ರಂಗಾಯಣ ವಿವಾದ: ಮೈಸೂರು ರಂಗಾಯಣದ ನಿರ್ದೇಶಕರಿಗೊಂದು ಪತ್ರ

ಪ್ರಸಾದ್ ರಕ್ಷಿದಿ

ಗೆಳೆಯ ಕಾರಿಯಪ್ಪ ನವರೇ, ಪತ್ರಿಕೆಯೊಂದರಲ್ಲಿ ಬಂದ ನಿಮ್ಮ ಹೇಳಿಕೆಗಳ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ. ಹಲವರು ಬಹುರೂಪಿ ಉತ್ಸವವನ್ನು ಬಹಿಷ್ಕರಿಸುವ ಮಾತಾಡಿದ್ದಾರೆ. ಅದರಿಂದ ಚಿಂತಿತರಾಗಿ ನೀವು ಮರುಹೇಳಿಕೆ ನೀಡಿದ್ದೀರಿ ಅದಕ್ಕಾಗಿ ಈ ಪತ್ರ.

ಹೌದು ನಿಮ್ಮ ರಂಗಬಧ್ದತೆಯನ್ನು, ಪ್ರಾಮಾಣಿಕತೆಯನ್ನು ನಾನು ಅನುಮಾನಿಸುವುದಿಲ್ಲ. ಅದಕ್ಕೆ ಕಾರಣಗಳಿವೆ. ನಾನು ನಿಮ್ಮನ್ನು ದಶಕಗಳಿಂದ ಅಂದರೆ ನೀವು ನೀವು ನೀನಾಸಂ ವಿದ್ಯಾರ್ಥಿ ಯಾಗಿದ್ದ ಕಾಲದಿಂದಲೂ ಬಲ್ಲೆ. ನಂತರ ತಿರುಗಾಟ ದಲ್ಲಿ ನಟನಾಗಿದ್ದವರು. ಆಮೇಲೆ ನೀವು ಮತ್ತು ಅನಿತ ಕೊಡಗಿನಲ್ಲಿ ಸೃಷ್ಟಿ ಕೊಡಗುರಂಗ ಎಂಬ ರೆಪರ್ಟರಿ ಯನ್ನು ಕಟ್ಡಿದಿರಿ. ನೀನಾಸಂ ತಿರುಗಾಟ ದ ಎದುರು ಒಂದು ಆರೋಗ್ಯಕರ ಸ್ಪರ್ಧೆ ನೀಡಿವಷ್ಡು ಶಕ್ತವಾದ ತಂಡ ಕಟ್ಟಿ ರಾಜ್ಯಾದ್ಯಂತ ಪ್ರದರ್ಶನ ನೀಡಿದಿರಿ. ಸಿಜಿಕೆ, ಮೋಚ, ಸುರೇಶ ಆನಗಳ್ಳಿಯಂತವರೂ ನಿಮ್ಮ ತಂಡಕ್ಕೆ ನಾಟಕ ನಿರ್ದೇಶಿಸಿದ್ದರು. ಪ್ರಸನ್ನ ಅವರ ದಂಗೆಯ ಮುಂಚಿನ ದಿನಗಳು ನಾಟಕವನ್ನು ಕೊಡಗಿನ ಇತಿಹಾಸಕ್ಕೆ ಅನ್ವಯಿಸಿ ಮೋಚ ಅವರಿಂದ ಮಾಡಿಸಿದಿರಿ. ಆ ನಾಟಕ ನಮ್ಮೂರ ಜನರ ಕಣ್ಣು ಮುಂದೆ ಈಗಲೂ ಇದೆ.!

ನಂತರದ ದಿನಗಳಲ್ಲಿಯೂ ನಿಮ್ಮ ರಂಗ ಕೈಂಕರ್ಯ ಮುಂದುವರಿಯಿತು. ಕಾರ್ನಾಡರ ನಾಟಕ ಗಳ ಬಗ್ಗೆ ನಿಮಗೆ ಅಪಾರ ಒಲವೂ ಇತ್ತು.
ನಾನು ಇದನ್ನೆಲ್ಲ ಯಾಕೆ ಬರೆಯುತ್ತಿದ್ದೇನೆಂದರೆ. ಈಗ ನಿಮ್ಮನ್ನು ಟೀಕಿಸುತ್ತಿರುವ ಅನೇಕ ಯುವಜನರಿಗೆ ಇದೆಲ್ಲ ತಿಳಿಯದು ಎಂಬ ಕಾರಣಕ್ಕಾಗಿ ಅಷ್ಟೇ.

ನಿಮ್ಮ ಟಿಪ್ಪು ವಿರೋಧವನ್ನು ಅರ್ಥಮಾಡಿಕೊಳ್ಳಬಲ್ಲೆ. ಹೌದು ಗಾಂಧಿ ಯನ್ನು ಒಪ್ಪುವವರೆಲ್ಲರೂ, ಟಿಪ್ಪುವನ್ನು ಒಪ್ಪಿಕೊಳ್ಳಬೇಕೆಂಬ ಒತ್ತಾಯವನ್ನು ನಾನೂ ಒಪ್ಪಲಾರೆ.

ಸ್ವಾತಂತ್ರ್ಯ ಪೂರ್ವದ ಯಾವುದೇ ರಾಜರ ಚರಿತ್ರೆಯನ್ನು ನಾವು ಅದ್ಯಯನದ ವಿಷಯವಾಗಿಯೇ ನೋಡಬೇಕು. ಅವರು ಇಂದಿಗೆ ಪ್ರಜಾಪ್ರಭುತ್ವಕ್ಕೆ ಪ್ರಸ್ತುತರಲ್ಲ. ಉದಾ :ನಮಗೆ ಉತ್ತಮ ಅರಸರೆನ್ನಿಸಿಕೊಂಡ ಹೊಯ್ಸಳರು ತಮಿಳರಿಗೆ ಹಾಗೆನ್ನಿಸಬೇಕಾಗಿಲ್ಲ.

ಇಂದು ನಮ್ಮ ಪ್ರಸ್ತುತತೆ ಇರುವುದು. ದೇಶವನ್ನು ಒಂದಾಗಿಸಿಡುವ ಶಕ್ತಿಯಾದ ಸಂವಿಧಾನ ಮತ್ತು ಅದನ್ನು ಕೊಟ್ಟ ಬಾಬಾ ಸಾಹೇಬರು. ಹಾಗೂ ಅಹಿಂಸೆ ಮತ್ತು ಸಹನೆಯ ಅಸ್ತ್ರವನ್ನು ಕೊಟ್ಟ ಗಾಂಧಿ ಇವರುಗಳು.

ಮೈಸೂರು ರಂಗಾಯಣ ಕನ್ನಡದ ಅಸ್ಮಿತೆಯ ಭಾಗವಾಗಿ ಬೆಳೆದು ನಿಂತಿದೆ. ಅದಕ್ಕೊಂದು ಪರಂಪರೆ ಲಭ್ಯವಾಗಿದೆ. ಅದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಂತೆ, ನಂದಿನಿ ಹಾಲಿನಂತೆ.

ರಂಗಾಯಣ ನಿಮ್ಮ ಗುರುಗಳೂ ಆದ ಕಾರಂತರಿಂದ ಪ್ರಾರಂಭವಾಗಿ ಅನೇಕ ನಿರ್ದೇಶಕರು ಆಗಿ ಹೋದರು. ಬೇರೆ ಬೇರೆ ರಾಜಕೀಯ ನಿಲುವುಗಳವರೂ ಇದ್ದರು. ಆದರೆ ಅವರು ಯಾರೂ ತಮ್ಮ ಅಧಿಕಾರಾವಧಿಯಲ್ಲಿ ಬಹಿರಂಗವಾಗ ರಾಜಕೀಯ ಹೇಳಿಕೆಗಳನ್ನು ನೀಡಲಿಲ್ಲ.
ನೀವು ಇದನ್ನು ಗಮನಿಸಬೇಕು

ನೀವು‌ ಬಿಜೆಪಿ ಪಕ್ಷದ ಕಾರ್ಯಕರ್ತರಾಗಿದ್ದೀರಿ, ಆ ಪಕ್ಷದ ಕೊಡಗು ಜಿಲ್ಲೆಯ ವಕ್ತಾರರೂ ಆಗಿದ್ದೀರಿ. ಈ ಸಮಸ್ಯೆಯನ್ನು ನೀವೇ ನಿವಾರಿಸಿಕೊಳ್ಳಬೇಕು.
ಈಗ ರಂಗಾಯಣಕ್ಕೆ ಸಂವಿಧಾನದ ಬಗ್ಗೆ ಜನರಿಗೆ ತಿಳುವಳಿಕೆ ನೀಡಲು ಕಾರ್ಯಕ್ರಮ ಮಾಡಲು ಸರ್ಕಾರ ಹಣನೀಡಿದೆ ಎಂದಿದ್ದೀರಿ.

ಇದು ರಂಗಾಯಣ ಮಾಡಬೇಕಾದ ಕೆಲಸ ಅಲ್ಲ. ರಂಗಾಯಣಕ್ಕೆ ಬೇರೆ ಹಲವು ಜವಾಬ್ದಾರಿಗಳಿವೆ. ಆ ಜವಾಬ್ದಾರಿಯನ್ನು ಕೂಡ ನಮ್ಮ ಸಂವಿಧಾನದ ಅಡಿಯಲ್ಲಿ ರಚಿತವಾದ ಕಾನೂನುಗಳೇ ನೀಡಿರುವುದು.

ಸಂವಿಧಾನದ ಬಗ್ಗೆ ಸಿ.ಎ.ಎ ಅಂತ ಕಾನೂನುಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡಲು ಹಲವಾರು ಸಂಘಸಂಸ್ಥೆಗಳಿವೆ,ಶಿಕ್ಷಣ ಸಂಸ್ಥೆಗಳಿವೆ ಅವು ಮಾಡಲಿ.

ಗೆಳೆಯ ಕಾರಿಯಪ್ಪ ನೀವು ರಂಗಾಯಣದ ನಿರ್ದೇಶಕರಾದಾಗ ಖುಷಿಪಟ್ಟವರಲ್ಲಿ ನಾನೂ ಒಬ್ಬ. ಇದು ನಿಮಗೆ ಹೇಗೋ ಅದಕ್ಕಿಂತಲೂ ಕೊಡಗಿಗೆ ಸಂದ ಗೌರವ. ಅದಕ್ಕೆ ನೀವು ಅರ್ಹರೂ ಕೂಡ. ನಿಮಗೆ ಇದೊಂದು ಅವಕಾಶ, ಕೊಡಗಿನ ಕವಿ, ಅತ್ಯುತ್ತಮ ನಾಟಕಕಾರರಾದ ಹೊರಜಗತ್ತಿಗೆ ತಿಳಿಯದ ಹರದಾಸ ಅಪ್ಪಚ್ಚರನ್ನು ರಂಗಾಯಣದ ಮೂಲಕ ಪರಿಚಯಿಸಿ. ದಿವಾನ್ ಬೋಪಣ್ಣನ ಸಂದಿಗ್ಧ ವನ್ನು ತೆರೆದಿಡಿ. ಇವೆಲ್ಲ ರಂಗಾಯಣ ಮಾಡಬೇಕಾದ ಕನ್ನಡ ದ ಕೆಲಸಗಳು ಎಂದುಕೊಂಡಿದ್ದೇನೆ.
ಕಾರಿಯಪ್ಪ ನೀವೊಬ್ಬ ಭಾವಜೀವಿ, ಸ್ನೇಹಜೀವಿ. ನಿಮ್ಮ ಸ್ನೇಹವನ್ನು, ತಂಗಿ ಅನಿತಳ ಪ್ರೀತಿ ಮಮತೆಯನ್ನೂ ಕಂಡಿದ್ದೇನೆ. ಸ್ನೇಹವನ್ನು ಉಳಿಸಿಕೊಂಡೇ ರಾಜಕಾರಣದಲ್ಲಿ ಸಾಕಷ್ಟು ವಾಗ್ಯುದ್ಧ ನಡೆಸಿದ್ದೇವೆ.

ನಿಮಗಿಂತ ಕೊಂಚ ಹಿರಿಯ ಗೆಳೆಯನಾಗಿ ಮನವಿ ಮಾಡುತ್ತಿದ್ದೇನೆ. ನಿಮ್ಮ ರಾಜಕೀಯ ನಿಲುವುಗಳನ್ನು ರಂಗಾಯಣದ ಈ ನಿಮ್ಮ ಅವಧಿಗೆ ಬದಿಗೆ ಸರಿಸಿ, ಮುನ್ನಡೆಯಿರಿ. ರಂಗಾಯಣವನ್ನು ಪಕ್ಷದ ಕಛೇರಿಯಾಗಿಸಬೇಡಿ.

ಹಾಗೇನಾದರೂ ಆದರೆ ಅದನ್ಬು ನಾವೆಲ್ಲರೂ ಸೇರಿ ವಿರೋಧಿಸುತ್ತೇವೆ. ಹಾಗಾಗಲು ಅವಕಾಶ ನೀಡಬೇಡಿ. ನಾನೀಗ ಉಳಿದ ರಂಗಾಯಣಗಳ ಬಗ್ಗೆ ಮಾತಾಡಲು ಏನೂ ಉಳಿದಿಲ್ಲ. ಆದರೆ ಮೈಸೂರು ರಂಗಾಯಣ ಹಾಗಾಗಬಾರದು, ಆಗಲು ಬಿಡಲಾರೆವು. ಆಗ ಹೋರಾಟ ಅನಿವಾರ್ಯವಾಗುತ್ತದೆ. ಮತ್ತು ಆ ಹೋರಾಟದಲ್ಲಿ ನಾನೂ ಒಬ್ಬನಾಗಿರುತ್ತೇನೆ.

‍ಲೇಖಕರು avadhi

February 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Mahadev

    ಬಹುಶಃ ಕಾರ್ಯಪ್ಪ ರಾಜಕೀಯ ಪಕ್ಷದಿಂದ ನೇಮಿಸಲ್ಪಟ್ಟ ನಿರ್ದೇಶಕರು. ಕನ್ನಡ ರಂಗಭೂಮಿಯ ಒತ್ತಾಸೆಯಿಂದ ಆಯ್ಕೆ ಆಗಿ ಬಂದವರಲ್ಲ ಅನ್ನುವುದು ಸ್ಪಷ್ಟವಿರುವಾಗ ರಂಗಾಯಣದ ಬಗ್ಗೆ ಚೂರೂ ಆಸೆ‌ ಇಟ್ಟುಕೊಳ್ಳದಿರುವುದೇ ಒಳ್ಳೆಯದು. ಈ ಸರಕಾರ‌ ಧಾರವಾಡದಲ್ಲೂ ಅದ್ಭುತ ರಂಗಚಿಂತಕನನ್ನೆ ನಿರ್ದೇಶಕನನ್ನಾಗಿ ನೇಮಿಸಿದೆ. ಈ ಧಾರವಾಡ ನಿರ್ದೇಶಕನಿಗೂ ಮೈಸೂರಿನ‌ರಂಗಾಯಣ ನಿರ್ದೇಶಕನಿಗೂ ಏನಂಥ ವ್ಯತ್ಯಾಸವೇನೂ ಕಾಣತಿಲ್ಲ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: