ರವಿಚಂದ್ರನ್ ಗೊಂದು ರೋಜಾ ಹೂವು..


ಸಂತೋಷ್ ಅನಂತಪುರ

ಅದಾಗ ತಾನೇ ಹೈಸ್ಕೂಲ್ ಮೆಟ್ಟಲೇರಿದ ಸಮಯ. ಬಾಲ್ಯಾವಸ್ಥೆಯಿಂದ ಯೌವನಾವಸ್ಥೆಗೆ ಪ್ರವೇಶ ಮಾಡಿದ ಕ್ಷಣವದು. ಅದು ವಯಸ್ಸಿಗೆ ತಕ್ಕಂತೆ ಕನಸು ಕಾಣುವ ಪೌರ್ಣಮಿಯ ಕಾಲವೂ ಹೌದು! ಹಲವು ವಿಧದ ಕನಸುಗಳಿವೆ ಮತ್ತು ಅದರಲ್ಲಿ ವಿಷಯಾಧಾರಿತವಾದುದೂ ಇವೆ. ತ್ಯಾಗದ ಕನಸು, ವೈರಾಗ್ಯದ ಕನಸು, ಸಾಹಸದ ಕನಸು, ಪ್ರೀತಿಯ ಕನಸು, ಪ್ರೇಮದ ಕನಸು, ಪ್ರಣಯದ ಕನಸು ಹೀಗೆ ಹತ್ತು ಹಲವು ರೀತಿಯ ಕನಸು ಆಯಾ ವಯೊಗುಣಕ್ಕನುಸಾರವಾಗಿ ನಮ್ಮೊಳಗೆ ಅವುಗಳು ಇಳಿ ಬಿಡುತ್ತವೆ. ಹಾಗೆ ಅಂದು ನನ್ನೊಳಗೆ ಇಳಿ ಬಿದ್ದ ಆ ಕನಸೇ ‘ ಪ್ರೇಮದ ಕನಸು’. ವಯಸ್ಸು ಬೇರೆ ಅಂತಹದ್ದೇ ನೋಡಿ, ಹುಚ್ಚು ಕೊಡಿ ಮನಸ್ಸು ಬೇರೆ…ಒಟ್ಟಿನಲ್ಲಿ ಸದಾ ಕನಸು ಕಾಣುವ ಕ್ರಿಯೆಯಲ್ಲಿ, ಕಾಣದಿದ್ದಾಗ ಕಾಣುವ ಹಂಬಲದಲ್ಲಿ ಕಾಲ ಕಳೆಯುವ ನಮ್ಮಂತಹ ಹಲವು ಕನಸು ಕಾಣುವ ಪಡ್ಡೆಗಳಿಗೆ ಒಬ್ಬ ನಾಯಕನ ಅಗತ್ಯವಿತ್ತು. ಎಲ್ಲರಿಗೂ ತಿಳಿದಂತೆ ಅಂತಹ ನಾಯಕರು ಒಂದೋ ನಮ್ಮೊಳಗೇ ಇರುತ್ತಾರೆ, ಇಲ್ಲ ಸಮಾಜದ ಯಾವುದಾದರೂ ಒಂದು ಸ್ತರದಲ್ಲಿ ಅವರು ನಮ್ಮನ್ನು ಆವರಿಸಿಕೊಂಡು ಬಿಡುತ್ತಾರೆ. ಮುಂದೆ ಅವರು ಸನ್ನಿವೇಶಕ್ಕನುಗುಣವಾಗಿ ನಮ್ಮ ನಾಯಕರಾಗುತ್ತಾರೆ ಮತ್ತು ನಮ್ಮನ್ನು ಆ ಪ್ರವಾಹದತ್ತ ಎಳೆದೊಯ್ಯುತ್ತಾರೆ ಕೂಡ.
ಇಂತಹ ನಾಯಕರು ಸಾಮಾಜಿಕವಾಗಿ ನಮ್ಮ ಮುಂದೆ ಬರಬಹುದು ಇಲ್ಲ ಚಾರಿತ್ರಿಕವಾಗಿಯೂ ಕಾಣಬಹುದು. ಅದೂ ಇಲ್ಲ ಅಂದಲ್ಲಿ ತೆರೆಯ ಮೇಲೆ ನಾವು ಅವರನ್ನು ಕಂಡು, ಆರಾಧಿಸುತ್ತೇವೆ,ಅನುಕರಿಸುತ್ತೇವೆ. ಆದ್ದರಿಂದಲೇ ಅಲ್ಲವೇ ಸಿನೆಮಾ ಎನ್ನುವುದು ಒಂದು ಪ್ರಭಲ ಸಂವಹನ ಮಾಧ್ಯಮವಾಗಿ ಇಂದು ನಮ್ಮೊಡನೆ ಇರುವುದು ! ನನ್ನ ಎಳವೆಯಲ್ಲಿ ಅಮ್ಮನ ಮಡಿಲೇರಿ ಡಾ. ರಾಜ್ ಅವರ ಭಕ್ತಿಯ , ತ್ಯಾಗದ,ವೀರತ್ವದ,ಪ್ರೀತಿಯ,ಆಪತ್ಭಾಂದವನ ‘ಬಂಗಾರದ ಮನುಷ್ಯ ‘ ನ ಸ್ನೇಹ ವರ್ತುಲಕ್ಕೆ ಬಿದ್ದಿದ್ದೆ, ತದ ನಂತರ ಅನಂತ್ ನಾಗ್ ಅವರ ಕೌಟುಂಬಿಕ, ಸಾಮಾಜಿಕತೆಯ, ದಾಂಪತ್ಯ ಗೀತೆಯ ‘ಬೆಂಕಿಯ ಬಲೆ’ ಗೆ ಅಕ್ಕನ ಮಡಿಲಲ್ಲಿ ಕುಳಿತು ಆಕೆಯ ಕಣ್ಣೀರು ಒರೆಸುವ ಕರವಸ್ತ್ರದೊಳಗೆ ನುಸುಳಿದ್ದೆ, ವಿಷ್ಣುವರ್ಧನ್ ಅವರ ‘ಬಂಧನ ‘ ಕ್ಕೊಳಗಾಗಿ, ‘ಸಾಹಸ ಸಿಂಹ’ ವ ಮೆಚ್ಚಿ, ಅಂಬರೀಶ್ ಅವರ ..” ಕುತ್ತೆ ಕನ್‌ವರ್ ಲಾಲ್ ಬೋಲೋ…” ಎಂಬ ಅಪ್ಪಟ ರೆಬೆಲ್ ನಾಯಕತ್ವಕ್ಕೆ ಮಾರು ಹೋಗಿ, ಅಲ್ಲಿಂದ ನೇರವಾಗಿ ಪ್ರಭಾಕರ್ ಅವರ ‘ಕಾಡಿನ ರಾಜ್ಯ’ದೊಳಕ್ಕೆ ಪ್ರವೇಶಿ ‘ಟೈಗರ್’ ನಂತೆ ಗುರ್ರ್ ಗುಟ್ಟಿ ಮುಂದೆ ಏನು ಎಂದು ಯೋಚಿಸುತ್ತಿದ್ದಾಗ, ನಮ್ಮಂತಹ ಹದಿಹರೆಯದ ಹಲವು ಮನಸ್ಸುಗಳಿಗೆ ನಾನು ಮೊದಲೇ ಹೇಳಿದಂತೆ ಒಬ್ಬ ನಾಯಕನ ಅಗತ್ಯವಿತ್ತಲ್ಲವೆ !?
ಔಟ್ ಆಫ್ ದ ಬಾಕ್ಸ್ ಯೋಚನೆ ಮಾಡಿ ಕನಸುಗಳನ್ನು ಉಣಿಸುವ, ಪೋಣಿಸುವ ಸರದಾರನೊಬ್ಬನ ತುರ್ತು ಅಂದು ಎಂದಿಗಿಂತ ಹೆಚ್ಚೇ ಇತ್ತು. ಕನಸುಗಳ ತಾಣವಾಗಿ ಅಂದು ನಮಗಿದ್ದದ್ದು ಕೇವಲ ಸಿನೆಮಾ ಮಾತ್ರ. ಆ ಸಂದರ್ಭದಲ್ಲೇ …..” ನಾಯಕ ನಾನೇ….” ಎಂದು ನಮ್ಮೆದುರಿಗೆ ಬಂದು ನಿಂತದ್ದು ಮತ್ತಾರಲ್ಲ; ಅದೇ ಬೆಳಗುವ ದಿನಕರ ಮತ್ತು ಉದ್ದಿಪಿಸುವ ರಜನೀಶ – ಇವರೀರ್ವರ ಅಂಶಗಳನ್ನೊಳಗೊಂಡ ಒಬ್ಬ ‘ ಕನಸುಗಾರ’ – ರವಿಚಂದ್ರನ್…. ಅಬ್ಬಾ….! ಅದೇನು ಲೋಕ…ಪಕ್ಕಾ ‘ಪ್ರೇಮ ಲೋಕ’ !! ಪ್ರೇಮ ಸಂದೇಶವನ್ನು ಹೊತ್ತು ತಂದ ಆ ಧೀರ ನಮ್ಮ ಪಾಲಿನ ರಣಧೀರನಾಗಿ ಅಂಜದ ಗಂಡಾಗಿ, ಕಲಾವಿದನಾಗಿ, ಕೊನೆಗೆ ಹಳ್ಳಿ ಮೇಷ್ಟ್ರಾಗಿಯೂ ಪ್ರೇಮದ ಅ,ಆ,ಇ,ಈ…ಯನ್ನು ಹೇಳಿಕೊಟ್ಟು ಅದರ ಬಗ್ಗೆ ಬೆಚ್ಚಗಿನ ಸುಖದ ಕನಸನ್ನು ಕ್ರೆಜಿಯಾಗಿ ಕಾಣುವಲ್ಲಿ ನಮ್ಮನ್ನೆಲ್ಲಾ ಹಚ್ಚಿದ. ಆ ಹೀರೋ ದಿನ ಬೆಳಗಾಗುವುದರೊಳಗೆ ನಮ್ಮ ಪಾಲಿಗೆ ಅಕ್ಷರಶ: ‘ ಕ್ರೆಜಿ ಸ್ಟಾರ್’ ಆಗಿ ಹೋಗಿದ್ದರು ಜೊತೆಗೆ ಕನಸು ಕಾಣುವುದು ಕೂಡ ಒಂದು ಕಲೆ ಎಂದೂ ನಮಗೆ ತೋರಿಸಿಕೊಟ್ಟಿದ್ದರು. ಹೆಸರಲ್ಲೇ ವಿಜಯವನ್ನು ಸೂರ್ಯ ಚಂದ್ರರನ್ನು ತನ್ನೊಳಗೆ ಆವಾಹಿಸಿಕೊಂಡು, ಹದಿಹರೆಯದ ನಮ್ಮಂತಹ ಹಲವು ಮನಸುಗಳ ಪ್ರೇಮ ಲೋಕದ ರಣಧೀರನಾಗಿದ್ದುದು ಮತ್ತು ಈಗಲೂ ಆಗಿರುವುದು ಇತಿಹಾಸ ! ಪ್ರೇಮ ಲೋಕ ಬೆಳ್ಳಿ ತೆರೆಯಲ್ಲಿ ಮೂಡಿ 25 ವರ್ಷಗಳು ಕಳೆದವು. ಅದರ ಚಾರ್ಮ್ ಇನ್ನೂ ಮಾಸಿಲ್ಲ ಅಂದರೆ ಅದು ನಮ್ಮ ನಿಮ್ಮ ಹೃದಯ-ಮನಸ್ಸುಗಳನ್ನು ಕದ್ದ ಬಗೆಯನ್ನು ನೀವೇ ಒಮ್ಮೆ ಮೆಲುಕು ಹಾಕಿ !

ಕನಸು ಕಾಣುವುದು ಎಂದರೇನು ಸಾಮಾನ್ಯವೇ ? ಎಂದು ಹುಬ್ಬೇರಿಸುವ ಒಂದು ಕಾಲವಿತ್ತು. ಆದರೆ ಕನಸಿಗೆ ಲಕ್ಷಮಣ ರೇಖೆಯಿಲ್ಲ, ಕನಸಿಗೆ ತೆರಿಗೆ ಕಟ್ಟಬೇಕಿಲ್ಲ, ಶುಲ್ಕ ವಿಧಿಸಲೂ ಬೇಕಿಲ್ಲ. ಅಂದ ಮೇಲೆ ಕನಸು ಕಾಣಲು ಹಿಂಜರಿಕೆಯೇಕೆ ? ಹೇಗೂ ಕಾಣುತ್ತೀರಿ ಅಂತೆ.. ಅಂದದ, ಚಂದದ ಸುಂದರ ಕನಸನ್ನೇ ಕಾಣಿರಿ ಎಂದು ಅಂದಿನ ನಮ್ಮ ಹದಿ ಹರೆಯಕ್ಕೆ ತೋರಿಸಿಕೊಟ್ಟವರು ಈ ನಮ್ಮ ‘ಕ್ರೆಜಿ ಸ್ಟಾರ್’. ಇದನ್ನೆಲ್ಲಾ ಹೇಳಲು ಒಂದು ಕಾರಣವಿದೆ. ಅದು ಇಷ್ಟೇ ; ಆಯಾ ಕಾಲ ಘಟ್ಟದಲ್ಲಿ ಘಟಿಸುವಂತಹ ಘಟನೆಗಳು ನಮ್ಮನ್ನು ಬೆಳವಣಿಗೆಯ ಗೆರೆಯಡಿಯಲ್ಲಿ ನಿಂತು ನೋಡುವಂತೆ ಮಾಡುತ್ತವೆ. ಆಯಾ ವಯಸ್ಸಿನಲ್ಲಿ ಮಾಡಬೇಕಾದ ಚೇಷ್ಟೆ, ಗಳಿಸಬೇಕಾದ ಸ್ನೇಹ, ನೀಡ ಬೇಕಾದ ಪ್ರೀತಿ, ಮಾಡಬೇಕಾದ ಪ್ರೇಮ, ಸೆಟೆದು ನಿಲ್ಲಬೇಕಾದ ಧೈರ್ಯ …..ಹೀಗೆ ಇವೆಲ್ಲವನ್ನೂ ಪ್ರತಿಯೊಬ್ಬರೂ ದಾಟಿಯೇ ಬಂದಿರುತ್ತೇವೆ. ಅದರ ತೀವ್ರತೆ ಮಾತ್ರ ಅವರವರಿಗೆ ಸಂಬಂಧಿಸಿದ್ದು. ಇದು ಎಲ್ಲಾ ಕಾಲಘಟ್ಟಕ್ಕೂ ಅನ್ವಯಿಸುವ ಒಂದು ಪ್ರಕ್ರಿಯೆ. ಹಾಗಂತ ಕಾಲಾಂತರದಲ್ಲಿ ಈ ಮೇಲಿನ ಎಲ್ಲಾ ಭಾವನೆಗಳಿಗೆ ನಾವು ಕಂಡುಕೊಳ್ಳುವ ಮಾರ್ಗ ಮಾತ್ರ ವ್ಯತ್ಯಸ್ತವಾಗಿರಬಹುದು. ಅಂದ ಮಾತ್ರಕ್ಕೆ ಭಾವನೆಗಳು ಸ್ಫುರಿಸುವುದಿಲ್ಲವೆಂದಲ್ಲ. ಖಂಡಿತವಾಗಿಯೂ ಸ್ಫುರಿಸುತ್ತವೆ, ಸ್ಫುರಿಯಲೇಬೇಕು….ಆವಾಗಲೇ ಅಣ್ಣಾವ್ರು ಹಾಡಿದಂತೆ “ಬಾsssಳು ಬೆಳಕಾಯಿತು…ಪ್ರೇಮದ ಹೂವೇ…” ಎಂದೆನಿಸುವುದು..!!
ಹೀಗಾಗಿ ಅಂದು ನಮ್ಮೊಳಗೊಬ್ಬ ಹೀರೋ ನಮಗರಿವಿಲ್ಲದಂತೆ ನಮ್ಮನ್ನು ಆವರಿಸಿ ನಮ್ಮೊಳಗೊಬ್ಬನಾಗಿಬಿಟ್ಟಿದ್ದ. ‘ಕ್ರೆಜಿ’ ಅಂದಿನ ನಮ್ಮ ಪೀಳಿಗೆಗೆ ಎಷ್ಟು ಅಪ್ಯಾಯಮಾನವಾಗಿ ಬಿಟ್ಟಿದ್ದರು ಎಂದರೆ, ‘ ಕುಂತರೂ, ನಿಂತರೂ ಅವನದ್ದೇ ಧ್ಯಾನ. ನಮ್ಮ ನಿತ್ಯದ ವ್ಯವಹಾಹಾರದಲ್ಲೂ ಅವರದ್ದೇ ಛಾಪು, ಮನೆ ಮನೆಗೋಂದು ಗೀಟಾರು, ಗುಲಾಬಿ ತೋಟ, ಹುಡುಗರಿಗೊಂದು ಬೈಕು-ಅದನ್ನು ನೋಡಿದ ಹುಡುಗಿಯರು….” ಎ ಗಂಗು ಬೈಕು ಕಲಿಸಿಕೊಡು ನಂಗೂ….” ಎಂದು ಹಾಡಿ ಚೇಷ್ಟೆ ಮಾಡುತ್ತಿದ್ದರೆ ಅದೇ ನಮಗೊಂದು ಕಾಂಪ್ಲಿಮೆಟ್. ತಕ್ಷಣಕ್ಕೆ ನಾವೆಲ್ಲ …” ಇದೆ ಬೈಕು ಕ್ಲಚು, ಇದೆ ಬೈಕು ಗೇರು….” ಎಂದು ಕಲಿಸಲು ಮುಂದಾಗುತ್ತಿದ್ದೆವು ! ಪ್ರತಿ ಹುಡುಗ-ಹುಡುಗಿಯ ಪುಸ್ತಕದೊಳಗೆ ಕೆಂಬಣ್ಣದ ‘ಹೃದಯ’ ದ ಚಿತ್ರ ಖಡ್ಡಾಯವಾಗಿ ತನ್ನ ಸ್ಥಾನವನ್ನು ಅಲಂಕರಿಸಿಕೊಳ್ಳುತ್ತಿತ್ತು. ಗುಂಗ್ರಾಗಿರುವ ಪೊದೆ ಕೂದಲು, ಎಳೆ ಮೀಸೆ, ಎದೆಯನ್ನು ಹಿಡಿದಿಟ್ಟುಕೊಳ್ಳಲೊಲ್ಲದ ಅಂಗಿಯ ಗುಂಡಿಗಳು, ಕತ್ತಲ್ಲಿ ನೇತಾಡುವ ದಪ್ಪನೆಯ ಚೈನು ಅದಕ್ಕೊಂದು ದಪ್ಪನೆಯ ಪೆಂಡೆಂಟು, ಮಾತಲ್ಲಿ, ನಡೆಯಲ್ಲಿ ನಮ್ಮ ವ್ಯವಹಾರವೆಲ್ಲವೂ ಅಂದು ‘ಕ್ರೆಜಿ’ ಯಾಗಿದ್ದವು. ಹಗಲಲ್ಲಿ ‘ರವಿ’ ಯಂತೆ ಉರಿದರೆ, ಇರುಳಲ್ಲಿ ‘ಚಂದಿರನಂತೆ ತಂಪೆರೆಯುತ್ತಿದ್ದ ನಮ್ಮ ನಾಯಕ. ಅಂದರೆ, ಆ ಜಮಾನದ ಮತ್ತು ಇಂದಿಗೂ ಕನ್ನಡ ಸಿನೆಮಾ ಲೋಕದ ಪ್ರೇಕ್ಷಕರಿಗೆ ಪ್ರೇಮಿಸಲು-ಕಾಮಿಸಲು, ಕ್ರೆಜಿಯಾಗಿ ಕನಸು ಕಾಣಲು ಹೇಳಿಕೊಟ್ಟ ‘ಪ್ರೇಮ ಗುರು’ ರವಿಚಂದ್ರನ್ ಎಂದರೆ ಅದು ಖಂಡಿತಾ ಅತಿಶಯೋಕ್ತಿಯಾಗಲಾರದು.
ಹಲವು ನೀರಿನಲ್ಲಿ ಅರಳಿದ ಹೂವುಗಳನ್ನು ಕನ್ನಡದ ನೀರಿನಲ್ಲೀಳಿಸಿ ಅದಕ್ಕೆ ಬಣ್ಣ ಹಚ್ಚಿದರು, ಕುಣಿಸಿದರು, ನಲಿಸಿದರು ಮತ್ತು ಬಾಗಿಸಿದರು ಮುಂದಿನದ್ದೆಲ್ಲಾ ನೀವು ನೀವೇ ಕನಸು ಕಾಣಿರಿ ಎಂದು ಮಿಕ್ಕಿದ್ದನ್ನು ನಮಗೆ ಬಿಟ್ಟುಕೊಟ್ಟರು.ಒಂದೊಂದು ಚಿತ್ರದಲ್ಲೂ ಒಂದೊಂದು ಹೂವನ್ನು ಪರಿಚಯಿಸಿ ಅದರ ಪರಿಮಳವನ್ನು ಹೀರುವುದು ಹೀಗೆ, ಅದರ ಸೊಬಗನ್ನು ಸವಿಯುವುದು ಹೀಗೆ ಎಂದು ತೋರಿಸಿ ನಮ್ಮೊಳಗೆ ಪುಳಕವನ್ನು ಹುಟ್ಟು ಹಾಕಿದವರು. ಉತ್ತಮ ಖುಷ್ಬುವಿನ, ರೋಜಾವನ್ನು,ಜೂಹಿಯನ್ನು, ಶಿಲ್ಪದಂತೆ ಕೆತ್ತಿ, ಸಿನೆಮಾ ಅಂದ್ರೆ ಎಂಟರ್‌ಟೇನ್‌ಮೆಂಟ್, ಎಂಟರ್‌ಟೇನ್‌ಮೆಂಟ್ ಅಂಡ್ ಎಂಟರ್‌ಟೇನ್‌ಮೆಂಟ್ ಮಾತ್ರ ಎಂದು ಹೇಳಿ ನಮ್ಮೊಳಗೆ ಕಿಚ್ಚು ಹಚ್ಚಿದ ದಿಲ್ಲಿ ಮೇಡಂನ ನಡು ಬಗ್ಗಿಸಿ, ಎದೆ ಹಿಗ್ಗಿಸಿ ಕಾಮಿಸುವ ಕನಸು ಇಲ್ಲಿದೆ ನೋಡಿ ಎಂದು ಅಕ್ಷರಶ: ನಮ್ಮನ್ನು ಬೆಚ್ಚಾಗಾಗಿಸಿದ್ದರು ಕ್ರೆಜಿ. ಹಾಗೆ ಅದೆಷ್ಟೋ ಇರುಳ ನಿದ್ದೆಗೆಡಿಸಿದ ಭೂಪತಿಯೂ ಹೌದು.
ಪ್ರತಿಯೊಂದು ಕಾಲಘಟ್ಟದಲ್ಲೂ, ಆಯಾ ಕಾಲಘಟ್ತಕ್ಕೆ ಅನುಗುಣವಾಗಿ ಜನರು ಹಲವು ರೀತಿಯ ಕನಸುಗಳನ್ನು ಕಾಣುತ್ತಾರೆ. ಆದರೆ ‘ರವಿ’ ಕಂಡದ್ದು ಮತ್ತು ಕಾಣಿಸಿದ್ದು, ‘ಚಂದ್ರ’ ತೋರಿಸಿದ್ದು ಮತ್ತು ಮಾಡಿದ್ದು ಕನ್ನಡದ ಯಾವುದೇ ಕಾಲಘಟ್ಟದ ಸಮೂಹಕ್ಕೆ, ಯುವ ಮನಸ್ಸಿಗೆ ಎಂದಿಗೂ ಅನ್ವರ್ಥವಾಗುವ ‘ಕನಸೇ’ ಆಗಿದೆ ! ಹೀಗೆ ದಿನ ನಿತ್ಯದ ಬದುಕಲ್ಲಿ, ನಮ್ಮ ಕಣ್ಣಿಗೆ ಗೋಚರಿಸುವ ಸುಂದರ ಶಿಲ್ಪಗಳ ಕಂಡು…’ ದಿನಾ ಬೀದಿಯಲಿ ಬಂದ್ರೆ ನೋಡು ಇಂತಾ ಬ್ಯೂಟಿ….ಎಂದೋ, ರಂಭೆ, ಮೇನಕೆಯ ವಂಶದ ಬೆಡಗಿ ನೋಡು..” ಎಂದೋ ಮನದಲ್ಲೇ ಕನವರಿಸುತ್ತಾ ಸಾಗಿ ಹೋಗುವ ನಾವುಗಳು ಒಂದು ಕಡೆಯಾದರೆ, ಇನ್ನೊಂದು ಕಡೆ, ” ಬಂದ್ಲು ಸಾರ್…ಶಕುಂತಲಾ…ಬಂದ್ ಕೂಡ್ಲೇ..ಮೀಟಿಂಗಾ…” ಎಂದು ಹಾಡಿ ಕಣ್ಣು ಪಿಳಿ ಪೀಳಿಗುಟ್ಟಿ ಬೆಚ್ಚಗಾಗುವ ಕಾಲೇಜು ಮೆಟ್ಟಿಲೇರಿದ ಯುವ ಸಮೂಹ ಇನ್ನೊಂದು ಕಡೆ. ನನ್ನ ಪ್ರಕಾರ ಇಂದಿನ ಕಾಲೇಜು ಹುಡುಗ-ಹುಡುಗಿಯರಿಗಂತೂ ‘ಕ್ರೆಜಿ’ ಯ ‘ಪ್ರೇಮ ಲೋಕ’ ವು ಬೆಚ್ಚಗಿನ ಕನಸ ಕಾಣಲಿರುವ ಒಂದು ದಿವ್ಯಲೋಕ ಹಾಗೂ ದಿವ್ಯ ತಾಣ! ನನಗಂತೂ ಈಗಲೂ ಋಜುವನೆಟ್ ಆಗಲು, ಈ ‘ ಪ್ರೇಮ ಲೋಕ’ ವೊಂದೇ ಸಾಕು !!!
ಪ್ರೇಮ ಲೋಕವು ಬೆಳ್ಳಿ ತೆರೆಯಲ್ಲಿ ಮಿನುಗಿ ತನ್ನ ೨೫ ವಸಂತಗಳನ್ನು ಪೂರೈಸಿದೆ. ಇದೀಗ ನೀವು ಬೆಳ್ಳಿ ಪರದೆಯಿಂದ ಹಿಂದೆ ಸರಿಯುತ್ತಿದ್ದೀರಿ ಎಂಬ ಮಾತನ್ನೂ ಕೇಳಲ್ಪಟ್ಟೆ….ಅಷ್ಟಕ್ಕೇ ಇಷ್ಟೆಲ್ಲಾ ಭಾವನೆಗಳು ಹರಿದವು ‘ ಕ್ರೇಜಿ’ . ಜೊತೆಗೆ ಇದೆಲ್ಲಾ ನೆನಪಾದದ್ದು, ಅಂದು ನಾನು ನನ್ನ ಹಳೆಯ ಪೆಟ್ಟಿಗೆಯನ್ನು ತೆಗೆದು ನೋಡುತ್ತಿದ್ದಾಗ, ತಂತಿ ಮುರಿದ ಸಣ್ಣದೊಂದು ಗಿಟಾರ್ ಮತ್ತು ಕೆಂಪು ಬಣ್ಣದ ಹೃದಾಯಾಕಾರದ ಚಿತ್ರ..ಅದರೊಳಗೆ ‘ ನನ್ನ ಕ್ರೇಜಿಗೆ, ಪ್ರೀತಿಯಿಂದ…ಎಂದು ಗೀಚಿದ ಒಂದು ಸಹಿ’, ಅದರ ಕೆಳಗೊಂದು ಸಾಲು; ‘ಇದು ನನ್ನ ನಿನ್ನ ಪ್ರೇಮ ಗೀತೆ ಚಿನ್ನ… ಅದ ಎಷ್ಟು ಸಾರಿ ಹಾಡಿದರು ಚೆನ್ನ..” ಎಂದು ಬರೆದಿತ್ತು. ದೀರ್ಘವಾದೊಂದು ಉಸಿರನ್ನು ಎಳೆದುಕೊಂಡು ಅದೆಷ್ಟು ಹೃದಯಗಳ ಮಿಲನಕ್ಕೆ ನೀವು ಕಾರಣಕರ್ತರಪ್ಪಾ ಎಂದು ನಿಮ್ಮನ್ನು ನೆನೆದುಕೊಂಡೆ. ಇವೇ ನಿಮ್ಮ ನೆನೆಯಲು, ನನ್ನ ಯೌವ್ವನದ ದಿನಗಳನ್ನು ಮೆಲುಕು ಹಾಕಲು ಕಾರಣವಾಯಿತು ಮೈ ಹೀರೋ ಕ್ರೆಜಿ ! ಕನ್ನಡ ಚಿತ್ರ ರಂಗಕ್ಕೆ , ಕನ್ನಡ ಸಿನೆಮಾ ಪ್ರೇಕ್ಷಕರಿಗೆ ಕನಸುಗಳ ಬುಟ್ಟಿಯನ್ನು ಹೊತ್ತು ತಂದ ಕನ್ನಡ ಚಿತ್ರರಂಗದ ಕನಸುಗಾರ, ರಸಿಕ, ದಿ ಶೋ ಮ್ಯಾನ್ ನೀವು ಎಂಬ ವಿಚಾರವಾಗಿ ದೂಸ್ರಾ ಮಾತಿಲ್ಲ. ಇಂದಿಗೂ ಕನಸನ್ನೇ ಹೆಣೆಯುತ್ತಿರುವ, ಹೆಣೆದು ಪೋಣಿಸುತ್ತಿರುವ ನಿಮ್ಮ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಸರಿ ಬಿಡಿ. ವಯಸ್ಸು ನಿಮ್ಮ ದೇಹಕ್ಕೆ, ಅದರ ಅಸ್ತಿತ್ವವನ್ನು ತೋರಿಸುತ್ತಿದೆಯಾದರೂ ನಿಮ್ಮ ಮನಸ್ಸು ಹಾಗೂ ಹೃದಯಕ್ಕಂತೂ ಖಂಡಿತಾ ಅಲ್ಲ. ಕಾರಣ ನೀವಿಳಿದು ಬಂದದ್ದು ‘ ಪ್ರೇಮ ಲೋಕದಿಂದ’, ಅದೂ ಕೈ ತುಂಬಾ ‘ಹೂ’ ವನ್ನೆತ್ತಿಕೊಂಡು, ಹೃದಯ ತುಂಬಾ ಪ್ರೀತಿ,ಪ್ರೇಮ,ಪ್ರಣಯವನ್ನು ಹೊತ್ತುಕೊಂಡು ಜೊತೆಗೆ ‘ರಣಧೀರ’ನಾಗಿ ಹಲವು ‘ ಬಳ್ಳಿ’ ಗಳನ್ನು ಮೈ ತುಂಬಾ ಸುತ್ತಿಕೊಂಡು, ‘ರಸಿಕ’ ತನವೇ ನಿಮಗೆಲ್ಲವೂ ಆಗಿರುವಾಗ…. ಒಟ್ಟಿನಲ್ಲಿ ನಮಗೆ ಪ್ರೀತಿಯ,ಪ್ರೇಮದ ಸುಂದರ,ಸೊಬಗಿನ ಕನಸನ್ನು ನಿತ್ಯ ಕಾಣುವಂತೆ ಮಾಡಿದ, ಇನ್ನೂ ಹೆಚ್ಚಿನ ಕನಸನ್ನು ಕಾಣುವಂತೆ ಪ್ರೇರೇಪಿಸಿ ಅದನ್ನು ನನಸಾಗಿಸುವಲ್ಲಿ ಧೈರ್ಯ ತುಂಬಿದ ನಿಮಗಾಗಿ ಇದೋ ಪ್ರೀತಿಯ ಈ ‘ಅಕ್ಷರ ರೂಪಿ’ ರೋಜಾ ಹೂವು. ಸ್ವೀಕರಿಸಿ !
 

‍ಲೇಖಕರು avadhi

August 23, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Anonymous

    Hi, Good Morning. ಇವತ್ತು ಬೆಳಿಗ್ಗೆ ಫೇಸ್ ಬುಕ್ ತೆರೆದ ಕೂಡಲೇ ಈ article ಓದಿದೆ. ವಾಹ್ ಎಷ್ಟು ಚೆನ್ನಾಗಿ ಬರೆದಿದ್ದೀರಿ. ಒಂದು ಘಳಿಗೆ ನಾನು ಕೂಡಾ ನನ್ನ ಹಿಂದಿನ ದಿನಗಳಿಗೆ ಹೋದೆ. ಆ ಸಿನಿಮಾ ಬಂದಾನ ನಾನು ನಿಜವಾಗಲೂ ಪ್ರೇಮಲೋಕದಲ್ಲಿದ್ದೆ. ಸಿನಿಮಾದ ಕೊನೆಯಲ್ಲಿ ರವಿಚಂದ್ರನ್ ಹೀರೋಯಿನ್ ಮನೆಗೆ ಬಂದು ಮೋಸಗಾರನಾ ಹಾಡು ಹೇಳುವ scene ಇದೆಯಲ್ಲಾ, ಅದೇ ರೀತಿ ನನಗೂ ನನ್ನ ಪ್ರೇಮಿ(ಈಗಿನ ಪತಿ)ಗೂ ಯಾವುದೋ ವಿಷಯದಲ್ಲಿ ಜಗಳವಾದಾಗ ಅವರು ಕೂಡಾ ನಮ್ಮ ಮನೆಗೆ ಬಂದು ಇಡೀ ರಾತ್ರಿ ಹೊರಗೆ ನಿಂತಿದ್ದರು. ಅದೆಲ್ಲಾ ನೆನಪಾಯಿತು. ಈ ವರ್ಷ ನಾವು ನಮ್ಮ ಮದುವೆಯ 30ನೇ ವಾರ್ಷಿಕೋತ್ಸವ ಆಚರಿಸುತ್ತಿದ್ದೇವೆ.

    ಪ್ರತಿಕ್ರಿಯೆ
  2. Namitha Shivaprasad

    Hi, Good Morning. ಇವತ್ತು ಬೆಳಿಗ್ಗೆ ಫೇಸ್ ಬುಕ್ ತೆರೆದ ಕೂಡಲೇ ನಿಮ್ಮ ಪ್ರೇಮಲೋಕ article ಓದಿದೆ. ವಾಹ್ ಎಷ್ಟು ಚೆನ್ನಾಗಿ ಬರೆದಿದ್ದೀರಿ. ಒಂದು ಘಳಿಗೆ ನಾನು ಕೂಡಾ ನನ್ನ ಹಿಂದಿನ ದಿನಗಳಿಗೆ ಹೋದೆ. ಆ ಸಿನಿಮಾ ಬಂದಾನ ನಾನು ನಿಜವಾಗಲೂ ಪ್ರೇಮಲೋಕದಲ್ಲಿದ್ದೆ. ರವಿಚಂದ್ರನ್ ಈ ಸಿನಿಮಾದ ಕೊನೆಗೆ ಹೀರೋಯಿನ್ ಮನೆಗೆ ಬಂದು ಮೋಸಗಾರನಾ ಹಾಡುತ್ತಾರಲ್ಲಾ, ಹಾಗೆ ನನ್ನ ಪ್ರೇಮಿ(ಈಗ ಪತಿ)ಗೂ ಯಾವುದೋ ವಿಷಯಕ್ಕೆ ಜಗಳವಾದಾಗ, ಅವರು ಕೂಡಾ ನನ್ನ ಮನೆಗೆ ಬಂದು ಇಡೀ ರಾತ್ರಿ ನಿಂತಿದ್ದರು. ಇದೆಲ್ಲಾ ಈಗ ನೆನಪಾಯಿತು. ಈ ವರ್ಷ ನಾವು ನಮ್ಮ ಮದುವೆಯ 30ನೇ ವಾರ್ಷಿಕೋತ್ಸವ ಆಚರಿಸುತ್ತಿದ್ದೇವೆ.

    ಪ್ರತಿಕ್ರಿಯೆ
  3. Anonymous

    Hi, Good Morning. I Love ravichandaran the great man in the kannada industries avaru no abinayadinda hinde sariyabaradu please ravimama nivu acting munduvarisi please

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: