ರವಿ ಮಡೋಡಿ ಹೊಸ ಕಥೆ ‘ಕಾಣದ ಕಡಲಿನಲೆ’

ರವಿ ಮಡೋಡಿ

**

ತಿಳಿಸಾರನ್ನು ಎರಡನೇ ಸಲ ವಿಚಾರಿಸುವುದರೊಳಗೆ ಆ ಘಟನೆ ನಡೆದು ಬಿಟ್ಟಿತ್ತು. ಮದುವೆ ಮನೆಯ ಪಂಕ್ತಿಯಲ್ಲಿ ಊಟ ಮಾಡುತ್ತಿದ್ದವರಿಗೆ ಆ ಕ್ಷಣ ಏನಾಯಿತು ಎಂಬುದು ಅರಿವಾಗದೇ ಎಲ್ಲರೂ ಆ ದಿಕ್ಕಿನಡೆಗೆ ನೋಡುತ್ತಿದ್ದರು. ಅರೆ ನಿಮಿಷದಲ್ಲಿ ಗುಂಪುಗಟ್ಟಿ ಸುತ್ತುವರೆದು ಯಾರೋ ಒಬ್ಬರು ನೀರು ತನ್ನಿ ಎಂದೋ, ಬಟ್ಟೆಯಲ್ಲಿ ಸುತ್ತಿ ಎಂದೋ ತಲೆಗೊಂದು ಮಾತುಗಳನ್ನು ಆಡುತ್ತಿದ್ದರೂ ಹೊರಗಡೆ ಇದ್ದವರಿಗೆ ಎಲ್ಲವೂ ಅಸ್ಪಷ್ಟವಾದಂತಿದ್ದವು. ಊಟಕ್ಕೆ ಕುಳಿತವರ ಮಧ್ಯದಲ್ಲಿ ಗುಸುಗುಸು, ಪಿಸುಪಿಸುಗಳ ಸಣ್ಣ ಗದ್ದಲ ಗೊಂದಲ ಉಂಟಾಗಿ ಊಟ ಮಾಡುವುದೋ ಬಿಡುವುದೋ ಎಂದು ತಿಳಿಯದೆ ಮುಖ ಮುಖ ನೋಡಿಕೊಳ್ಳುತ್ತಿದ್ದರು. ಕೆಲವರು ಆ ಕಡೆಗೆ ಓಡಿದರು. ಕೆಲವರು ಎದ್ದು ನಿಂತರು. ಏನಾಯಿತು ಏನಾಯಿತು ಎಂದು ಹತ್ತಾರು ಬಾರಿ ವಿಚಾರಿಸಿದ ಮೇಲೆ ಬಿಸಿ ಸಾರಿನ ಪಾತ್ರೆಗೆ ಮಗುವೊಂದು ಬಿತ್ತು ಎಂದು ತಿಳಿದು ಕೊನೆಯ ಪಂಕ್ತಿಯ ಕೊನೆಯಲ್ಲಿ ಕುಳಿತಿದ್ದ ನನ್ನನ್ನು ಆ ಆತಂಕ ಒಂದು ಕ್ಷಣಕ್ಕೆ ಮೈಯನ್ನು ಕಂಪಿಸಿಬಿಟ್ಟಿತ್ತು. ಊಟ ಮಾಡಿಸಿ ಮಲಗಿಸಿದ್ದ ಮಗಳು ಎಲ್ಲಿಯಾದರೂ ನನ್ನನ್ನು ಹುಡುಕುತ್ತ ಈ ಕಡೆಗೆ ಬಂದು ಏನಾದರೂ ಆಗಿಬಿಟ್ಟಿತೋ ಎಂದೆಲ್ಲ ಅನ್ನಿಸಿ ಅಧೀರನಾಗಿದ್ದೆ. ನನ್ನ ಊಟವನ್ನು ಅರ್ಧಕ್ಕೆ ಬಿಟ್ಟು ಆ ಕಡೆಗೆ ಓಡಿದ್ದೆ. ಬಂದು ನೋಡುವಾಗ ಅದು ನನ್ನ ಮಗಳಲ್ಲ ಎನ್ನುವಾಗಲೇ ನನ್ನ ಉಸಿರು ಸಡಿಲವಾಗಿದ್ದು.

ಅಲ್ಲಿ ಸಾರಿನ ಬಕೇಟ್ ಅಡ್ಡಾದಿಡ್ಡಿಯಾಗಿ ಬಿದ್ದಿತ್ತು. ರಣಾಂಗಣದ ರಕ್ತಸಿಕ್ತ ನೆಲವನ್ನು ನೆನಪಿಸುವಂತೆ ಸಾರು ಆ ನೆಲದಲ್ಲಿ ಚೆಲ್ಲಿತ್ತು. ಉಪ್ಪಿನಕಾಯಿ ಪಾತ್ರೆಯನ್ನು ಹಿಡಿದಿದ್ದ ನಡುವಯಸ್ಸಿನ ಹೆಂಗಸೊಬ್ಬಳು ಅಸ್ಥಿರಳಾಗಿ ಗಡಗಡನೇ ನಡುಗುತ್ತ ಬದಿಯಲ್ಲಿ ನಿಂತಿದ್ದಳು. ಯಾರ್ಯಾರೋ ಅವಳಿಗೆ ಏನೇನೋ ಮಾತುಗಳನ್ನು ಹೇಳುತ್ತಿದ್ದರು. ಈ ಘಟನೆಗೆ ಅವಳೇ ಕಾರಣಳೆಂದು ಆ ಸನ್ನಿವೇಶವೇ ಹೇಳುವಂತಿತ್ತು. ನಾನು ಏನಾಯಿತು ಎಂದು ಪಕ್ಕದಲ್ಲಿ ನಿಂತಿದ್ದವನಲ್ಲಿ ಕೇಳಿಕೊಂಡೆ. ಎರಡನೇ ಬಾರಿ ಸಾರನ್ನು ವಿಚಾರಣೆ ಆರಂಭಿಸುವ ಮುನ್ನ ಪಂಕ್ತಿಯಲ್ಲಿ ಕುಳಿತಿದ್ದ ಯಾರೋ ಉಪ್ಪಿನಕಾಯಿ ಕೇಳಿದರೆಂದು ಸಾರಿನ ಪಾತ್ರೆಯನ್ನು ಅಲ್ಲಿಯೇ ಇರಿಸಿ ಅವಳು ಅಡುಗೆಮನೆಗೆ ತರುವುದಕ್ಕೆ ಹೋಗಿದ್ದಳಂತೆ. ಮಗುವೊಂದು ಆಡುತ್ತ ಆಡುತ್ತ ಬಂದು ಪಾತ್ರೆಯ ಮೇಲೆ ಬಿದ್ದು, ಬಿಸಿ ಸಾರು ಮಗುವಿನ ಮೈಯನ್ನು ಬೇಯಿಸಿತಂತೆ. ಆದರೆ ಆ ಕ್ಷಣದಲ್ಲಿ ಎಚ್ಚೆತ್ತುಕೊಂಡಿದ್ದರಿಂದ ಹೆಚ್ಚಿನ ಅಪಾಯವಾಗಲಿಲ್ಲ ಎಂಬ ವರದಿಯನ್ನೂ ಪಡೆದುಕೊಂಡಿದ್ದೆ. ಸದ್ಯ ಏನೂ ಆಗದಿರುವುದು ನನಗೂ ಸಮಾಧಾನ ತಂದಿತ್ತು. ನಾನಂದುಕೊಳ್ಳುತ್ತಿದ್ದೆ. ಪೂರ್ಣವಾಗಿ ಆ ಘಟನೆಗೆ ಅವಳ ತಪ್ಪೆಂದು ಸಾರಿಬಿಡುವುದಕ್ಕೆ ಮನಸ್ಸು ಒಪ್ಪುತ್ತಿರಲಿಲ್ಲ.

