ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಂಗು ರಂಗಿನ ಸಿಂಗಪುರ್!…

ಒಂದು ದೇಶ ವನ್ನು ಸುತ್ತೋದು ಬೇರೆ. ಅರ್ಥ ಮಾಡಿಕೊಳ್ಳೋದು ಬೇರೆ. ವಿರಾಮಕ್ಕಾಗಿ, ಮೋಜಿಗಾಗಿ, ದೇಶ ಸುತ್ತಿ ಬರುವ ಅನುಭವಗಳು ಕ್ಷಣಿಕ. ಅದೇ ಅಲ್ಲಿನ ಬೀದಿ ಬೀದಿಗಳಲ್ಲಿ ಅಡ್ಡಾಡಿ, ಹೆಜ್ಜೆ ಹೆಜ್ಜೆಗೂ ಸಂಗ್ರಹಿಸಿದ ಮಾಹಿತಿ  ಯಾವತ್ತೂ ಅಗಾಧ. ರೋಚಕ ಅನುಭವದ ಬುತ್ತಿ ತುಂಬಲು ಸ್ಥಳೀಯ ಕಥೆಗಳನ್ನು ತಿಳಿಯಬೇಕು. ಇತಿಹಾಸ, ಸಂಸ್ಕೃತಿ, ಆಚಾರ – ವಿಚಾರಗಳಿಗೆ ಜನರ ಜೊತೆ ಬೆರೆಯಬೇಕು. ಅದಾಗಲೇ ಅಸಾಧಾರಣ ಮಾಹಿತಿಗಳು ಆಕರ್ಷಕ ಸಂಗತಿಗಳು, ಕುತೂಹಲಕಾರಿ ಘಟನೆಗಳು ಒಂದೊಂದಾಗಿ ನಮ್ಮ ಮುಂದೆ ಬಂದು ನಿಲ್ಲುತ್ತವೆ.   ಆರಾಮವಾಗಿ ಬೀದಿ ಬೀದಿ ಪರಿಚಯವಾಗಲು ಸಿಂಗಾಪುರದಲ್ಲಿ ಬಸ್ ಪ್ರಯಾಣ ತುಂಬಾ ಉತ್ತಮ. ಕಡಿಮೆ ಖರ್ಚಿನಲ್ಲಿ ಅದೂ ಹವಾನಿಯಂತ್ರಿತ ಬಸ್ ನಲ್ಲಿ ಕೂತು ಒಂದು ರೌಂಡ್ ಹೊಡಿಯುವ ಮಜಾನೇ ಬೇರೆ. ಆದರೆ ಹೋಗುವ ಸ್ಥಳದ ಬಗ್ಗೆ ಸರಿಯಾದ ಮಾಹಿತಿ ಗೊತ್ತಿದ್ದಲ್ಲಿ ಮಾತ್ರ…! ಒಂದೇ ರೀತಿಯಾಗಿ ಕಾಣುವ ರಸ್ತೆಗಳು, ಬಸ್ ನಿಲ್ದಾಣಗಳು ನಿಮ್ಮನ್ನು ದಾರಿ ತಪ್ಪಿಸೋದು ಗ್ಯಾರಂಟಿ.

ನನಗಂತೂ ಹೊಸ ಜಾಗಕ್ಕೆ ಬಸ್ ಪ್ರಯಾಣ ಅಂದ್ರೆ ಯಾಕೋ ಭಯ. ಬಂದ ಹೊಸತರಲ್ಲಿ ನಡೆದ ಘಟನೆ. ವೈಯೊಲಿನ್ ಕ್ಲಾಸ್ ಗೆ ಸೇರಿದ ಸಂಭ್ರಮ. ರಾತ್ರಿ 8 ರಿಂದ 9 ಗಂಟೆಯ ತನಕದ ಕ್ಲಾಸ್. ಬಸ್ ನಲ್ಲಿ ಒಟ್ಟು ೩ ಸ್ಟಾಪ್ ಅಷ್ಟೆ. ಪ್ರಾರಂಭದ ದಿನವೊಂದರಲ್ಲಿ ತಿಳಿಯದೆ ಒಂದು ಸ್ಟಾಪ್ ಮುಂದೆ ಇಳಿದಿರೋದು. ಕ್ಲಾಸ್ ನಡಿಯುವ ಬಿಲ್ಡಿಂಗ್ ಹುಡುಕುತ್ತಾ ಹುಡುಕುತ್ತಾ, ಕೊನೆಗೆ ನನ್ನ ಮನೆ ಇರುವ ಸ್ಟಾಪ್ ಗೆ ಬಂದು ತಲುಪಿ ತಲೆ ಚಚ್ಚಿ ಕೊಳ್ಳುವ ಪರಿಸ್ಥಿತಿ ನಡೆದಿತ್ತು. ಯಾಕೆ ಬಂದಿಲ್ಲ ಕ್ಲಾಸ್ ಗೆ ಕೇಳಿದಾಗ.. ” ಸರ್ ಸ್ಟಾಪ್ ಕೊಟ್ಟಿಲ್ಲ ಬಸ್ “ ಅಂದೆ.  ಅದಕ್ಕೆ ನಗುತ್ತಾ ನಮ್ಮ ಗುರುಗಳು, ” ಇಲ್ಲಿ ಅದೆಲ್ಲ ನಡಿಯೋದಿಲ್ಲ. ಬಸ್ ನಿಲ್ಸಿಲ್ಲ ಅಂದ್ರೆ ಕೇಸ್ ಹಾಕ್ತಾರೆ” ಅಂದ್ರು. ನಕ್ಕು ಸುಮ್ಮನಾದೆ.

ಆದರೆ ಕ್ರಮೇಣ ಎಲ್ಲವೂ ಅಭ್ಯಾಸ ವಾಗುತ್ತಾ ಬಂತು. ಇದೀಗ ಕುತೂಹಲಕ್ಕಾದ್ರೂ ಬಸ್ ಪ್ರಯಾಣ ರೂಢಿಯಾಗಿದೆ. ಈ ಸಮಯದಲ್ಲೇ ನನಗೆ ಕಾಣ ಸಿಕ್ಕಿದ್ದು ಕಲರ್ ಫುಲ್ ಬಿಲ್ಡಿಂಗ್ ಒಂದು.ಹೈಟೆಕ್ ಸಿಂಗಾಪುರದಲ್ಲಿಯೂ ಗಲ್ಲಿ ಗಲ್ಲಿ ಸ್ಟೋರಿಗಳು ಇರುತ್ತವೆ ಅನ್ನೋದು ಆಗಲೇ ಗೊತ್ತಾಗಿದ್ದು. ಹಿಂದಿನ ಚಿತ್ರಣವನ್ನು ಹೋಲಿಸಿದ್ರೆ, ಈಗಿನ ಸಿಂಗಾಪುರ ಸಂಪೂರ್ಣ ಭಿನ್ನ. ಆದರೆ ಅವುಗಳ ಕಥೆಗಳು ಕೂಡ ಅಷ್ಟೇ ವೈಶಿಷ್ಟತೆಯನ್ನು ಹೊಂದಿದೆ.ನಾನು ನೋಡಿದ ಹಲವು ಬಣ್ಣಗಳಿಂದ ಕೂಡಿದ ಕಟ್ಟಡವೊಂದರ ಮಾಹಿತಿ ಇಲ್ಲಿದೆ.ಇದು ಇಲ್ಲಿನ ಒಂದು ರಸ್ತೆಯ ಜಂಕ್ಶನ್ ನಲ್ಲಿರುವ ಬಿಲ್ಡಿಂಗ್. ಪ್ರಸ್ತುತ ಇದು ಸರ್ಕಾರಿ ಕಾರ್ಯಾಲಯ. ಆದರೆ ಬಾಕಿ ಕಟ್ಟಡಗಳಿಗೆ ಹೋಲಿಸಿದ್ರೆ ಕೊಂಚ ಭಿನ್ನ. ಮೇಲ್ನೋಟಕ್ಕೆ ಪ್ರವಾಸಿಗರ ದೃಷ್ಟಿಯಿಂದ ಈ ರೀತಿ ಕಟ್ಟಿರಬೇಕು ಅನಿಸುವುದು ಸಹಜ.

ಈ ಕಟ್ಟಡದ ಹೆಸರು ಹಿಲ್ ಸ್ಟ್ರೀಟ್ ಪೋಲೀಸ್ ಸ್ಟೇಶನ್. ವಿಳಾಸ; ೧೪೦ ಹಿಲ್ ಸ್ಟ್ರೀಟ್, ಸಿಂಗಪುರ್ – 179369. ನೀವು ಪತ್ರ ಬರೆಯಿರಿ, ಇಲ್ಲ ಕಾರ್ಡ್ಸ್ ಕಳುಹಿಸಿ. ಅಥವಾ ಕಂಪ್ಲೇಂಟ್ ನ್ನೇ ಕೊಡಿ ಎಲ್ಲದಕ್ಕೂ ಒಂದೇ ಅಡ್ರೆಸ್. ಪೊಲೀಸ್ ಕ್ವಾರ್ಟರ್ಸ್ ಇಲ್ಲೇ ಹಾಗೂ ಆರಕ್ಷಕ ಠಾಣೆ ಯೂ ಇಲ್ಲೇ. ಆದರೆ ಇದು ಹಲವು ವರ್ಷಗಳ ಹಿಂದಿನ ಕಥೆ. ‘ಪೊಲೀಸ್ ಸ್ಕೈಸ್ರ್ಯಾಪರ್’ ಅನ್ನೋದು ಈ ಕಟ್ಟಡದ ನಿಕ್ ನೇಮ್.

ಈ ಕಟ್ಟಡದ ಪ್ರಮುಖ ಹೈಲೈಟ್ ಕಾಮನಬಿಲ್ಲಿನ ಎಲ್ಲ ಬಣ್ಣವನ್ನು ಹೊಂದಿದ ಕಿಟಕಿಗಳು.  ಒಟ್ಟು ಆರು ಅಂತಸ್ತಿನ ಕಟ್ಟಡದಲ್ಲಿ 927 ಕಿಟಕಿಗಳಿವೆ. ಜೊತೆಗೆ ವರ್ಣರಂಜಿತ ಕಿಟಕಿ ಬಾಗಿಲುಗಳು.  ಕೇವಲ ಕಟ್ಟಡದ ಕಿಟಕಿಗಳ ಮೇಲೆ ಮಾತ್ರವಲ್ಲದೇ ಆವರಣದ ಆಂತರಿಕ ಮುಂಭಾಗದಲ್ಲಿಯೂ, ಹೆಚ್ಚು ಉತ್ಸಾಹಭರಿತ ಮತ್ತು ರೋಮಾಂಚಕ ಬಣ್ಣಗಳು ಗೋಡೆ ತುಂಬಾ ಮನೆ ಮಾಡಿವೆ. ಇದಲ್ಲದೆ ಕಾರ್ಬಲ್ಡ್ ಟೆಲ್ಜಿಯಾಗಳು ಮತ್ತು ಬಾಲ್ಕನಿಗಳು, ಆರ್ಕೇಡ್ಗಳು, ಸ್ಟ್ರಕ್ಕೊಡ್, ರಸ್ಟಿಕೇಟೆಡ್ ಮೇಲ್ಮೈಗಳು ಮತ್ತು ಕೇಂದ್ರದಲ್ಲಿಅಂಗಳಗಳ ನ್ನು ಇಲ್ಲಿ ಕಾಣಬಹುದು. ಈ ದೇಶದ ಹವಾಮಾನದ ಸಮಸ್ಯೆಗಳಿಗೆ ಪರಿಹಾರವಾಗಿ ಇದು ರಚನೆಯಾಗಿದೆ. ಈ ಮನೋಹರ ಕಟ್ಟಡದ ವಾಸ್ತುಶಿಲ್ಪಿ ಫ್ರಾಂಕ್ ಡೊರಿಂಗ್ಟನ್ ವಾರ್ಡ್.

ಈ ಕಟ್ಟಡ, 1934 ರಿಂದ ಪೋಲೀಸ್ ಸ್ಟೇಶನ್ ಆಗಿ ಕಾರ್ಯನಿರ್ವಹಿಸುತ್ತಾ ಇತ್ತು. ಪ್ರಾರಂಭದಲ್ಲಿ ಸುಮಾರು 1000 ಪೊಲೀ ಸರು ಮತ್ತು ಅವರ ಕುಟುಂಬಗಳಿಗೆ ನೆಲೆಯಾಗಿತ್ತು. 1933 ರ ಹೊತ್ತಿಗೆ ಲಿಫ್ಟ್  ಹೊಂದಿದ್ದ ಐಷರಾಮಿ ಕಟ್ಟಡ ಎಂಬ ಖ್ಯಾತಿ ಇದಕ್ಕಿದೆ. ಮುಖ್ಯ ಅಂಗಣದಲ್ಲಿ ಪೋಲಿಸ್ ಪೇರೇಡ್ ಗಳು ನಡೆಯುತ್ತಿತ್ತು. ವಾರದ ಕೊನೆಯಲ್ಲಿ ಪೊಲೀಸರಿಗಾಗಿ ಸಿನಿಮಾಗಳನ್ನು ಕೂಡ ಬಿತ್ತರಿಸಲಾಗುತಿತ್ತು. ಬ್ಯಾಚಲರ್, ಫ್ಯಾಮಿಲೀ ಕ್ವಾರ್ಟರ್ಸ್ ಒಂದೇ ಕಟ್ಟಡದಲ್ಲಿ ಬೇರೆ ಬೇರೆ ಅಂತಸ್ತುಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಆಗಿನ ಸಂದರ್ಭದಲ್ಲಿ ತಿಂಗಳ ಬಾಡಿಗೆ  ಕೇವಲ ೮ ಡಾಲರ್‌ನಿಂದ ೨೦ ಡಾಲರ್ ಆಗಿತ್ತು.

ಇದಕ್ಕೂ ಮೊದಲು 1845 ಮತ್ತು 1856 ರ ಆಸುಪಾಸಿನಲ್ಲಿ ಅಸೆಂಬ್ಲಿ ಕೊಠಡಿಗಳು , ಸಾರ್ವಜನಿಕ ಕಾರ್ಯಕ್ರಮಗಳು , ಒಂದು ರಂಗಮಂದಿರ ಮತ್ತು ಶಾಲೆಗಳನ್ನು ಹೊಂದಿದ್ದ ಕಟ್ಟಡ ಇದಾಗಿತ್ತು. ದೇಶದ ಮೊದಲ ಜೈಲು ಕೂಡ ಹೌದು. ಸಿಂಗಪುರದ ಅತಿ ದೊಡ್ಡ ಯುದ್ಧ-ಪೂರ್ವ ಸರ್ಕಾರಿ ಕಟ್ಟಡ ಎಂಬ ಹೆಸರನ್ನು ಇದು ಗಳಿಸಿದೆ ಜಪಾನೀಯರ ಆಕ್ರಮಣದ ಸಮಯದಲ್ಲಿಇವತ್ತಿನ ಹಾಗೆ ಈ ಕಟ್ಟಡ ವರ್ಣಮಯ ಆಗಿರಲಿಲ್ಲ. ವಾಯುದಾಳಿಯಿಂದ ತಪ್ಪಿಸಿಕೊಳ್ಳಲು ಕಟ್ಟಡ ತುಂಬಾ ಕಂದು ಬಣ್ಣವನ್ನು ಲೇಪಿಸಲಾಗಿತ್ತು. ಅಲ್ಲದೆ ಖೈದಿಗಳಿಗೆ ಚಿತ್ರಹಿಂಸೆ ನೀಡುವ ಪ್ರದೇಶವಾಗಿಯೂ ಮಾರ್ಪಟಿತ್ತು. 18 ಡಿಸೆಂಬರ್ 1998 ರಂದು ಓಲ್ಡ್ ಹಿಲ್ ಸ್ಟ್ರೀಟ್ ಪೋಲಿಸ್ ಸ್ಟೇಷನ್ ಕಟ್ಟಡವನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಲಾಯಿತು.

ಇಂದು ಈ  ಕಟ್ಟಡವು ಇನ್ಫೋಕಾಮ್ ತಂತ್ರಜ್ಞಾನ, ಸೈಬರ್ ಭದ್ರತೆ, ಮಾಧ್ಯಮ ಮತ್ತು ವಿನ್ಯಾಸ ಕ್ಷೇತ್ರಗಳ ಅಭಿವೃದ್ಧಿಯನ್ನು ಮೇಲ್ವಿಚಾರಣೆ ಮಾಡುವ ಸಂವಹನ ಮತ್ತು ಮಾಹಿತಿ ಸಚಿವಾಲಯವಾಗಿ ಪರಿವರ್ತನೆಗೊಂಡಿದೆ. ಈ ಕಟ್ಟಡದ ಅಂಗಳದಲ್ಲಿ ಕಲೆ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ . ಕಲಾ ಪ್ರದರ್ಶನಗಳು, ಕಲೆಗೆ ಸಂಬಂಧಿಸಿದ ಚಟುವಟಿಕೆಗಳು ಇಲ್ಲಿ ನಡೆಯುತ್ತವೆ. ಈ ಕಟ್ಟಡವನ್ನು ವಿಶ್ವದಲ್ಲೇ ಅತ್ಯುತ್ತಮವಾದದ್ದು ಎಂದು ಪರಿಗಣಿಸಲಾಗಿದೆ.ಮತ್ತೆ ಕೆಲವು ಪ್ರದೇಶಗಳು ಕೂಡ ನನ್ನನ್ನು ತುಂಬಾ ಆಕರ್ಷಿಸಿವೆ. ಅವುಗಳಲ್ಲಿ ಹಾಜಿ ಲೇನ್ ಹಾಗೂ  ಅಲ್ಕಾಫ್ ಬ್ರಿಡ್ಜ್  ಪ್ರಮುಖವಾದುವು ಹಾಜಿ ಲೇನ್ ಮತ್ತು ಅರಬ್ ಬೀದಿಗಳು ಭೇಟಿ ನೀಡುವ ಇನ್ನೆರಡು ಗಮನಾರ್ಹ ಬೀದಿಗಳಾಗಿವೆ. ಕಲಾಕೃತಿಗಳನ್ನು ಹೊಂದಿದ ಹಲವಾರು ಕಲರ್ ಫುಲ್ ಗೋಡೆಗಳನ್ನು ಕಾಣಬಹುದು. ಈ  ಹಿಂದೆ ಹಾಜಿ ಲೇನ್ , ಮಲಯಾ ಕುಟುಂಬಗಳಿಗೆ ನೆಲೆಯಾಗಿತ್ತು. ಮೆಕ್ಕಾಗೆ ಪ್ರಯಾಣದ ಸಮಯದಲ್ಲಿ ಯಾತ್ರಿಗಳಿಗೆ ಆಶ್ರಯ ನೀಡಲಾಗಿತ್ತು ಇಲ್ಲಿ.

ವಿಶ್ವದರ್ಜೆಯ ಕಲಾಕೃತಿಗಳಲ್ಲಿ ರಾಬರ್ಟ್ಸನ್ ಕ್ವೇಯಲ್ಲಿ ನೆಲೆಗೊಂಡಿರುವ ಅಲ್ಕಾಫ್ ಬ್ರಿಡ್ಜ್ ಕೂಡ ಒಂದು.  ಸೇತುವೆಯು ಕಲಾತ್ಮಕ ವೈಭವಗಳಿಂದ ಜನರನ್ನು ಆಕರ್ಷಿಸುತ್ತಿದೆ. ಚಪ್ಪಟೆ ತಳದ ದೋಣಿಯಂತಹ ಆಕೃತಿ.  ಹಿಂದಿನ ದಿನಗಳಲ್ಲಿ ಸಾಮಾನ್ಯವಾಗಿ ನದಿಗೆ ಅಡ್ಡಲಾಗಿ ಸರಕುಗಳನ್ನು ಸಾಗಿಸಲು ಬಳಸುವ ಒಂದು ದೀಪದ ದೋಣಿ – ಸೇತುವೆಯ ಆಕರ ಇದಾಗಿದೆ. ಸಿಂಗಪುರ್ ನದಿಯನ್ನು ವ್ಯಾಪಿಸಿ ರುವ ಈ ಸೇತುವೆ , ಫಿಲಿಪಿನೋ ಮಹಿಳಾ ಕಲಾವಿದೆಯಾದ ಪಿತಾಟಾ ಅಬದ್ರಿಂದ ವಿನ್ಯಾಸಗೊಳಿಸಲ್ಪಟ್ಟಿದೆ. ಇಲ್ಲಿ 900 ಲೀಟರ್ ನಷ್ಟು ಪ್ರಮಾಣದಲ್ಲಿ 52 ವಿವಿಧ ಬಗೆಯ ಬಣ್ಣಗಳನ್ನುಇಲ್ಲಿ ಬಳಸಲಾಗಿದೆ. ಇಂದಿನ ದಿನಗಳಲ್ಲಿ ಬಣ್ಣಗಳ ಮೇಲೂ ಸಂಶೋಧನೆಗಳನ್ನು ಮಾಡಲಾಗುತ್ತಿದೆ. ಬಣ್ಣಗಳು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ವಿವಿಧ ಬಣ್ಣಗಳು ವಿಭಿನ್ನ ವ್ಯಕ್ತಿತ್ವಗಳನ್ನು ಸಂಕೇತಿಸುತ್ತವೆ. ನಮ್ಮ ಮನಸ್ಥಿತಿಗಳನ್ನು ವಿಭಿನ್ನವಾಗಿ ಪರಿಣಾಮ ಬೀರುತ್ತವೆ.

ಹೈಟೆಕ್ ಬದುಕಿನಲ್ಲಿ ವಿರಾಮಕ್ಕೆ ಎಲ್ಲಿದೆ ಸಮಯ. ವೇಗವಾಗಿ ಓಡುವುದೊಂದೇ ಟಾರ್ಗೆಟ್. ಕಲೆ, ಸಂಸ್ಕೃತಿ ಆಚಾರ – ವಿಚಾರಗಳು ಹಿಂದೆ ಸರಿದವೋ ಎಂಬ ಆತಂಕದಲ್ಲಿ ಇರುವಾಗಲೇ, ಇಂತಹ ಕಲರ್ ಫುಲ್ ಸಂಗತಿಗಳು ಕಣ್ಣಿಗೆ ಅಷ್ಟೇ ಅಲ್ಲದೆ ಮನಸ್ಸಿಗೂ ಮುದ ನೀಡುತ್ತವೆ. ಈ ಮೂಲಕ ಆ ಸ್ಥಳದ, ಆ ದೇಶದ ಇತಿಹಾಸವನ್ನು ಮತ್ತೆ ಈ ಜಗಕ್ಕೆ ತಿಳಿ ಹೇಳುವ ವಿಧಾನ ನಿಜಕ್ಕೂ ಗಮನಾರ್ಹವಾದುದು.

 

‍ಲೇಖಕರು Avadhi Admin

29 August, 2018

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading