ಸಾವಿನ ಸಮ್ಮುಖದಲ್ಲಿ ಸಾವರ್ಕರರನ್ನು ಎದುರಿಸಿ
ಜಿ ಪಿ ಬಸವರಾಜು
ಡಾ.ಯು.ಆರ್.ಅನಂತಮೂರ್ತಿ ಅವರ ಕೊನೆಯ ಕೃತಿ ‘ಹಿಂದುತ್ವ ಅಥವಾ ಹಿಂದ್ ಸ್ವರಾಜ್?.’ ಸಾವನ್ನು ಹೆಗಲಮೇಲೆ ಹೊತ್ತುಕೊಂಡೇ ಕೃತಿರಚನೆಯಲ್ಲಿ ತೊಡಗಿದ್ದ ಅನಂತಮೂರ್ತಿ, ಈ ಕೃತಿಗೆ ಮೊದಲ ನಾಲ್ಕು ಮಾತುಗಳನ್ನು ಬರೆಯಲೂ ಸಾಧ್ಯವಾಗದ ರೀತಿಯಲ್ಲಿ ತಮ್ಮನ್ನು ಸಾವಿನ ವಶಕ್ಕೆ ಒಪ್ಪಿಸಿಕೊಂಡರು. ಸಾವು ಎದುರಿಗೆ ಕಾಯುತ್ತಿದ್ದರೂ, ಒಂದಿಷ್ಟೂ ಅಂಜದೆ ಬದುಕಿನ ಸತ್ಯ ಯಾವುದು, ನೆಮ್ಮದಿಯ ಬದುಕಿಗೆ ನಿಜ ದಾರಿ ಯಾವುದು ಎನ್ನುವುದನ್ನು ತಮ್ಮ ಅನುಭವದ ಬೆಳಕಲ್ಲಿ ನೊಡಲು ಅನಂತಮೂರ್ತಿ ಅವರು ಯತ್ನಿಸಿರುವುದನ್ನು ಇಲ್ಲಿ ಕಾಣುತ್ತದೆ.
ಸಾವು ಎನ್ನುವುದೊಂದು ವಿಚಿತ್ರ ಸತ್ಯ. ಯಾರ ಸಾವು ಯಾವ ಹೊತ್ತಿಗೆ ಎಂದು ಹೇಳಲು ಸಾಧ್ಯವೇ ಆಗುವುದಿಲ್ಲ. ಪ್ರತಿಯೊಂದು ಜೀವಿಯೂ ಸದಾ ತನ್ನ ಹೆಗಲಮೇಲೆ ಸಾವನ್ನು ಹೊತ್ತೇ ಪಯಣಿಸುತ್ತಿರುತ್ತದೆ. ಹೀಗಿದ್ದೂ ನಾವು ನಮ್ಮ ಬದುಕಿನ ಕಾಲ ಘಟ್ಟದಲ್ಲಿ ಸಾವನ್ನು ಗಂಭೀರವಾಗಿ ತೆಗೆದುಕೊಂಡೇ ಇರುವುದಿಲ್ಲ. ಇನ್ನು ಅನೇಕ ವರ್ಷಗಳ ಬದುಕು ನಮ್ಮ ಮುಂದಿದೆ ಎಂಬ ನಂಬಿಕೆಯಿಂದಲೇ ನಮ್ಮ ನಿತ್ಯದ ವ್ಯವಹಾರ ನಡೆಯುತ್ತ ಇರುತ್ತದೆ. ಆದರೆ ಅನಂತಮೂರ್ತಿ ಅವರ ಎದುರಿಗಿದ್ದ ಸಂಗತಿಗಳೇ ಭಿನ್ನ. ಅವರ ಆರೋಗ್ಯ ಎಂಥ ಸ್ಥಿತಿಯಲ್ಲಿತ್ತೆಂದರೆ ನಿತ್ಯವೂ ಅವರಿಗೆ ಸಾವಿನ ದರ್ಶನ ಆಗುತ್ತಲೇ ಇತ್ತು. ಇಂಥ ಸಂದರ್ಭದಲ್ಲಿಯೂ ಅವರು ಸಾವಿನ ಭಯವನ್ನು ಬದಿಗೆ ಸರಿಸಿ ಬದುಕಿನ ಪ್ರಶ್ನೆಗಳನ್ನು ತೀವ್ರವಾಗಿ ಎದುರಿಸಿ ಉತ್ತರ ಹುಡುಕಲು ನೋಡಿದರು. ಹೇಡಿಯ ಶರಣಾಗತ ಭಾವ ಅಲ್ಲಿ ನುಸುಳಿರಲಿಲ್ಲ ಎಂಬುದನ್ನು ಈ ಕೃತಿಯ ಓದು ನಮಗೆ ತಿಳಿಸುತ್ತದೆ.