ಬಹುಶಃ ಹೀಗೆಲ್ಲ ಆಗಬಹುದು ಎನ್ನುವ ಕಲ್ಪನೆಯಂತೂ ಅವಳಿಗೆ ಇರದೆ ಅಚಾತುರ್ಯವಾಗಿ ನಡೆದುಬಿಟ್ಟಿತು ಎಂದುಕೊಂಡೆ. ನಾನು ಅವಳ ಮುಖವನ್ನೇ ನೋಡುತ್ತಿದ್ದೆ. ತನ್ನಿಂದ ಆದ ತಪ್ಪಿಗಾಗಿ ಪಶ್ಚಾತಾಪದ ಉರಿಯಲ್ಲಿ ಬೆಂದು ಬಸವಳಿದಿದ್ದಳು. ಇದಕ್ಕಿಂತ ಹೆಚ್ಚಾಗಿ ಈ ಹಿಂದೆ ಅವಳನ್ನು ಎಲ್ಲಿಯೋ ನೋಡಿರುವಂತೆ, ಮಾತಾಡಿರುವಂತೆ ಅನಿಸಿತು. ಗಂಟಲನ್ನು ಒತ್ತಿ ಯಾರೆಂದು ನನ್ನನ್ನೆ ಕೇಳಿಕೊಂಡಾಗ ಇದು ನಮ್ಮ ನಳಿನಿ ಎಂದು ತಿಳಿಯುವಾಗ ಹೆಚ್ಚು ಹೊತ್ತು ಹಿಡಿದಿರಲಿಲ್ಲ. ಪರವೂರಿನಲ್ಲಿ ನನ್ನ ಸ್ನೇಹಿತನೊಬ್ಬನ ಮದುವೆಯಲ್ಲಿ ನಳಿನಿಯನ್ನು ಈ ಸ್ಥಿತಿಯಲ್ಲಿ ಕಾಣಬಹುದೆಂದು ನಾನಂತೂ ಅಂದುಕೊಂಡಿರಲಿಲ್ಲ. ಊಹೆಗೂ ಮೀರಿ ಅವಳ ಮುಖದ ವರ್ಚಸ್ಸು, ಉಡುಗೆತೊಡುಗೆಗಳು ಪೂರ್ಣವಾಗಿ ಬದಲಾಗಿದ್ದು ಅವಳ ಬಗೆಗಿನ ನನ್ನ ಮನದೊಳಗಿನ ಚಿತ್ರವನ್ನೇ ಮರೆಸಿದಂತಿತ್ತು. ನಳಿನಿ ಎಂದಾಕ್ಷಣ ನನ್ನೊಳಗೆ ಏನೋ ಒಂದು ತಿಳಿಯಲಾರದ ಭಾವ ಸದ್ದಿಲ್ಲದೆ ಉಜ್ವಲಗೊಳ್ಳುವುದು ನನಗೆ ತಿಳಿಯದ ವಿಚಾರವೇನೂ ಆಗಿರದಿದ್ದರೂ ಅದು ಏನು ಎಂದು ಗುರುತಿಸಿ ಪೋಷಿಸಿದ ಬದುಕಿನ ಕುರುಹುಗಳು ಎನ್ನಬಹುದೇನೋ.

ಅದು ಅವಳ ಬಗ್ಗೆ ನನಗಿರುವ ಗೌರವವೋ, ಅನುಕಂಪವೋ, ಮಮತೆಯೋ ಯಾವ ಭಾವವೆನ್ನುವುದು ಖಚಿತವಾಗಿ ನನ್ನಿಂದ ಹೇಳುವುದಕ್ಕೆ ಸಾಧ್ಯವಿರಲಿಲ್ಲ. ಎಷ್ಟೋ ಬಾರಿ ಅನ್ನಿಸುತ್ತದೆ, ಬರೀ ಕಲ್ಪನೆಗಳಲ್ಲಿಯೇ ಜೀವನ ನಡೆಸುವಂತಿದ್ದರೆ ಈ ಅಸಹಜ ಸ್ಥಿತಿಗಳು, ಪರಿಭಾವಗಳ ಸ್ಥಿತಿಗಳನ್ನೆಲ್ಲ ಅರ್ಥಹೀನವಾಗಿಸುವುದಕ್ಕೆ ಸಾಧ್ಯವಿತ್ತೆಂದು. ನಳಿನಿಯನ್ನು ಕಾಣುವಾಗ ಈ ಮಾತು ಅನ್ವಯಿಸಲೇಬೇಕೆಂದೆನಿಸುತ್ತದೆ. ನಳಿನಿ ನನಗಿಂತ ಮೂರು ವರುಷ ಹಿರಿಯವಳು. ನನಗಿಂತ ಎರಡು ತರಗತಿ ಮುಂದಿದ್ದ ಅವಳು ಹೆಚ್ಚು ಆಪ್ತಳಾಗಿದ್ದು ಹೈಸ್ಕೂಲಿನಲ್ಲಿ ನಾವು ಮಾಡುತ್ತಿದ್ದ ನಾಟಕಗಳಿಂದ. ಅವಳು ನಟನೆಯನ್ನು ಅತ್ಯುತ್ತಮವಾಗಿ ಮಾಡುತ್ತಾಳೆಂದು, ಆ ವಯಸ್ಸಿನಲ್ಲಿ ಅವಳು ಪ್ರಬುದ್ದವಾಗಿ ನಟನೆ ಮಾಡುತ್ತಾಳೆಂದು ದೊಡ್ಡವರೆಲ್ಲ ಹೇಳುತ್ತಿದ್ದರು. ಅವರ ಮಾತುಗಳನ್ನು ಕೇಳುವಾಗ ನನಗೂ ಹಾಗೆಯೇ ಅನಿಸಿ ಒಂದರ್ಥದಲ್ಲಿ ಅಭಿಮಾನಿಯಾಗಿಬಿಟ್ಟಿದ್ದೆ. ನಮ್ಮ ನಾಟಕ ತಂಡದಲ್ಲಿ ಅವಳದ್ದು ಮುಖ್ಯ ಪಾತ್ರವಾಗಿದ್ದರೆ, ನನ್ನ ಹಾಗೂ ಬೇರೆ ಸ್ನೇಹಿತರದ್ದು ಉಳಿದ ಪಾತ್ರಗಳನ್ನು ಮಾಡುವುದಾಗಿತ್ತು. ಆಗ ನಾವು ಸೀತೆ ಎನ್ನುವ ನಾಟಕವನ್ನು ಮಾಡುತ್ತಿದ್ದೆವು. ಅದರಲ್ಲಿ ಅವಳದ್ದೇ ಸೀತೆಯ ಪಾತ್ರ.

ತನಗೆ ಉಂಟಾದ ಕಷ್ಟ, ಸಂಕಷ್ಟಗಳನ್ನು ಎಲ್ಲಿಯೂ ರಾಮನಿಂದ ಉಂಟಾಗಿದ್ದು ಎಂಬುದನ್ನು ತೊರಗೊಡದೆ ರಾಮನ ವ್ಯಕ್ತಿತ್ವಕ್ಕೊಂದು ಘನತೆಯನ್ನು ತಂದುಕೊಡುತ್ತಿದ್ದಳು. ಎಷ್ಟೋ ವರುಷಗಳ ನಂತರ ಈಗಲೂ ಆ ಸನ್ನಿವೇಶಗಳು ಮನಸ್ಸಿನಲ್ಲಿ ಸ್ಪುಟವಾಗಿ ಅರಳಿ ನಿಂತಿರುವುದು ಅವಳ ಪ್ರತಿಭೆಯನ್ನು ಸಾರುವಂತಿದೆ. ನಾಟಕ ಮುಗಿಯುವುದರೊಳಗೆ ಸೀತೆಯನ್ನು ಎಲ್ಲರ ಹೃದಯಲ್ಲಿ ಸ್ಥಾಪಿಸಿ, ಶಾಶ್ವತವಾಗಿ ಉಳಿಯುವಂತೆ ಮಾಡುತ್ತಿದ್ದಳು. ರಾಮನ ಪಾತ್ರವನ್ನು ಮಾಡುತ್ತಿದ್ದ ನನಗೆ ಸೀತೆಯನ್ನು ಕಾಡಿಗೆ ಅಟ್ಟುವ ಸನ್ನಿವೇಶದಲ್ಲಿ ಅವಳ ಅಭಿನಯಕ್ಕೆ ಮೂಕನಾಗಿ ನಾನೇ ಭಾವಾವೇಶಕ್ಕೆ ಒಳಗಾಗುತ್ತಿದ್ದೆ. ನಮ್ಮ ತಲ್ಲಣಗಳನ್ನು ಅವಳು ಪ್ರೇಕ್ಷರಿಗೆ ಕಾಣದಂತೆ ಮಾಡಿ, ರಂಗದಲ್ಲಿಯೇ ನನ್ನನ್ನು ಪ್ರೋತ್ಸಾಹಿಸುತ್ತ ನನ್ನ ಪಾತ್ರವನ್ನೂ ಗೆಲ್ಲುವಂತೆ ಮಾಡುತ್ತಿದ್ದಳು. ಅವಳ ಹಾಗೂ ರಂಗಪ್ಪ ಮೇಷ್ಟ್ರ ಕಾರಣದಿಂದಲೇ ನಮ್ಮ ಶಾಲೆಯ ನಾಟಕದ ತಂಡವು ಜಿಲ್ಲಾ ಮಟ್ಟದಲ್ಲಿ ಹೆಸರನ್ನು ಪಡೆದು, ದೊಡ್ಡ ದೊಡ್ಡ ವೇದಿಕೆಗಳಲ್ಲಿ ಪ್ರದರ್ಶನಕ್ಕೆ ಅವಕಾಶಗಳು ಸಿಕ್ಕಿದ್ದವು. ಹತ್ತನೇ ತರಗತಿ ಮುಗಿಸುವ ವೇಳೆಗೆ ನನ್ನ ಅಭಿರುಚಿ ಸಂಪೂರ್ಣ ಬದಲಾಗಿಬಿಟ್ಟಿತ್ತು. ಮನೆಯವರ ಕಾರಣದಿಂದಲೋ ಏನೋ ಓದಿನತ್ತಲೇ ಹೆಚ್ಚು ಮನಸ್ಸು ಹರಿದು ಇಂಜಿನಿಯರಿಂಗ್ ಮಾಡಬೇಕು ಎಂದೆಲ್ಲ ಮೊಳಕೆ ಕಟ್ಟಿದ್ದರಿಂದ ನನ್ನೊಳಗಿನ ನಾಟಕದ ಅಭಿರುಚಿ ನೆಲಕ್ಕೆ ಬೇರೂರಲೇ ಇಲ್ಲ.

ಆಗ ನಾನು ಮುಂದೇನು ಮಾಡುತ್ತೀಯಾ ನಳಿನಿಯನ್ನು ಕೇಳಿದ್ದೆ. ತನಗೆ ನಾಟಕದಲ್ಲಿ ಏನಾದರೂ ಮಾಡಬೇಕು ಕಣೋ ಒಂದು ಲೈನಿನ ಉತ್ತರವನ್ನು ಹೇಳಿದ್ದಳು. ನಿನ್ನ ನಟನೆ ಚೆನ್ನಾಗಿಯೇ ಇರುವುದರಿಂದ ನಿನಗೆ ಒಳ್ಳೆಯ ಭವಿಷ್ಯವೂ ಇದೆ ಎಂದು ನಾನು ಹೇಳಿದ್ದೆ. ಅನಂತರ ನಾನು ಇಂಜಿನಿಯರಿಂಗ್, ಕೆಲಸ ಎಂದೆಲ್ಲ ಬೇರೆ ಬೇರೆ ಕಡೆಗೆ ಹೋಗಿದ್ದರಿಂದ ನಳಿನಿ ಸಂಪರ್ಕದಲ್ಲಿಯೇ ಇರಲಿಲ್ಲ. ಎಷ್ಟೋ ವರುಷದ ನಂತರ ಊರಿಗೆ ಬಂದಾಗ ಯಾವಾಗಲೋ ಒಮ್ಮೆ ಸಿಕ್ಕಿದ್ದಳು. ತಾನು ಡಿಗ್ರೀ ಏನೋ ಮಾಡುತ್ತಿರುವುದಾಗಿ ಹೇಳಿದ್ದಳು. ಆಮೇಲೆ ಒಂದು ದಿನ ಅವಳು ನಮ್ಮ ಮನೆಗೆ ತನ್ನ ಮದುವೆ ಕರೆಯುವುದಕ್ಕೆ ಬಂದಿದ್ದಳಂತೆ. ಮದುವೆಯ ಕರೆಯೋಲೆಯನ್ನು ಕೊಟ್ಟು ನನಗೂ ಹೇಳುವಂತೆ ಹೇಳಿದ್ದಳೆಂದು ಅಮ್ಮ ಇನ್ಯಾವಾಗಲೋ ಹೇಳಿದ್ದಳು. ಹುಡುಗ ಊರಿನ ಮಾಧವನನ್ನೇ ಆಗಿದ್ದರಿಂದ ಮದುವೆಯಾದ ಮೇಲೂ ಅವಳು ನಮ್ಮೂರಿನಲ್ಲಿ ಇದ್ದಳು ಎಂಬುದು ಮಾತ್ರವಷ್ಟೇ ತಿಳಿದಿತ್ತು. ಎಷ್ಟೋ ವರುಷದ ನಂತರ ನಳಿನಿ ಮತ್ತೆ ಸಂಪರ್ಕಕ್ಕೆ ಸಿಕ್ಕಿದ್ದು ಕಾರಿನ ಕಾರಣಕ್ಕಾಗಿತ್ತು. ನಳಿನಿಯ ಗಂಡ
ಮಾಧವನಿಗೂ ನನಗೂ ಗಾಢವಾದ ಆತ್ಮೀಯತೆಯಾಗಲಿ ಸ್ನೇಹವಾಗಲಿ ಇರಲಿಲ್ಲವಾಗಿದ್ದರೂ ಈ ಕಾರಿನ ವ್ಯವಹಾರದ ಕಾರಣಕ್ಕೆ ನಾಲ್ಕಾರು ಬಾರಿ ಮಾತುಗಳನ್ನು ಆಡುವ ಅವಕಾಶ ಸಿಕ್ಕಿತ್ತು. ನನ್ನ ಕಾರನ್ನು ಮಾರುವ ವಿಚಾರ ಮಾಧವನಿಗೆ ಹೇಗೋ ಗೊತ್ತಾಗಿ ನನ್ನನ್ನು ಸಂಪರ್ಕಿಸಿದ್ದ. ನಾನು ಪ್ರೀತಿಯಿಂದ ಕೊಂಡುಕೊಂಡಿದ್ದ ಕಾರನ್ನು ಯಾರಾದರೂ ಗೊತ್ತಿದ್ದವರೇ ಕೊಂಡರೆ ಎಂಬ ಭಾವನೆ ಇದ್ದಿದ್ದರಿಂದಲೋ ಏನೋ ಮಾತುಕತೆಗಳೇನೂ ಹೆಚ್ಚು ನಡೆಯದೆ ಕಾರನ್ನು ಅವನಿಗೆ ಮಾರಿದ್ದೆ.

ಆಗತಾನೇ ಡ್ರೈವಿಂಗ್ ಕಲಿಯುತ್ತಿದ್ದ ಮಾಧವ ಬೆಂಗಳೂರಿನಿಂದ ಊರಿಗೆ ಕಾರ್ ತೆಗೆದುಕೊಂಡು ಹೋಗುವುದು ಕಷ್ಟ ಎಂದಿದ್ದಕ್ಕೆ ಅವರ ಮನೆಯ ಬಾಗಿಲಿನವರೆಗೆ ಕಾರನ್ನು ಮುಟ್ಟಿಸಿದ್ದೆ. ಮನೆಗೆ ಹೊಸ ಕಾರು ಬಂದಿದ್ದಕ್ಕೆ ಖುಷಿಯಲ್ಲಿ ಮಾಧವ, ನಳಿನಿಯ ಮಕ್ಕಳಿಬ್ಬರ ಸಂತೋಷವನ್ನು ನೋಡಿ ನನಗೊಂದು ಸಾರ್ಥಕತೆ ಕಂಡಿತ್ತು. ಕಾರಿನ ಪೂಜೆಗೆ ನಾನು ಬರಬೇಕೆಂದು ಒತ್ತಾಯಿಸಿದ್ದರಿಂದ ಇಲ್ಲವೆನ್ನಲಾಗದೇ ದೇವಸ್ಥಾನಕ್ಕೂ ಕೂಡ ಹೋಗಿ ಬಂದಿದ್ದೆ. ಇದೆಲ್ಲ ಆಗಿ ಆರೇಳು ವರುಷಗಳು ಕಳೆದಿರಬಹುದು. ಮತ್ತೆ ಯಾವತ್ತೂ ಅವಳನ್ನು ನೋಡಿಯೇ ಇರಲಿಲ್ಲ. ಮದುವೆಮನೆಯಲ್ಲಿ ಅರ್ಧ ನಿಂತಿದ್ದ ನನ್ನ ಊಟವನ್ನು ಮತ್ತೆ ಮಾಡಬೇಕು ಎಂದೆನಿಸಲಿಲ್ಲ. ಅದು ನಳಿನಿಯನ್ನು ಆ ಸ್ಥಿತಿಯಲ್ಲಿ ನೋಡಿದ ಕಾರಣಕ್ಕೋ, ಆ ಗಲಾಟೆಯಲ್ಲಿ ಹಸಿವು ನಿಂತಿದಕ್ಕೋ ಏನೋ ಮತ್ತೆ ಊಟ ಬೇಡವೆನಿಸಿತ್ತು. ನಿಂತಿದ್ದವರೆಲ್ಲ ಒಬ್ಬೊಬ್ಬರಾಗಿ ಚದುರಿದರು. ಸಾರು ಬಿದ್ದ ಸ್ಥಳವನ್ನು ಯಾರೋ ಸ್ವಚ್ಚಗೊಳಿಸಿದ್ದರು. ಅರೆ ಕ್ಷಣದಲ್ಲಿ ಇಲ್ಲೊಂದು ಅವಘಡವಾಗಿತ್ತು ಎಂಬ ಕುರುಹು ಕೂಡ ಇರದೆ ಆ ಹಿಂದಿನ ಕ್ಷಣದ ಆತಂಕವನೆಲ್ಲ ಡಸ್ಟರ್ ನಿಂದ ಒರೆಸಿ ಹಾಕುವಂತಿತ್ತು. ತಲೆಯನ್ನು ಬಗ್ಗಿಸಿಕೊಂಡು ಮತ್ತೆ ನಳಿನಿ ಬಕೇಟಿನಲ್ಲಿ ಸಾರನ್ನು ಹಿಡಿದು ಪಂಕ್ತಿಯಲ್ಲಿ ಓಡಾಡುತ್ತಿದ್ದಳು. ಅವಳನ್ನು ನೋಡಿ ನನಗೊಮ್ಮೆ ಅಬ್ಬಾ ಎನಿಸಿಬಿಟ್ಟಿತು. ಅವಳ ಸ್ಥಿರತೆ ಮತ್ತು ಧೈರ್ಯಕ್ಕೆ ನಿಬ್ಬೆರಗಾಗಿ ಹೋಗಿದ್ದೆ. ಕಲಾವಿದ ಮಾತ್ರವೇ ತನ್ನೊಳಗಿನ ಪರಿಭವಗಳನ್ನು ದೂರೀಕರಿಸಿಕೊಂಡು ಏನೂ ಆಗದವರಂತೆ ಇರುವುದಕ್ಕೆ ಸಾಧ್ಯ ಎಂದು ಅವಳು ತೋರಿಸಿದಂತಿತ್ತು. ಬಡಿಸುತ್ತಿದ್ದ ಅವಳ ಮುಖವನ್ನೇ ಊಟಕ್ಕೆ ಕುಳಿತಿದ್ದವರು ದಿಟ್ಟಿಸಿ ನೋಡುತ್ತಿದ್ದರು. ಅದು ಅವಳಿಗೂ ತಿಳಿಯದಿರುವುದಕ್ಕೆ ಸಾಧ್ಯವೇ ಎಂದುಕೊಂಡೆ. ಆ ಹೊತ್ತಿನಲ್ಲಿ ಅವಳ ತಲೆಯಲ್ಲಿ ಏನೆಲ್ಲ ಓಡಾಡುತ್ತಿರಬಹುದು ಎಂಬ ಕುತೂಹಲವೇ ನನ್ನನ್ನು ಹೆಚ್ಚು ಚಕಿತಗೊಳಿಸಿತ್ತು.

ಸುಖದ ಸುಪ್ಪತ್ತಿಗೆಯಲ್ಲಿ ಸಾಗುತ್ತಿದ್ದ ನಳಿನಿ ಬದುಕಿನಲ್ಲಿ ಹೀಗೊಂದು ವಿಪ್ಲವ ಏಳಬಹುದು ಎಂಬುದನ್ನು ನನಗಂತೂ ಊಹಿಸುವುದಕ್ಕೆ ಸಾಧ್ಯವಿರಲಿಲ್ಲ. ನಾಲ್ಕು ವರುಷದ ಹಿಂದೆ ಊರಿಗೆ ಹೋಗಿದ್ದಾಗ ಅಮ್ಮ ಅಸ್ಪಷ್ಟವಾಗಿ ಹೇಳುವಾಗ ನಿಜವಾಗಿಯೂ ಆಘಾತಗೊಂಡಿದ್ದೆ. ಎರಡು ಮಕ್ಕಳ ತಾಯಿ ನಳಿನಿ ಯಾರೊಂದಿಗೋ ಓಡಿ ಹೋದಳಂತೆ ಎಂಬುದನ್ನು ಒಮ್ಮೆಗೆ ನಂಬಲು ಸಾಧ್ಯವೇ ಇರಲಿಲ್ಲ. ನಳಿನಿ ಹೀಗೇಕೆ ಮಾಡಿಕೊಂಡಳು? ಅಂತಹ ಸಮಸ್ಯೆ ಏನಿರಬಹುದು? ಗಂಡ ಹೆಂಡತಿಯ ಮಧ್ಯ ಯಾವುದಾದರೂ ಬಿರುಕು ಬಂದಿತ್ತೆ? ಏನೆಂಬುದು ಸರಿಯಾಗಿ ಅರ್ಥವಾಗಲಿಲ್ಲ. ಆರೇಳು ವರುಷದ ಹಿಂದೆ ನನ್ನ ಕಾರನ್ನು ಅವರಿಗೆ ಕೊಡುವಾಗ ಅವರ ಮಧ್ಯೆ ಭಿನ್ನ ಧ್ವನಿಗಳಾಗಲಿ, ಬಿರುಕಾಗಿಲಿ ಅವರಿಬ್ಬರ ನಡುವೆ ಇದ್ದಂತೆ ನನಗೇನು ಕಾಣಿಸಿರಲಿಲ್ಲ. ಇಬ್ಬರೂ ಮಕ್ಕಳನ್ನು ಅತೀವವಾಗಿ ಪ್ರೀತಿಸುತ್ತಿದ್ದರು. ಗಂಡ ಮಾಧವನು ಅವಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ನಳಿನಿಗೋಸ್ಕರವಾಗಿಯೇ ತಾನು ಕಾರನ್ನು ಕೊಳ್ಳುತ್ತಿರುವುದು ಎಂದೆಲ್ಲ ಹೇಳಿಕೊಂಡಿದ್ದ. ಅದಕ್ಕೂ ಮಿಗಿಲಾಗಿ ಮದುವೆಯಾಗಿ ಹತ್ತೋ ಹನ್ನೆರಡು ವರುಷಗಳಾಗಿ, ಮಕ್ಕಳ ಭವಿಷ್ಯದ ಬಗ್ಗೆ ಕನಸು ಕಾಣುವ ಆ ಸಮಯದಲ್ಲಿ, ನಳಿನಿ ಹೀಗೊಂದು ಬದುಕಿನ ಬಗ್ಗೆ ನಿರ್ಣಯವನ್ನು ಹೇಗೆ ಮಾಡುವುದಕ್ಕೆ ಸಾಧ್ಯ ಎಂಬುದು ನನಗೆ ಸೋಜಿಗದ ಸಂಗತಿಯಾಗಿತ್ತು. ಪೇಟೆಯಲ್ಲಿಯೇ ಬದುಕುವ ನನ್ನಂತವನಿಗೆ ಬ್ರೇಕ್ ಅಪ್, ವಿಚ್ಛೇದನ ಪದಗಳೆಲ್ಲ ಹೊಸದೆನಿಸುವುದಿಲ್ಲ. ಇಂದಿನ ಸಮಾಜದಲ್ಲಿ ಅದಕ್ಕೆಲ್ಲ ಯಾವ ದೊಡ್ಡ ಅರ್ಥವೂ ಇದ್ದಂತೆ ಅನಿಸುವುದಿಲ್ಲ ಆದರೆ ಹಳ್ಳಿಯಲ್ಲಿದ್ದವರಿಗೆ ಹೊಂದಾಣಿಕೆಯನ್ನು ಬದುಕಿನ ತುಂಬೆಲ್ಲ ಹಾಸಿ, ತಣ್ಣೀರನ್ನೇ ತಣಿಸಿ ಕುಡಿಯುವ ವ್ಯಕಿತ್ವದವರಲ್ಲಿ ಹೀಗೊಂದನ್ನು ಊಹಿಸುವುದಕ್ಕೆ ಕಷ್ಟವಾಗಿತ್ತು. ಇದನ್ನೆಲ್ಲ ಮೀರಿ ತನ್ನ ಸಂಸಾರವನ್ನು, ಮಕ್ಕಳನ್ನು ಮರೆತು, ತಾನೇ ಕೈಯಾರೆ ಹಾಳುಗೆಡವಿಕೊಂಡು ಹೋಗುವಷ್ಟು ನಳಿನಿ ಬುದ್ಧಿಹೀನಳಾಗಿ ನನಗಂತೂ ಕಾಣಿಸಿರಲಿಲ್ಲ.

ಅವಳ ಆ ಪ್ರಕರಣದ ನಂತರ ನಮ್ಮೂರನ್ನು ಬಿಟ್ಟು ಈ ಪೇಟೆಯನ್ನು ಸೇರಿದ್ದು ತನ್ನ ಮಾನವನ್ನು ರಕ್ಷಿಸಿಕೊಳ್ಳುವುದಕ್ಕೇ ಇರಬೇಕು ಎಂದೆನಿಸಿತು. ಆ ಪ್ರಕರಣದ ನಂತರ ಅವಳು ನಮ್ಮೂರಿಗೆ ಬಂದಿದ್ದಾಗಲಿ, ಯಾರಾದರೂ ಅವಳನ್ನು ಕಂಡಿದ್ದಾಗಲಿ, ಮಾತಾಡಿಸಿದ್ದಾಗಿ, ಹೇಳಿದ್ದಾಗಲಿ ನಾನಂತೂ ಕೇಳಿರಲಿಲ್ಲ. ಯಾವನ ಜೊತೆಗೋ ಓಡಿ ಹೋಗಿ ಊರಿನ ಮಾನವನ್ನು ಹರಾಜು ಹಾಕಿದವಳು ಎಂದೆಲ್ಲ ಬೈಯುತ್ತಿದ್ದರು ವಿನಃ ಅವಳ ಬದುಕಿನ ಬಗ್ಗೆ ಅನುಕಂಪ ತೋರಿಸಿದ್ದನ್ನು ನಾನಂತೂ ನೋಡಿರಲಿಲ್ಲ. ಅವಳಿಗೂ ಈ ಪ್ರಕರಣದ ನಂತರ ಮುಜುಗರವಾಗಿರಬೇಕು. ಎಂದಿನಂತೆ ತಲೆ ಎತ್ತಿ ಬದುಕುವುದು ತನ್ನಿಂದ ಸಾಧ್ಯವೇ ಇಲ್ಲವೆಂದು ದೂರವಿರಬೇಕು ಎಂದುಕೊಂಡೆ. ಒಂದು ಕಾಲದ ಆಪ್ತಳು, ಸ್ನೇಹಿತೆಯೂ ಆಗಿರುವ ಅವಳನ್ನು ಈಗ ನಾನು ಹೋಗಿ ಮಾತಾಡಿಸಬೇಕೇ ಎಂದು ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುತ್ತಿದ್ದೆ. ಆದರೆ ಎಲ್ಲಿಂದ ಆರಂಭಿಸುವುದು, ಏನು ಮಾತನ್ನಾಡುವುದು, ನಿನ್ನ ಬದುಕು ಹೀಗೆಲ್ಲ ಆಯಿತು ಎಂಬ ಸಾಂತ್ವನವನ್ನು ಹೇಳುವುದೋ, ಏನು
ಮಾಡುವುದೆಂದು ತಿಳಿದಿರಲಿಲ್ಲ. ನಮ್ಮೂರಿನ ಮಾನವನ್ನು ಹಾಳುಗೆಡವಿದ ಅವಳಲ್ಲಿ ನಾನು ಮಾತನಾಡುವುದು ಸರಿಯಲ್ಲ ಎಂದೆನಿಸಿ ಊಟದ ಮನೆಯಲ್ಲಿ ಹೆಚ್ಚು ನಿಲ್ಲದೇ ಅಲ್ಲಿಂದ ಹೊರಟು ಕಲ್ಯಾಣ ಮಂಟಪದ ಹಾಲಿಗೆ ಬಂದು ಕುಳಿತಿದ್ದೆ. ಆದರೆ ಯಾಕೋ ನಾನು ಹಾಗೆ ಮಾಡಿದ್ದು ನನಗೆ ಸರಿ ಕಾಣಿಸುತ್ತಿರಲಿಲ್ಲ. ಅವಳನ್ನು ಮಾತನಾಡಿಸದೇ ಹಾಗೆಯೇ ಬಂದಿದ್ದು ತಪ್ಪೆಂದು ಚುಚ್ಚುತ್ತಿತ್ತು. ಅವಳು ನನ್ನ ಬಾಲ್ಯದ ಗೆಳತಿ, ಆಪ್ತಳು. ಈಗ ಅವಳ ಬದುಕಿನ ನಿರ್ಣಯದ ಬಗ್ಗೆ ನಾನ್ಯಾಕೆ ಅಸಮ್ಮತಿ ಹೊಂದಬೇಕು? ಸುಮ್ಮನೆ ಕುಶಲೋಪರಿ ಮಾತಾಡಿಸಿದ್ದರೆ ನನ್ನ ಗಂಟೇನು ಹೋಗುತ್ತಿತ್ತು ಎಂದುಕೊಂಡಿದ್ದೆ.

ನಿಜವಾಗಿಯೂ ಅವಳ ಬಗ್ಗೆ ನನಗೆ ಕಾಳಜಿ ಇದ್ದಿತ್ತೆ ಎನ್ನುವುದೇ ಸಂಶಯವಾಗಿ ಕಂಡಿತು. ನಳಿನಿ ಮನೆಬಿಟ್ಟು ಹೋದಳು ಎಂದಾಗ ಆ ಹೊತ್ತಿಗೆ ಛೇ ಅನಿಸಿತ್ತು ಎನ್ನುವುದನ್ನು ಬಿಟ್ಟರೆ ಮತ್ತೆ ಅವಳ ಬಗ್ಗೆ ಯೋಚಿಸುವುದಾಗಲಿ, ಯಾರೊಂದಿಗೂ ಅವಳ ಬಗ್ಗೆ ಮಾತನಾಡುವುದಾಗಲಿ ಮಾಡಿಯೇ ಇರಲಿಲ್ಲ. ಆದರೆ ಈಗ ಈ ಪರಿಯ ಕಳವಳ ಹುಟ್ಟಿಕೊಂಡಿರುವುದು ಯಾಕೆ ಎಂಬುದು ತಿಳಿಯಲಿಲ್ಲ. ಬಹುಶಃ ಅವಳನ್ನು ಕಣ್ಣಾರೆ ನೋಡಿದ ಮೇಲೆಯೇ ನನ್ನ ಅಂತರಂಗ ಅವಳ ಬಗ್ಗೆ ಯೋಚಿಸುವಂತೆ ಮಾಡುತ್ತಿರುವುದು ವಿಚಿತ್ರ ಅನುಭವದಂತೆ ಕಾಣಿಸುತ್ತಿತ್ತು. ಮುಂದೇನು ಮಾಡಬೇಕು ಎಂಬುದು ತಲೆಗೆ ಹೊಳೆಯದೆ ಇದ್ದಾಗ ಕವಳವನ್ನು ಹಾಕೋಣವೆಂದು ಹರಿವಾಣ ಇದ್ದಕಡೆಗೆ ಸಾಗಿ ಬಂದಿದ್ದೆ. ಅಲ್ಲಿಯೇ ಯಾರೋ ಇಬ್ಬರೂ ನನಗೆ ಅಪರಿಚಿತರಾಗಿದ್ದವರು ತಮ್ಮಷ್ಟಕ್ಕೆ ಮಾತನಾಡುತ್ತ ಕುಳಿತಿದ್ದರು. ಅದು ನಳಿನಿಯ ವಿಚಾರವೇ ಆಗಿತ್ತೆಂದು ತಿಳಿಯಲು ಹೆಚ್ಚು ಸಮಯ ಬೇಕಾಗಿರಲಿಲ್ಲ. ಸಾರಿನಿಂದ ಪ್ರಾರಂಭವಾದ ಮಾತು, ಅವಳ ಬದುಕಿನತ್ತ ಹರಿದಿತ್ತು. ನಾನು ಮೊಬೈಲ್ ನೋಡುವನಂತೆ, ಅವರ ಮಾತಿಗೆ ಅಲಕ್ಷ್ಯ ವಹಿಸಿದವನಂತೆ ನಾಟಕವಾಡುತ್ತ, ಅವರ ಮಾತಿನ ಕಡೆಗೆ ನನ್ನ ಕಿವಿಯನ್ನು ಹರಿಬಿಟ್ಟಿದ್ದೆ.

“ಆ ಹೆಂಗಸಿಗೆ ಮಳ್ಳೆ ಸೈಯ. ತನ್ನ ಘನ ಸಂಸಾರ ಹಾಳು ಮಾಡಿಕಂಡ. ಗಂಡ, ಮಕ್ಕಳು , ತೋಟ ಗದ್ದೆ ಅಂತ ಛಲೋ ಇದ್ದಿತ್ತು. ಪಾಪ ಅವರ ಗ್ರಹಚಾರವೇ ಸೈ.”
“ಎಂತಾ ಆತ್ರಾ?”
“ಎಂತಹ ಹುಚ್ಚು ನೋಡಿ. ಅವಳ ಊರಿನ ಹತ್ರ ಬಯಲು ಸೀಮೆಯ ಯಾವುದೋ ನಾಟಕದ ಕಂಪನಿ ಬಂದು ತಿಂಗಳಗಟ್ಟಲೇ ಡೇರೆ ಹಾಕಿದ್ವಡ. ಇವಳಿಗೆ ನಾಟಕದ ವಿಪರೀತ ಹುಚ್ಚು. ಹೆಚ್ಚು ಕಡಿಮೆ ದಿನಾಲು ಗಂಡ, ಮಕ್ಕಳನ್ನು ಕರೆದುಕಂಡು ನೋಡಕ್ಕೆ ಹೋಗ್ತ ಇದ್ದಿದ್ವಡ. ಅದರಲ್ಲಿ ನಮ್ಮ ಕಡೆಯ ಮೋಹನ ಎನ್ನುವ ಹುಡುಗ ಕೂಡ ಇದ್ದಿದ್ನಡ. ಅಲ್ಲಿ ಅವರಿಗೆ ಅವನ ಪರಿಚಯ ಆತಡ. ಪರಿಚಯ ನಿಲ್ಲದೇ ಅವರ ಕುಟುಂಬಕ್ಕೆ ಸ್ನೇಹಿತ ಆದ್ನಡ. ಆಗಾಗ ಅವರ ಮನೆಗೂ ಹೋಗಿ ಊಟಗೀಟ ಮಾಡಿ ಬತ್ತಿನ್ದಡ. ಅದು ಎಂತ ಆತೋ ಏನೋ. ಒಂದು ದಿನ ಮೋಹನ, ಇವಳು ಮನೆ ಬಿಟ್ಟು ಓಡಿ ಹೋದ್ವಡ. ಪಾಪ ಅವಳ ಗಂಡ ಎಲ್ಲೆಲ್ಲೋ ಹುಡುಕಿದ. ಕೊನೆಗೆ ಹುಬ್ಬಳ್ಳಿ ಹತ್ರ ಎಲ್ಲೋ ಸಿಕ್ಕಿದ್ವಡ. ಅಲ್ಲಿ ಅವಳು ನಾನು ಅವನನ್ನೇ ಮದ್ವೆ ಆಗ್ತಿ ಅಂತ ಹಠ ಹಿಡಿದು ಕುಳಿತು ಬಿಟ್ಲಡ.”
“ಅಯ್ಯೋ ಕತಿಯೇ. ಪಾಪ ಅವಳ ಗಂಡ ಮಕ್ಕಳಿಗೆ ಬಹಳ ಮೋಸ ಆತು.”
“ಗಂಡ ಮಕ್ಕಳಿಗೆಗಿಂತ ಅವಳಿಗೆ ದೊಡ್ಡ ಮೋಸ ಆತು ಮಾರಾಯ. ಓಡಿಸಿಕೊಂಡು ಹೋದ ಮೋಹನನಾದ್ರು ಅವಳೊಂದಿಗೆ ಬಾಳಿದ್ನಾ ಕೇಳಿದ್ರೆ ಅದು ಆಗ್ಲೆ. ಅವ ದೊಡ್ಡ ಹೆಂಗಸ್ರು ಹುಚ್ಚಿನವಡ. ಹಿಂಗೆ ಬಹಳ ಹೆಂಗಸರಿಗೆ ಮೋಸ ಮಾಡಿನ್ದಡ. ಇವಳ ಜೊತೆಗೆ ತಿಂಗಳ ಒಪ್ಪತ್ತು ಇದ್ದು ಮಜಾ ಮಾಡಿ ಬಿಟ್ಟ. ಕೊನೆಗೆ ಅವಳನ್ನು ಬಿಟ್ಟಾಕಿಕ್ಕೆ ಎಲ್ಲೋ ಹೋದ್ನಡ. ಪಾಪ ಇವಳಿಗೆ ಗಂಡ್ನು ಇಲ್ಯಾಡ, ಇಚೀಗೆ ಇವ್ನು ಇಲ್ಲೆ ಹಾಂಗಾತು.”
“ಎಂತಹ ಹಲ್ಕ ಇದ್ದಾ ಅವ. ಸುಟ್ಟು ಕೊಲ್ಲಕ್ಕು ಅವನನ್ನು.”
“ನೀವು ನಂಬುತ್ರಿಲ್ಲೆ. ಅವಂಗೂ ಕೊನೆಗೆ ಮದುವೆ ಆತು. ಯಾರು ಹೆಣ್ಣು ಕೊಟ್ವೆನಾ? ಅವನಿಗೂ ಇಬ್ರು ಹುಡುಗ್ರು ಈಗ.”
“ಹೌದನ್ರಾ?”
“ಇವಳನ್ನು ಬೀಳಿಸಿಕೊಳ್ಳಲೇ ಎಂತೋ ಮಾಟನೋ ಮಂತ್ರನೋ ಮಾಡಿದ್ನಡ ಅಂತ ಹೇಳ್ತಾ. ಇವಳು ಮಳ್ಳು ತರ ಅವನ ಹಿಂದೆ ಹೋದ. ಎಂತ ಹೇಳಾದ್ರ. ಈಚಿಗೆ ಗಂಡನೂ ಇಲ್ಲೆ, ಆ ಕಡಿಗೆ ಮಿಂಡನೂ ಇಲ್ಲೆ ಹಾಂಗಾತು.”
“ಎಂತಾ ಕಾಲ ಬಂತು ನೋಡಿ. ಈಗ ಇವಳು ಮದುವೆ ಮನೆಗೆ ಬಡಿಸಲೇ ಹೋಪದು, ಅಡಿಗೆಗೆ ಹೋಪದು ಹಂಗೆ ಮಾಡ್ತ ಇದ್ದ. ಯಾರೋ ಬೆಂಗಳೂರಿನಲ್ಲಿ ಇಪ್ಪವರ ಜಮೀನು ನೋಡಿಕಂಡು ಇದ್ದ.”

ಅವರಿಬ್ಬರು ಮಾತುಗಳನ್ನು ಅರ್ಧಕ್ಕೆ ನಿಲ್ಲಿಸಿ ಚಾ ಕುಡಿಯುದಕ್ಕೆಂದು ಎದ್ದೇ ಹೋದರು. ಅವರ ಮಾತುಗಳನ್ನು ಕೇಳುತ್ತಿದ್ದಂತೆ ಜ್ವರ ಬಂದ ಅನುಭವವಾಯಿತು. ನಳಿನಿಯ ಬಗ್ಗೆ ನಾನು ತಿಳಿದುಕೊಂಡಿದ್ದಕ್ಕಿಂತ ಇದು ಬೇರೆಯಾಗಿದೆ ಅನ್ನಿಸಿತು. ನಳಿನಿ ಯಾರೋ ತನಗಿಂತ ಹತ್ತು ವರುಷದ ಕಿರಿಯವನನ್ನು ಪ್ರೀತಿಸಿ ಹೋಗಿದ್ದಾಳೆಂದು ಅಂದುಕೊಂಡಿದ್ದೆನೇ ವಿನಃ ಆತ ನಾಟಕದ ಕಂಪನಿಯವನು ಎಂಬುದು ತಿಳಿದೇ ಇರಲಿಲ್ಲ. ಅಮ್ಮ ಕೂಡ ಇದರ ಬಗ್ಗೆ ಆಡಿದ ನೆನಪೂ ಇರಲಿಲ್ಲ. ಅವರು ಹೇಳುವಂತೆ ಮಾಟ ಮಾಡಿ ಆಕೆಯನ್ನು ಬಲವಂತದಿಂದ ಓಡಿಸಿಕೊಂಡು ಹೋದರು ಎಂಬುದನ್ನು ನನಗೆ ಯಾಕೋ ಒಪ್ಪಿಕೊಳ್ಳಲು ಆಗುತ್ತಲೇ ಇರಲಿಲ್ಲ. ಬಾಲ್ಯದಿಂದಲೂ ಅವಳ ಬಗ್ಗೆ ಒಡನಾಟವಿದ್ದ ಕಾರಣದಿಂದಲೇ ಏನೋ ಅವಳ ಸ್ವಭಾವ ಅರಿವಿದ್ದಿದ್ದರಿಂದಲೋ ಏನೋ, ಅದಲ್ಲ ಸಾಧ್ಯವಿಲ್ಲ ಎಂದುಕೊಳ್ಳುತ್ತಿದ್ದೆ. ಅಷ್ಟು ಸುಲಭವಾಗಿ ಒಲಿಯುವ ಹೆಂಗಸಲ್ಲ ಎಂಬುದು ನಾನು ನೋಡಿದ ಸತ್ಯವಾಗಿತ್ತು. ಮಾಧವ ಅವಳನ್ನು ಇಷ್ಟಪಟ್ಟು ಮದುವೆಯಾಗಿದ್ದ ಎಂಬುದು ಸತ್ಯವಾಗಿದ್ದರೂ ಅವಳನ್ನು ಒಪ್ಪಿಸುವಾಗ ಮೂರು ಜಗತ್ತು ಒಂದಾಗಿತ್ತು. ಆದರೆ ಕೊನೆಗೆ ಹೇಗೋ ಒಪ್ಪಿ ಮದುವೆಯಾದರು. ತನಗೆ ಮದುವೆ ಬೇಡ ಬೇಡ ಎಂದವಳು ಹತ್ತಾರು ವರುಷ ಚೆನ್ನಾಗಿಯೇ ಸಂಸಾರವನ್ನು ನಡೆಸಿರುವುದು ಕಣ್ಣಮುಂದೆ ಇರುವಾಗ ಹೀಗೇಕೆ ಮಾಡಿದಳು ಎಂಬುದು ಎಲ್ಲರಂತೆ ನನ್ನ ಪ್ರಶ್ನೆಯೂ ಆಗಿತ್ತು. ಮಾಧವನನಿಲ್ಲದ ಅವಳ ಬದುಕನ್ನು ಎಣಿಸಿಕೊಳ್ಳುವಾಗ ಯಾಕೋ ಮತ್ತೆ ಅವಳ ಸೀತೆ ಪಾತ್ರವೇ ಕಣ್ಣ ಮುಂದೆ ಬಂದಿತು.

ಕವಳದ ಅಮಲು ಚೆನ್ನಾಗಿಯೇ ತಲೆಯನ್ನು ಹತ್ತಿದ ಪರಿಣಾಮವೋ ಏನೋ ಟೀ ಕುಡಿಯುವುದು ಅನಿವಾರ್ಯವಾಗಿತ್ತು. ಮತ್ತೆ ಅವಳು ಎಲ್ಲಿಯಾದರೂ ಕಾಣಿಸಬಹುದೇ ಎಂದು ಅಡುಗೆಯ ಮನೆಯ ಕಡೆಗೆ ನೋಡುತ್ತಿದ್ದೆ. ಆದರೆ ಅವಳು ಕಾಣಿಸಲಿಲ್ಲ. ಒಂದೊಮ್ಮೆ ಎದುರಾಗಿಬಿಟ್ಟರೆ ನನ್ನಿಂದ ಅವಳನ್ನು ಮಾತನಾಡಿಸುವುದಕ್ಕೆ ಎಂಬ ಸಣ್ಣ ಭಯವೂ ನನ್ನನ್ನು ಕಾಡದೇ ಬಿಡಲಿಲ್ಲ. ಅವಳನ್ನು ಮಾತಾಡಿಸುವುದಕ್ಕೆ ನನಗೆ ಒಂದು ರೀತಿಯ ಸಂಕೋಚ, ಮುಜುಗರವಾಗುತ್ತಿತ್ತು. ಜೊತೆಗೆ ಯಾವ ಇಂದಿನ ಸ್ಥಿತಿ ಬಗ್ಗೆ ಏನೂ ಗೊತ್ತಿರಲಿಲ್ಲ. ಒಂಟಿಯಾಗಿದ್ದಾಳೆ ಎಂದ ಮೇಲೆ ಅವಳನ್ನು ನಾನು ಮಾತಾಡಿಸಿ ಏನಾದರು ಗಾಸಿಪ್ ಗಳು ಹುಟ್ಟಿಕೊಂಡರೆ ಎಂದೆಲ್ಲ ಹೆದರಿಕೆಯಾಗುತ್ತಿತ್ತು. ಆದರೆ ನನ್ನ ಬಾಲ್ಯದ ಗೆಳತಿಯನ್ನು ಮಾತಾಡಿಸುವುದಕ್ಕೆ ನಾನು ಯಾರಿಗೆ ಭಯಪಟ್ಟುಕೊಳ್ಳಬೇಕು ಎಂದು ನನ್ನ ಮನಸ್ಸನ್ನು ನಾನು ಒಪ್ಪಿಸಿಕೊಳ್ಳುತ್ತಿದ್ದೆ. ಇಷ್ಟೆಲ್ಲ ಅವಾಂತರಗಳಿಗಿಂತ ಸುಮ್ಮನೇ ಇಲ್ಲಿ ಕಷ್ಟಪಟ್ಟು ಬದುಕುವುದಕ್ಕಿಂತ ಯಾಕೋ ಅವಳು ತನ್ನ ತಪ್ಪುಗಳನ್ನು ಒಪ್ಪಿಕೊಂಡು ಮಾಧವನೊಂದಿಗೆ ಮತ್ತೆ ಜೀವನವನ್ನು ನಡೆಸುವುದೇ ಯೋಗ್ಯ ಎಂಬಂತೆ ನನಗೆ ಕಾಣಿಸುತ್ತಿರುವಾಗಲೇ ಅಮ್ಮ ಫೋನ್ ಮಾಡಿದ್ದಳು.

ಮದುವೆಯ ಸುದ್ದಿಗಳನ್ನು ಅವಳಲ್ಲಿ ಮಾತನಾಡುವಾಗ ನಳಿನಿಯ ಬಗ್ಗೆ ಅಮ್ಮನಿಗೆ ಹೇಳಲೇ ಬೇಕು ಎಂದೆನಿಸುತ್ತಿತ್ತು. ಆದರೆ ಯಾಕೋ ಗೊತ್ತಿಲ್ಲ. ನಳಿನಿಯ ವಿಚಾರ ಬಂದಾಗೆಲ್ಲ ಅಮ್ಮ ಮೌನವನ್ನು ಧರಿಸಿಬಿಡುತ್ತಿದ್ದಳು. ಅವಳ ಮೌನದ ಕಾರಣ ಅಪ್ಪ ಹೇಳುತ್ತಿದ್ದ ಕೊಂಕು ಮಾತುಗಳೇ ಆಗಿತ್ತೆಂಬುದು ನನ್ನ ಅನಿಸಿಕೆ. ಹಾಗೆ ನೋಡಿದರೆ ನಳಿನಿ ಅಮ್ಮನ ಕಡೆಯಿಂದ ದೂರದ ಸಂಬಂಧಿ. ಅವಳು ಓಡಿ ಹೋದ ಸಂದರ್ಭದಲ್ಲಂತೂ ಅಪ್ಪ ಊರಿನಲ್ಲಿ ಅವಳ ವಿಚಾರ ಮಾತುಗಳನ್ನು ಆಡುತ್ತಾ ಆಡುತ್ತಾ ನಮ್ಮನೆಯವಳಿಗೆ ದೂರದ ಸಂಬಂಧಿ ಎಂದುಬಿಡುತ್ತಿದ್ದನಂತೆ. ಹಾಗೆ ಹೇಳುವಾಗ ಅಮ್ಮನ ಮುಖ ಬಾಡಿದ ಬಸಳೆಯಂತಾಗಿ ಸಪ್ಪೆಯಾಗಿ ಹೋಗುತ್ತಿತ್ತು. ಯತಾರ್ಥಕ್ಕೂ ಅಪ್ಪ ಯಾಕೆ ಹಾಗೆ ಮಾತಾಡುತ್ತಿದ್ದ ನಾನಂತೂ ಅರಿಯದಾಗಿದ್ದೆ. ಅಮ್ಮನೇ ಯಾವಾಗಲೋ ಒಮ್ಮೆ ಅಪ್ಪನ ಈ ವಿಚಾರವನ್ನು ನನ್ನಲ್ಲಿ ಹೇಳಿದ್ದಳು. ಕಳೆದ ಬಾರಿ ಬೆಂಗಳೂರಿನಿಂದ ಊರಿಗೆ ಬಂದಿದ್ದಾಗ ಯಾರೋ ಪಕ್ಕದ ಮನೆಯವರು ಅಮ್ಮನ ಎದುರಿನಲ್ಲಿ ನಳಿನಿ ಬಗ್ಗೆ ಮಾತಾಡಿದ್ದಾಗ ಅಮ್ಮ ಸಿಟ್ಟಾಗಿದ್ದು ಇನ್ನೂ ನೆನಪಿನಲ್ಲಿಯೇ ಇರುವಾಗ ನಾನು ಮತ್ತೆ ಅವಳ ಬಿಪಿಯನ್ನು ಹೆಚ್ಚು ಮಾಡುವುದು ಯಾಕೆ ಎಂದುಕೊಂಡೆ. ಆದರೂ ನಳಿನಿಯನ್ನೂ ಇಲ್ಲಿ ನೋಡಿರುವ ವಿಚಾರವನ್ನು ಹೇಳದೆ ಇರುವುದಕ್ಕೆ ನನ್ನಿಂದ ಸಾಧ್ಯವಾಗಲಿಲ್ಲ.

ಅಮ್ಮನಲ್ಲಿ ನಳಿನಿ ಸಿಕ್ಕಿದ್ದಳು ಎಂದಿದ್ದಾಗ ಎಂದಿನಂತೆ ಅವಳ ಪ್ರತಿಕ್ರಿಯೆ ನಿರಸವಾಗಿಯೇ ಇದ್ದಿತ್ತು. ನಾನು ಅವಳ ಸುತ್ತ ನಡೆದಿರುವ ಕಥೆಗಳನ್ನು ಹೇಳಿದರೂ ಅವಳು ಮಾತ್ರ ಯಾವ ಪ್ರತಿಕ್ರಿಯೆಯನ್ನೂ ನೀಡಿರಲಿಲ್ಲ. ಬಹುಶಃ ಅವಳಿಗೆ ಇದೆಲ್ಲವೂ ತಿಳಿದಿತ್ತು ಅನ್ನಿಸುತ್ತದೆ. ಯಾವಾಗ ನಾನು ಓಡಿಸಿಕೊಂಡು ಹೋದ ಮೋಹನನು ಅವಳನ್ನು ಬಿಟ್ಟಿರುವ ವಿಚಾರ ಹೇಳಿದೆನೋ ಅವಳಿಗೆ ತಡೆದುಕೊಳ್ಳುವುದಕ್ಕೆ ಸಾಧ್ಯವಾಗದೇ ಅತ್ತುಬಿಟ್ಟಿದ್ದಳು. ಇಷ್ಟು ದಿನ ಕಟ್ಟಿಕೊಂಡ ಕಣ್ಣೀರೆಲ್ಲ ಪ್ರವಾಹದಂತೆ ಹರಿದುಬಿಟ್ಟಿತಂತೆ ಅನಿಸಿತು. ಅವಳ ನಿಟ್ಟುಸಿರ ಶಬ್ದಕ್ಕೆ ನಾನು ಬೆಚ್ಚಿದೆ. ಈಗ ಅಮ್ಮನನ್ನು ಹೇಗೆ ಸಮಾಧಾನಿಸಬೇಕೆಂದು ಅರ್ಥವಾಗದೇ ಕೈ ಕೈ ಹಿಚುಕಿಕೊಳ್ಳುತ್ತಿದ್ದೆ. ನಾನೇ ನಳಿನಿಯ ಬದುಕಿಗೆ ಮತ್ತೆ ಅರ್ಥ ಸಿಗಬೇಕಾದರೆ ಹೇಗೋ ಅನುಸರಿಸಿಕೊಂಡು ಮಾಧವನೊಂದಿಗೆ ಬದುಕಿದರೆ ಒಳ್ಳೆದಲ್ಲವೇ ಅಂದು ಅಮ್ಮನನ್ನು ಕೇಳಿದ್ದೆ. ಬೇಕಿದ್ದರೆ ನಾನೇ ಮಾಧವನಲ್ಲಿ ಮಾತನ್ನಾಡುತ್ತೇನೆ ಎಂಬ ಸಮಾಧಾನದ ಮಾತುಗಳನ್ನಾಡಿದ್ದೆ. ಆದರೆ ಅಮ್ಮ ಹೇಳಿದ ಮಾತುಗಳನ್ನು ಕೇಳುವಾಗ ನಿಜವಾಗಿ ಅಕ್ಷರಶಃ ಬೆವೆತುಹೋಗಿದ್ದೆ. ಆಗಲೇ ಮಾಧವ ಅವಳಿಗೆ ಡೈವರ್ಸ್ ಕೊಟ್ಟಿದ್ದನಂತೆ. ಜೊತೆಗೆ ಅವನು ಮತ್ತೊಂದು ಮದುವೆಯನ್ನು ಆಗಿ, ಅವನಿಗೊಬ್ಬ ಮಗನಿದ್ದಾನೆ ಎಂದಳು. ಯಾಕೋ ನನಗೆ ಈ ನಳಿನಿಯ ಬದುಕು ಆಯೋಮಯವಾಗಿ ಮುಳುಗುವ ಹಡಗಿನಂತೆ ಕಾಣಿಸಿಬಿಟ್ಟಿತು. ನಾನು ಅವಳಲ್ಲಿ ಏನಾದರೂ ಮಾತಾಡಿ ಹೆಚ್ಚುಕಡಿಮೆಯಾದರೆ ಎಂದು ಅಮ್ಮ ಹೆದರಿಕೊಂಡಿರಬೇಕು. ನೀನು ಏನೂ ಅವಳಲ್ಲಿ ಮಾತಾಡಬೇಡ. ನಮಗೆ ಅವಳ ಉಸಾಬರಿ ಬೇಡ ಎಂದು ನಾಲ್ಕೈದು ಸಲ ನನಗೆ ಹೇಳಿ ಕರೆಯನ್ನು ಮುಗಿಸಿದ್ದಳು.

ಅಮ್ಮನ ಆತಂಕ ಸಹಜವೇ ಆಗಿತ್ತು. ಬಯಸಿ ಎಲ್ಲರಿಂದ ದೂರ ಹೋಗಿದ್ದವಳ ಬದುಕಿನ ಬಗ್ಗೆ ನಮಗ್ಯಾಕೆ ಆಸಕ್ತಿ. ಅವಳ ಬದುಕಿಗೆ ಅವಳೇ ಹೊಣೆಗಾರಳು ಎಂಬುದು ಅಮ್ಮನ ಖಚಿತ ನಿಲುವಾಗಿತ್ತು. ಅಮ್ಮನ ನಿಲುವುಗಳ ಬಗ್ಗೆ ನನಗೇನು ಆಕ್ಷೇಪಗಳು ಇರಲಿಲ್ಲ. ಆದರೆ ನಳಿನಿಯ ನಂಬಿಕೆ ದ್ರೋಹವಾಗಿರುವುದಕ್ಕೆ ಅವಳೇ ಹೊಣೆಗಾರಳು ಎಂಬಂತೆ ಚಿತ್ರಿಸುವುದು ಮಾತ್ರ ನನ್ನಿಂದ ಒಪ್ಪಲು ಸಾಧ್ಯವಿರಲಿಲ್ಲ. ಯಾವುದೋ ವಿಸ್ಮೃತಿಗೆ ಒಳಗಾಗಿ ಅವಳಿಂದ ತಪ್ಪುಗಳಾಗಿರಬಹುದು. ಅದೇ ತಪ್ಪು ಜೀವನವಿಡಿ ಅದರ ನೆರಳಿನಲ್ಲಿ ಬದುಕ ಬೇಕೆಂಬುದು, ಬದುಕಿನ ಅರ್ಧ ಆಯಸ್ಸನ್ನೂ ಕಳೆಯದಿರುವ ಅವಳ ಬದುಕು ಮುಗಿಯಿತೆಂದು ನಿರ್ಣಯಿಸುವುದು ಯಾವ ನ್ಯಾಯವೆಂದು ತೋರಿತು. ಮತ್ತೆ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಆಸರೆಗಳಿದ್ದರೆ ನೋಡುವುದರಲ್ಲಿ ತಪ್ಪೇನೂ ಕಾಣಿಸಲಿಲ್ಲ. ವಾಸ್ತವವಾಗಿ ಇಂದಿನ ಸಮಾಜದಲ್ಲಿ ಗಂಡಿನ ಆಶ್ರಯವಿಲ್ಲದೆ ಹೆಣ್ಣು ಬದುಕುವುದಕ್ಕೆ ಸಾಧ್ಯವಿದೆ. ಹಾಗೆ ಬದುಕುವ ನೂರಾರು ಮಂದಿಗಳು ಸಿಗಬಹುದು. ಆದರೆ ಜೀವಮಾನವೆಲ್ಲ ಒಂಟಿಯಾಗಿ ಬದುಕುವುದಕ್ಕೆ ಸಾಧ್ಯವೇ? ಅದೆಲ್ಲ ನಳಿನಿಂದ ಆಗುವುದೇ ಎಂಬಂತಹ ಆತಂಕ ಕಾಡಿತು. ಇಂತಹ ಒಂಟಿ ಜೀವನವನ್ನೇ ಹಲವು ವರುಷಗಳಿಂದ ಅನುಭವಿಸುತ್ತಿರುವ ಸ್ನೇಹಿತ ರಮೇಶನ ಬದುಕನ್ನು ಹತ್ತಿರದಿಂದ ಕಂಡಿದ್ದರಿಂದಲೇ ಏನೋ ನಳಿನಿಯ ಬಗ್ಗೆ ಈ ಅನುಕಂಪ ಏಳುವುದಕ್ಕೆ ಕಾರಣವಾಗಿರಬಹುದು. ಒಮ್ಮೆಗೆ ಅನಿಸಿಬಿಟ್ಟಿತು. ನಳಿನಿ, ರಮೇಶ ಒಪ್ಪಿದರೆ ಮದುವೆಯಾಗಬಹುದಲ್ಲ ಎಂದುಕೊಂಡೆ. ಹೇಗಾದರೂ ಇಬ್ಬರ ಬದುಕಿಗೊಂದು ಅರ್ಥಕೊಡುವುದಕ್ಕೆ ನನ್ನಿಂದಾದ ಪಾಮಾಣಿಕ ಪ್ರಯತ್ನವನ್ನು ಮಾಡಬೇಕು ಎಂದೆನಿಸಿ ಕಲ್ಯಾಣ ಮಂಟಪದ ಹೊರಗೆ ಯೋಚಿಸುತ್ತಾ ಕುಳಿತಿದ್ದೆ.

ಅವತ್ತಿನ ಬಡಿಸುವ ಕೆಲಸವನ್ನು ಮುಗಿಸಿ ನಳಿನಿ ಹೊರಡುವುದಕ್ಕೆ ಸಜ್ಜಾಗಿ ಕಲ್ಯಾಣ ಮಂಟಪದ ಹೊರಗೆ ಬರುತ್ತಿರುವಾಗ ಆಕಸ್ಮಿಕವಾಗಿ ಅವಳಿಗೆ ಎದುರಾದೆ. ಬಹುಶಃ ನನ್ನನ್ನು ಆ ಹೊತ್ತಿನಲ್ಲಿ ಅಲ್ಲಿ ನಿರೀಕ್ಷಿಸದ ಅವಳಿಗೆ ಸಣ್ಣ ಕಂಪನವಾಗಬಹುದೆಂದು ಅಂದುಕೊಂಡಿದ್ದೆ. ಆದರೆ ಹೆಚ್ಚೇನು ಪರಿಣಾಮವಾದಂತೆ ಕಾಣಿಸಲಿಲ್ಲ. ಎದುರಿನಲ್ಲಿ ಸಿಕ್ಕ ಮೇಲೆ ತಪ್ಪಿಸಿಕೊಂಡು ಓಡಾಡುವುದಕ್ಕೆ ಅವಕಾಶವೇನೂ ಇರಲಿಲ್ಲವಾದ್ದರಿಂದ ಆ ಹೊತ್ತಿಗೆ ಮಾತುಗಳೇ ಅನಿವಾರ್ಯವೆನಿಸಿದ್ದವು. ಉಭಯಕುಶಲೋಪರಿಗಳೆಲ್ಲವೂ ಅಡೆತಡೆಗಳಿಲ್ಲದೆ ಇಬ್ಬರ ಮಧ್ಯದಲ್ಲಿಯೂ ನಡೆದರೂ ಹಿಂದಿನ ಆಪ್ತತೆಯಾಗಲಿ, ಸ್ನೇಹಚಾರದ ನುಡಿಗಳು ಸಲೀಸಾಗಿ ಬಿಚ್ಚು ಮನಸ್ಸಿನಲ್ಲಿ ಅರಳುವುದಿಲ್ಲವೆನ್ನುವುದು ಇಬ್ಬರಿಗೂ ಎರಡೇ ಮಾತಿನಲ್ಲಿ ತಿಳಿದುಹೋಗಿತ್ತು. ಅದೇನೆಯಿದ್ದರೂ ಅವಳ ಮುಂದಿನ ಬದುಕಿಗೊಂದು ನನ್ನಿಂದ ಏನಾದರೂ ಸಹಾಯವಾಗುವುದಿದ್ದರೆ ಆಗಲಿ ಎಂದುಕೊಂಡಿದ್ದು ನನ್ನಲ್ಲಿ ಸಾಂದ್ರವಾಗಿದ್ದರಿಂದ ಅವಳ ಮುಂದಿನ ಬದುಕಿನ ಬಗ್ಗೆ ತಿಳಿಯುವುದಕ್ಕೆ ಆಸಕ್ತಿಯನ್ನು ಹೊಂದಿದ್ದೆ. ಇದ್ದಕಿದ್ದ ಹಾಗೆ ಅವಳು ಗಡಿಬಿಡಿಗೊಂಡಳು. ಅವಸರಲ್ಲಿ ತನ್ನ ಮೊಬೈಲ್ ಎತ್ತಿ ನೋಡಿಕೊಂಡಳು. ಸ್ವಾರಿ ನಾನು ನಿನಗೆ ಮತ್ತೆ ಸಿಗುತ್ತೇನೆ, ಸಂಜೆ ನನ್ನದೊಂದು ನಾಟಕವಿದೆ. ಅದಕ್ಕಾಗಿ ಸ್ವಲ್ಪ ಬೇಗ ಹೋಗಬೇಕು, ಸಾಧ್ಯವಾದರೆ ನೀನು ನಾಟಕಕ್ಕೆ ಬಾ ಎನ್ನುತ್ತ ಹೊರಟೇಬಿಟ್ಟಳು. ನಾನು ಮಾತ್ರ ಅವಳು ಹೋಗುವುದನ್ನೇ ನೋಡುತ್ತಿದ್ದೆ. ಯಾಕೋ ಒಮ್ಮೆಗೆ ಅನಿಸಿಬಿಟ್ಟಿತು. ನಳಿನಿ ಸೀತೆಯಲ್ಲ. ಕಳೆದುಕೊಂಡಲ್ಲೇ ಹುಡುಕುವ ಸುಕನ್ಯೆಯ ಹಾಗೆ ಕಾಣಿಸಿಬಿಟ್ಟಳು.

‍ಲೇಖಕರು Admin MM

April 12, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: