ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯುವರ್ ಟೈಂ ಸ್ಟಾರ್ಟ್ ನೌ..

ನಿನ್ನ ಬೆನ್ನಿಗೆ ಕಟ್ಟಿರೋದು ಚೈನಾ ಮಾಡೆಲ್ ಗಡಿಯಾರ…

shivu morigeri

ಶಿವು ಮೋರಿಗೇರಿ 

 

ಯುವರ್ ಟೈಂ ಸ್ಟಾರ್ಟ್ ನೌ

ಹೇಳಿದ್ದು ಅಮ್ಮನಾ ? ಅಪ್ಪನಾ ? ಗಾಳಿಯಾ ?

ತುಂಬಾ ಮಂದಿ ಹೇಳ್ತಾರಲ್ಲಾ ಆ ದೇವರೆಂಬ ಭಾವವ ?

ಪ್ರಶ್ನೆ ಕೇಳುತ್ತಾ ಕುಳಿತರೆ ಅಲ್ಲೇ ನಿಲ್ಲಬೇಕು

ಕಾಲ ನಿನ್ನ ಮಗ್ಗುಲು ಕುಂತು ದಣಿವಾರಿಸಿಕೊಳ್ಳುತ್ತಾ ?

clock

ಓಡುತ್ತಲೇ ಇರಬೇಕು ಬಾಲ್ಯ, ಯೌವ್ವನ, ಮುಪ್ಪುಗಳ ಗಡಿಗಳಾಚೆ

ಎಲ್ಲೋ ಒಂದು ಕಡೆ ಯಾರೋ ಸ್ಟಾಪ್ ಎನ್ನುವವರೆಗೆ

ಎಷ್ಟು ಹೆಜ್ಜೆ ಕಿತ್ತಿಟ್ಟೆ ? ಕೇಳೋರ್ಯಾರು ? ಕಾಲ ನಿಲ್ಲಲ್ಲ

ಏನಿಲ್ಲ ಈ ಪಯಣದಲಿ ? ತೋರಿಸು ನೋಡೋಣ

ನೋವು ನಲಿವು ಕೆಟ್ಟದ್ದರಲ್ಲೇ ಒಳ್ಳೇದು

ನಡೆಯಲೇಬೇಕು ಎಲ್ಲವನ್ನು ಪಕ್ಕಕ್ಕಿಟ್ಟು ಕಾಲಕ್ಕೆ ಕನಿಕರವಿಲ್ಲ

 

ಕಳೆದೋಯ್ತು ಬಾಲ್ಯ ಹಲುಬಬೇಕಿಲ್ಲ

ಮುಗಿದ ಓದಿಗಿಲ್ಲದ ಕೆಲಸದಲ್ಲೂ ಮಕರಂದ ಸೂಸಬೇಕು

ವಿರಹಿ, ಸೇರಬಯಸುವ ಪ್ರೇಮಿಗಳ ಪಾಡುಬಿಡು

ಸಮಯದ ವೇಗ ಬಲು ನಿಧಾನ ಇರುವುದಿಲ್ಲ ಅವರಿಗೆ ಸಮಾಧಾನ

ಮದ್ವೆ ಮಕ್ಳು ಗಳಿಕೆ ಉಳಿಕೆ ವಯಸ್ಸಾಯ್ತು ಅನ್ನಿಸಿದಾಗ

ಕಾಲ ನಕ್ಕೀತು ನಿನ್ನ ಬೆಪ್ಪುತನ ನೋಡಿ ಮೌನವೇ ನಿನಗಾಗ ಗತಿ

 

ಅವರ ಕಾಲ ಮೇಲೆ ಅವರು ಮಕ್ಕಳೀಗ

ಹೊರಟರಾ ನಿಲ್ಲಿಸಿ ನಿನ್ನನು ನಡುನೀರಲಿ ?

ಮೊಮ್ಮಕ್ಕಳ ಕೈ ಹಿಡಿಯಬೇಕಿದ್ದ ಕೈಗೆ ಊರುಗೋಲು ಕೊಡೋದೂ ಕಾಲವೇ

ಎನು ಶಾಶ್ವತವಿಲ್ಲಿ ? ನಿಷ್ಠುರಿ ಕಾಲವೇ ಕಾಲ ಕಾಲಕ್ಕೂ ಉಳಿಯೋದು

ಏನಾದರೂ ಆಗಲಿ ಕಾಲು ಕಿತ್ತು ಮುಂದೆ ಇಡು ಮನವೇ

ನಿನ್ನ ಹೆಜ್ಜೆ ಗುರುತುಗಳು ಅಳಿಸದಂತೆ ಒತ್ತಿ ಯಾಕೆಂದರೆ

ಆ ದೇವರು ನಿನ್ನ ಬೆನ್ನಿಗೆ ಕಟ್ಟಿರೋದು ಚೈನಾ ಮಾಡೆಲ್ ಗಡಿಯಾರ

ನಿನ್ನ ಬದುಕೂ ಅಷ್ಟೇ ವಾರಂಟಿ ಗ್ಯಾರಂಟಿ ಏನೂ ಕೇಳ್ಬೇಡ

‍ಲೇಖಕರು Admin

17 September, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading