ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ರಣ್ ಉತ್ಸವ ಮತ್ತು ನಾವಿಬ್ಬರು’ – ಮಂಜುಳಾ ಬಬಲಾದಿ

ಕುಚ್ ರಾತ್ ತೋ ಗುಜಾರಿಯೆ ಗುಜರಾತ್ ಮೇ…!

(ಕೆಲ ರಾತ್ರಿಗಳನ್ನಾದರೂ ಕಳೆಯಿರಿ ಗುಜರಾತಿನಲ್ಲಿ)

ಹಿನ್ನೆಲೆ : ಗುಜರಾತ್ ನ ದಿ ಗ್ರೇಟ್ ರಣ್ ಆಫ್ ಕಚ್ ನ ಸಮೀಪದಲ್ಲಿ ಪ್ರತಿ ವರ್ಷ ಡಿಸೆಂಬರ್ ನಿಂದ ಫೆಬ್ರುವರಿಯ ನಡುವೆ ೨-೩ ತಿಂಗಳುಗಳ ಕಾಲ ಗುಜರಾತ್ ಟೂರಿಸಂ ಆಯೋಜಿಸುವ ‘ರಣ್ ಉತ್ಸವ್’ ನಡೆಯುತ್ತದೆ.
ರಣ್ ಆಫ್ ಕಚ್ ಪಶ್ಚಿಮ ಗುಜರಾತ್ ನ ಅಂಚಿನಲ್ಲಿ 7505.22 ಚದರ ಕಿ. ಮೀ ನಷ್ಟು ವಿಶಾಲವಾಗಿ ಹರಡಿಕೊಂಡಿರುವ ಋತುಕಾಲಿಕ ಉಪ್ಪು ಮರುಭೂಮಿ. ಇದು ಜಗತ್ತಿನ ಅತಿ ದೊಡ್ಡ ಉಪ್ಪು ಮರುಭೂಮಿಯೂ ಹೌದು. ಬಿಳಿಯ ಉಪ್ಪು ಮರುಳನ್ನು ಪೂರ್ಣ ಚಂದಿರನ ಬೆಳದಿಂಗಳು ಆವರಿಸಿಕೊಂಡಾಗ ಪ್ರಕೃತಿಯ ಅನಿವರ್ಚನೀಯ ಅನುಭವ ನಮ್ಮನಾವರಿಸಿಕೊಳ್ಳುವುದು, ಹೀಗೊಮ್ಮೆ ಆವರಿಸಿದ ಮೋಡಿ ತಿಂಗಳುಗಳಾದರೂ ಮಾಸದೇ ಇರುವುದನ್ನು ನಾವು ಅನುಭವಿಸಿಯೇ ತಿಳಿಯಬೇಕು. ಈ ಪ್ರವಾಸ ಕಥನ, ರಣ್ ಆಫ್ ಕಚ್ ನ , ರಣ್ ಉತ್ಸವ್ ನ, ಗುಜರಾತ್ ನಲ್ಲಿ ನಾ ಕಂಡ ಬಣ್ಣಗಳ ಒಂದು ಕಿರು-ನೋಟ.
‘ಬಾನಿಂದ ಬಾ ಚಂದಿರ… ಈ ಭೂಮಿಯೇ ಸುಂದರ… ‘ ಸೋನು ನಿಗಮ್ ನ ರೇಶಿಮೆ ದನಿಯಲ್ಲಿ ಹಾಡು ತೇಲಿ ಬಂದ ಹಿಂದೆಯೇ, ಅಮಿತಾಬ್ ರ ಗಡಸು, ಅಯಸ್ಕಾಂತೀಯ ದನಿಯಲ್ಲಿ ಕೇಳಿ ಬಂದದ್ದು ‘ಆಪ್ ನೇ ಕಚ್ ನಹಿ ದೇಖಾ ತೋ ಕುಚ್ ನಹಿ ದೇಖಾ…! ಕುಚ್ ದಿನ ತೋ ಗುಜಾರಿಯೇ ಗುಜರಾತ್ ಮೇ… ‘ ಇವೆರಡೂ ಹೀಗೆ ರೇಡಿಯೋನಲ್ಲಿ ಒಂದರ ಹಿಂದೆ ಒಂದು ಕೇಳಿ ಬಂದು, ತಳಕು ಹಾಕಿಕೊಂಡ ದಿನವೇ ಮನಸಿನ ಅದ್ಯಾವುದೋ ಮೂಲೆ ಚಂದಿರ, ಭೂಮಿ, ಸೌಂದರ್ಯ,ಕಚ್, ಗುಜರಾತ್, ಎಂಬ ಸಂಜ್ಞೆಗಳನ್ನೆಲ್ಲ ಒಟ್ಟಿಗೆ ಅದೆಲ್ಲೋ ಅಡಗಿಸಿಟ್ಟುಕೊಂಡುಬಿಟ್ಟಿತ್ತು ಎಂದೆನಿಸುತ್ತದೆ, ಇಂದು ತಿರುಗಿ ನೋಡಿದರೆ!
ತಿರುಗಿ ನೋಡುವುದು,ತಿರು-ತಿರುಗಿ ನೋಡುವುದು ಒಂದು ವಿಚಿತ್ರವಾದ ಖುಷಿ. ತಿರುಗಿ ನೋಡುವ ನೋಟದಲ್ಲಿರುವ ಆಳ, ಅದರ ಪ್ರತಿಫಲನ ಅದೆಷ್ಟು ಹೊಸ ಹಾದಿಗಳನ್ನು ಹುಟ್ಟುಹಾಕಬಲ್ಲದೋ! ಅಂತಹುದೇ ಒಂದು ಹೊಸ ಹಾದಿಯಲ್ಲಿ, ಅರ್ಧ ರಾತ್ರಿಯಲ್ಲಿ ಹಿಂದಿನದೆಲ್ಲವನ್ನು ಹಿಂದೆ ತಳ್ಳಿ, ಅದೇ ಬಾನ ಚಂದಿರನೊಡನೆ ಓಡುತ್ತಿತ್ತು ಝಗ-ಮಗ ಹೊಳೆಯುವ ರೇಡಿಯಂ ರಸ್ತೆಯ ಮೇಲೆ ಈಸಿ ಕ್ಯಾಬ್ ನ ಕಾರ್. ‘ಇಲ್ಲೇ ಕಾಣುವ ಈ ಚಂದಿರನನ್ನು ನೋಡಲು ಅಲ್ಲಿಯವರೆಗೂ ಹೋಗಬೇಕಾ?’ ನನ್ನ ಪಕ್ಕಾ ಲಾಜಿಕಲ್ ಮೈಂಡ್ ಅಣಕಿಸುತ್ತಿತ್ತು. ‘ಹೌದು ದೂರದಲ್ಲಿರೊ ಚಂದ್ರ ಕಾಣ್ತಾನೆ, ಆದರೆ ಪಕ್ಕದಲ್ಲಿರೋ ತುಮಕೂರು ನಮ್ಮ ಕಣ್ಣಿಗೆ ಕಾಣೋದಿಲ್ಲ, ಅಲ್ವಾ?’ ಅದೇ ಲಾಜಿಕಲ್ ಮೈಂಡ್ ನ ಬಾಲಿಶ ಪ್ರಶ್ನೆ. ‘ಹತ್ತಿರ-ದೂರಗಳೆಲ್ಲ ನಾವನುಭವಿಸಿದಂತೆ’ ಅನುಭಾವಿ ಮನಸಿನ instant ಉತ್ತರವೂ ready! ದಿನದ ಜಂಜಡಗಳನ್ನೆಲ್ಲ ಪಕ್ಕಕ್ಕಿರಿಸಿ ಹೀಗೆ ಮನಸು-ಮನಸುಗಳು ಸಂಭಾಷಣೆಗೆ ಇಳಿಯೋದೂ ಯಾವುದೇ ಪ್ರವಾಸದ ಬಹು ಆಪ್ತ ಅಂಶ ಆಲ್ವಾ?

ಏರ್ ಪೋರ್ಟ್ ತಲುಪಿದಾಗ ಎಷ್ಟು ಗದರಿದರೂ ಮತ್ತೆ ಇಣುಕೋ ಅಳುಕು. Logistics has never been my cup of tea! Will I break the convention?!! ಅನ್ನೋ ಅನುಮಾನ/ದುಗುಡ/ಪ್ರಶ್ನೆ. ಹೆಜ್ಜೆ ಸವೆಸಿದಂತೆ ಹಾದಿಯೇನೂ ಅಷ್ಟೊಂದು ಕಠಿಣ ಎಂದೆನಿಸಲಿಲ್ಲ, ಪಯಣಿಗಳಿಗೆ ಹೊಸ ರಸ್ತೆ ಇರುಸು-ಮುರುಸಾಗಿಸಿದರೂ, ಪಯಣದ ಸುಖಕ್ಕಾದರೂ ಭಯವನ್ನು ಹತ್ತಿಕ್ಕಿ ಮುಂದೆ ಸಾಗುತ್ತಾಳೆ! ಅಲ್ವಾ?
ಎರಡು ವರ್ಷಗಳ ಹಿಂದೆ ಇದೇ ಏರ್ಪೋರ್ಟ್ನಿಂದ ಗ್ಯಾಂಗ್ಟಾಕ್ ಪ್ರವಾಸಕ್ಕೆಹೋದ ನೆನಪು ಮತ್ತೆ-ಮತ್ತೆ ತಳುಕು ಹಾಕಿಕೊಳ್ಳುತ್ತಲೇ ಇತ್ತು. ಅದೇ ಏರ್ಪೋರ್ಟ್, ಅದೇ ಗುಬ್ಬಿಗಳು, ಅವೇ ನೆನಪುಗಳು…  ಥೇಟ್!  Same to same! ವ್ಯತ್ಯಾಸವೆಂದರೆ  ಈ ಸಲ ಲಾಜಿಸ್ಟಿಕ್ಸ್ ಕೂಡಾ ನನ್ನ ಕೊರಳಿಗೆ, ಮೂವರ ಬದಲು ಇಬ್ಬರು, ಮತ್ತೊಂದು  ಹೊಸಪ್ರಶ್ನೆ – ‘ ಅಮ್ಮಾ ಏರೋಪ್ಲೇನ್ ಅಲ್ಲಿ ಗುಬ್ಬಿಗಳು ನಮ್ ಜೊತೆ fly ಮಾಡ್ತಾವಾ?!’ ಗುಂಗಿನ ಪರದೆಯಾಚೆಗಿನ ವಾಸ್ತವ. ಇವನ ಪ್ರಶ್ನೆಗಳಿಗೆ innovative ಉತ್ತರಗಳ ಖಜಾನೆ ಖಾಲಿಯಾಗ್ತಾನೆ ಇರತ್ತೆ. That’s Nandan for you (ನಮ್ಮ ಮಗರಾಯ!)
ಸಂಕ್ರಾಂತಿ ಸೂರ್ಯ ರಥವೇರಿದ ಹೊತ್ತು ನಾವೂ ಬಾನೇರಿಯಾಗಿತ್ತು! ಸ್ವಲ್ಪ ಸಮಯ ಕಳೆದಂತೆ ಬೆಳಗಿನ ಮೊದಲ ಕಿರಣಗಳು ತುಸು-ತುಸುವಾಗಿಯೇ ವಿಮಾನದ ರೆಕ್ಕೆಯ ರಂಗೇರಿಸಲು ಶುರುವಿಟ್ಟಿದ್ದವು. ಬಂಗಾರ ಮಿಶ್ರಿತ ಕೇಸರಿ, ರೆಕ್ಕೆಯ ತುಂಬೆಲ್ಲಾ ಹರಡಿದಾಗ, ಅನಾಯಾಸವಾಗಿ ಮಂದಹಾಸವೊಂದು ಅರಳಿಬಿಟ್ಟಿತ್ತು. ವಿಮಾನದಲ್ಲೊಂದು ಹೂವರಳಿದ ಸುದ್ದಿ ಬಂದಿತ್ತಾ ಅಂದಿನ ಪೇಪರ್ ನಲ್ಲಿ? 😉 ಮತ್ತೆ ಕೆಳಗಿಳಿದಾಗ ‘Welcome to Mumbai’! ಮುಂದಿನ flight ಇದ್ದದ್ದು ಮಧ್ಯಾಹ್ನ, ಭುಜ್ ಗೆ. ಅಲ್ಲಿಯವರೆಗೆ ಮುಂಬೈ ವಿಮಾನ ನಿಲ್ದಾಣದ ಅಧ್ಯಯನದ ಕಾರ್ಯಕ್ರಮ, ಪೇಪರ್, ಪುಸ್ತಕ, ಮೊಬೈಲ್ ಮತ್ತು ನಂದನ್. ಎರಡನೆ ಫ್ಲೈಟ್ನ ಸೆಕ್ಯುರಿಟಿ ಚೆಕ್ ಮುಗಿಸಿ, ಒಳ ಹೋಗಿ ಗೇಟ್ ನಂ. ಗುರುತು ಮಾಡಿಕೊಂಡು ಹಾಡು ಕೇಳುತ್ತಾ ಕಳೆದು ಹೋದವಳಿಗೆ ಸಮಯ ಕಳೆದದ್ದೂ ಗೊತ್ತಾಗಲಿಲ್ಲ. ಹಾಗೇ ಫ್ಲೈಟ್ ನ ಗೇಟ್ ನಂ. ಬದಲಾಗಿದ್ದೂ! ಥ್ಯಾಂಕ್ಸ್ ಟು ನಂದನ್! ‘ಅಮ್ಮಾ ಭುಜ್ ಫ್ಲೈಟ್ ಬಂತಂತೆ ‘ ಅವನು ಬಂದು ಹೇಳಿದಾಗ ಟೈಮ್ ನೋಡಿಕೊಂಡರೆ ಇನ್ನು ಸಮಯವಿತ್ತು. ಆದರು ಏನೋ ಅನುಮಾನವಾಗಿ ಮತ್ತೆ ಮಾನಿಟರ್ ನೋಡಿದಾಗ ಗೊತ್ತಾಗಿದ್ದು ಗೇಟ್ ನಂ ಬದಲಾದ ವಿಚಾರ! ಅಂತೂ -ಇಂತೂ ಪ್ರಯಾಣದ ಮೊದಲರ್ಧ ಸುಗಮವಾಗಿ ಕೊನೆಗೊಂಡದ್ದು ನಾವು ಸುಡು-ಬಿಸಿಲಿನಲ್ಲಿ ಭುಜ್ ಏರ್ಪೋರ್ಟ್ ಬಂದು ತಲುಪಿದಾಗ…

