ಹೂವಿನ ಗಿಡ ಇರಬೇಕು ಇಲ್ಲವೆ ನೀವು ನಾಸ್ತಿಕರಿರಬೇಕು” ಎಂದೆ. “ಇಲ್ಲಪ್ಪಾ ನಮ್ಮದು ಬಾಡಿಗೆ ಮನೆ, ಗಿಡ ಹಾಕಲು ಜಾಗ ಎಲ್ಲಿ?” ಎಂದರು. “ಹೌದಾ, ಹಾಗಾದ್ರೆ ಪೂಜೆಗೆ ಹೂವು ಕೊಳ್ಳುವುದಿಲ್ಲ ಎಂದಿರಿ ಮತ್ತೆ?” ಎಂದೆ. “ನಮ್ಮ ತಂದೆ ಬೆಳಗ್ಗೆ ವಾಕ್ ಹೋಗ್ತಾರಲ್ಲ ತರಾವರಿ ಹೂಗಳನ್ನ ಕಿತ್ತುಕೊಂಡು ಬರ್ತಾರೆ” ಎಂದರು. “ಅಂದ್ರೆ ಬೇರೆಯವರ ಮನೆ ಹೂ ಕದ್ಕೊಂಡು ಬರ್ತಾರಾ?” ಅಂದೆ. ಅದಕ್ಕವರು ತಮಾಷೆಯಾಗಿ ಇಲ್ಲ ಇಲ್ಲಾ ಕದಿಯಲ್ಲಪ್ಪಾ ಕಿತ್ಕೊಂಡು ಬರ್ತಾರೆ ಅಷ್ಟೆ!” ಎಂದರು. ಹಲವು ಹಿರಿಯರಿಗೆ “walking ಜೊತೆಗೆ flower plucking ” ಹವ್ಯಾಸ ಬೇರೆ ಇರುತ್ತೆ ಎನಿಸಿತು!.
ಏನೇ ಆಗಲಿ ಹಸಿರೇ ಉಸಿರು ಅಂಗಳದಲ್ಲೋ ತಾರಸಿಯಲ್ಲೋ ಒಂದಿಷ್ಟು ಗಿಡ ಬೆಳಸಿ ಅವುಗಳೊಂದಿಗೆ ತುಸು ಸಮಯ ಕಳೆದರೆ ಆರೋಗ್ಯದ ಜೊತೆಗೆ ಮನೆಗೆ ಅಗತ್ಯವಾದ ಹೂವೋ ತರಕಾರಿಯೋ ಸಿಕ್ಕರೆ
ಅದೆಷ್ಟು ಚಂದ. ಕದಿಯುವ ಹವ್ಯಾಸಕ್ಕಿಂತ ಬೆಳೆಸುವ ಹವ್ಯಾಸ ಒಳಿತಲ್ಲವೇ? ನೀವೂ ಗಿಡ ಬೆಳಸಿದ್ದರೆ ನಿಮಗೂ ಈ ಅನುಭವ ಆಗಿರಬೇಕಲ್ಲವಾ? ಗಿಡ ನೆಟ್ಟು, ಬೆಳಸಿ, ಪರಿಸರ ಉಳಿಸಿ ಶುದ್ಧ ಗಾಳಿ ಪಡೆದು ಆರೋಗ್ಯವಂತರಾಗುವ ಏನಂತೀರಿ? ಹೂವಿಲ್ಲದಿದ್ದರೂ ಸರಿಯೇ ಎರವರ ಮನೆಯ ಹೂ ಕದ್ದು ಹೂಗಳ್ಳರಾಗೋದು ಬೇಡ ಅಲ್ವಾ? “ಪರರ ಮನೆಯಂಗಳದ ಹೂವ ಕದ್ದು ಮನೆಯ ದೈವಕೆ ಮುಡಿಸಿದರೆ ದೈವ ಮೆಚ್ಚುವನೇ, ಒಲಿಯುವನೇಹರಾ ಹರಾ ಶ್ರೀ ಕೈವಲ್ಯೇಶ್ವರಾ”.






0 Comments