ಮಹಿಪಾಲರೆಡ್ಡಿ ಮುನ್ನೂರು
ಕನಕ ಪ್ರಜ್ಞೆಯಿಂದ ಸಾಮಾಜಿಕ ತಾರತಮ್ಯವನ್ನು ಹೋಗಲಾಡಿಸಿ ಕನಿಷ್ಠರಿಗೆ ಒಂದು ಘನತೆಯನ್ನು ತಂದುಕೊಟ್ಟ ಗೌರವದ ಕತೆ..
ಒಗ್ಗಟ್ಟಿನಿಂದಲೇ ಬದುಕು ಮಾಡುತ್ತಿದ್ದ ಬೆರಳುಗಳ ನಡುವೆ ಒಡೆದು ಆಳುವ ನೀತಿಯಿಂದಾಗಿ ಬದುಕು ಮೂರಾಬಟ್ಟೆ ಆಗಿ, ಮತ್ತೆ ಒಂದಾಗಿ ಬಾಳು ನಡೆಸಿದರೆ ಸಾಧನೆ ಸಾಧ್ಯ ಎಂಬ ಆಶಯದ ಕತೆ..
ಕ್ರಾಂತಿಯಿಂದಲೇ ಭಾರತದ ಹೊಸ ಹುಟ್ಟು ಸಾಧ್ಯವೆಂದು ನಂಬಿದ್ದ ಭಗತ್ ಸಿಂಗ್ ದೇಶಪ್ರೇಮ, ತ್ಯಾಗ ಬಲಿದಾನಗಳ ಕತೆ..
ಹೀಗೆ ಮೂರು ವಿಭಿನ್ನ ನೆಲೆಗಳ ಕತೆಗಳನ್ನು ಒಳಗೊಂಡ ಮೂರು ನಾಟಕಗಳ ರಂಗೋತ್ಸವವು ಗುಲ್ಬರ್ಗದ ರಂಗಾಸಕ್ತರ ಗಮನ ಸೆಳೆಯಿತು.
ನಿಗಿ ನಿಗಿ ಬಿಸಿಲು.. ರಣ ರಣ ಮಧ್ಯಾಹ್ನದ ಸೆಕೆಯನ್ನು ತಾಳದೇ ಕೂತಲ್ಲಿ ಕೂಡಲು ಆಗದೇ, ಚಡಪಡಿಸುತ್ತಿದ್ದ ಗುಲ್ಬರ್ಗದ ಜನ, ಸಂಜೆ ಕನ್ನಡ ಭವನದ ಅಂಗಳದಲ್ಲಿ ನೆಮ್ಮದಿಯ ಮತ್ತು ಖುಷಿಯ ತಂಪನ್ನು ಆವಾಹಿಸಿಕೊಂಡರು.
ಹೌದು,
ಗುಲ್ಬರ್ಗ ಮಹಾನಗರದ ಹೃದಯಭಾಗದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಮಾರ್ಚ್ 27 ರ ವಿಶ್ವ ರಂಗಭೂಮಿ ದಿನಾಚರಣೆ ಹಿನ್ನೆಲೆಯಲ್ಲಿ, ಮೂರು ನಾಟಕಗಳ ರಂಗೋತ್ಸವವು ಹೊಸ ನವೋಲ್ಲಾಸಕ್ಕೆ ಮೈ ತೆರೆಯುವ ಯುಗಾದಿಯನ್ನು ಆಹ್ವಾನಿಸಿದಂತಿತ್ತು. ಮಾರ್ಚ್ 27 ರಿಂದ 29 ರವರೆಗೆ ಮೂರೂ ದಿನ ಸಂಜೆ ಕನ್ನಡ ಭವನದ ಅಂಗಳ ರಂಗಾಸಕ್ತರಿಂದ ಕಿಕ್ಕಿರಿದಿತ್ತು.
ಸಂಭ್ರಮ ಕಲಾ ಕುಟೀರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಗುಲಬಗಾ ವಿಶ್ವವಿದ್ಯಾಲಯ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹಾಕವಿ ಕನಕದಾಸರ ಅಪೂರ್ವಕಾವ್ಯವನ್ನು ಇಟ್ಟುಕೊಂಡು ಡಾ.ರಾಮಕೃಷ್ಣ ಮರಾಠೆ ರಚಿಸಿದ ರಾಮಧಾನ್ಯ, ಎನ್.ಶ್ರೀನಿವಾಸ ಉಡುಪ ರಚಿಸಿದ ಬೆರಳುಗಳು ಮತ್ತು ಮಹಾದೇವ ಹಡಪದ ರಚಿಸಿದ ಸರ್ದಾರ್ ಭಗತ್ ಸಿಂಗ್ ನಾಟಕಗಳು ಮನಸೂರೆಗೊಂಡವು. ಯುಗಾದಿಗೆ ಮುನ್ನ ಬೇವು ಬೆಲ್ಲ ಸವಿದಂತಾಗಿತ್ತು.
ಹರಿದಾಸ ಪರಂಪರೆಯಲ್ಲಿ ಕನಕದಾಸರು ತಮ್ಮ ಕಾವ್ಯ, ಕೀರ್ತನೆ, ಚಿಂತನೆಗಳಿಂದ ಸಂತ ಕವಿ ಎಂದೇ ಖ್ಯಾತರಾದವರು. ಕನಕದಾಸರು ರಚಿಸಿದ `ರಾಮಧಾನ್ಯ ಚರಿತ್ರೆ’ ಕನ್ನಡದ ಶ್ರೇಷ್ಠ, ಶುದ್ಧ, ಸ್ವತಂತ್ರ, ಸ್ವೋಪಜ್ಞ, ದೇಶಿ ಅಣುಕು ಮಹಾಕಾವ್ಯ. ರಾಮಾಯಣ, ಮಹಾಭಾರತ ಕಾಲದಿಂದ ವರ್ಣಬೇಧ ಮತ್ತು ಜಾತಿ ವೈಷಮ್ಯಗಳು ಭರತಖಂಡದ ಅಸ್ತಿತ್ವಕ್ಕೆ ಧಕ್ಕೆ ತರುತ್ತಿರುವುದು ಸಾರ್ವಕಾಲಿಕ ಸತ್ಯ. ಸತ್ಯವನ್ನು ಅಸತ್ಯವೆಂದು, ಅಸತ್ಯವನ್ನು ಸತ್ಯವೆಂದು, ಜಳ್ಳನ್ನು ತಿರುಳೆಂದು, ತಿರುಳನ್ನು ಜಳ್ಳೆಂದು ವಿಪರ್ಯಾಸ ಕ್ರಮದಿಂದ ಜೀವನದ ಮೌಲ್ಯಗಳನ್ನಳೆಯುವ ಪರಿಪಾಠ ಈ ಸಮಾಜದಲ್ಲಿ ಬೇರೂರಿರುವುದನ್ನು ತಮ್ಮ ಕಾವ್ಯದ ಮೂಲಕ ಅಭಿವ್ಯಕ್ತಿಸಿದ್ದಾರೆ. ಕನಕದಾಸರ ಸಾಮಾಜಿಕ ಪ್ರಜ್ಞೆಗೆ ಸಾಕ್ಷಿಯಾಗಿ ಭತ್ತ ಪ್ರತಿಷ್ಠಿತರ ಆಹಾರವಾಗಿ ಜನ ಸಾಮಾನ್ಯರಿಗೆ ನಿಲುಕದ ಗಗನಕುಸುಮವಾಗಿತ್ತು. ರಾಗಿ ಬಡವರ ಕನಿಷ್ಠರ ಆಹಾರವಾಗಿತ್ತು. ಆ ಕಾಲದ ಸಾಮಾಜಿಕ ತಾರತಮ್ಯವನ್ನು ಧಾನ್ಯಗಳ ರೂಪಕದ ಮೂಲಕ `ಭೂಮಿಗಚ್ಚರಿ’ಯಾದ ಅಪೂರ್ವ ಕಾವ್ಯವನ್ನು ಕನಕದಾಸರು ರಚಿಸುವುದರ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಆ ಮೂಲಕ ಕನಿಷ್ಠರಿಗೆ ಒಂದು ಘನತೆಯನ್ನು ತಂದುಕೊಟ್ಟಿದ್ದಾರೆ. ಶ್ರೀರಾಮನಿಂದ ರಾಗಿಗೆ ಸಂದ ಗೌರವದ ಕತೆಯೇ `ರಾಮಧಾನ್ಯ’.

ಕನ್ನಡ ರಂಗಭೂಮಿಯನ್ನು ತುಂಬು ಹೃದಯದಿಂದ ಪ್ರೀತಿಸಿದ, ನೆಲದ ಸಜ್ಜನ ಸಂಸ್ಕೃತಿಯನ್ನು ರೂಪಿಸಿಕೊಂಡ, ರಂಗಭೂಮಿ ಕುರಿತು ಲಾಕ್ಷಣಿಕ ಅಧ್ಯಯನ ಮಾಡಿದ ಸಂಸ್ಕೃತಿ ವಿಶ್ಲೇಷಣೆಯಲ್ಲಿ ಬಹು ದೊಡ್ಡ ಹೆಸರೆಂದರೆ, ಡಾ.ರಾಮಕೃಷ್ಣ ಮರಾಠೆ. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರಕ್ಕಾಗಿ ಸಂತ ಕವಿ ಕನಕದಾಸರ ಅಪೂರ್ವ ಕಾವ್ಯ ರಾಮಧಾನ್ಯ ಚರಿತ್ರೆಯನ್ನು ಆಧಾರಿಸಿ ರಾಮಧಾನ್ಯ ಎಂಬ ನಾಟಕವನ್ನು ರಚಿಸಿದ್ದಾರೆ.
ಶ್ರೀರಾಮನಿಂದ ರಾಗಿಗೆ ಸಂದ ಗೌರವದ ಕತೆಯನ್ನು ಹೊಂದಿರುವ ಈ ಅಪೂರ್ವಕಾವ್ಯದ ನಾಟಕವನ್ನು ಅದ್ಭುತವಾಗಿ ನಿರ್ದೇಶಿಸಿದವರು ಕೆ.ಎಸ್.ಡಿ.ಎಲ್.ಚಂದ್ರು. ರಂಗಭೂಮಿಯಲ್ಲಿ ಕ್ರೀಯಾಶೀಲತೆಯನ್ನು ಮೈಗೂಡಿಸಿಕೊಂಡಿರುವ ಚಂದ್ರು, ರಂಗಭೂಮಿ, ಕಿರುತೆರೆ, ಸಿನಿಮಾಗಳ ಅನುಭವವನ್ನು ಹೊಂದಿದ್ದಾರೆ. ಪಳಗಿದ ನಿರ್ದೇಶಕ ಚಂದ್ರು ಅವರ ಮೊನಚಾದ ನಿರ್ದೇಶನದಲ್ಲಿ ರೂಪಾಂತರ ತಂಡದವರು ಅದ್ಭುತವಾಗಿ ಅಭಿನಯಿಸಿದ್ದಾರೆ. ನರೇಂದ್ರಬಾಬು ಕನಕದಾಸ ಪಾತ್ರದಲ್ಲಿ ಮನೋಜ್ಞ ಅಭಿನಯ ನೀಡಿದರು. ರಾಮ, ಲಕ್ಷ್ಮಣ, ಸೀತೆ, ಬಸವಣ್ಣ, ಬುದ್ಧ, ಸರ್ವಜ್ಞ, ರಾಗಿ ಭತ್ತ, ಜೋಳ, ಗೋಧಿ ಹೀಗೆ ಎಲ್ಲಾ ಪಾತ್ರಗಳು ನಾಟಕಕ್ಕೆ ಜೀವ ತುಂಬಿದವು. ವಿಶಿಷ್ಟವಾಗಿ ಮಾಡಲಾಗಿದ್ದ ರಂಗ ವಿನ್ಯಾಸ, ಬೆಳಕಿನ ಸಂಯೋಜನೆ, ಅದಕ್ಕೆ ತಕ್ಕುದಾದ ನೃತ್ಯ ಮತ್ತು ಗಮನ ಸೆಳೆದ ಹಾಗೂ ಆಪ್ತವೆನಿಸುವ ಹಾಡುಗಳು, ಸಂಗೀತ ನಿಜಕ್ಕೂ ನೋಡುಗರನ್ನು ರಂಗಲೋಕದಲ್ಲಿ ವಿಹರಿಸುವಂತೆ ಮಾಡಿತ್ತು. ರಾಮಚಂದ್ರ ಹಡಪದ ಅವರ ಸಂಗೀತ ಆಹ್ಲಾದಕರವಾಗಿತ್ತು.

ಸೇಡಂ ತಾಲೂಕಿನ ಜಾಕನಪಲ್ಲಿ ಎಂಬ ಪುಟ್ಟ ಗ್ರಾಮದ ಸರಕಾರಿ ಪ್ರೌಢಶಾಲೆಯ ಮಕ್ಕಳ ವೇದಿಕೆ ನಾನು ನಮ್ಮೂರು ತಂಡವು ಎನ್.ಶ್ರೀನಿವಾಸ ಉಡುಪ ರಚಿಸಿದ ಬೆರಳುಗಳು ನಾಟಕವನ್ನು ಹಾಸ್ಯ ಹೊನಲಿನಲ್ಲಿದ್ದರೂ, ಒಂದು ಮೆಸೇಜ್ ಮಾತ್ರ ಎಲ್ಲಾ ರಂಗ ವೀಕ್ಷಕರ ಮನದಾಳಕ್ಕೆ ಇಳಿದಿತ್ತು. ಅದೇ ಶಾಲೆಯಲ್ಲಿ ನಾಟಕ ಮೇಷ್ಟ್ರು ಆಗಿರುವ ಅಶೋಕ ತೊಟ್ನಳ್ಳಿ ಅವರು ನೀನಾಸಂ ಪದವೀಧರರು. ತುಂಬಾ ಕ್ರೀಯೇಟಿವ್ ಆಗಿರುವ ಅಶೋಕ ಅವರ ನಿರ್ದೇಶನ ನೋಡುಗರನ್ನು ಮಂತ್ರ ಮುಗ್ಧಗೊಳಿಸಿತ್ತು. ಮಕ್ಕಳಿಗಾಗಿಯೇ ಬರೆದ ಈ ನಾಟಕದಲ್ಲಿ, ನಾವೆಲ್ಲರೂ ಒಂದಾಗಿ ದುಡಿಯಬೇಕು. ಒಗ್ಗಟ್ಟಾಗಿ ಇರಬೇಕು ಎನ್ನುವ ವಸ್ತುವನ್ನು ಒಳಗೊಂಡಿದೆ. ಇರುವ ಐದು ಬೆರಳುಗಳು ಒಗ್ಗಟ್ಟಿನಿಂದಾಗಿ ಇರುವಾಗ ಅಕಸ್ಮಾತ್ ಆಗಿ ರಾಜಕಾರಣಿಯೊಬ್ಬನ ಪ್ರವೇಶ ಮತ್ತು ಒಡೆದಾಳುವ ನೀತಿಯಿಂದಾಗಿ ಅವನ ಆಸೆ ಆಮಿಷಗಳಿಗೆ ಬಲಿಯಾಗಿ ಈ ಬೆರಳುಗಳ ಮಧ್ಯೆ ಭಾರಿ ಸ್ಪರ್ಧೆ ಉಂಟಾಗಿ ತಾನು ಹೆಚ್ಚು, ತಾನೇ ಹೆಚ್ಚು.. ಎಂದು ನ್ಯಾಯಾಧೀಶ ನಾಲಿಗೆ ರಾಯರಲ್ಲಿಗೆ ಹೋಗುತ್ತಾರೆ. ಎಲ್ಲಾ ಬೆರಳುಗಳ ವಾದವನ್ನು ಕೇಳಿದ ನ್ಯಾಯಾಧೀಶರು ತಮ್ಮ ತೀರ್ಪು ನೀಡುತ್ತಾರೆ. ಎಲ್ಲರೂ ಒಟ್ಟಾಗಿ ಬಾಳಬೇಕು. ಹಾಗಿದ್ದಾಗ ಮಾತ್ರ ಸಾಧನೆ ಸಾಧ್ಯ. ಇಲ್ಲವಾದರೆ ಒಗ್ಗಟ್ಟಾಗಿ ಬಾಳುವೆ ಮಾಡಲು ಆಗುವುದಿಲ್ಲ. ಹೋಗಿ ಎಲ್ಲರೂ ಒಟ್ಟಾಗಿ ಬದುಕು ಮಾಡಿರಿ ಎಂಬ ತೀರ್ಮಾನವನ್ನು ಕೇಳಿ, ಬೆರಳುಗಳು ಮತ್ತೆ ಒಂದಾಗುತ್ತವೆ.
ಇವತ್ತಿನ ಸಂದರ್ಭಕ್ಕೆ ಸರಿಯೆನಿಸುವಂತೆ ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ಮುಗ್ಧರನ್ನು ಬಲಿಪಶುವಾಗಿಸುವುದು, ಅವುಗಳನ್ನು ಅರಿಯುವಂತೆ ಈ ನಾಟಕ ಹೇಳುವುದರೊಂದಿಗೆ ಸೋದರತ್ವ ಮತ್ತು ಭ್ರಾತೃತ್ವವನ್ನು ಬಿಂಬಿಸುತ್ತದೆ. ಅಜ್ಜ-ಅಜ್ಜಿಯನ್ನು ಕತೆ ಹೇಳುವಂತೆ ಪೀಡಿಸುವುದರೊಂದಿಗೆ ಆರಂಭವಾಗುವ ಈ ನಾಟಕದಲ್ಲಿ ಶಾಲಾ ಮಕ್ಕಳು ತುಂಬಾ ಕ್ರೀಯಾಶೀಲವಾಗಿ ಅಭಿನಯಿಸಿದ್ದಾರೆ. ತೆಲುಗು ಪ್ರಭಾವ ಇರುವ ಜಾಕನಪಲ್ಲಿ ಎಂಬ ಊರಿನ ಈ ಮಕ್ಕಳು ಕನ್ನಡಕ್ಕೆ ಎಲ್ಲೂ ಅಪಚಾರವಾಗದಂತೆ ಡೈಲಾಗ್ ಡೆಲಿವರಿ ಮಾಡಿದ್ದಾರೆ. ಕನ್ನಡ ಮತ್ತು ಇಂಗ್ಲೀಷ್ ಪದಗಳ ನಡುವಿನ ವ್ಯತ್ಯಾಸವನ್ನು ನವಿರಾಗಿ ಹಾಸ್ಯದ ಮೂಲಕ ತೇಲಿಸಿದ್ದಾರೆ. ಇಂಗ್ಲೀಷ್ ವ್ಯಾಮೋಹಿಗಳಿಗೆ ಮೊನಚಾಗಿ ತಿರುಚಿದ್ದಾರೆ. ಹೀಗೆ ಆರಂಭವಾಗುವ ಈ ನಾಟಕದಲ್ಲಿ ಕಿರಿ ಬೆರಳು ಪಾತ್ರದಲ್ಲಿದ್ದ ಕೇಶವರೆಡ್ಡಿ ಶೇರಿ ತುಂಬಾ ಆ್ಯಕ್ಟಿವ್ ಆಗಿದ್ದ. ಮಂತ್ರಿ ಮತ್ತು ನ್ಯಾಯಾಧೀಶ ಪಾತ್ರದಲ್ಲಿದ್ದ ಲಕ್ಷ್ಮಣ ಬೇಡರ್ ಗಂಭೀರವಾಗಿ ಅಭಿನಯಿಸಿ, ಪಾತ್ರಕ್ಕೆ ಜೀವ ಕೊಟ್ಟ. ಇಡೀ ರಂಗವನ್ನು ಓಡಾಡುತ್ತ ಲವಲವಿಕೆಯಿಂದಿಟ್ಟಿದ್ದ ಮೊಮ್ಮಗನ ಮತ್ತು ತೋರು ಬೆರಳು ಪಾತ್ರದಲ್ಲಿದ್ದ ಮಲ್ಲಪ್ಪ ಬೇಡರ್, ಮೊಮ್ಮಗಳು ಪಾತ್ರದಲ್ಲಿದ್ದ ಭೀಮವ್ವ, ಅಜ್ಜಿಯಾಗಿದ್ದ ಭವಾನಿ ಎಲ್ಲರೂ ಅಭಿನಯ ಚತುರರೆ. ವಿಜಯರೆಡ್ಡಿ, ಗುರುನಾಥರೆಡ್ಡಿ ಆಡಕಿ,ಸಿದ್ದಮ್ಮ ಸಂಜಗಿ ಅವರ ಹಿನ್ನೆಲೆ ಸಂಗೀತ ಮುದ ನೀಡಿತು.
ಮಂಡ್ಯ ಜಿಲ್ಲೆಯ ಜೀವಧಾರೆ ಟ್ರಸ್ಟ್ ತಂಡದವರು ಅಭಿನಯಿಸಿದ ಸರ್ದಾರ್ ಭಗತ್ ಸಿಂಗ್ ನಾಟಕ ದೇಶಪ್ರೇಮವನ್ನು ಉಕ್ಕಿಸುವಲ್ಲಿ ಯಶಸ್ವಿಯಾಯಿತು. ಮಹಾದೇವ ಹಡಪದ ರಚಿಸಿರುವ ಈ ನಾಟಕವನ್ನು ಅನೀಲ ರೇವೂರ ನಿರ್ದೇಶಿಸಿದ್ದಾರೆ. ಸ್ವಾಮಿ ಗಾಮನಹಳ್ಳಿ ಅವರ ಸಂಗೀತ ಮತ್ತು ರವಿಕುಮಾರ ಅವರ ಬೆಳಕಿನ ವಿನ್ಯಾಸ ಮನಸೂರೆಗೊಂಡಿತು.

ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿ ಒಂದು ತುದಿಯಾದರೆ, ಹುತಾತ್ಮ ಭಗತ್ ಸಿಂಗ್ ಇನ್ನೊಂದು ತುದಿ. ಇಬ್ಬರ ಗುರಿ ಒಂದೇ ಆದರೂ ಮಾರ್ಗಗಳೂ ಭಿನ್ನ. ಮೊದಲ ಬಾರಿಗೆ ಗಾಂಧೀಜಿ ಮತ್ತು ಭಗತ್ ಸಿಂಗ್ ಭೇಟಿಯಾದಾಗ, ಗಾಂಧೀಜಿಗೆ 59 ವರ್ಷ ಇದ್ದರೆ, ಭಗತ್ಗೆ 21 ವರ್ಷ.
ಗಾಂಧೀಜಿಯವರಲ್ಲಿ ಶಾಂತಿ ಮತ್ತು ಸಾವಧಾನಗಳು ಎದ್ದು ಕಾಣುತ್ತಿದ್ದರೆ, ಭಗತ್ ಸಿಂಗ್ ಅವರಲ್ಲಿ ಯೌವನ ಸಹಜವಾದ ಹುಮ್ಮಸ್ಸು ಕೇಕೆ ಹಾಕುತ್ತಿತ್ತು. ಗಾಂಧೀಜಿ ಅವರದು ಅಹಿಂಸಾ ಮಾರ್ಗಕ್ಕೆ , ಭಗತ್ ಸಿಂಗ್ ಅವರದು ಕ್ರಾಂತಿ ಮಾರ್ಗ.
ಕ್ರಾಂತಿ ಎಂದರೆ ಹಿಂಸೆ, ರಕ್ತದ ಚೆಲ್ಲಾಟ, ಜೀವಗಳ ಬಲಿ ಎಂದು ಭಗತ್ ಭಾವಿಸಿರಲಿಲ್ಲ. ಬಾಂಬು ತಯಾರಿಕೆಯಲ್ಲಿ ತರಬೇತಿಯನ್ನು ಪಡೆದಿದ್ದರೂ ಭಗತ್ಸಿಂಗ್ ಬಾಂಬುಗಳನ್ನು ದೇಶದ ತುಂಬಾ ಸ್ಪೋಟಿಸಿ ಭಯವನ್ನು ಹುಟ್ಟುಹಾಕಿ, ಜೀವಗಳನ್ನು ಬಲಿ ಕೊಟ್ಟು ಸ್ವಾತಂತ್ರ್ಯವನ್ನು ಪಡೆಯಬೇಕೆಂದು ಎಂದೂ ಹಂಬಲಿಸಲಿಲ್ಲ. ಮನುಷ್ಯನ ಜೀವಕ್ಕೆ ತೀರ ಬೆಲೆ ಕೊಡುತ್ತಿದ್ದ ಭಗತ್, ಅದನ್ನು ಅತ್ಯಂತ ಪವಿತ್ರ ಎಂದು ಭಾವಿಸಿದರು. ಸ್ವಾತಂತ್ರ್ಯ ಹೋರಾಟಕ್ಕೆ ಧೈರ್ಯ ಮತ್ತು ತ್ಯಾಗ ಅಗತ್ಯ ಎಂದು ನಂಬಿದ್ದರು. ಈ ಹೋರಾಟದಲ್ಲಿ ತಮ್ಮಂಥವರ ಬಲಿದಾನ ಅನಿವಾರ್ಯ ಎಂದು ಭಾವಿಸಿದ್ದ ಭಗತ್ ಸಿಂಗ್, ಗಲ್ಲಿಗೇರುವ ಧೈರ್ಯವನ್ನು ತೋರಿಸಿದರು. ಸಂಗಾತಿಗಳಾದ ಸುಖದೇವ ಮತ್ತು ರಾಜಗುರು ಜೊತೆ ಭಗತ್ ಗಲ್ಲಿಗೇರಿದಾಗ ಭಗತ್ ಸಿಂಗ್ಗೆ ಕೇವಲ 23 ವರ್ಷ.
ಬ್ರಿಟಿಷರನ್ನು ಭಾರತದಿಂದ ಓಡಿಸುವುದು ಮಾತ್ರವಲ್ಲ. ಇರುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ತೊಡೆದು ಹಾಕಿ ಹೊಸ ವ್ಯವಸ್ಥೆಯೊಂದನ್ನು ತರಲು, ಕ್ರಾಂತಿಯಿಂದಲೇ ಭಾರತದ ಹೊಸ ಹುಟ್ಟು ಸಾಧ್ಯವೆಂದು ನಂಬಿದ್ದ ಭಗತ್, ಇತರೆ ರಾಷ್ಟ್ರಗಳ ಕ್ರಾಂತಿ ಚರಿತ್ರೆಯನ್ನು ಅಭ್ಯಾಸ ಮಾಡುತ್ತಿದ್ದರು. ತಮ್ಮನ್ನು ನೇಣುಗಂಬಕ್ಕೆ ಕರೆದೊಯ್ಯುವ ಸಂದರ್ಭದಲ್ಲೂ ತಾವು ಓದುತ್ತಿರುವ ಪುಸ್ತಕವನ್ನು ಪೂರ್ಣಗೊಳಿಸಲು ಅವಕಾಶ ಕೊಡಿ ಎಂದು ಕೇಳುವಷ್ಟು ಅಧ್ಯಯನ ದಾಹಿ ಆಗಿದ್ದರು. ಇಂತಹ ಸೈದ್ಧಾಂತಿಕ ಹೋರಾಟದ ಮತ್ತು ಧೈರ್ಯದ ಭಗತ್ ಸಿಂಗ್ ನ ಪಾತ್ರದಲ್ಲಿ ಕೆ.ಟಿ.ಹನುಮೇಶ ಮತ್ತು ಅಜಿತ್ ಮಿಂಚಿದರು. ಗುರುಮೂರ್ತಿ, ಕಿರಣ, ಗಿರೀಶ ಅವರದು ಮನೋಜ್ಞ ನಟನೆ. ಮೂರನೇ ಮತ್ತು ಕೊನೆ ದಿನದ ಈ ನಾಟಕವನ್ನು ನೋಡಿದ ಗುಲಬರ್ಗದ ರಂಗಾಸಕ್ತರು ದೇಶಪ್ರೇಮ ಮತ್ತು ಬಲಿದಾನದ ವಸ್ತುವುಳ್ಳ ಭಗತ್ ಸಿಂಗ್ ಬದುಕು ಕಟ್ಟಿಕೊಟ್ಟಿದ್ದಕ್ಕೆ ಅಭಿನಂದಿಸಿದರು. ಬಿಸಿಲ ಝಳದಲ್ಲೂ ತಂಪು ನೀಡಿದ ಮೂರು ದಿನಗಳ ಈ ರಂಗೋತ್ಸವವು ಯುಗಾದಿಗೆ ಮೆರಗು ನೀಡಿತ್ತು.






A well balanced write-up! While we learn of established amateur troupes presenting good dramas, I would say that Gulbarga is becoming well known in harnessing the talent of kids in performing well and in presenting good plays. It is really a soothing effort. Sambhrama Kala Kuteer is successful in good revival of Rangotsava after a brief lull of nearly two years in Gulbarga. We should congratulate the organizers for this revival as well as Shri Mahipal Reddy for a well balanced write up.
May this tradition continue!
Thank u very much Sir,
Definitely, this tradition will continues by all your cooperations and blessings.
Prof. K.Lingappa
Sambhrama Kala Kuteer
Kalburgai
uttama nirupaNe..oLLe avakaash miss madikonda bEjaaride.
uttama bareha
ಸುಂದರ ಲೇಖನ. ಸ್ವಚ್ಛ ನಿರೂಪಣೆ. ಧನ್ಯವಾದ ಮಹಿಪಾಲ್.