
ಲಕ್ಷ್ಮಣ ಕೆ ಪಿ
ರಂಗ ನಿರ್ದೇಶಕರಾದ Satish Tiptur ಸತೀಶ್ ತಿಪಟೂರು ಅವರು ರಂಗಾಯಣ” ಜೂನಿಯರ್ ರೆಪರ್ಟರಿ” ರಂಗ ತಂಡದ ನಾಟಕ ಆಯೋಜನೆಯ ರೂಪುರೇಷೆಯ ಕುರಿತು ಎತ್ತಿರುವ ಪ್ರಶ್ನೆಗಳ ಜೊತೆಗೆ ..
ಕಳೆದ ಹತ್ತು ಹನ್ನೆರಡು ವರ್ಷಗಳಲ್ಲಿ ಜನಮನದಾಟ, ಆಟಮಾಟ, ಥಿಯೇಟರ್ ಸಮುರಾಯ್, ಆದಿಮದಂತಹ ಹಲವು ಕಿರು ವೃತ್ತಿಪರ ರಂಗತಂಡಗಳು ಕರ್ನಾಟಕದಾದ್ಯಂತ ಯಾವುದೇ ಸರಕಾರಿ ಅನುದಾನಗಳ ಹಂಗಿಲ್ಲದೆ ತಮ್ಮ ನಾಟಕಗಳನ್ನು ಪ್ರದರ್ಶಿಸುತ್ತಾ ತಮ್ಮದೇ ಆದ ಆರ್ಥಿಕ ಸ್ವಾಯುತ್ತತೆಯನ್ನು ಸಾಧಿಸಿಕೊಂಡಿವೆ ಹಾಗೂ ತನ್ನದೇ ಸಂಘಟಕರ ಮತ್ತು ಪ್ರೇಕ್ಷಕಕರ ವಲಯವನ್ನು ಸೃಷ್ಟಿಸಿಕೊಂಡಿವೆ.
ಕರ್ನಾಟಕದ ಸರ್ಕಾರಿ ಪ್ರಾಯೋಜಿತ ರೆಪರ್ಟರಿಗಳು ತಲುಪಲಾರದ ಎಷ್ಟೊಂದು ಸ್ಥಳಗಳನ್ನು , ಪ್ರೇಕ್ಷಕರನ್ನು ಮೇಲಿನ ತಂಡಗಳು ತಮ್ಮ ನಾಟಕಗಳ ಮೂಲಕ ತಲುಪಿವೆ. ಇದರಿಂದಾಗಿಯೇ ಕನ್ನಡ ರಂಗಭೂಮಿಗೆ ಒಂದು ವಿಸ್ತಾರ ಪ್ರಾಪ್ತಿಯಾಗಿದೆ.
ಹಿಂದೆ ಬರಿಯ ನಗರ ಕೇಂದ್ರಿತವಾಗಿದ್ದ ರಂಗಭೂಮಿ ಚಟುವಟಿಕೆಗಳು ಇಂದು ಹೋಬಳಿಗಳಿಗೆ ಹಳ್ಳಿಗಳಿಗೆ ಹೆಜ್ಜೆ ಇಟ್ಟಿರಿವುದರಲ್ಲಿ ಈ ತಂಡಗಳಲ್ಲಿನ ನಟರು, ನಿರ್ದೇಶಕರು ಹಾಗೂ ಅವರ ನಾಟಕಗಳ ಸಂಘಟಕರುಗಳ ಪಾಲು ದೊಡ್ಡದಿದೆ.(ಈಗ ಎಲ್ಲೆಡೆ ನಡೆಯುತ್ತಿರುವ ಮಕ್ಕಳ ಶಿಬಿರಗಳು ,ರಂಗ ಶಿಬಿರಗಳು ಇದಕ್ಕೆ ಉದಾಹರಣೆ, ಹವ್ಯಾಸಿ ರಂಗಚಟುವಟಿಕೆಗಳು ಹೆಚ್ಚಿರುವುದರಲ್ಲಿ ಕೂಡ ಇವುಗಳ ಪಾಲಿದೆ )
ಇದು ಕನ್ನಡ ರಂಗಭೂಮಿಯಲ್ಲಿ ಸ್ಪಷ್ಟವಾಗಿ ಕಾಣಿಸುವ ಪಲ್ಲಟ.
ಇಂತಹ ಸಕಾರಾತ್ಮಕ ಪಲ್ಲಟವನ್ನ ರಂಗಾಯಣದಂತಹ ಸರಕಾರಿ ಅನುದಾನಿತ ಸಂಸ್ಥೆಗಳು ಗುರುತಿಸಬೇಕು ಮತ್ತು ಇಂತ ರಂಗಚಳುವಳಿಗಳು ತಮ್ಮ ಘನತೆಯನ್ನು ಉಳಿಸಿಕೊಂಡು ಮುಂದುವರೆಯುವಂತಹ ಯೋಜನೆಗಳನ್ನು ರೂಪಿಸಬೇಕು.ಅದು ಸಾಧ್ಯವಾಗದೆ ಹೋದರೆ ಅದನ್ನು ಕೆಡಹುವ ಹುನ್ನಾರವನ್ನಂತು ಮಾಡಬಾರದು.
ಈ ಎಚ್ಚರದ ಪ್ರಜ್ಞೆಯನ್ನು ಯಾವಾಗಲೂ ಕಾಯ್ದುಕೊಳ್ಳಬೇಕು. “ರಂಗ ಸಮಾಜ” ದಂತಹ ತಜ್ಞರ ಕೂಟ ಸಂಸ್ಥೆಗೆ ಬೆನ್ನಾಗಿ ಇರುವುದು ಅದಕ್ಕಾಗಿಯೇ ಅಲ್ಲವೇ?
ರಂಗಾಯಣ ಸಂಸ್ಥೆಯು ಆ ಪ್ರಜ್ಞೆಯನ್ನು ಕಳೆದುಕೊಂಡಿರುವುದು ತಾನು ನಡೆಸುತ್ತಿರುವ “ಜೂನಿಯರ್ ರೆಪರ್ಟರಿ” ರೂಪುರೇಷೆಯಲ್ಲಿ ಸ್ಪಷ್ಟವಾಗಿದೆ. ಗೌರವಧನವನ್ನು ಸ್ವೀಕರಿಸದೆ ಪ್ರದರ್ಶನ ನೀಡುತ್ತಿರುವುದು ಹಾಗೂ ಟೆಕೆಟ್ ಹಣವನ್ನು ೨೫ ರುಪಾಯಿಗಿಳಿಸಿ ಅದನ್ನು ಸಂಘಟಕರಿಗೆ ನೀಡದೆ ತಾನೇ ಪಡೆಯುತ್ತಿರುವುದು ಸಂಸ್ಥೆಯ ಅಸೂಕ್ಷ್ಮತೆಯ ಮತ್ತು ಬೇಜಾವಬ್ದಾರಿಯ ಪರಮಾವಧಿ.





0 Comments