– ಚೇತನ್ ಸೊಲಗಿ
ಕರ್ನಾಟಕ ಮಾತ್ರವೇ ಅಲ್ಲ ಇಡೀ ಪ್ರಪಂಚದಲ್ಲಿಯೇ ಧಾವಂತ, ತಲ್ಲಣ, ಆತಂಕಗಳು ಮನೆ ಮಾಡಿವೆ. ಕರ್ನಾಟಕದ ತಲ್ಲಣಗಳಿಗೂ ಪ್ರಪಂಚದ ತಲ್ಲಣಗಳಿಗೂ ಹೆಚ್ಚಿನ ವ್ಯತ್ಯಾಸಗಳಿಲ್ಲ, ಪ್ರೀತಿ ವಿಶ್ವಾಸ ನಂಬಿಕೆಗಳೆಲ್ಲವೂ ಕಣ್ಮರೆಯಾಗಿ, ದ್ವೇಷ ಅಸೂಹೆಗಳೇ ವಿಜೃಂಭಿಸುತಿರುವ ಈ ಸಂದರ್ಭದಲ್ಲಿ ತಲ್ಲಣದ ಪ್ರವಾಹದೊಂದಿಗೆ ಕೊಚ್ಚಿಕೊಂಡು ಹೋಗದೆ ದಡದಲ್ಲಿ ನಿಂತು ಚಿಂತಿಸುವ ಅನಿವಾರ್ಯತೆ ಎದುರಾಗಿದೆ. ಆ ಅನಿವಾರ್ಯತೆಗಳನ್ನು, ಆಲೋಚನೆಗಳನ್ನು ಕೇಂದ್ರೀಕರಿಸಿಕೊಂಡು ಈ ವರ್ಷದ ಆಳ್ವಾಸ್ ನುಡಿಸಿರಿ ‘ಕರ್ನಾಟಕ : ವರ್ತಮಾನ ತಲ್ಲಣಗಳು’ ಎಂಬ ಮುಖ್ಯ ವಿಷಯದ ಪರಿಕಲ್ಪನೆಯಡಿ ವೇದಿಕೆ ನಿರ್ಮಿಸಿ ಚಿಂತನ ಮಂಥನಗಳಿಗೆ ಎಡೆ ಮಾಡಿಕೊಟ್ಟಿದೆ.
ಸಾಹಿತ್ತಿಕ ಬೆಳವಣಿಗೆಗಳನ್ನು, ಅದರ ಕುಂದುಕೊರತೆಗಳನ್ನು, ಮನುಷ್ಯ ಮತ್ತು ಸಾಹಿತ್ಯಕ್ಕಿರುವ ಅವಿನಾಭಾವ ಸಂಬಂಧಗಳನ್ನು, ಸಾಂಕೃತಿಕವಾಗಿ ಸುಂದರವಾಗಿ ಜೊತೆಯಾಗಿಸಿಕೊಂಡು ಜನರಮುಂದಿಡುವಲ್ಲಿ ಆಳ್ವಾಸ್ ನುಡಿಸಿರಿಯ ಪಾತ್ರ ತುಂಬ ಮಹತ್ವದ್ದು. ಆ ಮಹತ್ವದ ಪಾತ್ರವನ್ನು ಈ ಭಾರಿಯೂ ಆಳ್ವಾಸ್ ನುಡಿಸಿರಿ ಯಶಸ್ವಿಯಾಗಿದೆ. ಕಿಂಚಿತ್ತೂ ಸಮಯದ ವ್ಯತ್ಯಾಸವಾಗದಂತೆ ವ್ಯವಸ್ಥಿತ ರೀತಿಯಲ್ಲಿ ಕಾರ್ಯಕ್ರಮಗಳನ್ನು ನಿರ್ವಹಣಿ ಮಾಡುವಲ್ಲಿ ಆಳ್ವಾಸ್ ನುಡಿಸಿರಿ ನಿಸ್ಸೀಮತೆಯನ್ನು ಹೊಂದಿ ಪ್ರತಿ ಸಾರಿಯಂತೇ ಈ ಸಾರಿಯೂ ಸಾಂಸಕೃತಿಕ, ಸಾಹಿತ್ತಿಕ ಪ್ರೀಯರನ್ನು ಗಮನ ಸೆಳೆದಿದೆ.
ಎಲ್ಲರ ಗಮನ ಸೆಳೆದ ಈ ನುಡಿಸಿರಿಯಲ್ಲಿ ಚೆಂದದ ಪಂಚೆ ರುಮಾಲುಗಳನ್ನು ತೊಟ್ಟು, ಮೆರವಣಿಗೆಯನ್ನು ಉದ್ಘಾಟಿಸಿದ ಡಾ. ಸಿದ್ಧಲಿಂಗ್ಯನವರು ಕಣ್ಣಿಗೆ ಮೆರಗು ತಂದೊಗಿಸುವ ಸಾಂಸ್ಕೃತಿಕ ದಿಬ್ಬಣವನ್ನೇ ನೋಡುಗರ ಮುಂದೆ ತಂದಿಟ್ಟಂತಿತ್ತು, ವ್ಯವಸ್ಥಿತ ಸಾಲುಗಳಲ್ಲಿ ಬರುತ್ತಿದ್ದ ಆ ಮೆರವಣಿಗೆ ಒಂದು ಕ್ಷಣ ಎಲ್ಲರನ್ನು ಬೆರಗುಗೊಳಿಸದೇ ಇರಲಿಲ್ಲ, ಮಣಿಪುರಿಯ ಸ್ಟಿಕ್ ಡ್ಯಾನ್ಸ್, ಆದಿವಾಸಿ ಕುಣಿತ, ಕಲ್ಲಡ್ಕದ ಕೀಲುಕುದುರೆ ಗೊಂಬೆ ಕುಣಿತ, ಹುಲಿಕುಣಿತ, ರಂಗ ಮಂಟಪ, ಕೇರಳದ ಚಂಡೇ ವಾದನ, ತೆಂಕು ಬಡಗು ತಿಟ್ಟು ಯಕ್ಷಗಾನ ಪ್ರಕಾರ, ಬಸವ ಕುಣಿತ, ಚಿತ್ರಕಲೆ, ಕಥಕ್ಕಳಿ, ಶಂಖನಾದ, ಕೊಂಬು, ಬೆಳ್ಕೊಡೆಗಳು, ಕರಾವಳಿಯ ಪ್ರಮುಖ ಕಲೆಯಾದ ಆಟಿ ಕಳಂಜೆ, ಸಿದ್ಧವೇಷ, ಡೊಳ್ಳು ಕುಣಿತ, ಗೀಗಿ ಪದ, ಲಾವಣೆ, ರೇಂಜರ್ಸ್ ಮತ್ತು ರೋವರ್ಸ್ ತಂಡಗಳು, ಬ್ಯಾಂಡ್ ಸೆಟ್, ಕೇಸರಿ, , ಕುಂದಾಪುರದ ಕೊರಗರ ಡೋಲು, ಮಂಡ್ಯದ ದೇವರಾಜ ತಂಡದ ಪೂಜ ಕುಣಿತ, ಮೂಡಲಪಾಯದ ವೇಷಗಳು, ಮಂಡ್ಯದ ವೀರಭದ್ರ ಕುಣಿತ, ಹಾವೇರಿಯ ಪುರವಂತಿಕೆ, ತುಳುನಾಡಿನ ಸೋಣದ ಜೋಗಿ, ಕನ್ಯಪು, ಪಿಲಿಪಂಜಿ, ಹೀಗೆ ಹತ್ತು ಹಲವು ಮೆರವಣಿಗೆ ಝಲಕ್ ಎಲ್ಲರ ಕಣ್ಮನ ಸೆಳೆಯದೇ ಇರಲಿಲ್ಲ.
ಭಾಷೆಯೆ ಮತ್ತು ಭಾಷಾ ಬೆಳವಣಿಗೆಯ ಅಭಿವ್ಯಕ್ತಿಗೆ ನೂರು ದಾರಿಗಳುಂಟು ಅವುಗಳನ್ನು ಬಳಸಿಕೊಳ್ಳುವ ಪ್ರಕ್ರೀಯೆಗೆ ನಾವು ಮುಂದಾಗಬೇಕೆಂಬ ಹಲವು ಗಣ್ಯರ ಸಲಹೆಯಂತೆಯೇ ಕನ್ನಡ ಭಾಷೆಯ ಚಿಂತನಾ ವೇದಿಕೆಗಳೊಟ್ಟಿಗೆ ತುಳುಸಿರಿ, ಕೊಂಕಣಿ, ಬ್ಯಾರಿ ಭಾಷಾ ಸಿರಿಗಳೂ ಇನ್ನುಳಿದ ವೇದಿಕೆಗಳಲ್ಲಿ ಗರಿ ಬಿಚ್ಚಿಕೊಂಡಿರುವುದು ವಿಶೇಷವಾಗಿತ್ತು. ಎಲ್ಲ ಜನರ ಕಣ್ಮನ ಸೆಳೆಯಲು ಈ ವಿವಿಧ ಭಾಷಾ ಪ್ರಕ್ರೀಯೆಗಳು ಈ ಭಾರಿಯ ನುಡಿಸಿರಿಯ ವಿಶೇಷತೆಯನ್ನಬಹುದು.
ಇಕ್ರಲಾ ಒದೀರ್ಲಾ ಎಂದು ಕವನ ಬರೆದ ನಾನು ನುಡಿಸಿರಿ ಸಮ್ಮೇಳನಕ್ಕೆ ಹೋಗುವುದು ಎಷ್ಟು ಸರಿ ಎಂಬ ಚರ್ಚೆಗಳು ಮಾಧ್ಯಮಗಳಲ್ಲಿ ಕೇಳಿ ಬಂದವು. ಆದರೆ ಮೋಹನ್ ಆಳ್ವಾರಿಗಿಂತ ಪ್ರಗತಿಪರ ಚಿಂತಕರಿರುವವರು ಇನ್ಯಾರಿದ್ದಾರೆ ಎಂದು ಸಮಾರೋಪ ಭಾಷಣದಲ್ಲಿ ಪ್ರಶ್ನಿಸಿದ ಸಮ್ಮೇಳನಾಧ್ಯಕ್ಷ ಸಿದ್ಧಲಿಂಗಯ್ಯನವರು, ಸಮ್ಮೇಳನ ಅಧ್ಯಕ್ಷೀಯ ಭಾಷಣದಲ್ಲಿಯೇ ಹಲವು ವಿಚಾರಗಳನ್ನು ಜನರ ಮುಂದಿಟ್ಟಿದ್ದಿರು.
ಸಾಹಿತ್ಯದ ಪ್ರಕ್ರೀಯೆಗಳು ಬದಲಾಗುತ್ತಿಲ್ಲ, ಜನರು ಕಿತ್ತಾಡಿಕೊಳ್ಳುವುದು ಕನ್ನಡದಲ್ಲಿ ನಮ್ಮ ಕೋರ್ಟು ನ್ಯಾಯಲಯದ ತೀರ್ಪುಗಳು ಬರುವುದು ಇಂಗ್ಲೀಷಿನಲ್ಲಿ, ಭಾಷೆ ಮತ್ತು ಭಾಷಾ ವ್ಯಾಮೋಹ ಬದಲಾಗಲು ನಮ್ಮ ಆಡಳಿತ ವ್ಯವಸ್ಥೆಗಳು, ಆಡಳಿತದ ಪ್ರಕ್ರೀಯೆಗಳು ಮೊದಲು ಕನ್ನಡೀಕರಣಗೊಳ್ಳಬೇಕು. ಕನ್ನಡ ಸಂಸ್ಕೃತಿ ಒಂದು ಬಹುಮುಖಿ ಸಂಸ್ಕೃತಿಯಾಗಿದ್ದು ಪ್ರಾಥಮಿಕ ಶಿಕ್ಷಣದಲ್ಲಿ ಇಂಗ್ಲೀಷ್ ಭಾಷಾ ಆಯ್ಕೆ ಪೋಷಕರ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ಉಚ್ಛ ನ್ಯಾಯಾಲಯ ತೀರ್ಪನ್ನು ನೀಡಿದೆ. ಇದು ಬಡವರು ಮತ್ತು ಶ್ರೀಮಂತರ ನಡುವೆ ಶೈಕ್ಷಣಿಕ ಕಂದಕವನ್ನು ಸೃಷ್ಟಿಸುತ್ತಿದೆ. ಇದನ್ನು ವಿರೋಧಿಸಿ ಸರ್ಕಾರ ಮೇಲ್ಮನವಿಯನ್ನು ಸಲ್ಲಿಸಬೇಕೆಂದು ಸೂಚಿಸಿದರು. ಒಬ್ಬ ಮಾವನೋರ್ವ ತನ್ನ ಮಗಳಿಗೆ ಅಳಿಯನಾದವನು ಕನ್ನಡದಲ್ಲಿ ಪತ್ರ ಬರಿಯುತ್ತಾನಲ್ಲ ಎಂದು ಅಳುತ್ತಾನೆಂದರೆ ನಮ್ಮ ಕೆಲ ಪ್ರಸ್ಥುತ ಇಂಗ್ಲೀಷ್ ವ್ಯಾಮೋಹಿತ ಮನಸ್ಸುಗಳನ್ನು ಕಂಡು ನೋವುಂಟಾಗುತ್ತದೆ ಎಂದರು.
ಸಮ್ಮೇಳದ ಅಧ್ಯಕ್ಷೀಯ ಭಾಷಣದಲ್ಲಿ ಹಲವಾರು ವಿಷಯಗಳನ್ನು ತೆರೆದಿಟ್ಟ ಅವರು ಈ ಕಾರ್ಯಕ್ರಮದಲ್ಲಿ ತಾವು ಭಾಗವಹಿಸಿದ್ದನ್ನು ವಿರೋದಿಸಿದವರಿಗೆ ಉತ್ತರ ನೀಡಿದ್ದು ಸ್ವಲ್ಪ ಭಿನ್ನವಾಗಿ ಗೋಚರಿಸಿತು ಎಂದರೆ ತಪ್ಪಾಗಲಿಕ್ಕಿಲ್ಲ.
ಇನ್ನುಳಿದಂತೆ ಸಮಯೋಜಿತ ಹಲವಾರು ವಿಷಯ ವಸ್ತು ಉಳ್ಳ ಗೋಷ್ಠಿಗಳದ್ದೇ ಕಾರುಬಾರು! ಇತ್ತೀಚಿನ ತವಕ ತಲ್ಲಣಗಳನ್ನು ಪ್ರತಿಯೊಬ್ಬ ಸಾಹಿತಿಗಳ ಚಿಂತಕರ ನುಡಿಗಳಲ್ಲಿ ಕೇಳಿ ಕನ್ನಡದ ಪ್ರಸ್ಥುತ ಆಯೋಮಯ ಸ್ಥಿತಿಕಂಡು ಬೆರಗಾಗದೇ ಉಳಿಯಲಾಗಲಿಲ್ಲ.
ಗೋಷ್ಠಿಗಳೆಂದರೆ ಕುಳಿತುಕೊಳ್ಳದೇ ಬೇರೆಡೆ ಸುತ್ತವ ಆಧುನಿಕ ಸಾಹಿತ್ಯಾಸಕ್ತರು ಇಲ್ಲಿ ಕಾಣಲಿಲ್ಲ! ಹೊರತಾಗಿ ಎಲ್ಲಾ ವಿಚಾರಗೋಷ್ಠಿಗಳಲ್ಲೂ ಜನ ತುಂಬಿಕೊಳ್ಳುತ್ತಿದ್ದು ಖುಷಿ ಕೊಡುತ್ತಿತ್ತು. ಮೊದಲನೇ ದಿನದದಂದು ಮಳೆರಾಯ ಸಹಿತ ಬಿಟ್ಟು ಬಿಡದೇ ಕಾರ್ಯಕ್ರಮಕ್ಕೆ ಆಗಮಿಸಿದರೂ ಜನ ಮಾತ್ರ ಕದಲದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಗೋಷ್ಟಿಗಳನ್ನು ಕೇಳಿ ಆನಂದಿಸುತ್ತಿದ್ದರು. ಮಳೆ ಬಂದ ತಕ್ಷಣವೇ ಕಾರ್ಯಕ್ರಮ ನಿವರ್ಾಹಕರು ಕೈಗೊಳ್ಳುತ್ತಿದ್ದ ವ್ಯವಸ್ಥೆಗಳು ಸ್ವಲ್ಪವೂ ವೇಳೆಯ ವ್ಯತ್ಯೇಯವಾಗದಂತೆ ಬೆರಗು ಮೂಡಿಸುತ್ತಿದ್ದವು.
ಸಾಹಿತ್ಯದ ಸಿರಿಯಲ್ಲಿ ಕೃಷಿಯ ಘಮಲು
ಸಾಹಿತ್ಯ ಸಮಾವೇಶಗಳನ್ನು ಸಾಹಿತ್ತಿಕ ವಿಚಾರಗೋಷ್ಠಿಗಳಿಗಷ್ಟೆ ಸೀಮೀತವಾಗಿಸದೇ, ಮಾನವನ ಜೀವನಾಡಿ, ಚೈತನ್ಯದ ಧ್ಯೋತಕವೂ ಆದ ಕೃಷಿಯನ್ನು ಸಹಿತ ನೆನೆಯಲು ಆಳ್ವಾಸ್ ನುಡಿಸಿರಿ ಅವಕಾಶ ಒದಗಿಸಿತ್ತು. ವಿಶೇಷವಾಗಿ ಕೃಷಿ ವಸ್ತುಗಳ ವಿವಿಧ ತೆರನಾದ ಪ್ರದರ್ಶನಗಳನ್ನು ಏರ್ಪಡಿಸುತ್ತಾ, ವಿವಿಧ ವೇದಿಕೆಗಳಲ್ಲಿ ಕೃಷಿ, ಪರಿಸರದ ಕುರಿತಾದ ವಿಚಾರ ಗೋಷ್ಠಿಗಳಿಗೆ ಅವಕಾಶ ನೀಡಿ ನುಡಿಸಿರಿ ಹೊಸತೆರನಾದ ಮೆರಗು ಪಡೆದುಕೊಂಡಿತ್ತು.
ನುಡಿಸಿರಿಯಲ್ಲಿ ಹೊಸತೆನಿಸುವ ಪ್ರಯತ್ನಗಳು, ಸಂಸ್ಕೃತಿಯ ಕೊಡುಗೆಗಳು ನಡೆಯುತ್ತಿರುವುದು ಸಾಮಾನ್ಯ. ಜನಪದೀಯ ಕೃಷಿ ಅಳಿವಿನಂಚಿಗೆ ತಲುಪಿರುವುದನ್ನು, ಮೂಲ ಬೆಳೆಗಳು, ಮೂಲ ಕೃಷಿ ಪದ್ಧತಿಗಳು ಕಾಣೆಯಾಗುತ್ತಿರುವುದನ್ನು ‘ಕೃಷಿ ಮತ್ತು ವನಸಿರಿಗಳ ಪ್ರದರ್ಶನ’ ಮಾರ್ಮಿಕವಾಗಿ ಬಿತ್ತರಿಸಿಡುತ್ತಿತ್ತು. ಜನಪದೀಯ ಕೃಷಿ, ಸಾವಯವ ಬೆಳೆ ಅಳಿವಿನಂಚಿಗೆ ಸರಿಯುತ್ತಿರುವ ಈ ಸಂದರ್ಭದಲ್ಲಿ ಆಳ್ವಾಸ್ ನುಡಿಸಿರಿ ವಿವಿಧ ಬೆಳೆಗಾರರಿಗೆ, ಮಡಿಕೆ ತಯಾರಿಕೆ, ಆಹಾರ ವಸ್ತುಗಳ ತಯಾರಿಕಾಗಾರರಿಗೆ ಆಹ್ವಾನಿಸಿ ಪ್ರದರ್ಶನ ಏರ್ಪಡಿಸಿತ್ತು. ಕಣ್ಮರೆಯಾಗುತ್ತಿರುವ ಈ ಹಳೆಯ ಕೃಷಿ ವಿಧಾನಗಳು ಬೆಳೆಗಳು ನೋಡುಗರ ಮನ ಸೆಳೆದಿದ್ದಲ್ಲದೇ. ಕೃಷಿಕರಿಗೂ ಈ ಪ್ರದರ್ಶನ ಒಂದು ಧನ್ಯತಾ ಭಾವ ತಂದೊದಗಿಸಿತ್ತು.
ವರ್ತಮಾನದ ತಲ್ಲಣಗಳಿಗೆ ನಶಿಸುತ್ತಿದೆ ಪರಿಸರ

ಚಿಂತಕ ನಾಗೇಶ ಹೆಗಡೆ ಕೃಷಿ ಮತ್ತು ಪರಿಸರ ವರ್ತಮಾನ ತಲ್ಲಣಗಳ ಗೋಷ್ಠಿಯಲ್ಲಿ ಮಾತನಾಡಿ ನಾವು ನಿಸರ್ಗವನ್ನು ನೋಡುವ ದೃಷ್ಟಿಕೋನ ಬದಲಾಗಿದೆ, ನಾಟಕವನ್ನು, ಕವಿತೆಯನ್ನು, ಸೃಜನಶೀಲ ಸಾಹಿತ್ಯವನ್ನು ಪರಿಸರ ಜಾಗೃತಿಗಾಗಿ ಬಳಸಿಕೊಳ್ಳುತ್ತಿರುವ ಸಾಹಿತಿಗಳು ಕಾಣದಾಗಿದ್ದಾರೆ. ಪರಿಸರದ ಕಾಳಜಿಗೆ ಬೆಲೆಕೊಡಬೇಕಿದ್ದ ಕ್ರಿಯಾಶೀಲ ಬರಹಗಾರರು ಹುಡುಕಿದರೂ ಸಿಗದಂತಾಗಿದ್ದಾರೆ. ನಮ್ಮ ಮುಖ್ಯ ಮಂತ್ರಿಗಳಿಗೆ ಉದ್ಯಮಗಳು ಶಿಕ್ಷಣ ಸಂಸ್ಥೆಗಳು, ಬಂಡವಾಳ ಶಾಹಿಗಳು ಮಾತ್ರ ಕಣ್ಣಿಗೆ ಗೋಚರಿಸುತ್ತಿರುವರೇ ವಿನಹ, ಕನ್ನಡದ ನೆಲ, ಪರಿಸರದ ಬಗ್ಗೆ ಕಿಂಚಿತ್ತೂ ಕಾಳಜಿ ಕಾಣದಿರುವುದು ವಿಶಾದನೀಯ ಎಂದರು.
ಸರ್ವೇಜನಾ ಸುಖಿನೋಭವಂತು ಎಂಬ ಮಾತು ಆಧುನಿಕ ಮುಖವಾಡಗಳನ್ನು ಹೊತ್ತ ಬದಲಾಗುತ್ತಿದೆ, ಭೂಮಿಗಳ ಸರ್ವೆ ಮಾಡುವವರಿಗೆ ಭೂಮಿ ನುಂಗಿ ಹಾಕಿಕೊಳ್ಳಲು ‘ಸರ್ವೇಜನಾ ಸುಖಿನೋಭವಂತು’ ಎಂದಾಗಿದೆ ಎಂಬ ಹಾಸ್ಯದ ಮಾತು ನಮ್ಮ ಪರಿಸರದ ಬಗೆಗಿನ ಪ್ರಕ್ರೀಯೆಗಳ ವ್ಯಂಗ್ಯವನ್ನು ತೋರಿಸಿದಂತಿತ್ತು. ಮದುವೆಯಲ್ಲಿ ಸಪ್ತಪದಿ ತುಳಿಯುವ ದಂಪತಿಗಳಿಂದು ‘ನವಪದಿ’ ತುಳಿಯಲಿ. ಹೆಚ್ಚಿನ ಎರಡು ಹೆಜ್ಜೆಗಳು ಒಂದು ಕನ್ನಡ ಭಾಷೆಯ ಸಂರಕ್ಷಣಿಗಾಗಿ ಮತ್ತೊಂದು ಜಗತ್ತಿನ ಪರಿಸರ ಸಂರಕ್ಷಣೆ, ಸುಸ್ಥಿರ ಅಭಿವೃದ್ಧಿಗಾಗಿ ಕೈಕೊಳ್ಳಲಿ ಎಂದರು. ಸರಕಾರ ಮುದುಕರಿಗೆ ಹಲ್ಲುಸೆಟ್ ಕೊಡುತ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ ಇಲಾಖೆ, ಜಲ ನಿಯಂತ್ರಣ ಮಂಡಳಿಗಳಿಗೂ ಸರಕಾರ ಹಲ್ಲು ನೀಡಿ ಭ್ರಷ್ಟರಿಗೆ ಹೆದರಿಕೆ ಹುಟ್ಟಿಸುವಂತೆ ಮಾಡಲಿ ಎಂದದ್ದು ಸರಕಾರದ ಪರಿಸರ ಸಂರಕ್ಷಣಿ ಕುರಿತ ಬೇಜವಾಬ್ಧಾರಿತನಕ್ಕೆ ಬುದ್ಧಿ ಹೇಳಿದಂತಿತ್ತು.
ಗೋಷ್ಠಿತಿಯಲ್ಲಿ ಮಾತನಾಡಿದ ಇನ್ನೋರ್ವ ಕೃಷಿಪರ ಹೋರಾಟಗಾರ ಶಿವಾನಂದ ಕಳವೆ ಇವತ್ತಿನ ಮಕ್ಕಳಿಗೆ ಸಾವಯವ ಕೃಷಿ ಸ್ವಚ್ಛಂದ ಪರಿಸರ ಸಿಗುತ್ತಿಲ್ಲ. ಹುಲ್ಲಿನಿಂದ ಹಾಲೆಂಬುದನ್ನು ಸಹಿತ ನೆನೆಯದಂಥ ಪರೀಧಿಯೊಳಗೆ ನಾವಿಂದು ಬದುಕುತ್ತಿರುವುದು ಅಸಹ್ಯಕರವಾದಂಥದ್ದು ಎಂದರು. ಮಣ್ಣಿನ ನಿಧರ್ಾರಕ್ಕಿಂತ ಮನುಷ್ಯನ ನಿಧರ್ಾರ ಮುಖ್ಯ. ಅನ್ನದ ಅರ್ಥವನ್ನು ತಿಳಿಯದೇ ಗ್ರಾಮಗಳನ್ನು ಬದಲಿಸುತ್ತಿದ್ದೇವೆ. ಸುವರ್ಣ ಗೆಡ್ಡೆಗೆ ಕಾಂಕ್ರೀಟ ಬೀಜವನ್ನು ಬಿತ್ತುತ್ತಿದ್ದೇವೆ. ಅನ್ನವನ್ನು ಅರ್ಥಮಾಡಿಸುವ ಪ್ರಕ್ರೀಯೆ ನಡೆಯಬೇಕಿದೆ. ಹೊಸ ರೀತಿಯ ಬೆಳೆಗಳು ಮೂಲ ಬೆಳೆಗಳನ್ನು ಬೆಳೆಯುವುದಕ್ಕೆ ತೊಂದರೆ ನೀಡುತ್ತಿದ್ದು ರೈತರೂ ಕೂಡ ನಿಧಾನಕ್ಕೆ ಜಾಣತನ ಮೆರೆಯುತ್ತಿದ್ದಾರೆ. ತಮ್ಮ ಕೃಷಿ ಪರಿಸರವನ್ನು ಉಳಿಸಿಕೊಳ್ಳುವ ಪ್ರಯತ್ನ ನಿಧಾನಕ್ಕೆ ಶುರುವಾಗಿಸಿ ಕೊಂಡಿದ್ದು ತಮಗಷ್ಟೇ ಸಾವಯವ ಬೆಳೆಗಳನ್ನು ಬೆಳೆದುಕೊಳ್ಳುತ್ತಿದ್ದಾರೆ. ಇದು ಹೀಗೆ ಮುಂದುವರೆದಲ್ಲಿ ಆಧುನಿಕತೆ ಸಾವಯಮ ಕೃಷಿ ಮೌಲ್ಯಗಳನ್ನು ಅವನತಿಗೆ ಸರಿಸುವುದರಲ್ಲಿ ಎರಡು ಮಾತಿಲ್ಲ ಎಂದರು.
ಆಧ್ಯಾತ್ಮ ತಲ್ಲಣ ಗೋಷ್ಠಿಯಲ್ಲಿ ಮಾತನಾಡಿದ ಲೇಖಕಿ ವೀಣಾ ಬನ್ನಂಜೆ ಪೂಜೆ ಎಂಬುದು ದೈವದ ಜೊತೆಗಿನ ಸಮಾಗಮ, ಲೈಂಗಿಕ ಕ್ರೀಯೆಗಿಂತ ಪೂಜೆ ಕೀಳಾ ಲೈಂಗಿಕ ಪ್ರಕ್ರೀಯೆಗೆ ನೀಡಿದ ಶಿಸ್ತು ಬದ್ಧತೆಯನ್ನು ನಾವು ಪೂಜೆಗೆ ನೀಡುತ್ತಿಲ್ಲಾ ಎಂದರು. ಯುವಕ ಯುವತಿಯರ ಬದಲಾದ ದಾಷ್ಟ್ಯ ಮನೋಸ್ಥಿತಿಯನ್ನು ಮಾರ್ಮಿಕವಾಗಿ ಬಿಚ್ಚಿಟ್ಟರು.
ಭಾಷೆ ಮತ್ತು ಶಿಕ್ಷಣದ ವರ್ತಮಾನದ ತಲ್ಲಣ ಗೋಷ್ಠಿಯಲ್ಲಿ ಗುರುರಾಜ ಕರ್ಜಗಿ ಮತ್ತು ಡಾ. ಮೋಹನ ಚಂದ್ರಗುತ್ತಿಯವರ ಮಾತಲ್ಲಿ ಭಾಷೆಯ ಬಗೆಗಿನ ಬದಲಾವಣೆಯ ಇತ್ತೀಚಿನ ತಿಳುವಳಿಕೆ ಬಗೆಗೆ ವಿಚಾರಗಳು ಮೂಡಿ ಬಂದು ಪ್ರಭುತ್ವದ ಭಾಷೆಗೆ ಉಳಿವಿಲ್ಲ ಸಾಮಾನ್ಯರ ಭಾಷೆಗೆ ಮಾತ್ರ ಉಳಿವಿದೆ. ಶಿಕ್ಷಣ ಸಂಪಾದನೆಯ ಹಾದಿಯಲ್ಲಿ ಸಾಗುತ್ತಿದ್ದು ಮಾಲ್ಯಗಳ ಬಿತ್ತುವಿಕೆ ಕೆಲಸವನ್ನು ಮರೆ ಮಾಚಿಕೊಂಡಿದೆ ಎಂಬ ಚಿಂತನೆಗಳು ಕೇಳಿ ಬಂದವು.
ನಿರಂಜನ ವಾನಳ್ಳಿಯವರು ಜನರ ಮುಂದಿಟ್ಟ ಮಾಧ್ಯಮ ತಲ್ಲಣಗಳ ಗೋಷ್ಠಿಯಲ್ಲಿ ಹಿಂದೆ ದಾಖಲಾಗದ ಎಷ್ಟೋ ಜನಪದೀಯ ಮಾಧ್ಯಮಗಳು ಇಂದು ಮಾಧ್ಯಮಗಳ ಮೂಲಕ ದಾಖಲಾಗಿ ಉಳಿಯುತ್ತಿವೆ. ಆದರೆ ಹಣ ಬಿತ್ತಿ ಹಣಬೆಳೆಯುವ ಮಾಧ್ಯಮವಾಗಿ ಮಾರ್ಪಟ್ಟಿರುವುದು ಇವತ್ತಿನ ತಲ್ಲಣ. ಸಮಾಜವೇ ಭ್ರಷ್ಟವಾಗುತ್ತಿದೆ. ಇಡೀ ಮಾಧ್ಯಮವೇ ಕೆಟ್ಟು ಹೋಗಿದೆ ಎನ್ನುವುದೊಂದು ತಪ್ಪು ಪರಿಕಲ್ಪನೆಯಾಗಿದ್ದು ಭ್ರಷ್ಟ ವ್ವಯವಸ್ಥೆಗಳನ್ನು ತಿದ್ದುತ್ತಾ ಮಾಧ್ಯಮ ತವಕ ತಲ್ಲಣಗಳನ್ನು ನೀಗಿಸಿಕೊಳ್ಳುತ್ತಿದೆ ಎಂದರು.
ಇತ್ತೀಚಿನ ರಾಜಕೀಯ ತಲ್ಲಣಗಳ ಕುರಿತಾಗಿ ನಿರರ್ಗಳವಾಗಿ ವಿಚಾರಗಳನ್ನು ಬಿಚ್ಚಿಟ್ಟ ಶಾಸಕ, ಲೇಖಕ ವೈ. ಎಸ್. ವಿ ದತ್ತಾ. ಪಂಪನ ಸಾಹಿತ್ಯ, ದಾಸ ಸಾಹಿತ್ಯ, ಶರಣರ ವಷನಗಳಿಂದಲೂ ಎಚ್ಚರಿಕೆಯ ಗಂಟೆಗಳು ಕೇಳಿ ಬಂದಿವೆ ಆದರೆ ಎಚ್ಚೆತ್ತುಕೊಳ್ಳುವ ನಾವುಗಳು ಮಾತ್ರ ಮಲಗೇ ಇದ್ದೇವೆ ಎಂದರು.
ಸಾಹಿತ್ಯದ ತಲ್ಲಣಗಳ ಕುರಿತಾಗಿ ಸಿ. ಎನ್. ರಾಮಚಂದ್ರನ್. ಬದಲಾಗಬೇಕಾದ ಕನ್ನಡ ಅವಸ್ಥೆಗಳ ಬಗ್ಗೆ ತೆರೆದಿಟ್ಟರೆ ಪ್ರತಿಭಾ ನಂದಕುಮಾರ ಹೊಸ ಬರಹಗಾರರ ತಲ್ಲಣಗಳನ್ನು ವೇದಿಕೆ ಮೇಲೆ ಪ್ರಸ್ಥುತ ಪಡಿಸಿ ಅದನ್ನು ನಿವಾರಿಸಲು ನಾವು ದೊಡ್ಡ ಸಾಹಿತಗಳು ಯೋಚಿಸಬೇಕಿದೆ ಎಂದರು.
ಹೀಗೆ ಹಲವು ಗೋಷ್ಠಿಗಳು ಕಂಡರೂ ಯುವಕನೋರ್ವನ ಮನಸ್ಸಿನ ತಲ್ಲಣಗಳ ನಡುವೆ ಹಾಜರಿಯಾಗಲು ಕೆಲವೇ ಕೆಲವು ಸಾಧ್ಯವಾದಂತವುಗಳು! ಇನ್ನುಳಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೇ ಮನ ಮೈ ಬೆನ್ನಟ್ಟಿಕೊಂಡು ಸಾಗುತ್ತಿತ್ತು. ಆ ಕಾರ್ಯಕ್ರಮದ ವ್ಯವಸ್ಥಿತತೆ ಪುಸ್ತಕ ಮಳಿಗೆಗಳಿಗೂ ಕಲ್ಪಿಸಿದ ವ್ವಯಸ್ಥಿತ ಜಾಗ ವೇಳಾ, ನಿಯಂತ್ರಣತೆ ಎಲ್ಲಾ ಸಾಹಿತ್ಯದ ಕಾರ್ಯಕ್ರಮಗಳಿಗೂ ಬರಬಾರದೇ ಎನ್ನಿಸುತ್ತಿತ್ತು.








ಕಾರ್ಯಕ್ರಮದ ಒಪ್ಪ, ಓರಣ ಎಲ್ಲ ಸರಿಯೇ. ಆದರೆ ಪ್ರಶ್ನೆ ಇರುವುದು ಅದರ ಕೇಂದ್ರ ಬಿಂದುವಿನಲ್ಲಿ. ನಮ್ಮ ಸುತ್ತ ಇರುವುದು ಬರೀ ತಲ್ಲಣಗಳೇ? ಸಂಭ್ರಮ,ಸಡಗರ ಇಲ್ಲವೇ ? ‘ಕನ್ನಡ ನಾಡಿನ ಸಂಭ್ರಮ ಮತ್ತು ತಲ್ಲಣಗಳು’ ಎಂಬರ್ಥ ಬರುವ ವಿಷಯದ ಕುರಿತು ನುಡಿಸಿರಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎನಿಸುತ್ತದೆ.
alvaas nudisiriya mahatva iruvude adara samaya prajne mattu oppa oranagalalli