ಉತ್ಕಟವಾದ ಚಿಂತನೆ, ತೀವ್ರ ಭಾವನೆಗಳು, ಹರಿತವಾದ ವಿಶ್ಲೇಷಣೆ, ದಿಟ್ಟವಾದ ನಿಲುವು ಈ ಕೃತಿಯ ಉದ್ದಕ್ಕೂ ಕಾಣಿಸುತ್ತವೆ. ಹರಳುಗಟ್ಟಿದ ಚಿಂತನೆ, ಕಾವ್ಯದ ಸಂವೇದನೆಗಳೂ ಈ ಕೃತಿಯ ಪ್ರಭೆಯನ್ನು ಹೆಚ್ಚಿಸಿವೆ. ಅನಂತಮೂರ್ತಿ ಅವರ ಈ ಚಿಂತನೆಯಲ್ಲಿ ಸಾವಧಾನವಿದೆ; ಸಂಯಮವಿದೆ; ತನ್ನ ಎದುರಾಳಿಯನ್ನೂ ಗೌರವಿಸುವ, ಅವನ ಗುಣಾವಗುಣಗಳನ್ನು ವಿಶ್ಲೇಷಣೆಗೆ ಒಡ್ಡುವ ಉದಾರತೆಯೂ ಇಲ್ಲಿದೆ. ಸಮತೋಲನವನ್ನು ಕಳೆದುಕೊಳ್ಳದ ಸಮಚಿತ್ತವೂ ಇಲ್ಲಿರುವುದರಿಂದ ಪೂರ್ವಗ್ರಹಗಳಿಲ್ಲದೆ ನೋಡುವ, ಗ್ರಹಿಸುವ, ವಿಶ್ಲೇಷಿಸುವ ಮನೋಧರ್ಮ ಇಲ್ಲಿ ಕ್ರಿಯಾಶೀಲವಾಗಿದೆ.
ಸಾವಿಗೆ ಎದುರಾಗಿ ನಿಂತ ಹೊತ್ತಿನಲ್ಲಿಯೇ ಅನಂತಮೂರ್ತಿ ಅವರು ಎರಡು ಮುಖ್ಯ ವ್ಯಕ್ತಿತ್ವಗಳಿಗೆ ಎದುರಾಗುತ್ತಾರೆ. ಒಬ್ಬರು ಸಾವರ್ಕರ್, ಇನ್ನೊಬ್ಬರು ಮಹಾತ್ಮಾ ಗಾಂಧಿ. ಇವರು ವ್ಯಕ್ತಿಗಳು ಮಾತ್ರವಲ್ಲ, ಎರಡು ಚಿಂತನೆಯ ಮಾರ್ಗಗಳೂ ಹೌದು. ಒಂದು ಮಾರ್ಗ ಅನಂತಮೂರ್ತಿಯವರು ಒಪ್ಪುವ, ಮೆಚ್ಚುವ ಮಾರ್ಗ; ಇನ್ನೊಂದು ಅವರು ತೀವ್ರವಾಗಿ ವಿರೋಧಿಸುವ, ಕಟುವಾಗಿ ಟೀಕಿಸುವ ಮಾರ್ಗ. ಒಂದರ ತಳಹದಿ ವಿಶಾಲ ವಿಶ್ವವನ್ನು, ಮನುಕುಲವನ್ನು ವ್ಯಾಪಿಸುವಂಥದ್ದು; ಪ್ರೀತಿ ಮತ್ತು ಶಾಂತಿಗಳ ಆಧಾರದ ಮೇಲೆ ಮನುಕುಲದ ಪ್ರಗತಿಯನ್ನು (ಡೆವಲಪ್ಮೆಂಟ್) ಬಯಸುವಂಥದ್ದು. ಇನ್ನೊಂದು ಮಾರ್ಗ ಸಂಕುಚಿತ ದೃಷ್ಟಿಯದು; ದ್ವೇಷವನ್ನು ಬಿತ್ತುವಂಥದ್ದು; ಅಷ್ಟೇ ಅಲ್ಲ, ಮನುಷ್ಯ ಮನುಷ್ಯನನ್ನು ಕೊಲ್ಲಲ್ಲು ಪ್ರೇರೇಪಿಸುವಂಥದ್ದು.
ಗಾಂಧೀ ಸತ್ಯವನ್ನೇ ದೇವರೆಂದು ಭಾವಿಸಿದವರು. ಸತ್ಯದ ಪ್ರತಿಪಾದನೆಗಾಗಿ ತಮ್ಮ ಇಡೀ ಜೀವನವನ್ನೇ ಒಂದು ಪ್ರಯೋಗವಾಗಿ ಮಾಡಿದವರು. ವಿಶ್ವದಲ್ಲಿಯೇ ದೊಡ್ಡ ಚೈತನ್ಯವಾಗಿ ಶಾಂತಿ ಮತ್ತು ಅಹಿಂಸೆಯ ಮಾರ್ಗವಾಗಿ ಇವತ್ತಿಗೂ ಉಳಿದುಕೊಂಡವರು. ಗಾಂಧೀಜಿಯವರ ಚಿಂತನೆಯಿಂದ ಅನಂತಮೂರ್ತಿ ಗಾಢವಾಗಿ ಪ್ರಭಾವಿತರಾದವರು. ಲೋಹಿಯಾ ಮತ್ತು ಗಾಂಧೀ, ಅನಂತಮೂರ್ತಿಯರನ್ನು ಇಡಿಯಾಗಿ ಆವರಿಸಿದ ವ್ಯಕ್ತಿಗಳು. ಸಾವರ್ಕರ್ ತಮ್ಮ ಮಾರ್ಗಕ್ಕೆ ಧರ್ಮದ ಹೆಸರನ್ನು ಅಂಟಿಸಿದರೂ, ಧಾರ್ಮಿಕ ಶ್ರದ್ಧೆಯೇ ಇಲ್ಲದ, ಧರ್ಮದ ಮೂಲವಾದ ದಯೆಯನ್ನು ನಿರಾಕರಿಸಿದ, ಪ್ರೀತಿಯನ್ನು ತ್ಯಜಿಸಿ ದ್ವೇಷವನ್ನು ಬಿತ್ತುವ, ಶಾಂತಿ ಮತ್ತು ನೆಮ್ಮದಿಯನ್ನು ಕದಡುವ ಮಾರ್ಗ. ತಾನು ನಂಬುವ ಮೌಲ್ಯಗಳಿಗೆ ತೀರ ವಿರುದ್ಧ ಎನ್ನಿಸುವ ಮೌಲ್ಯಗಳನ್ನು, ಮಾರ್ಗವನ್ನು ನಿರ್ದೇಶಿಸುವ ಸಾವರ್ಕರ್ ಅವರನ್ನು, ಅವರ ವಿಚಾರಧಾರೆಯನ್ನು ಅತ್ಯಂತ ತಾಳ್ಮೆಯಿಂದ, ನೋಡುತ್ತಲೇ ಅದರ ಸ್ವರೂಪವನ್ನು ಬಯಲುಮಾಡುವ ದಿಟ್ಟ ಪ್ರಯತ್ನವನ್ನು ಈ ಕೃತಿಯಲ್ಲಿ ಅನಂತಮೂರ್ತಿ ಮಾಡಿದ್ದಾರೆ; ಯಶಸ್ವಿಯಾಗಿಯೇ ಮಾಡಿದ್ದಾರೆ.
ಧಾರ್ಮಿಕ ಶ್ರದ್ಧೆಯೇ ಇಲ್ಲದ, ಆದರೆ ಹಿಂದೂರಾಷ್ಟ್ರದ ಪರಿಕಲ್ಪನೆಯನ್ನೇ ಧಾರ್ಮಿಕ ಶ್ರದ್ಧೆ ಎನ್ನುವಂತೆ ನಂಬಿಸಲು ಯತ್ನಿಸುವ ಸಾವರ್ಕರ್ ವಿಚಾರಧಾರೆ ಹೇಗೆ ಇವತ್ತಿನ ಪ್ರಧಾನಿ ನರೇಂದ್ರ ಮೋದಿ ಅವರ ‘ಡೆವಲಪ್ಮೆಂಟ್’ ಸಿದ್ಧಾಂತಕ್ಕೆ ಭಿತ್ತಿಯನ್ನು ಒದಗಿಸುತ್ತದೆ ಎಂಬುದನ್ನು ಅನಂತಮೂರ್ತಿ ಅನೇಕ ವಾಸ್ತವ ಸಂಗತಿಗಳ ಮೂಲಕ ತೋರಿಸಿಕೊಡುತ್ತಾರೆ. ತೀವ್ರಗಾಮಿತ್ವದ ಸಾವರ್ಕರ್ ಭಾರತವನ್ನು ಒಂದು ರಾಷ್ಟ್ರವಾಗಿ, ‘ಪುಣ್ಯಭೂಮಿ’ಯಾಗಿ ನೋಡುವ ಕ್ರಮವೇ ಅತ್ಯಂತ ಸಂಕುಚಿತ ಮನೋಭಾವದ್ದು, ಅಷ್ಟೇ ಅಲ್ಲ ಮನುಕುಲಕ್ಕೆ ಮಾರಕವಾದದ್ದು. ‘ಪುಣ್ಯಭೂಮಿ’ ಎನ್ನುವುದು ಭಾರತ ಮಾತ್ರವೇ ಆಗಬೇಕಾಗಿಲ್ಲ, ದೇವರ ದೃಷ್ಟಿಯಿಂದ ಜಗತ್ತಿನ ಯಾವ ‘ಭೂಮಿ’ಯೂ ‘ಪುಣ್ಯಭೂಮಿ’ಯಾಗಬಹುದು. ಅತ್ಯಂತ ಸುಂದರವಾದ ಕಾಶ್ಮೀರವೂ ಕೊಳಕು ಭೂಮಿಯಾಗಿರುವ ವಾಸ್ತವವನ್ನು ಗ್ರಹಿಸಬಲ್ಲ ಸೂಕ್ಷ್ಮತೆ ಮತ್ತು ವೈಚಾರಿಕ ಸ್ಪಷ್ಟತೆ ಇದ್ದ ಗಾಂಧೀಜಿ ಹೇಗೆ ಸಾವರ್ಕರ್ಗಿಂತ ಭಿನ್ನವಾಗಿ ನಿಲ್ಲುತ್ತಾರೆ ಎಂಬುದನ್ನು ಅನಂತಮೂರ್ತಿ ಅವರು ತಮ್ಮ ಗ್ರಹಿಕೆಯ ಸೂಕ್ಷ್ಮ ಮತ್ತು ವಿಶ್ಲೇಷಣೆಯ ಬೆಳಕಿನಲ್ಲಿ ಕಾಣಿಸುತ್ತಾರೆ.
ಮಂದಗಾಮಿಯಂತೆ ಕಾಣಿಸುವ ಗಾಂಧಿ, ಭಾರತವನ್ನು ಬ್ರಿಟಿಷರ ಹಿಡಿತದಿಂದ ಬಿಡಿಸುವ ಚೌಕಟ್ಟಿನ ಆಚೆಗೂ ನೋಡಬಲ್ಲವರಾಗಿದ್ದರು; ಆಧುನಿಕ ನಾಗರಿಕತೆಯ ಮೋಹಕ್ಕೆ ಸಿಕ್ಕು ವಿನಾಶದತ್ತ ಹೊರಟಿದ್ದ ಐರೋಪ್ಯ ರಾಷ್ಟ್ರಗಳ ದುಃಸ್ಥಿತಿಗೂ ಮರುಗಬಲ್ಲ ಮಾನವೀಯ ಮಿಡಿತ ಉಳಿಸಿಕೊಂಡವರಾಗಿದ್ದ ಗಾಂಧಿ, ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ, ಮನುಕುಲಕ್ಕೆ ಸಲ್ಲಬಲ್ಲ ಮಹಾನ್ ಚೇತನವಾಗಿದ್ದರು. ಹೀಗೆ ಒಬ್ಬರ ಪಕ್ಕ ಮತ್ತೊಬ್ಬರನ್ನು ನಿಲ್ಲಿಸಿ ಯಾರು ಹೆಚ್ಚು ಎತ್ತರ ಎಂದು ಹೇಳದೆ, ಅದನ್ನು ತೋರಿಸುವ, ಮನಗಾಣಿಸುವ ಸಂಯಮ ಈ ಕೃತಿಯ ಉದ್ದಕ್ಕೂ ಕಂಡುಬರುತ್ತದೆ.
ಇಡೀ ಕೃತಿಯಲ್ಲಿ ಸಾವರ್ಕರ್ ಬಿಚ್ಚಿಕೊಳ್ಳುತ್ತಾ ಹೋದಂತೆ ಗಾಂಧೀ ಬೆಳೆಯುತ್ತಾ ಹೋಗುತ್ತಾರೆ. ಇಕ್ಕಟ್ಟು ಗಲ್ಲಿಗಳಲ್ಲಿ ಸಾವರ್ಕರ್ ನಡೆಯುತ್ತಿದ್ದಾರೆಂದು ನಮಗೆ ತಿಳಿಯುತ್ತಿರುವಂತೆಯೇ, ಗಾಂಧೀ ಮಾರ್ಗ ಎನ್ನುವುದು ಎಷ್ಟು ವಿಸ್ತಾರವಾದದ್ದು, ವಿಶಾಲವಾದದ್ದು, ಎಷ್ಟು ತೆರೆದದ್ದು, ಎಷ್ಟು ಮುಕ್ತವಾದದ್ದು, ಮನುಕುಲದ ಮುನ್ನಡೆಗೆ ಎಷ್ಟು ಹಿತವಾದದ್ದು ಮತ್ತು ಸುರಕ್ಷಿತವಾದದ್ದು ಎಂಬ ಸತ್ಯ ಹೊಳೆಯುತ್ತಾ ಹೋಗುತ್ತದೆ. ಅನಂತಮೂರ್ತಿ ಅವರು ಇಲ್ಲಿ ವಕೀಲನಂತೆ ವಾದಿಸುವುದಿಲ್ಲ. ವಾದ-ಪ್ರತಿವಾದಗಳ ಮಂಡನೆ ಇದ್ದರೂ ಇಲ್ಲಿ ಅನಂತಮೂರ್ತಿ ಅವರು ತಮ್ಮ ವಾದಕ್ಕೆ ಅಂಟಿಕೊಂಡ ವಕೀಲನಂತೆ ಕಾಣಿಸುವುದಿಲ್ಲ. ಸತ್ಯ ಯಾವುದು, ಧರ್ಮ ಯಾವುದು, ಧರ್ಮಶ್ರದ್ಧೆ ಎಂದರೆ ಏನು, ಮಾತೃಭೂಮಿ ಯಾವುದು, ಪುಣ್ಯಭೂಮಿ ಯಾವುದು ಎಂಬುದನ್ನು ತೋರಿಸುತ್ತಾ ಆಯ್ಕೆಯನ್ನು ನಮಗೇ ಬಿಡುತ್ತಾರೆ.
ಗಾಂಧಿಗೆ ಗುಂಡಿಟ್ಟ ಗೋಡ್ಸೆ ಇಲ್ಲಿ ನಮಗೆ ಮುಖ್ಯ ಎನ್ನಿಸುವುದಿಲ್ಲ. ಅವನು ಕಾಣಿಸಿದರೂ ಅವನ ಮುಖ ಮರೆಯಾಗಿಯೇ ಇರುತ್ತದೆ. ಗೋಡ್ಸೆಯ ಹಿಂದಿದ್ದ ಸಾವರ್ಕರ್ ಅವರೇ ಎದ್ದು ಕಾಣಿಸುತ್ತಾರೆ; ಸಾವರ್ಕರ್ ವಿಚಾರಗಳು ಕಣ್ಣು ಕುಕ್ಕುತ್ತವೆ. ಗೋಡ್ಸೆ ಗಾಂಧಿಗೆ ಹೊಡೆದದ್ದು ಮೂರೇ ಮೂರು ಗುಂಡುಗಳು. ಸಾವರ್ಕರ್ ಹೊಡೆದ ಗುಂಡುಗಳೆಷ್ಟು, ಅವರು ಬಲಿಗೊಂಡವರ ಸಂಖ್ಯೆ ಎಷ್ಟು, ಈಗಲೂ ಬಲಿಗೊಳ್ಳುತ್ತಿರುವವರ ಸಂಖ್ಯ ಎಷ್ಟು ಎಂಬ ಭಯಾನಕ ಚಿತ್ರ ಈ ಕೃತಿಯಲ್ಲಿ ಢಾಳಾಗಿ ಕಾಣಿಸುತ್ತದೆ. ಒಬ್ಬ ಸಮಾಜವಾದಿ ಚಿಂತಕ ಹೀಗಲ್ಲದೆ ಬೇರೆ ದಿಕ್ಕಿನಿಂದ ಸಾವರ್ಕರ್ ಅವರನ್ನು ನೋಡಲು ಸಾಧ್ಯವೇ ಇಲ್ಲ ಎನ್ನಿಸುವಂತೆ ಈ ಕೃತಿ ರೂಪಗೊಂಡಿದೆ.
ಪುಣ್ಯಭೂಮಿ ಎಂದು ಭಾವುಕ ಶ್ರದ್ಧೆಯಿಂದ ಕರೆಯುವ ಹುನ್ನಾರದಲ್ಲಿಯೇ ಹಲವು ಧರ್ಮಗಳನ್ನು, ಹಲವು ಭಾಷೆಗಳನ್ನು, ಹಲವು ಸಂಸ್ಕೃತಿಗಳನ್ನು ನಿರಾಕರಿಸುವ, ಮನಾಪಲಿಯನ್ನು ಹೇರುವ ಫ್ಯಾಸಿಸ್ಟ್ ಚಿಂತನೆಯೇ ಸಾವರ್ಕರ್ ಚಿಂತನೆ. ಈ ಚಿಂತನೆ ಹಿಟ್ಲರ್, ನೆಪೋಲಿಯನ್, ಸ್ಟಾಲಿನ್ ಚಿಂತನೆಗೆ ಹತ್ತಿರವಾದದ್ದು. ಅಥವಾ ಅಂಥ ಚಿಂತನೆಯ ಒಡಲಲ್ಲೇ ಹುಟ್ಟಿಕೊಂಡದ್ದು. ಇವತ್ತು ಅಮೆರಿಕದಂಥ ಬಲಿಷ್ಠ ರಾಷ್ಟ್ರಗಳು ಜಗತ್ತಿನ ಮೇಲೆ ಹೇರಲು ನೋಡುತ್ತಿರುವ ಮನಾಪಲಿಯ ಸ್ವರೂಪವೂ ಇದೇ. ಇದೆಷ್ಟು ಅಪಾಯಕರವಾದದ್ದು ಎಂಬುದು ನಮಗೆಲ್ಲ ಗೊತ್ತು. ಸಾವರ್ಕರ್ ಈ ವಿಷವೃಕ್ಷದ ಒಂದು ಕೊಂಬೆಯಾಗಿದ್ದರು; ಇದು ವಿಷವೃಕ್ಷ, ಮನುಕುಲದ ಸರ್ವನಾಶಕ್ಕೆ ಕಾರಣವಾಗಬಲ್ಲದು ಎಂಬ ಸತ್ಯವನ್ನು ತಿಳಿಯಬಲ್ಲ ಸೂಕ್ಷ್ಮಜ್ಞರಾಗಿದ್ದ ಗಾಂಧೀಜಿ, ಇದನ್ನು ವಿರೋಧಿಸುವ ದಿಟ್ಟತನ್ನವನ್ನು ತೋರಬಲ್ಲ ಧೀರರೂ ಆಗಿದ್ದರು.
ಈ ಕೃತಿಯಲ್ಲಿ ಒಂದು ಮುಖ್ಯ ಅಧ್ಯಾಯವಿದೆ. ಅದು ನಾಥೂರಾಮ್ ಗೋಡ್ಸೆಯ ಅಂತರಂಗವನ್ನು ತೆರೆದಿಡುವ ಅಧ್ಯಾಯ. ತಾನು ಗಾಂಧಿಯನ್ನು ಏಕೆ ಕೊಂದೆ ಎಂದು ಹೇಳುವ ಅಧ್ಯಾಯ. ನ್ಯಾಯಾಲಯದಲ್ಲಿ ನಿಂತು ಸತತವಾಗಿ ಐದು ಗಂಟೆಗಳ ಕಾಲ ತನ್ನ ನಿಲುವನ್ನು ಸಮರ್ಥಿಸಿಕೊಂಡ ಹೇಳಿಕೆ ಇದು. 90 ಪುಟಗಳ ಈ ಹೇಳಿಕೆಯನ್ನು ಗೋಡ್ಸೆ ಬರೆದು ತಂದು ಓದಿದ. ಫ್ಯಾಸಿಸ್ಟ್ ಮನಸ್ಸನ್ನು, ಗೋಡ್ಸೆ ಅಥವಾ ಸಾವರ್ಕರ್ ಚಿಂತನೆಯ ಎಳೆಗಳನ್ನು ಸ್ಪಷ್ಟವಾಗಿ ಕಂಡುಕೊಳ್ಳುವಲ್ಲಿ ಈ ಹೇಳಿಕೆ ಬಹಳ ಮಹತ್ವದ್ದು. ಗೋಡ್ಸೆಯ ಕೌಟುಂಬಿಕ ಹಿನ್ನೆಲೆ, ಧಾರ್ಮಿಕ ಶ್ರದ್ಧೆ, ಅವನನ್ನು ಪ್ರಭಾವಿಸಿದ ವ್ಯಕ್ತಿಗಳು, ಅವನು ಕಟ್ಟಿಕೊಂಡ ಚಿಂತನೆಯ ಸ್ವರೂಪ ಎಲ್ಲವೂ ಇಲ್ಲಿ ಬಯಲಾಗುತ್ತದೆ. ಅವನು ‘ಹಿಂದೂಧರ್ಮ’, ‘ಅಧ್ಯಾತ್ಮ’ ಮತ್ತು ‘ದೇಶಪ್ರೇಮ’ ಹೇಗೆ ಹಿಟ್ಲರ್ ಚಿಂತನೆಗೆ ಹತ್ತಿರವಾಗಿದ್ದವು ಎಂಬುದು ಇಲ್ಲಿ ಕಾಣುತ್ತದೆ. ಹಿಟ್ಲರ್ನ ಜನಾಂಗ ದ್ವೇಷ ಹಿಂಸೆಯನ್ನು, ಕ್ರೌರ್ಯವನ್ನು, ಅಮಾನವೀಯ ನಡವಳಿಕೆಯನ್ನು ಮಾನ್ಯಮಾಡಿದಂತೆ ಸಾವರ್ಕರ್ ಹಿಂದುತ್ವ ಕೂಡಾ ಇದೇ ದಾರಿಯ ನಡೆಯಾಗಿತ್ತು ಎಂಬುದು ನಮಗೆ ಸ್ಪಷ್ಟವಾಗುತ್ತದೆ. ಮನುಕುಲವನ್ನು, ಸತ್ಯ-ಅಹಿಂಸೆಗಳನ್ನು ಪ್ರೀತಿಸಿದ ಗಾಂಧಿಯನ್ನು ದ್ವೇಷಿಸುವುದು ಗೋಡ್ಸೆಗೆ ಅನಿವಾರ್ಯವಾಗಿತ್ತು; ಅಷ್ಟೇ ಅಲ್ಲ, ಗಾಂಧಿ ಗೆಲ್ಲುತ್ತ ಹೋಗುವುದನ್ನು ಸಹಿಸಲಾಗದೆ ಅವರಿಗೆ ಗುಂಡಿಕ್ಕುವುದೂ ಅಷ್ಟೇ ಅನಿವಾರ್ಯವಾಗಿತ್ತು.
ಸಾವರ್ಕರ್ ಚಿಂತನೆಯನ್ನು, ಗೋಡ್ಸೆಯ ಮನೋಧರ್ಮವನ್ನು, ‘ಹಿಂದುತ್ವವನ್ನು’ ಆರಾಧಿಸುವವರು ಸರಿಯಾಗಿ ಅರ್ಥಮಾಡಿಕೊಂಡಿದ್ದಾರೆಯೇ? ಹಾಗೆ ಕಾಣುವುದಿಲ್ಲ. ‘ಹಿಂದುತ್ವ’ ಎನ್ನುವುದು ಒಂದು ಮೌಢ್ಯದಂತೆಯೇ ಇವರನ್ನೆಲ್ಲ ಆವರಿಸುತ್ತಾ ಹೋಗಿರಬಹುದು ಎಂದೂ ಅನ್ನಿಸುತ್ತದೆ. ಗಾಂಧಿಯ ಒಳಸತ್ವವನ್ನು ಅರಿಯುವ ಪ್ರಯತ್ನದಲ್ಲಿ ಅನಂತಮೂರ್ತಿ ಅವರು ಸಾವರ್ಕರ್, ಗೋಡ್ಸೆ, ಫ್ಯಾಸಿಸ್ಟ್ ಚರಿತ್ರೆ ಎಲ್ಲವನ್ನೂ ವಿವರಗಳಲ್ಲಿ ಹಿಡಿದಿದ್ದಾರೆ; ಸರಿಯಾಗಿ ವಿಶ್ಲೇಷಿಸಿದ್ದಾರೆ. ಅನಂತಮೂರ್ತಿಯವರ ಚಿಂತನೆಯಲ್ಲಿ ಈ ಕೃತಿ ಬಹಳ ಮುಖ್ಯವಾದದ್ದು. ಬಿರುಗಾಳಿಯನ್ನೇ ಎಬ್ಬಿಸುವಂಥದ್ದು.






Largely one-sided.
Howsoever your hatred may be, the opposite party deserves to express his point of view.
No work which is judgmental in nature can survive the test of time.
Holds good to any -isms.
Higher the intellect, greater the openness.
Vice-versa.
‘ಹಿಂದುತ್ವ’ ಎನ್ನುವುದು ಒಂದು ಮೌಢ್ಯದಂತೆಯೇ ಇವರನ್ನೆಲ್ಲ ಆವರಿಸುತ್ತಾ ಹೋಗಿರಬಹುದು ಎಂದೂ ಅನ್ನಿಸುತ್ತದೆ. This is true for all religion as well.