
ರಂಗಮ್ಮ ಹೊದೇಕಲ್
ಪ್ರೀತಿಯ ಮಧು..
ಕತ್ತಲ ಬೆನ್ನಿಗೆ ಬೆಳಕಿರುವಂತೆ, ದುಃಖದ ನಂತರಕ್ಕೊಂದು ಖುಷಿ ಇರುತ್ತದೆನ್ನುವುದು ಸುಳ್ಳಾಗಲಿಕ್ಕಿಲ್ಲ. ತೀರದ ನೋವೊಂದರ ಬೆನ್ನಿಗೇ ನಿಮ್ಮ’ನೀಲಿ ಚುಕ್ಕಿಯ ನೆರಳು’ ಬೆಳಕು ಕಂಡು ನೀವು ತುಸು ಗೆಲುವಾಗುವಂತೆ ಮಾಡಿದೆ. ಇದು ಸಂತಸದ ಸಂಗತಿ.ಅಭಿನಂದನೆಗಳು ಮತ್ತು ಶುಭಾಶಯಗಳು ನಿಮಗೆ.
ಆಗಾಗ ನಿಮ್ಮ ಬಿಡಿ ಬಿಡಿ ಕವಿತೆ,ಲೇಖನ ಓದಿ ಸುಖಿಸುತ್ತಿದ್ದ ನನಗೆ ನಿಮ್ಮ ಅಷ್ಟೂ ಕವಿತೆಗಳ ಓದೂ ಕೂಡ ಖುಷಿ ಕೊಟ್ಟಿದೆ. ವಿಮರ್ಶೆ ನನಗೆ ಗೊತ್ತಿಲ್ಲದ್ದು.ಆದರೆ ನಿಮ್ಮ ಕವಿತೆಗಳು ಕಾಣಿಸಿದ ಮಿಂಚನ್ನು ಕುರಿತು ಎರಡು ಮಾತಾಡಬೇಕಿದೆ.
ಹತಾಶೆಯಾಚೆಗೆ ಸೆಟೆದು ನಿಲ್ಲುವ ನಿಮ್ಮ ದೃಢತೆ, ಆತ್ಮವಿಶ್ವಾಸಗಳಿಗೆ ನೀಲಿ ಚುಕ್ಕಿಯ ನೆರಳು ‘ಕನ್ನಡಿಯಾಗಿದೆ!ಸ್ವಾಭಿಮಾನಿ ಹೆಣ್ಣೊಬ್ಬಳ ಖಡಕ್ ದನಿ ಹೇಗಿರುತ್ತದೆಂದು ಸಾಬೀತು ಪಡಿಸಿವೆ. ಸುಳಿಗಳಲ್ಲಿ ಸಿಲುಕಿ ಹೈರಾಣಾಗುವವರ ನಡುವೆ ನಿಮ್ಮ ‘ಮೀರುವಾಟ’, ಆತ್ಮವಿಶ್ವಾಸ ಗಳು ಮೆಚ್ಚುಗೆ ಪಡೆದುಕೊಳ್ಳುತ್ತವೆ.

‘ನೆನಪುಗಳನ್ನು ಎದೆಯಲ್ಲೇ ಸುಟ್ಟು ರಂಜು ಕಲೆಸಿ
ನಾಳಿನ ಕನಸುಗಳಿಗೆ ನೀವಳಿಸಿ ದೃಷ್ಟಿ ತೆಗೆದು
ಮೂರುದಾರಿ ಕೂಡುವಲ್ಲಿ ಬಿಸುಟು
ನಿಸೂರಾಗಿ ಬಂದು ಕೂರುತ್ತೇನೆ!’
ನಾನಿನ್ನು ಹನಿಯಾಗುವುದಿಲ್ಲ
ನಾನೀಗ ಗಟ್ಟಿ ವಜ್ರವಾಗಿದ್ದೇನೆ.
‘ವಿಲವಿಲನೆ ಹೊರಳುವ ಆ ನಿನ್ನ
ಪೌರುಷವನ್ನು ಕಂಡು ಮುಸಿಮುಸಿ
ನಗಬೇಕಾಗಿದೆ’

ಇಲ್ಲೆಲ್ಲ ಬಪ್ಪರೇ ಮಧು ಅಂತ ಕೂಗುವಂತಾಗುತ್ತದೆ. ನಿಮ್ಮ ಸಾಮರ್ಥ್ಯ ಮತ್ತು ಸ್ವಾಭಿಮಾನವನ್ನು ಗಟ್ಟಿಯಾಗಿಸಿಕೊಳ್ಳುತ್ತ ನಿಮ್ಮದೇ ಸ್ವಂತಿಕೆಯ ಕುರುಹುಗಳನ್ನು ಕಾಣಿಸುವ ಬೆಡಗೇ ಚಂದ.
ಇಲ್ಲಿನ ಕವಿತೆಗಳಲ್ಲಿ ಕತ್ತಿಯ ಝಳಪಿದೆ, ಕಣ್ಣ ಹೊಳಪಿದೆ, ಕಡಲಿದೆ, ಅಲೆಗಳೂ….ಹೂ ನವಿರೂ…ಕರುಳೂ ಮತ್ತು ಪುಟಿದೆದ್ದ ಕೊರಳೂ ಕೂಡ!
ಓದಿ ಮುಗಿಸಿದ ಮೇಲೂ ಮತ್ತೆ ಮತ್ತೆ ಕೆಲ ಸಾಲುಗಳು ಕಾಡುತ್ತವೆ.
ಹೂವೊಂದರ ನವಿರು ಮೈಯನ್ನು ಇನ್ನೂ ಕತ್ತರಿಸಲಾಗಿಲ್ಲ…
‘ಹೂವು ಮತ್ತೆ ಮತ್ತೆ ಪ್ರೀತಿ ಕಲಿಸುವುದು.!’
‘ಕವಿತೆಯಂತಹ ಬಾಳೊಂದನ್ನು ಬಾಳಿಬಿಡಬಹುದೇ!’
ಕವಿತೆ ಬಾಳಾಗಲಿ..ಬಾಳು ಕವಿತೆಯಾಗಲಿ ಮಧು.
‘ನೀಲಿ ಚುಕ್ಕಿಯ ನೆರಳು’ ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://bit.ly/35kdgeH






0 Comments