(ಮುಂದುವರಿಯುವುದು…)

‍ಲೇಖಕರು G

26 March, 2014

ನಿಮಗೆ ಇವೂ ಇಷ್ಟವಾಗಬಹುದು…

ರಾಜಸ್ಥಾನವೆಂಬ ಸ್ವರ್ಗದ ತುಣುಕು : ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಸನ್ನಿಧಿಯಲ್ಲಿ

ರಾಜಸ್ಥಾನವೆಂಬ ಸ್ವರ್ಗದ ತುಣುಕು : ಮತ್ತೆ ಮತ್ತೆ ಅದೇ ಜಾಗದಲ್ಲಿ ನಿಲ್ಲುತ್ತಿತ್ತು ಖಾಲಿ ಬೈಕ್

9 Comments

  1. Gopaal Wajapeyi

    OLLeya kathana… Mundina kanthige kaayuvantide niroopaNe…

  2. Pallavi Idoor

    Wonderful write up.. Waiting for next episode…:)

  3. Swarna

    ಹೌದೌದು ಹೂವರಳಿದ ಸುಧ್ಧಿ ನ್ಯೂಸ್ ಚಾನೆಲ್ನಲ್ಲೂ ಬಂದಿತ್ತು 🙂
    ಚೆನ್ನಾಗಿದೆ

  4. samyuktha

    wah! Interesting….waiting for the next one 😉

  5. sudha chidanand gowd

    very intresting manjula….
    ತುಂಬ ಚೆನ್ನಾಗಿ ಓದಿಸಿಕೊಂಡು ಹೋಗ್ತಿದೆ ನಿಮ್ಮ ಬರವಣಿಗೆ

  6. Dattaraj

    Mast mast aiti

  7. VidyaShankar

    Good and interesting start!

  8. bharathi

    Esht chennagide manju … allige odi hogle beku anso haage …

  9. ಮಂಜುಳಾ ಬಬಲಾದಿ

    Thank you all 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading