ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಯಾವ ಮೋಹನ ಮುರುಳಿ ಕರೆಯಿತೋ … ಯಾಕೆ ಕರೆಯಿತೋ’ – ಬಿ ವಿ ಭಾರತಿ

ಸಿಗ್ನಲಿನಲ್ಲಿ ಮೂರು ನಿಮಿಷ …. 

ಭಾರತಿ ಬಿ ವಿ

ಆ ಸಿಗ್ನಲ್‌ನಲ್ಲಿ ಸಿಕ್ಕಿ ಬಿದ್ದರೆ ನಾವು ಪ್ರಯಾಣ ಮಾಡುತ್ತಿದ್ದೇವೆ, ಅಲ್ಲಿ ಸುಮ್ಮನೆ ತಾತ್ಕಾಲಿಕವಾಗಿ ನಿಂತಿದ್ದೇವೆ ಅನ್ನೋದನ್ನೇ ಮರೆತುಬಿಡೋ ಅಷ್ಟು ಲಾಂಗ್ ಸಿಗ್ನಲ್. ಐದಾರು ರಸ್ತೆಗಳು ಕೂಡುವ ಜಾಗ. ಒಂದೊಂದು ರಸ್ತೆಗೂ ಮೂರು ಮೂರು ನಿಮಿಷದ ಗ್ಯಾಪ್‌ನ ಸಿಗ್ನಲ್. ಹಾಗಾಗಿ ಅಲ್ಲಿ ನಿಂತಿರೋ ಮುಖಗಳನ್ನು ಗಮನಿಸದೇ ಬೇರೆ ದಾರಿಯಿಲ್ಲ.

ಒಗೆದ ಕೂಡಲೇ ಅರ್ಧ ಸೈಜ಼ಿನದಾಗುವ ತೆಳುವಾದ ಕರ್ಚೀಫ್ ಮಾರುತ್ತಿದ್ದ ಒಬ್ಬ. ಅದನ್ನು ಮುಂಚೆಯೇ ಕೊಂಡು ಅನುಭವಿಸಿ ಆಗಿದ್ದರಿಂದ ಆ ಕಡೆ ನೋಡದೆ ಸುಮ್ಮನಾದೆ. ಮತ್ತೊಬ್ಬನ ಕೈಲಿ ಹೃದಯದ ಆಕಾರದ ಬಲೂನ್ … ಅಯ್ಯೋ ಆ ಕಾಲದಲ್ಲಿ ಸಿಕ್ಕಿದ್ದರೆ ಯಾವನಾದರೂ ನನಗೆ ಕೊಡುತ್ತಾನೇನೋ ಅನ್ನುವ ನಿರೀಕ್ಷೆಯಾದರೂ ಇರ್ತಿತ್ತು .. ಈಗ ತಕ್ಕೊಂಡೇನು ಮಾಡೋದು ಅಂದ್ಕೊಂಡೆ. ಒಬ್ಬ ಸಣ್ಣ ಹುಡುಗ ಸಿಂಬಳ ಸುರಿಸುತ್ತ ಅಗ್ಗದ ಆಟದ ಸಾಮಾನು ಮಾರುತ್ತಿದ್ದ. ಅದರ ಮುಖದ ಪೇಲವ ಕಳೆ ಆ ಮುಸ್ಸಂಜೆಯ ಮಬ್ಬು ಬೆಳಕಲ್ಲೂ ಕಂಡು ಎದೆ ಒಂದು ಕ್ಷಣ ನಡುಗಿತು. ಸೊಳ್ಳೆ ಬ್ಯಾಟುಗಳ ಮಾರಾಟಕ್ಕೆ ನಿಂತಿದ್ದ ಮತ್ತೊಬ್ಬ. ನೂರು ರೂಪಾಯಿ ಕೊಟ್ಟು ಕೊಂಡಿದ್ದು ಆರು ತಿಂಗಳೂ ಬದುಕದೇ ಅಂತ್ಯಸಂಸ್ಕಾರ ಕಂಡಿದ್ದು ನೆನಪಾಯ್ತು. ಇನ್ನು ಈ ಅಗ್ಗದ ಬ್ಯಾಟುಗಳು ಅದೆಷ್ಟು ನಿಮಿಷ ಅಥವಾ ಸೆಕೆಂಡುಗಳು ಬದುಕಿರುತ್ತವೋ ಅನ್ನಿಸಿ ನಗು ಬಂತು.

ಬಟ್ಟೆ ಚೂರು ಜಗ್ಗಿದ ಹಾಗಾಗಿ ಪಕ್ಕಕ್ಕೆ ತಿರುಗಿದರೆ ಮೂರು ಗೇಣುದ್ದದ ಹುಡುಗಿ- ಬಗಲಲ್ಲಿ ಒಂದು ಸಣ್ಣ ಕೂಸು. ಅದಕ್ಕೊಂದೆರಡು ರೂಪಾಯಿ ಕೊಟ್ಟು ಗಿಲ್ಟ್ ಕಳೆದುಕೊಂಡೆ ! ಕೊಡದೇ ಮುಂದೆ ಹೋಗಿ ಆಮೇಲೆ ಆ ಮುಖ ನೆನಪಾದಾಗಲೆಲ್ಲ ‘ಅಯ್ಯೋ ಒಂದೆರಡು ರೂಪಾಯಿ ಕೊಟ್ಟಿದ್ದರೆ ನಿಮ್ಮಜ್ಜನ ಆಸ್ತಿಯೆಲ್ಲ ಮುಗಿದು ಹೋಗ್ತಿತ್ತಾ’ ಅಂತ ಹಳಹಳಿಸಿದ್ದು ನೆನಪಾಗಿ ಈ ಧಾರಾಳತನವಷ್ಟೇ !

ಅಷ್ಟರಲ್ಲಿ ಪಕ್ಕದಲ್ಲಿ ಒಂದು ಕಾರು ಎಡ ಬಲಕ್ಕೆ ಹೊಯ್ದಾಡುತ್ತ ಕರ್ಕಶ ದನಿಯಲ್ಲಿ ಕ್ರೀಈಈಚ್ ಅಂತನ್ನೋ ಬ್ರೇಕ್‌ನ ಸದ್ದಿನ ಜೊತೆ ನಿಂತಿತು. ಆ ಸದ್ದಿಗೆ ಬೆಚ್ಚಿ ಬಿದ್ದು ‘ಅದ್ಯಾರು ಈ ಅನಾಗರೀಕ?’ ಅನ್ನೋ ಹಾಗೆ ನೋಡಿದೆ. ಮಧ್ಯವಯಸ್ಕ ಗಂಡಸೊಬ್ಬ ಕೂತಿದ್ದ ಡ್ರೈವರ್ ಸೀಟಿನಲ್ಲಿ. ‘ಅಬ್ಬಾ ಈ ವಯಸಲ್ಲೇ ಇಷ್ಟು ಬಿಸಿ ರಕ್ತ?!’ ಅಂದ್ಕೊಂಡೆ. ಗಾಜುಗಳೆಲ್ಲ ಬಿಳಿ ಬಿಳಿ ಇರುತ್ತವೆ ಈಗೆಲ್ಲ. ಹಾಗಾಗಿ ಅವನ ಪಕ್ಕ ಯಾರಿದ್ದಾರೆ ಅಂತ ಬಗ್ಗಿ. ನೋಡಿದೆ. ಮಧ್ಯವಯಸ್ಕ ಹೆಣ್ಣೊಬ್ಬಳು ಸಪ್ಪೆ ಮುಖದಲ್ಲಿ ಕೂತಿದ್ದಳು. ಅವಳ ಮುಖ ಚಿವುಟಿದರೂ ರಕ್ತ ಬಾರದಷ್ಟು ಬಿಳಿ ಬಿಳಿ. ನನಗೆ ಯಾಕೋ ಕುತೂಹಲವಾಯ್ತು. ಅವರ ಕಡೆಗೇ ನೋಡುತ್ತಾ ಕೂತೆ.

ಅಷ್ಟರಲ್ಲಿ ಹಿಂದೆ ಬಂದು ನಿಂತ ಕಾರಿಂದ ಒಬ್ಬ ವ್ಯಕ್ತಿ ಇಳಿದವನೇ ಮುಂದಿದ್ದ ಕಾರಿನ ಹತ್ತಿರ ಹೋಗಿ ಗಾಜನ್ನು ತಟ್ಟಿದ. ಒಳಗಿದ್ದ ಹೆಂಗಸು ಬೆಚ್ಚಿ ಬಿದ್ದಿದ್ದು ಕಾಣಿಸಿತು. ಗಾಜು ಕೆಳಗಿಳಿಯಿತು. ಗಾಜು ತಟ್ಟಿದವ ‘ಸಾರ್ ಅದೇನು ಆ ಥರ ಡ್ರೈವ್ ಮಾಡ್ತಿದ್ದೀರಾ? ಒಂದ್ಸಲ ಲೆಫ್ಟ್, ಒಂದ್ಸಲ ರೈಟ್ … ಗಾಡಿ ಎಳೆದು ಎಳೆದು ಓಡಿಸ್ತಿದೀರಾ? ಒಂದು ಸ್ವಲ್ಪ ಹುಷಾರಾಗಿ ಓಡ್ಸಕ್ಕಾಗಲ್ವಾ?’ ಅಂದ ಒರಟಾಗಿ. ಆ ಕ್ರೀಇಇಇಇಇಚ್ ಕಾರಿನ ಯಜಮಾನ ಎರಡೂ ಕೈ ಎತ್ತಿ ಮುಗಿದು ‘ಸಾ .. ಸಾರಿ ಸಾರ್. ಕ್ಷಮಿಸಿ’ ಅಂದ. ದನಿಯಲ್ಲಿ ಅವ ಕುಡಿದಿದ್ದು ಸ್ಪಷ್ಟವಾಗಿ ಗೊತ್ತಾಯ್ತು. ಕುಡಿದು ಸೊಟ್ಟಪಟ್ಟ ಓಡಿಸುವಷ್ಟು ಅಮಲಿನಲ್ಲಿ ಗಾಡಿ ಓಡಿಸುತ್ತಿದ್ದಾನಾ?! ನನಗೆ ಗಾಭರಿಗೆ ಉಸಿರು ಸಿಕ್ಕಿಕೊಂಡ ಹಾಗಾಯ್ತು.

ಅವಳು- ಆ ಪಕ್ಕದಲ್ಲಿ ಕೂತಿದ್ದವಳು- ‘ಈಗ್ಲಾದ್ರೂ ಗೊತ್ತಾಯ್ತಾ? ನೀನು ಅತೀ ಕುಡಿದಿದ್ದೀಯ. ನಾನು ಇಳಿದು ಹೋಗುತ್ತೇನೆ ನನ್ನ ಪಾಡಿಗೆ ನಾನು ಆಟೋ ಹಿಡ್ಕೊಂಡು …’ ಅವಳ ಮಾತು ಮುಗಿದಿರಲೇ ಇಲ್ಲ. ಅಷ್ಟರಲ್ಲೇ ಅವ ‘ಏಯ್ ನಾನು ತುಂಬ ಅವಮಾನದಲ್ಲಿದ್ದೀನಿ. ನಿನ್ನ ಹತ್ರ ಹೇಳ್ಕೋಬೇಕು. ನೀನು ಈಗ ನನ್ನ ಬಿಟ್ಟು ಹೋಗ್ತೀಯೆನೇ … ಹೇಳೇ …’ ಅಂತ ಕೂಗಿದ. ಅವ ಅಮಲಿನಲ್ಲಿ ಮಾತಾಡುತ್ತಲೇ ಇದ್ದ. ಅವಳು ಆ ಬದಿಯ ಕಿಟಕಿಯಿಂದಾಚೆ ಶೂನ್ಯವಾಗಿ ನೋಡುತ್ತಾ ಕೂತು ಬಿಟ್ಟಳು. ‘ಯಾರಿರಬಹುದು ಆಕೆ? ಅವನ ಹೆಂಡತಿಯಂತೂ ಇರಲಾರಳು. ಹೆಂಡತಿಯಾಗಿದ್ದರೆ ಇಳಿದು ಹೋಗುವ ಪ್ರಶ್ನೆಯಿರಲಿಲ್ಲ. ಇಳಿದು ಎಲ್ಲಿಗೆ ಹೋದಾಳು ಪಾಪ! ಮತ್ತೆ ಅವನಿರುವ ಕಡೆಗೇ ಹೋಗಬೇಕಾದ ಅನಿವಾರ್ಯತೆ ಇರುತ್ತಿತ್ತು. ಹಾಗಾಗಿ ಹೆಂಡತಿ ಇರಲಾರಳು’ ಅಂದುಕೊಂಡೆ.

ಆ ಮಬ್ಬು ಬೆಳಕಲ್ಲಿ ಅವಳ ಮುಖ ಬೆದರಿದ ಮೊಲದ ಹಾಗಿತ್ತು. ನನಗೆ ಯಾಕೋ ಅವಳ ಬಗ್ಗೆ ಕರುಣೆ ಬಂತು. ಅವಳು ಬಾಗಿಲಿಗೆ ಒರಗಿ ಕೂತಿದ್ದ ರೀತಿ ನೋಡಿದರೆ ಅಲ್ಲಿಂದ ಇಳಿದು ಹೋಗಲಾರದ್ದಕ್ಕೆ ಮಾತ್ರ ಅಲ್ಲಿ ಕೂತಿದ್ದಾಳೆ ಅನ್ನುವ ಹಾಗೆ. ಅವಳು ಮೊಬೈಲ್ ತೋರಿಸಿ ಅದೇನೋ ಹೇಳುವ ಹಾಗೆ ಬಾಯಿ ಬಿಡುವಷ್ಟರಲ್ಲಿ ಅವ ಅವಳ ಕೈಲಿದ್ದ ಮೊಬೈಲ್ ಎತ್ತಿ ರಪ್ ಅಂತ ಕಾರಲ್ಲೇ ಬೀಸಿ ಒಗೆದ. ಅವ ಬೀಸಿ ಒಗೆದ ರೀತಿಗೆ ಸಧ್ಯ ಸ್ಕ್ರೀನ್ ಪುಡಿ ಪುಡಿಯಾಯ್ತೇನೋ ಅಂದುಕೊಂಡೆ. ಅವಳು ಮಾತಿಲ್ಲದೇ ಬಗ್ಗಿ ಮೊಬೈಲ್ ಎತ್ತಿಕೊಂಡು ಅದನ್ನು ಪರೀಕ್ಷಿಸಿದಳು. ಅದು ಒಳ್ಳೆಯ ಹ್ಯಾಂಡ್ ಸೆಟ್. ಸಧ್ಯ ಒಡೆದಿರಲಿಲ್ಲ.

ಅವ ತನ್ನ ಮೊಬೈಲನ್ನೂ ಎತ್ತಿ ಬೀಸಿದ. ಕನ್ನಡಕ ಬೀಸಿದ. ಅವಳು ಉಸಿರು ಆಚೆ ಬಿಟ್ಟರೂ ಏನು ಅನಾಹುತ ಆಗಿಬಿಡುತ್ತೋ ಅನ್ನುವ ಹಾಗೆ ಕೂತಿದ್ದಳು. ಅವ ಇದ್ದಕ್ಕಿದ್ದ ಹಾಗೆ ಕಾರಿನ ಬಾಗಿಲು ತೆರೆದು ‘ಇಳಿ. ತೊಲಗು’ ಅಂತ ಕಿರುಚಿದ್ದು ಕೇಳಿಸಿತು. ನಾನು ಗಾಭರಿಯಲ್ಲಿ ಅವರನ್ನೇ ನೋಡ್ತಿದ್ದೆ. ಆಕೆ ಅವ ಹಾಗಂದಿದ್ದೇ ಸಾಕು ಅನ್ನುವ ಹಾಗೆ ಭಡ ಭಡ ಇಳಿದಳು. ಅವ ರಪ್ ಅಂತ ಬಾಗಿಲು ಹಾಕಿದ. ಅವಳು ಹಿಂತಿರುಗಿಯೂ ನೋಡದ ಹಾಗೆ ಜೋರಾಗಿ ನಡೆದಳು. ‘ತೊಲಗೇ ಮುಂಡೆ’ ಅಂತ ಅವ ಕಿರುಚಿದ್ದು ಅವಳಿಗೆ ಕೇಳಿಸಲು ಅವಳು ಅಲ್ಲಿ ಉಳಿದಿರಲಿಲ್ಲ …. ನನಗೆ ಮಾತ್ರ ಕೇಳಿಸಿತು. ನಾನು ಬಿಟ್ಟ ಕಣ್ಣು ಬಿಟ್ಟ ಹಾಗೆ ಕೂತಿದ್ದೆ …

ರಸ್ತೆ ದಾಟಿ ಭರ ಭರ ನಡೆದ ಆಕೆ ಮೀಡಿಯನ್ ಹತ್ತಿರ ಕ್ಷಣಕಾಲ ನಿಂತವಳು ಮತ್ತೆ ಹಿಂತಿರುಗಿ ಹೆಜ್ಜೆ ಹಾಕಿದಾಗ ನಾನು ಆಶ್ಚರ್ಯದಿಂದ ಅವಳನ್ನೇ ನೋಡಲು ಶುರು ಮಾಡಿದೆ. ಯಾವ ಅನಿವಾರ್ಯತೆ ಮತ್ತೆ ಅವಳನ್ನ ಅಲ್ಲಿಗೆ ವಾಪಸ್ ಕರೆ ತರುತ್ತಿದೆ?! ಅವಳು ತೆರೆದಿದ್ದ ಕಾರಿನ ಗಾಜಿನ ಕಡೆ ಬಗ್ಗಿ ಏನೋ ಹೇಳಲು ಶುರು ಮಾಡಿದಳು. ಅವ ‘I saw you coming … get lost’ ಅಂತ ಕಿರುಚಿದವನೇ ಗಾಜನ್ನು ಏರಿಸಿ ಬಾಗಿಲು ಒಳಗಿಂದ ಲಾಕ್ ಮಾಡಿದ. ಅವಳು ಅವಮಾನಿತಳಾಗಿ ಎರಡು ಕ್ಷಣ ನಿಂತವಳು ಮತ್ತೆ ಹಿಂತಿರುಗಿ ನೋಡದೇ ಓಡು ನಡಿಗೆಯಲ್ಲಿ ರಸ್ತೆ ದಾಟಿದಳು. ಸಿಗ್ನಲ್‌ನಲ್ಲಿ ನಿಂತಿದ್ದ ಎಲ್ಲರ ಗಮನ ಅವಳ ಕಡೆಗೇ …

ಅಷ್ಟರಲ್ಲಿ ಸಿಗ್ನಲ್ ಬಿತ್ತು. ಮೂರು ನಿಮಿಷದಲ್ಲಿ ನಡೆದ ಈ ಘಟನೆಗೆ ಸಾಕ್ಷಿಯಾದ ನಾನು ಮೂಕಳಾಗಿ ಹೋಗಿದ್ದೆ. ಆಕೆ ಯಾರು? ಅಲ್ಲಿ ಏನು ನಡೆಯುತ್ತಿತ್ತು? ಅವ ಯಾಕೆ ಕೂಗಿದ? ಅವಳು ಯಾಕೆ ಹಾಗೆ ಓಡಿದಳು? … ಒಂದೂ ಅರ್ಥವಾಗಲಿಲ್ಲ. ನಮ್ಮ ಪಕ್ಕದ ಮನೆ ಕಟ್ಟುವ ವಾಚ್‌ಮನ್ ರಾತ್ರಿ ಕುಡಿದ ಅಮಲಿನಲ್ಲಿ ಅವನ ಹೆಂಡತಿಯ ಹತ್ತಿರ ಹೀಗೇ ಆಡೋದು …

ನಾನು ಕೂತಿದ್ದ ಆಟೋ ರಸ್ತೆ ಕ್ರಾಸ್ ಮಾಡಿ ಮುಂದಕ್ಕೆ ಸಾಗಿತು. ಬೆಲೆ ಬಾಳುವಂಥ ಉಡುಗೆ – ತೊಡಿಗೆ, ಶೂ ಬ್ಯಾಗ್ ಇದ್ದ ಆ ಕಾರಿಂದಿಳಿದು ಓಡಿ ಬಂದ ಹೆಂಗಸು ರಸ್ತೆ ಪಕ್ಕ ಪುಟ್ ಪಾತಿನ ಮೇಲಿನ ಕಲ್ಲೊಂದರ ಮೇಲೆ ಕೂತಿದ್ದಳು ಸತ್ತವಳ ಹಾಗೆ …

‘ಯಾವ ಮೋಹನ ಮುರುಳಿ ಕರೆಯಿತೋ … ಯಾಕೆ ಕರೆಯಿತೋ’ …

‍ಲೇಖಕರು G

19 October, 2012

10 Comments

  1. N.VISWANATHA

    Samanya mattu dina nithya nadeyuva vicharavadaroo lekhana barediruva shyli bahala chennagide.Ellaroo bareyuttenendu kondaroo niroopane odisikondu hoguva reethi maduvudu kashta.Lekhakhige dhanyavadagalu.Adare aaa hengasina vichara ghoodavagiye uliyithu.

  2. Anitha Naresh Manchi

    ohhhhhhh

  3. Gopaal Wajapeyi

    ನಿಮ್ಮ ಬರಹವೆ ಒಂದು ಮೋಹನ ಮುರಳಿ…

  4. sunil

    its awsome…
    nimma heading bahala cathy aagide

  5. Usha Rai

    ಭಾರತಿ, ಮೂರು ನಿಮಿಷ ಒಂದು ಸಿಗ್ನಲ್ಲ್ ನಲ್ಲಿ ನಿಂತಾಗ ನೀವು ಕಂಡಿದ್ದನ್ನು ತುಂಬಾ ಪರಿಣಾಮಕಾರಿಯಾಗಿ ಬರೆದಿದ್ದೀರಿ. ನಿಮ್ಮ ಬರಹ ಇಷ್ಟವಾಯಿತು. ಇವತ್ತಿನ ಪರಿಸ್ಥಿತಿಯೇ ಹೀಗೆ ಎಂದು ಮನಸಿಗೆ ನೋವಾಗುತ್ತದೆ. ಯಾರೋ ಒಬ್ಬನೊಡನೆ ಯಾರೋ ಒಬ್ಬಳು ಹೋಗುವುದು. ಬೇಡವಾದಾಗ ಸುಲಭವಾಗಿ ಕಳಚಿಕೊಳ್ಳುವುದು. ಸಂಬಂಧಗಳಿಗೆ ಯಾವ ಬೆಲೆಯೂ ಇಲ್ಲ. ಉಪಯೋಗಿಸಿ ಬಿಸಾಡು ಅನ್ನುವಂತೆ.

  6. ರವಿ ಮೂರ್ನಾಡು,ಕ್ಯಾಮರೂನ್

    ಈ ಸಮಾಜದ ನಗ್ನ ಪುಟಗಳ ಹೊತ್ತಗೆಯಿಂದ ಒಂದು ಹಾಳೆ ಹರಿದು “ಅವಧಿ ಮಾಗ್” ಕ್ಯಾನ್ವಾಸಿನಲ್ಲಿ ಅಂಟಿಸಿದ್ದೀರಿ.ಹಾಗಾಗಿ ರಾತ್ರಿಗಳು ಕಣ್ಣ ರೆಪ್ಪೆಯೊಳಗೂ ಕಪ್ಪಾಗಿಯೇ ಇರುವುದು.ರಾತ್ರಿಯ ಕಬಂಧ ಬಾಹುಗಳಲ್ಲಿ ಹಲವಷ್ಟು ಆರ್ತಸ್ವರಗಳಿವೆ.ಕೆಲವು ಪದಗಳಾಗಿ ಹಾಡಾಗಿವೆ. ಕೆಲವಷ್ಟು ಪದಗಳಿಲ್ಲದೆ ಮೂಕವಾಗಿವೆ .
    ಇದು ಪುರುಷ ಮತ್ತು ಸ್ತ್ರೀ ಎಂಬ 2 ಜೀವ ಸತ್ಯಗಳು. ಅದು ಆಸೆಯ ಬೆನ್ನೇರಿ ವಿವೇಚನೆ ಮೀರಿದ ಮನುಷ್ಯರು ಮತ್ತು ಇದಿಲ್ಲದೇ ಬದುಕುವ ಪ್ರಾಣಿಗಳು ನಡೆಸಿದ ಪ್ರಪಂಚ. ಸತ್ಯವೆಂದು ಅರಿತು ಅಸತ್ಯದ ದಾರಿ ತುಳಿದ ಗಂಡು ಮತ್ತು ಹೆಣ್ಣನ್ನು ಪ್ರತ್ರಿನಿಧಿಸುವ ಸಮಾಜದ ಬದುಕು ಭಿತ್ತರಿಸುವ ನಾಟಕದ ಪರದೆ. ಇಲ್ಲಿ ಯಾರಿಗೆ ಯಾವ ರೀತಿಯಲ್ಲಿ ಪಾಠ ಮಾಡಲು ಸಾಧ್ಯ ?

  7. D,Ravi Varma

    nimma baraha mana kalakuvantide …. idu vaastavavaadaru katu satya…..

  8. Indushekhar Angadi

    ಪ್ರಾಯಶಃ ಯಾವ ಮೋಹನ ಮುರಳಿಯೂ ಕರೆದಿರಲಿಕ್ಕಿಲ್ಲ. ತನ್ನನ್ನು ನಂಬಿದವರಿಗಾಗಿ “ಇಲ್ಲಿ ಈಸಬೇಕು ಇದ್ದು ಜಯಿಸಬೇಕು” ಎಂದು ಹೋರಾಡುತ್ತಿರುವ ಛಲಗಾರ್ತಿಯ ಸಂಕಟದ ಸಂದರ್ಭ ಇದಾಗಿರಬಹುದು.

  9. Poornima Girish

    Oh 🙁 nambike annodu artha kaledukondide..

  10. sugunamahesh

    habba… yara manasalli yaava gondalagaLu iruttavO gotte agolla

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading