ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಮಾಕಾಂತ್‌ ಆರ್ಯನ್ ಕಾಮೆಂಟರಿ-‌ ನಿನ್ನೆ T-20 ಸೆಮಿಫೈನಲ್ ಮ್ಯಾಚ್ ನೋಡಿದಿರಾ?

ರಮಾಕಾಂತ್‌ ಆರ್ಯನ್


AUS VS PAK..
ಒಂದು ದಶಕ ಕಾದರೆ ಇಂತಹ ಒಂದು ಇಂಟರೆಸ್ಟಿಂಗ್ ಮ್ಯಾಚ್ ಸಿಗಬಹುದೇನೋ! ಒಂದು ಕಡೆ ಟಿ.20 ವಿಶ್ವಕಪ್ ಗೆದ್ದೇ ಬಿಡುವ ಉಮೇದಿಗೆ ಬಿದ್ದಿದ್ದ ಪಾಕ್ ಪಡೆ. ಭಾರತವನ್ನು ನೋ ಲಾಸ್ ನಲ್ಲಿ ಸೋಲಿಸಿದ ಆ ಆಟ ಇತ್ತಲ್ಲಾ, ಅದನ್ನ ನೋಡಿಯೇ ಅದೆಷ್ಟು ಜನ ಇವರು ವರ್ಲ್ಡ್ ಕಪ್ ಗೆದ್ದೇ ಬಿಡುತ್ತಾರೆ ಎಂದು ಮನದ ಮೂಲೆಯಲ್ಲಿ ಬರೆದುಕೊಂಡಿದ್ದರೋ ಗೊತ್ತಿಲ್ಲ. ಮೊಹಮ್ಮದ್ ರಿಜ್ವಾನ್, ಫಖರ್ ಜಮಾನ್, ಬಾಬರ್ ಅಜಮ್ ಬ್ಯಾಟಿಂಗ್ ಪಡೆ. ಯಾರೂ ಕಣಕ್ಕಿಳಿದರೂ ಮಿನಿಮಮ್ 50. ಭಾರತದ ವಿರುದ್ಧ ಒಂದು ರಣಜಿ ತಂಡದ ಎದುರು ಆಡಿದಂತೆ ಆಡಿಬಿಟ್ಟಿದ್ದರು. ಐಪಿಎಲ್ ನಲ್ಲಿ ಮೊದಲೇ ದಣಿದಿದ್ದ ಈ ರೇಸ್ ಕುದುರೆಗಳ ಎದುರಿಗೆ ಬೆಂಕಿಮಳೆಯನ್ನೇ ಸುರಿಸಿಬಿಟ್ಟಿದ್ದರು. ಇಂತಹ ಬ್ಯಾಟ್ಸ್ ಮನ್ಗಳು ಒಂದು ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಡೀಸೆಂಟ್ ಎನ್ನುವಂತ ಸವಾಲು ಕೂಡಿ ಹಾಕಿದ್ದರು.

ಸ್ಕೋರ್ 176, ಬಿದ್ದಿದ್ದು just 4 ವಿಕೆಟ್ ಮಾತ್ರ. ಪಾಕಿಸ್ತಾನದ ಈ ಸ್ಕೋರ್ ನೋಡಿ ಅದರ ಬೌಲಿಂಗ್ ಬಗ್ಗೆ ನಂಬಿದ್ದವರಿಗೆ ಅದೇ ಫೇವರಿಟ್ ಆಗಿತ್ತು ಕೂಡಾ. ಸ್ಟಾರ್ ಬ್ಯಾಟ್ಸ್ ಮನ್ ಗಳನ್ನ ಜೀರೋಗೆ ಕೆಡವುವ ಅದರ ಪ್ಲಾನ್ ಕ್ಲಿಕ್ ಆಗಿತ್ತು ಬೇರೆ. ಆರನ್ ಫಿಂಚ್ ರನ್ನ ಪಾಕ್ ನ ಮಸ್ತ್ ಕಲಂದರ್ ಶಾಹಿನ್ ಅಫ್ರಿದಿ ತನ್ನ ಎಲ್ ಬಿ ಮೋಡಿಗೆ ಬೀಳಿಸಿದ್ದ. ಶಾಹೀನ್ ತೆಗೆದ ಮೊದಲ‌ ಮತ್ತು ಕೊನೆಯ ವಿಕೆಟ್ ಅದೇ ಆಗಿತ್ತು ಬಿಡಿ.

ಶಾಹಿನ್ ಈ T-20 ಮ್ಯಾಚ್ ನಲ್ಲಿ ಭರ್ತಿ 12 ಡಾಟ್ ಬಾಲ್‌ ಎಸೆದಿದ್ದ ಎಂದರೆ ಅದೆಷ್ಟು ಕರಾರುವಕ್ ಲೈನ್ ಅಂಡ್ ಲೆಂಗ್ತ್ ಮತ್ತು ಸ್ವಿಂಗ್ ಗಳು ಅವನಿಂದ ಬಂದಿರಬೇಡ. ಆದರೆ ಸಿಡಿದವನು ಡೇವಿಡ್ ವಾರ್ನರ್ ಎಂಬ ಮದಗಜ. ಖಡಕ್ಕಾಗಿ ನಿಂತೇ ಬಿಟ್ಟ. 3 ಸಿಕ್ಸರ್ ಮತ್ತು 3 ಬೌಂಡರಿ ಚಚ್ಚಿದ್ದ. ನಾನಿದ್ದೇನೆ ಎಂದಿದ್ದ. ಅದೇಕೋ ಗೊತ್ತಿಲ್ಲ ಮಾರ್ಷ್ 28 ಬಾರಿಸಿದ‌ ನಂತರ ಪೆವಿಲಿಯನ್ ಗೆ ಕಾಂಗರೂಗಳ ಗುಳೇ ಶುರುವಾಗಿತ್ತು. 96 ಆಗುವಷ್ಟರಲ್ಲೇ ಐದು ಜನ ಮೈನ್ ಬ್ಯಾಟ್ಸ್ ಮನ್ ಗಳು ಬೆಂಚ್ ಬಿಸಿ ಮಾಡುತ್ತಿದ್ದರು. ಗೆಲುವಿನ ಗೆರೆಯ ಟೇಪು ದಾಟಲು ಇನ್ನೂ 80 ರನ್ ಬೇಕಿತ್ತು.

ಆಗ ಸಿಡಿದವರು ಮಾರ್ಕಸ್ ಸ್ಟೋಯ್ನಿಸ್ ಮತ್ತು ಮ್ಯಾಥ್ಯೂ ವೇಡ್. ಅಕ್ಷರಶಃ ಗ್ರೀಕ್ ವೀರರ ಹೋರಾಟ ಅದು. ಸನ್ ಗಾಡ್ ಮೈಮೇಲೆ ಬಂದಿದ್ದ ಅಷ್ಟೇ. ಅದರಲ್ಲೂ ವೇಡ್ ಆಟ. ಅಬ್ಬ! ಎಂತಹ ಲೆಫ್ಟ್ ಹ್ಯಾಂಡ್ ಬ್ಯಾಟ್ಸಮನ್ ಇವನು. ಗ್ರೀಕ್ ವೀರ ಅಖಿಲಿಸ್ ಎದ್ದುಬಂದಂತೆ ಆಡಿದ್ದ. ನಿಮ್ಮದೂ ಒಂದು ಬೌಲಿಂಗಾ ಎಂಬಂತೆ ಬಾರಿಸಿಬಿಟ್ಟಿದ್ದ. ಸದ್ಯ ಆಡುತ್ತಿರುವ ತಂಡಗಳಲ್ಲೇ ಉತ್ತಮ ಬೌಲಿಂಗ್ ಪಡೆಗೆ ನೀರಿಳಿಸಿಬಿಟ್ಟಿದ್ದ. ಭಯದ ಸಣ್ಣ ನೆರಿಗೆಯೂ ವೇಡ್ ಮುಖದಲ್ಲಿ ಕಾಣಿಸಲಿಲ್ಲ. ಅವನು‌ ಒಂಥರಾ ಆಲನ್ ಬಾರ್ಡರ್, ಇನ್ನೊಂಥರಾ ಡೇವಿಡ್ ಬೂನ್, ಸಡನ್ ಆಗಿ ಮ್ಯಾಥ್ಯೂ ಹೇಡನ್ ಆಗಿಬಿಡುವ ಮಾಯಾವಿ ಮಾರ್ಜಾಲ!

ಅದೆಂಥಾ ರಣಬಲಿಷ್ಠ ತೋಳುಗಳು ವೇಡ್. ಈ T20 ಯಲ್ಲಿ ಯಾವ ಚೆಂಡೂ ಅಂಥ ಪೆಟ್ಟು ತಿಂದಿರಲಿಲ್ಲವೇನೋ ಇನ್ನೊಂದು ಓವರ್ ಗೂ ಮ್ಯಾಚ್ ಜಾರಿದ್ದರೆ ಚೆಂಡಿನ ಗರ್ಭವೇ ಸೀಳುತ್ತಿದ್ದೆಯೇನೋ! ಅದೆಂಥಾ ಟೆಂಪರ್ ಮೆಂಟ್ ನಿನ್ನದು. ನಿನ್ನ ಬಿಡು ಬೀಸಾದ ಬ್ಯಾಟಿಂಗ್ ಎದುರು ಬಲಿಷ್ಠ ಎನಿಸಿದ್ದ ಬೌಲಿಂಗ್ ಪಡೆಯನ್ನ ಜುಜುಬಿ ಎನಿಸಿಬಿಟ್ಟೆ. ಆ ವೇಗದ ಬೌಲಿಂಗ್ ಗೆ ಸ್ಕೂಪ್ ಸಿಕ್ಸರ್ರಾ? ಕಡಿಮೆ ಎಂದರೂ 10000 ಎಸೆತಗಳಿಗೆ ಪ್ರಾಕ್ಟೀಸ್ ಮಾಡಿರಬೇಕು. ಅನೇಕ ಬಾರಿ ಹೆಲ್ಮೆಟ್ ನ ತಂತಿಗಳೇ ಸೀಳಿ ಹೋಗಿರಬೇಕು. ಬಾಡಿ ಬ್ಯಾಲೆನ್ಸ್ ತಪ್ಪಿ ಅಂಗಾತ ಬಿದ್ದಿರಬೇಕು. ಅಂತಹ ಪ್ರಾಕ್ಟೀಸ್ಗೆ ಮಾತ್ರ ಒಲಿಯುವ ಶಾಟ್ ಗಳವು. ಸುಮ್ಮನೇ ಹೊಡೆದುಬಿಡುತ್ತೇನೆ ಎಂದರೆ 150 Km ವೇಗದ ಚೆಂಡು ಕಿಬ್ಬರಿಯ ಕೀಲು ಸೀಳಿ ಹಾಕಿರುತ್ತದೆ ಅಷ್ಟೇ!

ಒಬ್ಬ ಬ್ಯಾಟ್ಸ್ ಮನ್ ಬಗ್ಗೆ ಹೇಳುವ ಮುನ್ನ ಅವನು ಫೇಸ್ ಮಾಡಿದ ಬೌಲರ್ ಬಗ್ಗೆ ಹೇಳಬೇಕು. ಶಾಹೀನ್ ಅಫ್ರಿದಿ. ಸದ್ಯ ವಿಶ್ವದ ಶ್ರೇಷ್ಠ ಬೌಲರ್ ಗಳ ರೇಸ್ ನಲ್ಲಿದ್ದಾನೆ. 17 ತುಂಬಿದೆ. ಬಲಿಷ್ಠ ಮತ್ತು ಹುರಿಗಟ್ಟಿದ ತೋಳು. ಆರೂವರೆ ಅಡಿ ಉದ್ದವಿದ್ದಾನೆ. ನಮ್ಮ ಹೃತಿಕ್ ರೋಷನ್ ಗಿಂತ ಎರಡು ಇಂಚು ಜಾಸ್ತಿ ಉದ್ದ. ಇವನಲ್ಲಿ ಗಂಟೆಗೆ 94 ಮೈಲು ವೇಗದಲ್ಲಿ ಚೆಂಡು ಬೀಸಿ, ಮಿಂಚು ಹರಿಸುವ ಶೋಯಿಬ್ ಅಖ್ತರ್ ಇದ್ದಾನೆ. ಅರ್ಥವೇ ಆಗದ ಸ್ವಿಂಗ್ ಸುಲ್ತಾನ ವಾಸಿಂ ಅಕ್ರಮ್ ಕ್ಷಣಾರ್ಧದಲ್ಲಿ ಮಿಂಚಿ ಮರೆಯಾಗುತ್ತಾನೆ.. ಆಗಾಗ ಮೆಕ್ ಗ್ರಾತ್, ಸ್ವಲ್ಪ ಮೊಹಮ್ಮದ್ ಆಸಿಫ್ ಎಂಬ ಕಳೆದೇ ಹೋದ ಡೀಸೆಂಟ್ ಬೌಲಿಂಗ್ ಮಾಂತ್ರಿಕ, ರಣರಾಕ್ಷಸನಂತೆ ಕುಕ್ಕಿಬಿಡುವ ವಖಾರ್ ಕಾಣಿಸುತ್ತಾನೆ. ಇಂತಹ ವೆರೈಟಿಗಳನ್ನ ತುಂಬಿ ಕೊಂಡಿರುವ ಎಡಗೈ ಬೌಲರ್ ಇವನು. ಲಾಹೋರ್ ಕಲಂದರ್!

ಇದೇ ಫಖರ್ ಜಮಾನ್ ಮತ್ತು ಬಾಬರ್ ಅಜಂರನ್ನ, ತನ್ನ ದೇಶೀಯ ಟೂರ್ನಿಗಳಲ್ಲಿ ಅದೆಷ್ಟು ಬಾರಿ ಬಕ್ಕಬೋರಲು ಬೀಳಿಸಿದ್ದಾನೋ ಲೆಕ್ಕವೇ ಇಲ್ಲ. ಅಂತಹ ಬೌಲರ್ ಇವನು. ನಮ್ಮ ರೋಹಿತ್ ಶರ್ಮ ಮತ್ತು ಕೆಎಲ್ ರಾಹುಲ್ ಗೆ ಅದೆಂಥಾ ಮರ್ಮದ ಎಸೆತ ಎಸೆದುಬಿಟ್ಟಿದ್ದ ಗೊತ್ತಾ? ಒಂದು ವಿಕೆಟ್ ಕಳೆದುಕೊಂಡು ಇನ್ನೂ ಉಸಿರು ಬಿಟ್ಟಿರಲಿಲ್ಲ. ಅಷ್ಟರಲ್ಲೇ ಇನ್ನೊಂದು ವಿಕೆಟ್ ಉರುಳಿಸಿ ಉಸಿರುಗಟ್ಟಿಸಿದ್ದ.

ಐಪಿಎಲ್ ನಲ್ಲಿ ಸರಾಸರಿ 130 ಕಿಮೀ ವೇಗದ ಎಸೆತ ಎದುರಿಸಿ ಲೀಲಾಜಾಲವಾಗಿದ್ದ ಹುಡುಗರಿಗೆ all of a sudden 150 ಕಿಮೀ ವೇಗದ ರುಚಿ ತೋರಿಸಿದ್ದ. ಅದೊಂಥರ Different cup of Green Neem tea. ಅವನು ಶಾಹಿನ್ ಅಫ್ರಿದಿ. ಸಂಭ್ರಮಾಚರಣೆಯ ಸ್ಟೈಲ್ ನಲ್ಲಿ ಅಪ್ಪಟ ಬೂಮ್ ಬೂಮ್ ಅಫ್ರಿದಿ. ಇಂತಹ ಬೌಲರ್ ಗೆ ತನ್ನ ಸ್ಕಿಲ್, ಭುಜಬಲ, ಸ್ಕೂಪ್ ಮುಂದೆ ನಿಲ್ಲುತ್ತೀಯೇನೋ ಟೀನೇಜರ್ ಎನ್ನುವಂತೆ ಸಿಡಿದವನು ಮ್ಯಾಥ್ಯೂ ವೇಡ್! ಅಬ್ಬ ಆ ಹೊಡೆತಗಳು.

ನಂಬಿ ಎಸೆತ ಮತ್ತು ರನ್ ಗಳ‌‌ ನಡುವೆ ಅಜಗಜಾಂತರ ವ್ಯತ್ಯಾಸವಿದ್ದ ಮ್ಯಾಚ್ ಅದು. ಈ ಕಡೆ ಪೆವಿಲಿಯನ್ ನಲ್ಲಿ ತಂಡದ ಒಬ್ಬನೇ ಒಬ್ಬ ಆಸೀ ಆಟಗಾರ ಕಣ್ಣು ರಪ್ಪೆ ಮುಚ್ಚಿದ್ದನ್ನ ನಾನು ನೋಡಲಿಲ್ಲ. ಎಲ್ಲ ಉಗುರುಗಳೂ ಕಚ್ಚೀ ಕಚ್ಚೀ ಮುಗಿದೇ ಹೋಗಿದ್ದವು. ದುಬೈನ ಆ ಮೈದಾನ ಭಾರತವಾಡದಿದ್ದರೂ ಇಡೀ ವಿಶ್ವದ ಕೇಂದ್ರಬಿಂದು. ಪಾಕ್ ಆಡುತ್ತಿತ್ತಲ್ಲ! ಮೈದಾನದ ತುಂಬಾ ಅಂಖ್ಯಾತ ಪಾಕ್ ಅಭಿಮಾನಿಗಳು. ವೇಡ್ ಕೊಡುತ್ತಿದ್ದ ಒಂದೊಂದು ಹೊಡೆತಕ್ಕೂ ಕುಳಿತಲ್ಲೇ ಕುಸಿದುಬಿಡುತ್ತಿದ್ದರು. ಒಂದು ಸಿಕ್ಸರ್ ಅಂತೂ ಅಭಿಮಾನಿಗಳ ಕೈಗೆ ಚೆಂಡು ಸಿಗುವಂತೆ ಹೊಡೆದಿದ್ದ. ವೇಡ್ ಯಾರ ವಿರುದ್ಧ ಗೆದ್ದ ಎನ್ನುವುದು ಇಲ್ಲಿ ವಿಷಯವಲ್ಲ. T20 ಗೆ ಹೇಳಿ ಮಾಡಿಸಿದ ಕೌಶಲ್ಯ ಅವನನ್ನ ಕಳೆಗಟ್ಟಿಸಿತ್ತು. ಚೆಂಡನ್ನ ಬ್ಯಾಟ್ ನಲ್ಲಿ ಮಿಡಲ್ ಮಾಡುತ್ತಿದ್ದ ಆ Perfection ಎಲ್ಲರನ್ನ ಆವರಿಸಿಕೊಂಡಿತ್ತು.

ಒಂದು NatWest final ನ ಯುವರಾಜ್ ಸಿಂಗ್ – ಕೈಫ್ ಆಟ, ವಾಂಡರರ್ಸ್ ನಲ್ಲಿ ಅಮೋಘ ಚೇಸಿಂಗ್, ಈಡನ್ ಗಾರ್ಡನ್ ನಲ್ಲಿ ಫಾಲೋ ಆನ್ ಹೇರಿಸಿಕೊಂಡು ಗೆಲುವನ್ನ ಚುಂಬಿಸಿದ್ದ ದ್ರಾವಿಡ್ ಅಂಡ್ ಲಕ್ಷ್ಮಣ್ ಆಟ. T20 ವಿಶ್ವಕಪ್ ಫೈನಲ್ ನಲ್ಲಿ ಪಾಕ್ ವಿರುದ್ಧ ಭಾರತ ಗೆದ್ದಿದ್ದ ಕ್ಷಣಗಳು ಸದಾ ಹಸಿರು. ಅಂತಹ ನೆನಪಿನಲ್ಲಿ ಉಳಿಯುವ ಮ್ಯಾಚ್ ಇದು.

ಆಸೀಸ್ ಗೆದ್ದಾಗ ಇನ್ನೂ ಆರು ಎಸೆತ ಬಾಕಿ ಇತ್ತು. ಐದು ಬ್ಯಾಟ್ಸ್ ಮನ ಗಳ ಆಟ ಬಾಕಿ ಇತ್ತು. ಅಷ್ಟೇ! ನೋಡದಿದ್ದರೆ ಹೈಲೆಟ್ಸ್ ನೋಡಿ.

‍ಲೇಖಕರು Admin

12 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading